ಸೂರ್ಯದೇವರ ಹುಟ್ಟಿದ ಹಬ್ಬ ರಥಸಪ್ತಮಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮೂವತ್ತು ಮೂರು ಕೋಟಿ ದೇವರುಗಳು ಇದ್ದಾರೆ ಎಂಬ ನಂಬಿಕೆಯಿದೆ ಮತ್ತು ಪ್ರತಿಯೊಂದು ದೇವಾನು ದೇವತೆಗಳಿಗೆ ಒಂದೊಂದು ರೂಪ, ವಾಹನ ಆಯುಧಗಳ ಮೂಲಕ ಗುರುತಿಸುತ್ತೇವೆ. ಪ್ರತಿಯೊಂದು ದೇವರುಗಳನ್ನು ಒಂದಲ್ಲಾ ಒಂದು ಹಬ್ಬಗಳ ಮೂಲಕ ಗುರುತಿಸಿಕೊಂಡು ಅವುಗಳನ್ನು ಸಡಗರ ಸಂಭ್ರಮಗಳಿಂದ ಆಚರಿಸುತ್ತೇವೆ. ಆದರೆ ಈ ಎಲ್ಲಾ ಭಾವಗಳು ಕೇವಲ ಅವರವರ ಭಕುತಿಗೆ ಅನುಗುಣವಾಗಿದ್ದು ಅದನ್ನು ಕೇಳಿದ್ದೇ ಹೊರತು ನೋಡಿದವರು ಯಾರೂ ಇಲ್ಲ. ಆದರೆ ಸೂರ್ಯ ಮತ್ತು ಚಂದ್ರ ಮಾತ್ರ ಪತ್ಯಕ್ಷವಾಗಿ ನೋಡಬಹುದಾಗಿದೆ ಮತ್ತು ಅವುಗಳ ಶಕ್ತಿ ಮತ್ತು ಕಾಂತಿಗಳನ್ನು ಅನುಭವಿಸಬಹುದಾಗಿದೆ. ಅಂಥ ಶಕ್ತಿವಂತ ಸೂರ್ಯನನ್ನು ಆರಾಧಸುವ ದಿನವೇ ರಥಸಪ್ತಮಿ.

ratha_sapthami`

ಸಂಕ್ರಾಂತಿ ಹಬ್ಬ ಕಳೆದು ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ತನ್ನ ಪಥವನ್ನು ಬದಲಿಸುತ್ತಾನೆ. ಇಂದಿನಿಂದ ಹಗಲು ಹೆಚ್ಚಾಗಿ ಸೂರ್ಯ ಮತ್ತಷ್ಟೂ ಪ್ರಖರನಾಗಿ ಪ್ರಜ್ವಲಿಸುತ್ತಾನೆ ಮತ್ತು ಬೇಸಿಗೆಯ ಆರಂಭ ಸೂಚಕವೂ ಹೌದು. ಆರೋಗ್ಯಂ ಭಾಸ್ಕರಾದಿಚ್ಛೇತ್… ಎಂಬ ಶ್ಲೋಕದಂತೆ ಸೂರ್ಯನಿಂದಾಗಿ ಆರೋಗ್ಯವು ವೃದ್ಧಿಯಾಗುತ್ತದೆ. ಚಳಿಗಾಲದಲ್ಲಿ ಮುದುಡಿ ಹೋಗಿದ್ದ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ. ಆಡು ಭಾಷೆಯಲ್ಲಿ ಸೂರ್ಯ ತನ್ನ ಹಳೆಯ ರಥವನ್ನು ಬಿಟ್ಟು ಹೊಸ ರಥ ಏರುತ್ತಾನೆ ಎಂದೂ ಹೇಳುತ್ತಾರೆ. ಕೆಲವರು ಈ ದಿನವನ್ನು ಸೂರ್ಯನ ಜನ್ಮದಿನವೆಂದರೆ ಇನ್ನೂ ಹಲವರು ಇದನ್ನು ಅಚಲ ಸಪ್ತಮಿ ಎಂದೂ ಕರೆಯುತ್ತಾರೆ. ರಥಸಪ್ತಮಿ ಎಂಬ ಹೆಸರಿಗೆ ಕಾರಣ ಈ ವಿಶಿಷ್ಟವಾದ ಸಪ್ತಮಿ ತಿಥಿಯಂದು ರಥವರ ಎಂದು ಕರೆಯಲಾಗುವ ಸೂರ್ಯನನ್ನು ಆರಾಧಿಸಲ್ಪಡುವುದು.

Sun_rise

ಅರುಣೋದಯದ ಸಮಯದ ಸೂರ್ಯನ ಕಿರಣಗಳಿಗೆ ರೋಗಾಣುಗಳನ್ನು ನಾಶ ಪಡಿಸುವ ಶಕ್ತಿಯಿದೆ. ಈ ಕಿರಣಗಳಲ್ಲಿ ಹೇರಳವಾಗಿ ವಿಟಮಿನ್ ‘ಡಿ’ ಇರುವಕಾರಣ ಕೂದಲು ಉದುರುವವರಿಗೆ ಬೆಳಗಿನ ಹೊತ್ತು ಸೂರ್ಯನ ಕಿರಣಗಳಲ್ಲಿ ಸ್ವಲ್ಪ ಹೊತ್ತು ಇರಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಅದೇ ರೀತಿ ಬೆಳಗಿನ ಈ ಕಿರಣಗಳು ದೇಹಕ್ಕೆ ಚೈತನ್ಯ ನೀಡುವ ಕಾರಣ ಬಹುತೇಕರು ಸೂರ್ಯಸ್ನಾನ ಮಾಡುವ ಪದ್ದತಿಯನ್ನು ರೂಢಿಯಲ್ಲಿಟ್ಟು ಕೊಂಡಿದ್ದಾರೆ. ಪ್ರತೀದಿನ ಬೆಳಗ್ಗೆ ಅಥವಾ ಸಂಜೆಯ ಸೂರ್ಯ ಕಿರಣಗಳಿಗೆ ದೇಹವನ್ನು ಒಡ್ಡಲಾಗದವರು ರಥಸಪ್ತಮಿಯ ದಿನದಂದಾರೂ ಸೂರ್ಯ ಸ್ನಾನ (ಸೂರ್ಯನ ಕಿರಣಗಳಿಗೆ ದೇಹದ ಮೇಲ್ಭಾಗವನ್ನು ಮೈಯೊಡ್ಡುವುದು) ಮಾಡಿದರೆ ದೇಹವೂ ಚೈತನ್ಯದಾಯಕವಾಗುವುದು ಮತ್ತು ಹಲವು ರೋಗ ರುಜಿನಗಳಿಂದ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದೇ ಕಾರಣಕ್ಕಾಗಿಯೇ ನವಜಾತ ಶಿಶುಗಳ ಮೈಯ್ಯಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಮುಂಜಾನೆಯ ಎಳೆಬಿಸಿಲಿನಲ್ಲಿ ಮಲಗಿಸುತ್ತಾರೆ. ಅದೇ ರೀತಿ ಮಕ್ಕಳಿಗೆ ಹುಟ್ಟಿದ ದಿನಗಳಲ್ಲಿ ಬರುವ ಕಾಮಾಲೆ ರೋಗಗಳಿಗೂ ಸೂರ್ಯನ ಕಿರಣ ರಾಮಬಾಣವಾಗಿದೆ. ಸೂರ್ಯನ ಕಿರಣಗಳ ಈ ರೀತಿಯ ಉಪಯುಕ್ತತೆಯನ್ನು ಅರಿತಿರುವ ಕಾರಣದಿಂದಾಗಿಯೇ ಇಂದಿಗೂ ಕೂಡ ನಮ್ಮ ರೈತಾಪಿ ಜನರು ಸೂರ್ಯನ ಉದಯದ ಸಮಯದಲ್ಲಿಯೇ ತಮ್ಮ ಬೇಸಾಯವನ್ನು ಆರಂಭಿಸಿ ಸೂರ್ಯನ ಕಿರಣಗಳು ಪ್ರಖರವಾದಾಗ ಮರಗಳ ನೆರಳಿನಲ್ಲಿ ವಿರಮಿಸಿ ಮತ್ತೆ ಸಂಜೆ ಸೂರ್ಯನ ಕಿರಣಗಳಿಗೆ ಮೈಯ್ಯೊಡ್ಡಿ ಬೆವರು ಸುರಿಸಿ ಕಷ್ಟ ಪಟ್ಟು ದುಡಿಯುವ ಪರಿಣಾಮವಾಗಿಯೇ ಪಟ್ಟಣವಾಸಿಗಳಿಗಿಂತ ಹೆಚ್ಚಾಗಿ ರೋಗರುಜಿನಗಳಿಂದ ಮುಕ್ತರಾಗಿ ಆರೋಗ್ಯವಂತರಾಗಿದ್ದಾರೆ.

ಪೌರಾಣಿಕದ ಹಿನ್ನಲೆಯಲ್ಲಿ ರಥಸಪ್ತಮಿಯ ಹಬ್ಬದ ಆಚರಣೆಯನ್ನು ನೋಡುವುದಾದರೇ ಮಾಘಶುದ್ಧ ಸಪ್ತಮಿಯ ಸೂರ್ಯೋದಯ ಕಾಲದಲ್ಲಿ ಸೂರ‍್ಯಗ್ರಹಣದ ದಿನದಂತೆಯೇ ತಲೆಗೆ ಸ್ನಾನ ಮಾಡಿ, ಅರ್ಘ್ಯ ಪ್ರದಾನ ಮಾಡಿದರೆ ಆರೋಗ್ಯ ಸಂಪತ್ತುಗಳು ಇಮ್ಮುಡಿಯಾಗುತ್ತವೆ ಎಂದು ಹಲವಾರು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಮ ರಾವಣರ ಯುದ್ಧದ ಸಂಧರ್ಭದಲ್ಲಿ ಅಗಸ್ತ್ಯ ಮಹರ್ಷಿಗಳ ಉಪದೇಶದಂತೆ ಶ್ರೀ ರಾಮಚಂದ್ರನೂ ಕೂಡ ಆದಿತ್ಯಹೃದಯದ ಮೂಲಕ ಸೂರ್ಯ ಭಗವಾನನ ಉಪಾಸನೆ ಮಾಡಿದ್ದ ಎಂದು ರಾಮಾಯಣದಲ್ಲಿ ಉಲ್ಲೇಖವಿದೆ

ದ್ವಾಪರ ಯುಗದಲ್ಲಿ ಪಾಂಡವರ ಅಜ್ಞಾತವಾಸ ವಾಸದ ಸಮಯದಲ್ಲಿ ಶ್ರೀ ಕೃಷ್ಣನು ಅವರಿಗೆ ರಥಸಪ್ತಮಿ ಬಗ್ಗೆ ತಿಳಿಸಿ ದ್ರೌಪತಿಯು ಶ್ರಧ್ಧಾ ಭಕ್ತಿಗಳಿಂದ ಸೂರ್ಯಾಧನೆ ಮಾಡಿದ ಪರಿಣಾಮವಾಗಿಯೇ ಸೂರ್ಯನಿಂದ ಅಕ್ಷಯಪಾತ್ರೆಯನ್ನು ಪಡೆದು ಅಂತಹ ಗೊಂಡಾರಣ್ಯದಲ್ಲಿಯೂ ಪ್ರತೀ ದಿನವು ಮೃಷ್ಟಾನ್ನ ಭೋಜನ ಮಾಡುತ್ತಿದ್ದರು ಎಂದು ಹೇಳುತ್ತದೆ ಪುರಾಣಗಳು. ಅದೇ ರೀತಿ ಯಶೋವರ್ಮನೆಂಬ ರಾಜನಿಗೆ ಜನಿಸಿದ ಮಗುವು ಹುಟ್ಟಿನಿಂದಲೇ ಖಾಯಿಲೆಗೆ ತುತ್ತಾಗಿ, ಕುಲಪುರೋಹಿತರನ್ನು ಈ ಕುರಿತು ವಿಚಾರಿಸಲು, ಸಂಚಿತಕರ್ಮದಿಂದ ಬಂದಿರುವ ಈ ರೋಗವು ರಥಸಪ್ತಮಿ ವ್ರತ ಆಚರಿಸಿದರೆ ಪರಿಹಾರವಾಗುತ್ತದೆ ಎಂಬುದಾಗಿ ಸೂಚಿಸಿದರು. ಅದೇ ಪ್ರಕಾರವಾಗಿ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದ ಪರಿಣಾಮವಾಗಿ ಮಗುವು ಆಯುರಾರೋಗ್ಯವಂತನಾದ ಎಂದು ಮತ್ತೊಂದು ದೃಷ್ಟಂತ ಹೇಳುತ್ತದೆ.

ರಥ ಸಪ್ತಮಿಯ ಆಚರಣೆ :

WhatsApp Image 2022-02-07 at 9.19.27 AM

ರಥಸಪ್ತಮಿಯ ದಿನದಂದು ಆಬಾಲವೃದ್ಧರಾದಿಯಾಗಿ ಸೂರ್ಯೋದಯಕ್ಕಿಂತಲೂ ಮುಂಚೆಯೇ ಎದ್ದು ಮನೆಯನ್ನೆಲ್ಲ ಶುಚಿಗೊಳಿಸಿ ಹೆಂಗಳೆಯರು ಮನೆಯ ಮುಂದೆ ಸಗಣಿ ಸಾರಿಸಿ ಚೆಂದದ ದೊಡ್ಡ ದೊಡ್ಡ ರಂಗೋಲಿ ಇಟ್ಟು, ಅದರಲ್ಲೂ ವಿಶೇಷವಾಗಿ ಸೂರ್ಯನ ರಥದ ರಂಗೋಲಿಯನ್ನು ಇಟ್ಟು ಸಂಭ್ರಮಿಸಲಾಗುತ್ತದೆ.

ಸ್ನಾನದ ಸಮಯದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಎಕ್ಕದೆಲೆಯನ್ನು ಇಟ್ಟುಕೊಂಡು ರಥಸಪ್ತಮಿಯಂದು ಸ್ನಾನ ಮಾಡುವಾಗ ಈ ರೀತಿಯಲ್ಲಿ ಸಂಕಲ್ಪ ಮಾಡಬೇಕು.

ಸಪ್ತ ಸಪ್ತ ಮಹಾಸಪ್ತ ಸಪ್ತದ್ವೀಪಾ ವಸುಂಧರಾ |
ಸಪಾರ್ಕಪರ್ಣಮಾದಾಯ ಸಪ್ತಮ್ಯಾಂಸ್ನಾನ ಮಾಚರೇತ್ ||

ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ, ಶುಭೇ ಶೋಭನ ಮುಹೂರ್ತೇ ಅದ್ಯ ಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನ ಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ಶ್ರೀ ___________ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ವಿಶೇಷೇಣಾ ರಥಸಪ್ತಮೀ ಪ್ರಯುಕ್ತೇ, ಶ್ರೀ ಸೂರ್ಯನಾರಾಯಣ ಸ್ವಾಮಿ‌ ಪ್ರೀತ್ಯರ್ಥಂ ಸ್ನಾನಮಹಂ ಕರಿಷ್ಯೇ.

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ |

ಎಂಬುದಾಗಿ ಸಂಕಲ್ಪ ಮತ್ತು ಶ್ಲೋಕಗಳನ್ನು ಹೇಳಿಕೊಂಡು ತಲೆಗೆ ಸ್ನಾನ ಮಾಡುವುದು ಸಂಪ್ರದಾಯವಾಗಿದೆ.

ಈ ರೀತಿಯಾಗಿ ಎಕ್ಕದೆಲೆಯ ಸ್ನಾನ ಮಾಡುವುದರಿಂದ ಏಳೇಳು ಜನ್ಮದ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆಯಲ್ಲದೇ, ಎಕ್ಕದೆಲೆಯ ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಕಾರಣ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿವೆ ಎಕ್ಕದೆಲೆಯಿಂದ ಮೈಯ್ಯುಜ್ಜಿಕೊಂಡು ಸ್ನಾನ ಮಾಡಿದರೆ, ಸಾಧಾರಣವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ, ಚರ್ಮರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ ಎಂದು ಆಯುರ್ವೇದದಲ್ಲಿ ತಿಳಿಸಲಾಗಿರುವ ಕಾರಣ ರಥಸಪ್ತಮಿಯಂದು ಎಕ್ಕದೆಲೆ ಇಟ್ಟುಕೊಂಡು ಸ್ನಾನ ಮಾಡುವ ಶಾಸ್ತ್ರವನ್ನು ನಮ್ಮ ಪೂರ್ವಜರು ಮಾಡಿರುವುದು ನಿಜಕ್ಕೂ ಅನನ್ಯ ಮತ್ತು ಅಭಿನಂದನಾರ್ಹವೇ ಸರಿ. ರಥಸಪ್ತಮಿಯಂದು ಶುಭದ ಸಂಕೇತವಾಗಿ ಮನೆಗಳಲ್ಲಿ ಹಾಲನ್ನು ಉಕ್ಕಿಸುವ ಸಂಪ್ರದಾಯವೂ ಇದೆ. ವಿಜಯದಶಮಿಯಂತೆಯೇ ಈ ದಿನವೂ ಮಾಡುವ ಕೆಲಸಗಳಲ್ಲವೂ ಶುಭಪ್ರದವಾಗುತ್ತದೆ ಎನ್ನುವ ನಂಬಿಕೆ ಇರುವ ಕಾರಣ, ಈ ದಿನ ಅನೇಕ ಶುಭ ಕಾರ್ಯಗಳನ್ನು ಮಾಡುತ್ತಾರೆ.

ಮಾಘಮಾಸದಲ್ಲಿ ಅದರಲ್ಲೂ ರಥಸಪ್ತಮಿಯಂದು ಸೂರ್ಯೋದಯದ ಸಮಯದಲ್ಲಿ ನದಿ, ಸಾಗರ, ಸರೋವರಗಳಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದಲ್ಲಿ ಪೂರ್ವ ಜನ್ಮದ ಪಾಪಗಳು ಮತ್ತು ಈ ಜನ್ಮದ ಕರ್ಮಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯೂ ಇರುವ ಕಾರಣ ಹಲವರು ಪುಣ್ಯಕ್ಷೇತ್ರಗಳಲ್ಲಿ ಪುಣ್ಯಸ್ನಾನವನ್ನೂ ಮಾಡುವ ಸಂಪ್ರದಾಯವಿದೆ.

rSapt2

ದೇಶಾದ್ಯಂತ ದೇವಾಲಯಗಳಲ್ಲಿ ರಥಸಪ್ತಮಿಯಂದು ವಿಶೇಷ ಪೂಜೆ ಹೋಮ ಹವನದಿಗಳನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯ ಮಾಡಿ ಭಕ್ತಾದಿಗಳಿಗೆ ವಿತರಿಸುತ್ತಾರೆ. ಒರಿಸ್ಸಾದ ಕೊನಾರ್ಕಿನ ಸೂರ್ಯ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತಿನ ಮೊಥೇರಾ, ಮಧ್ಯಪ್ರದೇಶದ ಉನಾವು, ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂ ಮತ್ತು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಸೂರ್ಯನಾರಾಯಣನ ದೇವಸ್ಥಾನಗಳಿಗೆ ರಥಸಪ್ತಮಿಯಂದು ಭಕ್ತಾದಿಗಳು ವಿಶೇಷವಾಗಿ ಭೇಟಿ ನೀಡುತ್ತಾರೆ.

ಹೆಂಗಳೆಯರಿಗೆ ಸಂಕ್ರಾಂತಿಯ ಎಳ್ಳು-ಬೆಲ್ಲ ಬೀರುವ ಕಾಲಾವಕಾಶ ರಥಸಪ್ತಮಿಯ ದಿನದಂದು ಕೊನೆಯಾಗುವ ಕಾರಣ ಬಹುತೇಕರು ಇಂದು ದೂರ ದೂರದ ತಮ್ಮ ಬಂಧು ಮಿತ್ರರ ಮನೆಗಳಿಗೆ ಹೋಗಿ ಎಳ್ಳು ಬೀರಿ ಬರುವ ಸಂಪ್ರದಾಯವೂ ಇದೆ.

surya_namasakara

ಇತ್ತೀಚಿನ ದಿನಗಳಲ್ಲಿ ಸಾಮೂಹಿಕವಾಗಿ 108 ಸೂರ್ಯ ನಮಸ್ಕಾರಗಳ ಸೂರ್ಯ ನಮಸ್ಕಾರ ಯಜ್ಞಗಳನ್ನು ದೇಶಾದ್ಯಂತ ಹಲವರು ಕಡೆಗಳಲ್ಲಿ ಆಚರಿಸುವ ಸತ್ ಸಂಪ್ರದಾಯಗಳು ಹೆಚ್ಚಾಗುತ್ತಿದೆ. ಒಂದು ಕಿಮೀ ದೂರ ನಡೆದರೆ ಸರಿ ಸುಮಾರು 60-70 ಕ್ಯಾಲೋರಿಗಳನ್ನು ಸುಡಬಹುದಾಗಿದೆ. ಈ ರೀತಿ ಒಂದು ಕಿಮೀ ದೂರ ನಡೆಯಲು ಸರಿ ಸುಮಾರು -15 ನಿಮಿಷಗಳಾಗುತ್ತದೆ. ಅದೇ ಯೋಗಾಸನ ಬದ್ಧವಾಗಿ 10 ಅಂಕಗಳ ಒಂದು ಸಂಪೂರ್ಣ ಸೂರ್ಯನಮಸ್ಕಾರವನ್ನು ಕೇವಲ 1- 2 ನಿಮಿಷಗಳಲ್ಲಿ ಮಾಡುವ ಮೂಲಕ 14 ಕ್ಯಾಲೋರಿಗಳನ್ನು ಸುಡಬಹುದಾಗಿದೆ. ಈ ರೀತಿಯಾಗಿ ಸೂರ್ಯ ನಮಸ್ಕಾರವು ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚಿನ ಕ್ಯಾಲೋರಿಗಳನ್ನು ಸುಡಬಹುದಾದ ಅತ್ಯುತ್ತಮವಾದ ವ್ಯಾಯಾಮವಾಗಿದೆ.
ಸೂರ್ಯದೇವನ ಧ್ಯಾನ ಶ್ಲೋಕ

ಧ್ಯೇಯ: ಸದಾ ಸವಿತೃಮಂಡಲ ಮಧ್ಯವರ್ತೀ ನಾರಾಯಣ: ಸರಸಿಜಾಸನ ಸನ್ನಿವಿಷ್ಟ: |
ಕೇಯೂರವಾನ್ ಮಕರಕುಂಡಲವಾನ್ ಕಿರೀಟೀ ಹಾರೀ ಹಿರಣ್ಮಯ ವಪುಧೃತಶಂಖಚಕ್ರ: |

ಸೂರ್ಯ ನಮಸ್ಕಾರ ಮಂತ್ರಗಳು

 • ಓಂ ಮಿತ್ರಾಯ ನಮಃ
 • ಓಂ ರವಯೇ ನಮಃ
 • ಓಂ ಸೂರ್ಯಾಯ ನಮಃ
 • ಓಂ ಭಾನವೇ ನಮಃ
 • ಓಂ ಖಗಾಯ ನಮಃ
 • ಓಂ ಪೂಷ್ಣೇ ನಮಃ
 • ಓಂ ಹಿರಣ್ಯಗರ್ಭಾಯ ನಮಃ
 • ಓಂ ಮರೀಚ್ಯೇ ನಮಃ
 • ಓಂ ಆದಿತ್ಯಾಯ ನಮಃ
 • ಓಂ ಸವಿತ್ರೇ ನಮಃ
 • ಓಂ ಅರ್ಕಾಯ ನಮಃ
 • ಓಂ ಭಾಸ್ಕರಾಯ ನಮಃ
 • ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮಃ

ಸೂರ್ಯ ನಮಸ್ಕಾರದ ನಂತರದ ಶ್ಲೋಕ

ಆದಿತ್ಯಸ್ಯ ನಮಸ್ಕಾರಾನ್ಯೇ ಕುರ್ವಂತಿ ದಿನೆ ದಿನೇ |
ಆಯುಃ ಪ್ರಜ್ಞಾ ಬಲಂವೀರ್ಯಂ ತೇಜಸ್ತೇಷಾಂಚ ಜಯತೇ ||

ಈ ರೀತಿಯಾಗಿ ನಮ್ಮ ಪೂರ್ವಜರು ಪ್ರಕೃತಿಯ ಅನುಗುಣವಾಗಿ ಮತ್ತು ವೈಜ್ಞಾನಿಕ ಹಿನ್ನಲೆಯಲ್ಲಿಯೇ ಎಲ್ಲಾ ಹಬ್ಬ ಹರಿದಿನಗಳನ್ನು ಆಚರಿಸುವ ಸಂಪ್ರದಾಯಗಳನ್ನು ರೂಢಿಗೆ ತಂದಿದ್ದಾರೆ. ಅದನ್ನು ಸರಿಯಾಗಿ ಅರ್ಥೈಸಿಕೊಂಡು ಹಬ್ಬ ಹರಿದಿನಗಳನ್ನು ಆಚರಿಸುವ ಮೂಲಕ ಅವುಗಳ ಪ್ರಯೋಜನವನ್ನು ಪಡೆಯೋಣ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s