ಅವಕಾಶ

ginnu

ಆಗ ಎಂಭತ್ತರ ದಶಕ. ಆಗಿನ್ನೂ ನಾಲ್ಕನೇ ತರಗತಿಯಲ್ಲಿದ್ದೆ. ಇಂದಿನಂತೆ ಡೈರೀ ಹಾಲಿನ ಪ್ರಭಾವ ಅಷ್ಟಾಗಿರಲಿಲ್ಲ . ನಮ್ಮದೇ ಬಡಾವಣೆಯಲ್ಲಿಯೇ ಸಾಕಷ್ಟು ಮನೆಗಳಲ್ಲಿ ಇನ್ನೂ ಹಸು ಮತ್ತು ಎಮ್ಮೆಗಳನ್ನು ಸಾಕಿದ್ದರು. ನಾವೆಲ್ಲಾ ಅವರ ಬಳಿಯೇ ವರ್ತನೆಗೆ (ಪ್ರತಿ ನಿತ್ಯ ಕಡ್ಡಾಯವಾಗಿ ನಿರ್ಧಿಷ್ಟವಾದ ಹಾಲನ್ನು ತೆಗೆದುಕೊಂಡು ತಿಂಗಳಿಗೊಮ್ಮೆ ಹಣ ನೀಡುವ ಪದ್ದತಿ) ಹಾಲು ತೆಗೆದುಕೊಳ್ಳುತ್ತಿದ್ದವು. ಅದೇ ರೀತಿ ನಾವಿದ್ದ ವಠಾರದ ಮನೆಯ ಮಾಲೀಕರ ಮನೆಯಲ್ಲಿಯೂ ಹಸು ಮತ್ತು ಎಮ್ಮೆ ಸಾಕಿದ್ದರು ನಾವು ಅವರ ಬಳಿಯೇ ಪ್ರತಿನಿತ್ಯ ಹಾಲನ್ನು ತೆಗೆದುಕೊಂಡು ತಿಂಗಳಿಗೊಮ್ಮೆ ಬಾಡಿಗೆ ಕೊಡುವ ಜೊತೆಯೇ ಹಾಲಿನ ಹಣವನ್ನೂ ಕೊಡುತ್ತಿದ್ದೆವು. ಅದೊಂದು ದಿನ ಬೆಳಿಗ್ಗೆ ನಮ್ಮ ಮನೆಯ ಮಾಲಿಕರ ಮನೆಯ ಕೆಲಸ ಆಳು ಹಾಲು ಕೊಡುವ ಸಮಯದಲ್ಲಿಯೇ ಅಕ್ಕಾ ನಮ್ಮ ಎಮ್ಮೆ ಕರು ಹಾಕಿದೆ. ಗಿಣ್ಣುಹಾಲನ್ನು ಬಂದು ತೆಗೆದುಕೊಂಡು ಹೋಗ್ಬೇಕಂತೇ ಅಂತಾ ಅಮ್ಮಾವರು ಹೇಳಿದ್ದಾರೆ ಎಂದ. ಓಹೋ!! ಗಿಣ್ಣು ಹಾಲೇ ತುಂಬಾನೇ ಸಂತೋಷ. ಸ್ವಲ್ಪ ಹೊತ್ತಾದ ಮೇಲೆ ಮಗನನ್ನು ಕಳುಹಿಸುತ್ತೇನೆ ಎಂದು ಹೇಳಿ ಸ್ವಲ್ಪ ಹೊತ್ತಿನ ನಂತರ ನನ್ನ ಕೈಯಲ್ಲಿ ಒಂದು ಸಣ್ಣ ನೀರಿನ ಚೊಂಬನ್ನು ಕೊಟ್ಟು, ಓನರ್ ಮನೆಯಲ್ಲಿ ಗಿಣ್ಣು ಹಾಲು ಕೊಡ್ತಾರಂತೇ ಇಸ್ಕೊಂಡು ಬಾ ಎಂದು ತಿಳಿಸಿದರು. ಸರಿ, ಅಲ್ಲೇ ಪಕ್ಕದಲ್ಲೇ ಇದ್ದ ಓನರ್ ಮನೆಗೆ ಒಂದೇ ಉಸಿರಿನಲ್ಲಿ ಓಡಿ ಹೋದೆ. ನಾನು ಅವರ ಮನೆಯ ಅಂಗಳಕ್ಕೆ ಕಾಲು ಇಡುವುದಕ್ಕೂ ನಮ್ಮ ಮನೆಯ ಮಾಲೀಕರು ಮನೆಯ ಹೊರಗೆ ಬರುವುದಕ್ಕೂ ಸರಿಯಾಗಿ ಹೋಯ್ತು. ಅವರೋ ಅಜಾನು ಬಾಹು. ಕಪ್ಪಗೆ ಎತ್ತರದ ಮನುಷ್ಯ ಕಣ್ಣುಗಳು ಸದಾ ಕೆಂಪು. ಮೊತ್ತ ಮೊದಲಬಾರಿಗೆ ಅವರನ್ನು ನೋಡಿದಾಗ ಒಂದು ಕ್ಷಣ ತಬ್ಬಿಬ್ಬಾಗದವರೇ ಇರಲಿಲ್ಲ. ಅಂತಹ ವ್ಯಕ್ತಿ ನನ್ನ ಮುಂದೆ ಎದುರಾದಾಗ, ಏನು ಹೇಳಬೇಕೂ ಎಂದು ತಿಳಿಯದೇ ಒಂದು ಕ್ಷಣ ತಬ್ಬಿಬ್ಬಾಗಿ, ಅಮ್ಮಾ ಹೇಳಿಕಳ್ಸಿದ್ದಾರೆ, ಗಿಣ್ಣು ಹಾಲು ಕೊಡ್ಬೇಕಂತೇ ಎಂದೆ. ಓ ಗಿಣ್ಣು ಹಾಲಿಗೆ ಬಂದ್ಯಾ? ಸರಿ ಹೇಗೆ ತೆಗೆದುಕೊಂಡು ಹೋಗ್ತೀಯಾ? ಎಂದರು. ನಾನು ಕೂಡಲೇ ಕೈಯಲ್ಲಿದ್ದ ಚೊಂಬುನ್ನು ತೋರಿಸಿದೆ. ಏ!! ಏನು ಇಷ್ಟು ದೊಡ್ದದಾದ ಚೊಂಬನ್ನು ತಂದಿದ್ದಿಯಾ? ಎಂದು ಅವರು ಹೇಳಿದ ತಕ್ಷಣ ನನಗೆ ಭಾರೀ ಅಪಮಾನವಾಯಿತು. ಛೇ!! ನಮ್ಮಮ್ಮನ ಮಾತು ಕೇಳಿಕೊಂಡು ಇಲ್ಲಿಗೆ ಬಂದು ಇವರ ಹತ್ತಿರ ಇಂತಹ ಮಾತು ಕೇಳಬೇಕಾಯ್ತಲ್ಲಾ ಎಂದು ಒಂದು ಕ್ಷಣ ಪಿತ್ತ ನೆತ್ತಿಗೇರಿ ಅಮ್ಮನ ಮೇಲೆ ವಿಪರೀತವಾದ ಕೋಪ ಬಂದರೂ ಅದನ್ನು ತೋರಿಸಿಕೊಳ್ಳದೇ, ಎಷ್ಟು ಕೊಡುವುದಕ್ಕೆ ಆಗುತ್ತದೆಯೋ ಅಷ್ಟೇ ಕೊಡಿ. ನಮಗೇನು ಭರ್ತಿ ಗಿಣ್ಣು ಹಾಲು ಬೇಡ ಎಂದೆ. ಅದಕ್ಕವರು ನಸು ನಕ್ಕು ನಿನ್ನ ಉತ್ತರ ನನಗೆ ಇಷ್ಟವಾಯಿತು ನನ್ನ ಹೆಗಲ ಮೇಲೆ ಕೈಹಾಕಿಕೊಂಡು ಬಾ ಎಂದು ಅವರ ಅಡುಗೆ ಮನೆಗೆ ಕರೆದುಕೊಂಡು ಹೋಗಿ, ನನ್ನ ಕೈಯಿಂದ ಚೊಂಬನ್ನು ಕಸಿದುಕೊಂಡು ನೋಡು ಇದಿಷ್ಟೂ ಹಾಲು ನಿಮಗೇ. ತೆಗೆದುಕೊಂಡು ಹೋಗಲು ಆಗತ್ತಾ ? ಎಂದು ಕೇಳಿದಾಗ, ಮತ್ತೊಮ್ಮೆ ತಬ್ಬಿಬ್ಬಾಗುವ ಸನ್ನಿವೇಷ ನನ್ನದು. ಕೈಯಲ್ಲಿದ್ದ ಸಣ್ಣ ಚೊಂಬನ್ನೇ ದೊಡ್ಡದು ಎಂದು ಹೇಳಿ ನನಗೆ ಮುಜುಗರ ಪಡಿಸಿದ್ದವರು, ಒಂದು ದೊಡ್ಡ ಬಕೀಟ್ ತುಂಬಾ ಹಾಲನ್ನು ತೆಗೆದುಕೊಂಡು ಹೋಗಲು ಹೇಳಿದ್ದರು. ಇಲ್ಲಾ ನನಗೆ ಅದನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲಾ. ನಮ್ಮ ತಂದೆಯವರನ್ನು ಕರೆದು ತರುತ್ತೇನೆ ಎಂದು ಮತ್ತೊಮ್ಮೆ ನಮ್ಮ ತಂದೆಯವರೊಡನೆ ಬಂದು ಅಷ್ಟೂ ಹಾಲನ್ನು ತೆಗೆದುಕೊಂಡು ಹೋಗಿ ನಮ್ಮ ಮನೆಗೆ ಎಷ್ಟು ಬೇಕೋ ಅಷ್ಟನ್ನು ಇಟ್ಟು ಕೊಂಡು ಅಕ್ಕ ಪಕ್ಕದವರಿಗೆಲ್ಲಾ ಕೊಟ್ಟ ಮೇಲೂ ಮಿಕ್ಕಿದ್ದ ಹಾಲನ್ನು ಸೈಕಲ್ ತುಳಿದುಕೊಂಡು ಹೋಗಿ ಮಲ್ಲೇಶ್ವರದಲ್ಲಿರುವ ನಮ್ಮ ಅತ್ತೆ ಮನೆಗೆ ಕೊಟ್ಟು ಬಂದ ನೆನಪು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ.

visa

ಆಗ ತಾನೆ ಮಂಜು ಬಿಇ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಅಮೇರಿಕಾಕ್ಕೆ ಹೋಗಲು ನಿರ್ಧರಿಸಿ ಅದಕ್ಕೆ ಬೇಕಾದ GRE & Toffel ಪರೀಕ್ಷೆಗಳನ್ನು ಉತ್ತಮವಾದ ಅಂಕಗಳೊಡನೆ ಮುಗಿಸಿ ನಾಲ್ಕಾರು ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಗುಜರಾಯಿಸಿ ಅವರ ಆಫರ್ ಕಾಯುತ್ತಿದ್ದ. ದೇವರ ದಯೆ ಮತ್ತು ಉತ್ತಮ ಅಂಕ ಗಳಿಸಿದ ಪರಿಣಾಮವಾಗಿ ಎಲ್ಲಾ ಕಡೆಯಿಂದಲೂ ಆಫರ್ ಬಂದು ಅಮೇರಿಕಾಕ್ಕೆ ಹೋಗಲು ವೀಸಾ ಪಡೆಯಲು ಅವನು ಮತ್ತು ಅವನ ಇಬ್ಬರು ಸಹಪಾಠಿಗಳು, ಒಟ್ಟಿಗೆ ಮೂವರು ಚೆನ್ನೈನಲ್ಲಿರುವ ಅಮೇರಿಕಾ ಕಾನ್ಸಲೇಟ್ಗೆ ಹೋದರು. ವೀಸಾಗೆ ನಿಗಧಿತ ಪಡಿಸಿದ್ದ ಸಮಯಕ್ಕೆ ಅಗತ್ಯವಿದ್ದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಸರದಿಯ ಸಾಲಿನಲ್ಲಿ ಮೊದಲು ಆತನ ಸ್ನೇಹಿತ ಸತೀಶ, ಎರಡನೇಯವನಾಗಿ ಮಂಜು ಮತ್ತು ಅವನ ಹಿಂದೆ ರಾಮ್ ಶಿಸ್ತಿನ ಸಿಪಾಯಿಗಳಂತೆ ಕಾಯುತ್ತಿದ್ದರು. ಸತೀಶನ ಮುಂದಿದ್ದ ವ್ಯಕ್ತಿಯ ಕರೆ ಮುಗಿದು ಅಲ್ಲಿಯ ಸಿಬ್ಬಂಧಿ ಇವನನ್ನು ಕರೆಯುವ ಮುಂಚೆಯೇ ಆತುರ ಪಟ್ಟು ಓಡಿ ಹೋಗಿದ್ದ ಪರಿಣಾಮವಾಗಿ ಆತನ ಅರ್ಜಿ ತಿರಸ್ಕರಿಸಲ್ಪಟ್ಟಿತು. ಅವನ ಅರ್ಜಿ ತಿರಸ್ಕಾರವಾದ ಕೂಡಲೇ, ಜೋರಾಗಿ ಓ.. ಶಿಟ್.. ಓ… ಓ.. ಎಂದು ಇಲ್ಲಿ ವಿವರಿಸಲಾಗದಂತಹ ಮತ್ತು ವಿವರಿಸಬಾರದಂತಹ ಪದಗಳನ್ನಾಡಿ ತನ್ನ ಬೇಗುದಿಯನ್ನು ಹೊರಹಾಕಿದ್ದ ಸತೀಶ. ಎರಡನೆಯವನಾದ ಮಂಜು ಅದರಿಂದ ಸ್ವಲ್ಪ ವಿಚಲಿತನಾದರೂ ಅದನ್ನು ತೋರ್ಪಡಿಸದೇ ಅಲ್ಲಿಯೇ ಸಾಲಿನಲ್ಲಿ ನಿಂತಿದ್ದು ಅವರು ಕರೆದಾಗ ಅವರ ಬಳಿ ಹೋಗಿ ಅವರು ಕೇಳಿದ್ದಕ್ಕೆಲ್ಲಾ ತಾಳ್ಮೆಯಿಂದ ಉತ್ತರಿಸಿ ಅವರು ಅಲ್ಲಿ ವ್ಯಾಸಂಗ ಮಾಡಲು ಹಣಕಾಸಿನ ವ್ಯವಸ್ಥೆ ಹೇಗೆ ಮಾಡುತ್ತೀರಾ ಎಂದು ಕೇಳಿದಾಗ, ತನಗೆ ಬ್ಯಾಂಕ್ ನೀಡಿದ್ದ ಸಾಲವನ್ನು ತೋರಿಸಿ ಅವರಿಗೆ ಸಮಾಧಾನಕರವಾದ ಉತ್ತರ ನೀಡಿದ್ದರಿಂದ ಅವನ ವೀಸಾ ಅರ್ಜಿ ಪುರಸ್ಕೃತ ಗೊಂಡಿತು. ನಂತರ ಮೂರನೆದಾಗಿ ಹೋದ ರಾಮ್ ಕೂಡಾ ಸಮಚಿತ್ತದಿಂದ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದನಾದರೂ ಅವನ ಉತ್ತರಗಳಿಂದ ಸಮಾಧಾನವಾಗದೇ, Sorry Ram, Better try next time, all the best ಎಂದು ಹೇಳಿ ಅವನ ಎಲ್ಲಾ ದಾಖಲೆಗಳನ್ನು ಹಿಂದುರಿಗಿಸಿ Next ಎಂದು ಕರೆದರು. ಹಗಲು ರಾತ್ರಿ ಅಮೇರಿಕಾದ ವೀಸಾ ಪಡೆಯಲೆಂದೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಷ್ಟ ಪಟ್ಟು ಓದಿ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಆಯ್ಕೆಯಾಗಿದ್ದರೂ, ಇಲ್ಲಿ ವೀಸಾ ದೊರೆಯದ್ದಿದ್ದಾಗ ಸಾಧಾರಣವಾಗಿ ಬಹುತೇಕ ವಿದ್ಯಾರ್ಥಿಗಳೂ ಅವಾಚ್ಯ ಶಬ್ಧಗಳನ್ನು ಜೋರಾಗಿ ಆಡುತ್ತಾ ತಮ್ಮ ಅಸಹನೆಯನ್ನು ವ್ಯಕ್ತ ಪಡಿಸುವುದು ಅಲ್ಲಿಯ ಸಹಜ ಪ್ರಕ್ರಿಯೆ. ಅದಕ್ಕೆ ತದ್ವಿರುದ್ಧವಾಗಿ ರಾಮ್ ತನ್ನ ಎಲ್ಲಾ ದಾಖಲೆಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಾ ಶಾಂತ ಚಿತ್ತದಿಂದ, Madam, Thank you very much for your wishes. I will try my luck next time ಎಂದು ಮೆಲುಧನಿಯಲ್ಲಿ ಹೇಳಿದ. ಅರ್ಜಿ ತಿರಸ್ಕೃತರಿಂದ ಆ ರೀತಿಯಾದ ವರ್ತನೆಯನ್ನು ಎಂದೂ ಕಾಣದಿದ್ದ ಅಲ್ಲಿಯ ಸಿಬ್ಬಂಧಿಗೆ ಒಮ್ಮಿಂದೊಮ್ಮೆಲೇ ಸಾವಿರ ವ್ಯಾಟ್ ಬಲ್ಬ್ ಹತ್ತಿದಂತಾಯಿತು. ಎಲ್ಲರಿಗಿಂತ ವಿಭಿನ್ನವಾಗಿ ವರ್ತಿಸಿದ ಇಂತಹ ವ್ಯಕ್ತಿಯ ಅರ್ಜಿಯನ್ನು ತಿರಸ್ಕರಿಸಬಾರದಿತ್ತು ಎಂದೆಣಿಸಿ, ಕೂಡಲೇ Ram, give back your documents ಎಂದು ಅವನ ದಾಖಲೆಗಳನ್ನು ಪಡೆದುಕೊಂಡು cancel ಎಂಬುದನ್ನು ಹೊಡೆದು ಹಾಕಿ approved ಎಂದು ಬರೆದು, congratulations you have got the visa. We wish you all the best and do well ಎಂದು ಹಾರೈಸಿ ಕಳುಹಿಸಿದರು.

puliyogare

ಅದೇ ರೀತಿ ಸುಮಾರು ವರ್ಷಗಳ ಹಿಂದೆ ದೀಪಾವಳಿಗೆಂದು ಸಾಲು ಸಾಲು ರಜೆ ಬಂದಿದ್ದಾಗ, ಮನೆಯವರೆಲ್ಲರ ಕೂಡಿ ಕೊಯಮತ್ತೂರಿಗೆ ಪ್ರವಾಸಕ್ಕೆಂದು ಹೋಗಿದ್ದೆವು. ಹಾಗೆಯೇ ಹಿಂದಿರುಗಿ ಬರುವಾಗ ಊಟಿಗೆ ಹೋಗಿ ಅಲ್ಲೂ ಒಂದು ದಿನ ತಂಗಿದ್ದು ಮರಳಿ ಮೈಸೂರಿನ ಕಡೆಗೆ ಬರುವಾಗ, ನಮ್ಮ ಚಿಕ್ಕಪ್ಪ ಹೇಳಿದ್ದರೆಂದು ಹಿಮವದ್ ಗೋಪಾಲ ಸ್ವಾಮೀ ಬೆಟ್ಟಕ್ಕೆ ಹೋದೆವು. ವಾಹ್!! ಎಂತಹ ಸುಂದರ ತಾಣವದು. ಕರ್ನಾಟಕ, ತಮಿಳು ನಾಡು ಮತ್ತು ಕೇರಳ ಹೀಗೆ ಮೂರೂ ರಾಜ್ಯಗಳಿಗೆ ಒತ್ತುಕೊಂಡಿರುವ ಎಲ್ಲೆಲ್ಲೂ ಹಸಿರುಮಯವಾಗಿರುವ ರಮಣೀಯ ಪ್ರದೇಶ. ಕಾರಿನಲ್ಲಿ ಬೆಟ್ಟ ಹತ್ತುತ್ತಿರುವಾಗಲೇ, ದೂರದಲ್ಲಿ ಆನೆಗಳ ಹಿಂಡನ್ನು ನೋಡಿಯೇ ನಮ್ಮ ಸಣ್ಣ ವಯಸ್ಸಿನ ಮಕ್ಕಳಿಗೆ ಸಂತೃಪ್ತಿಯಾಗಿತ್ತು. ಅಂದು ಶನಿವಾರವಾಗಿದ್ದರಿಂದ ತುಸು ಹೆಚ್ಚಿನ ಸಂಖ್ಯೆಯಲ್ಲಿಯೇ ಭಕ್ತಾದಿಗಳು ಬಂದಿದ್ದರಾದರೂ ನಮಗೆ ತುಂಬಾ ಚೆನ್ನಾಗಿಯೇ ದರ್ಶನವಾಯಿತು. ನಮ್ಮ ತಂದೆಯವರು ದೇವಸ್ಥಾನದ ಒಂದು ಬದಿಯಲ್ಲಿ ಕುಳಿತು ಎಂದಿನಂತೆ ಸುಶ್ರಾವ್ಯವಾಗಿ ನಮ್ಮ ತಾತನವರು ರಚಿಸಿದ ಕೀರ್ತನೆಗಳನ್ನು ಹಾಡುತ್ತಿದ್ದರು, ನಾನೂ ಅವರೊಂದಿಗೆ ಧನಿ ಗೂಡಿಸಿದೆ. ನಮ್ಮ ತಂದೆಯವರ ಗಾಯನ ಅಲ್ಲಿಯ ಅರ್ಚಕರಿಗೆ ತುಂಬಾ ಹಿಡಿಸಿ, ಇನ್ನೂ ಹಾಡಿ, ಇನ್ನೂ ಹಾಡಿ ಎಂದು ಸುಮಾರು ಏಳೆಂಟು ಗೀತೆಗಳನ್ನು ಹಾಡಿಸಿ ಕೇಳಿ ಸಂತೋಷಪಟ್ಟು ನಮ್ಮ ಪೂರ್ವಾಪರವನ್ನೆಲ್ಲಾ ವಿಚಾರಿಸಿ, ಮತ್ತೊಮ್ಮೆ ನಮಗೆಂದೇ ವಿಶೇಷವಾಗಿ ಮಂಗಳಾರತಿ ಮಾಡಿ, ದೇವರ ಮೇಲೆ ಹಾಕಿದ್ದ ಹೂವಿನ ಹಾರವನ್ನು ನಮ್ಮ ತಂದೆಯವರ ಕೊರಳಿಗೆ ಹಾಕಿ ಆಶೀರ್ವದಿಸಿದರು. ಅಷ್ಟರಲ್ಲಾಗಲೇ ಗಂಟೆ ಎರಡರಿಂದ ಎರಡೂವರೆಯಾಗಿತ್ತು. ಎಲ್ಲರ ಹೊಟ್ಟೆಯೂ ಚುರುಗುಟ್ಟುತ್ತಿತ್ತು. ಸರೀ ಅರ್ಚಕರೇ ನಾವಿನ್ನು ಬರುತ್ತೇವೆ ಎಂದು ನಮ್ಮ ತಂದೆಯವರು ಹೇಳಿದಾಗ, ಒಂದು ಹತ್ತು ಹದಿನೈದು ನಿಮಿಷಗಳು ಇರಿ. ಇಲ್ಲಿಯೇ ಪ್ರಸಾದ ಸ್ವೀಕರಿಸಿ ಹೋಗುವಿರಂತೆ ಎಂದು ತಿಳಿಸಿದರು. ದೇವರ ಪ್ರಸಾದ ಎಂದ ಮೇಲೆ ಎದ್ದು ಹೋಗಲು ಮನಸ್ಸಾಗದೇ ಅಲ್ಲಿಯೇ ಉಳಿದು ಕೊಂಡೆವು. ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದ್ದರಿಂದ ಹತ್ತು – ಹದಿನೈದು ನಿಮಿಷಗಳು ದಾಟುವಷ್ಟರಲ್ಲಿಯೇ ಅರ್ಚಕರೇ, ನಮಗೆ ಪ್ರಸಾದದ ವ್ಯವಸ್ಥೆ ಮಾಡುತ್ತೀರ ಎಂದು ವಿಚಾರಿಸಿದೆ. ಅಲ್ಲಿಯವರೆಗೂ ಸುಮ್ಮನಿದ್ದ ಮಕ್ಕಳೂ ಕೂಡಾ ಸ್ವಲ್ಪ ಕಿರಿಕಿರಿ ಮಾಡಲು ಶುರು ಮಾಡಿದ ಕಾರಣ, ತಾಳ್ಮೆಗೆಟ್ಟು ಮತ್ತೊಮ್ಮೆ ಅರ್ಚಕರೇ ನಾವಿನ್ನು ಬರುತ್ತೇವೆ. ಮಕ್ಕಳು ಸ್ವಲ್ಪ ಪಿರಿ ಪಿರಿ ಮಾಡುತ್ತಿದ್ದಾರೆ ಎಂದೆ. ಛೇ.. ಛೇ.. ನೀವು ಹಾಗೇ ಹೋಗುವಂತಿಲ್ಲಾ. ಊಟ ಮಾಡಿಕೊಂಡೇ ಹೋಗಬೇಕು. ಒಂದು ಐದು ನಿಮಿಷ ಇರೀ. ಇವತ್ತು ಶನಿವಾರವಾದ್ದರಿಂದ ಸಾಕಷ್ಟು ಮಂದಿ ಭಕ್ತಾದಿಗಳು ಬಂದಿದ್ದಾರೆ. ಊಟಕ್ಕೆ ಮನೆಗೆ ಹೋಗಿರುವ ನಮ್ಮ ತಮ್ಮ ಬಂದೊಡನೆಯೇ ಊಟದ ವ್ಯವಸ್ಥೆ ಮಾಡುತ್ತೇವೆ ಎಂದರೂ ಕಾಯುವ ಮನಸ್ಸಾಗದೇ ಗಲಾಟೆ ಮಾಡುತ್ತಿದ್ದ ಮಕ್ಕಳನ್ನು ಮಡದಿಯೊಂದಿಗೆ ಕೆಳಗೆ ಕಾರಿನಲ್ಲಿ ಕೂರಲು ಹೇಳಿ, ಅರ್ಚಕರೇ ನಮಗೆ ತಡವಾಗುತ್ತಿದೆ. ಇನ್ನು ಕಾಯಲು ಸಾಧ್ಯವಾಗುತ್ತಿಲ್ಲವಾದ್ದರಿಂದ ದಯವಿಟ್ಟು ದೊನ್ನೆಯಲ್ಲಿಯೇ ಪ್ರಸಾದ ಕೊಟ್ಟುಬಿಡಿ ನಾವು ಹೊರಗಡೆಯೇ ತಿನ್ನುತ್ತೇವೆ ಎಂದು ಹೇಳಿ, ನಮ್ಮ ತಂದೆ ತಾಯಿ ಮತ್ತು ನಾನು ಒಟ್ಟು ಮೂರು ಜನಾ ದೊನ್ನೆಗಳಲ್ಲಿಯೇ ಪುಳಿಯೋಗರೆ ಪಡೆದುಕೊಂಡು ಬಂದೆವು. ನಮ್ಮನ್ನು ಹಾಗೆ ಕಳುಹಿಸಲು ಅವರಿಗೆ ಮನಸ್ಸೇ ಇರಲಿಲ್ಲವಾದರೂ ಪರಿಸ್ಥಿತಿಯ ಪರಿಣಾಮದಿಂದಾಗಿ ಮತ್ತು ನಮ್ಮ ಒತ್ತಡದಿಂದಾಗಿ ಹಾಗೆ ಮಾಡಲೇ ಬೇಕಾಯಿತು. ಆದಾಗಲೇ ಗಂಟೆ ಮೂರೂ- ಮೂರೂವರೆ ಆಗಿದ್ದರಿಂದ ಮೂರು ದೊನ್ನೆ ಪುಳಿಯೋಗರೆಯನ್ನು ಆರು ಜನರು ಹಂಚಿಕೊಳ್ಳಲು ನಿರ್ಧರಿಸಿ ತಾತಾ-ಮೂಮ್ಮಗ, ಅಜ್ಜೀ-ಮೊಮ್ಮಗಳು ನಾನು ಮತ್ತು ನನ್ನ ಮಡದಿ ತಿನ್ನಲು ಕೈ ಹಾಕಿ ಒಂದು ತುತ್ತು ಬಾಯಿಗೆ ಹಾಕಿಕೊಳ್ಳುತ್ತೇವೆ. ಅಹಾ!! ಅಧ್ಬುತ. ಪರಮಾದ್ಭುತ. ಅಂತಹ ಪುಳಿಯೋಗರೆಯನ್ನು ಅಲ್ಲಿಯವರೆಗಿನ ನಮ್ಮ ಜೀವಮಾನದಲ್ಲಿ ಎಲ್ಲೂ ತಿಂದೇ ಇರಲಿಲ್ಲ. ಮಕ್ಕಳು ತಾತಾ ಅಜ್ಜಿಯರಿಗೂ ಉಳಿಸದೇ ಗಬ ಗಬ ಎಂದು ತಿಂದು ಹಾಕಿದರು. ಮೊಮ್ಮಕ್ಕಳು ತಿನ್ನುವುದನ್ನು ನೋಡುವುದರಲ್ಲಿಯೇ ತಾತಾ ಅಜ್ಜಿಯರ ಹೊಟ್ಟೆ ತುಂಬಿ ಹೋಗಿತ್ತು. ಅಪ್ಪಾ ಇನ್ನೂ ಸ್ವಲ್ಪ ಇಸ್ಕೊಂಡು ಬನ್ನಿಪ್ಪಾ ಎಂದು ಮಗಳು ಕೇಳಿದಳಾದರೂ ಮತ್ತೊಮ್ಮೆ ಅರ್ಚಕರ ಬಳಿ ಹೋಗಲು ಮನಸ್ಸಾಗದೇ, ನಮ್ಮ ಕೈಯಲ್ಲಿದ್ದ ಪುಳಿಯೋಗರೆಯನ್ನೂ ಮಕ್ಕಳಿಗೇ ತಿನ್ನಿಸಿ ಗುಂಡ್ಲು ಪೇಟೆಗೆ ಬಂದು ಹೋಟೆಲ್ನಲ್ಲಿ ತಿಂದು ಪ್ರಯಾಣ ಮುಂದುವರಿಸಿದ್ದೆವು.

ಮೇಲಿನ ಮೂರೂ ಪ್ರಸಂಗಗಳನ್ನು ಕೂಲಂಕುಶವಾಗಿ ಗಮನಿಸಿದರೆ, ಕೈಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದರಲ್ಲಿ ಮೊದಲೆರಡರಲ್ಲಿ ಸಫಲರಾಗಿದ್ದರೆ, ಮೂರನೆಯದ್ದರಲ್ಲಿ ವಿಫಲವಾಗಿತ್ತು. ಮೊದಲನೆಯದ್ದರಲ್ಲಿ ಮನೆಯ ಮಾಲೀಕರು ನನ್ನನ್ನು ಛೇಡಿಸಿದಾಗಲೂ ಸಂಯಮದಿಂದ ವರ್ತಿಸಿದ್ದ ಕಾರಣ ಒಂದು ಚೊಂಬು ಗಿಣ್ಣು ಹಾಲನ್ನು ಪಡೆಯಲು ಹೋಗಿದ್ದವನಿಗೆ ಇಡೀ ಬಕೆಟ್ ಹಾಲು ಲಭಿಸಿತ್ತು. ಇನ್ನು ಎರಡನೇ ಪ್ರಸಂಗದಲ್ಲಿ ರಾಮ್ ನ ತಾಳ್ಮೆ ಬಹಳ ಪ್ರಮುಖ ಪಾತ್ರವಹಿಸಿತ್ತು. ಮೂವರೂ ಸಹಪಾಠಿಗಳಾದರೂ ಅವರವರ ಸಂಸ್ಕಾರ, ನಡೆ ನುಡಿಗಳಿಂದಲೇ ಸಫಲ, ವಿಫಲರಾಗಿದ್ದರು. ರಾಮ್ ತಾಳ್ಮೆಯಿಂದ ಹೇಳಿದ Thank you very much ಎಂಬ ಪದ ಆಕೆಯ ಮನಸ್ಸನ್ನು ಆಳವಾಗಿ ನಾಟಿ, ಆಕೆಯೇ ತಿರಸ್ಕಾರ ಮಾಡಿದ್ದನ್ನು ಪುರಸ್ಕರಿಸುವಂತೆ ಮಾಡಿತು. ಇನ್ನು ಮೂರನೇ ಪ್ರಸಂಗದಲ್ಲಂತೂ ಕೈಗೆ ಬಂದ ತುತ್ತು ಬಾಯಿಗೆ ಇಲ್ಲಾ ಎನ್ನುವಂತೆ ಸ್ವಲ್ಪ ತಾಳ್ಮೆ ವಹಿಸಿದ್ದರೆ ಎಲ್ಲರೂ ಸಾವಕಾಶವಾಗಿ ಹೊಟ್ಟೆ ತುಂಬಾ ದೇವರ ಪ್ರಸಾದವನ್ನು ಸ್ವೀಕರಿಸಬಹುದಾಗಿತ್ತು.

avakasha3.jpg

ಅದಕ್ಕೇ ನಮ್ಮವರು ಹೇಳಿದ್ದು ತಾಳಿದವನು ಬಾಳಿಯಾನೂ ಎಂದು. ಸಿಕ್ಕ ಅವಕಾಶಗಳನ್ನು ತಾಳ್ಮೆಯಿಂದ ಮತ್ತು ಸಂಯಮದಿಂದ ವ್ಯವಹರಿಸಿದಲ್ಲಿ ಅಸಾಧ್ಯವೂ ಸಾಧ್ಯವಾಗುತ್ತದೆ. ಜೀವನವೂ ಸುಖಃ ಮಯವಾಗಿರುತ್ತದೆ. ಅದಕ್ಕೇ ಏನೋ ಹೆಚ್ಚು ಹೆಚ್ಚು ಕೇಳಲು ಭಗವಂತ ನಮಗೆ ಎರಡು ಕಿವಿಗಳನ್ನು ಕೊಟ್ಟಿದ್ದಾನೆ. ಅಂತೆಯೇ, ಮಾತು ಕಡಿಮೆ ಮಾಡಲೆಂದೇ ಒಂದೇ ಬಾಯಿ ಆದರೆ ಕೆಲಸ ಕಾರ್ಯಗಳನ್ನು ಹೆಚ್ಚು ಹೆಚ್ಚಾಗಿ ಮಾಡಲು ಎರೆಡರಡು ಕಣ್ಣುಗಳು ಕೈಗಳು ಮತ್ತು ಕಾಲ್ಗಗಳನ್ನು ಕೊಟ್ಟಿದ್ದಾನೆ. ಹಾಗಾಗಿ ಆಶಾವಾದಿಗಳಾಗಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೇ ಹೊರತು, ಎಣ್ಣೆ ಬಂದಾ

Mnಗ ಕಣ್ಣು ಮುಚ್ಚಿಕೊಂಡರಂತೇ ಎನ್ನುವಂತೆ ಅವಕಾಶವನ್ನು ಉಪಯೋಗಿಸಿ ಕೊಳ್ಳದೇ ನಿರಾಶಾವಾದಿಗಳಾಗಬಾರದು. ಸೋಲೇ ಗೆಲುವಿನ ಮೆಟ್ಟಿಲಾದರೂ, ಸೋಲರಿಯದೇ ಗೆಲುವಿನ ಸವಾರಿ ಮಾಡುವ ಮಜವೇ ಬೇರೆ.

ಏನಂತೀರೀ?

2 thoughts on “ಅವಕಾಶ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s