ಬಸ್ರೂರು ಸ್ವಾತಂತ್ರ್ಯ ದಿವಸ

ಇಂದಿನ ಯುವ ಜನತೆಗೆ ಬಸ್ರೂರು ಅನ್ನೋ ಊರು ಗೊತ್ತಾ ಅಂದ ಕ್ಷಣವೇ, ಹಾಂ!! ಗೊತ್ತು ಅದೇ ಸಿದ್ಧಾರ್ಥ್ ಬಸ್ರೂರ್ ಕಿಂಕಿ ಸ್ಕೀ ಮುಂಕಿಯೊಂದಿಗೆ ಇಂಡೀ ಸಂಗೀತ ಸಂಯೋಜಕ ಮತ್ತು ಹಿನ್ನೆಲೆ ಗಾಯಕ. ಪ್ರಸ್ತುತ ಮೆಟಲ್ ಬ್ಯಾಂಡ್ ಗಾಡೆಸ್ ಗಾಗ್ಡ್ ತಂಡಡಲ್ಲಿದ್ದಾರೆ ಬಾಲಿವುಡ್ ಚಲನಚಿತ್ರಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅದೇ ರೀತಿ ರವಿ ಬಸ್ರೂರು ಮತ್ತೊಬ್ಬ ಯಶಸ್ವೀ ಸಂಗೀತ ನಿರ್ದೇಶಕ ಮತ್ತು ಚಲನಚಿತ್ರ ನಿರ್ದೇಶಕರೂ ಕೂಡ. ಇಡೀ ಪ್ರಪಂಚವನ್ನೇ ಕನ್ನಡ ಚಿತ್ರರಂಗದತ್ತ ಗಮನಹರಿಸುವಂತೆ ಮಾಡಿದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಫ್ ಸಂಗೀತದ ನಿರ್ದೇಶಕರು. ಅವರಿಬ್ಬರ ಊರು ಅಲ್ವೇ ಅನ್ನುತ್ತಾರೆ. ಹೌದು ನಿಜ ಸಿದ್ಧಾರ್ಥ್ ಮತ್ತು ರವಿ ಇಬ್ಬರೂ ಸಹಾ ಉಡುಪಿ ಜಿಲ್ಲೆಯ ಕುಂದಪುರದ ಬಸ್ರೂರಿನವರೇ. ಇವರಿಬ್ಬರ ಹೊರತಾಗಿಯೂ ಐತಿಹಾಸಿಕವಾಗಿ ಬಸ್ರೂರು ಒಂದು ಮುಖ್ಯ ಬಂದರು ನಗರವಾಗಿ ಅನೇಕ ಶತಮಾನಗಳಿಂದಲೇ ಗುರುತಿಸಲ್ಪಟ್ಟಿತ್ತು. ಅರಬ್ಬೀ ಸಮುದ್ರದ ತಟದಲ್ಲಿರುವ ಈ ಊರು ಪುರಾಣದ ಪ್ರಕಾರ ವಸು ಚಕ್ರವರ್ತಿಯ ರಾಜಧಾನಿಯಾಗಿದ್ದು, ಅವನು ಹಲವಾರು ದೇಗುಲಗಳನ್ನು, ಕೆರೆಗಳನ್ನು ಕಟ್ಟಿಸಿದ. 17 ಮತ್ತು 18 ನೆಯ ಶತಮಾನದ ಶಾಸನಗಳಲ್ಲಿ ಈ ಪ್ರದೇಶವನ್ನು ವಸುಪುರ ಎಂದೇ ನಮೂದಿಸಿದ್ದಾರೆ. ಮೊರೊಕ್ಕೋದ ಯಾತ್ರಿ ಇಬಿನ್ ಬಟೂಟ ಉಲ್ಲೇಖಿಸಿದ ಅಬು-ಸರೂರ್ ಮತ್ತು ಟಾಲೆಮಿಯ ಭೂಪಟದಲ್ಲಿರುವ ಬಾರ್ಸೆಲೋರ್ ಎಂಬ ಸ್ಥಳವೂ ಇದೇ ಬಸ್ರೂರು ಆಗಿತ್ತು ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ. 1514 ರಲ್ಲಿ ಬಾರ್ಬೋಸ ಉಲ್ಲೇಖಿಸಿದಂತೆ ಇಲ್ಲಿಗೆ ಮಲಬಾರ್, ಏಡೆನ್,ಒರ್ಮುಜ್ ಮುಂತಾದ ಸ್ಥಳಗಳಿಂದ ಹಲವಾರು ಹಡಗುಗಳು ಬರುತ್ತಿದ್ದು, ಇದೊಂದು ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು ಮತ್ತು ಗೋವಾ ಮುಖಾಂತರ 16ನೇ ಶತಮಾನದಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸರ ವಶದಲ್ಲಿ ಈ ಪ್ರದೇಶವಿತ್ತು .

WhatsApp Image 2020-02-13 at 5.27.45 PM

355 ವರ್ಷಗಳ ಹಿಂದೆ, ಇದೇ ಫೆಬ್ರವರಿ 13ರಂದು ದುರಾಕ್ರಮಣಗಾರಾಗಿದ್ದ ಡಚ್ ಮತ್ತು ಪೋರ್ಚುಗೀಸರಿಂದ ಈ ಪ್ರದೇಶವನ್ನು ಮುಕ್ತಗೊಳಿಸಲು, ಛತ್ರಪತಿ ಶಿವಾಜಿ ಮಹಾರಾಜ ತಮ್ಮ ನೌಕಾ ಸೇನೆಯ ಮೂಲಕ ದಂಡಯಾತ್ರೆ ಮಾಡಿ ಅವರನ್ನು ಬಗ್ಗು ಬಡಿದು ಬಸ್ರೂರನ್ನು ಪುನಃ ಭಾರತದ ಪರ ವಶಪಡಿಸಿಕೊಂಡ ವಿಜಯ ದಿವಸ. ಇದನ್ನು ಪ್ರಥಮ ನೌಕಾ ಅಭಿಯಾನ ಎಂದೂ ಕರೆಯಲಾಗುತ್ತದೆ. ಅಲ್ಲಿಯವರೆಗೂ ಕೇವಲ ಭೂಸೇನೆಗಳ ಮೂಲಕವೇ ಗೆರಿಲ್ಲಾ ಮಾದರಿಯ ಯುದ್ದವನ್ನು ಮಾಡುತ್ತಿದ್ದ ಶಿವಾಜಿ ಮೊದಲ ಬಾರಿಗೆ ನೌಕಾಸೇನೆಯ ಮೂಲಕ ಸಮುದ್ರದ ಮಾರ್ಗವಾಗಿ ಬಂದು ಆಕ್ರಮಣ ಮಾಡಿ ಪೋರ್ಚುಗೀಸರ ವಿರುದ್ಧ ಸಾಧಿಸಿದ ವಿಜಯ ಗಾಥೆಯ ಅಂಗವಾಗಿ ಬಸ್ರೂರು ವಾಸಿಗಳು ಕಳೆದ ನಾಲ್ಕು ವರ್ಷಗಳಿಂದ ಸಮಿತಿಯೊಂದನ್ನು ರಚಿಸಿಕೊಂಡು ಪ್ರತೀ ಫೆಬ್ರವರಿ 13 ರಂದು ಬಸ್ರೂರು ಸ್ವಾತಂತ್ರ್ಯ ದಿನವನ್ನಾಗಿ, ವಿಜಯೋತ್ಸವವಾಗಿ ಆಚರಿಸಲಾಗುತ್ತಿದೆ.

ಭಾರತದಲ್ಲಿ ಡಚ್ ಮತ್ತು ಪೋರ್ಚುಗೀಸರು ತಮ್ಮ ನೌಕಾಬಲದ ಮೂಲಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದದ್ದನ್ನು ಗುರುತಿಸಿದ ಶಿವಾಜಿ ಮಹಾರಾಜರು 5ನೇ ಡಿಸೆಂಬರ್ 1664ರಲ್ಲಿ ಕೊಂಕಣ ಸಮುದ್ರದಲ್ಲಿ ಸಿಂಧುದುರ್ಗ ಸ್ಥಾಪನೆಮಾಡಿ ನೌಕಾಪಡೆಗಳನ್ನು ಸ್ಥಾಪಿಸಿ ತಮ್ಮ ಸೈನಿಕರಿಗೆ ಸೂಕ್ತ ತರಭೇತಿಗಳನ್ನು ನೀಡುವ ಮೂಲಕ ಭಾರತದ ಕಡಲ ಶಕ್ತಿಯನ್ನು ಹೆಚ್ಚಿಸುವಂತೆ ಮಾಡಿದ್ದಲ್ಲದೇ ಅದಕ್ಕೆ ಪೂರಕವಾಗಿ ವಿಜಯ ದುರ್ಗ, ಸುವರ್ಣದುರ್ಗ, ಕಲ್ಯಾಣ್ ಮುಂತಾದ ಕೋಟೆಗಳನ್ನು ನಿರ್ಮಿಸುವ ಮೂಲಕ ಕಡಲ ತೀರ ಪ್ರದೇಶವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.ಇವು ಮರಾಠ ನೌಕಾದಳಕ್ಕೆ ರಕ್ಷಣೆ ಕೊಡಲು ಮತ್ತು ಶತ್ರುಗಳ ದಾಳಿ ಸಮುದ್ರದ ಮೂಲಕ ಹಿಮ್ಮೆಟ್ಟಿಸಲು ಸಹಾಯಕವಾಗಿತ್ತು.

ಇದರ ಜೊತೆಯಲ್ಲಿಯೇ ಪ್ರತಾಪಘಡ್ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಇದರ ನಿರ್ಮಾಣದ ಉತ್ಖನನದ ಸಮಯದಲ್ಲಿ ಶಿವಲಿಂಗವೊಂದು ಪತ್ತೆಯಾಗಿ ಅಲ್ಲೊಂದು ಭವ್ಯವಾದ ದೇಗುಲವನ್ನು ನಿರ್ಮಾಣ ಮಾಡಲಾಯಿತು. ಅದಲ್ಲದೇ ಅಲ್ಲಿಂದಲೇ ಭವಾನಿ ಎಂಬ ಹೆಸರಿನ ಖಡ್ಗವನ್ನು ಶಿವಾಜಿಯವರು ತಮ್ಮ ರಕ್ಷಾಕವಚವನ್ನಾಗಿ ಧರಿಸಲಾರಂಭಿಸಿದರು.

bas

16ನೇ ಶತಮಾನದಲ್ಲಿ ಬಸ್ರೂರು ಕರಾವಳಿಯ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ಕೆಳದಿಯ ಸಾಮಂತರು ಈ ಬಂದರನ್ನು ಬಳಸುತ್ತಿದ್ದರು. ಸುಸಜ್ಜಿತವಾದ ನಗರವಾಗಿದ್ದ ಈ ಪಟ್ಟಣ ಯಾತ್ರಿಗಳಿಗೆ ತಂಗುದಾಣ, ವ್ಯಾಪಾರಿಗಳಿಗೆ, ಕರಕುಶಲ ಶಿಲ್ಪಿಗಳಿಗೆ, ಕಲಾವಿದರಿಗೆ, ನೇಕಾರರಿಗೆ ವ್ಯವಸ್ಥಿತವಾದ ರಸ್ತೆಗಳು ಮತ್ತು ಅಗ್ರಹಾರಗಳನ್ನು ಹೊಂದಿತ್ತು. ವಿಜಯನಗರ ಅರಸರ ಕಾಲದಲ್ಲಿ ವ್ಯಾಪಾರದ ಮುಖ್ಯ ಕೇಂದ್ರವಾಗಿತ್ತು. ಪ್ರಸಿದ್ಧ ತೌಳೇಶ್ವರ ದೇವಾಲಯ, ಗುಪ್ಪಿ ಸದಾನಂದ ದೇವಾಲಯ ಇನ್ನೂ ಹಲವಾರು ದೇವಾಲಯಗಳು ಬಸ್ರೂರಿನಲ್ಲಿವೆ. ಯಾವಾಗ ಈ ಬಸ್ರೂರು ಯಾವಾಗ ಪೋರ್ಚುಗೀಸರ ಪಾಲಾಯಿತೋ ಅಲ್ಲಿಂದ ಬಸ್ರೂರಿನಲ್ಲಿ ನೆಲೆಸಿದ ವಿದೇಶಿ ವ್ಯಾಪಾರಿಗಳ ದಬ್ಬಾಳಿಕೆಯು ಹೆಚ್ಚಾಗಿ ಹೋಯಿತು. ಈ ಬಗ್ಗೆ ಸ್ಥಳೀಯ ಆಡಳಿತಗಾರರು ಶಿವಾಜಿ ಮಹಾರಾಜರಿಗೆ ದೂರಿತ್ತಾಗ, ಶಿವಾಜಿ ಮಹಾರಾಜರು ತಮ್ಮ ನೌಕಾ ಪಡೆಗಳ ಮೂಲಕ ಬಸ್ರೂರಿಗೆ ಕ್ಕೆ ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಿದರು. ಒಮ್ಮೆ ಬಸ್ರೂರನ್ನು ಕೈ ವಶಮಾಡಿಕೊಂಡ‌ ನಂತರ ಬಸ್ರೂರಿನ ಗತವೈಭವವನ್ನು ಮತ್ತೆ ಮರಳಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡರು.

ಈಗ ಬಸ್ರೂರಿನ ವಿಜಯ ದಿವಸ್ ಆಯೋಜಕರು ಈ ವಿಜಯೋತ್ಸವದ ಅಂಗವಾಗಿ ಬಸ್ರೂರಿನ ಪುರಾತನ ದೇವಾಲಯಗಳ ಜೀರ್ಣೋದ್ಧಾರ, ಐತಿಹಾಸಿಕ ಸ್ಥಳಗಳ ಗುರುತಿಸುವಿಕೆ, ಪುರಾತನ ಶಾಸನಗಳ ಸಂಶೋಧನೆ ಮತ್ತು ಪ್ರಕಟಣೆ, ಬಸ್ರೂರಿನ ಇತಿಹಾಸದ ಪುಸ್ತಕ ಪ್ರಕಟಣೆ ಹಾಗೂ ಮಠ-ಮಂದಿರಗಳನ್ನು ರಾಷ್ಟ್ರ ಕಾರ್ಯಕ್ಕೆ ಜೋಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನಮ್ಮ ದೇಶದ ಪ್ರತಿಯೊಂದು ಪಟ್ಟಣ ಪ್ರದೇಶಗಳಿಗೆ ಅದರದ್ದೇ ಆದ ಇತಿಹಾಸ ಇರುತ್ತದೆ ಅವುಗಳನ್ನು ಬಸ್ರೂರಿನ ನಾಗರೀಕರಂತೆಯೇ ಸಮಿತಿಗಳನ್ನು ರಚಿಸಿಕೊಂಡು ಪುನರುಜ್ಜೀವನ ಮಾಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರ ಕೊಡುಗೆಯನ್ನು ನಮ್ಮ ಯುವಜನರಿಗೆ ಪರಿಚಯಿಸುವಂತಾಗಲಿ

ಏನಂತೀರೀ?

4 thoughts on “ಬಸ್ರೂರು ಸ್ವಾತಂತ್ರ್ಯ ದಿವಸ

  1. “ಶಿವಲಿಂಗವನ್ನು ಕಂಡುಹಿಡಿಯಲಾಯಿತು” ಎಂಬ ವಾಕ್ಯ ನನಗೆ ಅರ್ಥವಾಗಲಿಲ್ಲ. ಕಾಣೆಯಾಗಿದ್ದು ಸಿಕ್ಕಿತು? ಹೊಸದಾಗಿ ನಿರ್ಮಿಸಿದರು? ಉತ್ಖನನದಲ್ಲಿ ಸಿಕ್ಕಿತು? ಮಾಹಿತಿ ನೀಡುವಿರಾ?

    Like

    1. ಇದರ ಜೊತೆಯಲ್ಲಿಯೇ ಪ್ರತಾಪಘಡ್ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ಇದರ ನಿರ್ಮಾಣದ  ಉತ್ಖನನದ ಸಮಯದಲ್ಲಿ ಶಿವಲಿಂಗವೊಂದು ಪತ್ತೆಯಾಗಿ ಅಲ್ಲೊಂದು ಭವ್ಯವಾದ ದೇಗುಲವನ್ನು ನಿರ್ಮಾಣ ಮಾಡಲಾಯಿತು. ಅದಲ್ಲದೇ ಅಲ್ಲಿಂದಲೇ  ಭವಾನಿ ಎಂಬ ಹೆಸರಿನ ಖಡ್ಗವನ್ನು ಶಿವಾಜಿಯವರು ತಮ್ಮ ರಕ್ಷಾಕವಚವನ್ನಾಗಿ ಧರಿಸಲಾರಂಭಿಸಿದರು.

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s