ಗಢ ಆಲಾ ಪಣ ಸಿಂಹ ಗೇಲಾ ಸಿಂಹಗಡ ಕದನ

ಪ್ರಪಂಚಾದ್ಯಂತ ಇರುವ ಎಲ್ಲಾ ದೇಶಗಳ ಸೈನ್ಯಗಳಿಗೆ ಹೋಲಿಸಿದಲ್ಲಿ ಭಾರತದ ಮಿಲಿಟರಿ ಶಕ್ತಿ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಎಂದೇ ಹೆಸರುವಾಸಿಯಾಗಿದೆ. ಇತ್ತೀಚಿನ ಸರ್ಜಿಕಲ್ ಸ್ಟ್ರೈಕ್ ಮಾಡಿದ ಮೇಲಂತೂ ಆ ನಂಬಿಕೆ ಇನ್ನೂ ಹೆಚ್ಚಾಗಿದೆ. ಆದರೆ ಇಂದಿಗೆ 350 ವರ್ಷಗಳ ಹಿಂದೆ ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೇ ಕೇವಲ ಕಾಡು ಜನರನ್ನು ಕಟ್ಟಿಕೊಂಡು ಅತೀ ಕಡಿದಾದ ಪ್ರದೇಶದ ಎತ್ತರದಲ್ಲಿದ್ದ ಒಂದು ದೊಡ್ಡ ಕೋಟೆಯಾದ ಸಿಂಹಗಡವನ್ನು ವಶಪಡಿಸಿಕೊಂಡ ಇತಿಹಾಸದ ಮುಂದೇ ಈ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳೂ ನಗಣ್ಯವಾಗುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ಮೊಘಲರ ರಾಜ ಔರಂಗಜೇಬನಿಗೆ ಸಿಂಹಸ್ವಪ್ನವಾಗಿ ಕಾಡಿದ ಹಿಂದೂ ಸಂಸ್ಥಾನದ ಸಂಸ್ಥಾಪಕ ವೀರ ಶಿವಾಜಿಯ ನಂಬಿಕಸ್ಥ ಬಂಟ ತಾನಾಜಿ ತನ್ನ ಧೈರ್ಯ, ಶೌರ್ಯ ಮತ್ತು ಸಾಹಸಗಳಿಂದ 350 ವರ್ಷಗಳ ಹಿಂದೆ ಸಿಂಹಗಡವನ್ನು ವಶಪಡಿಸಿಕೊಂಡ ಈ ಕಥೆಯನ್ನು ಎಲ್ಲರಿಗೂ ಅದರಲ್ಲಿಯೂ ಇಂದಿನ ಮಕ್ಕಳಿಗೆ ತಿಳಿಸಲೇಬೇಕಾಗಿದೆ.

TANAJI_MALSURE

ಪುಣೆಯಿಂದ ಸುಮರು 12 ಮೈಲಿ ದೂರದಲ್ಲಿರುವ ಸಿಂಹಗಡ ಕೋಟೆಯನ್ನು ಮೂಲತಃ ಕೊಂಡಾನಾ ಎಂದು ಕರೆಯಲಾಗುತ್ತಿತ್ತು. ದೊಡ್ಡ ಸಹಾಯಾದ್ರಿ ಶ್ರೇಣಿಯ ಪೂರ್ವ ಭಾಗದಲ್ಲಿರುವ ಇದು ಪೂರ್ವ ಮತ್ತು ಪಶ್ಚಿಮದಲ್ಲಿ ಪುರಾಂದರ್‌ಗೆ ಅತ್ಯಂತ ಎತ್ತರದ ರೇಖೆಗಳಿಂದ ಸಂಪರ್ಕ ಹೊಂದಿದೆ. ಉತ್ತರ ಮತ್ತು ದಕ್ಷಿಣದಲ್ಲಿ, ಒರಟಾದ ಬೃಹತ್ಪರ್ವತವು ಸಂಪೂರ್ಣ ಕಡಿದಾದ ಪ್ರದೇಶವಾಗಿದೆ. ಇಂತಹ ದುರ್ಗಮ ಪರ್ವತದ ಮೇಲಿರುವ ಈ ಕೋಟೆಗೆ ಬಲವಾದ ಗೋಡೆಯಿಂದ ಸುತ್ತುವರೆದಿದ್ದು ಸುತ್ತಲೂ ಗೋಪುರಗಳಿಂದ ಕೂಡಿದೆ ಮತ್ತು ಇದನ್ನು ಪ್ರವೇಶಿಸಲು ಕೇವಲ ಏಕೈಕ ಪ್ರವೇಶ ದ್ವಾರವಿದೆ.

ಪುರಂದರ್ ಒಪ್ಪಂದದ ಮೂಲಕ ಶಿವಾಜಿಯ ಈ ಕೋಟೆ ಮೊಘಲರ ವಶವಾಗಿ ಅವರು ಇದನ್ನು ರಾಜ ಜೈ ಸಿಂಗ್‌ಗೆ ಒಪ್ಪಿಸಿದರು. ರಾಜಾ ಜೈ ಸಿಂಗ್ ಕೂಡಾ ಈ ಕೋಟೆಯನ್ನು ನೋಡಿಕೊಳ್ಳಲು ಉದಯ ಬಾನು ಅವರನ್ನು ನೇಮಿಸಿದರು, ಈ ಕೋಟೆಯಲ್ಲಿ ಮೊಘಲ್, ರಜಪೂತ್ ಮತ್ತು ಪಠಾಣ್ ಸೈನಿಕರ ಬೃಹತ್ ಸೈನ್ಯದ ತುಕಡಿಗಳು ಬೀಡುಬಿಟ್ಟವು. ಈ ಕೊಟೆಯನ್ನು ಬಹಳವಾಗಿ ಇಚ್ಚಿಸುತ್ತಿದ್ದ ಶಿವಾಜಿಯ ತಾಯಿ ಜೀಜಾಬಾಯಿಗೆ ಈ ಕೋಟೆಯ ನಷ್ಟವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ ಹಾಗಾಗಿ ಮರಾಠಿಗರ ಹೆಮ್ಮೆಯ ಈ ಕೊಟೆಯನ್ನು ಪುನಃ ವಶಪಡಿಸಿಕೊಂಡು ಆಕೆಗೆ ಉಡುಗೊರೆಯಾಗಿ ನೀಡುವಂತೆ ಒತ್ತಾಯಿಸುತ್ತಿದ್ದರು. ಅತ್ಯಂತ ದುರ್ಗಮ ಮತ್ತು ಕಠಿಣವಾಗಿದ್ದ ಈ ಕೋಟೆ ಮತ್ತು ಅತ್ಯಂತ ಬಲಶಾಲಿಯಾಗಿದ್ದ ಉದಯ್ ಭಾನುವಿನ ಹಿಡಿತದಲ್ಲಿದ್ದ ಕಾರಣ ಶಿವಾಜಿಯೂ ಸಹಾ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಅಷ್ಟೇನೂ ಹೆಚ್ಚು ಉತ್ಸಾಹಭರಿತರಾಗಿರಲಿಲ್ಲ.

ಆದರೆ ಮೇಲಿಂದ ಮೇಲೆ ತಾಯಿಯ ಒತ್ತಾಯವನ್ನು ತಡೆಯಲಾರದೇ ಕಡೆಗೆ ಕೋಟೆಯನ್ನು ವಶಪಡಿಸಿಕೊಳ್ಳಲು ಆಸಕ್ತಿ ತೋರಿ ಅದಕ್ಕೆ ಒಂದು ಸಮರ್ಥ ತಂಡವನ್ನು ಕಟ್ಟಲಾರಂಭಿಸಿದನು. ಆ ತಂಡಕ್ಕೆ ಆತ್ಯಂತ ಸಮರ್ಥನಾದ, ಸ್ವಾಮಿಭಕ್ತ ಮತ್ತು ತನಗೆ ಅತ್ಯಂತ ನಿಷ್ಠನಾದ ಮತ್ತು ತನ್ನ ಬಾಲ್ಯದ ಗೆಳೆಯನಾದ ತಾನಾಜಿ ಮಾಲುಸರೆಯನ್ನು ನಾಯಕನನ್ನಾಗಿ ನೇಮಿಸಲು ನಿರ್ಧರಿಸಿದನು. ಶಿವಾಜಿಗೆ ಆ ದೈತ್ಯ ತಾನಾಜಿಯ ಶೌರ್ಯ, ಸಾಹಸ ಮತ್ತು ಶಕ್ತಿಗಳ ಮೇಲೆ ಅತ್ಯಂತ ನಂಬಿಕೆ ಇತ್ತಾದರೂ ಈ ಸಾಹಸ ಅತ್ಯಂತ ಅಪಾಯಕಾರಿಯಾಗಿತ್ತು. ತನ್ನ ನಂಬುಗೆಯ ಬಂಟ ತಾನಾಜಿಯನ್ನು ಕರೆತರಲು ತನ್ನ ಸೈನಿಕರಿಗೆ ಹೇಳಿ ಕಳುಹಿಸಿದ. ಶಿವಾಜಿ ಮಹಾರಾಜರ ಸೈನಿಕರು ತಾನಾಜಿಯ ಮನೆಗೆ ಬಂದು ವಿಷಯ ತಿಳಿಸುವಷ್ಟರಲ್ಲಿ ತಾನಾಜಿಯ ಮನೆಯಲ್ಲಿ ಆತನ ಮಗನ ಮದುವೆ ನಿಶ್ಚಯವಾಗಿ ಮನೆಯನ್ನೆಲ್ಲಾ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು ಮತ್ತು ಮಾರನೆಯ ದಿನ ಆತನ ಮಗನ ಮದುವೆ ನಡೆಯಲಿತ್ತು ಆದರೆ ಸಿಂಹಗಢವನ್ನು ವೈರಿ ಪಡೆಗಳಿಂದ ಗೆದ್ದುಕೊಡಬೇಕಾದ ಹೊಣೆಗಾರಿಕೆಯನ್ನು ಶಿವಾಜಿ ಮಹಾರಾಜ ತನ್ನ ಹೆಗಲ ಮೇಲೆ ಹಾಕಿರುವುದನ್ನು ಸಂತೋಷದಿಂದ ಒಪ್ಪಿಕೊಂಡು ಮನೆಯ ಒಳಗೆ ಹೋಗಿ ಮದುವೆ ಉಡುಪು ಕಳಚಿ, ಸೈನಿಕನ ಉಡುಪನ್ನು ಧರಿಸಿ ಯುದ್ದಕ್ಕೆ ಹೊರಡಲು ಅನುವಾಗುತ್ತಾನೆ. ಹೀಗೆ ಸಿಂಹಗಢವನ್ನು ಗೆಲ್ಲಲು ಹೊರಟು ನಿಂತ ತಾನಾಜಿಗೆ ಮನೆಯವರು ನಾಳೆ ಮಗನ ಮದುವೆಯನ್ನು ಮುಗಿಸಿಕೊಂಡ ನಂತರ ಹೋಗಬಹುದಲ್ಲವೇ? ಎಂದಾಗ ತಾನಾಜಿ, ಮೊದಲು ಕೊಂಡಾಣದ ಮದುವೆ! ಆಮೇಲೆ ನನ್ನ ಮಗನ ಮದುವೆ ಎಂದು ಹೇಳಿ ಸೈನಿಕರ ಜೊತೆ ಸಿಂಹಗಡದತ್ತ ಹೊರಟೇ ಬಿಟ್ಟ.

ಹಗಲು ಹೊತ್ತಿನಲ್ಲೇ ಈ ದುರ್ಗಮ ಬಂಡೆಗಳು ಇರುವ ಸಂಪೂರ್ಣವಾಗಿ ಕಡಿದಾದ ಕೋಟೆಯನ್ನು ಹತ್ತುವುದು ಕಷ್ಟವೆಂದರೆ ಇನ್ನು ಕತ್ತಲೆಯಲ್ಲಿ ಆಕ್ರಮಣ ಮಾಡುವುದು ನಿಜವಾಗಿಯೂ ಅಪಾಯಕಾರಿಯಾದ ಸಾಹಸವಾಗಿತ್ತು. ಕೋಟೆಗಿದ್ದ ಒಂದೇ ಒಂದು ಹೆಬ್ಬಾಗಿಲನ್ನು ಸಮರ್ಥವಾದ ಕಾವಲು ಪಡೆಗಳು ಕಾಯುತ್ತಿದ್ದವು ಒಳಗಡೆ ಸದಾಕಾಲವೂ ಸಿದ್ದವಾಗಿದ್ದ ಬಲಶಾಲಿಯಾದ ಸೈನ್ಯದ ತುಕಡಿ ಸಿದ್ಧವಾಗಿದ್ದವು. ಅದೂ ಅಲ್ಲದೇ ಅತ್ಯಂತ ಶಕ್ತಿಶಾಲಿ ರಜಪೂತ ಉದಯ ಭಾನು ಸಮರ್ಥವಾಗಿ ಕೋಟೆಯನ್ನು ನಿಭಾಯಿಸುತ್ತಿದ್ದನಾದರೂ, ಇದನ್ನಾವುದನ್ನೂ ತಲೆಗೆ ಹಚ್ಚಿಕೊಳ್ಳದ ತಾನಾಜಿ ಈ ಪ್ರದೇಶದ ಸುತ್ತ ಒಂದು ಸಣ್ಣ ಸಮೀಕ್ಷೆ ನಡೆಸಿ, ಕನಿಷ್ಠ ಕಾವಲುಗಾರಿರುವ ದಕ್ಷಿಣ ಭಾಗವೇ ಕೋಟೆಯನ್ನು ಪ್ರವೇಶಿಸಲು ಇರುವ ಏಕೈಕ ಮಾರ್ಗ ಎಂದು ನಿರ್ಧರಿಸಿದ.

kote3

ದಕ್ಷಿಣದ ಪಾರ್ಶ್ವವು ಒಂದು ದೊಡ್ಡ ಬಂಡೆಯ ಮೇಲ್ಭಾಗದಲ್ಲಿತ್ತು, ಮತ್ತು ಅದನ್ನು ಯಾವ ಮನುಷ್ಯರೂ ಏರಲು ಸಾಧ್ಯವಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಒಮ್ಮೆ ತನ್ನ ಕಾರ್ಯತಂತ್ರದ ಬಗ್ಗೆ ಖಚಿತವಾದ ಬಳಿಕ , 500 ಜನರ ಮಾಲ್ವಿಸ್ ತಂಡವನ್ನು (ಮರಾಠಾ ಸೈನಿಕರನ್ನು) ಒಟ್ಟುಗೂಡಿಸಿ ರಾತ್ರಿಯ ಕತ್ತಲೆಯಲ್ಲಿ ಆಕ್ರಮಣ ಮಾಡಲು ನಿರ್ಧರಿಸಿದನು. ಆದರೆ ಅತ್ಯಂತ ದುರ್ಗಮವಾದ ಈ ಬಂಡೆಗಳನ್ನು ಸಾಧಾರಣ ಮನುಷ್ಯರು ಏರಲು ಸಾಧ್ಯವಾಗದ ಕಾರಣ ಚಾಣಾಕ್ಷ ತಾನಾಜಿ ಉಡದ ಸಹಾಯವನ್ನು ಪಡೆಯಲು ನಿರ್ಧರಿಸಿದ. ಹಲ್ಲಿ ಜಾತಿಯ ಉಡದ ಪಟ್ಟು ಎನ್ನುವುದು ಕನ್ನಡದ ನಾಣ್ಣುಡಿ. ಉಡ ಮರ ಇಲ್ಲವೇ ಬಂಡೆಗಳನ್ನು ಒಮ್ಮೆ ಗಟ್ಟಿಯಾಗಿ ಹಿಡಿಯಿತೆಂದರೆ ಅದನ್ನು ಬಿಡಿಸಲು ಸಾಧ್ಯವೇ ಇಲ್ಲ. ಉಡದ ಈ ಗುಣವನ್ನು ಅರಿತೇ ತಾನಾಜಿ ತನ್ನ ನೆಚ್ಚಿನ ಉಡವಾದ ಯಸ್ವಂತಿಯ ಸೊಂಟದ ಸುತ್ತಲೂ ಹಗ್ಗವನ್ನು ಕಟ್ಟಿ ಅದನ್ನು ಬಂಡೆಯ ಮೇಲಕ್ಕೆ ಹತ್ತಿಸಿ, ಉಡ , ಮೇಲೆ ಮೇಲೆ ಹೋಗುತ್ತಿದ್ದಂತೆಯೇ ಆದಕ್ಕೆ ಕಟ್ಟಿದ್ದ ಹಗ್ಗದ ಸಹಾಯದಿಂದ ನಿಧಾನವಾಗಿ ಬಂಡೆಯ ಮೇಲೆ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟುಕೊಂಡು ತಾನಾಜಿ ನೇತೃತ್ವದ ಮರಾಠಾ ಸೈನಿಕರು ಬೆಟ್ಟವನ್ನು ಹತ್ತಿ, ಶೀಘ್ರದಲ್ಲೇ ಇತರರೂ ಬೆಟ್ಟವನ್ನು ಹತ್ತಲು ಹಗ್ಗಗಳನ್ನು ಇಳಿಸಿ ಕೋಟೆಯನ್ನು ಪ್ರವೇಶಿಸಿಯೇ ಬಿಟ್ಟರು. ಈ ಪ್ರಕ್ರಿಯೆಯಲ್ಲಾದ ಗದ್ದಲದಿಂದ ಕೋಟೆಯಲ್ಲಿದ್ದ ಅರಬ್ಬರು, ಆಫ್ಘನ್ನರು, ರಜಪೂತರು ಮತ್ತು ಪಠಾಣ್‌ಗಳನ್ನು ಒಳಗೊಂಡ 1000 ಪ್ರಬಲ ಸೈನಿಕರು ಎಚ್ಚರಗೊಂಡು ಮರಾಠಾ ಸೈನಿಕರ ಮೇಲೆ ಮುಗಿಬಿದ್ದರು. ಇವೆಲ್ಲಕ್ಕೂ ಸನ್ನದ್ಧಾಗಿದ್ದ ತಾನಾಜಿಯ ಮರಾಠಾ ಸೈನಿಕರು ಹುಲಿಗಳಂತೆ ಮೊಘಲ್ ಸೈನಿಕರ ಮೇಲೆ ಧಾಳಿ ಮಾಡತೊಡಗಿದರು. ಈ ಸೈನ್ಯದ ಮುಂದಾಳತ್ವ ವಹಿಸಿದ್ದ ತಾನಾಜಿ ತನ್ನ ದಾರಿಯಲ್ಲಿ ಬಂದ ಪ್ರತಿಯೊಬ್ಬರನ್ನು ವಧಿಸುತ್ತಾ ಮಂದುವರೆಯುತ್ತಾನೆ. ಈ ಅಚಾನಕ್ಕಾದ ಧಾಳಿಯಿಂದ ದಂಗಾದರೂ ಅದನ್ನು ತೋರಿಸಿಕೊಳ್ಳದೇ ಸ್ವತಃ ಉದಯ ಭಾನನೇ ಯುದ್ದಕ್ಕೆ ಇಳಿದು ತಾನಾಜಿಯ ಎದುರಾಗಿ ನಿಲ್ಲುತ್ತಾನೆ. ಈ ಇಬ್ಬರು ಮಹಾನ್ ಯೋಧರು ಎರಡು ಸಿಂಹಗಳಂತೆ ತೀವ್ರವಾಗಿ ಹೋರಾಡುತ್ತಾರೆ. ಪರಸ್ಪರ ಹೋರಾಟದ ಸಮಯದಲ್ಲಿ ಇಬ್ಬರಿಗೂ ಅನೇಕ ಗಾಯಗಳಾಗಿ ಅಂತಿಮವಾಗಿ, ತಾನಾಜಿ ಸೊಂಟದ ಸುತ್ತಲೂ ಮಾರಣಾಂತಿಕವಾಗಿ ಗಾಯಗೊಂಡು ನಿತ್ರಾಣನಾಗಿ ಕುಸಿದು ಅಸುನೀಗುತ್ತಾನೆ. ಇನ್ನೇನು ಎಲ್ಲವೂ ಮುಗಿದು ಹೋಯಿತು ಎಂದು ಮೊಘಲರು ಭಾವಿಸುತ್ತಿದ್ದಂತೆಯೇ,

ತಾನಜಿಯ ಸಹೋದರ ತಮ್ಮ ಮೀಸಲು ಸೈನ್ಯದೊಂದಿಗೆ ಹರ್ ಹರ್ ಮಹಾದೇವ್ ಎಂದು ಜೋರಾಗಿ ಕೂಗುತ್ತಾ ಮೊಘಲರ ಮೇಲೆ ಧಾಳಿ ಮಾಡುತ್ತಾರೆ ಈ ಹಠಾತ್ತಾದ ಮತ್ತು ತೀವ್ರವಾದ ಧಾಳಿಯಿಂದ ತಪ್ಪಿಸಿಕೊಳ್ಳಲು ಅನೇಕ ಮೊಘಲ್ ಸೈನಿಕರು ದಿಕ್ಕಾಪಾಲಾಗಿ ಓಡಿಹೋಗುತ್ತಾರೆ. ಇನ್ನೂ ಅನೇಕ ಸೈನಿಕರು ಗೋಡೆಗಳನ್ನು ಹಾರಿ ತಮ್ಮ ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ, ಆ ಪ್ರಯತ್ನದಲ್ಲಿ ಬಂಡೆಗಳ ಮೇಲೆ ಬಿದ್ದು ಸಾವನ್ನಪ್ಪಿದರು. ಅದಾಗಲೇ ತಾನಾಜಿಯ ಹೊಡೆತಗಳಿಂದ ತೀವ್ರವಾಗಿ ಗಾಯಗೊಂಡಿದ್ದ ಉದಯ ಭಾನು ಕೂಡಾ, ಮಹಾನ್ ರಜಪೂತ ಯೋಧ ವೀರನಂತೆ ಕೋಟೆಯನ್ನು ರಕ್ಷಿಸಲು ಕೊನೆಯ ಉಸಿರಾಟದವರೆಗೂ ಹೋರಾಡಿ ವೀರ ಮರಣ ಹೊಂದುವ ಮೂಲಕ ಸಿಂಹಗಡ ಮರಾಠಾ ಸೈನಿಕರ ಪಾಲಾಗಿ ಆ ಕೋಟೆಯ ಮೇಲೆ ಕೇಸರಿ ಧ್ವಜ ಹಾರಾಡತೊಡಗಿತು.

hsivaji

ಕೊಂಡಾಣದ ಸಿಂಹಗಡ ಕೋಟೆ ತಮ್ಮ ಕೈವಶವಾದ ಶುಭ ಸುದ್ದಿ ಶಿವಾಜಿ ಮಹಾರಾಜರಿಗೆ ಕಿವಿಗೆ ಬೀಳುವುದರ ಜೊತೆಗೆ ತನ್ನ ಅತ್ಯಾಪ್ತ ನೆಚ್ಚಿನ ಬಂಟ ತಾನಾಜಿಯ ತ್ಯಾಗ ಮತ್ತು ಬಲಿದಾನದ ಮೂಲಕ ಹುತಾತ್ಮನಾದ ಸುದ್ದಿಯನ್ನು ಕೇಳೀ ಶಿವಾಜಿ ಮಹಾರಾಜರು ಮಮ್ಮಲ ಮರುಗುತ್ತಾ, ತಮ್ಮ ತಾಯಿಯ ಅಂತಃಪುರಕ್ಕೆ ಬರುತ್ತಾರೆ. ಕೊಂಡಾಣದ ಯುದ್ಧ ಬಗ್ಗೆ ಅರಿವಿದ್ದ ಜೀಜಾಬಾಯಿ ಮಗು ಯುದ್ದವೇನಾಯಿತು? ಎಂದು ಕುತೂಹಲದಿಂದ ಕೇಳಿದಾಗ ಗಢ ಆಲಾ ಪಣ ಸಿಂಹ ಗೇಲಾ ಅಂದರೆ ಕೋಟೆ ಏನೋ ನಮ್ಮ ಕೈ ವಶವಾಯಿತು ಆದರೆ ಸಿಂಹವೇ ಕೈ ಬಿಟ್ಟು ಹೋಯಿತು ಎಂದು ತಾನಾಜಿಯ ವೀರಮರಣವನ್ನು ತಾಯಿಗೆ ತಿಳಿಸಿದಾಗ ಆಕೆಗೂ ಕೂಡಾ ಕೋಟೆ ಗೆದ್ದದ್ದಕ್ಕಿಂತ ತನ್ನ ಸ್ವಂತ ಮಗನನ್ನೇ ಕಳೆದುಕೊಂಡ ಹಾಗೆ ದುಃಖಪಡುತ್ತಾಳೆ.

ಮಗನ ಮದುವೆಯ ಶುಭಕಾರ್ಯದಲ್ಲಿ ತಾನಾಜಿಯ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದ ಮನೆಯವರಿಗೆ ತಾನಾಜಿಯು ಹುತಾತ್ಮರಾದ ವಿಷಯ ತಿಳಿದು ಇಡೀ ಊರಿಗೆ ಊರೇ ಸೂತಕದ ಕಳೆ ತುಂಬಿ ಹೋಗುತ್ತದೆ. ದೇಶ ಕಾರ್ಯಕ್ಕಾಗಿ ವೀರಮರಣ ಹೊಂದುವುದು ಒಂದು ಮಹತ್ಕಾರ್ಯ ಮತ್ತು ಪುಣ್ಯವಾದ ಕೆಲಸ ಎಂದು ಭಾವಿಸಿದ ಆ ಮನೆಯವರು ಶಿವಾಜೀ ಮಹಾರಾಜರ ನೇತೃತ್ವದಲ್ಲಿ ತಾನಾಜಿಯ ಅಂತಿಮ ವಿಧಿವಿಧಾನಗಳನ್ನು ಮುಗಿಸುತ್ತಾರೆ.

Kote3

ಫೆಬ್ರವರಿ 4, 1670 ತಾನಾಜಿ ಮಾಲುಸಾರೆ ಸಿಂಹಗಡ್ ಕೋಟೆಯನ್ನು ವಶಪಡಿಸಿಕೊಂಡ ದಿನ. ಅಂದರೆ ಇಂದಿಗೆ ಸಿಂಹಗಡ ಕದನಕ್ಕೆ 350ನೇ ವಾರ್ಷಿಕೋತ್ಸವ. ಇಂತಹ ಸಾಹಸಮಯ ಕಥನ ಸಕಲ ಭಾರತೀಯರಿಗೂ ಹೆಮ್ಮೆಯ ದಿನ. ಈ ವೀರ ಯಶೋಗಾಥೆಯನ್ನು ಎಲ್ಲರೊಂದಿಗೂ ಹಂಚಿಕೊಳ್ಳುವ ಮೂಲಕ ವೀರ ಶಿವಾಜಿ ಮಹಾರಾಜರಿಗೂ ಮತ್ತು ಅವರ ನೆಚ್ಚಿನ ಬಂಟ ತಾನಾಜಿಯವರಿಗೆ ನಮ್ಮ ಭಕ್ತಿ ಪುರ್ವಕ ಶ್ರಧ್ಧಾಂಜಲಿಯನ್ನು ಅರ್ಪಿಸೋಣ.

ಏನಂತಿರೀ?
ನಿಮ್ಮವನೇ ಉಮಾಸುತ

ಈ ಲೇಖನ ಸಂಪದ ಸಾಲು ಪತ್ರಿಕೆಯ ಜೂನ್ 2022 ರ ತಿಂಗಳಿನಲ್ಲಿ ಪ್ರಕಟವಾಗಿದೆ.

tanaji

3 thoughts on “ಗಢ ಆಲಾ ಪಣ ಸಿಂಹ ಗೇಲಾ ಸಿಂಹಗಡ ಕದನ

Leave a comment