1962ರಲ್ಲಿ ಸ್ವರ್ಣಗೌರಿ ಎಂಬ ಪೌರಾಣಿಕ ಕನ್ನಡ ಚಲನಚಿತ್ರ ಬಿಡುಗಡೆಯಾಗುತ್ತದೆ. ಆ ಚಿತ್ರದ ಅಷ್ಟೂ ಹಾಡುಗಳು ಮತ್ತು ಸಂಭಾಷಣೆ ಜನರ ಮನಸ್ಸೂರೆಗೊಂಡು ಚಲನಚಿತ್ರವೂ ಅತ್ಯಂತ ಯಶಸ್ವಿಯಾಗಿ, ದಿನಬೆಳಗಾಗುವುದರೊಳಗೆ ಆ ಚಿತ್ರದ ಸಾಹಿತಿ ಕರ್ನಾಟಕಾದ್ಯಂತ ಮನೆ ಮಾತಾಗುತ್ತಾರೆ. ಮುಂದೆ ಆ ಹಾಡುಗಳ ರಚನೆಗಾಗಿ ರಾಷ್ಟ್ರಪ್ರಶಸ್ತಿಯೂ ದೊರಕುತ್ತದೆ. ಒಬ್ಬ ಸಹೃದಯ ಕವಿ, ಸ್ವಾಭಿಮಾನಿ, ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧೀವಾದಿ,ಜಾನಪದ ತಜ್ಞ, ಸುಶ್ರಾವ್ಯ ಹಾಡುಗಾರ, ಸರ್ವ ಧರ್ಮ ಸಹಿಷ್ಣುಗಾಳಾಗಿದ್ದ ಶ್ರೀ ಎಸ್. ಕೆ. ಕರೀಂ ಖಾನ್ ಆವರ ಬಗ್ಗೆ ತಿಳಿದುಕೊಳ್ಳೋಣ.
ಅಫ್ಘಾನಿಸ್ಥಾನದ ಕಾಬೂಲ್‌ನ ವೀರಯೋಧ ಹಾಗೂ ಯುನಾನಿ ವೈದ್ಯರಾಗಿದ್ದ ಶ್ರೀ ರೆಹಮಾನ್ ಖಾನ್ ಮತ್ತು ಸೌದಿ ಅರೇಬಿಯಾ ಮೂಲದ ಜೈನಬಿ ಎಂಬ ದಂಪತಿಗಳು ಹಾಗೆಯೇ ಭಾರತಕ್ಕೆ ಬಂದು ನಂತರ ಹಾಸನಜಿಲ್ಲೆಯ ಸಕಲೇಶಪುರದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡರು. ಆ ದಂಪತಿಗಳಿಗೆ 1908ರಲ್ಲಿ ಕರೀಂಖಾನ್ ಅವರು ಜನಿಸುತ್ತಾರೆ. ಬಾಲ್ಯದಲ್ಲಿಯೇ ತಂದೆಯವರ ಅಕಾಲಿಕ ಮರಣದಿಂದಾಗಿ, ಅಣ್ಣನ ಆಶ್ರಯದಲ್ಲಿಯೇ ಸಕಲೇಶಪುರದಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡುತ್ತಾರೆ.
ಜನ್ಮತಃ ಅವರು ಮುಸ್ಲಿಂ ಸಂಪ್ರದಾಯದವರು ಮತ್ತು ಮನೆಯ ಮಾತೃಭಾಷೆ ಉರ್ದು ಆದರೂ ಅವರಿಗೆ ಹಿಂದೂ ಧರ್ಮದ ಆಚಾರ ವಿಚಾರ ಮತ್ತು ಕನ್ನಡದ ಬಗ್ಗೆ ವಿಶೇಷ ಒಲವು ಅವರ ಮನೆಯ ಹತ್ತಿರದಲ್ಲೇ ಇದ್ದ ವಿದ್ವಾಂಸರಾದ ಶ್ರೀ ನಾರಾಯಣ ಶಾಸ್ತ್ರಿಗಳ ಪರಿಚಯವಾಗುವುತ್ತದೆ. ಪ್ರತೀ ದಿನ ಕರೀಂ ಖಾನರು ಶಾಸ್ತ್ರಿಗಳ ತೋಟದ ಮನೆಗೆ ಪ್ರತೀ ದಿನವೂ ತಪ್ಪದೆ ಹೋಗುತ್ತಾ ಅವರ ಒಡನಾಟದಲ್ಲಿಯೇ ಇರುತ್ತಾರೆ, ಅದೊಂದು ದಿನ ಶಾಶ್ತ್ರಿಗಳು ಎನೋ ಮಗೂ, ಪ್ರತಿನಿತ್ಯ ನಮ್ಮ ತೋಟಕ್ಕೆ ಬರ್ತೀಯಲ್ಲ ಏನ್ ಸಮಾಚಾರ? ಎಂದು ಕೇಳಿದಾಗ, ಆ ಪುಟ್ಟ ಬಾಲಕ ಖಾನರು ಅಳುಕುತ್ತಲೇ ದೈನ್ಯಭಾವವಿದಿಂದ ಶಾಸ್ತ್ರಿಗಳೇ ನಾನು ನಿಮ್ಮ ತೋಟಕ್ಕೆ ಬರೋದು ನಿಮ್ಮ ದರ್ಶನ ಪಡೆಯುವ್ದರ ಜೊತೆಗೆ ನಿಮ್ಮ ಪಾಂಡಿತ್ಯದಿಂದ ಅಲ್ಪ ಸ್ವಲ್ಪವಾದರೂ ಕಲಿಯಬಹುದೇನೋ ಎನ್ನುತ್ತಾರೆ. ಬಾಲಕನ ಈ ಮುಗ್ಧ ಉತ್ತರಕ್ಕೆ ಶಾಸ್ತ್ರಿಗಳು ಒಂದು ಕ್ಷಣ ದಿಗ್ಭ್ರಾಂತರಾಗಿ, ಅರೇ ನಮ್ಮ ಮನೆಯ ಮಕ್ಕಳಿಗೇ ಬೇಕಿರದ ನನ್ನ ಪಾಂಡಿತ್ಯದ ಮೇಲೆ ಈ ಮುಸ್ಲಿಂ ಬಾಲಕನಿಗೆ ಎನೋ ಅಸಕ್ತಿ ಎಂದು ತಿಳಿದು ಎಲ್ಲಾ ದೈವೀಚ್ಚೆ ಎಂದು ಬಗೆದು ಅಂದಿನಿಂದ ಆತನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, ಶಿಶುನಾಳ ಶರೀಫರಿಗೆ ಆತನ ಗುರುಗಳು ವಿದ್ಯೆಯನ್ನು ಕಲಿಸಿದಂತೆ, ಶ್ರೀ ನಾರಾಯಣ ಶಾಸ್ತ್ರಿಗಳು ಕರೀಂ ಖಾನರಿಗೆ ಕನ್ನಡ, ಸಂಸ್ಕೃತ, ಸಾಹಿತ್ಯ, , ಶಾಸ್ತ್ರ, ಪುರಾಣಗಳನ್ನು ಕಲಿಸುತ್ತಾರೆ. ಕಲಿಕೆಯಲ್ಲಿ ಅತ್ಯಂತ ಚುರುಕಾಗಿದ್ದ ಕರೀಂಖಾನರು ಎಲ್ಲವನ್ನೂ ಅತೀ ಶೀಘ್ರದಲ್ಲಿಯೇ ಕಲಿತು ಭಾರತೀಯ ಇತಿಹಾಸ, ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳ ಜೊತೆಗೆ ಜಾನಪದ, ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಮಹಾಕಾವ್ಯಗಳ ಬಗ್ಗೆ ಅಪಾರವಾದ ಪಾಂಡಿತ್ಯ ಗಳಿಸಿಕೊಳ್ಳುತ್ತಾರೆ. ತಮ್ಮ ಪುರಾಣ ಗ್ರಂಥ ಕುರಾನ್ ಜೊತೆಗೆ ನಮ್ಮ ಭಗವದ್ಗೀತೆ, ಶಿವಪುರಾಣ, ವಿಷ್ಣುಪುರಾಣಗಳನ್ನು ಕರಗತ ಮಾಡಿಕೊಂಡು ಹಿಂದೂ -ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗುತ್ತಾರೆ.
ಅದೇ ಕಾಲದಲ್ಲಿ ದೇಶಾದ್ಯಂತ ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಯಿಂದ ಆಕರ್ಷಿತರಾಗಿ, ಕರೀಂ ಖಾನರೂ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ತಮ್ಮ ಅದ್ಭುತವಾದ ಕಂಠದಿಂದ ಹಾಡುತ್ತಾ ನಿರರ್ಗಳವಾಗಿ ಹರಿಯುವ ತಮ್ಮ ವಾಗ್ಝರಿಯಿಂದ ಜನರನ್ನು ಹುರಿದುಂಬಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದ್ದರಿಂದಾಗಿ ಸತತ ಏಳು ಸಲ ಜೈಲುವಾಸವನ್ನೂ ಅನುಭವಿಸಿದ್ದರು. ಮುಂದೆ ಮಹಾತ್ಮಾ ಗಾಂಧಿಯವರು ವಿಶ್ರಾಂತಿಗೆಂದು ನಂದಿ ಬೆಟ್ಟದಲ್ಲಿ ತಂಗಿದ್ದಾಗ ಕರೀಖಾನರನ್ನು ವಿಶೇಷವಾಗಿ ಭೇಟಿ ಮಾಡುತ್ತಾರೆ. ಗಾಂಧಿಯವರ ವಿಚಾರಧಾರೆಗಳಿಂದ ಅಪಾರವಾಗಿ ಪ್ರಭಾವಿತರಾಗಿ ಹಾವ ಭಾವ, ಉಡುಗೆ ತೊಡುಗೆ ಮತ್ತು ಆಹಾರದ ವಿಚಾರಗಳಲ್ಲಿ ಅಪ್ಪಟ ಗಾಂದೀವಾದಿಗಳಾಗಿ ಅದನ್ನು ತಮ್ಮ ಜೀವಿತಾವಧಿಯವರೆಗೂ ಪಾಲಿಸಿಕೊಂಡು ಬರುತ್ತಾರೆ.
ಸ್ವಾತಂತ್ರ್ಯಾ ನಂತರ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದಾಗಿ ಮಾಡಲು ಆಲೂರು ವೆಂಕಟರಾಯರ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕರೀಂ ಖಾನ್ ಅವರೂ ವೆಂಕಟರಾಯರ ಕೈ ಜೋಡಿಸಿ . ಕಾವೇರಿಯಿಂದಮಾಗೋದಾವರಿ ವರಮಿರ್ದ ಕನ್ನಡ ನಾಡು ಎಂಬ ಕವಿರಾಜ ಮಾರ್ಗದ ಶಾಸನವನ್ನು ಅಕ್ಷರಶಃ ನಿಜಮಾಡಲು, ಕನ್ನಡ ಭಾಷೆಯನ್ನು ಮಾತನಾಡುವ , ಕನ್ನಡಿಗರು ನೆಲೆಸಿರುವ ಎಲ್ಲಾ ಊರುಗಳಿಗೂ ಭೇಟಿ ಮಾಡಿ ಕನ್ನಡಿಗರ ಅಸ್ಮಿತೆಯನ್ನು ಜಾಗೃತ ಗೊಳಿಸಿ ಅವರನ್ನೆಲ್ಲಾ ಒಂದಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಾರೆ, ಈ ಸಂಧರ್ಭದಲ್ಲಿ ಸೆರೆಮನೆವಾಸವನ್ನು ಅನುಭವಿಸಿದರೂ ಅದನ್ನು ಲೆಖ್ಖುಸದೇ ಕನ್ನಡ ತಾಯಿಯ ಸೇವೆಗಾಗಿ ತಮ್ಮನ್ನ ತಾವು ಸಂಪ್ರೂರ್ಣವಾಗಿ ಅರ್ಪಿಸಿಕೊಂದು ಬ್ರಹ್ಮಚಾರಿಗಳಾಗಿಯೇ ಉಳಿಯುತ್ತಾರೆ.
ಕನ್ನಡಿಗರನ್ನು ಬರವಣಿಗೆಗಳ ಮೂಲಕ ಜಾಗೃತ ಗೊಳಿಸುವ ನಿಟ್ಟಿನಲ್ಲಿ ಧಾರವಾಡದ ಲೋಕಮಿತ್ರ ಮತ್ತು ಉಡುಪಿಯ ಅಂತರಂಗ ಪತ್ರಿಕೆಗಳ ಸಂಪಾದಕರಾಗುವ ಮೂಲಕ ಪತ್ರಿಕಾ ರಂಗಕ್ಕೆ ಕಾಲಿಟ್ಟ ಖಾನರು ಪತ್ರಿಕೆಯಲ್ಲಿ ಜಾನಪದ ಸಾಹಿತ್ಯದ ಮುಖಾಂತರ ದೇಶಾಭಿಮಾನ ಮೂಡಿಸುವಂತಹ ಲೇಖನಗಳನ್ನು ಪ್ರಕಟಿಸುತ್ತಾ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿಸುತ್ತಾರೆ.
ಉರ್ದು ಸಾಹಿತ್ಯದ ಘಾಲಿಬ್ ಮತ್ತು ಇಕ್ಬಾಲ್ ರಂತಹ ಕವಿಗಳಿಂದ ಪ್ರಭಾವಿತರಾಗಿದ್ದ ಕರೀಂಖಾನರು ಹಿಂದು ಮುಸ್ಲಿಂ ಏಕತೆಗೆ ಸಾಕಷ್ಟು ಕಥೆಗಳನ್ನು ರಚಿಸಿದ್ದಾರೆ. ಅದರಲ್ಲಿ ನಿವಾರ (ಉರ್ದುವಿನಿಂದ ಅನುವಾದಿತ ಕಥೆಗಳು), ನೀಹಾರ (ಚಾರಿತ್ರಿಕ ಕಥಾಸಂಕಲನ) ಬಲಿದಾನಿ ಹುಸೇನ್ ಎಂಬುದು ಚಾರಿತ್ರಿಕ ಕಾದಂಬರಿ, ಮಾತೃಶಾಪ ಪೌರಾಣಿಕ ಕಾದಂಬರಿಯ ಜೊತೆಗೆ ನಿರ್ದೋಷಿ, ಶ್ರೀ ಕೃಷ್ಣಲೀಲೆ, ಹುಮಾಯುನ್, ಅಂಬರನಾಥ, ಮಹಾಪ್ರಭು ಮಾಗಡಿ ಕೆಂಪೇಗೌಡ ಮುಂತಾದ ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳನ್ನು ರಚಿಸಿದ್ದಾರೆ.
ಕರ್ನಾಟಕದ ಏಕೀಕರಣ ಆಂದೋಳನದ ಮುಖಾಂತರ ಕಾಲ್ನಡಿಗೆಯಲ್ಲಿಯೇ ಹಳ್ಳಿಹಳ್ಳಿಗಳಲ್ಲಿ ಸುತ್ತಾಡುತ್ತಿದ್ದ ಸಮಯದಲ್ಲಿಯೇ ಅಲ್ಲಿಯ ಗ್ರಾಮೀಣ ಸೊಗಡು ಮತ್ತು ಜನಪದ ಸಾಹಿತ್ಯಕ್ಕೆ ಮರುಳಾಗಿ ಸಾವಿರಾರು ಜಾನಪದ ಗೀತೆಗಳನ್ನು ಸಂಗ್ರಹಿಸಲು ಮುಂದಾದ ಕರೀಂಖಾನರು ಮುಂದೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮೇಲಂತೂ ಸುಮಾರು ಎಂಟು ಸಾವಿರ ಕಿ.ಮೀ. ದೂರದಷ್ಟು ಸುತ್ತಾಡಿ ಜಾನಪದ ಪ್ರದರ್ಶನ ಕಲೆಗಳ ಕುರಿತು 240 ಗಂಟೆಗಳಷ್ಟು ಅವಧಿಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ಮೂಲಕ ಕಣ್ಮರೆಯಾಗುವಂತಿದ್ದ ಗಿರಿಜನ ಮತ್ತು ಬುಡಕಟ್ಟು ಜನಾಂಗದ ಸಂಸ್ಕೃತಿಗಳು ಉಳಿದವರಿಗೂ ಪರಿಚಯವಾಗಿ ಆ ಸಂಸ್ಕೃತಿ ಉಳಿಯುವಂತಾಗಲು ಅವರು ಮಾಡಿದ ಕೆಲಸ ಅತ್ಯಂತ ಶ್ಲಾಘನೀಯವಾದದ್ದು.
ಕನ್ನಡ ಚಿತ್ರರಂಗಕ್ಕೂ ಕರೀಖಾನರಿಗೂ ಅವಿನಾವಭಾವ ಸಂಬಂಧ. ಚಿತ್ರಸಾಹಿತಿಯಾಗಿ, ಗೀತರಚನಕಾರರಾಗಿ, ಚಲನಚಿತ್ರ ಕಥೆ, ಸಂಭಾಷಣೆಗಳನ್ನೂ ಬರೆದು ಪೂರ್ಣಪ್ರಮಾಣದ ಚಿತ್ರಸಾಹಿತಿಯೆನಿಸಿದ್ದರು. ಮದರಾಸಿನ ಪ್ರಸಾದ್ ಮೂವೀಸ್‍ನ ಆರ್. ನಾಯ್ಡು ಅವರ ಜೊತೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲವಿದ್ದ ಕರೀಂ ಖಾನರು ಅದೇ ಸಮಯದಲಿಯೇ ಹಲವಾರು ಚಿತ್ರಗಳಿಗೆ ಕಥೆ, ಸಂಭಾಷಣೆ, ಹಾಡುಗಳನ್ನು ಬರೆಯುತ್ತಾರೆ. ಸುಮಾರು 300ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದರು.ಸ್ವರ್ಣಗೌರಿ, ಜೀವನ ತರಂಗ, ಬೇವು ಬೆಲ್ಲ, ಚಂದ್ರಕುಮಾರ, ದೇವಮಾನವ, ದೊಂಬರಕೃಷ್ಣ, ರಾಜೇಶ್ವರಿ, ಪತಿತಪಾವನಿ, ಸೂಪರ್ ನೋವ 445 ಮುಂತಾದ ಹದಿನೈದು ಚಿತ್ರಗಳಿಗೆ ಇವರು ಸಾಹಿತ್ಯ ನೀಡಿದ್ದಾರೆ. ಈ ಮೊದಲೇ ಹೇಳಿದಂತೆ ಸ್ವರ್ಣಗೌರಿ ಚಿತ್ರದ ಹಾಡುಗಳಿಂದಾಗಿ ಅವರು ಕರ್ನಾಟಕಾದ್ಯಂತ ಜನಪ್ರಿಯತೆಗಳಿಸುತ್ತಾರೆ. ರಂಭಾಪುರಿ, ಕೂಡ್ಲಿ, ಶೃಂಗೇರಿ, ಉಡುಪಿ, ಧರ್ಮಸ್ಥಳ, ಆದಮಾರು ಸ್ವಾಮಿಗಳನ್ನು ಕುರಿತಂತೆ ಸ್ವಾಗತ ಗೀತೆಗಳನ್ನು ಇವರು ರಚಿಸಿದ್ದಾರೆ.
ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದ ಕರೀಂಖಾನರು ಅನೇಕ ಪ್ರಶಸ್ತಿಗಳಿಗೆ ಬಿರುದು ಬಾವಲಿಗಳಿಗೆ ಭಾಜನರಾಗುತ್ತಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,
- 1962ರಲ್ಲಿ ಸ್ವರ್ಣಗೌರಿ ಚಿತ್ರದ ಹಾಡಿಗಾಗಿ ರಾಷ್ಟ್ರಪ್ರಶಸ್ತಿ
- 1985 ರಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದರು
- 1989ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
- 1995 ರಲ್ಲಿ ಜನಪದ ಶ್ರೀ ಪ್ರಶಸ್ತಿ.
- 1997 ರಲ್ಲಿ ನಾಡೋಜ ಪ್ರಶಸ್ತಿ.
- 1998 ರಲ್ಲಿ ಹಂಸರತ್ನ.
- 2002 ರಲ್ಲಿ ಚಿ.ಉದಯಶಂಕರ್ ಚಿತ್ರ ಸಾಹಿತ್ಯ ಪ್ರಶಸ್ತಿ,
- 2004 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ.
- ಸಾವಿರ ಹಾಡುಗಳ ಸರದಾರ
- ಜಾನಪದ ಜಂಗಮ
- ಚಿತ್ರದುರ್ಗ ಶಿವಮೂರ್ತಿ ಶರಣರ ಪ್ರಶಸ್ತಿ,
- ಚಲನಚಿತ್ರ ರಂಗದ ಜೀವಮಾನದ ಪ್ರಶಸ್ತಿ
- ಕೆಂಪೇಗೌಡ ಪ್ರಶಸ್ತಿ
ಎಸ್ ಕೆ ಕರೀಂ ಖಾನ್ ಹೆಸರು ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗುವಂತೆ ಇರಲು ಬೆಂಗಳೂರಿನ ಇಂದಿರಾ ನಗರ 100 ಅಡಿ ರಸ್ತೆಗೆ ಎಸ್. ಕೆ. ಕರೀಂ ಖಾನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಪರಮ ಸ್ವಾಭಿಮಾನಿಗಳಾಗಿದ್ದ ಕರೀಖಾನರು ದೇಶದ ಸ್ವಾತಂತ್ಯ್ರ ಹೋರಾಟಗಾರಾಗಿ ಆವರಿಗೆ ಲಭಿಸುತ್ತಿದ್ದ ಪಿಂಚಣಿಯನ್ನೂ ತಿರಸ್ಕರಿಸಿದ್ದರು, ತಮ್ಮ ಬದುಕಿನುದ್ದಕ್ಕೂ ಎಷ್ಟೇ ಕಷ್ಟಗಳು ಬಂದರೂ ಯಾರ ಮುಂದೆಯೂ ಕೈಚಾಚಲಿಲ್ಲ. ಆ ಇಳಿವಯಸ್ಸಿನಲ್ಲಿ ಸ್ವಂತ ಮನೆಯಿಲ್ಲ ದಿದ್ದನ್ನು ಮನಗಂಡ ಅಂದಿನ ಸರ್ಕಾರ ಅವರಿಗೊಂದು ಸೂರನ್ನು ಕೊಡಲು ಇಚ್ಚಿಸಿದಾಗ ಆರಂಭದಲ್ಲಿ ಅದನ್ನು ತಿರಸ್ಕರಿಸಿದ್ದರೂ ನಂತರ ಎಲ್ಲರ ಒತ್ತಾಯಕ್ಕಿ ಮಣಿದು ಆ ಮನೆಯಲ್ಲಿ ಇರಲು ಒಪ್ಪಿಕೊಳ್ಳುವಷ್ಟರಲ್ಲಿ ಅವರ ಜೀವನದ ಅಂತ್ಯ ಸಮಯದಲ್ಲಿತ್ತು ಮತ್ತು ಆರೋಗ್ಯವೂ ಕ್ಷೀಣಿಸುತ್ತಿತ್ತು. ಜುಲೈ 29, 2006ರಂದು ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಧರ್ಮ ಯಾವುದಿದ್ದರೇನೂ, ಮಾಡುವ ಕರ್ಮ ಕನ್ನಡದ್ದಾಗಿದ್ದರೇ ಆತ ನಮ್ಮ ಹೆಮ್ಮೆಯ ಕನ್ನಡಿಗನೇ. ಕನ್ನಡ ಭಾಷೆಯನ್ನು ಯಾರು ಒಪ್ಪಿಕೊಂಡು ಅಪ್ಪಿಕೊಳ್ಳುತ್ತಾರೋ ಅವರೆಲ್ಲರೂ ಕನ್ನಡಿಗರೇ ಆಗುತ್ತಾರೆ. ಓದಿದ್ದು ಕೇವಲ ಎಂಟನೆಯ ತರಗತಿಯಾದರೂ ತಮ್ಮ ಅಪಾರ ಪಾಂಡಿತ್ಯದಿಂದಾಗಿ ಕನ್ನಡ ಜನಪದ ಸಾಹಿತ್ಯ, ಪತ್ರಿಕಾರಂಗ ಮತ್ತು ಚಲಚಿತ್ರರಂಗದಲ್ಲಿ, ಸ್ವಾತಂತ್ಯ್ರ ಹೋರಾಟಗಾರ ಮತ್ತು ಕನ್ನಡ ಏಕೀಕರಣದ ವೀರ ಸೇನಾನಿಯಾಗಿ ತಮ್ಮದೇ ಛಾಪನ್ನು ಮೂಡಿಸಿ ಕನ್ನಡಿಗರ ಮನಗಳಲ್ಲಿ ಶಾಶ್ವತವಾಗಿ ಮನೆ ಮಾಡಿರುವ ಎಸ್.ಕೆ. ಕರೀಖಾನ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?