ಕನ್ನಡ ವೀರ ಸೇನಾನಿ ಮ. ರಾಮಮೂರ್ತಿ

1956ರಲ್ಲಿ ಹತ್ತಾರು ಕಡೆ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು  ಭಾಷಾವಾರು ಅಧಾರದ ಮೇಲೆ  ರಾಜ್ಯಗಳನ್ನು ವಿಂಗಡಿಸಿ ಮೈಸೂರು ರಾಜ್ಯವಾದರೂ ಕನ್ನಡಿಗರಿಗೆ ಸಿಗಬೇಕಾದ ಗೌರವಗಳು ಸಿಗದೇ ಇನ್ನೂ  ಪರಕೀಯನಾಗಿಯೇ ಇದ್ದ.  ಅದೂ ರಾಜಧಾನಿಯಾದ ಬೆಂಗಳುರಿನಲ್ಲಿಯೇ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ದೊರಕದಿದ್ದ ಸಂದರ್ಭದಲ್ಲಿ ಅನಕೃ ಅವರ ನೇತೃತ್ವದಲ್ಲಿ ಚಳುವಳಿ ಆರಂಭವಾದಾಗ ಅದರ ಮುಂದಾಳತ್ವವನ್ನು ವಹಿಸಿದ, ಕನ್ನಡ ಹೋರಾಟಕ್ಕೆ ಹೊಸ ಆಯಾಮ ನೀಡಿ, ಕನ್ನಡಿಗರ ಅಸ್ದಿತ್ವ ಮತ್ತು ಅಸ್ಮಿತಿಯನ್ನು ಎತ್ತಿ ಹಿಡಿಯಲು ಅವರನ್ನು ಒಗ್ಗೂಡಿಸಲು, ಹಳದಿ ಮತ್ತು ಕೆಂಪು ಬಣ್ಣದ ಬಾವುಟವನ್ನು ಕನ್ನಡಿಗರಿಗೆ ನೀಡಿದ  ಕನ್ನಡ ವೀರ ಸೇನಾನಿ ಶ್ರೀ ಮ. ರಾಮಮೂರ್ತಿ ಅವರ ಕುರಿತು ನಾವಿಂದು ತಿಳಿಯೋಣ.

ಮದ್ದೂರಿನ ಮೂಲದವರಾದ  ಖ್ಯಾತ ಸಾಹಿತಿ, ಪತ್ರಿಕೋದ್ಯಮಿ, ಸ್ವಾತಂತ್ರ ಹೋರಾಟಗಾರ ವೀರಕೇಸರಿ ಸೀತಾರಾಮ ಶಾಸ್ತ್ರಿಗಳು ಮತ್ತು  ಶೀಮತಿ ಪಾರ್ವತಮ್ಮ ದಂಪತಿಗಳಿಗೆ ನಂಜನಗೂಡಿನಲ್ಲಿ  ಮಾರ್ಚ್ 11, 1918ರಂದು ಶ್ರೀ ರಾಮಮೂರ್ತಿಗಳ ಜನನವಾಗುತ್ತದೆ,.  ಸಂಪ್ರದಾಯಸ್ಥ ಕುಟುಂಬವಾದ್ದರಿಂದ ಸಂಸ್ಕಾರ ಮತ್ತು ಸಂಪ್ರದಾಯಗಳು ರಕ್ತಗತವಾಗಿಯೇ ರಾಮಮೂರ್ತಿಗಳಿಗೆ ಬಂದುಬಿಡುತ್ತವೆ. ಬಾಲ್ಯದಿಂದಲೂ ಆಟ ಪಾಟಗಳಲ್ಲಿ ಚುರುಗಾಗಿದ್ದ ಮೂರ್ತಿಗಳು ಶಾಲಾ ವಿದ್ಯಾರ್ಧಿಯಾಗಿದ್ದಲೇ ಬರೆದಿದ್ದಂತಹಗುರು ದಕ್ಷಿಣೆ  ಎಂಬ ಕಥೆ ದೇವುಡು ಮತ್ತು ಅ.ನ. ಸುಬ್ಬರಾಯರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಮುಂದೆ ತಮ್ಮ ತಂದೆಯವರೇ ನಡಿಸುತ್ತಿದ್ದ  ವೀರಕೇಸರಿ ಪತ್ರಿಕೆಯಲ್ಲಿ ಉಗ್ರ ಲೇಖನಗಳನ್ನು ಬರೆಯುವ ಮೂಲಕ ಪತ್ರಿಕಾರಂಗಕ್ಕೆ ಪಾದಾರ್ಪಣೆ ಮಾದಿದರು.

ಭಾಷಾವಾರು ಆಧಾರಾದ ಮೇಲೆ  ಕನ್ನಡನಾಡು ರಚನೆಯಾದರೂ   ಸ್ಥಳೀಯ ಕನ್ನಡಿಗನೇ ನಿರಾಶ್ರಿತನಾಗಿ ಕನ್ನಡವೇ  ಅನಾಥವಾಗುವಂಹ  ವಾತಾವರಣ ನಿರ್ಮಾಣವಾಗಿದ್ದಂತಹ ಸಮಯ. ಪ್ರತಿದಿನವೂ ಪ್ರತಿನಿತ್ಯವೂ ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲೊಡ್ಡುವ ಸನ್ನಿವೇಶಗಳು  ಸೃಷ್ಟಿಯಾಗುತ್ತಿದ್ದವು. ಎಷ್ಟೋ ಬಡಾವಣೆಗಳಲ್ಲಿ ಕನ್ನಡ ಅಂದರೆ ಎನ್ನಡ ಅನ್ನುವ ಪರಿಸ್ಥಿತಿ. ಇದೇ ಕಾಲಘಟ್ಟದಲ್ಲಿ ಬೆಂಗಳೂರಿಗೆ ಬಂದ ಕೋಣಂದೂರು ಲಿಂಗಪ್ಪ, ಬಂದಗದ್ದೆ ರಮೇಶ್ ಮುಂತಾದ ವಿದ್ಯಾರ್ಥಿಗಳ ಗುಂಪು “ಕನ್ನಡ ಯುವಜನ ಸಭಾ’ ಎಂಬ ಹೆಸರಿನಲ್ಲಿ ಕನ್ನಡಪರ ಚಟುವಟಿಕೆಗಳನ್ನು ಆರಂಭಿಸಿದ್ದರಾದರೂ ಅದನ್ನು ಮುಂದುವರಿಸಿಕೊಂಡು ಹೋಗುವ ಛಾತಿಯಾಗಲೀ ಅಥವಾ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿದ್ದಾಗ, ಆ ಹೋರಾಟಕ್ಕೆ ಅ.ನ.ಕೃ. ಅವರ ಜೊತೆ   ಮ. ರಾಮಮೂರ್ತಿಗಳು ಜೊತೆಗೂಡಿ 04-02-1962ರಂದು “ಬೆಂಗಳೂರು ಕನ್ನಡಿಗರ ಸಮಾವೇಶ’ ನಡೆಯಿತು. ಈ ಸಮಾವೇಶದ ನಂತರ ಕನ್ನಡಿಗರಲ್ಲಿ ಜಾಗೃತಿಯಾಗಿ  ಬೆಂಗಳೂರು ನಗರದಾದ್ಯಂತ ಗೋಡೆಗಳ ಮೇಲೆ “ಕನ್ನಡ ನಾಡಿನ ಏಳಿಗೆಗಾಗಿ ದುಡಿವೆವು ನಾವು; ಮಡಿವೆವು ನಾವು ಒಂದಾಗಿ’ ಎಂಬ ಬರಹಗಳು ರಾರಾಜಾಸಿದ್ದು  ಅವರ ಹೋರಟಕ್ಕೆ ಜನರ ಮನ್ನಣೆ ಸಿಕ್ಕಿದ ಕುರುಹಾಗಿತ್ತು.

ram3ಈ ಸಮಾವೇಶದಿಂದ ಪ್ರಚೋದಿತರಾದ ಕನ್ನಡಾಭಿಮಾನಿಗಳು ಬೆಂಗಳೂರಿನಲ್ಲಿ ನಡೆಯುವ ರಾಮನವಮಿ ಮುಂತಾದ ಸಂಗೀತ ಕಚೇರಿಗಳಲ್ಲಿ ಕನ್ನಡ ಕಲಾವಿದರಿಗೆ, ಮತ್ತು ಕನ್ನಡ ಹಾಡುಗಳನ್ನು ಹಾಡುತ್ತಿರಲಿಲ್ಲದ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿದರು. 27- 05-1962ರಂದು ಚಾಮರಾಜಪೇಟೆ ರಾಮ ಸೇವಾ ಮಂಡಳಿಯಲ್ಲಿ ಎಂ.ಎಸ್. ಸುಬ್ಬಲಕ್ಷ್ಮೀ ಅವರ ಕಛೇರಿ ವ್ಯವಸ್ಥೆಯಾಗಿತ್ತು. ಅಂದು ಅ.ನ.ಕೃ., ಮ.ರಾಮಮೂರ್ತಿಯವರ ನಾಯಕತ್ವದಲ್ಲಿ ಪ್ರತಿಭಟನೆ ನಡೆಸಿ ಕಛೇರಿ ನೀಡಲು ಬಂದ ಸುಬ್ಬಲಕ್ಷ್ಮೀಯವರ ಬಳಿ ತಮ್ಮ ಹೋರಾಟವನ್ನು ವಿವರಿಸಿದ ಮೇಲೆ. ಅವರ  ಕಷ್ಟವನ್ನು ಅರಿತು ಸುಬ್ಬಲಕ್ಷ್ಮೀ ಯವರು ಕಛೇತಿಯನ್ನು ನೀಡದೇ ಹೊರಟು ಹೋಗಿದ್ದರು.ಈ ಹೋರಾಟದಲ್ಲಿ ಪಾಲ್ಗೊಂದಿದ್ದ  ಸುಮಾರು 60ಕ್ಕೂ ಹೆಚ್ಚು ಸಂಘಟನೆಗಳು  ಸೇರಿ ಕರ್ನಾಟಕ ಸಂಯುಕ್ತ ರಂಗ ರಚಿಸಿಕೊಂಡು ಅದಕ್ಕೆ  ಅ.ನ.ಕೃ. ಅಧ್ಯಕ್ಷರಾದರೆ, ಮ. ರಾಮಮೂರ್ತಿ ಕಾರ್ಯದರ್ಶಿಯಾದರು.

ram1ಕರ್ನಾಟಕ ಸಂಯುಕ್ತ ರಂಗದ ಸಾರಥ್ಯದಲ್ಲಿ  ಕನ್ನಡಡ ಪರ ಹಲವಾರು ಹೋರಾಟಗಳು ನಡೆದವು. ಅವುಗಳಲ್ಲಿ ಡಬ್ಬಿಂಗ್ ಚಿತ್ರ ವಿರೋಧಿ ಚಳವಳಿ, ಕನ್ನಡ ನಾಮಫಲಕ, ಕನ್ನಡ ಆಡಳಿತ ಭಾಷೆ, ರಾಜ್ಯದ ಹೆಸರನ್ನು ಕರ್ನಾಟಕ ಎಂದು ನಾಮಕರಣ, ಕನ್ನಡಿಗರಿಗೆ ಉದ್ಯೋಗಕ್ಕೆ ಒತ್ತಾಯ, ಪ್ರಮುಖವಾಗಿದ್ದವು.  ಆರಡಿ ಎತ್ತರದ ಆಜಾನುಬಾಹು ರಾಮಮೂರ್ತಿಗಳು ತಮ್ಮ ತೀಕ್ಷ್ಣ. ದೃಷ್ಟಿ ನೋಟದಿಂದಲೇ ಎದುರಿಗೆ ನಿಂತವರನ್ನು ಸೆರೆ ಹಿಡಿದುಬಿಡುವ ಬೊಗಸೆ ಕಂಗಳು, ಕಂಚಿನ ಕಂಠದ ಮ ರಾಮಮೂರ್ತಿಗಳು ಒಮ್ಮೆ ವೇದಿಕೆ ಹತ್ತಿ ನಿಂತರೆ ಸಾಕು ಆವೇಶಭರಿತರಾಗಿ, ನಿರರ್ಗಗಳವಾಗಿ  ಭಾಷಣದಿಂದ ಕನ್ನಡಿಗರ ನರನಾಡಿಗಳನ್ನು ಕನ್ನಡಕ್ಕಾಗಿ ಪ್ರಚೋದಿಸುವ  ಧ್ವನಿ ಅವರದ್ದಾಗಿತ್ತು.

ಮ. ರಾಮಮೂರ್ತಿಯವರಿಗೆ ವೀರಸೇನಾನಿ  ಎಂಬ ಹೆಸರು ಬರಲು ಕಾರಣವಾದ ಘಟನೆ ಬಲು ರೋಚಕವಾಗಿದೆ.  ವಾಣಿವಿಲಾಸ ಸಾಗರ ಕಟ್ಟುವಾಗ ಕೂಲಿ ಕೆಲಸ ಮಾಡಲು  ಬಂದ ತಮಿಳರು, ಚಿತ್ರದುರ್ಗದ ಹಿರಿಯೂರನ್ನು ಸಂಪೂರ್ಣವಾಗಿ ತಮ್ಮ ಕೈವಶಮಾಡಿಕೊಂಡು ನಗರದ ಹೃದಯಭಾಗದ  ವೃತ್ತದಲ್ಲಿ ದೊಡ್ಡದಾಗಿ  ಡಿ.ಎಂ.ಕೆ. ಬಾವುಟ ಹಾರಾಟ ಮಾಡುತ್ತಾ ಕನ್ನಡನಾಡಿನಲ್ಲಿ ತಮಿಳರ ದರ್ಪವನ್ನು ತೋರಿಸುತ್ತಿದ್ದರು.  ಈ ರೀತಿಯ ಉದ್ಧಟತನ  ಅಲ್ಲಿನ ಕನ್ನಡಿಗರಿಗೆ ಕೋಪ ತರಿಸಿದ್ದರೂ  ಏನೂ ಮಾಡಲಾಗದೆ ಒದ್ದಾಡುತ್ತಿದ್ದರು. ರಾಜ್ಯ ಸರಕಾರವೂ ಅವರ ವಿರುದ್ದ ಕ್ರಮ ಕೈಗೊಳ್ಳಲ್ಲು ಹಿಂದೂ ಮುಂದು ನೋದುತ್ತಿದ್ದಾಗ, ರಾಮಮೂರ್ತಿಗಳ ನೇತೃತ್ವದಲ್ಲಿ  ಸಾರ್ವಜನಿಕ ಸಭೆ ನಡೆಸಿ, ಆ ಸಭೆ ಮುಗಿಯವುದರಲ್ಲಿ  ಡಿ.ಎಂ.ಕೆ ಬಾವುಟ ಕೆಳಗಿಳಿಯದಿದ್ದರೆ ಸ್ವತಃ ತಾನೇ ಕೆಳಗಿಳಿಸುವುದಾಗಿ ರಾಮಮೂರ್ತಿ ಘಂಟಾಘೋಷವಾಗಿ  ಹೇಳಿದರು. ಸಭೆ ಮುಗಿದ ಮೇಲೂ ತಮಿಳರು ಬಾವುಟ ಇಳಿಸುವ ಧೈರ್ಯ ತೋರದಿದ್ದದ್ದು ರಾಮಮೂರ್ತಿಗಳನ್ನು ಕೆರಳಿಸಿ  ತಾವೇ ಖುದ್ದಾಗಿ ಬಾವುಟವನ್ನು ಕಿತ್ತೊಗೆಯಲು ತಮ್ಮ . ಪಂಚೆಯನ್ನು ಎತ್ತಿ ಕಟ್ಟುತ್ತಾ ದ್ವಜಸ್ಥಂಬದೆಡೆಗೆ ಧಾಪುಗಲು ಹಾಕುತ್ತಿದ್ದನ್ನು ಗಮನಿಸಿದ ಯುವಕನೊಬ್ಬ, ಅವರನ್ನು ತಡೆದು, ತಾನೇ ಕಂಬ ಹತ್ತಿ ಧ್ವಜ ಕೆಳಗಿಳಿಸಿದ. ಈ ಘಟನೆಯ  ನಂತರ ತಮಿಳರು   ಮುಂದೆದ್ದೂ  ಡಿ.ಎಂ.ಕೆ. ಬಾವುಟ ಹಾರಿಸುವ ಉದ್ದಟತನ ತೋರಲಿಲ್ಲ. ಈ ಘಟನಯ ಪ್ರತೀಕವಾಗಿಯೇ ಶ್ರೀ  ರಾಮಮೂರ್ತಿಯವರಿಗೆ ಕನ್ನಡದ ವೀರಸೇನಾನಿ ಎಂದು  ಬಿರುದು ಬಂದಿತು.

ಮ. ರಾಮಮೂರ್ತಿ  ಕೇವಲ ಕನ್ನಡ ಪರ ಹೋರಾಟಗಾರ ಮಾತ್ರವಲ್ಲದೇ, ಕನ್ನಡ ಪರ ಹೋರಾಟಕ್ಕೆ ಧುಮುಕುವ ಮೊದಲೇ ನೂರಾರು ಕಾದಂಬರಿಗಳನ್ನು ಬರೆದು ಖ್ಯಾತರಾಗಿದ್ದರು. ಜೊತೆಗೆ  ಕನ್ನಡ ಯುವಜನ ಪತ್ರಿಕೆ, ವಿನೋದಿನಿ, ಕಥಾವಾಣಿ, ಸುಜನ ಮೊದಲಾದ  ಪತ್ರಿಕೆಗಳನ್ನು ಹುಟ್ಟು ಹಾಕಿದರು. ಇದರ ಜೊತೆಗೆ ಕಾಮಕಲಾ ಎಂಬ ಲೈಂಗಿಕ ವಿಜ್ಞಾನ ಪತ್ರಿಕೆಯನ್ನೂ ಆರಂಭಿಸಿದ್ದರು. ಈ  ಪತ್ರಿಕೆಗಳಲ್ಲಿ ತೆಲುಗು, ತಮಿಳು, ಹಿಂದಿ ಪತ್ರಿಕೆಗಳಲ್ಲಿ ಹೆಸರುವಾಸಿಯಾಗಿದ್ದ ಕಥೆಗಳನ್ನು ತಾವೇ ಅನುವಾದ ಮಾಡಿ ಪ್ರಕಟಿಸುತ್ತಿದ್ದರು. ಇವುಗಳ ಜೊತೆ ನೂರಾರು ಪತ್ತೇದಾರಿ ಕಾದಂಬರಿಗಳು,  ಹತ್ತಾರು ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನೂ ರಚಿಸಿದ್ದಾರೆ.

ಈ ಹೋರಾಟಗಳ ಜೊತೆಯಲ್ಲಿಯೇ ತಮ್ಮ ಕುಟುಂಬ ನಿರ್ವಹಣೆಗಾಗಿ ಮತ್ತು ಜೀವನಾಧಾರಕ್ಕಾಗಿ  ಕೃಷಿಕರಾಗಲು ನಿರ್ಥರಿಸಿ ಬೆಂಗಳೂರು ಮತ್ತು  ಕನಕಪುರ ರಸ್ತೆಯ ತಲಘಟ್ಟಪುರದ ತಮ್ಮ ಜಮೀನಿನಲ್ಲಿ  ನೀರಿಗಾಗಿ  ಡಿಸೆಂಬರ್ 25,  1967 ರಂದು  ದೊಡ್ಡದಾದ ತೆರೆದ ಬಾವಿಯನ್ನು  ತೋಡಿಸುತ್ತಿದ್ದಾಗ, ಬಾವಿಯಲ್ಲಿ ನೀರು ಬಂದಿತೆಂಬ ಸಂತಸದಿಂದ ತಮ್ಮ ಮಕ್ಕಳಾದ  ದಿವಾಕರ ಮತ್ತು ಮಂಜುನಾಥರೊಡಗೂಡಿ ಉಕ್ಕುತ್ತಿದ್ದ ಜಲಧಾರೆನ್ನು  ನೋಡಲು ಭಾವಿಯೊಳಗೆ ಇಳಿಯುತ್ತಿದ್ದಂತೆಯೇ ದುರಾದೃಷ್ಟವಶಾತ್ ನೋಡ ನೋಡುತ್ತಿದ್ದಂತೆಯೇ,ಮೇಲಿಂದ ಮಣ್ಣು ಕುಸಿದು ಕೂಲಿಗಳೊಡನೆ ಆ ಮೂವರೂ ದುರ್ಮರಣಕ್ಕೀಡಾದರು. ರಾಮಮೂರ್ತಿಗಳ ಹೆಸರನ್ನು ಕನ್ನಡಿಗರ ಮನದಲ್ಲಿ ಚಿರಕಾಲವೀರಲೀ ಎಂದೇ ದೂರವಾಣಿ ಕಾರ್ಖಾನೆಯ ಪಕ್ಕದ ಪ್ರದೇಶಕ್ಕೆ ರಾಮಮೂರ್ತಿ ನಗರ ಎಂದು ಹೆಸರಿದ್ದಾರೆ.

ram4.jpegಅದ್ವಿತೀಯ ಕನ್ನಡ ಹೋರಾಟಗಾರ,  ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಚಳವಳಿಯ ಅಧ್ವರ್ಯು, ಕನ್ನಡ ಸೇನಾನಿ ಎಂಬ ಬಿರುದು ಪಡೆದಿದ್ದ  ಮ.(ಮದ್ದೂರು)  ರಾಮಮೂರ್ತಿ  ಎಂದೇ ಪ್ರಸಿದ್ಧವಾಗಿದ್ದರೂ ನಮಗೆಲ್ಲ ಮದ್ದೂರಿನ ಬದಲಾಗಿ ಮರೆಯಲಾಗದ ರಾಮಮೂರ್ತಿಎಂದು ಕರೆದರೂ ತಪ್ಪಾಗಲಾರದು. ಒಂದಲ್ಲಾ ಒಂದು ದಿನ ಈ ರಾಜ್ಯದಲ್ಲಿ ಕನ್ನಡ ಬಾವುಟ ಹಾರಿಸಿಯೇ ತೀರುತ್ತೇನೆ .ಎಲ್ಲೆಡೆ ಕನ್ನಡ ಕಾಣುವಂತೆ ಮಾಡುವವರೆಗೆ ನಾನು  ವಿರಮಿಸಲಾರೆ’ ಎನ್ನುತ್ತಿದ್ದ ವೀರಸೇನಾನಿಯ                           ಮ. ರಾಮಮೂರ್ತಿಗಳು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

 

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s