ರಾಣಿ ಅಬ್ಬಕ್ಕ ಚೌಟ

ಕನ್ನಡನಾಡಿನ ವೀರ ವನಿತೆಯರು ಎಂದಾಕ್ಷಣ ಥಟ್  ಅಂತ ನಮ್ಮ ಮನಸ್ಸಿಗೆ ಬರುವುದೇ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ. ಇವರಷ್ಟೇ ಶಕ್ತಿಶಾಲಿಯಾದ   ಮತ್ತೊಬ್ಬ ವೀರ ಮಹಿಳೆಯ ಹೆಸರೇ ರಾಣಿ ಅಬ್ಬಕ್ಕ ಚೌಟ. ಅನೇಕರಿಗೆ ಆಕೆಯ ಪರಿಚಯವೇ ಇಲ್ಲದೇ ಹೋಗಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ಅಬ್ಬಕ್ಕ ರಾಣಿ, ಅಬ್ಬಕ್ಕ ಮಹಾದೇವಿ ಇಲ್ಲವೇ ರಾಣಿ ಅಬ್ಬಕ್ಕ ಚೌಟ ತುಳುನಾಡಿನ ದೇವಾಲಯಗಳ ನಗರಿ ಎಂದೇ ಖ್ಯಾತವಾಗಿರುವ  ಮೂಡುಬಿದಿರೆಯ ಪ್ರದೇಶ ವನ್ನಾಳಿದ ಜೈನ ಮತದ  ಚೌಟ ವಂಶಕ್ಕೆ ಸೇರಿದವಳು. ಬಂದರು ನಗರಿ ಉಳ್ಳಾಲವು ಅವರ  ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು 16ನೇ ಶತಮಾನದಲ್ಲಿ   ಪೋರ್ಚುಗೀಸರು ನಾನಾರೀತಿಯ ಹೋರಾಟಗಳನ್ನು ನಡೆಸಿದರಾದರೂ  ರಾಣಿ ಅಬ್ಬಕ್ಕಳ ಸಾಹಸದಿಂದಾಗಿ  ಅವರ ಪ್ರಯತ್ನ ಸುಮಾರು  ನಾಲ್ಕು ದಶಕಗಳ ಕಾಲ ಸಫಲವಾಗಿರಲೇ ಇಲ್ಲ. ಇಂತಹ ಧೈರ್ಯ ಮತ್ತು ಸ್ಥೈರ್ಯಕ್ಕೆ ಹೆಸರಾಗಿದ್ದ ಅಬ್ಬಕ್ಕ ವಸಾಹಶಾಹಿಗಳ ವಿರುದ್ಧ ಹೋರಾಡಿದ ಮೊತ್ತ  ಮೊದಲ  ಭಾರತೀಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದೇ ಹೇಳಬಹುದಾಗಿದೆ.

ab6ಬಹುತೇಕ  ಕರಾವಳಿಯ ಸಂಪ್ರದಾಯದಂತೀ  ಚೌಟ ವಂಶಸ್ಥರೂ ಸಹಾ ಅಳಿಯ ಸಂತಾನವನ್ನು  ಅನುಸರಿಸರಿಸುವ ಕಾರಣ ಅಬ್ಬಕ್ಕನ ಮಾವ ಶ್ರೀ ತಿರುಮಲರಾಯರು   ಅಬ್ಬಕ್ಕಳಿಗೆ ಸಕಲ ಯುದ್ಧತಂತ್ರಗಳನ್ನೂ ಮತ್ತು ಸೈನಿಕ ಕೌಶಲ್ಯಗಳನ್ನೂ ಹೇಳಿಕೊಟ್ಟಿದ್ದಲ್ಲದೇ ಆಕೆಗೆ  ರಾಣಿಯ ಪಟ್ಟಕಟ್ಟಿದ.  ವಿವಾಹ ವಯಸ್ಕಳಾದ ಮೇಲೆ  ಮಂಗಳೂರಿನ ಪ್ರಭಲ ಅರಸನಾಗಿದ್ದ ಲಕ್ಷ್ಮಪ್ಪ ಅರಸನೊಂದಿಗೆ ಆಕೆಯ  ವಿವಾಹವನ್ನೂ ಸಕಲ ವೈಭವದಿಂದ ನೆರವೇರಿಸಿದರಾದರೂ ಆಕೆಯ  ವಿವಾಹವು ಸಂಬಂಧ ಬಹಳ ಕಾಲ ಉಳಿಯದೆ  ಅಬ್ಬಕ್ಕ ಪುನಃ  ಉಳ್ಳಾಲಕ್ಕೆ ಹಿಂತಿರುಗಿದಳು.  ಈ ರೀತಿಯಾಗಿ ಪತಿಯನ್ನು ಪರಿತ್ಯಜಿಸಿ ಬಂದದ್ದೇ ಮುಂದೆ ಅಕೆಗೆ ಮುಳುವಾಯಿತು ಎನ್ನುವುದು ಈಗ ಇತಿಹಾಸ.

15 ನೇ ಶತಮಾನದಲ್ಲಿ ಕೇರಳದ  ಮೂಲಕ ಭಾರತಕ್ಕೆ ಆಗಮಿಸಿದ ಪೋರ್ಚುಗೀಸರು ಕ್ರಮೇಣ ಅಕ್ಕ ಪಕ್ಕದ ಭೂಭಾಗಗಳನ್ನು ಒಂದೊಂದಾಗಿ  ಆಕ್ರಮಿಸಿಕೊಳ್ಳುವುದರಲ್ಲಿ ಸಫಲರಾದರು. ಗೋವಾವನ್ನು ಆಕ್ರಮಿಸಿಕೊಂಡ ಗೋವಾ ಗೋಳಿನ ಕಥೆ ವ್ಯಥೆ ಭಾಗ-1 ನಂತರ ಅವರ ಗಮನ ಕರ್ನಾಟಕದ ಕರಾವಳಿಯತ್ತ ತಿರುಗಿ,1525 ರಲ್ಲಿ ದಕ್ಷಿಣ  ಕನ್ನಡದ  ಕರಾವಳಿಯ ಮೇಲೆ ದಾಳಿ ಮಾಡಿ ಮಂಗಳೂರು ಬಂದರನ್ನು ನಾಶಪಡಿಸಿದರು.  ಆ ಸಮಯದಲ್ಲಾಗಲೇ ಉಲ್ಲಾಳದ ನೈಸರ್ಗಿಕವಾದ  ಸಮೃದ್ಧ ಬಂದರು ಮತ್ತು ಪಶ್ಚಿಮಕ್ಕೆ ಅರೇಬಿಯಾ ಮತ್ತು ಇತರ ದೇಶಗಳಿಗೆ ಮಸಾಲೆ ವ್ಯಾಪಾರದ ಕೇಂದ್ರವಾಗಿತ್ತು. ಅದು ಲಾಭದಾಯಕ ವ್ಯಾಪಾರ ಕೇಂದ್ರವಾಗಿದ್ದರಿಂದ , ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು ಈ ಪ್ರದೇಶದ ನಿಯಂತ್ರಣಕ್ಕಾಗಿ ಮತ್ತು ವ್ಯಾಪಾರ ಮಾರ್ಗಗಳಿಗಾಗಿ ಪರಸ್ಪರ ತಮ್ಮಲ್ಲಿಯೇ  ಪೈಪೋಟಿ ನಡೆಸುತ್ತಿದ್ದರೂ, ಸ್ಥಳೀಯವಾಗಿ ರಾಣಿ ಅಬ್ಬಕ್ಕ ಪ್ರಭಲವಾಗಿದ್ದರಿಂದ ಅದು ಸಫಲವಾದೇ  ಅವರೆಲ್ಲರೂ ಅಬ್ಬಕ್ಕನ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಸಮಯ ಸಾಧಿಸುತ್ತಿದ್ದರು.

ರಾಣಿ ಅಬ್ಬಕ್ಕ  ಸ್ವತಃ  ಜೈನ ವಂಶಸ್ಥಳಾದರೂ ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ಸೌಹಾರ್ಧಯುತವಾಗಿ ಮತ್ತು ಸಮಾನವಾಗಿ ಕಾಣುತ್ತಾ ಅವರವರ ಶಕ್ತಿ  ಸಾಮರ್ಥ್ಯಕ್ಕೆ ತಕ್ಕಂತೆ  ಆಡಳಿತದಲ್ಲಿ ಅವರನ್ನು ಬಳಸಿಕೊಳ್ಳುತ್ತಾ ಎಲ್ಲರ ಮನಗೆದ್ದಿದ್ದಳು. ಆಕೆಯ ಸೈನ್ಯದಲ್ಲಿ ಎಲ್ಲಾ ಪಂಗಡಗಳು ಮತ್ತು ಜಾತಿಗಳ ಜನರಿಗೂ ಅವಕಾಶ ನೀಡಿದ್ದಳು.  ಹಾಗಾಗಿ ಎಲ್ಲರೂ ಆಕೆಯನ್ನು ಬಹಳವಾಗಿ ಇಷ್ಟ ಪಡುತ್ತಿದ್ದಲ್ಲದೇ ಆಕೆಗಾಗಿ ಪ್ರಾಣವನ್ನೂ ಕೊಡುವಷ್ಟರ ಮಟ್ಟಿಗಿನ ನಿಷ್ಟೆಯನ್ನು  ಹೊಂದಿದ್ದರು. ರಾಜತಾಂತ್ರಿಕ ಸಂಬಧವಾಗಿ  ಕ್ಯಾಲಿಕಟ್ ಮೊ ನ ಜಮೋರಿನ್ ನ ಜೊತೆ ಮೈತ್ರಿ ಮಾಡಿಕೊಂಡಿದ್ದಲ್ಲದೇ, ನೆರೆಯ ಬಂಗಾ ರಾಜವಂಶದೊಂದಿಗಿನ ವೈವಾಹಿಕ ಸಂಬಂಧವನ್ನು ಬೆಳೆಸಿದ್ದಲ್ಲದೇ,   ಬಿಂದೂರ್ ನ ಪ್ರಬಲ ರಾಜ ವೆಂಕಟಪ್ಪನಾಯಕರ ಬೆಂಬಲವನ್ನೂ  ಪಡೆದ ನಂತರ  ಸ್ಥಳೀಯ ಆಡಳಿತಗಾರರ ಮೈತ್ರಿಗೆ ಮತ್ತಷ್ಟು ಬಲವನ್ನು ನೀಡಿದ್ದಳು. ಹೀಗಾಗಿ ಪೋರ್ಚುಗೀಸ್ ಪಡೆಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದಳು.

1555 ರಲ್ಲಿ ಪ್ರಭಲ ಪೋರ್ಚುಗೀಸರು  ಅವರು ಕ್ಯಾಲಿಕಟ್‌ನ ಮೊ ನ ಜಮೊರಿನ್‌ಗಳನ್ನು ನಾಶಪಡಿಸಿದ್ದಲ್ಲದೇ,  ಬಿಜಾಪುರದ ಸುಲ್ತಾನನನ್ನು ಸೋಲಿಸಿದರು. ಗುಜರಾತ್‌ನ ಸುಲ್ತಾನನಿಂದ ದಮನ್‌ನನ್ನು ವಶಪಡಿಸಿಕೊಂಡಿದ್ದಲ್ಲದೇ, ಮೈಲಾಪುರದಲ್ಲಿ ವಸಾಹತು ಸ್ಥಾಪಿಸಿ, ಬಾಂಬೆಯನ್ನು ವಶಪಡಿಸಿಕೊಂಡರು. ಅದೇ ಸಮಯದಲ್ಲಿ  ಗೋವಾವನ್ನು  ಅವರ ಪ್ರಧಾನ ಕಛೇರಿಯನ್ನಾಗಿ ಮಾಡಿಕೊಂಡು ಹಿಂದೂಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡುವ ಉಮೇದಿಗೆ ಕೈಹಾಕಿದ್ದರು ಅದರ ಭಾಗವಾಗಿಯೇ  ಅವರು ಪ್ರಾಚೀನ ಕಪಲೀಶ್ವರ ದೇವಾಲಯವನ್ನು ಹಾಳುಮಾಡಿದ್ದಲ್ಲದೇ ಅದೇ ಜಾಗದಲ್ಲಿ ಚರ್ಚ್ ಕೂಡಾ ನಿರ್ಮಿಸಿ ಅಟ್ಟಹಾಸವನ್ನು ಮೆರೆದಿದ್ದರು.

ಇಷ್ಟೆಲ್ಲಾ ಸಾಧಿಸಿದ್ದರೂ ಅವರಿಗೆ ಸಮುದ್ರ ಮಾರ್ಗದ  ವ್ಯಾಪಾರ ವಹಿವಾಟುಗಳ ಪ್ರಮುಖ ಕೇಂದ್ರವಾಗಿದ್ದ ಮಂಗಳೂರು ಮತ್ತು ಉಲ್ಲಾಳ ಅವರ ಕೈವಶವಾಗದಿದ್ದದ್ದು  ಅವರ ಮನಸ್ಸಿನಲ್ಲಿ ಕ್ರೋಧವನ್ನು ಉಂಟು ಮಾಡಿತ್ತು. ಹಾಗಾಗಿ  ಮಂಗಳೂರಿನಿಂದ ದಕ್ಷಿಣಕ್ಕೆ ಕೇವಲ 14 ಕಿಲೋಮೀಟರ್ ದೂರದಲ್ಲಿರುವ ರಾಣಿ ಅಬ್ಬಕ್ಕನ ಆಡಳಿತದಲ್ಲಿದ್ದ  ಉಲ್ಲಾ‌ಳದ ಬಂದರನ್ನು ವಶಪಡಿಸಿಕೊಳ್ಳಲು ನಿರ್ಧರಿಸಿ, ಒಂದು 30 ವರ್ಷದ ಹೆಂಗಸು ಅದೇನು ಮಾಡಬಲ್ಲಳು ಎಂದು ಅಬ್ಬಕ್ಕನನ್ನು  ಲಘುವಾಗಿ ಪರಿಗಣಿಸಿ ಕೆಲವು ದೋಣಿಗಳನ್ನು ಮತ್ತು ಸೈನಿಕರನ್ನು ಕಳುಹಿಸಿ ಆಕೆಯನ್ನು   ಸೆರೆ ಹಿಡಿದು ಗೋವಾಕ್ಕೆ ಕರೆ ತರಲು ಕಳುಹಿಸಿದರಾದರೂ, ಅವರು ಕಳುಹಿಸಿದ ಆ ದೋಣಿಗಳು ಮತ್ತೆಂದೂ ಗೋವಾಕ್ಕೆ ಹಿಂತಿರುಗಲಿಲ್ಲ ಎನ್ನುವುದು ಸತ್ಯ.

ಎಷ್ಟು ದಿನಗಳಾದರೂ  ತಮ್ಮ ಸೈನಿಕರು ಮರಳಿ ಬಾರದಿದ್ದರಿಂದ  ಆಘಾತಕ್ಕೊಳಗಾದ  ಪೋರ್ಚುಗೀಸರು, ಮತ್ತಷ್ಟು  ಕೋಪದಿಂದ  ಈ ಬಾರಿ ಹೆಚ್ಚು ಪ್ರಸಿದ್ಧವಾದ ಅಡ್ಮಿರಲ್ ಡೊಮ್ ಅಲ್ವಾರೊ ಡಾ ಸಿಲ್ವೀರಾ ಅವರ ನೇತೃತ್ವದಲ್ಲಿ ಒಂದು ದೊಡ್ಡ ಹಡಗುಗಳನ್ನು ಕಳುಹಿಸಿದರಾದರೂ ಅಬ್ಬಕ್ಕನ ಮುಂದೆ  ಅಡ್ಮಿರಲ್ ಸಿಲ್ವಿರಾ ಆಟವೇನೂ ನಡೆಯದೇ, ರಕ್ತ ಸಿಕ್ತ ಗಾಯಗಳೊಂದಿಗೆ  ಖಾಲಿ ಕೈಯಿಂದ ಹಿಂದಿರುಗಿದ್ದನ್ನು ಗಮನಿಸಿ. ಮತ್ತೊಂದು ಪೋರ್ಚುಗೀಸ್ ನೌಕಾಪಡೆಯನ್ನು ಕಳುಹಿಸಿದರೂ ಅವರೂ ಸಹಾ ಸೋತು ಸುಣ್ಣವಾಗಿ  ಪ್ರಾಣ ಭಯದಿಂದ ಗಾಯಗೊಂಡ ಕೆಲವರು ಮಾತ್ರ  ಗೋವಾಗೆ ಹಿಂದಿರುಗಿದ್ದದ್ದನು ಗಮನಿಸಿದ ಪೋರ್ಚುಗೀಸರು, ಉಲ್ಲಾಳದ ಬದಲಾಗಿ , ಮಂಗಳೂರಿನ ಬಂದರಿನತ್ತ ತಮ್ಮ ಗಮನಹರಿಸಿ  ಮಂಗಳೂರು ಬಂದರು ಮತ್ತು ಕೋಟೆಯನ್ನು  ಜೊನೊ ಪೀಕ್ಸೊಟೊ ನೇತೃತ್ವದ ಬೃಹತ್ ಸೈನ್ಯದ ಸಹಾಯದಿಂದ  ಯಶಸ್ವಿಯಾಗಿ  ವಶಪಡಿಸಿಕೊಂಡು ಸ್ಥಳಿಯವಾಗಿ ಅಲ್ಲಿಂದಲೇ  ರಾಣಿ ಅಬ್ಬಕ್ಕಳನ್ನು ಮಣಿಸಲು ಯೋಜನೆ ಹಾಕಿಕೊಂಡರು.

ab4ಕೆಲ ದಿನಗಳ ನಂತರ ಒಬ್ಬ ಅನುಭವಿ ಪೋರ್ಚುಗೀಸ್  ಜನರಲ್ ಜೊನೊ ಪೀಕ್ಸೊ  ನೇತೃತ್ವದಲ್ಲಿ ಒಂದು ದೊಡ್ಡ ಸೈನ್ಯವನ್ನು  ಉಲ್ಲಾಳಿಗೆ ಕಳುಹಿಸಿ ರಾಣಿ  ಅಬ್ಬಕ್ಕ ಚೌಟಳನ್ನು ಜೀವಂತವಾಗಿ ಸೇರೆಹಿಡಿದು ತರಲು ಆಜ್ಞಾಪಿಸಿದರು. ಅಷ್ಟು ದೊಡ್ಡ ಸುಧಾರಿತ ಶಸ್ತ್ರಾಸ್ತ್ರಗಳೊಂದಿಗೆ ಸಾವಿರಾರು ಸೈನಿಕರ ಶಕ್ತಿಯನ್ನು  ರಾಣಿ ಅಬ್ಬಕ್ಕನ ಸಣ್ಣ ಸೈನ್ಯಕ್ಕೆ ಸಾಧ್ಯವಿರಲಿಲ್ಲ. ಹಾಗಾಗಿ  ಪೋರ್ಚುಗೀಸರು ಉಲ್ಲಾಳ್  ತಲುಪಿದಾಗ ಇಡೀ ಪ್ರದೇಶ  ನಿರ್ಜನವಾಗಿತ್ತು. ಎಲ್ಲಿ ನೋಡಿದರೂ ರಾಣಿ ಅಬ್ಬಕ್ಕಳಾಗಲೀ ಆಕೆಯ ಸೈನ್ಯವಾಗಲೀ ಕಾಣಲೇ ಇಲ್ಲ.  ಇದನ್ನು ನೋಡಿದ ಪೋರ್ಚುಗೀಸರ ಜನರಲ್ ಬಹುಶಃ ತಮ್ಮ ಸೈನ್ಯದ ಬಲಕ್ಕೆ ಹೆದರಿ ರಾಣಿ ಅಬ್ಬಕ್ಕ ಓಡಿ ಹೋಗಿರಬಹುದೆಂದು ಎಣಿಸಿ ಅಲ್ಲಿಯೇ ಆ ರಾತ್ರಿ ಸಂತೋಷದಿಂದ ನಿರಾಯಾಸವಾಗಿ ಉಲ್ಲಾಳನ್ನು ವಶಪಡಿಸಿಕೊಂಡ ಸಂಭ್ರವನ್ನು ಆಚರಿಸಿ ಧಣಿವಾರಿಕೊಳ್ಳಲು ನಿದ್ರೆಗೆ ಜಾರಿ ಹೋಗಿದ್ದರು.

ಇದೇ ಸಮಯಕ್ಕಾಗಿ ಕಾಯುತ್ತಿದ್ದ ರಾಣಿ ಅಬ್ಬಕ್ಕ ತನ್ನ  200 ಶಕ್ತಿಶಾಲಿ  ಸೈನಿಕರೊಂದಿಗೆ ಏಕಾಏಕಿ ಪೋರ್ಚುಗೀಸರ ಮೇಲೆ  ದಾಳಿ ಮಾಡಿ ಪೋರ್ಚುಗೀಸರ   ಜನರಲ್ ಜೊನೊ ಪೀಕ್ಸೊಟೊ ಮತ್ತವನ ಸೈನಿಕರ ರುಂಡಗಳನ್ನು ಚೆಂಡಾಡಿದ್ದಲ್ಲದೇ  70ಕ್ಕೂ ಅಧಿಕ ಪೋರ್ಚುಗೀಸರನ್ನು ಸೆರೆಹಿಡಿಯಲಾಯಿತು ಮತ್ತು ಉಳಿದವರು ಪ್ರಾಣ ಭಯದಿಂದ ದಿಕ್ಕಾಪಾಲಾಗಿ ಓಡಿಹೋದರು.

ಈ ರೀತಿಯಾಗಿ ಚಾಣಾಕ್ಷತನದಿಂದ ಹೆಚ್ಚಿನ ಹೋರಾಟವಿಲ್ಲದೇ ಯುದ್ದ ಜಯಿಸಿದ್ದನ್ನು ಸಂಭ್ರಮಿಸಿದೇ, ಕೂಡಲೇ ಆ ನಡು ರಾತ್ರಿಯಲ್ಲಿಯೇ  ಅದೇ ತನ್ನ ನಂಬಿಕಸ್ಥ ಸೈನಿಕರೊಂದಿಗೆ ಮಂಗಳೂರಿನ  ಕೋಟೆಗೆ ಮುತ್ತಿಗೆ ಹಾಕಿ, ಕೇವಲ ಕೋಟೆಯನ್ನು  ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಲ್ಲದೇ ಅಲ್ಲಿದ್ದ  ಪೋರ್ಚುಗೀಸ್ ಅಧಿಕಾರದ ಮುಖ್ಯಸ್ಥ ಅಡ್ಮಿರಲ್ ಮಸ್ಕರೇನ್ಹಸ್ನನ್ನು ಹತ್ಯೆ ಮಾಡಿ ಅಳಿದುಳಿದಿದ್ದ ಪೋರ್ಚುಗೀಸರನ್ನು  ಗಡಿಪಾರು ಮಾಡಿ ಮಂಗಳೂರಿನ ಕೋಟೆಯ ಮೇಲೆ ತನ್ನ ಪ್ರಾಭಲ್ಯವನ್ನು ಮೆರೆದಳು. ನಂತರದ ದಿನಗಳಲ್ಲಿ  ಮಂಗಳೂರಿನ ಉತ್ತರಕ್ಕೆ 100 ಕಿ.ಮೀ ದೂರದಲ್ಲಿರುವ ಕುಂದಾಪುರದಲ್ಲಿದ್ದ ಪೋರ್ಚುಗೀಸರ ವಸಾಹತುವನ್ನೂ  ವಶಪಡಿಸಿಕೊಂಡು ಪೋರ್ಚುಗೀಸರಿಗೆ ಬಾರೀ ರೀತಿಯಲ್ಲಿ  ಕಾಡಿದಳು.

ಯುದ್ದದಲ್ಲಿ ಶೌರ್ಯದಿಂದ ಹೋರಾಡಿ ಅಬ್ಬಕ್ಕನನ್ನು ಗೆಲ್ಲಲಾಗದ ಪೋರ್ಚುಗೀಸರು ಅಂತಿಮವಾಗಿ, ಶತ್ರುವಿನ ಶತ್ರು ಮಿತ್ರ ಎನ್ನುವ  ದಾಳ ಬಳೆಸಿ ಆಕೆಯಿಂದ ಪರಿತ್ಯಕ್ತನಾಗಿದ್ದ ಆಕೆಯ ಗಂಡ ಮಂಗಳೂರಿನ ಅರಸನಾಗಿದ್ದ ಲಕ್ಷ್ಮಪ್ಪ ಅರಸನೊಂದಿಗೆ ಸ್ನೇಹ ಬೆಳೆಸಿ, ರಾಣಿ ಅಬ್ಬಕ್ಕನನ್ನು ಸೋಲಿಸಲು ಸಹಾಯ ಮಾಡಲು ಕೋರಿದರು.   ತನ್ನ ಪತ್ನಿಯ ವಿರುದ್ಧ ವಯಕ್ತಿಕ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ದೇಶದ ಹಿತದೃಷ್ಟಿಯನ್ನೂ ಬದಿಗೊತ್ತಿ ಕೇವಲ ಹಣದಾಸೆಗಾಗಿ ಪೋರ್ಚುಗೀಸರ ಪರ ಸೇರಿಕೊಂಡ ಪರಿಣಾಮ ಮೋಸದಿಂದ ರಾಣಿ ಅಬ್ಬಕ್ಕನನ್ನು ಸೆರೆ ಹಿಡಿಯಲು ಸಫಲರದರು. ಸೆರೆಮನೆಯಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ಯೋಚಿಸಿದ ರಾಣಿ ಅಲ್ಲಿಯೂ ದಂಗೆ  ಎಬ್ಬಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಪೋರ್ಚಿಗೀಸರ ಸೈನಿಕರಿಂದ  ಕೊಲ್ಲಲ್ಪಡುವ ಕಾರಣದಿಂದಾಗಿ ಒಬ್ಬ ವೀರ ,  ಧೀರ, ವನಿತೆಯ  ನಮ್ಮವರೇ ಮಾಡಿದ ದೇಶದ್ರೋಹದ ಕೆಲಸದಿಂದಾಗಿ ಅವಸಾನವಾಗಿ ಹೋಗಿದ್ದು ನಿಜಕ್ಕೂ  ಅಸಹನೀಯವೇ ಸರಿ.

ab21857ರ ಪ್ರಥಮ  ಸ್ವಾತಂತ್ರ್ಯ ಸಂಗ್ರಾಮಕ್ಕೂ  300 ವರ್ಷಗಳ ಮೊದಲೇ ಸ್ವಾತಂತ್ರ್ಯದ  ವೀರ ಕಹಳೆಯನ್ನು ಊದಿದ್ದ ಅಬ್ಬಕ್ಕಳ ಕುರಿತು ನಮ್ಮ  ಇಂದಿನ ಯುವ ಜನತೆಗೆ ಅರಿವೇ ಇಲ್ಲದಿರುವುದು ನಿಜಕ್ಕೂ ಸೋಜಿಗ ಎಂದರೆ ತಪ್ಪಾಗಲಾರದು.  ಸರ್ಕಾರ ಬಿಡಿ ಜನ ಸಾಮಾನ್ಯರೂ  ಕೂಡಾ ಆಕೆಯನ್ನು ಸಂಪೂರ್ಣವಾಗಿ ಮರೆತ ಕಾರಣ ಅಬ್ಬಕ್ಕನ ಹೆಸರನ್ನು  ಇಂದಿನ ಯಾವ  ಹುಡುಗಿಯರ ಹೆಸರಾಗಿಯೂ ನೋಡಲೇ ಇಲ್ಲ ಮತ್ತು ಅವಳ ಸಾಹಸ  ಕಥೆಗಳನ್ನು ನಮ್ಮ ಮಕ್ಕಳಿಗೆ  ಹೇಳಲೇ ಇಲ್ಲ.

ab_ship

ab1ಅಂತಿಮವಾಗಿ  ಜನವರಿ 15, 2003  ರಂದು ಭಾರತ  ಸರ್ಕಾರವು ಆಕೆಯ ಹೆಸರಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಲ್ಲದೇ, ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನಿರ್ಮಿಸಲಾದ ಐದು ಕಡಲಾಚೆಯ ಗಸ್ತು ಹಡಗುಗಳ ಸರಣಿಯಲ್ಲಿ 1 ನೇ ಭಾರತೀಯ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ಸಿಗೆ   ರಾಣಿ ಅಬ್ಬಕ್ಕ  ಮಹಾದೇವಿ ಎಂದು  ಹೆಸರಿಡಲಾಗಿದೆ ಮತ್ತು ಅಲ್ಲಲ್ಲಿ ಒಂದೆರಡು ಕಡೆ  ಪ್ರತಿಮೆಗಳನ್ನು ನಿರ್ಮಿಸಲಾಗಿದೆಯಷ್ಟೇ.  ನಮ್ಮ ಮಕ್ಕಳ ಪಠ್ಯ  ಪುಸ್ತಕಗಳಲ್ಲಿ ಯಾರ್ಯಾರೋ ನಾಲಾಯಕರುಗಳನ್ನು  ದೇಶಭಕ್ತರು ಮತ್ತು  ಸ್ವಾತಂತ್ಯ ಹೋರಾಟಗಾರರು ಎಂದು ತುಂಬುವ ಬದಲು ರಾಣಿ ಅಬ್ಬಕ್ಕ , ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಒನಕೆ ಓಬವ್ವಳಂತಹ ವೀರ ಮಹಿಳೆಯರ ಪರಿಚಯ ಮಾಡಿಕೊಡುವ ಮೂಲಕ ನಮ್ಮ ಮುಂದಿನ ಪೀಳಿಗೆಗಳಿಗೆ ಧೈರ್ಯ ಮತ್ತು ಸ್ಥೈರ್ಯವನ್ನು ತುಂಬಬಹುದಲ್ಲವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s