ವಿಶ್ವಮಾನ್ಯ ವಿಶ್ವವಂದಿತ ವಿಶ್ವೇಶ್ವರಯ್ಯನವರು

jog

ವಿಶ್ವೇಶ್ವಯರಯ್ಯನವರು ಮೈಸೂರಿನ ದಿವಾನರಾಗಿದ್ದಾಗ ಮಲೆನಾಡಿನ ಪ್ರಾಂತ್ಯದಲ್ಲಿ ಜೋರಾದ ಮಳೆಯಾಗಿ ಶರಾವತಿ ಉಕ್ಕಿ ಹರಿಯುತ್ತಿದ್ದಳು. ಜೋಗದ ಜಲಪಾತದಲ್ಲಿ ರಾಜಾ ರಾಣಿ, ರೋರರ್ ಮತ್ತು ರಾಕೆಟ್ ಧುಮ್ಮಿಕ್ಕೆ ಹರಿಯುತ್ತಿತ್ತು. ಅಂತಹ ರಮಣೀಯ ದೃಶ್ಯವನ್ನು ನೋಡಲು ಮೈಸೂರು ಮಹಾರಾಜರು ದಿವಾನರಾಗಿದ್ದ ವಿಶ್ವೇಶ್ವರಯ್ಯನವರನ್ನೂ ಒಳಗೊಂಡಂತೆ ತಮ್ಮ ಮಂತ್ರಿಗಣದ ಪರಿವಾರ ಸಮೇತ ಜೋಗಕ್ಕೆ ಭೇಟಿ ನೀಡಿ ಎಲ್ಲರೂ ಜೋಗದ ರುದ್ರರಮಣೀಯ ದೃಶ್ಯವನ್ನು ಸವಿಯುತ್ತಿದ್ದರೆ, ವಿಶ್ವೇಶ್ವರಯ್ಯನವರ ಬಾಯಿಯಿಂದ ಉದ್ಗಾರವಾದ ಮಾತು Oh! What a waste? ಎಲ್ಲರೂ ಪ್ರಕೃತಿಯ ಸೌಂದರ್ಯೋಪಾಸಕರಾಗಿದ್ದರೆ, ವಿಶ್ವೇಶ್ವರಯ್ಯನವರು ಜನಾನುರಾಗಿಯಾಗಿ, ಇಂತಹ ಜಲಸಂಪತ್ತನ್ನು ಉಪಯೋಗಿಸಿಕೊಳ್ಳವೇ ವೃಥಾ ವ್ಯರ್ಥಮಾಡುತ್ತಿದ್ದೇವೆ ಎಂದು ಯೋಚಿಸಿ ಅಲ್ಲಿಯೇ ಇದ್ದ ಮೈಸೂರು ಮಹಾರಾಜರಿಗೆ ವಿವರಿಸಿ ಲಿಂಗನ ಮಕ್ಕಿಯ ಬಳಿ ಭಾರತದ ಅತಿದೊಡ್ಡ ಜಲವಿದ್ಯುತ್ ಕೇಂದ್ರದ ಸ್ಥಾಪನೆಗೆ ಮುಂದಾದರು. ಶ್ರೀ ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಇಂದು 120 ಮೆಗಾವ್ಯಾಟ್ ಸಾಮರ್ಥ್ಯದ ಕರ್ನಾಟಕಕ್ಕೆ ವಿದ್ಯುತ್ ಶಕ್ತಿ ಅತಿದೊಡ್ಡ ಜಲವಿದ್ಯುತ್ ಕೇಂದ್ರಗಳಲ್ಲಿ ಒಂದಾಗಿದೆ. ಈ ವಿದ್ಯುತ್ ಕೇಂದ್ರವನ್ನು ಶ್ರೀ ಕೃಷ್ಣ ರಾಜೇಂದ್ರ ಜಲವಿದ್ಯುತ್ ಯೋಜನೆ ಎಂದು ಆರಂಭದಲ್ಲಿ ಹೆಸರಿಸಲಾಗಿತ್ತಾದರೂ, ನಂತರ ಕೆಲ ರಾಜಾಕೀಯ ಹಿತಸಕ್ತಿಯ ಫಲವಾಗಿ ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಎಂದು ಬದಲಾಯಿಸಲಾಯಿತು.

ಕರ್ನಾಟಕದ ಚಿಕ್ಕಬಳ್ಳಾಪುರದ ನಂದೀ ಬೆಟ್ಟದ ತಪ್ಪಲಿನಲ್ಲಿರುವ ಮುದ್ದೇನಹಳ್ಳಿ ಗ್ರಾಮದಲ್ಲಿ , ಸೆಪ್ಟೆಂಬರ್ 15, 1861 ರಂದು ಸಾಮಾನ್ಯ ಸಾಂಪ್ರದಾಯಸ್ಥರ ಕುಟುಂಬದಲ್ಲಿ ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ತಮ್ಮ ಕಠಿಣ ಪರಿಶ್ರಮ ಮತ್ತು ಸ್ವಸಾಮರ್ಥ್ಯದಿಂದ ಓದಿ, ಬೆಳೆದು ಭಾರತದ ಅತ್ಯಂತ ಸಮರ್ಥರಾದ ಸಿವಿಲ್ ಎಂಜಿನಿಯರ್, ಅಣೆಕಟ್ಟು ನಿರ್ಮಾಣಕಾರ, ಅರ್ಥಶಾಸ್ತ್ರಜ್ಞರು, ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲದೇ ಕಳೆದ ಶತಮಾನದ ಅಗ್ರಗಣ್ಯರಲ್ಲಿ ಒಬ್ಬರಾಗಿದ್ದರು. ವಿಶ್ವೇಶ್ವರಯ್ಯನವರು 1912 ರಿಂದ 1918 ರವರೆಗೆ ಮೈಸೂರಿನ ದಿವಾನರಾಗಿದ್ದರು. ಅವರು ದಿವಾನರಾಗಿದ್ದ ಕಾಲದಲ್ಲಿ ಮೈಸೂರು ರಾಜ್ಯವನ್ನು ಮಾದರಿ ರಾಜ್ಯ ಎಂದು ಕರೆಯುತ್ತಿದ್ದರು. ಅವರು ದಿವಾನರಾಗಿದ್ದು ಕೇವಲ 6 ವರ್ಷಗಳ ಕಾಲವಾದರೂ ಅವರ ದೂರದೃಷ್ಟಿಯ ಫಲವಾಗಿ ಕರ್ನಾಟಕದಲ್ಲಿ ಅವರು ನೀಡಿದ ಕೊಡುಗೆಗಳು ಅಸಂಖ್ಯವಾದದ್ದು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

 • ಕನ್ನಂಬಾಡಿ ಕಟ್ಟೆ
 • ಎಚ್‌ಎಎಲ್‌
 • ಜೋಗದ ಜಲವಿದ್ಯುತ್ ಯೋಜನೆ,
 • ಶಿವನಸಮುದ್ರ
 • ಬ್ಲಾಕ್ ಸಿಸ್ಟಮ್(ನೀರಾವರಿ ಯೋಜನೆ)
 • ಭಟ್ಕಳ ಬಂದರು
 • ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ
 • ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ,
 • ಸರಕಾರಿ ಸಾಬೂನು ಕಾರ್ಖಾನೆ,
 • ಮೈಸೂರು ಸಕ್ಕರೆ ಕಾರ್ಖಾನೆ
 • ಶ್ರೀಗಂಧ ಎಣ್ಣೆ ತಯಾರಿಕೆ
 • ಮೈಸೂರು ಸ್ಯಾಂಡಲ್ ಸೋಪ್
 • ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ
 • ಕನ್ನಡ ಸಾಹಿತ್ಯ ಪರಿಷತ್
 • ಮೈಸೂರು ವಿವಿ
 • ಬೆಂಗಳೂರು ವಿವಿ ಎಂಜಿನಿಯರಿಂಗ್ ಕಾಲೇಜು
 • ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು
 • ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
 • ಕಬ್ಬನ್ ಪಾರ್ಕ್‌ನ ಸೆಂಚುರಿ ಕ್ಲಬ್

ಕರ್ನಾಟಕದ ಹೊರತಾಗಿಯೂ ದೇಶ ವಿದೇಶಗಳಲ್ಲಿ ಅವರ ಸಾಮರ್ಥ್ಯವನ್ನು ಸದ್ಬಳಕೆಮಾಡಿಕೊಳ್ಳಲಾಯಿತು. ಅವುಗಳಲ್ಲಿ ಪ್ರಮುಖವಾದವುಗಳು ಈ ರೀತಿಯಾಗಿವೆ.

 • ಪ್ಯಾರಾಸಿಟಾಯ್ಡ್ಸ್ ಲ್ಯಾಬೋ ರೇಟರಿ
 • ಹಿಂದೂ ಮಾಡರ್ನ್ ಹೋಟೆಲ್
 • ಪೂನಾ ಡೆಕ್ಕನ್ ಕ್ಲಬ್
 • ಪುಣೆಯ ಖಡಕ್‌ ವಾಸ್ಲಾ ಜಲಾಶಯ
 • ಗ್ವಾಲಿಯರ್‌ನ ಟೈಗರ್ ಡ್ಯಾಂ
 • ಮೂಸಿ ನದಿ ಪ್ರವಾಹದಿಂದ ಹೈದರಾಬಾದ್ ನಗರದ ಪ್ರವಾಹ ಸಂರಕ್ಷಣಾ ವ್ಯವಸ್ಥೆ
 • ಸೂರತ್ ನಲ್ಲಿ ಎಸ್ಎಕ್ಯುಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ
 • ಸಿಂಧ್ ಪ್ರಾಂತದ ಸುಕ್ಕೂರ್ ಪುರಸಭೆಯಲ್ಲಿ ನೀರು ಸರಬರಾಜಿಗೆ ಸಂಭಂದಪಟ್ಟ ವಿನ್ಯಾಸ ಹಾಗು ಕಾರ್ಯನಿರ್ವಹಣೆ.
 • ಶಿಮ್ಲಾ ವ್ಯವಸಾಯ ಆಯೋಗದಲ್ಲಿ ಬಾಂಬೆ ಸರ್ಕಾರವನ್ನು ಪ್ರತಿನಿಧಿಸಿದ್ದು.
 • ಟಾಟಾ ಸ್ಟೀಲ್ ನ ನಿರ್ದೇಶಕರ ಮಂಡಳಿಯಲ್ಲಿ ಒಬ್ಬ ನಿರ್ದೇಶಕರಾಗಿ ಸೇವೆ .
 • ಚೀನ, ಜಪಾನ್, ಈಜಿಪ್ಟ್, ಕೆನಡಾ, ಅಮೆರಿಕಾ ಹಾಗು ರಷ್ಯಾ ದೇಶಗಳಿಗೆ ಭೇಟಿ ನೀಡಿದ್ದಲ್ಲದೇ ಅವರ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿ ಭಾರತದ ಗೌರವವನ್ನು ವಿದೇಶಗಳಲ್ಲಿ ಎತ್ತಿಹಿಡಿದಿದ್ದಾರೆ.

vish2

1903 ರ ಪುಣೆಯ ಖಡಕ್ವಾಸ್ಲಾ ಜಲಾಶಯದಲ್ಲಿ ಮೊದಲು ಸ್ಥಾಪಿಸಲಾದ ಸ್ವಯಂಚಾಲಿತ ವೀರ್ ವಾಟರ್ ಫ್ಲಡ್ ಗೇಟ್‌ಗಳನ್ನು ಸಹ ಅವರು ವಿನ್ಯಾಸಗೊಳಿಸಿದ್ದಲ್ಲದೇ ಅದರ ಪೇಟೆಂಟ್ ಕೂಡಾ ಪಡೆದಿದ್ದರು. ಯಾವುದೇ ಪೂರ್ವಾಗ್ರಹ ಪೀಡಿತರಾಗದೇ, ಸ್ವಾರ್ಥವಿಲ್ಲದೇ, ಸಮಾಜಕ್ಕೆ ಅವರು ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿದ ಅಂದಿನ ಭಾರತ ಸರ್ಕಾರವು 1955 ರಲ್ಲಿ ವಿಶ್ವೇಶ್ವರಯ್ಯನವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸನ್ಮಾನಿಸಲಾಗಿದೆ. ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಭಾರತದಾದ್ಯಂತದ ಇಂಜಿನಿಯರಿಂಗ್ ಸಮುದಾಯವು ಎಂಜಿನಿಯರ್‌ಗಳ ದಿನವನ್ನಾಗಿ ಆಚರಿಸುವ ಮುಖಾಂತಾರ ಭಾರತದ ಶ್ರೇಷ್ಠ ಎಂಜಿನಿಯರ್ ಆಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸುತ್ತಿದೆ.

vish2

ಇತ್ತೀಚೆಗೆ ಕರ್ನಾಟಕ ಸರ್ಕಾರ ಕೆಆರ್‍ಎಸ್ ಅಣೆಕಟ್ಟೆ ಎದುರು ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯೊಂದನ್ನು ಸ್ಥಾಪಿಸಲು ಯೋಜನೆ ಹಾಕಿಕೊಂಡು ಅವರ ಜೊತೆಯಲ್ಲಿಯೇ ಕೆಆರ್ಎಸ್ ಅಣೆಕಟ್ಟೆಯ ರೂವಾರಿ ಮತ್ತು ಆರಂಭಿಕ ಇಂಜಿನಿಯರ್ ಅಗಿದ್ದ ಸರ್ ಎಂ.ವಿಶ್ವೇಶ್ವರಯ್ಯವರ ಪ್ರತಿಮೆಯನ್ನೂ ನಿರ್ಮಾಣ ಮಾಡಲು ನಿರ್ಧರಿಸಿತ್ತು.

ವಿಶ್ವೇಶ್ವರಯ್ಯನವರ ಪ್ರತಿಫಲಾಪೇಕ್ಷೆ ಇಲ್ಲದ ಈ ಮಹತ್ತರ ನಿಸ್ವಾರ್ಥ ಸೇವೆ ಮತ್ತು ಸಾಧನೆಯನ್ನು ಅರಿಯದ ಕೆಲ ಮೂರ್ಖ, ಗಂಜೀ ಗಿರಾಕಿಗಳು ಸರ್ ಎಂ ವಿಶ್ವೇಶ್ವರಯ್ಯನವರ ಬಗ್ಗೆ ನಂಜು ಕಾರುತ್ತಾ, ಅವರ ಮೂರ್ತಿಯನ್ನು ಸ್ಥಾಪಿಸಿದಲ್ಲಿ ರಕ್ತಪಾತವಾದರೂ ಚಿಂತೆಯಿಲ್ಲ. ಅದನ್ನು ಒಡೆದು ಹಾಕುತ್ತೇವೆ ಎಂದು ಪ್ರತಿಭಟನೆ ಮಾಡುವ ಮುಖೇನ ಆ ಹಿರಿಯ ಪ್ರಾಥಃಸ್ಮರಣೀಯರಿಗೆ ಅಗೌರವ ಸಲ್ಲಿಸಿದ್ದು ಅಕ್ಷಮ್ಯ ಅಪರಾಧವೇ ಸರಿ.

ಕೃಷ್ಣರಾಜ ಅಣೆಕಟ್ಟೆ ಕಟ್ಟುವ ಸಂಧರ್ಭದಲ್ಲಿ ಅವರ ಕೆಲಸಕ್ಕೆ ಸಂಬಳ ರೂಪದಲ್ಲಿ ಅದಾಗಲೇ ಸಂಭಾವನೆ ಕೊಟ್ಟಿರುವ ಕಾರಣ, ಈ ರೀತಿಯ ಗೌರವಕ್ಕೆ ಅವರು ಅಪಾತ್ರರು ಎನ್ನುವ ಸಣ್ಣತನದ ಕ್ಷುಲ್ಲಕ ಮನಸ್ಥಿತಿಯನ್ನು ವ್ಯಕ್ತಪಡಿಸಿದವರು, ಸರ್ಕಾರದ ಹಣದಲ್ಲಿ ಮಾಡಲಾಗುವ ಜನಪರ ಕಾರ್ಯಕ್ರಮಗಳನ್ನು ತಾವೇ ಮಾಡಿಸಿದೆವೆಂದು ಬೊಬ್ಬಿರಿಯುವುದನ್ನು ಮಾತ್ರಾ ಮರೆಯುದಿರುವುದು ವಿಪರ್ಯಾಸವೇ ಸರಿ. ದಿವಾನರಾಗಿದ್ದ ಕಾಲದಲ್ಲಿ ಸರ್ಕಾರೀ ಕೆಲಸದ ನಂತರ ಸರ್ಕಾರದ ಖರ್ಚಿನ ಮೇಣದ ಬತ್ತಿಯನ್ನು ಆರಿಸಿ‌ ಸ್ವಂತ ಖರ್ಚಿನ ಮೇಣದ ಬತ್ತಿಯನ್ನು ಹಚ್ಚಿಕೊಂಡು ಅಧ್ಯಯನ ಮಾಡುತ್ತಾ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ವಿಶ್ವೇಶ್ವರಯ್ಯನವರನ್ನು ಕಮಿಷನ್ನಿಗಾಗಿ ಬಾಯಿ ಬಿಡುವ, ಮೀಸಲಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ತಮ್ಮ ಹೊಟ್ಟೆ ಹೊರೆದುಕೊಳ್ಳುವ ಮಂದಿಗಳು ಅಗೌರವ ತೋರುವುಸು ಉಧ್ಧಟತನ ಪರಮಾವಧಿಯೇ ಸರಿ.

ವಿಶ್ವೇಶ್ವರಯ್ಯನವರ ನಂತರ ಮೈಸೂರು ಸಂಸ್ಥಾನದಲ್ಲಿ ಬಹಳ ವರ್ಷಗಳಷ್ಟು ಕಾಲ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು My public life ಎಂಬ ತಮ್ಮ ವೃತ್ತಿ ಬದುಕಿನ ಆತ್ಮಚರಿತ್ರೆಯಲ್ಲಿ ಸರ್ ಎಂ ವಿ ಕುರಿತು ಹೀಗೆ ಹೇಳಿದ್ದಾರೆ.

ಕೃಷ್ಣರಾಜ ಸಾಗರ ಜಲಾಶಯ, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿರ್ಮಾಣಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಕಾರಣೀಭೂತರು. ಅದು ಅವರ ದೂರದೃಷ್ಟಿ ಮತ್ತು ಪ್ರತಿಭೆಗೆ ಜೀವಂತ ಸಾಕ್ಷಿ

—ಸರ್ ಮಿರ್ಜಾ ಇಸ್ಮಾಯಿಲ್

ಭಾರತ ಸರ್ಕಾರದ ಕಾಮಗಾರಿ ಇಲಾಖೆಯ ವಿಶ್ರಾಂತ ಮುಖ್ಯ ಇಂಜಿನಿಯರ್ ಆಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ 6 ವರ್ಷಗಳ ಕಾಲ ಆ ಸ್ಥಾನಕ್ಕೆ ಮತ್ತು ತಮಗೆ ಹೆಚ್ಚಿನ ಘನತೆ ಮತ್ತು ಗೌರವ ಸಂಪಾದಿಸಿದವರು. ಅವರು ತಮ್ಮ ಅವಧಿಯಲ್ಲಿ ರಾಜ್ಯವು ಸರ್ವತೋಮುಖ ಪ್ರಗತಿ ಸಾಧಿಸಿ ಹೆಚ್ಚಿನ ಶ್ರೇಯಸ್ಸನ್ನು ಪಡೆಯಲು ಕಾರಣರಾದವರು. ಮೈಸೂರು ನಗರದಿಂದ 15KM ದೂರದಲ್ಲಿ ಮತ್ತು ಶ್ರೀರಂಗಪಟ್ಟಣದಿಂದ 5 ಮೈಲುಗಳ ಮೇಲ್ಭಾಗದಲ್ಲಿ ಸುಮಾರು 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣಕ್ಕೆ ಅವರು ಕಾರಣೀ ಭೂತರು. ಅದು ಆ ಕಾಲದಲ್ಲಿ ಭಾರತದಲ್ಲಿಯೇ ದೊಡ್ಡ ಜಲಾಶಯವಾಗಿತ್ತು. ಭದ್ರಾವತಿಯ ಕಬ್ಬಿಣದ ಕಾರ್ಖಾನೆಯೂ ತನ್ನ ಅಸ್ತಿತ್ವಕ್ಕೆ ಅವರಿಗೆ ಋಣಿಯಾಗಿದೆ. ಇವೆರಡೂ ಕೂಡ ರಾಜ್ಯಕ್ಕೆ ಅಪಾರ ಲಾಭವನ್ನು ತಂದು ಕೊಟ್ಟ ಯಶಸ್ವೀ ಕಾಮಗಾರಿಗಳು ಮತ್ತು ಅವರ ದೂರದೃಷ್ಟಿ ಮತ್ತು ಪ್ರತಿಭೆಗೆ ಜೀವಂತ ಸಾಕ್ಷಿಗಳು.ಇಷ್ಟೇ ಅಲ್ಲದೆ ಮೈಸೂರು ಇನ್ನೂ ವಿವಿಧ ಕಾರಣಗಳಿಗಾಗಿ ಅವರಿಗೆ ಚಿರ ಋಣಿಯಾಗಿದೆ.

ಕನ್ನಡ ಖ್ಯಾತ ಕವಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಆದ ಕುವೆಂಪುರವರು ಸರ್ ಎಂ ವಿರವರ ಹಟ್ಟುಹಬ್ಬದ ದಿನದಂದ ಬರೆದ ಯಂತ್ರರ್ಷಿ ಕವನದ ಸಾಲುಗಳಲ್ಲಿ ಮೂರ್ಖನಿಂದೆಯ ಲೆಕ್ಕಿಸದೆ ದುಡಿದ ಯಂತ್ರರ್ಷಿ ಸರ್ ಎಂ ವಿಶ್ವೇಶ್ವರಯ್ಯ ಎಂದೇ ಹೇಳಿದ್ದಾರೆ ಬಹುಶಃ ಈ ರೀತಿಯ ಈ ನಂಜು ಕಾರುವವರ ಮೂರ್ಖ ನಿಂದಕರ ಬಗ್ಗೆ ಕುವೆಂಪುರವರಿಗೆ ಅಂದೇ ತಿಳಿದಿತ್ತೇನೋ?

vish3

ಬರಡು ನಾಡಾಗಿದ್ದ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ತಮ್ಮ ಸ್ವಂತ ನಗನಾಣ್ಯಗಳನ್ನು ಮಾರಿ ಕೃಷ್ಣರಾಜ ಸಾಗರವನ್ನು ಕಟ್ಟಿ ಲಕ್ಷಾಂತರ ಎಕರೆ ಭೂಮಿಗೆ ನೀರನ್ನುಣ್ಣಿಸುವ ಮೂಲಕ ನೀರಾವರೀ ಕೃಷಿಗೆ ನಾಂದಿ ಹಾಡಿದ ನಾಲ್ಮಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರ ಚಿತ್ರಗಳನ್ನು ಅಲ್ಲಿಯ ಗ್ರಾಮ ಗ್ರಾಮಗಳಲ್ಲಿಯೂ, ಪ್ರತೀ ಮನೆಮನೆಗಳಲ್ಲಿ ತಮ್ಮ ತಮ್ಮ ಕುಲದೇವತೆಗಳೊಂದಿಗೆ ಇಟ್ಟು ಪೂಜಿಸುವುದನ್ನು ಇಂದಿಗೂ ಸಹಾ ಕಾಣಬಹುದಾಗಿದೆ. ಈ ರೀತಿಯಾಗಿ ಜನಮಾನಸದಲ್ಲಿ ಸ್ಥಾಪಿತರಾಗಿರುವ ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ಸ್ಥಾಪನೆಗೆ ಜಾತೀ ಹೆಸರಿನಲ್ಲಿ ಚಾರ್ವಾಕರ ರೀತಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಕೆಲ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಆ ಕನ್ನಡ ತಾಯಿ ಭುವನೇಶ್ವರಿ ಮತ್ತು ಚಾಮುಂಡೇಶ್ವರಿ ಒಳ್ಳೆಯ ಬುದ್ಧಿಯನ್ನು ಕೊಡಲಿ‌ ಎಂದು ಪ್ರಾರ್ಥಿಸೋಣ.

vish3

ದಿವಾನರಾಗಿ ಆಯ್ಕೆಯಾದ ಲಕೋಟೆ ವಿಶ್ವೇಶ್ವರಯ್ಯನವರ ಕೈ ತಲುಪಿದಾಗ ತನ್ನ ಸಂಭಂಧೀಕರು‌ ಮತ್ತು ಕುಲಬಾಂಧವವರುಗಳಿಗೆ ಆ ಕೆಲಸ‌ ಕೊಡಿಸೂ, ಈ ರೀತಿಯಲ್ಲಿ ಅನೂಕೂಲ‌ ಮಾಡಿಕೊಡು ಎಂದು ಕೇಳಿಕೊಳ್ಳುವುದಿಲ್ಲ ಎಂದು ಅವರ ತಾಯಯ ಬಳಿ ಭಾಷೆ ತೆಗೆದುಕೊಂಡು ನಂತರವೇ ದಿವಾನರಾಗಿ ಅಧಿಕಾರ ವಹಿಸಿಕೊಂಡ ವಿಶ್ವೇಶ್ವರಯ್ಯನವರನ್ನು ಇಡೀ ವಿಶ್ವವೇ ಕೊಂಡಾಡುತ್ತಿರುವಾಗ, ಅವರು‌ ಮೃತರಾದಾಗ ದಯವಿಟ್ಟು ಅವರ ದೇಹವನ್ನು ಅಧ್ಯಯನಕ್ಕೆ ಕೊಡಿ ಎಂದು ಬೇಡಿಕೊಂಡ ವಿದೇಶಿಯರು ಇರುವಾಗ ಕೆಲವು‌ ಮೂಢರು ಸರ್ ಎಂ.ವಿ. ಅವರ ಸಾಧನೆಗಳಿಗಿಂತಲೂ, ಅವರ ಜಾತಿಯನ್ನು ಮುಂದೆ‌ ಮಾಡಿಕೊಂಡು ಈಗ ಅವಮಾನ ಮಾಡುವುದು ದೇಶಕ್ಕೇ ಅವಮಾನಕರ. ದೇಶ ಹೆಸರಿಗಷ್ಟೇ ಜಾತ್ಯಾತೀತ. ಆದರೆ ನಡೆಯುವುದೆಲ್ಲಾ ಅತೀಯಾದ ಜಾತೀಯತೆಯೇ. ಛೇ!

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s