ಇತ್ತೀಚೆಗೆ ನಮ್ಮ ಮನೆಯಿಂದ ಅಣ್ಣನ ಮನೆಉ ಕಡೆ ಹೋಗುವಾಗ ರಾಜಕುಮಾರ್ ಸ್ಮಾರಕ ದಾಟಿ ಸ್ವಲ್ಪ ಮುಂದೆ ಹೋಗುತ್ತಿರುವಾಗ ವರ್ತುಲ ರಸ್ತೆಯ ಬದಿಯ ತಳ್ಳು ಗಾಡಿಯ ಮೇಲೆ ಅಂಬಿ ಮಜ್ಜಿಗೆ ಅನ್ನೋ ಬೋರ್ಡ್ ನೋಡಿ ಅರೇ ಇದೇನಪ್ಪಾ ಒಂದು ತರಹದ ವಿಶೇಷವಾದ ಶೀರ್ಷಿಕೆ ಇದೆಯಲ್ಲಾ? ಅಂಬಿ (ಅಂಬರೀಷ್) ಅಭಿಮಾನಿಗಳ ಅಭಿಮಾನಕ್ಕೆ ಕೊನೆಯೇ ಇಲ್ಲವೇ? ಎಂದು ಯೋಚಿಸುತ್ತಿರುವಾಗಲೇ, ಇದನ್ನೇ ಗಮನಿಸಿದ ನನ್ನ ಮಡದಿಯೂ ಕೂಡಾ ಅಂಬಿ ಯಾವಾಗ ಇಲ್ಲಿಗೆ ಬಂದು ಮಜ್ಜಿಗೆ ಕುಡಿದಿದ್ರೋ? ಅವರು ಕುಡಿತಿದ್ದ ಮಜ್ಜಿಗೆಯೇ ಬೇರೆ ಅಲ್ವೇ? ಎಂದಾಗ, ಅರೇ ಹೆಣ್ಣು ಮಕ್ಕಳೂ ಕೂಡಾ ಹೀಗೆಲ್ಲಾ ಯೋಚಿಸ್ತಾರಾ? ಎಂದು ಸಣ್ಣಗೆ ಮನಸ್ಸಿನಲ್ಲೇ ಹುಳ್ಳಗೆ ನಗುತ್ತಾ ಸ್ವಲ್ಪ ದೂರ ಸಾಗುತ್ತಿದ್ದಾಗ ಅದೇ ರೀತಿಯ.ಮತ್ತೊಂದು ಗಾಡಿ ನೋಡಿದಾಗ ನಿಜಕ್ಕೂ ನಗು ತಡೆಯಲು ಆಗಲೇ ಇಲ್ಲಾ.
ಗಾಡಿಯ ಮೇಲೆ ಅಂಬ್ಲಿ ಮಜ್ಜಿಗೆ ಅಂತಾ ಸರಿಯಾಗಿ ಬರೆದಿದ್ದರು. ರಾಗಿ ಅಂಬಲಿ ಮಜ್ಜಿಗೆ ಮಾರೋ ಗಾಡಿಯ ಮೇಲೆ ಯಾರೋ ಬೋರ್ಡ್ ಬರೆದಿರೋ ಪುಣ್ಯಾತ್ಮನ ಕಾಗುಣಿತದ ಒಂದು “ಲ” ಒತ್ತಿನ ತಪ್ಪಿನಿಂದಾಗಿ ಎಷ್ಟೊಂದು ಅಪಾರ್ಥ ಕಲ್ಪಿಸಿತ್ತು. ಇಂದಿನ ಬಹುತೇಕರಿಗೆ ಕನ್ನಡದ ಕಾಗುಣಿತವೇ ಸರಿಯಾಗಿ ಬಾರದಿರುವ ಕಾರಣವೋ ಇಲ್ಲವೇ ಕಣ್ತಪ್ಪಿನಿಂದಾದ ಮುದ್ರಾರಾಕ್ಷಸನ ಪರಿಣಾಮವಾಗಿ ಈ ರೀತಿಯಾದ ಅಭಾಸ ಆಗಿದ್ದು ಒಂದು ರೀತಿಯ ಮಜಾ(ಕಿಕ್) ಕೊಟ್ಟಿತು. ನಾನೊಬ್ಬನೇ ಅದರ ಮಜಾ ಸವಿಯುವ ಬದಲು ನೀವೂ ಸಹಾ ಅಂಬಲಿಯನ್ನು ಹೇಗೆ ತಯಾರಿಸಬಹುದು ಮತ್ತು ಅದರ ಗಮ್ಮತ್ತು ಹೇಗಿರುತ್ತದೆ ಎಂಬುದನ್ನು ಹಂಚಿಕೊಳ್ಳಲು ಪ್ರೇರಣೆ ನೀಡಿತು.
ದೇಹದ ಆರೋಗ್ಯಕ್ಕಾಗಿ ನಾನಾ ರೀತಿಯ ಕೃತಕ ಅನಾರೋಗ್ಯಕರ ಪೇಯಗಳನ್ನು ಸೇವಿಸುವ ಬದಲು, ಆರೋಗ್ಯಕರವಾದ ರಾಗಿ ಅಂಬಲಿ ಮತ್ತು ಮಜ್ಜಿಗೆ ನಿಜಕ್ಕೂ ದೇಹಕ್ಕೆ ಅತ್ಯುತ್ತಮವಾಗಿದ್ದು ಬಹಳ ಸುಲಭವಾಗಿ ತಯಾರಿಸಬಹುದಾಗಿದೆ. ನಾವು ಚಿಕ್ಕವರಿದ್ದಾಗ ನಮ್ಮ ತಾತನವರು, ಹಿಟ್ಟಂ ತಿಂದವ, ಬೆಟ್ಟಂ ಕಿತ್ತಿಟ್ಟಂ ಎಂದು ಹೇಳುತ್ತಿದ್ದಂತೆ ರಾಗಿ ಅಂಬಲಿ ಶಕ್ತಿವರ್ಧಕ ಪೇಯವೂ ಹೌದಾಗಿದೆ.
ರಾಗಿ ಅಂಬಲಿ ರುಚಿಗೆ ತಕ್ಕಂತೆ ಸಿಹಿಯಾಗಿಯೋ ಇಲ್ಲವೇ ತುಸು ಉಪ್ಪು ಮತ್ತು ಹುಳಿ ಹುಳಿಯಾಗಿಯೂ ಸೇವಿಸ ಬಹುದು.
ಒಂದು ಬಟ್ಟಲು ರಾಗಿ ಅಂಬಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹೀಗಿವೆ.
- 4 ಚಮಚ ರಾಗಿ ಹಿಟ್ಟು
- 4 ಚಮಚ ಬೆಲ್ಲದ ಪುಡಿ (ಅಂಬಲಿ ಸಿಹಿಯಾಗಿ ಬೇಕಿದಲ್ಲಿ)
- ಅಂಬಲಿ ಗಮ್ಮನೆಂದು ಇರಲು ಚಿಟಿಕ ಏಲಕ್ಕಿ ಪುಡಿ
- ಅರ್ಧ ಕಪ್ ಹಾಲು
ಸಿಹಿ ರಾಗಿ ಅಂಬಲಿ ತಯಾರಿಸುವ ವಿಧಾನ
- ರಾಗಿ ಹಿಟ್ಟನ್ನು ಸಣ್ಣನೆಯ ಉರಿಯಲ್ಲಿ ಗಮ್ಮನೆ ವಾಸನೆ ಬರುವವರೆಗೂ ಹುರಿದುಕೊಳ್ಳಿ.
- ಹಿಟ್ಟು ತಣ್ಣಗಾದ ಮೇಲೆ ಒಂದು ದಪ್ಪನೆ ತಳದ ಪಾತ್ರೆಯಲ್ಲಿ, ಎರಡು ಲೋಟ ತಣ್ಣನೆ ನೀರಿನಲ್ಲಿ, ಹುರಿದ ರಾಗಿ ಹಿಟ್ಟನ್ನು ಹಾಕಿ ಗಂಟಿಲ್ಲದ ಹಾಗೆ ಕಲೆಸಿಕೊಳ್ಳಬೇಕು.
- ನಂತರ ಸಣ್ಣ ಉರಿಯಲ್ಲಿ ಅಂಬಲಿ ತೆಳು ಹದಕ್ಕೆ ಬರುವ ತನಕ ಕುದಿಸಿ,
- ಅದಕ್ಕೆ ಪುಡಿಮಾಡಿದ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ,
- ಅದು ತಣ್ಣಗಾದ ನಂತರ ನಮ್ಮ ಅಗತ್ಯಕ್ಕೆ ತಕ್ಕಷ್ಡು ಹಾಲನ್ನು ಸೇರಿಸಿದರೆ ರುಚಿಯಾದ ಸಿಹಿ ಅಂಬಲಿ ಸಿಧ್ದ.
ಹುಳಿ ಹುಳಿಯಾದ ಅಂಬಲಿಯನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು .
- 4 ಚಮಚ ರಾಗಿ ಹಿಟ್ಟು
- ರುಚಿಗೆ ತಕ್ಕಸ್ಟು ಉಪ್ಪು ಮತ್ತು ಕಾಳು ಮೆಣಸಿನಪುಡಿ,
- 1/2 ಚಮಚ ಹುರಿದು ಪುಡಿ ಮಾಡಿದ ಜೀರಿಗೆ ಪುಡಿ
- 2 ಬಟ್ಟಲು ಮಜ್ಜಿಗೆ
- ಅರ್ಧ ಸ್ಪೂನ್ ಹುಣಸೇಹಣ್ಣಿನ ಹುಳಿ
- ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಈರುಳ್ಳಿ ಮತ್ತು ಇನ್ನೂ ಹೆಚ್ಚಿನ ಖಾರ ಬೇಕಿದ್ದಲ್ಲಿ ಒಂದು ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ
ಹುಳಿಯಾದ ಅಂಬಲಿ ಮಾಡುವ ವಿಧಾನ
-
ರಾಗಿ ಹಿಟ್ಟನ್ನು ಸಣ್ಣನೆಯ ಉರಿಯಲ್ಲಿ ಗಮ್ಮನೆ ವಾಸನೆ ಬರುವವರೆಗೂ ಹುರಿದುಕೊಳ್ಳಿ ಹಿಟ್ಟು ತಣ್ಣಗಾದ ಮೇಲೆ ಒಂದು ದಪ್ಪನೆ ತಳದ ಪಾತ್ರೆಯಲ್ಲಿ, ಎರಡು ಲೋಟ ತಣ್ಣನೆ ನೀರಿನಲ್ಲಿ, ಹುರಿದ ರಾಗಿ ಹಿಟ್ಟನ್ನು ಹಾಕಿ ಗಂಟಿಲ್ಲದ ಹಾಗೆ ಕಲೆಸಿಕೊಳ್ಳಬೇಕು.ನಂತರ ಸಣ್ಣ ಉರಿಯಲ್ಲಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು,ಜೀರಿಗೆ ಪುಡಿ, ಕಾಳುಮೆಣಸಿನ ಪುಡಿಯ ಜೊತೆಗೆ ಹುಣಸೇಹುಳಿ ಸೇರಿಸಿ, ಹೆಚ್ಚಿನ ಖಾರ ಬೇಕಿದ್ದಲ್ಲಿ ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ ಹಾಕಿ ಅಂಬಲಿ ತೆಳು ಹದಕ್ಕೆ ಬರುವ ತನಕ ಕುದಿಸಿ, ಅದು ತಣ್ಣಗಾದ ನಂತರ ನಮ್ಮ ಅಗತ್ಯಕ್ಕೆ ತಕ್ಕಷ್ಟು ಮಜ್ಜಿಗೆ ಬೆರೆಸಿ ಈರುಳ್ಳಿಯ ಜೊತೆಗೆ ಸೇವಿಸಲು ಗಮ್ಮತ್ತಾಗಿರುತ್ತದೆ.
ಹಿಟ್ಟು ತಣ್ಣಗಾದ ಮೇಲೆ ಒಂದು ದಪ್ಪನೆ ತಳದ ಪಾತ್ರೆಯಲ್ಲಿ, ಎರಡು ಲೋಟ ತಣ್ಣನೆ ನೀರಿನಲ್ಲಿ, ಹುರಿದ ರಾಗಿ ಹಿಟ್ಟನ್ನು ಹಾಕಿ ಗಂಟಿಲ್ಲದ ಹಾಗೆ ಕಲೆಸಿಕೊಳ್ಳಬೇಕು.ನಂತರ ಸಣ್ಣ ಉರಿಯಲ್ಲಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು,ಜೀರಿಗೆ ಪುಡಿ, ಕಾಳುಮೆಣಸಿನ ಪುಡಿಯ ಜೊತೆಗೆ ಹುಣಸೇಹುಳಿ ಸೇರಿಸಿ, ಹೆಚ್ಚಿನ ಖಾರ ಬೇಕಿದ್ದಲ್ಲಿ ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ ಹಾಕಿ ಅಂಬಲಿ ತೆಳು ಹದಕ್ಕೆ ಬರುವ ತನಕ ಕುದಿಸಿ, ಅದು ತಣ್ಣಗಾದ ನಂತರ ನಮ್ಮ ಅಗತ್ಯಕ್ಕೆ ತಕ್ಕಷ್ಟು ಮಜ್ಜಿಗೆ ಬೆರೆಸಿ ಈರುಳ್ಳಿಯ ಜೊತೆಗೆ ಸೇವಿಸಲು ಗಮ್ಮತ್ತಾಗಿರುತ್ತದೆ.
ಇತ್ತೀಚೆಗೆ ಮನೆಗಳಲ್ಲಿ ಈ ರೀತಿಯಾಗಿ ಅಂಬಲಿ ಮಾಡದಿರುವ ಕಾರಣ ರಸ್ತೆಗಳಲ್ಲಿ ತಳ್ಳು ಗಾಡಿಗಳ ಮೇಲೆ ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ಇನ್ನು ಮಾವಿನಕಾಯಿ ಕಾಲದಲ್ಲಿ ಹುಳಿ ಮಾವಿನಕಾಯಿ ನೆಂಚಿಕೊಳ್ಳಲೂ ಬಹುದು. ಕರಿದ ಬಾಳಕದ(ಉಪ್ಪು ಮೆಣಸಿನಕಾಯಿ) ಜೊತೆಗೂ ಸೇವಿಸಲು ಮಜವಾಗಿರುತ್ತದೆ.
ಮೇಲೆ ತಿಳಿಸಿದ ಹಾಗೆ ನಮ್ಮ ನಮ್ಮ ಮನೆಗಳಲ್ಲಿ ಅಂಬಲಿ ತಯಾರಿಸಿ ಪ್ರತೀ ದಿನ ಬೆಳೆಗ್ಗೆ ಇಲ್ಲವೇ ರಾತ್ರಿ ಸೇವಿಸಿ ಆರೋಗ್ಯವಾಗಿರೋಣ. ಹಾಂ, ಇನ್ನೊಂದು ಹೇಳಲು ಮರತೆ. ಅಂಬಲಿ ಚೆನ್ನಾಗಿ ಮಾಡಲು ಕಲಿತ ಮೇಲೆ ನಮ್ಮನ್ನು ಕರೆದು ನಮಗೂ ರಾಗಿ ಅಂಬಲಿ ಕೊಡಲು ಮರೆಯದಿರಿ.
ಖಂಡಿತವಾಗಿಯೂ ಕರೀತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ
ಅವಶ್ಯವಾಗಿ ಕೊಡ್ತೇನೆ. ನೀವು ಬರಬೇಕಷ್ಟೇ.
LikeLiked by 1 person
ಯಾವಾಗ ಬರ್ಬೇಕು ಹೇಳಿ ಅಗತ್ಯವಾಗಿ ಬರ್ತೀವಿ
LikeLike