ವಿಶ್ವ ಆರೋಗ್ಯ ದಿನವು ಜಾಗತಿಕ ಆರೋಗ್ಯ ಜಾಗೃತಿ ದಿನವಾಗಿದ್ದು, ಪ್ರತಿವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತದೆ. ಆರೋಗ್ಯದ ಕಾಳಜಿ ಕುರಿತಾಗಿ ವಿಶ್ವಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷವೂ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ವೆಂದು ಆಚರಿಸುತ್ತದೆ. ಈ ದಿನದಂದು ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವಚ್ಛತಾ ಅಭ್ಯಾಸಗಳು ನೀರಿನ ಸಂರಕ್ಷಣೆ ಪರಿಸರ ಸ್ವಚ್ಛತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಈ ವಿಶ್ವ ಆರೋಗ್ಯ ದಿನಾಚರಣೆಯಂದು ವಿಶ್ವದಾದ್ಯಂತ ಹರಡಿರುವ ಮಹಾಮಾರಿ ಕೊರೋನಾದ ವಿರುದ್ಧ ಆರೋಗ್ಯ ರಕ್ಷಣೆ ನೀಡುವಲ್ಲಿ ಹಗಲಿರಳೂ ಶ್ರಮವಹಿಸುತ್ತಿರುವ ವೈದ್ಯರು, ದಾದಿಯರು, ಶುಶ್ರೂಷಕಿಯರು ಮತ್ತು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೆ ಅಭಿನಂದನೆಗಳನ್ನು ತಿಳಿಸುವುದರ ಜೊತೆಗೆ ಸಾಧ್ಯವಾದಲ್ಲಿ ಅವರೊಂದಿಗೆ ಸೇರಿಕೊಂಡು ನಮ್ಮ ಕೈಲಾದ ಮಟ್ಟಿಗೆ ಆ ಮಹಾಸೇವೆಯಲ್ಲಿ ಪಾಲ್ಗೊಳ್ಳೋಣ.
ಉತ್ತಮ ರೀತಿಯ ಬದುಕಿಗೆ ಆರೋಗ್ಯವೂ ಅತ್ಯಗತ್ಯ. ಆರೋಗ್ಯವಿದ್ದಲ್ಲಿ ಮಾತ್ರವೇ ಆಯುಷ್ಯ ಎಂಬುದನ್ನು ಎಲ್ಲರೂ ಅರಿತು ಕೊಳ್ಳಬೇಕು. ಇತ್ತೀಚೆಗೆ ಕೂರೂನಾ ಕುರಿತಂತೆ ಕುಚೋದ್ಯವಾಗಿ, ದೊಡ್ಡ ಫಜೀತಿ ಆಗಿದೆ ಮಾರ್ರೆ. ಆಗಾಗ ಕೈ ತೊಳೆದು ತೊಳೆದೂ, ಕೈಯಲ್ಲಿರುವ ಧನ ರೇಖೆಯೇ ಅಳಿಸಿಹೋಗುತ್ತಿದೆ. ಕೈ ತೊಳಿಲಿಲ್ಲಾಂದ್ರೆ ಆಯುಷ್ಯ ರೇಖೆಗೆ ಅಳಿಸಿ ಹೋಗುವ ಭಯ ಎಂಬ ಸಂದೇಶವನ್ನು ಹರಿಬಿಟ್ಟರು. ಅದಕ್ಕೆ ಪ್ರತ್ಯುತ್ತರವಾಗಿ ಕೈಇದ್ದರೆ ಮಾತ್ರವೇ ಧನರೇಖೆ ಕಾಣೋದು. ಮೊದಲು ಆಯುಷ್ಯ ಗಟ್ಟಿ ಮಾಡ್ಕೊಳ್ಳೋಣ. ಆಯಸ್ಸು ಇದ್ರೆ ಕೈ ಇರುತ್ತದೆ. ಅದೇ ಕೈಯಿಂದ ಕೈತುಂಬಾ ಹಣವನ್ನು ಎಷ್ಟು ಬೇಕಾದ್ರೂ ಸಂಪಾದಿಸಬಹುದು ಎಂದು ಪ್ರತ್ಯುತ್ತರಿಸಿದೆ.
ಅದೇಕೋ ಏನೋ, ನಮ್ಮ ದೇಶದಲ್ಲಿ ಆರೋಗ್ಯದ ಕುರಿತಾದ ಅರಿವು ಸ್ವಲ್ಪ ಕಡಿಮೆಯೇ ಎಂಬುದು ವಿಷಾದನೀಯ ಸಂಗತಿ. ಭಾರತ ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದೆ. ದೇಶದ ಜನರ ಆರೋಗ್ಯ ಸುಧಾರಣೆಗಳಿಗೆ ಹಲವಾರು ವರ್ಷಗಳಿಂದ ಹತ್ತಾರು ಕ್ರಮಗಳನ್ನು ತೆಗೆದುಕೊಂಡಿದ್ದರೂ ಆರೋಗ್ಯ ಸುಧಾರಿಸಿಲ್ಲ. ಅದರಲ್ಲೂ ಮಹಿಳೆಯರಲ್ಲಿ ಅನೀಮಿಯಾ, ಇನ್ನೂ ನಿಲ್ಲದ ಬಾಲ್ಯ ವಿವಾಹ ಪದ್ದತಿ, ಆಟ ಆಡಿಕೊಂಡು ನಲಿಯುವ ಚಿಕ್ಕ ವಯಸ್ಸಿಗೇ ಮದುವೆಯಾಗಿ ಮಕ್ಕಳನ್ನು ಹೆರುವುದರಿಂದ, ಹುಟ್ಟುವ ಮಕ್ಕಳಲ್ಲಿ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ರಕ್ತ ಕಣಗಳ ಕೊರತೆ, ಚುಚ್ಚುಮದ್ದು ನೀಡುವ ಕಾರ್ಯಕ್ರಮಗಳಲ್ಲಿ ಅಸಂತೃಪ್ತಿ ಹಾಗೂ ಸಾಂಕ್ರಾಮಿಕ ರೋಗಗಳ ನಿರ್ಲಕ್ಷ್ಯ ಎಲ್ಲವೂ ತಲೆ ಎತ್ತಿ ನಿಂತಿವೆ. ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು ಬಡತನ ಮತ್ತು ಶಿಕ್ಷಣದ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಗಳೇ ಆರೋಗ್ಯದ ಕೆಡುಕಿಗೆ ತಳಹದಿಯಾಗಿದೆ.
ನಮ್ಮ ರಾಜಕೀಯ, ಸಾಮಾಜಿಕ ಮತ್ತು ವಾಣಿಜ್ಯ ನಿರ್ಧಾರಗಳಿಂದಾಗಿ ಹವಾಮಾನದಲ್ಲಿ ವೈಪರೀತ್ಯವನ್ನುಂಟು ಮಾಡುತ್ತಿರುವ ಪರಿಣಾಮವಾಗಿ ಆರೋಗ್ಯ ಬಿಕ್ಕಟ್ಟನ್ನು ಹೆಚ್ಚಿಸುತ್ತಿದೆ. ವಿಪರೀತವಾದ ಇಂಧನಗಳ ಬಳಕೆಯ ಪರಿಣಾಮವಾಗಿ ವಾಯುಮಾಲಿನ್ಯವು ಹೆಚ್ಚಾಗಿ ನಾವಿಂದು ಅನಾರೋಗ್ಯಕರ ಗಾಳಿಯನ್ನೇ ಉಸಿರಾಡುವಂತಾಗಿದೆ. ಎಗ್ಗಿಲ್ಲದೇ ಕೊಳವೇ ಭಾವಿಗಳನ್ನು ತೋಡುವ ಮೂಲಕ ಅಂತರ್ಜಲವನ್ನು ಬರಿದು ಮಾಡುತ್ತಿದ್ದರೆ, ಕೊಳಚೇ ನೀರನ್ನು ನದಿಗಳಿಗೆ ಬಿಡುವ ಮೂಲಕ ಶುಭ್ರವಾಗಿದ್ದ ನದಿ ನೀರನ್ನೂ ಕೊಳಕು ಮಾಡಿಯಾಗಿದೆ. ನೂರಾರು ವರ್ಷಗಳಾದರೂ ಮಣ್ಣಿನಲ್ಲಿ ಕೊಳೆಯದ ಪ್ಲಾಸ್ಟಿಕ್‌ಗಳನ್ನು ನಮ್ಮ ದೈನಂದಿನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿರುವುದೂ ಕ್ಯಾನ್ಸರ್ ಮತ್ತು ಹೃದ್ರೋಗವನ್ನು ಹೆಚ್ಚುವಲ್ಲಿ ಮಹತ್ತರ ಪಾತ್ರವನ್ನು ಪಡೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ.
ಹಾಗೆಂದ ಮಾತ್ರಕ್ಕೆ ಈ ಸಮಸ್ಯೆಗಳು ಕೇವಲ ಭಾರತಕ್ಕೆ ಮಾತ್ರವೇ ಸೀಮಿತವಾಗದೇ, ಪ್ರಪಂಚಾದ್ಯಂತ ಇದೇ ರೀತಿಯ ಸಮಸ್ಯೆಗಳು ಎಲ್ಲ ಕಡೆಯಲ್ಲೂ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಉತ್ತಮ ಆರೋಗ್ಯಕ್ಕಾಗಿ ಸತ್ವಯುತ ಆಹಾರಗಳು, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ-ಬೆಳಕು, ಸ್ವಚ್ಛ ಪರಿಸರ, ನೆಮ್ಮದಿ ಮತ್ತು ಮನರಂಜನೆ ಅತ್ಯಗತ್ಯವಾದದ್ದು.
ನಾವಿಂದು ದೈಹಿಕ, ಮಾನಸಿಕ ಒತ್ತಡದಿಂದ ಜೀವನಶೈಲಿ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಕೇವಲ ಆಸ್ಪತ್ರೆ, ಔಷಧ, ವೈದ್ಯರಿಂದಲೇ ಆರೋಗ್ಯ ಸುಧಾರಣೆಯಾಗುತ್ತದೆಂದು ನಂಬಿದರೆ ಅದು ತಪ್ಪು ಕಲ್ಪನೆ. ರೋಗ ಬಾರದಂತೆ ತಡೆಗಟ್ಟುವಿಕೆಯೇ ಚಿಕಿತ್ಸೆಗಿಂತ ಉತ್ತಮವಾದುದು. ಆದ್ದರಿಂದ ಪ್ರತಿಯೊಬ್ಬರೂ ಈ ಕೆಳಗೆ ತಿಳಿಸಿದಂತೆ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಚ್ಚ ಅರೋಗ್ಯದತ್ತ ಹರಿಸೋಣ ಚಿತ್ತ.
- ರಾತ್ರಿ ಬೇಗ ಮಲಗೋಣ ಮತ್ತು ಬೆಳಿಗ್ಗೆ ಬೇಗ ಏಳೋಣ. ಅರೋಗ್ಯವಂತ ಮನುಷ್ಯರಿಗೆ ಕನಿಷ್ಟ 6 -7 ಗಂಟೆ ನಿದ್ರೆ ಅವಶ್ಯಕತೆಯಿದ್ದು, ಮಕ್ಕಳು, ವಯಸ್ಸಾದವರು ಮತ್ತು ಅನಾರೋಗ್ಯ ಪೀಡಿತರಿಗೆ ಮಾತ್ರ ಅದಕ್ಕಿಂತ ಹೆಚ್ಚಿನ ನಿದ್ದೆಯ ಅಗತ್ಯವಿದೆ.
- ಬ್ರಾಹ್ಮಿಮುಹೂರ್ತದಲ್ಲೆದ್ದು (5-5.45ರೊಳಗೆ) ಕನಿಷ್ಠ 650 ಮಿ.ಲೀಟರ್ ನಿಂದ 1.2 ಲೀಟರ್ ಉಗುರು ಬೆಚ್ಚಗಿನ ನೀರನ್ನು ನಿಧಾನವಾಗಿ ಕುಡಿಯುವುದು ಉತ್ತಮ ಅಭ್ಯಾಸ
- ಬೆಳಿಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಅಥವಾ ಟೀ ಬೇಡ. ಎದ್ದ ತಕ್ಷಣ ದಿನನಿತ್ಯದ ಶೌಚಾದಿ ಕರ್ಮಗಳನ್ನು ಮುಗಿಸಿ ಸ್ವಲ್ಪ ಕಾಲ ದೀರ್ಘ ನಡಿಗೆ ಅಥವಾ ವ್ಯಾಯಾಮ ಮಾಡಿ ಎದ್ದು2 ಘಂಟೆಯಾದ ನಂತರ ಯಾವುದಾದರೂ ಹಣ್ಣನ್ನು ಅಥವಾ ತಿಂಡಿಯನ್ನು ಸೇವಿಸುವುದು ಉತ್ತಮ.
- ಯಾವುದೇ ಕಾರಣಕ್ಕೂ ಬೆಳಗಿನ ಉಪಾಹಾರವನ್ನು ತಪ್ಪಿಸಬಾರದು. ಕಾಫಿ, ಟೀ ಕುಡಿಯಲೇ ಬೇಕಿದ್ದಲ್ಲಿ ತಿಂಡಿ ಆದ ನಂತರ ಕನಿಷ್ಟ ಒಂದುವರೆ ಗಂಟೆ ಬಿಟ್ಟು ಕುಡಿಯಿರಿ.
- ಬೆಳಗಿನ ಉಪಹಾರದಲ್ಲಿ ಮಾಮೂಲಿ ಇಡ್ಲಿ, ದೋಸೆ, ಉಪ್ಪಿಟ್ಟು ಇತ್ಯಾದಿಗಳ ಜೊತೆಗೆ ಯಾವುದಾದರೊಂದು ಋತುವಿಗನುಗುಣವಾದ ತಾಜಾಹಣ್ಣು, ತರಕಾರಿ ಸಲಾಡ್, ಸ್ವಲ್ಪ ಒಣಹಣ್ಣುಗಳಿರಲಿ. ಜೊತೆಗೆ ಮೊಳಕೆ ಕಾಳುಗಳಿರಲಿ. ಜಂಕ್ ಪುಡ್ ಗಳಿಂದ ಮತ್ತು ಕರಿದ ಕುರುಕಲು ಪದಾರ್ಥಗಳನ್ನು ನಿರ್ಭಂಧಿಸೋಣ.
- ಊಟಕ್ಕೆ ಅಥವಾ ತಿಂಡಿಗೆ ಕನಿಷ್ಟ ಅರ್ಧ ಗಂಟೆ ಮೊದಲು ನೀರು ಕುಡಿಯುವುದನ್ನು ನಿಲ್ಲಿಸೋಣ ಮತ್ತು ಊಟವಾದ ನಂತರ 2 ತಾಸು ಬಿಟ್ಟು ಕುಡಿಯೋಣ. ಊಟದ ಜೊತೆಗೆ ನೀರು ಕುಡಿಯುವುದು ಮತ್ತು ಊಟದ ಮಧ್ಯ ಮಾತನಾಡದಿರುವುದು ಒಳಿತು.
- ಬೆಳಿಗ್ಗೆ 8 ಘಂಟೆಯೊಳಗೆ ತಿಂಡಿ, ಮಧ್ಯಾಹ್ನ 1-2 ಗಂಟೆಯೊಳಗೆ ಊಟದಲ್ಲಿ ಮುದ್ದೆ/ರೊಟ್ಟಿ/ಚಪಾತಿ, ಅನ್ನಾ, ಸಾರು, ಪಲ್ಯ, ಕೋಸಂಬರಿ, ಇತ್ಯಾದಿ ಒಳಗೊಂಡಿರಲಿ ಮತ್ತು ರಾತ್ರಿ 8 ಘಂಟೆಯೊಳಗೆ ರಾತ್ರಿಯ ಲಘುಬೋಜನ ಸೇವಿಸಬೇಕು.
- ಒಮ್ಮೆಲೇ ಅತಿಯಾಗಿ ತಿನ್ನುವುದರ ಬದಲು ಅದೇ ಆಹಾರವನ್ನು ಪ್ರತೀ ಎರಡು ಗಂಟೆಗಳಿಗೊಮ್ಮೆ ತಿಂದಲ್ಲಿ ಉತ್ತಮವಾಗಿ ಜೀರ್ಣವಾಗಿ ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ
- ಇನ್ನು ಸೇವಿಸುವ ಯಾವುದೇ ಆಹಾರವನ್ನು ನಿಧಾನವಾಗಿ ಅಗಿದು ಜಗಿದು (ಕನಿಷ್ಠ 20-25 ಬಾರಿ) ಸೇವಿಸೋಣ. ನಮ್ಮ ಬಾಯಿಗಳಲ್ಲಿ ಹಲ್ಲುಗಳಿರುವುದೇ ಹೊರತು, ಹೊಟ್ಟೆಯಲ್ಲಿಲ್ಲ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ಜೀರ್ಣಕ್ರಿಯೆ ಸುಲಲಿತವಾಗಿ ಆಗಿ ಮಲಬದ್ಧತೆಯಾಗುವುದಿಲ್ಲ ಮತ್ತು ಜೊತೆಗೆ ಬೊಜ್ಜು ಬರುವುದಿಲ್ಲ.
- ರಾತ್ರಿ ಊಟಮಾಡಿದ ತಕ್ಷಣವೇ ಮಲಗಲು ಹೋಗದೇ ಕನಿಷ್ಟ ಪಕ್ಷ ಊಟವಾದ ನಂತರ 2 ಗಂಟೆ ಆದ ಮೇಲೆ ನಿದ್ದೆ ಮಾಡೋಣ. ಅಂದರೆ ಸುಮಾರು 8 ಗಂಟೆಗೆ ಊಟ ಮಾಡಿ 10 ಗಂಟೆಗೆ ನಿದ್ದೆ ಮಾಡೋಣ. ಈ ಮಧ್ಯದಲ್ಲಿ ಸ್ವಲ್ಪ ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಮನರಂಜನೆ ಇರಲಿ.
- ನಮ್ಮ ಆಹಾರದಲ್ಲಿ 5 ಬಿಳಿ ವಿಷಗಳು ಅಂದರೆ, ಸಕ್ಕರೆ, ಮೈದಾ, ಬಿಳಿಅಕ್ಕಿ, ಉಪ್ಪು, ಸಂಸ್ಕರಿಸದೇ ಇರುವ ಹಾಲು (ಹಾಲಿನ ಬದಲು ಕಡೆದ ಮಜ್ಜಿಗೆ ಸೇವನೆ ಅತ್ಯುತ್ತಮ) ಇವುಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸೋಣ.
- ಈಗಾಗಲೇ ನಾವು ಬಳಸುತ್ತಿರುವ ಅನೇಕ ಆಹಾರಗಳಿಂದ ಹಲವಾರು ರಾಸಾಯನಿಕಗಳು ನಮ್ಮ ಶರೀರವನ್ನು ಸೇರುತ್ತಿವೆ. ಅದರ ಜೊತೆಗೆ ಕೃತಕ ಬಣ್ಣ, ಪ್ರಿಸರ್ವೇಟಿವ್ ಬಳೆಸಿದ ಆಹಾರಗಳನ್ನು ತಿನ್ನುವುದನ್ನು ನಿಲ್ಲಿಸೋಣ.
- ಆದಷ್ಟೂ ತಾಜ ತಾಜಾ ಆಹಾರಗಳನ್ನು ಸೇವಿಸುವ ಮೂಲಕ ಫ್ರಿಡ್ಜನಲ್ಲಿಟ್ಟ ತಂಪು ಪಾನಿಯಗಳು, ಇನ್ನಿತರ ರೆಡಿಮೇಡ್ ಪಾನಿಯಗಳು ಬೇಡ. ನಮ್ಮ ಆಹಾರದಲ್ಲಿ ಧನಾತ್ಮಕ ಆಹಾರ ಅಂದರೆ ಹೆಚ್ಚು ಹೆಚ್ಚು ಪ್ರಕೃತಿದತ್ತ ಹಣ್ಣು, ತರಕಾರಿ ಸೇವನೆ ಇರಲಿ.
- ದಿನದಲ್ಲಿ ಕನಿಷ್ಟ 3-4 ಲೀಟರ್ ನೀರು ಸೇವನೆ ಅಗತ್ಯ. ಯಾಕೆಂದರೆ 7 ಮೀಟರ್ ಉದ್ದದ ಜೀರ್ಣಾಂಗ ವ್ಯೂಹದ ಶುದ್ಧತೆಗಾಗಿ ಕನಿಷ್ಠ 4 ಲೀಟರ್ ನೀರು ಅಗತ್ಯ. ರಾತ್ರಿ 7 ಗಂಟೆಗೆ ನೀರು ಕುಡಿಯುವುದನ್ನು ನಿಲ್ಲಿಸಿ, ಇಲ್ಲವಾದಲ್ಲಿ ಪದೇ-ಪದೇ ನಿದ್ರಾ ಭಂಗವಾಗುತ್ತದೆ.
- ನೀರು ಆಹಾರಕ್ಕಿಂತ ನಮಗೆ ಹೆಚ್ಚು ಶಕ್ತಿ ಸಿಗುವುದು ಉಸಿರಾಡುವ ಗಾಳಿಯಿಂದ (ಶೇ.54ರಷ್ಟು). ಆದ್ದರಿಂದ ದೀರ್ಘವಾಗಿ ಉಸಿರಾಡಲು ಪ್ರಯತ್ನಿಸಿ.
- ಲಂಘನಂ ಪರಮೌಷಧಂ ಎಂದರೆ ಅನೇಕ ರೋಗಗಳಿಗೆ ಉಪವಾಸವೇ ಮದ್ದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚಾಗಿ ತಿನ್ನದೇ, ಅಗಾಗ ವ್ರತಾಚರಣೆಯ ರೂಪದಲ್ಲಿ ಉಪವಾಸಗಳನ್ನು ಮಾಡೋಣ.
- ಕಷ್ಟಪಟ್ಟು ಬೆವರು ಸುರುಸುವಿಕೆ ಇಂದು ಮಾಯವಾಗಿದೆ. ಎಲ್ಲವೂ ಕೇವಲ ಎರಡು ಬೆರಳಿನಿಂದ ನಿಯಂತ್ರಿಸಲ್ಪಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಕನಿಷ್ಟ 1 ಗಂಟೆಗಳ ಕಾಲ ವಾಕಿಂಗ್, ಸ್ವಿಮ್ಮಿಂಗ್, ಜಾಗಿಂಗ್, ಯೋಗ, ಡ್ಯಾನ್ಸಿಂಗ್ ಇತ್ಯಾದಿಗಳನ್ನು ಮಾಡಬೇಕು. ಎಲ್ಲರೂ ಒಟ್ಟಿಗೆ ಸೇರಿ ಸ್ನೇಹಿತರೊಂದಿಗೆ ಮಾಡುವ ವ್ಯಾಯಾಮ ಅಥವಾ ಯೋಗಾಭ್ಯಾಸಗಳನ್ನು ಹೆಚ್ಚು ದಿನ ಮುಂದುವರೆಸಬಹುದು.
- ಮಧ್ಯಪಾನ, ಧೂಮಪಾನ ಇನ್ನಿತರ ದುಶ್ಚಟಗಳಿಂದ ದೂರವಿರಿ.
- ಧನಾತ್ಮಕ ಚಿಂತನೆಯಿಂದ, ಪರೋಪಕಾರದಿಂದ, ಅಧ್ಯಾತ್ಮಿಕ ಚಿಂತನೆಗಳಿಂದ, ಸಜ್ಜನರ ಸಂಗದಿಂದ, ಮನಸ್ಸು ಸಂತುಲತೆಯಿಂದಿದ್ದಾಗ ಆರೋಗ್ಯ ಸುಧಾರಿಸುವುದು.
ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನ್ನ ಹೊತ್ತುಕೊಂಡು ಹೋಗಿ ಎನ್ನುತ್ತದೆ ನಮ್ಮ ಆರೋಗ್ಯ ಶಾಸ್ತ್ರ. ಹಾಗಾಗಿ ನಾವು ಆಯ್ದುಕೊಂಡ ಜೀವನ ಅಪೇಕ್ಷಿಸುವುದನ್ನು ನಾವು ಕೈಗೊಳ್ಳಬಹುದಾದರೆ ಅದೇ ಆರೋಗ್ಯ. ಆದರೆ ಇಂದಿನ ಕಲಿಯುಗದಲ್ಲಿ ನಾವು ಮನುಷ್ಯರು ಮಾತ್ರ ಬೇರೆ ಜೀವಿಗಳಿಗಿಂತ ಭಿನ್ನವಾಗಿ ಪ್ರಕೃತಿಗೆ ವಿರುದ್ಧವಾಗಿ ಜೀವಿಸುತ್ತಿದ್ದೇವೆ. ಇದೇ ನಮ್ಮ ಅನಾರೋಗ್ಯದ ಗುಟ್ಟು. ಆದ್ದರಿಂದ ನಾವು ಪರಿಸರವನ್ನು ಪೋಷಿಸಿ ಪ್ರಕೃತಿನಿಯಮಗಳಿಗನುಗುಣವಾಗಿ ಜೀವನ ನಡೆಸಿ ಒಳ್ಳೆಯ ಗಾಳಿ, ಒಳ್ಳೆಯ ನೀರು, ಒಳ್ಳೆಯ ಆಹಾರ ಇವುಗಳನ್ನು ಪಡೆದು ಉತ್ತಮ ದೈಹಿಕ ಚಟುವಟಿಕೆಯೊಂದಿಗೆ ಧನಾತ್ಮಕ ಚಿಂತನೆಯನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಪಡೆಯೋಣ.
ಏನಂತೀರೀ?
ನಿಮ್ಮವನೇ ಉಮಾಸುತ
ಬೇಸಿಗೆ ಕಾಲದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳನ್ನು ಅರ್ಥಪೂರ್ಣವಾಗಿ ವಿವರಿಸಿದ್ದೀರಿ. ಧನ್ಯವಾದಗಳು.
ಎಸ್.ದ್ವಾರಕಾನಾಥ್
LikeLiked by 1 person