ರಾಮ್ ಪ್ರಸಾದ್ ಬಿಸ್ಮಿಲ್

ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ| ದೇಖನಾ ಹೈ ಜೋರ ಕಿತನಾ ಬಾಜೂ ಯೆ ಕಾತಿಲ್ ಮೆ ಹೈ || ಶಿರವನರ್ಪಿಸುವ ಬಯಕೆ ಎನ್ನ ಮನದೊಳಿಹುದಿಂದು, ವೈರಿ ತೋಳ್ಬಲವ ಪರೀಕ್ಷಿಸಬೇಕೆಂದು ಎಂಬ ಅರ್ಥ ಬರುವ ಈ ಕ್ರಾಂತಿಕಾರಿ ಕವಿತೆ ಸ್ವಾತಂತ್ರ್ಯ ಪೂರ್ವದಲ್ಲಿ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರ ಕ್ರಾಂತಿಯನ್ನು ಬಡಿದೆಚ್ಚರಿಸಿದ ಸಾಲುಗಳು. ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರುಗಳು ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿದ್ದಾಗ ಬಹಳ ಇಷ್ಟ ಪಟ್ಟು ಹಾಡುತ್ತಿದ್ದದ್ದೇ ಇದೇ ಹಾಡು. ಇಂತಹ ಬೆಂಕಿಯಂಥ ಸಾಲುಗಳ ಕವಿತೆಯನ್ನು ರಚಿಸಿ ಬ್ರಿಟಿಷರ ಎದೆ ನಡುಗಿಸಿದವರೇ, ಶ್ರೀ ರಾಮ್ ಪ್ರಸಾದ್ ಬಿಸ್ಮಿಲ್.

ಉತ್ತರ ಪ್ರದೇಶದ ಶಹಜಹಾನಪುರದಲ್ಲಿ ನೆಲೆಸಿದ್ದ ಮಾಲಾಧರ ಹಾಗು ಮೂಲಮತಿ ದಂಪತಿಗಳಿಗೆ ಜೂನ್ 11, 1897ರಂದು ರಾಮ ಪ್ರಸಾದ್ ಬಿಸ್ಮಿಲ್ ಅವರು ಜನಿಸಿದರು. ಅವರ ತಂದೆಯವರಿಂದ ಹಿಂದಿ ಮತ್ತು ಬಂಗಾಳಿ ಭಾಷೆಯನ್ನು ಕಲಿತ ನಂತರ ಸ್ಥಳೀಯ ಮೌಲ್ವಿಯೊಬ್ಬರ ಬಳಿ ಉರ್ದು ಕಲಿತರು ಮತ್ತು ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಕಲಿಯುವುದರ ಮೂಲಕ ಆ ಮೂರೂ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದುಕೊಂಡರು. ತಂದೆಯವರ ವಿರೋಧದ ಹೊರತಾಗಿಯೂ ಅಂದಿನ ಯುವಕರಂತೆ ಬಿಸ್ಮಿಲ್ಲರೂ ಸಹಾ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವ ನಿರ್ಧಾರ ಮಾಡಿ ಅದಕ್ಕೆ ಆರ್ಯ ಸಮಾಜದ ಹಾದಿಯನ್ನು ತುಳಿದರು.ಅಲ್ಲಿ ಅವರು ತಮ್ಮ ಕವಿತೆಗಳ ಮುಖಾಂತರ ಯುವಕರುಗಳಲ್ಲಿ ಜಾಗೃತಿ ಮೂಡಿಸ ತೊಡಗಿದರು. ರಾಮ್, ಆಗ್ಯತ್, ಮತ್ತು ಬಿಸ್ಮಿಲ್ ಎಂಬ ಕಾವ್ಯನಾಮಗಳಲ್ಲಿ ದೇಶಭಕ್ತಿಯ ಗೀತೆಗಳನ್ನು ರಚಿಸುತ್ತಿದ್ದರಿಂದ ರಾಮ್ ಪ್ರಸಾದ್ ಎಂಬ ಅವರ ಹೆಸರಿನ ಜೊತೆ ಬಿಸ್ಮಿಲ್ ಕೂಡಾ ಸೇರಿಕೊಂಡಿತು.

ಬಿಸ್ಮಿಲ್ಲ ಅವರಿಗೆ ಆರ್ಯ ಸಮಾಜವನ್ನು ಪರಿಚಯಿಸಿದ್ದ ಹರ್ ದಯಾಲ ಅವರ ಮಿತ್ರರಾಗಿದ್ದ ಭಾಯೀ ಪರಮಾನಂದ ಅವರಿಗೆ ಬ್ರಿಟಿಷ್ ಸರ್ಕಾರ ಮರಣ ದಂಡನೆಯನ್ನು ವಿಧಿಸಿದ್ದನ್ನು ವಿರೋಧಿಸಿ ಮೆರಾ ಜನಮ್ ಎಂಬ ಪದ್ಯವನ್ನು ರಚಿಸಿ ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲೇ ಬೇಕು ಎಂದು ನಿಶ್ಚಯಿಸಿ ಮೈತ್ರಿ ವೇದಿ ಎಂಬ ಕ್ರಾಂತ್ರಿಕಾರಿ ಸಂಸ್ಥೆಯನ್ನು ಸ್ಥಾಪಿಸಿದರು. ಅವರ ಜೊತೆ ಔರೈ ಎಂಬ ಊರಿನ ಶಾಲಾ ಶಿಕ್ಷಕರಾದ ಪಂಡಿತ್ ಗೇಂಡಾ ಲಾಲ್ ದೀಕ್ಷಿತ್ ಜೊತೆಗೂಡಿ ಸ್ವದೇಶಾಭಿಮಾನವನ್ನು ಹುಟ್ಟಿಸುವ ಒಂದು ಯುವಕರ ಸಂಘಟನೆಯನ್ನು ಪ್ರಾರಂಭಿಸಿದರು. ದೀಕ್ಷಿತ್ ಅವರಿಗೆ ಸ್ಥಳೀಯ ಡಾಕೂಗಳ ಸಂರ್ಪಕವಿದ್ದ ಕಾರಣ ಅವರನ್ನೂ ಈ ಸಂಘಟನೆಗೆ ಸೇರಿಸಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಬೇಕೆಂಬ ಬಯಕೆ ಅವರದ್ದಾಗಿತ್ತು. ಇವರಿಬ್ಬರು ಸೇರಿ ಸುತ್ತಮುತ್ತಲಿನ ಪ್ರದೇಶಗಳಾದ ಎತವಃ, ಮೈನ್ಪುರಿ, ಆಗ್ರ, ಷಹಜಹಾನ್ಪುರದಿಂದ ಹುಡುಗರನ್ನು ಒಟ್ಟುಗೂಡಿಸಿ ತಮ್ಮ ಸಂಸ್ಠೆಯನ್ನು ಮತ್ತಷ್ಟೂ ಬಲಪಡಿಸಿದರು, ೨೮ ಜನವರಿ 1918ರಂದು ಬಿಸ್ಮಿಲರು, ದೇಶವಾಸಿಯೋಂ ಕೆ ನಾಮ್ ಸಂದೇಶ್ ಎಂಬ ಕರಪತ್ರವನ್ನು ಬರೆದು, ಅದರಲ್ಲಿ ಅವರ ಒಂದು ಕವಿತೆ, ಮೈನ್ಪುರ್ ಕಿ ಪ್ರತಿಜ್ಞಾವನ್ನು ರಚಿಸಿ ಅನೇಕ ಪ್ರದೇಶಗಳಿಗೆ ಹಂಚಿದರು. ಇಷ್ಟೆಲ್ಲಾ ಉಗ್ರ ಚಟುವಟಿಕೆಗಳನ್ನು ನಡೆಸಲು ಅವರಿಗೆ ಹಣದ ಅವಶ್ಯಕತೆ ಇದ್ದ ಕರಣ 1918ರಲ್ಲಿ ಮಣಿಪುರಿಯಲ್ಲಿ ಸರ್ಕಾರಿ ಖಜಾನೆಯೂ ಸೇರಿದಂತೆ ಮತ್ತೆರಡು ಸರ್ಕಾರಿ ಕಛೇರಿಗಳನ್ನು ಲೂಟಿಯನ್ನು ಮಾಡಿದ ಪರಿಣಾಮ ಬಿಸ್ಮಿಲ್ಲ ಮತ್ತವರ ಸಂಗಡಿಗರನ್ನು ಮೈನ್ಪುರದ ಪೊಲೀಸರು ಹುಡುಕುತ್ತಿದ್ದರು. ಅದೊಮ್ಮೆ ದೆಹಲಿ ಹಾಗು ಆಗ್ರ ನಡುವೆ ಮತ್ತೊಂದು ಲೂಟಿ ಮಾಡಬೇಕೆಂಬ ಯೋಜನೆ ಮಾಡುತ್ತಿರುವ ಸಮಯಕ್ಕೆ ಪೊಲೀಸರು ಆಗಮಿಸಿ ಗುಂಡಿನ ಸುರಿಮಳೆ ಗೈದಾಗ ಪೋಲೀಸರಿಂದ ತಪ್ಪಿಸಿಕೊಳ್ಳಲು ಬಿಸ್ಮಿಲ್ ಅವರು ಯಮುನಾ ನದಿಯಲ್ಲಿ ದುಮುಕಿದ್ದನ್ನು ಕಂಡು ಎಲ್ಲರೂ ಬಿಸ್ಮಿಲ್ಲರು ಮೃತಪಟ್ಟಿರಬಹುದೇಂದೆ ನಂಬಿದ್ದರು ಆದರೆ ಬಿಸ್ಮಿಲ್ಲರು ತಮ್ಮ ಶಕ್ತಿ ಸಾಮರ್ಥ್ಯದಿಂದ ಯಮುನೆಯನ್ನು ಈಜಿ ತಪ್ಪಿಸಿಕೊಂಡಿದ್ದರು. ಅದಾದ ಕೆಲ ದಿನಗಳ ನಂತರ ಆಗ್ರ ಕೋಟೆಯಲ್ಲಿ ಪೋಲೀಸರಿಂದ ಬಂಧಿತರಾದರೂ ಅಲ್ಲಿಂದ ಮತ್ತೊಮ್ಮೆ ತಪ್ಪಿಸಿಕೊಂಡು ದೆಹಲಿಯಲ್ಲಿ ಅಡಗಿಕೊಂಡರು. ಪೋಲೀಸರು ಈ ಪ್ರಕರಣವನ್ನು ಮೈನ್ಪುರಿ ಪಿತೂರಿ ಎಂದು ಕರೆದು ಅವರ ವಿರುದ್ಧ ಮೈನ್ಪುರದ ನಾಯಾಂಗದಲ್ಲಿ ತನಿಖೆ ನಡೆದು ನವೆಂಬರ್ 11, 1919ರಂದು ನ್ಯಾಯಾದೀಶರಾದ ಬಿ. ಎಸ್. ಕ್ರಿಸ್ ಅವರು ಆರೋಪಿಗಳ ವಿರುದ್ಧ ಕಠಿಣ ತೀರ್ಮಾನವನ್ನು ನೀಡದ್ದರು. ಇನ್ನು ಯಾವುದೇ ಕ್ರಾಂತಿಕಾರಿ ಸಂಘಟನೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆಸಿಕೊಂಡು 1920ರಲ್ಲಿ ಬಿಸ್ಮಿಲ್ಲರನ್ನು ನ್ಯಾಯಾಲಯ ಬಿಡುಗಡೆ ಮಾಡಿತು.

ಆದರೆ 1921ರಲ್ಲಿ ಬಿಸ್ಮಿಲ್ಲರು ತಮ ಷಹಜಾಹಾನ್ಪುರದಲ್ಲಿ ಯುವಕರನ್ನು ಸಂಘಟಿಸಿ ಉಗ್ರ ಭಾಷಣದ ಮೂಲಕ ಯುವಕರುನ್ನು ಬ್ರಿಟೀಶರ ಬ್ರಿಟೀಷರ ವಿರುದ್ಧ ಪ್ರತಿಭಟನೆಗೆ ಎತ್ತಿಕಟ್ಟಿದರಲ್ಲದೇ ಮಹಾತ್ಮಾಗಾಂಧಿಯವರ ಅಹಿಂಸಾ ಮಾರ್ಗದಲ್ಲಿ ಸ್ವರಾಜ್ಯವನ್ನು ನಾವು ಎಂದಿಗೂ ಪಡೆಯಲು ಸಾದ್ಯವಿಲ್ಲ ಎಂಬ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಿದರು.

1922ರ ಫೆಬ್ರವರಿಯಲ್ಲಿ, ಚೌರಿ ಚೌರಾ ಎಂಬಲ್ಲಿ ನಡೆಯುತ್ತಿದ್ದ ಅಸಹಕಾರ ಹೋರಾಟದಲ್ಲಿ ಕೆಲ ರೈತರು ಪೋಲಿಸರಿಂದ ಹತ್ಯೆಗೀಡಾದರು. ಇದಕ್ಕೆ ಪ್ರತೀಕರವಾಗಿ ಆ ರೈತರು ರೊಚ್ಚಿಗೆದ್ದು ಆ ಪೋಲೀಸ್ ಠಾಣೆಗೆ ಬೆಂಕಿ ಹಚ್ಚಿದಾಗ ಸುಮಾರು 22 ಪೊಲೀಸ್ ಅಧಿಕಾರಿಗಳು ಜೀವಂತವಾಗಿ ಸುಟ್ಟುಹೋಗ್ಗಿದ್ದನ್ನು ಕಂಡ ಗಾಂಧೀಜಿ, ಏಕಾಏಕಾಕಿ ಬ್ರಿಟೀಷರ ವಿರುದ್ಧ ತಮ್ಮ ಅಸಹಕಾರ ಚಳುವಳಿಯನ್ನು ಹಿಂಪಡೆದದ್ದನ್ನು, ಗಯಾದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಿಸ್ಮಿಲ್ಲ ಮತ್ತು ಕೆಲ ಬಿಸಿ ರಕ್ತದ ಯುವಕರು ವಿರೋಧಿಸಿದರೂ ಗಾಂಧಿಯವರ ನಿರ್ಧಾರ ಅಚಲವಾಗಿದ್ದದ್ದನ್ನು ಕಂಡು, ನೊಂದ ಅಂದಿನ ಕಾಂಗ್ರೆಸ್ ಅದ್ಯಕ್ಷರಾದ ಚಿತ್ತರಂಜನ್ ದಾಸ್ ರಾಜಿನಾಮೆ ನೀಡಿದರು. ಗಾಂಧೀಯವರ ನಿರ್ಧಾರದಿಂದ ಬೇಸತ್ತ ಬಿಸ್ಮಿಲ್ಲರೂ ಕಾಂಗ್ರೇಸ್ ತೊರೆದರು.

ಮುಂದೆ ಬಿಸ್ಮಿಲ್ಲರು ಸಚಿಂದ್ರನಾಥ್ ಸನ್ಯಾಲ್ ಹಾಗು ಬಾಂಗ್ಲ ಕ್ರಾಂತಿಕಾರ ಡಾ. ಜದುಗೊಪಾಲ್ ಚಟರ್ಜಿಯವರ ಸಹಾಯದಿಂದ 1923ರಲ್ಲಿ ಪಕ್ಷವೊಂದನ್ನು ಸಂಘಟಿಸಿ, ಒಂದು ಹಳದಿ ಹಾಳೆಯ ಮೇಲೆ ಆ ಪಕ್ಷದ ಮುಖ್ಯ ಉದ್ದೇಶಗಳನ್ನು ಬರೆದು ಸಚಿಂದ್ರ ನಾಥ್ ಅವರ ಅಧ್ಯಕ್ಷತೆಯಲ್ಲಿ ಮೊದಲನೆಯ ಸಭೆಯನ್ನು ಅಕ್ಟೋಬರ್ 3, 1924 ರಂದು, ಕಾನ್ಪುರದಲ್ಲಿ ನಡೆಸಿದ್ದಲ್ಲದೇ,ತಮ್ಮ ಪಕ್ಷದ ಹೆಸರನ್ನು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್‌ಆರ್‌ಎ) ಎಂದು ನಿರ್ಧರಿಸಿದರು. ಬಿಸ್ಮಿಲ್ ಅವರು ಹೊಸಾ ಪಕ್ಷದ ಜಿಲ್ಲಾ ಸಂಘಟಕ ಮತ್ತು ಶಸ್ತ್ರಾಸ್ತ್ರ ವಿಭಾಗದ ಮುಖ್ಯಸ್ಥರಾದರು.ಸನ್ಯಾಲ್ ಮತ್ತು ಚಟರ್ಜಿ ಇಬ್ಬರೂ ಕ್ರಮವಾಗಿ ಉತ್ತರ ಪ್ರದೇಶ ಮತ್ತು ಬಂಗಾಳದಲ್ಲಿ ಪಕ್ಷದ ಜವಾಬ್ಧಾರಿಯನ್ನು ನೀಡಲಾಯಿತು.

1928 ರಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ಲರೊಂದಿಗೆ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮುಂತಾದ ಕ್ರಾಂತಿಕಾರಿಗಳು ಸೇರಿಕೊಂಡ ನಂತರವಂತೂ ಅವರ ಚಟುವಟಿಕೆ ಮತ್ತಷ್ಟೂ ತೀವ್ರವಾಯಿತು. ಉತ್ತರ ಪ್ರದೇಶದ ಲಖನೌ ಬಳಿಯ ಕಾಕೋರಿ ಎಂಬ ಪ್ರದೇಶದಲ್ಲಿ ರೈಲಿನಲ್ಲಿ ಸಾಗಿಸುತ್ತಿದ್ದ ಸರ್ಕಾರಿ ಖಜಾನೆಯನ್ನು ಲೂಟಿ ಮಾಡುವ ಯೋಜನೆಯನ್ನು ಬಿಸ್ಮಿಲ್ಲರು ಮತ್ತವರ ತಂಡ ಹಾಕಿಕೊಂಡಿತು. 9 ಆಗಸ್ಟ್ 1925 ರಂದು ಲಕ್ನೋ ರೈಲ್ವೆ ಜಂಕ್ಷನ್ನಿನ ಹಿಂದಿನ ನಿಲ್ದಾಣವಾದ ಕಾಕೋರಿಯಲ್ಲಿ ಸಹಾರನ್‌ಪುರ-ಲಕ್ನೋ ಪ್ಯಾಸೆಂಜರ್ ರೈಲನ್ನು ಹತ್ತು ಕ್ರಾಂತಿಕಾರಿಗಳು ತಡೆದು ನಿಲ್ಲಿಸಿ ಸರ್ಕಾರಿ ಖಜಾನೆಯನ್ನು ಸದ್ದಿಲ್ಲದೆ ಲೂಟಿ ಮಾಡಿದರು. ಈ ಪ್ರಕ್ರಿಯೆಯಲ್ಲಿ ಅಕಸ್ಮಾತ್ತಾಗಿ ಮನ್ಮತ್ ನಾಥ್ ಗುಪ್ತಾ ಅವರ ಪಿಸ್ತೂಲ್‌ನಿಂದ ಸಿಡಿದ ಗುಂಡು ಲೇಡೀಸ್ ಕಂಪಾರ್ಟ್‌ಮೆಂಟ್‌ನಲ್ಲಿ ತನ್ನ ಹೆಂಡತಿಯನ್ನು ನೋಡಲು ರೈಲಿನಿಂದ ಇಳಿದಿದ್ದ ಪ್ರಯಾಣಿಕ ಅಹ್ಮದ್ ಅಲಿಗೆ ತಾಕಿ ಸ್ಥಳದಲ್ಲೇ ಮೃತಪಟ್ಟರು ಪೋಲೀಸರು ಇದನ್ನು ಕಾಕೋರೀ ಪ್ರಕರಣ ಎಂದು ಕರೆದು ಆರೋಪಿಗಳನ್ನು ಬಂಧಿಸಲು ಹರಸಾಹಸ ಪಡುತ್ತಿದ್ದರು.

ಅದೊಂದು ದುರ್ದಿನ ಬ್ರಿಟಿಷ್ ಸರ್ಕಾರವು ರಾಮ್ ಪ್ರಸಾದರನ್ನು ಮುಂಜಾನೆಯ ಹೊತ್ತಲ್ಲಿ ಸಂಚು ಹೂಡಿ ಹುಲಿಯನ್ನು ಬಲೆಯಲ್ಲಿ ಹಿಡಿವಂತೆ ಅವರ ಸ್ವಗೃಹದಲ್ಲೇ ಬಂಧಿಸಿಬಿಟ್ಟಿತು ಮತ್ತು ಸುಮಾರು 18 ತಿಂಗಳುಗಳ ಕಾಲಾ ಕಾಟಾಚಾರದ ವಿಚಾರಣೆ ನಡೆಸಿ ಮರಣದಂಡನೆಯನ್ನು ವಿಧಿಸಿಬಿಟ್ಟರು. ಸೆರೆಮನೆಯಲ್ಲಿದ್ದ ಬಿಸ್ಮಿಲ್ಲರನ್ನು ನೋಡಲು ಅವರ ತಾಯಿಯವರು ಬಂದಿದ್ದಾಗ, ತಾಯಿಯವರನ್ನು ಕಂಡ ಬಿಸ್ಮಿಲ್ಲರು ಗಳಗಳನೆ ಅತ್ತರಂತೆ. ಇದನ್ನು ನೋಡಿದ ಅವರ ತಾಯಿಗೆ ಬೇಸರವಾಗಿ, ಕಂದಾ, ಸಾವಿಗೆ ಇಷ್ಟೊಂದು ಅಂಜುವವನಾಗಿದ್ದರೆ ಈ ಮಾರ್ಗವನ್ನೇಕೇ ಆರಿಸಿಕೊಂಡೇ ಎಂದು ಕೇಳಿದಾಗ, ಕೊಂಚ ಸಾವರಿಸಿಕೊಂಡ ಬಿಸ್ಮಿಲ್ಲರು ಅಮ್ಮಾ ಇವು ಸಾವಿನ ಬೆದರಿಕೆಯಿಂದ ತೊಟ್ಟಿಕ್ಕಿದ ಹನಿಗಳಲ್ಲಮ್ಮಾ. ಇದು ಒಬ್ಬ ಮಾತೃಭಕ್ತ ಪುತ್ರ ತನ್ನ ತಾಯಿಯ ದರ್ಶನವನ್ನು ಕಟ್ಟಕಡೆಯ ಸಲ ಪಡೆಯುವಾಗ ಅವನ ಪರಿಶುದ್ಧ ಪ್ರೀತಿಯ ಪ್ರತೀಕವಾದ ಕೊನೆಯ ಅಶ್ರುಬಿಂದುಗಳು ಎಂದಾಗ ಮಗನ ಆ ಮಾತುಗಳನ್ನು ಕೇಳಿದ ತಾಯಿ ಬಾಯಿಯಿಂದ ಮಾತೇ ಹೊರಡಲಿಲ್ಲವಂತೆ. ನಂತರ ಸೆರೆಮನೆಯಲ್ಲಿರುವಾಗಲೇ ಬಿಸ್ಮಿಲ್ಲರು ಬರೆದಿದ್ದ ತಮ್ಮ ಆತ್ಮಚರಿತ್ರೆಯನ್ನು ಗುಪ್ತವಾಗಿ ತಮ್ಮ ತಾಯಿಗೆ ಕೊಟ್ಟಿದ್ದ ಪರಿಣಾಮ, ಒಬ್ಬ ನಿಜ ದೇಶಭಕ್ತನ ಸಾರ್ಥಕ ಜೀವನ ನಡೆಸಿದುದರ ಕುರಿತ ಉತ್ತಮ ದಾಖಲೆ ನಮಗೆ ಪರಿಚಯವಾಗುವಂತಾಗಿದೆ.

ಬಿಸ್ಮಿಲ್ಲ ಅವರನ್ನು 1927 ರ ಡಿಸೆಂಬರ್ 19 ರಂದು ಗೋರಖ್‌ಪುರ್ ಜೈಲಿನಲ್ಲಿ ಗಲ್ಲಿಗೇರಿಸುವ ಒಂದೆರಡು ಗಂಟೆಗಳ ಮುನ್ನ ಅವರಿಗೆ ಕುಡಿಯಲು ಪೋಲೀಸರು ಒಂದು ಲೋಟ ಹಾಲು ಕೊಟ್ಟಾಗ, ಅದನ್ನು ರೋಷದಿಂದಲೇ ತಿರಸ್ಕರಿಸಿದ ಬಿಸ್ಮಿಲ್ಲರು, ಹೂಂ! ಇನ್ನು ಕೆಲವೇ ಗಂಟೆಗಳಲ್ಲಿ ನನ್ನ ಮಾತೃ ದೇವಿಯ ಎದೆ ಹಾಲನ್ನೇ ಕುಡಿಯಲು ಹೊರಟಿರುವ ನನಗೇಕೇ ಈಗ ಈ ಹಾಲು ಕೊಡುತ್ತಿದ್ದೀರೀ? ಎಂದಿದ್ದರಂತೆ. ಬಿಸ್ಮಿಲ್ಲರ ಮೃತ ದೇಹವನ್ನು ಹಿಂದೂ ದಹನದ ಪ್ರಕಾರ ರಪ್ತಿ ನದಿಯಲ್ಲಿ ವಿಸರ್ಜಿಸಲಾಯಿತು. ಈಗ ಆ ಸ್ಥಳವನ್ನು ರಾಜ್ ಘಾಟ್ ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯಾ ನಂತರ ಸರ್ಕಾರ ರಾಮ್ ಪ್ರಸಾದ್ ಬಿಸ್ಮಿಲ್ಲರ ನೆನಪಿನಲ್ಲಿ ಒಂದು ಉದ್ಯಾನವನ ಮತ್ತು ರೈಲು ನಿಲ್ದಾಣವನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸುವ ಮೂಲಕ ಗೌರವಿಸಲಾಗಿದೆ.

ram2

ರಾಮ್ ಪ್ರಸಾದ್ ಬಿಸ್ಮಿಲ್ಲ ಎಂದಾಕ್ಷಣ ಒಬ್ಬ ದೇಶಪ್ರೇಮಿ, ಉತ್ತಮ ಕವಿ, ಕ್ರಾಂತಿಕಾರಿ ಅಷ್ಟೇ ಅಲ್ಲದ್ದೇ, ಜಾತೀ ಮತ್ತು ಧರ್ಮದ ಹೊರತಾಗಿ ಆರ್ಯಸಮಾಜದ ಕಟ್ಟಾ ಅನುಯಾಯಿ ಹಾಗೂ ದೇಶಪ್ರೇಮಿಯಾಗಿದ್ದ ಅವರ ಆಪ್ತಮಿತ್ರ ಅಶ್ಫಾಕುಲ್ಲಾಖಾನ್ ಅವರ ಜೊತೆಗಿನ ಅಪೂರ್ವ ಗೆಳೆತನ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ಅಶ್ಫಾಕುಲ್ಲಾಖಾನ್ ಅವರನ್ನೂ ಸಹಾ ಕಾಕೋರಿ ಷಡ್ಯಂತ್ರದ ಕೇಸಿನಲ್ಲಿ ಗಲ್ಲಿಗೇರಿಸುವ ಮುಖಾಂತರ ಬ್ರಿಟೀಷರು ಸ್ವಾತಂತ್ರ್ಯ ಹೋರಾಟದ ಶಕ್ತಿಗಳನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದರೂ ಈ ಮರಣ ದಂಡನೆಯಿಂದ ಸ್ಫೂರ್ತಿ ಪಡೆದ ಸಾವಿರಾರು ಯುವ ಕ್ರಾಂತಿಕಾರಿಗಳು ಬ್ರಿಟಿಷ್ ವಿರುದ್ದ ಹೋರಾಟಕ್ಕೆ ಧುಮುಕುವಂತಾಯಿತು.

WhatsApp Image 2020-06-11 at 3.12.45 PM

ತಾಯಿ ಭಾರತಿಯ ಸೇವೆ ಮಾಡಲು ಮತ್ತೆ ಮತ್ತೆ ನೂರು ಜನ್ಮ ಹೊತ್ತು ಇದೇ ಭಾರತದಲ್ಲಿ ಜನಿಸಿ ಆಕೆಯ ಸೇವೆ ಮಾಡುವೆನು ಎಂದಿದ್ದ ಅಮರ ಕ್ರಾಂತಿಕಾರಿ‌ ರಾಮ್ ಪ್ರಸಾದ್ ಬಿಸ್ಮಿಲ್‌ ಜನ್ಮದಿನದಂದು ಆ ಪುರುಷ ಸಿಂಹನನ್ನು‌ ಹೃತ್ಪೂರ್ವಕವಾಗಿ ನೆನೆಯೋಣ. ಜನ್ಮದಾತರನ್ನೂ ತೊರೆದು ಜನ್ಮಭೂಮಿಗಾಗಿ ಪರಿಪತಪಿಸಿದ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಉಗ್ರವಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿ ನೇಣು ಕುಣಿಕೆಯನ್ನು ನಗುನಗುತ್ತಲೇ ಕೊರಳಿಗೇರಿಸಿ ಕೊಂಡ ಇಂತಹ ಅಪ್ರತಿಮರ ಹೋರಾಟದ ಫಲವಾಗಿಯೇ ನಾವಿಂದು ಸ್ವಾತಂತ್ರ್ಯವನ್ನು ಪಡೆದಿರುವ ಕಾರಣ ಅವರ ತ್ಯಾಗ ಮತ್ತು ಬಲಿದಾನಗಳನ್ನು ನೆನೆದು ಮತ್ತು ನಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s