ಲಾಕ್ಷಾಗೃಹ ಮತ್ತು ಕೂರೋನಾ ಲಾಕ್ ಡೌನ್

ಮಹಾಭಾರತದಲ್ಲಿ ಪಂಚ ಪಾಂಡವರಿಗೂ ಮತ್ತು ಕೌರವರಿಗೂ ಅಧಿಕಾರಕ್ಕಾಗಿ ದಾಯಾದಿ ಕಲಹ ಇದ್ದದ್ದು ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಕೌರವರ ರಾಜ ದುರ್ಯೋಧನ ಯಾವ ಬಗೆಯಲ್ಲಾದರೂ ಪಾಂಡವರನ್ನು ನಾಶ ಮಾಡಲು ಒಂದಲ್ಲಾ ಒಂದು ಯೋಜನೆಗಳನ್ನು ಹಾಕುತ್ತಾ, ಕಡೆಗೆ ಕುಂತಿಯಾದಿಯಾಗಿ ಇಡೀ ಪಾಂಡವರನ್ನೇ ಹತ್ಯೆ ಮಾಡಲು ನಿರ್ಧರಿಸಿ ವಾರಣಾವತ ಎಂಬಲ್ಲಿ ಅರಗಿನ ಅರಮನೆಯೊಂದನ್ನು ನಿರ್ಮಿಸಿ ಪಾಂಡವರನ್ನು ಅಲ್ಲಿರಿಸಿ ಯಾರಿಗೂ ತಿಳಿಯದಂತೆ ಆ ಅರಗಿನ ಅರಮನೆಗೆ ಬೆಂಕಿ ಹಚ್ಚಿ , ಪಂಚ ಪಾಂಡವರನ್ನು ಒಮ್ಮೆಲೆಯೇ ನಾಶ ಮಾಡುವ ಉಪಾಯ ಹೂಡಿದನು. ಕೌರವರ ಆಸ್ಥಾನದಲ್ಲಿ ಮಹಾ ಮಂತ್ರಿಯಾಗಿದ್ದ ಮಹಾತ್ಮಾ ವಿಧುರನಿಗೆ ಪಾಂಡವರ ನಾಶಕ್ಕಾಗಿ ದುರ್ಯೋಧನನು ಮಾಡುವ ಎಲ್ಲಾ ಕುಟಿಲತೆಯನ್ನೂ ತನ್ನ ತನ್ನ ಗುಪ್ತಚರರಿಂದ ತಿಳಿದುಕೊಳ್ಳುವಂತಹ ವ್ಯವಸ್ಥೆಯನ್ನು ಮಾಡಿಕೊಂಡ ಪರಿಣಾಮ ಈ ವಿಷಯವೂ ತಿಳಿಯುವಂತಾಯಿತು. ರಾಜನ ಆಜ್ಞೆಯ ವಿರುದ್ಧ ಹೋಗುವುದು ರಾಜಧರ್ಮವಲ್ಲವಾದರೂ ಧರ್ಮಿಷ್ಟರಾದ ಪಾಂಡವರನ್ನೂ ಸಹಾ ರಕ್ಷಿಸಬೇಕೆಂದು ಆಸೆ ವಿಧುರನಿಗಿರುತ್ತದೆ. ಹಾಗಾಗಿ ದುರ್ಯೋಧನ ಒಂದು ಬಗೆದರೆ ಅದಕ್ಕೆ ತದ್ವಿರುದ್ಧವಾಗಿ ಅವನಿಗೇ ತಿಳಿಯಂತೆ ಪಾಂಡವರನ್ನು ಉಳಿಸುವ ಯೋಜನೆಯನ್ನು ಸಹಾ ವಿಧುರನು ತನ್ನ ಸಹಚರರ ಮೂಲಕ ಮಾಡಿಸಿರುತ್ತಾನೆ.

ಕೌರವರ ಆಹ್ವಾನದ ಮೇರೆಗೆ ಕುಂತೀ ಸಮೇತ ಪಾಂಡವರು ಕೌರವನ ವಾರಣಾವತ ಆಸ್ಥಾನಕ್ಕೆ ಬಂದು ಅಲ್ಲಿಯೇ ಇದ್ದ ಮಹಾಮಂತ್ರಿ ವಿಧುರನ ಆಶೀರ್ವಾದ ಪಡೆಯುತ್ತಾರೆ. ಆ ಸಂಧರ್ಭದಲ್ಲಿ ವಿಧುರನು ಧರ್ಮರಾಯನನ್ನು ಕುರಿತು ಒಂದು ಪ್ರಶ್ನೆ ಕೇಳುತ್ತಾನೆ. ಯುಧಿಷ್ಟಿರಾ, ಒಂದು ವೇಳೆ ಕಾಡಿನಲ್ಲಿ ಭಯಾನಕ ಕಾಡ್ಗಿಚ್ಚು ಉಂಟಾದಲ್ಲಿ, ಯಾವ ಯಾವ ಪ್ರಾಣಿ ಸುರಕ್ಷಿತವಾಗಿ ಉಳಿಯ ಬಹುದು? ಆಗ ಧರ್ಮರಾಯನು ಕಿಂಚಿತ್ತೂ ವಿಚಲಿತನಾಗದೇ, ಶಾಂತಚಿತ್ತದಿಂದ, ಕಾಡ್ಗಿಚ್ಚು ಹತ್ತಿಕೊಂಡಾಗ ಸ್ವಚ್ಛಂದವಾಗಿ, ನಿರ್ಭಯದಿಂದ ಸಂಚರಿಸುವ, ಸಿಂಹ, ಹುಲಿ, ಚಿರತೆ, ಆನೆ ಮತ್ತು ಎಲ್ಲಕ್ಕಿಂತ ವೇಗವಾಗಿ ಓಡುವ ಜಿಂಕೆಗಳು ಬೆಂಕಿಯಿಂದ ಸುಟ್ಟು ಕರಕಲಾಗುತ್ತವೆ. ಆದರೆ ಬಿಲದಲ್ಲಿರುವ ಸಣ್ಣ ಸಣ್ಣ ಪ್ರಾಣಿಗಳು ಬದುಕಿ ಉಳಿಯುತ್ತದೆ ಎಂದು ತಿಳಿಸುತ್ತಾನೆ. ಯುಧಿಷ್ಟಿರನ ಉತ್ತರದಿಂದ ಆಶ್ವರ್ಯ ಚಕಿತನಾಗಿ ಅದು ಹೇಗೆ ಯುಧಿಷ್ಟಿರಾ ಎಂದು ಕೇಳಿದಾಗ, ಕಾಳ್ಗಿಚ್ಚು ಹತ್ತಿಕೊಂಡಾಗ ವೇಗವಾಗಿ ಓಡುವ ಪ್ರಾಣಿಗಳು ದಿಕ್ಕಾಪಾಲಾಗಿ ಅತ್ತಿಂದಿತ್ತ ಓಡಾಡುತ್ತಲೇ ಯಾವ ಕಡೆ ಹೋಗುವುದೆಂದು ತಿಳಿಯದೆ ಬೆಂಕಿಯ ಕೆನ್ನಾಲಿಗೆ ಬಲಿಯಾಗುತ್ತವೆ. ಇನ್ನೂ ಹಲವಾರು ಸಣ್ಣ ಪ್ರಾಣಿಗಳು ದೊಡ್ಡ ದೊಡ್ಡ ಪ್ರಾಣಿಗಳ ಕಾಲ್ತುಳಿತಕ್ಕೆ ಸಿಕ್ಕಿಕೊಂಡೇ ಸತ್ತು ಹೋಗುತ್ತವೆ. ಆದರೆ ಬಿಲದಲ್ಲಿ ಅಡಗಿ ಕೊಳ್ಳುವ ಪ್ರಾಣಿಗಳು ಮಾತ್ರಾ, ಕಾಳ್ಗಿಚ್ಚು ಹತ್ತಿಕೊಂಡಾಗ ಬಿಲ ಸೇರಿಕೊಂಡು, ಬೆಂಕಿ ಪೂರ್ತೀ ನಂದಿದ ನಂತರವೇ ಬಿಲದಿಂದ ಹೊರ ಬಂದು ಸರಾಗವಾಗಿ ಜೀವನ ಸಾಗಿಸುತ್ತದೆ ಎಂದು ತಿಳಿಸುತ್ತಾನೆ. ಧರ್ಮರಾಯನ ಉತ್ತರದಿಂದ ಸಂತೃಪ್ತನಾದ ವಿಧುರನು ಕ್ಶೇಮವಾಗಿ ಹೋಗಿ ಲಾಭವಾಗಿ ಬನ್ನಿ ಎಂದು ಆಶೀರ್ವದಿಸಿ, ಭೀಮಸೇನನನ್ನು ಗುಟ್ಟಾಗಿ ಪಕ್ಕಕ್ಕೆ ಕರೆದುಕೊಂಡು ಹೋಗಿ ಲಾಕ್ಷಾ ಗೃಹದಲ್ಲಿ ಅಕಸ್ಮಾತ್ ಅವಘಡವೇನಾದರೂ ಸಂಭವಿಸಿದಲ್ಲಿ ಅರಮನೆಯಲ್ಲಿರುವ ಗುಪ್ತವಾದ ಸುರಂಗದಿಂದ ತಪ್ಪಿಸಿಕೊಂಡು ಕೆಲಕಾಲ ಹೊರಗೆಲ್ಲೂ ಕಾಣಿಸಿಕೊಳ್ಳದೇ ಜೀವವನ್ನು ಉಳಿಸಿಕೊಂಡು ಪರಿಸ್ಥಿತಿ ತಿಳಿಯಾದ ಮೇಲೆ ಕಾಣಿಸಿಕೊಳ್ಳಬೇಕೆಂದು ಸೂಚಿಸುತ್ತಾನೆ.

cor3

ಸದ್ಯದ ಪರಿಸ್ಥಿತಿಯಲ್ಲಿ ಇಡೀ ವಿಶ್ವವನ್ನೇ ಕಾಡುತ್ತಿರುವ ಕೂರೋನ ಎಂಬ ಮಹಾಮಾರಿಯೂ ಸಹಾ ಒಂದು ರೀತಿಯಲ್ಲಿ ಲಾಕ್ಷಾಗೃಹಕ್ಕೆ ತಗುಲಿರುವ ಭಯಂಕರ ಅಗ್ನಿಯಂತಿದೆ. ಯಾರು ಮನೆಯಿಂದ ಹೊರಬರಲು ಪ್ರಯತ್ನ ಮಾಡಲು ಪ್ರಯತ್ನಿಸುತ್ತಾರೋ ಅವರು ಬೆಂಕಿಗೆ ಆಹುತಿಯಾಗುವಂತೆ ಕೂರೋನಾಗೆ ಆಹುತಿಯಾಗಿ ಜೀವವನ್ನು ಕಳೆದು ಕೊಳ್ಳುತ್ತಾರೆ. ಯಾರು ಬುದ್ಧಿವಂತಿಯಿಂದ ತಾಳ್ಮೆ ವಹಿಸಿ ಗುರು ಹಿರಿಯರ ಮಾತನ್ನು ಕೇಳಿ, ತಮ್ಮ ತಮ್ಮ ಮನೆಗಳೆಂಬ ಸುರಂಗಲ್ಲಿ ಅಡಗಿ ಕುಳಿತು ಕೊಳ್ಳುತ್ತಾರೋ ಅವರು ಸುರಕ್ಷಿತವಾಗರುತ್ತಾರೆ ಮತ್ತು ಅಗ್ನಿಯಾಹುತ ಕಡಿಮೆಯಾದ ಮೇಲೆ ನೆಮ್ಮದಿಯಾಗಿ ಹೊರಬಂದು ಜೀವನ ನಡೆಸುತ್ತಾರೆ.

ದ್ವಾಪರ ಯುಗದಲ್ಲಿ ಮಹಾಮಂತ್ರಿಯಾಗಿದ್ದ ವಿಧುರ ತೋರಿಸಿದ ಸುರಂಗ ಮಾರ್ಗದ ರೀತಿಯನ್ನೇ, ಈ ಕಲಿಯುಗದಲ್ಲಿ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲಿರಿ ಎಂದು ಸೂಚಿಸಿದ್ದಾರೆ. ವಿಧುರನ ಮಾತನ್ನು ಕೇಳಿದ ಪಾಂಡವರು ಅವಘಡದಿಂದ ಪಾರಾಗುತ್ತಾರೆ. ವಿಧುರನ ಮಾತನ್ನು ಎಂದೂ ಕೇಳದ ಕೌರವರು ಕುರುಕ್ಷೇತ್ರದಲ್ಲಿ ಅಂತಿಮವಾಗಿ ನಾಶವಾಗುತ್ತಾರೆ.

ಪ್ರಧಾನ ಮಂತ್ರಿಗಳ ಮಾತನ್ನು ಕೇಳಿ ಸುರಕ್ಷಿತವಾಗಿ ಮನೆಯಲ್ಲಿದ್ದುಕೊಂಡು ಪರಿಸ್ಥಿತಿ ತಿಳಿಯಾದ ಮೇಲೆ ಹೊರಬರುವುದೋ, ಇಲ್ಲವೇ ಆತುರಾತುರವಾಗಿ ಮನೆಯಿಂದ ಹೋರಬಂದು ಪ್ರಾಣವನ್ನು ಕಳೆದುಕೊಳ್ಳುವುದೋ? ಎಂಬ ತೀರ್ಮಾನ ನಮ್ಮ ಕೈಯಲ್ಲಿಯೇ ಇದೆ.

ನಾವು ಎಷ್ಟು ವರ್ಷಾ ಜೀವಿಸ್ತೀವೀ ಅನ್ನೋದು ಮುಖ್ಯವಲ್ಲಾ. ಆ ಜೀವನವನ್ನು ಹೇಗೆ ಅನುಭವಿಸ್ತೀವೀ ಅನ್ನೋದೇ ಮುಖ್ಯ. ಹಾಗಾಗಿ, ಜೀವ ನಮ್ಮದೇ , ಜೀವನ ಶೈಲಿಯ ಆಯ್ಕೆಯೂ ನಮ್ಮಲ್ಲಿಯೇ ಇದೇ !!

ಏನಂತೀರೀ?

ವಾಟ್ಸಾಪ್ ನಲ್ಲಿ ಗೆಳೆಯನೊಬ್ಬ ಕಳುಹಿಸಿದ್ದ ಚಿಕ್ಕ ಸಂದೇಶದಿಂದ ಪ್ರೇರಿತನಾಗಿ ಬರೆದ ಲೇಖನ.

One thought on “ಲಾಕ್ಷಾಗೃಹ ಮತ್ತು ಕೂರೋನಾ ಲಾಕ್ ಡೌನ್

  1. ಸಕಾಲಿಕ ಲೇಖನ, ಮಹಾಭಾರತದ ಪ್ರತಿಯೊಂದು ಪಾತ್ರಗಳು, ಸನ್ನಿವೇಶಗಳು ಅಪೂರ್ವ. ಪಾಂಡವರಿಗೆ ಪರಮಾತ್ಮನ ಸ್ನೇಹದ ಆ‌ಸರೆ , ಮಹಾತ್ಮರಾದ ಭೀಷ್ಮ,ದ್ರೋಣ,ವಿದುರಾದಿಗಳ ಮಾರ್ಗದರ್ಶನ ಮತ್ತು ಸ್ವಸಾಮರ್ಥ್ಯ ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗಿತ್ತು. ಮಹಾಭಾರತದ ಈ ಪ್ರಸಂಗವನ್ನು ಪ್ರಸ್ತುತ ಪ್ರತಿಕೂಲ ಪರಿಸ್ಥಿತಿಗೆ ಸಮನ್ವಯಿಸಿ ಲಾಕ್ ಡೌನ್ ಮಹತ್ವ ಮತ್ತು ಔಚಿತ್ಯವನ್ನು ಲೇಖನ ತಿಳಿಸಿದೆ. ೧೨೦ ಕೋಟಿ ಮನಸ್ಸುಗಳ ಶೃತಿ ಲಯಗಳು ಒಮ್ಮತದಿಂದ ಮಿಡಿದರೆ ಈ ಹೋರಾಟದಲ್ಲಿ ಯಶಸ್ಸು ಕಾಣುವಲ್ಲಿ ಸಂಶಯವೇ ಇಲ್ಲ.

    Like

Leave a reply to Narahari Cancel reply