ಸಾಮಾನ್ಯವಾಗಿ ಯಾವುದೇ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಾಗಲೀ, ಅಥವಾ ಸುಗಮ ಸಂಗೀತ ಅಥವಾ ರಸಸಂಜೆ/ಆರ್ಕೆಸ್ಟ್ರಾಗಳಲ್ಲಿ ಆಯಾಯಾ ಗಾಯಕ/ಗಾಯಕಿಕರು ತಮ್ಮ ಇಷ್ಟ ಪಟ್ಟ ಲೇಖಕರ ಹಾಡುಗಳನ್ನು ಹಾಡುವುದು ಸಹಜ. ಆದರೆ ಬಹುತೇಕ ಸುಗಮ ಸಂಗೀತಗಾರರು ಒಬ್ಬ ಗಾಯಕರ ಹಾಡನ್ನು ತಮ್ಮ ಪ್ರತೀ ಕಾರ್ಯಕ್ರಮಗಳಲ್ಲಿ ಹಾಡುತ್ತಾರೆಂದರೆ ಆ ಕವಿಯ ಕವನಗಳು ಹೇಗಿರುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಅದು ಜೋಗದ ಸಿರಿಯಾಗಿರಬಹುದು, ಕುರಿಗಳು ಸಾರ್ ಕುರಿಗಳು ಅಥವಾ ಬೆಣ್ಣೆ ಕದ್ದಾ ನಮ್ಮ ಕೃಷ್ಣಾ ಇರಬಹುದು. ಹೇ ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೆ ಇವತ್ತಿನ ನಮ್ಮ ಕನ್ನಡದ ಕಲಿಗಳ ಬಗ್ಗೆ ಎಲ್ಲರಿಗೂ ಗೊತ್ತಾಗಿಯೇ ಇರುತ್ತದೆ. ಹೌದು. ಮನೆಯಮಾತೃಭಾಷೆ ಉರ್ದು ಆದರೂ ಅವರೊಬ್ಬ ಅಪ್ಪಟ ಕನ್ನಡಿಗ. ನಾವಿಂದು ನಮ್ಮ ಹೆಮ್ಮೆಯ ಸಭ್ಯ , ಭಾವೈಕ್ಯ, ಕನ್ನಡದ ನಿತ್ಯೋತ್ಸವ ಕವಿ ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್ ನಮ್ಮೆಲ್ಲೆರ ಪ್ರೀತಿಯ ಕೆ. ಎಸ್. ನಿಸಾರ್ ಅಹಮದ್ ಅವರ ಬಗ್ಗೆ ಅರಿಯೋಣ.
ನಿಸಾರ್ ಅಹಮದ್ರವರು ಫೆಬ್ರುವರಿ 5, 1936ಲ್ಲಿ ದೇವನ ಹಳ್ಳಿಯಲ್ಲಿಯ ಷೇಕ್ ಹೈದರ್ ಮತ್ತು ಹಮೀದಾ ಬೇಗಂ ದಂಪತಿಗಳಿಗೆ ಜನಿಸಿದರು. ಅವರ ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು ಹಾಗಾಗಿ ನಿಸಾರರಿಗೂ ಅದೇ ವ್ಯಕ್ತಿತ್ವ ರಕ್ತಗತವಾಗಿತ್ತು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ದೇವನಹಳ್ಳಿಯಲ್ಲಿ ಮುಗಿಸಿ ಪ್ರೌಢಶಾಲೆಯನ್ನು ಹೊಸಕೋಟೆಯಲ್ಲಿ ಮುಗಿಸಿದ ನಂತರ ಕಾಲೇಜಿಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ 1959ರಷ್ಟರಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆಯುತ್ತಾರೆ. ಇವರ ಸುಕೃತವೋ ಎನೋ, ಅವರ ಕಾಲೇಜಿನಲ್ಲಿ ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ಜಿ.ಪಿ. ರಾಜರತ್ನಂ, ವಿ.ಸೀತಾರಾಮಯ್ಯ ಅವರಂತರ ಮಹಾನ್ ಗುರುಗಳಾಗಿದ್ದ ಕಾರಣ ನಿಸಾರರಲ್ಲಿ ಕನ್ನಡ ಸಾಹಿತ್ಯಾಸಕ್ತಿ ಬೆಳೆಯಲು ಪ್ರೇರಕರಾಗುತ್ತಾರೆ ಮತ್ತು ಪ್ರೋತ್ಸಾಹಕರಾಗುತ್ತಾರೆ. ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ತಮ್ಮ 10ನೇ ವಯಸ್ಸಿನಲ್ಲೇ ಪ್ರಕಟವಾಗಿ, ಜಲಪಾತ’ದ ಬಗ್ಗೆ ಅವರು ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು.
ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಭೂವಿಜ್ಞಾನಿಯಾಗಿ ಗುಲಬರ್ಗಾದಲ್ಲಿ ಉದ್ಯೋಗ ಆರಂಭಿಸಿದರಾದರೂ, ಆ ಕೆಲಸದಲ್ಲಿ ತೃಪ್ತಿ ದೊರೆಯದ ಕಾರಣ ಮತ್ತೆ ತಮ್ಮ ಎಂ.ಎಸ್ಸಿ. ಮುಗಿಸಿ, ತಾವು ಓದಿದ ಕಾಲೇಜು ಒಳಗೊಂಡಂತೆ, ಬೆಂಗಳೂರು ಚಿತ್ರದುರ್ಗ, ಶಿವಮೊಗ್ಗ, ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ 1994ರಲ್ಲಿ ನಿವೃತ್ತರಾಗುತ್ತಾರೆ.
ಧಾರ್ಮಿಕ ಆಚರಣೆಯಲ್ಲಿ ಅವರು ಇಸ್ಲಾಂ ಆನುಯಾಯಿಯಾದರೂ ಅವರು ಬರೆದ ಬೆಣ್ಣೆ ಕದ್ದಾ ನಮ್ಮ ಕೃಷ್ಣಾ ಬೆಣ್ಣೆ ಕದ್ದನೋ ಹಾಡನ್ನು ಕೇಳಿದವರಿಗೆ ಆ ಪುಟ್ಟ ಕೃಷ್ಣ ನಮ್ಮ ಕಣ್ಣ ಮುಂದೆಯೇ ಇಲ್ಲೇ ಎಲ್ಲೋ ನಮ್ಮ ಸುತ್ತಮುತ್ತಲೇ ಓಡಾಡುತ್ತಿರುವಂತೆ ಭಾಸವಾಗುತ್ತದೆ ಮತ್ತು ಇಂತಹ ಹಾಡನ್ನು ಒಬ್ಬ ಮುಸ್ಲಿಂ ಕವಿ ಬರೆದಿದ್ದಾರೆ ಎಂದು ಊಹಿಸಲೂ ಅಸಾಧ್ಯವಾಗುವಷ್ಟರ ಮಟ್ಟಿಗಿನ ಭಾವೈಕ್ಯ ಕವಿ. ಇದೇ ನಿಸಾರರು ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಸಂದರ್ಭದಲ್ಲಿ ಉಪನ್ಯಾಸ ನೀಡುವ ಮೂಲಕ ತಾವೊಬ್ಬ ವಿಶ್ವಮಾನವತಾವಾದಿ ಎಂಬುದಾಗಿ ತೋರಿಸಿಕೊಳ್ಳುತ್ತಾರೆ.
ಇನ್ನು ಕುರಿಗಳು ಸಾರ್ ಕುರಿಗಳು ಮೂಲಕ ರಾಜಕೀಯ ವ್ಯಕ್ತಿಗಳ ಟೊಳ್ಳು ಗಟ್ಟಿಗಳನ್ನು ಆನಾವರಣ ಗೊಳಿಸುವ ಮೂಲಕ ಒಬ್ಬ ಜವಾಬ್ಧಾರಿಯುತ ನಾಗರೀಕನ ಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತಾರೆ.
ಇನ್ನು ಕನ್ನಡದ ಪ್ರಪ್ರಥಮ ಧ್ವನಿಸುರಳಿಯಾದ ನಿತ್ಯೋತ್ಸವ ಕವಿತೆಗಳ ಬಗ್ಗೆ ಹೇಳುತ್ತಾ ಹೋದರೆ ಇಡೀ ದಿನವೇ ಬೇಕಾಗಬಹುದೇನೋ? ಅದರಲ್ಲೂ ಜೋಗದ ಸಿರಿಬೆಳಕಿನಲ್ಲಿ ಹಾಡನ್ನು ಹಾಡಿಕೊಂಡಾಗಲೆಲ್ಲಾ ಮೈ ರೋಮಾಂಚನಗೊಳ್ಳುತ್ತದೆ. ಮಲೆನಾಡಿನ, ಸಹ್ಯಾದ್ರಿಯ ತಪ್ಪಲಲ್ಲಿರುವ ಜೋಗದ ಜಲಪಾತ ಮತ್ತು ಅವರ ಸುತ್ತಮುತ್ತಲಿನ ಪರಿಸರವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವಾಗ, ಅವರೊಳಗಿರುವ ಪರಿಸರ ಪ್ರೇಮಿಯ ಅನಾವರಣವಾಗಿತ್ತದೆ ಎಂದರೆ ತಪ್ಪಾಗಲಾರದು.
ಕಳೆದ ಐದು ದಶಕಗಳಲ್ಲಿ ಸುಮಾರು 25 ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಅತ್ಯಂತ ಜನಪ್ರಿಯ ಕವನ ಸಂಕಲನಗಳಾಗಿವೆ. ನೆನದವರ ಮನದಲ್ಲಿ, ನಾನೆಂಬ ಪರಕೀಯ, ಅನಾಮಿಕ ಆಂಗ್ಲರು, ಸುಮಹೂರ್ತ, ಸಂಜೆ ಐದರ ಮಳೆ, ಸ್ವಯಂ ಸೇವೆಯ ಗಿಳಿಗಳು ಮುಂತಾದ ಕವನ ಸಂಕಲನಗಳದರೇ, ಅಚ್ಚುಮೆಚ್ಚು, ಇದು ಬರಿ ಬೆಡಗಲ್ಲೊ ಅಣ್ಣ, ಷೇಕ್ಸ್ ಪಿಯರ್ ಮುಂತಾದ ಗದ್ಯವನ್ನೂ ರಚಿಸುವ ಜೊತೆಯಲ್ಲಿ ಒಥೆಲ್ಲೊ ಮತ್ತು ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಹಿರಿಯ ಗಾಂಧೀವಾದಿಗಳು ಮತ್ತು ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಎಚ್.ನರಸಿಂಹಯ್ಯನವರಿಗು ಮತ್ತು ನಿಸ್ಸಾರ್ ಅಹಮದ್ ಅವರಿಗೂ ಗಳಸ್ಯ ಕಂಠಸ್ಥ ಸ್ನೇಹ. ಅವರಿಬ್ಬರೂ ನಿಯಮಿತವಾಗಿ ಲಾಲ್ಬಾಗ್ನಲ್ಲಿ ಬೆಳಗಿನ ವಾಯುವಿಹಾರಕ್ಕೆ ಹೋಗುತ್ತಿದ್ದರು. ಅದೊಮ್ಮೆ ಕಾಲು ಮುರಿತದಿಂದಾಗಿ ಎಚ್ಎನ್ಗೆ ಸ್ವಲ್ಪ ಸಮಯದವರೆಗೆ ಲಾಲ್ ಬಾಗಿಗೆ ಹೋಗಲು ಸಾಧ್ಯವಾಗಲಿಲ್ಲ. ಅದೇ ಕುರಿತಾಗಿ , ಅಲ್ಲಿಯ ಪ್ರತಿ ಮರ, ಕೊಂಬೆ ಎಲೆ, ಪಕ್ಷಿಗಳು, ಕೀಟಗಳು ಇತ್ಯಾದಿಗಳಿಗೆ ಎಚ್ಎನ್ ಅವರು ಅವುಗಳ ಮಧ್ಯೆ ಏಕೆ ಕಾಣುತ್ತಿಲ್ಲ ಎಂದು ಕೇಳುವ ಹಾಗೆ ನಿಸ್ಸಾರ್ ಅಹಮದ್ ಅವರು ಒಂದು ಕವನವನ್ನೇ ಬರೆದಿದ್ದರು. ಹೀಗಿತ್ತು ಅವರಿಬ್ಬರ ಸ್ನೇಹ.
ಇಷ್ಟೆಲ್ಲಾ ಬಹುಮುಖ ಪ್ರತಿಭೆಯ ವ್ಯಕ್ತಿತ್ವಕ್ಕೆ ಸಂದ ಪ್ರಶಸ್ತಿ ಪುರಸ್ಕಾರಗಳು ಅದೆಷ್ಟೋ
- 1981 ರ ರಾಜ್ಯೋತ್ಸವ ಪ್ರಶಸ್ತಿ
- 2003 ರ ನಾಡೋಜ ಪ್ರಶಸ್ತಿ
- 2006 ರ ಮಾಸ್ತಿ ಪ್ರಶಸ್ತಿ
- 2006 ರ ಅರಸು ಪ್ರಶಸ್ತಿ
- 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ, 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- 2008 ಪದ್ಮಶ್ರೀ ಪ್ರಶಸ್ತಿಯ ಹೊರತಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ತಮ್ಮ ಸೇವೆಯಿಂದ ನಿವೃತ್ತರಾಗಿದ್ದರೂ ಶಿಸ್ತಿನ ಸಿಪಾಯಿಯಂತೆ ಸದಾ ಕಾಲವೂ ಸೂಟೂಬೂಟುಧಾರಿಯಾಗಿಯೇ ನಮಗೆ ಕಾಣಸಿಗುತ್ತಾರೆ. ಇಂದಿಗೂ ಸಹ ಕೆಲವು ಸಂಜೆಗಳು ಅವರನ್ನು ಅವರ ಅಚ್ಚು ಮೆಚ್ಚಿನ ಗಾಂಧೀಬಜಾರಿನ ವಿಧ್ಯಾರ್ಥಿ ಭವನ ಅಥವಾ ಡಿವಿಜಿ ರಸ್ತೆಯಲ್ಲಿ ಯಾವುದೇ ಹಮ್ಮು ಬಿಮ್ಮಿಲ್ಲದೆ ನಿಗರ್ವಿಯಾಗಿ ಸಾಧಾರಣ ನಾಗರೀಕರ ಹಾಗೆಯೇ ಅವರನ್ನು ನೋಡಬಹುದಾಗಿದೆ. ಇಂದಿಗೂ ಸಹಾ ಯಾವುದೇ ಸಭೆ ಸಮಾರಂಭಗಳಿಗೆ, ಪುಸ್ತಕ ಬಿಡುಗಡೆಯ ಸಮಾರಂಭಗಳಿಗೆ ಅವರನ್ನು ಆಹ್ವಾನಿಸಿದರೆ, ಅವರು ಬಿಡುವಾಗಿದ್ದಲ್ಲಿ ಅವಶ್ಯವಾಗಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಬಂದು ಸಭಿಕರೊಂದಿಗೆ ತಮ್ಮಾ ಅನುಭವಗಳನ್ನು ಹಂಚಿಕೊಳ್ಳುವ ಒಬ್ಬ ಸರಳ ಸಜ್ಜನ ಕವಿಯಾದ ಕೆ.ಎಸ್. ನಿಸಾರ್ ಅಹಮದ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಆರ್.ಟಿ.ನಗರದ ತರಳಬಾಳುವಿನಲ್ಲ ನಡೆದ ಒಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಹುಶಃ ೧೯೯೯-೨೦೦೦ ನಾನು ಮೊದಲು ಇವರನ್ನು ಭೇಟಿ ಮಾಡಿದ್ದು. ನನ್ನ ವಿದ್ಯಾರ್ಥಿಗಳು ಇವರನ್ನು ಕಾಣುವ, ಮಾತಾಡುವ ಆಸೆ ವ್ಯಕ್ತ ಪಡಿಸಿದರು. ನಾನು ನಿಸಾರ್ ಅಹಮದ್ ರ ಬಳಿ ಹೋಗಿ ನನ್ನ ವಿದ್ಯಾರ್ಥಿಗಳು ನಿಮ್ಮ ನೋಡಲು ಇಷ್ಟಪಡುತ್ತಾರೆ ಎಂದ ಕೂಡಲೇ ಎಲ್ಲಿದ್ದಾರೆ, ಏನು ಓದುತ್ತಿದ್ದಾರೆ ಎಂದರು .ಬಾಗಿಲ ಬಳಿ ಇದ್ದಾರೆ ಕೆಲವರು ಪಿಯುಸಿ, ಮತ್ತೆ ಕೆಲವು ಡಿಗ್ರಿ ಎಂದೆ ನನ್ನೊಡನೆ ಬಂದೇಬಿಟ್ಟರು. ಮಕ್ಕಳು ಅವರಪಾದಾಭಿವಂದನ ಮಾಡಿದಾಗ ಒಳ್ಳೆಯ ಗಂಡ ಸಿಗಲಿ, ಶುಭವಾಗಲಿ ಎಂದೆಲ್ಲಾ ಹರಸಿದರು. ಸರಳ,ಸಜ್ಜನಿಕೆ ತುಂಬಿ ತುಳುಕಿತ್ತು . ಹತ್ತು ನಿಮಿಷದಲ್ಲಿ ಮಕ್ಕಳ ಮನ ತುಂಬಿದ್ದರು.
LikeLike