ತಂಬುಳಿ

ಕಡಿಮೆ ಸಮಯದಲ್ಲಿ ಮನೆಯಲ್ಲಿ ಇರುವ ವಸ್ತುಗಳಲ್ಲಿಯೇ ದಿಢೀರ್ ಆಗಿ ಮಾಡಬಹುದಾದ ರುಚಿಕರವಾದ ಪದಾರ್ಥವೇ ತಂಬುಳಿ.
ಮಜ್ಜಿಗೆಯನ್ನು ಬಳಸಿ ಮಾಡುವುದಾದರಿಂದ ಇದು ದೇಹಕ್ಕೆ ತಂಪಾಗಿ ಇರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಪದಾರ್ಥಗಳು

 • ತೆಂಗಿನಕಾಯಿ ತುರಿ 1/2 ಕಪ್
 • ಜೀರಿಗೆ 1/4 ಚಮಚ
 • ಮೆಣಸು 1/4 ಚಮಚ
 • ಹಸೀ ಮೆಣಸಿನಕಾಯಿ 3-4
 • ಬೆಳ್ಳುಳ್ಳಿ(ಐಚ್ಚಿಕ) 3-4 ಎಸಳು
 • ಉಪ್ಪು ರುಚಿಗೆ ತಕ್ಕಷ್ಟು

ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನೂ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು 2 ಕಪ್ ಕಡೆದ ಮಜ್ಜಿಗೆಯೊಂದಿಗೆ ಸೇರಿಸಿದಲ್ಲಿ ತಂಬುಳಿ ಸಿದ್ದ.

ಇದರೊಂದಿಗೆ

 • ದೊಡ್ಡಿಪತ್ರೆ ಸೊಪ್ಪು ,
 • ಪುದೀನ ಸೊಪ್ಪು,
 • ವಿಳ್ಳೇದಲೆ,
 • ಬಾಯಿಬಸಲೆ,
 • ಒಂದೆಲಗ,
 • ಶುಂಠಿ,
 • 1/4 ಚಮಚ ಮೆಂತ್ಯ

ಈ ಮೇಲೆ ತಿಳಿಸಿದ ಯಾವುದಾದರೂ ಒಂದನ್ನು ಸ್ವಲ್ಪ ಬಾಣಲೆಯಲ್ಲಿ ಹುರಿದು ರುಬ್ಬುವ ಪದಾರ್ಥಗಳೊಂದಿಗೆ ಬಳೆಸಿದಲ್ಲಿ ಇನ್ನೂ ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ.

ಒಗ್ಗರಣೆ:

ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ (ಕೊಬ್ಬರಿ ಎಣ್ಣೆ ಇನ್ನೂ ಹೆಚ್ಚಿನ ರುಚಿ ತರುತ್ತದೆ) ಹಾಕಿ ಅದಕ್ಕೆ ಚೂರು ಸಾಸಿವೆ, ಚಿಟಿಕೆ ಇಂಗು, ನಾಲ್ಕಾರು ಕರಿಬೇವಿನ ಎಲೆ, ಉದ್ದಿನಬೇಳೆ ಮತ್ತು ಒಂದೆರಡು ಮುರಿದ ಒಣಮೆಣಸಿನಕಾಯಿಯ ಒಗ್ಗರಣೆಯನ್ನು ಬೆರಿಸಿದರಂತೂ ತಂಬುಳಿ ಇನ್ನೂ ಫಮ ಘಮವೆನಿಸುತ್ತದೆ.

ಇದನ್ನು ಅನ್ನ, ರಾಗಿ ಮುದ್ದೆ , ರೊಟ್ಟಿ ಮತ್ತು ಚಪಾತಿಗಳ ಜೊತೆ ತಿನ್ನಲು ಮಜವಾಗಿರುತ್ತದೆ.

ಇನ್ನೇಕೆ ತಡ? ರುಚಿಯಾದ ತಂಬುಳಿ ಮಾಡಿರಲ್ಲಾ.

ರುಚಿರುಚಿಯಾಗಿ ಮಾಡಿದ ನಂತರ ನಮ್ಮನ್ನು ಮನೆಗೆ ಕರೆಯುವುದನ್ನು ಮಾತ್ರ ಮರೆಯಬೇಡಿ.

ಏನಂತೀರೀ?

ಇಲ್ಲಿಂದ ಮುಂದೆ ಇರೋದೆಲ್ಲಾ ವಾಟ್ಸಾಪ್ ಕೃಪೆ.

ತುಂಬಾ ಉತ್ತಮ ವಿವರಣೆ ಇದ್ದದ್ದರಿಂದ ಯಥಾವತ್ತಾಗಿ ಪ್ರಕಟಿಸಿದ್ದೇನೆ. ಇದನ್ನು ಬರೆದ ಲೇಖಕರಿಗೆ ಹೃತ್ಪೂರ್ವಕ ವಂದನೆಗಳು

*೧. ಜೀರಿಗೆ*ಮೆಣಸಿನ ಕಾಳಿನ ತಂಬ್ಳಿ*:- ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬೇಕಿದ್ದರೆ ಚೂರು ಬೆಲ್ಲ ಹಾಕಿ.ಛಳಿಗಾಲ, ಮಳೆಗಾಲದ ಸಮಯದಲ್ಲಿ ಸ್ವಲ್ಪ ಬಿಸಿಮಾಡಿ ಊಟಮಾಡಿ.ಜ್ವರ ಬಂದಾಗ ಒಳ್ಳೆಯದು.

*೨. ಸಾಸಿವೆ* *ತಂಬ್ಳಿ* :- ಕಾಯಿತುರಿ ಜೊತೆ ಸಾಸಿವೆ,ಚೂರು ಒಣಮೆಣಸಿನಕಾಯಿ ಹಾಕಿ ರುಬ್ಬಿ, ಮಜ್ಜಿಗೆ ಉಪ್ಪು ಹಾಕಿ. *ಅಜೀರ್ಣ ಆದಾಗ ಒಳ್ಳೆಯದು*

*೩. ಓಂಕಾಳು*. *ತಂಬ್ಳಿ*:- ಓಂಕಾಳು,ಚೂರು ಒಣಶುಂಠಿ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಹೊಟ್ಟೆ ಉಬ್ಬರ,ಆಮಶಂಕೆ ನಿವಾರಣೆಗೆ ಮನೆಮದ್ದು.
*೪. ಓಂಕಾಳು ಜೀರಿಗೆ ತಂಬುಳಿ* ಓಂಕಾಳು ಜೀರಿಗೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ವಾಂತಿ ಇರುವಾಗ ಈ ತಂಬ್ಳಿ ಉಪಯುಕ್ತ.

*೫. ಮೆಂತೆ ತಂಬ್ಳಿ* ಮೆಂತೆ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಸ್ವಲ್ಪ ಬೆಲ್ಲ ಹಾಕಿ.ಅಥವಾ ಒಣಮೆಣಸಿನಕಾಯಿಮ, ಮೆಂತೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಜೀರ್ಣಶಕ್ತಿ ವೃದ್ಧಿಸುತ್ತದೆ.

*೬.ಕೊತ್ತಂಬರಿ* *ತಂಬ್ಳಿ* ಕೊತ್ತಂಬರಿ ಬೀಜ ಇಂಗು ಕರಿಬೇವು ಒಣಮೆಣಸಿನಕಾಯಿ ಹುರಿದು ಕಾಯಿತುರಿ ಜೊತೆ ರುಬ್ಬಿ ಹುಣಸೆ ಹಣ್ಣು ಉಪ್ಪು ಹಾಕಿ.ಅಥವಾ ಕೊತ್ತಂಬರಿ ಬೀಜ ಇಂಗು ಕರಿಬೇವು ಹಸಿಮೆಣಸಿನ ಕಾಯಿ ಹುರಿದು ಕಾಯಿತುರಿ ಜೊತೆ ರುಬ್ಬಿ ಉಪ್ಪು ಹಾಕಿ.ಈ ತಂಬ್ಳಿ ಅವಲಕ್ಕಿ ಜೊತೆ ತುಂಬಾ ರುಚಿ.ಅನ್ನದ ಜೊತೆಗೂ ರುಚಿ.

*೭. ಕರಿಬೇವು ತಂಬ್ಳಿ* ಕಾಯಿತುರಿ ಜೊತೆ ಕರಿಬೇವು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು..
*೮. ಎಲವರಿಗೆ ತಂಬ್ಳಿ* ಎಲವರಿಗೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪ ಹಾಕಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಸ್ವಲ್ಪ ಬೆಲ್ಲ ಹಾಕಿ ದ್ರೂ ರುಚಿ.ಛಳಿಗಾಲ, ಮಳೆಗಾಲ ದಲ್ಲಿ ಸ್ವಲ್ಪ ಬಿಸಿಮಾಡಿ. ಬಿ .ಪಿ.ಇದ್ದವರಿಗೆ ಒಳ್ಳೆಯದು.

*೯. ವಿಟಾಮಿನ್ / ಚಕ್ರಮುನಿ ಸೊಪ್ಪು*#ತಂಬ್ಳಿ* ವಿಟಾಮಿನ್ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಚಳಿಗಾಲದಲ್ಲಿ ಮಳೆಗಾಲ ದಲ್ಲಿ ಬಿಸಿ ಮಾಡಿ ಉಣ್ಣಬಹುದು.

*೧೦. ಬಿಲ್ವಪತ್ರೆ ಕುಡಿ ತಂಬ್ಳಿ* :- ಕಾಯಿತುರಿ ಜೊತೆ ಬಿಲ್ವಪತ್ರೆ ಕುಡಿ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬಿಪಿ, ಶುಗರ್ ಇದ್ದವರಿಗೂ ಒಳ್ಳೆಯದು.

*೧೧ ನಿಂಬೆಕಾಯಿ ತಂಬ್ಳಿ* :- ಕಾಯಿತುರಿ ಜೊತೆ ಕೊನೆಯ ಲ್ಲಿ ಲಿಂಬೆಹೋಳು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಜೀರಿಗೆ ಒಗ್ಗರಣೆ ಹಾಕಿ.
ಪಿತ್ತಕ್ಕೆ ಒಳ್ಳೆಯದು.

*೧೨ #ಒಂದೆಲಗದ (ಉರಗಾಗಡ್ಡೆ) ತಂಬ್ಳಿ* :- ಕಾಯಿತುರಿ ಜೊತೆ ಸ್ವಚ್ಛ ಮಾಡಿದ ಒಂದೆಲಗದ ಗಡ್ಡೆ ಸಹಿತ ಎಲೆಗಳು ಜೀರಿಗೆ ಕಾಳುಮೆಣಸು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಸ್ವಲ್ಪ ಬೆಲ್ಲ ಹಾಕಿ.ಇದು ಬೇಸಿಗೆಯಲ್ಲಿ ತಂಪು ಹಾಗೂ ನೆನಪಿನ ಶಕ್ತಿ ಹೆಚ್ಚಿಸಲು ಪರಿಣಾಮ ಬೀರುತ್ತದೆ.

*೧೩. ಬಿಳೆಕುಸುಮಾಲೆಹೂವಿನ #ತಂಬ್ಳಿ* :- ಬಿಳೆಕುಸುಮಾಲೆ ಹೂ, ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಹೆಂಗಸರ ಮುಟ್ಟಿನ ತೊಂದರೆಗೆ ಒಳ್ಳೆಯದು.

*೧೪ *ಪಾಲಕ್ ಸೊಪ್ಪು ತಂಬ್ಳಿ* :- ಪಾಲಕ್ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ದೇಹಕ್ಕೆ ತಂಪು.

*೧೫ *#ಮೆಂತೆ #ಸೊಪ್ಪಿನ #ತಂಬ್ಳಿ*:- ಮೆಂತೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬಾಯಿರುಚಿ ಹೆಚ್ಚಿಸುತ್ತದೆ.

*೧೭ ಸಬ್ಬಸಿಗೆ ಸೊಪ್ಪಿನ ತಂಬ್ಳಿ*:- ಸಬ್ಬಸಿಗೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.*ಬಸುರಿ ಹಾಗೂ ಬಾಣಂತಿ ಯರಿಗೆ ಎದೆಹಾಲು ಹೆಚ್ಚಿಸಲು ಪರಿಣಾಮ ಕಾರಿ*.

*೧೮ ಕಂಚಿಕಾಯಿ ,#ಹೇರಳೆ ಕಾಯಿ (ಉಪ್ಪಲ್ಲಿ ಹಾಕಿದ ಕಂಚಿಹೋಳು) ತಂಬ್ಳಿ* :- ಕಾಯಿತುರಿ ಜೊತೆ ಉಪ್ಪಲ್ಲಿ ಹಾಕಿದ ಕಂಚಿಹೋಳು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು (ಉಪ್ಪು ಇರೋದ್ರಿಂದ ನೋಡಿ) ಹಾಕಿ. ಪಿತ್ತಕ್ಕೆ ಒಳ್ಳೆಯದು.

*೧೯ #ಲಿಂಬೆಸಟ್ಟಿನ (ರಸಹಿಂಡಿದ ಮೇಲೆ ಸಿಪ್ಪೆಯನ್ನು ಉಪ್ಪಲ್ಲಿ ಹಾಕಿದ) ತಂಬ್ಳಿ*:- ಕಾಯಿತುರಿ ಜೊತೆ ಲಿಂಬೆಸಟ್ಟು, ಜೀರಿಗೆ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ನೋಡಿ ಹಾಕಿ.ಪಿತ್ತಕ್ಕೆ ಒಳ್ಳೆಯದು.

*೨೦ ನೆಲ್ಲಿ ಕಾಯಿ ತಂಬುಳಿ* ಕಾಯಿತುರಿ ಜೊತೆ ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ನೆಲ್ಲಿ ಕಾಯಿ ಹಾಕಿ ಹುರಿದುಕೊಂಡು ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಪಿತ್ತಕ್ಕೆ ಒಳ್ಳೆಯದು. ಉಪ್ಪಲ್ಲಿ ಹಾಕಿದ ನೆಲ್ಲಿ ಕಾಯಿ ತಂಬುಳಿ ಮಾಡಬಹುದು. ನೀರಿನಲ್ಲಿ ನೆನೆಸಿ ನಂತರ ರುಬ್ಬಿ.

*೨೧ ಮುರುಗಲು ಹಣ್ಣಿನ ತಂಬ್ಳಿ* ಬೇಸಿಗೆಯಲ್ಲಿ ಧಾರಾಳ ಸಿಗುವ ಬಿಳೇ ಅಥವಾ ಕೆಂಪು ಮುರುಗಲು ಹಣ್ಣಿನ ಬೀಜ , ತೊಟ್ಟು ತೆಗೆದು ಕಾಯಿತುರಿ ಜೊತೆ ಜೀರಿಗೆ ಹಾಕಿ ರುಬ್ಬಿ , ಉಪ್ಪು, ಬೆಲ್ಲ ಹಾಕಿ.ಪಿತ್ತಶಮನಕಾರಿ.

*೨೨ ಒಣಗಿಸಿ ದ ಮುರುಗಲು ಸಿಪ್ಪೆ ತಂಬ್ಳಿ*:- ಒಣಗಿದ ಬಿಳೇ ಅಥವಾ ಕೆಂಪು ಮುರುಗಲು ಹಣ್ಣಿನ ಸಿಪ್ಪೆ ಯನ್ನು ನೀರಲ್ಲಿ ನೆನೆಸಿಡಿ.ಕಾಯಿತುರಿ ಜೊತೆಗೆ ನೆನೆಸಿದ ಮು.ಸಿಪ್ಪೆ ರುಬ್ಬಿ ಉಪ್ಪು ಬೆಲ್ಲ ಹಾಕಿ.ಜೀರಿಗೆ ಒಗ್ಗರಣೆ ಹಾಕಿ.ಪಿತ್ತಕ್ಕೆ ಒಳ್ಳೆಯದು.

*೨೨* *ಕೆಂಪು / ಬಿಳಿ ದಾಸವಾಳ ಹೂವಿನ ತಂಬ್ಳಿ*:- ತೊಟ್ಟು, ಮಧ್ಯದ ಕುಸುಮ ತೆಗೆದ ದಾಸವಾಳ ಹೂವು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ದೇಹವನ್ನು ತಂಪಾಗಿ ಇಡುತ್ತದೆ.

*೨೩* *ಮಾಚಿಪತ್ರೆ ತಂಬ್ಳಿ*:- ಮಾಚಿಪತ್ರೆ ಜೀರಿಗೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಜಂತು ನಾಶಕ್ಕೆ ಕಾರಣವಾಗುತ್ತದೆ.

*೨೪* *ಸಾಂಬಾರ್ ಸೊಪ್ಪಿನ (ದೊಡ್ಡ ಪತ್ರೆ) ತಂಬ್ಳಿ*:- ಸಾಂಬಾರ್ ಸೊಪ್ಪು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ನೆಗಡಿ ಆದಾಗ ಒಳ್ಳೆಯದು.
*೨೫* *#ಶುಂಠಿ ತಂಬ್ಳಿ*:- ಕಾಯಿತುರಿ ಜೊತೆ ಶುಂಠಿ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಜೀರ್ಣಕಾರಿ.

*೨೬. #ನೆಲನೆಲ್ಲಿ ತಂಬ್ಳಿ#* :- ನೆಲನೆಲ್ಲಿ ಸೊಪ್ಪಿನ ಜೊತೆ ಜೀರಿಗೆ ಹಾಕಿ ಹುರಿದು ತೆಂಗಿನ ತುರಿ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಕಾಮಾಲೆ ರೋಗಕ್ಕೆ ಮದ್ದು.

*೨೭ #ಕಾಕೆಸೊಪ್ಪಿನ ತಂಬ್ಳಿ #* ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಕಾಕೆಸೊಪ್ಪು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಬಾಯಿಹುಣ್ಣು ಆದಾಗ ಉಪಯುಕ್ತ.

*೨೮ # ಹೊನಗೊನೆ #ಸೊಪ್ಪಿನ ತಂಬ್ಳಿ* :- ಹೊನಗೊನೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

*೨೯. #ದಾಳಿಂಬೆ ಕುಡಿ ತಂಬ್ಳಿ* :- ದಾಳಿಂಬೆ ಕುಡಿ ಜೀರಿಗೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಪದೇ ಪದೇ ಮಲವಿಸರ್ಜನೆ ತೊಂದರೆಗೆ ಒಳಗಾಗಿರುವ ವರಿಗೆ ಒಳ್ಳೆಯದು.

*೩೦ #ಪೇರಲೆಕುಡಿ ತಂಬ್ಳಿ*:- ಪೇರಲೆ ಕುಡಿ, ಜೀರಿಗೆ ವ್ಯಯ ಚದರ ಹುರಿದು ಕಾಯಿತುರಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬಾಯಿಹುಣ್ಣು ಆದಾಗ ಒಳ್ಳೆಯದು.

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: