ಇಂದು ಜನವರಿ 12ನೇ ತಾರೀಖು ಇಡೀ ವಿಶ್ವದ ಯುವ ಜನತೆಗೆ ಒಂದು ವಿಶೇಷ ದಿನ. ಏಳಿ ಎದ್ದೇಳಿ ಗುರಿ ಮುಟ್ಟದವರೆಗೂ ನಿಲ್ಲದಿರಿ ಎಂದು ವಿಶ್ವದ ಯುವಜನತೆಯನ್ನು ಬಡಿದೆಬ್ಬಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ಜಯಂತಿ. ಸುಮಾರು160 ವರ್ಷಗಳ ಹಿಂದೆ ಕಲ್ಕತ್ತಾ ನಗರದಲ್ಲಿ ಜನವರಿ 12 1863ರ ಸಂಕ್ರಾಂತಿ ದಿನದಂದು ಶ್ರೀ ವಿಶ್ವನಾಥ ದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳ ಗರ್ಭದಲ್ಲಿ ಜನಿಸಿದ ನರೇಂದ್ರ ಮುಂದೆ ಸ್ವಾಮಿ ರಾಮಕೃಷ್ಣ ಪರಮಹಂಸರ ಪರಮ ಶಿಷ್ಯನಾಗಿ ಸನ್ಯಾಸತ್ವದ ದೀಕ್ಷೆ ಪಡೆದು ಸ್ವಾಮಿ ವಿವೇಕಾನಂದರಾದರು.
ಪ್ರಪಂಚದಲ್ಲಿ ಅತ್ಯಂತ ಪುರಾತನ ಇತಿಹಾಸವುಳ್ಳ ಮತ್ತು ಇಂದಿಗೂ ಪ್ರಸ್ತುತವಾಗಿರುವ ದೇಶವೆಂದರೆ ಭಾರತ ದೇಶ ಎಂದು ಹೇಳಲು ಹೆಮ್ಮೆಯಾಗುತ್ತದೆ. ಒಂದು ಕಾಲದಲ್ಲಿ ಏಷ್ಯಾ ಖಂಡದ ಅರ್ಧಕ್ಕೂ ಹೆಚ್ಚಿನ ಭಾಗದಿಂದ ಕೂಡಿದ ವರ್ಷದ ಎಲ್ಲಾ ಋತುಗಳನ್ನೂ ಕಾಣಬಹುದಾಗಿರುವ ಏಕೈಕ ರಾಷ್ಟ್ರ ಎಂದರೆ ಅದು ಭಾರತ ದೇಶ. ಭಾರತೀಯರ ಸಂಸ್ಕೃತಿ, ಆಚಾರ, ವಿಚಾರ, ಕಠಿಣ ಪರಿಶ್ರಮ, ಧರ್ಮ ಸಹಿಷ್ನುತೆ, ವಿದ್ಯೆ ಮತ್ತು ವಿವೇಕಗಳು ಪ್ರಪಂಚದ ಇತರೆ ಯಾವುದೇ ದೇಶಗಳಿಗೆ ಹೋಲಿಸಿದಲ್ಲಿ ಅತ್ಯಂತ ಹೆಚ್ಚಿನದಾಗಿತ್ತು. ಚೀನಾ ದೇಶದಿಂದ ಭಾರತಕ್ಕೆ ವಿದ್ಯೆ ಕಲಿಯಲು ಬಂದಿದ್ದ ಪ್ರಖ್ಯಾತ ಇತಿಹಾಸಕಾರ ಪಾಹಿಯಾನ್ ತಿಳಿಸಿರುವಂತೆ ಆತನಿಗೆ ಇಡೀ ಭರತ ಖಂಡದಲ್ಲಿ ಒಬ್ಬನೇ ಒಬ್ಬ ಭಿಕ್ಷುಕನನ್ನು ಕಂಡಿರಲಿಲ್ಲವಂತೆ. ಹೆಚ್ಚಿನ ಭಾರತೀಯರು ಶಾಲೆಗೇ ಹೋಗಿ ಪಾಠ ಕಲಿಯದಿದ್ದರೂ, ಪ್ರಕೃತಿದತ್ತವಾಗಿ ಮತ್ತು ಮನೆಯಲ್ಲಿನ ಸಂಸ್ಕಾರಗಳಿಂದ ಸಾಮಾನ್ಯ ಜ್ಞಾನದಲ್ಲಿ ಅಪ್ರತಿಮರಾಗಿದ್ದು ವಿವೇಕವಂತರಾಗಿರುತ್ತಿದ್ದರು.. ಇಡೀ ಪ್ರಪ್ರಂಚದ ಇತಿಹಾಸದ ಪುಟ ತೆರೆದು ನೋಡಿದಲ್ಲಿ ಒಬ್ಬನೇ ಒಬ್ಬ ಭಾರತೀಯ ರಾಜ ಇತರೇ ಭೂಭಾಗದ ಮೇಲೆ ದಂಡೆತ್ತಿ ಹೋದದ್ದಾಗಲೀ, ಅನ್ಯ ಧರ್ಮೀಯರ ಮೇಲೆ ಅಕ್ರಮಣ ಮಾಡಿದ ಪುರಾವೆಗಳು ಕಂಡು ಬರುವುದೇ ಇಲ್ಲ. ಇನ್ನು ಅನ್ಯಮತದವರನ್ನು ಮತಾಂತರಗೊಳಿಸಿದ ಉದಾಹರಣೆ ಎಲ್ಲೂ ಕಾಣಸಿಗುವುದೇ ಇಲ್ಲ.
ಆತಿಥಿ ದೇವೋಭವ ಎಂದು ಅತಿಥಿಗಳನ್ನು ಆಪ್ಯತೆಯಿಂದ ನೋಡಿಕೊಳ್ಳುತ್ತಿದ್ದ ಪರಿಣಾಮವೋ ಅಥವಾ ಪರಮ ಸಹಿಷ್ಣುಗಳಾಗಿದ್ದ ಪರಿಣಾಮವೋ ಏನೋ? ಕಳೆದ ಸಾವಿರ ವರ್ಷಗಲ್ಲಿ ನೂರಾರು ಪರಕೀಯರು ಸತತವಾಗಿ ಆಕ್ರಮಣ ನಡೆಸಿ ಈ ದೇಶವನ್ನು ಹತ್ತಾರು ಸಲ ಲೂಟಿ ಮಾಡಿ, ನಮ್ಮಲ್ಲಿದ್ದ ಲಕ್ಷಾಂತರ ಮಠ ಮಂದಿರಗಳನ್ನು ನಾಶ ಮಾಡಿದ್ದಲ್ಲದೇ, ನಮ್ಮವರನ್ನು ಆಮಿಷದಿಂದಲೋ, ಆಕ್ರಮಣದಿಂದಲೋ ಅನ್ಯಧರ್ಮಕ್ಕೆ ಮತಾಂತರ ಮಾಡಿದ್ದರೂ, ಬಹುಪಾಲು ಭಾರತೀಯರು ಇನ್ನೂ ಹಿಂದೂಗಳಾಗಿಯೇ ಇರುವುದು ನಮ್ಮ ಹೆಗ್ಗಳಿಕೆ.
ನಮ್ಮ ಸಹಿಷ್ಣುತೆಯನ್ನು ಅಪಾರ್ಥ ಮಾಡಿಕೊಂಡಿದ್ದ, ಪರಕೀಯರು, ಭಾರತ ಹಾವಾಡಿಗರ ದೇಶ, ಅಲ್ಲಿಯವರು ಅನಾಗರೀಕರು, ಕಲ್ಲುಗಳನ್ನು ದೇವರೆಂದು ಪೂಜಿಸುತ್ತಾರೆ, ಮಕ್ಕಳನ್ನು ಗಂಗಾ ನದಿಗೆ ಎಸೆಯುತ್ತಾರೆ, ಅವರಲ್ಲಿ ಒಗ್ಗಟ್ಟೇ ಇಲ್ಲ ಎಂದು ಹೀಗೇ ಹಾಗೆ ಹೇಳಿಕೆ ನೀಡುತ್ತಾ ನಮ್ಮ ದೇಶವನ್ನೂ, ನಮ್ಮ ಹಿಂದೂ ಧರ್ಮವನ್ನು ಅಪಹಾಸ್ಯ ಮತ್ತು ಅಪ ಪ್ರಚಾರ ಮಾಡುತ್ತಿದ್ದರ ಪರಿಣಾಮವಾಗಿ ಇಲ್ಲಿನ ಜನಗಳೇ ಕ್ಷಾತ್ರ ಹೀನರಾಗಿ, ನನ್ನನ್ನು ಕತ್ತೆ ಎಂದು ಬೇಕಾದರೂ ಕರೆಯಿರಿ ಆದರೆ, ಹಿಂದೂ ಎಂದು ಮಾತ್ರ ಕರೆಯದಿರಿ ಎನ್ನುವಂತಹ ದುಸ್ಠಿತಿ ಬಂದೊದಗಿತ್ತು. ಅಂತಹ ಸಮಯದಲ್ಲೇ, ಅಮೇರಿಕಾದ ಚಿಕಾಗೂ ನಗರದಲ್ಲಿ ಏರ್ಪಾಡಾಗಿದ್ದ ವಿಶ್ವ ಧರ್ಮ ಸಮ್ಮೇಳನನದಲ್ಲಿ ನಮ್ಮ ಧರ್ಮವನ್ನು ಪ್ರತಿನಿಧಿಸಲು ಯಾವುದೇ ಸಮರ್ಥ ವ್ಯಕ್ತಿ ಕಾಣ ಸಿಗದಂತಹ ಪರಿಸ್ಥಿತಿ ಬಂದೊದಗಿತ್ತು.
ಇಂತಹ ಸಮಯದಲ್ಲೇ ಹತ್ತಾರು ಸಂಕಷ್ಟಗಳನ್ನು ಎದುರಿಸಿ, ಹಲವರ ಸಹಾಯದಿಂದ ಸೆಪ್ಟೆಂಬರ್ 11, 1893 ರಂದು ಅಮೇರಿಕಾದ ಚಿಕಾಗೂ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಅಮೇರಿಕಾದ ಸಹೋದರ ಸಹೋದರಿಯರೇ ಎಂದು ಭಾಷಣ ಆರಂಭಸಿ ಇಡೀ ವಿಶ್ವಕ್ಕೇ ಭಾರತ ದೇಶ ಮತ್ತು ಹಿಂದೂಗಳ ಬಗ್ಗೆ ಇದ್ದ ಅಪನಂಬಿಕೆಯನ್ನು ಹೋಗಲಾಡಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.
ಹಿಂದೂ ಎದ್ದಲ್ಲಿ ದೇಶ ಎದ್ದೀತು. ಹಿಂದೂಗಳು ನಮ್ಮ ಸನಾತನ ಧರ್ಮದ ಅಧ್ಯಾತ್ಮವನ್ನು ಮರೆತು ಪಾಶ್ಚಿಮಾತ್ಯರ ಅಂಧಾನುಕರಣೆ ಮಾಡಿದಲ್ಲಿ ಇನ್ನು ಎರಡು ಮೂರು ತಲೆಮಾರುಗಳಲ್ಲಿ ವಿಶ್ವದಲ್ಲಿ ಹಿಂದೂಗಳು ಮತ್ತು ಭಾರತ ದೇಶ ಇತ್ತು ಎನ್ನುವ ಕುರುಹೇ ಇಲ್ಲದಂತಾಗುತ್ತದೆ ಎಂದು ಅಂದು ಎಚ್ಚರಿಸಿದ್ದದ್ದರು. ಒಬ್ಬ ಹಿಂದು ಮತಾಂತರವಾದರೆ, ಹಿಂದುವಿನ ಸಂಖ್ಯೆ ಒಂದು ಕಡಿಮೆ ಆಗುವುದಿಲ್ಲ. ಬದಲಿಗೆ ಒಬ್ಬ ಹಿಂದೂ ವಿರೋಧಿ ದೇಶದಲ್ಲಿ ಹೆಚ್ಚಿಗೆ ಹುಟ್ಟಿಕೊಳ್ಳುತ್ತಾನೆ ಎಂದು ಸ್ವಾಮೀಜಿಗಳು ಅಂದು ಮತಾಂತರದ ವಿರುಧ್ಧ ನೀಡಿದ ಹೇಳಿಕೆ ಇಂದಿಗೂ ಪ್ರಸ್ತುತವಾಗಿರುವುದು ನಿಜಕ್ಕೂ ದುರಾದೃಷ್ಟವೇ ಸರಿ.
ನನಗೆ ದಷ್ಟ ಪುಷ್ಟ ಬಲಿಷ್ಟ ಯುವಕರುಗಳನ್ನು ಕೊಡಿ. ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡಿಸುತ್ತೇನೆ. ಎಂದು ಯುವಕರುಗಳು ಮೋಜು ಮಸ್ತಿಯಲ್ಲಿ ಕಾಲ ಕಳೆಯದೇ, ಸಧೃಡರಾಗಿ ಆರೋಗ್ಯವಂತರಾಗಿ ಇರಬೇಕು ಎಂಬುದನ್ನು ಎತ್ತಿ ಹೇಳಿದ್ದರು. ಹತ್ತಾರು ವರ್ಷ ಓದಿ, ಪದವಿಯನ್ನು ಗಳಿಸಿದರೂ ಅದು ದೇಶ ಕಾರ್ಯಕ್ಕೆ ಉಪಯೋಗ ಬಾರದಿದ್ದಲ್ಲಿ ಆ ಪದವಿಗಳನ್ನೆಲ್ಲಾ ಸಮುದ್ರಕ್ಕೆ ಎಸೆಯಬೇಕು ಎಂದು ಯುವಕರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದ್ದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮುಂಚೂಣಿಯಲ್ಲಿದ್ದ, ಭಗತ್ ಸಿಂಗ್ ಚಂದ್ರಶೇಖರ ಆಝಾದ್, ಸುಭಾಷ್ ಚಂದ್ರ ಬೋಸ್ ರಂತಹ ಸಾವಿರಾರು ಸ್ವಾತ್ರಂತ್ರ್ಯ ಹೋರಾಟಗಾರರಿಗೆ ಸ್ವಾಮಿ ವಿವೇಕಾನಂದರೇ ಸ್ಪೂರ್ತಿಯಾಗಿದ್ದರು. ಹಾಗಾಗಿಯೇ ವಿವೇಕಾನಂದರನ್ನು ಯುವಜನರ ಆದರ್ಶವೆಂದು ಪರಿಗಣಿಸಲಾಗಿದೆ. ಸ್ವಾಮೀಜಿಯವರ ಜೀವನ ಮತ್ತು ಸಂದೇಶದಲ್ಲಿ ವಿಶೇಷವಾಗಿ ಯುವಕರಿಗೆ ಅನ್ವಯವಾಗುವ ಹಲವಾರು ಅಂಶಗಳಿದ್ದು, ಯುವಕರು ತಮ್ಮನ್ನು ತಾವು ಕಂಡುಕೊಳ್ಳುವ, ತಮ್ಮನ್ನು ತಾವು ಪಡೆಯುವುದರ ಜೊತೆಗೆ ಸಮಾಜದಲ್ಲಿ ತಮ್ಮ ಸ್ಥಾನವನ್ನು ಹೇಗೆ ಕಂಡುಕೊಳ್ಳಬೇಕು, ಸಮಾಜದೊಡನೆ ತಾವು ಯಾವರೀತಿಯಲ್ಲಿ ಅರ್ಥಪೂರ್ಣ ಸಂಬಂಧವನ್ನು ಹೊಂದಿರಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸಲಾಗಿದೆ.
ಅದಕ್ಕಾಗಿಯೇ ಸ್ವಾಮೀಜಿಗಳ ಜನ್ಮದಿನವಾದ ಜನವರಿ 12ನೇ ತಾರೀಖನ್ನು ರಾಷ್ಟ್ರೀಯ ಯುವದಿನ ಎಂದು ಆಚರಿಸಲಾಗುತ್ತದೆ. ಆದರೆ ಇದನ್ನು ಮರೆತ ನಮ್ಮ ಭಾರತದ ಯುವಜನತೆ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿ ಹೋಗಿ ಸುಮಾರು 75 ವರ್ಷಗಳಾದರೂ ಇಂದಿಗೂ ಅವರು ಬಿಟ್ಟು ಹೋದ ಪಾಶ್ವಾತ್ಯ ಸಂಸ್ಕೃತಿಗೇ ಜೋತು ಬಿದ್ದು ಮೋಜು ಮಸ್ತಿಗಳಲ್ಲಿಯೇ ಕಾಲ ಕಳೆಯುವಂತಾಗಿರುವುದು ಈ ದೇಶದ ವಿಪರ್ಯಾಸವೇ ಸರಿ. ಬನ್ನಿ ಇನ್ನೂ ಕಾಲ ಮಿಂಚಿಲ್ಲ. ವಿವೇಕಾನಂದರೇ ಏಳಿ ಎದ್ದೇಳಿ ಗುರಿ ಮುಟ್ಟದವರೆಗೂ ನಿಲ್ಲದಿರಿ ಎಂದು ಹೇಳಿರುವಂತೆ ಸೆಟೆದೆದ್ದು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲು ಕಟಿಬದ್ದರಾಗೋಣ.
ಏನಂತೀರೀ?
ನಿಮ್ಮವನೇ ಉಮಸುತ