ಅಪರೂಪ ಮತ್ತು ಅನುರೂಪದ ಗುರು-ಶಿಷ್ಯಂದಿರು

ಇಂದು ಅಷಾಢಮಾಸದ ಹುಣ್ಣಿಮೆ. ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ಶ್ರೀ ವೇದವ್ಯಾಸ ಮಹರ್ಷಿಗಳ ಜನ್ಮದಿನವೂ ಹೌದು. ವ್ಯಾಸ ಮಹರ್ಷಿಗಳು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲಾ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ಅವುಗಳ ಉಪಯೋಗದ ಆಧಾರದ ಮೇಲೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ತಮ್ಮ ನಾಲ್ಕು ಪ್ರಮುಖ ಶಿಷ್ಯಂದಿರಾದ ಸುಮಂತು, ವೈಶಂಪಾಯನ, ಜೈಮಿನಿ ಹಾಗೂ ಪೈಲರಿಗೆ ಬೋಧಿಸುವ ಮೂಲಕ ವೈದಿಕ ಅಧ್ಯಯನಗಳ ಉದ್ದೇಶಕ್ಕಾಗಿ ಮಹತ್ತರವಾದ ಸೇವೆಮಾಡಿದರು. ಈ ವಿಭಜನೆ ಮತ್ತು ಸಂಪಾದನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ವ್ಯಾಸ (ವ್ಯಾಸ = ಸಂಪಾದಿಸು, ವಿಭಾಗಿಸು) ಎಂಬ ಗೌರವ ನಾಮ ದೊರೆಯಿತು. ಮಹಾಭಾರತದ ಕರ್ತೃಗಳು ವೇದವ್ಯಾಸರೇ. ಹಾಗಾಗಿ ಅವರ ಜಯಂತಿಯಾದ ಆಷಾಢ ಪೂರ್ಣೀಮೆಯನ್ನು ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆ ಎಂದೇ ಕರೆಯಲಾಗುತ್ತದೆ.
‌ ‌ ‌

ಈ ದಿನ ಭಾರತಾದ್ಯಂತ ಎಲ್ಲರೂ ಹಬ್ಬದ ರೂಪದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ತಮಗೆ ವಿದ್ಯಾಬುದ್ಧಿಗಳನ್ನು ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ತಮ್ಮ ಕೈಲಾದ ಮಟ್ಟಿಗಿನ ಗುರುಕಾಣಿಕೆ ಸಲ್ಲಿಸುವ ಮೂಲಕ ಗುರುಗಳಿಗೆ ಧನ್ಯಭಾವವಾಗಿ ತಮ್ಮನ್ನು ತಾವೇ ಅರ್ಪಿಸಿಕೊಳ್ಳುತ್ತಾರೆ.

ನಮ್ಮ ಪುರಾಣ ಮತ್ತು ಇತಿಹಾಸದಲ್ಲಿ ಅನೇಕ ಗುರುಶಿಷ್ಯರ ಪರಂಪರೆಯನ್ನು ನೋಡಿದ್ದೇವೆ ಮತ್ತು ಓದಿದ್ದೇವೆ. ಅಂತಹ ಗುರು-ಶಿಷ್ಯರು ಸಂಬಂಧದಲ್ಲಿ, 19ನೇ ಶತಮಾನದಲ್ಲಿ ನಮ್ಮ ಕಣ್ಣ ಮುಂದೆಯೇ ಜಾತಿ ಧರ್ಮಗಳಿಗಿಂತ ಮಾನವ ಧರ್ಮವೇ ಶ್ರೇಷ್ಠವೆಂದು ಎಂದು ಜಗತ್ತಿಗೆ ತಮ್ಮ ನಡೆ ನುಡಿಗಳಿಂದ ಎತ್ತಿ ತೋರಿದ ಗುರುಗಳಾದ ಶ್ರೀ ಗೋವಿಂದ ಭಟ್ಟರು ಮತ್ತು ಅವರ ಪರಮಾಪ್ತ ಶಿಷ್ಯರಾದ ಶ್ರೀ ಶಿಶುನಾಳ ಶರೀಫರು ಅಗ್ರಗಣ್ಯರಾಗುತ್ತಾರೆ.

19ನೇ ಶತಮಾನ ಅದೊಂದು ಪರ್ವಕಾಲ. ಅಲ್ಲಿಯವರೆಗೂ ಕೋಮು ಸೌಹಾರ್ಧತೆಯಿಂದ ಶಾಂತಿಯುತವಾಗಿ ಒಟ್ಟಾಗಿಯೇ ಜೀವಿಸುತ್ತಿದ್ದ ಹಿಂದೂ ಮತ್ತು ಮುಸಲ್ಮಾನರ ನಡುವೆ ಇಂದು ರೀತಿಯ ಭಿನ್ನಾಭಿಪ್ರಾಯಗಳು ಮತ್ತು ಇರುಸು ಮುರುಸು ಮೂಡುತ್ತಿದ್ದ ಕಾಲವದು. ಇಂತಹ ಕಾಲಘಟದಲ್ಲಿಯೇ, ಧರ್ಮ, ಕುಲ-ಗೋತ್ರಗಳ ಬದಿಗೊತ್ತಿ, ಸಹೋದರತ್ವವನ್ನು ಹಿಡಿದು, ಮತೀಯ ಸೌಹಾರ್ದತೆಯನ್ನು ಎತ್ತಿ ತೋರಿದವರೇ, ಕಳಸದ ಗುರು ಶ್ರೀ ಗೋವಿಂದ ಭಟ್ಟರು ಹಾಗೂ ಶಿಶುನಾಳದ ಮಹಮ್ಮದ್ ಶರೀಫ‌ರು ಎಂದರೆ ತಪ್ಪಾಗಲಾರದು.

ಒಂದು ರೀತಿಯಲ್ಲಿ ನೋಡಿದರೆ ಇವರಿಬ್ಬರದ್ದೂ ಅಪರೂಪದ ಮತ್ತು ಅನುರೂಪದ ಗುರು-ಶಿಷ್ಯ ಸಂಬಂಧ. ಇಬ್ಬರದ್ದೂ ಬೇರೆ ಬೇರೆ ಧರ್ಮ. ಇಬ್ಬರ ಆಚರಣೆಗಳು ವಿಭಿನ್ನ. ಆದರೆ, ಅದೆಲ್ಲವನ್ನೂ ಬದಿಗೊತ್ತಿ ಪರಸ್ಪರ ಧರ್ಮವನ್ನು ಗೌರವದಿಂದ ಕಾಣುವ ಮೂಲಕ ಯಾರೂ ಒಬ್ಬರ ಮೇಲೆ ಮತ್ತೊಬ್ಬರ ಧರ್ಮವನ್ನು ಹೇರದೇ ಮತಾಂತರಗೊಳ್ಳದೇ, ಹಿಂದೂ ಬ್ರಾಹ್ಮಣರಾದ ಗೋವಿಂದ ಭಟ್ಟರು, ಮುಸಲ್ಮಾನರಾದ ಶಿಶುನಾಳ ಷರೀಫರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ ತಮ್ಮೆಲ್ಲಾ ಜ್ಞಾನವನ್ನು ಧಾರೆ ಎರೆದರಲ್ಲದೇ, ಜೀವನದುದ್ದಕ್ಕೂ ಭಟ್ಟರು ಬ್ರಾಹ್ಮಣರಾಗಿಯೇ ಉಳಿದರೇ, ಶರೀಫ‌ರು ಮುಸಲ್ಮಾನರಾಗಿಯೇ ಕಾಲವಾದರು.

shr1ಉತ್ತರ ಕರ್ನಾಟಕದ ಶಿಗ್ಗಾಂವಿ ತಾಲೂಕಿನ, ಶಿಶುನಾಳ ಗ್ರಾಮದ, ದೇವಕಾರ ಮನೆತನದ ಇಮಾಮ್‌ ಹಜರತ್‌ ಸಾಹೇಬ್‌ ಹಾಗೂ ಹಜೂಮಾ ದಂಪತಿಗೆ, ಮಾರ್ಚ್ 3, 1819ರಲ್ಲಿ ಮಹಮ್ಮದ್‌ ಶರೀಫ‌ರು ಜನಿಸುತ್ತಾರೆ. ಬಾಲ್ಯದಿಂದಲೇ ತಮ್ಮ ಧರ್ಮಗ್ರಂಥ ಕುರಾನಿನ ಅಧ್ಯಯನ ಮಾಡುತ್ತಲೇ, ಹಿಂದೂ ಧರ್ಮದ ವೇದ, ಶಾಸ್ತ್ರ, ರಾಮಾಯಣ, ಮಹಾಭಾರತ, ದೇವಿಪುರಾಣ, ಪ್ರಭುಲಿಂಗ- ಲೀಲೆಯಗಳನ್ನೂ ತಮ್ಮ ಸುತ್ತಮುತ್ತಲಿನ ಜನರ ಆಚರಣೆಗಳ ಮೂಲಕ ಕಲಿತದ್ದಲ್ಲದೇ, ಅವುಗಳ ಆಳ ಆಧ್ಯಯನ ಮಾಡುತ್ತಿದ್ದ ಪ್ರಕ್ರಿಯೆಯಲ್ಲಿ ಕುರಾನ್-ಪುರಾಣ, ಫ‌ಕೀರ-ಜಂಗಮ, ಮಸೀದಿ-ಮಂದಿರ, ಎಲ್ಲವೂ ಒಂದೇ, ಅವರವರ ಭಾವಕ್ಕೆ ಅವರವರ ಭಕುತಿ ಎಂಬಂತೆ ಭಗವಂತನ ದರ್ಶನಕ್ಕೆ ನಾವುಗಳೇ ಹಾಕಿಕೊಂಡ ಕಟ್ಟು ಪಾಡುಗಳು ಮತ್ತು ವಿವಿಧ ಹಾದಿಗಳು ಎಂಬ ಮರ್ಮವನ್ನು ಬಹಳ ಬೇಗ ಅರಿತು­ಕೊಂಡು ಈ ಕುರಿತಂತೆ ಹೆಚ್ಚಿನ ಅಧ್ಯಯನಕ್ಕೆ ಮತ್ತು ತಮ್ಮ ಆಧ್ಯಾತ್ಮದ ಹಸಿವನ್ನು ನೀಗಿಸುವ ಸಮರ್ಥ ಗುರುಗಳ ಹುಡುಕಾಟದಲ್ಲಿ ಇರುತ್ತಾರೆ.

shr1ಧಾರವಾಡದ ಕಳಸ ಗ್ರಾಮದ ಜೋಶಿ ಮನೆತನದ ಸ್ಮಾರ್ತ ಬ್ರಾಹ್ಮಣರಾದ ಗೋವಿಂದಭಟ್ಟರದ್ದು ಪುರೋಹಿತ್ಯರ ವಂಶ. ಗುಡಿಗೇರಿಯ ಕಲ್ಮೇಶ ದೇವರ ಗುಡಿಯ ಅರ್ಚಕರಾಗಿದ್ದಲ್ಲದೇ, ಸುತ್ತಲಿನ 14 ಹಳ್ಳಿಗಳಿಗೂ ಅವರೇ ಪುರೋಹಿತರು(ಪುರ+ಹಿತ=ಪುರೋಹಿತ). ಅಲ್ಲಿನ ಎಲ್ಲಾ ಶುಭ ಮತ್ತು ಆಶುಭ ಕಾರ್ಯಗಳೆಲ್ಲವೂ ಇವರ ಮಾರ್ಗದರ್ಶನದಲ್ಲಿಯೇ ನಡೆಯುತ್ತಿರುತ್ತದೆ. ಮಹಾನ್‌ ತಪಸ್ವಿಗಳಾಗಿದ್ದ ಭಟ್ಟರು ವಾಕ್‌ಸಿದ್ಧಿ ಗಳಿಸಿದ್ದಲ್ಲದೇ, ಕಾಲಜ್ಞಾನವನ್ನೂ ಕರಗತಮಾಡಿ ಕೊಂಡಿದ್ದವರು. ವಿವೇಕಾನಂದರ ಆಗಮನವನ್ನೇ ಎದುರು ನೋಡುತ್ತಿದ್ದ ರಾಮಕೃಷ್ಣ ಪರಮಹಂಸರಂತೆ, ಗೋಂವಿದ ಭಟ್ಟರು ಸದಾಕಾಲವೂ ಶರೀಫಾ‌ ಎಷ್ಟು ದಿನಗಳೋ ನಿನಗಾಗಿ ಕಾಯುವುದು? ಬೇಗ ಬರಬಾರದೇನೋ ಎಂದು ಆಗಾಗ ಬಡಬಡಿಸುತ್ತಿದ್ದರಂತೆ. ಮೊದಲ ಬಾರಿಗೆ ಈ ಗುರು ಶಿಷ್ಯರ ಮುಖತಃ ಭೇಟಿಯ ಸಮಯದಲ್ಲಿ ಗೋವಿಂದಭಟ್ಟರು ಶರೀಫ‌ನಿಗೆ, ನಿನ್ನಪ್ಪ ಯಾರು? ಎಂದು ಪ್ರಶ್ನಿಸಿದರೇ, ಅದಕ್ಕೆ ಅಷ್ಟೇ ನಿರ್ಮಲ ಚಿತ್ತದಿಂದ ತಟ್ಟನೆ ನಿಮ್ಮಪ್ಪನೇ ನಮ್ಮಪ್ಪ ಎಂಬ ಉತ್ತರ ಷರೀಫರಿಂದ ಬಂದದ್ದು ಕೇಳಿದ ಭಟ್ಟರಿಗೆ ಮಹದಾನಂದವಾಗಿ ಈತನೇ ತನಗೆ ಯೋಗ್ಯ ಶಿಷ್ಯ ಎಂದು ನಿರ್ಧರಿಸಿ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ.

shar5ಈ ರೀತಿ ಬ್ರಾಹ್ಮಣರಾದ ಗೋವಿಂದಭಟ್ಟರು. ಮುಸಲ್ಮಾನರಾಗಿದ್ದ ಶರೀಫ‌­ನನ್ನು ಶಿಷ್ಯನನ್ನಾಗಿ ಮಾಡಿಕೊಂಡು ಎಲ್ಲಾ ಕಡೆ ಅಡ್ಡಾಡುತಿದ್ದದ್ದನ್ನು ಸಹಿಸದ ಭಟ್ಟರ ಕುಲಬಾಂಧವರು ನಾನಾ ರೀತಿಯಾಗಿ ತಿಳಿಹೇಳಿ ಕಡೆಗೆ ಅವರನ್ನು ಜಾತಿಯಿಂದಲೇ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಒಡ್ಡಿದರೂ ಭಟ್ಟರು ಸೊಪ್ಪುಹಾಕಲಿಲ್ಲ. ಶಾಸ್ತ್ರೋಕ್ತವಾಗಿ ವೇದ, ಉಪನಿಷತ್ತು, ವೈದಿಕ ಧರ್ಮದ ಧರ್ಮದ ಅಧ್ಯಯನವನ್ನು ಮಾಡಬೇಕಾದರೆ ಬ್ರಹ್ಮೋಪದೇಶವಾಗಿರಬೇಕು ಎಂಬುದನ್ನು ಮನಗಂಡು ಶರೀಫ‌ರಿಗೆ ತಾವೇ ಜನಿವಾರ ಹಾಕಿ ಬ್ರಹ್ಮೋಪದೇಶವನ್ನು ಮಾಡಿ ಪಾಠ ಪ್ರವಚನಗಳನ್ನು ಆರಂಭಿಸುತ್ತಾರೆ. ಇದೇ ಸಂದರ್ಭದಲ್ಲಿಯೇ ಶರೀಫ‌ರ ಮನದಾಳದಿಂದ ಹಾಕಿದ ಜನಿವಾರವಾ, ಸದ್ಗುರು ನಾಥ ಹಾಕಿದ ಜನಿವಾರವ, ಹಾಕಿದ ಜನಿವಾರ, ನೂಕಿದ ಭವಭಾರ ಬೇಕೆನುತಲಿ ಬ್ರಹ್ಮಜ್ಞಾನ ಉತ್ಛರಿಸಲೆಂದು ಎಂಬ ಅದ್ಭುತವಾದ ತತ್ವಪದ ಹೊರ ಹುಮ್ಮುತ್ತದೆ. ಹಿಂದೂ ವೈದಿಕ ಧರ್ಮಕ್ಕೆ ಸೇರಿದ ಗೋವಿಂದಭಟ್ಟರ ಶಿಷ್ಯತ್ವವನ್ನು ಸ್ವೀಕರಿಸಿರುವುದು ತಮ್ಮ ಧರ್ಮಕ್ಕೆ ತೋರಿದ ಅಗೌರವವವೆಂದೇ ಭಾವಿಸಿದ ಮುಸಲ್ಮಾನರೂ ಸಹಾ ಶರೀಫ‌ರಿಗೆ ಧರ್ಮಭ್ರಷ್ಟ ಎಂಬ ಪಟ್ಟವನ್ನು ಕಟ್ಟುತ್ತಾರೆ. ತಮ್ಮ ಧರ್ಮದವರು ಹಾಕಿದ ಈ ಗೊಡ್ಡು ಬೆದರಿಕೆಗಳಿಗೆ ಅಂಜದ ಈ ಗುರು ಶಿಷ್ಯರು ಅವರೆಲ್ಲರೂ ಕೊಟ್ಟ ಕಷ್ಟಗ­ಳನ್ನು ಮೆಟ್ಟಿ ನಿಂತು ಜಾತಿ, ಧರ್ಮಗಳಿಗಿಂತಲೂ ಮಾನವ ಧರ್ಮವೇ ಶ್ರೇಷ್ಠವೆಂದು ತಿಳಿದು ಅನೇಕತೆಯಲ್ಲಿ ಏಕತೆಯನ್ನು ಸಾರಿದ ಮಾಹಾನ್ ಮಾನವತಾವಾದಿಗಳಾಗಿ ಪ್ರಾಥಃಸ್ಮರಣೀಯರಾಗುತ್ತಾರೆ.

ಮಗ ಈ ರೀತಿಯಾಗಿ ಧರ್ಮಭ್ರಷ್ಟನಾಗಿ ಹುಚ್ಚನಂತೆ ಅಲೆಯುತ್ತಿದ್ದದ್ದನ್ನು ಗಮನಿಸಿದ ಶರೀಫ‌ರ ಪೋಷಕರೂ ಸಹಾ ಮಗನಿಗೆ ಮದುವೆ ಮಾಡಿದಲ್ಲಿ ಈ ಹುಚ್ಚು ಬಿಡಬಹುದು ಎಂದು ನಿರ್ಧರಿಸಿ, ಕುಂದಗೋಳದ ನಾಯಕ ಮನೆತನಕ್ಕೆ ಸೇರಿದ ಫಾತಿಮಾಳೊಂದಿಗೆ ವಿವಾಹ ಮಾಡಿಸುತ್ತಾರೆ ಈ ನಿರ್ಣಯಕ್ಕೆ ಗುರು ಗೋವಿಂದ ಭಟ್ಟರ ಆಶೀರ್ವಾದವೂ ಸಿಗುತ್ತದೆ. ಮಡದಿಯಾಗಿ ಮನೆಗೆ ಬಂದ ಫಾತಿಮಾಳೂ ಸಹಾ ತನ್ನ ಪತಿಯ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಾಳೆ. ಶರೀಫ‌ರೂ ಸಹಾ ತಮ್ಮ ಮಡದಿಯೊಂದಿಗೆ ಪ್ರೀತಿ ಗೌರವದಿಂದ ನಡೆದುಕೊಂಡು, ಸ್ತ್ರೀಯ ಹಲವು ಮುಖಗಳನ್ನು ಅವಳಲ್ಲಿ ಕಂಡು, ನನ್ನ ಹೇಣ್ತೆ, ನೀ ನನ್ನ ಹೇಣ್ತೆ ನನಗೆ ತಕ್ಕವಳೆನಿಸಿದೆ ನನ್ನ ಹೇಣ್ತೆ ಎಂಬ ಪದ್ಯದ ಮೂಲಕ ತಮ್ಮ ಮಡದಿಯನ್ನು ಕೊಂಡಾಡುತ್ತಾರೆ. ಇವರ ಸುಖಃ ದಾಂಪತ್ಯದ ಫಲವಾಗಿ ಲತ್ತೂಮಾ ಎಂಬ ಹೆಣ್ಣು ಮುಗುವು ಜನಿಸುತ್ತಾಳಾದರೂ, ಕೇಲವೇ ದಿನಗಳಲ್ಲಿ ಖಾಯಿಲೆಯಿಂದ ತೀರಿಕೊಂಡಾಗ, ಮಗಳ ಅಗಲಿಕೆಯ ನೋವನ್ನು ಶರೀಫ‌ರು, ಉರ್ದುಭಾಷೆಯಲ್ಲಿ ದುಃಖ ಮೇ ಪಡಾ ಮನ್‌, ಸುಖ ನಹೀ ಮಾಯಾ, ಟಕತಿ ಮರನಾ ರಖವಾಲಾರೇ ಎಂಬ ತತ್ವ ಪದವನ್ನು ಆಶುಕವಿಯಾಗಿ ಹೇಳುತ್ತಾರೆ. ಮಗಳ ಅಕಾಲಿಕ ಅಗಲಿಕೆಯನ್ನು ತಾಳದೆ ಫಾತಿಮಾಳೂ ಸಹಾ ತನ್ನ ತವರು ಮನೆಯಲ್ಲಿ ತೀರಿಕೊಂಡದ್ದನ್ನು ತಿಳಿಸಿದ ಮಾವನವರು, ಮಡದಿಯ ಅಂತ್ಯಕ್ರಿಯೆಗೆ ಬರಬೇಕೆಂದು ಹೇಳಿ ಕಳುಹಿಸಿದಾಗಲೇ, ಮೋಹದ ಹೆಂಡತಿ ತೀರಿದ ಬಳಿಕ, ಮಾವನ ಮನೆಯ ಹಂಗ್ಯಾಕೋ ಎಂಬ ಪದ ಶರೀಷರ ಮನದಾಳದಿಂದ ಹೊರಹೊಮ್ಮುತ್ತದೆ. ಮಡದಿ-ಮಗಳು ಏಕಕಾಲದಲ್ಲಿಯೇ ಕಳೆದುಕೊಂಡು ದುಖಃದಲ್ಲಿದ್ದ ಶರೀಷರಿಗೆ ಗಾಯದ ಮೇಲೆ ಬರೆ ಎಳೆದಂತೆ ಕೆಲವೇ ದಿನಗಳಲ್ಲಿ ಅವರ ತಾಯಿ-ತಂದೆಯೂ ಇಹಲೋಕ ತ್ಯಜಿಸಿದಾಗ, ಗೋವಿಂದ ಭಟ್ಟರೊಬ್ಬರೇ ತಮ್ಮ ಆತ್ಮೀಯ ಬಂಧುಗಳಾಗಿ ಹೋಗುತ್ತಾರೆ.

shr2ಆದಾದ ನಂತರ, ಗುರು ಶಿಷ್ಯರಿಬ್ಬರೂ ಉತ್ತರ ಕರ್ನಾಟಕದ ಬಹುತೇಕ ಊರುಗಳಿಗೆ ಪ್ರಯಾಣಿಸಿ ಅಲ್ಲಿಯ ಗ್ರಾಮದೇವತೆಗಳ ದರ್ಶನ ಮಾಡುತ್ತಾ ಅಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಆಗುಹೋಗುಗಳನ್ನು ನೋಡ ನೋಡುತ್ತಲೇ ಆ ಘಟನೆಗಳಿಗೆ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಎಚ್ಚರಿಸುವ ಹಾಗೆ ತತ್ವಪದಗಳನ್ನು ರಚಿಸುತ್ತಾ ಹೋಗುತ್ತಾರೆ. ಇದೇ ಸಂದರ್ಭದಲ್ಲಿಯೇ ಕೋಡಗನ ಕೋಳಿ ನುಂಗಿತ್ತಾ, ಬಿದ್ದಿಯಬ್ಬೆ ಮುದುಕಿ, ಹಾವು ತುಳಿದೇನೆ, ಗುಡಿಯ ನೋಡಿರಣ್ಣ, ತರವಲ್ಲ ತಗೀ ನಿನ್ನ ತಂಬೂರಿ, ಸೋರುತಿಹುದು ಮನೆಯ ಮಾಳಿಗಿ ಮುಂತಾದ ಹಾಡುಗಳು ಅವರಿಂದ ರಚಿತವಾಗಿ ಅವುಗಳು ಜನಸಾಮಾನ್ಯರ ಮನಸ್ಸೂರೆಗೊಳ್ಳುತ್ತವೆ. ಗುರು ಗೋವಿಂದಭಟ್ಟರೂ ತಮ್ಮೊಳಗಿನ ಎಲ್ಲಾ ಆಧ್ಯಾತ್ಮ ಹಾಗೂ ಜ್ಞಾನಶಕ್ತಿಯನ್ನು ಶರೀಫ‌ರಿಗೆ ಧಾರೆಯೆರೆಯುತ್ತಾರೆ. ಗುರುಗಳಿಂದ ಅನುಗ್ರಹವಾದ ಕಾಲಜ್ಞಾನದ ಮೂಲಕ ಶರೀಫ‌ರು, ಮುಂದೆ ಒದಗಲಿರುವ ಆಪತ್ತುಗಳನ್ನು ಮೊದಲೇ ಗ್ರಹಿಸಿ, ತಮ್ಮ ತತ್ವ ಪದಗಳ ಮೂಲಕ ಎಚ್ಚರಿಸುವ ಕಾಯಕದಲ್ಲಿ ನಿರತರಾಗುತ್ತಾರೆ.

ಜಗತ್ತಿಗೆ ಈಗ ಬಂದಿರುವ ಕೂರೋನಾ ಮಹಾಮಾರಿಯಂತೆ ಆಗಿನ ಕಾಲದಲ್ಲಿ ಪ್ಲೇಗ್‌ ಖಾಯಿಲೆಯ ಮುಖಾಂತರ ಕೋಟ್ಯಂತರ ಜನರ ಮಾರಣವಾಗುವ ಮುನ್ಸೂಚನೆಯನ್ನು ನೀಡಿ, ಪ್ಲೇಗಿನ ಲಕ್ಷಣ, ಹರಡುವಿಕೆ,ಅದರಿಂದ ಸಂಭವಿಸಬಹುದಾದ ಸಾವು ನೋವುಗಳ ಬಗ್ಗೆ ಜಗಪತಿ ಪ್ರಜೆಗಳೆಲ್ಲಾ ಅಪ್ಪಣೆ ಇತ್ತನು, ತಗಲಬಾರದು ರೋಗ ಒಬ್ಬನಿಗೆ, ಅಗಲಿಸಿ, ಊರ ಬಿಡಿಸಿ, ಹೊರಗೆ ಹಾಕಿಸಿ, ಎಂಬ ಪದ ಮೂಲಕ ಹೇಳಿರುವುದು ಈಗಿನ ಕಾಲಕ್ಕೂ ಅನ್ವಯವಾಗುತ್ತಿರುವುದು ನಿಜಕ್ಕೂ ಅಧ್ಭುತವೇ ಸರಿ.

ಜಾತಸ್ಯ ಮರಣಂ ಧೃವಂ ಅಂದರೆ ಹುಟ್ಟಿದವರೂ ಸಾಯಲೇ ಬೇಕೆಂಬ ಜಗದ ನಿಯಮದಂತೆ, ಕಾಕತಾಳೀಯವಾಗಿ ಗುರು ಶಿಷ್ಯರಿಬ್ಬರೂ 70 ವರ್ಷಗಳ ಕಾಲ ಜೀವಿಸಿ ಅಸುನೀಗುತ್ತಾರೆ. ಶರೀಷರದ್ದೂ ಅದಕ್ಕೂ ಒಂದು ಹೆಜ್ಜೆ ಮುಂದಾಗಿ ಅವರ 70ನೇ ವರ್ಷದ ಹುಟ್ಟಿದ ಹಬ್ಬದ ದಿನದಂದೇ, ಜುಲೈ 3, 1889ರಲ್ಲಿ ಇಹಲೋಕವನ್ನು ತ್ಯಜಿಸುತ್ತಾರೆ. ಬದುಕಿದ್ದಾಗ ಜಾತಿ ಧರ್ಮವನ್ನೆಲ್ಲಾ ಮೀರಿ ಮಾನವತೆಯನ್ನು ಸಾರಿದ್ದ ಶರೀಫರ ಅಂತ್ಯಕ್ರಿಯೆಯನ್ನು ಯಾವ ಧರ್ಮಾಧಾರಿತವಾಗಿ ಮಾಡಬೇಕೆಂಬ ಜಿಜ್ಞಾಸೆ ಅವರ ಶಿಷ್ಯಂದಿರಲ್ಲಿ ಕಾಡುತ್ತದೆ. ಕಡೆಗೆ ಎಲ್ಲರ ಒಮ್ಮತದಂತೇ ಎರಡು ಧರ್ಮಾಧಾರಿತವಾಗಿ ಕುರಾನ್ ಮತ್ತು ಭಗವದ್ಗೀತಾ ಪಾರಯಣಗಳ ಮೂಲಕ ಎರಡೂ ಧರ್ಮದ ಶಾಸ್ತ್ರಾಧಾರಿತವಾಗಿ ಅವರ ತಂದೆ, ತಾಯಿಯರ ಸಮಾಧಿಯ ಪಕ್ಕದಲ್ಲಿಯೇ ಶಾಶ್ವತವಾದ ನೆಲೆ ನೀಡಿ ಭಾವೈಕ್ಯತೆಯನ್ನು ಎತ್ತಿಹಿಡಿಯುತ್ತಾರೆ.

ashwathಶರೀಷರು ತಮ್ಮ ತತ್ವಪದಗಳನ್ನು ಹೇಳುತ್ತಾ ಹೋದರೆ ಹೊರತು ಅವರೆಂದೂ ಅದನ್ನು ಉದ್ದೇಶಪೂರ್ವಕವಾಗಿ ಬರೆದಿಡಲಿಲ್ಲ. ಅವರು ಹೇಳುತ್ತಾ ಹೋದದ್ದನ್ನು ಅವರ ಅನುಯಾಯಿಗಳು ಮನನ ಮಾಡಿಕೊಂಡು ಕಂಠಸ್ಥ ಮಾಡಿಕೊಂಡು ಒಬ್ಬರ ಬಾಯಿಂದ ಒಬ್ಬರಿಗೆ ತಲುಪುವ ಮೂಲಕ ಪ್ರಚಲಿತವಾಗಿತ್ತು. 70 ಮತ್ತು 80ರ ದಶಕದಲ್ಲಿ ಈ ಮಹಾನ್ ಸಂತನ ತತ್ವ ಪದಗಳನ್ನು ಕೇಳಿ ಪರವಶರದ ಮಹಾನ್ ಗಾಯಕ ಮತ್ತು ಸಂಗೀತಗಾರರಾಗಿದ್ದ ಶ್ರೀ ಸಿ. ಆಶ್ವತ್ ಅವರು ಈ ತತ್ವ ಪದಗಳನ್ನು ಎಲ್ಲರೂ ಕೇಳುವಂತಾಗ ಬೇಕೆಂದು ನಿರ್ಧರಿಸಿ, ಬಹಳ ಆಸ್ಥೆಯಿಂದ ಶರೀಷರು ಅಡ್ಡಾಡಿದ್ದ ಎಲ್ಲಾ ಪ್ರದೇಶಗಳಿಗೂ ಭೇಟಿ ನೀಡಿ ಪ್ರಚಲಿತವಾಗಿದ್ದ ಶರೀಷರ ತತ್ವ ಪದಗಳನ್ನೆಲ್ಲಾ ಜತನದಿಂದ ಸಂಗ್ರಹಿಸಿ ಅದಕ್ಕೊಂದು ಚೆಂದನೆಯ ರಾಗ ಸಂಯೋಜನೆಯನ್ನು ಮಾಡಿ ಕ್ಯಾಸೆಟ್ ಮುಖಾಂತರ ನಾಡಿನಾದ್ಯಂತ ಹರಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಲ್ಲದೇ, ಮುಂದೇ ಸಂತ ಶಿಶುನಾಳ ಶರೀಷ್ ಎಂಬ ಚಲನಚಿತ್ರಕ್ಕೆ ಮೂಲ ಪ್ರೇರಣಾದಾಯರಾಗಿ ಶರೀಫರ ಸಾಧನೆಗಳು ಜನಮಾನಸದಲ್ಲಿ ಚಲನಚಿತ್ರದ ಮುಖಾಂತರ ಚಿರಸ್ಥಾಯಿ ಆಗುವಂತೆ ಮಾಡಿದ್ದಲ್ಲದೇ, ದ್ರೋಣಾಚಾರ್ಯರಿಗೆ ಪರೋಕ್ಷವಾಗಿ ಏಕಲವ್ಯ ಶಿಷ್ಯನಾದಂತೆ, ಆಶ್ವಥ್ ಅವರು ಶರೀಷರ ಶಿಷ್ಯರಾಗಿ ಹೋಗಿದ್ದರು ಎಂದರೂ ತಪ್ಪಾಗಲಾರದು. ಇವೆಲ್ಲದರ ಜೊತೆಗೆ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಗುರು ಗೋವಿಂದ ಭಟ್ಟರು, ಅವರ ನೇರ ಶಿಷ್ಯ ಶರೀಷರು ಮತ್ತು ಅವರ ಮಾನಸ ಶಿಷ್ಯ ಆಶ್ವಥ್ ಈ ಮೂವರ ದೇಹಾಂತ್ಯವಾದದ್ದೂ ತಮ್ಮ 70ನೇ ವಯಸ್ಸಿನಲ್ಲಿಯೇ. ತಮ್ಮ 70ನೇ ಹುಟ್ಟಿದ ಹಬ್ಬದಂದೇ ಶರೀಷರು ಮರಣ ಹೊಂದಿದ್ದನ್ನೇ ಅನುಸರಿಸಿದ ಅವರ ಶಿಷ್ಯ ಸಿ. ಅಶ್ವಥ್ ಆವರೂ ಕೂಡಾ ತಮ್ಮ 70ನೇ ಹುಟ್ಟಿದ ಹಬ್ಬದಂದೇ (29.12.1939 – 29.12.2009) ಇಹಲೋಕ ತ್ಯಜಿಸುತ್ತಾರೆ. ಇದಕ್ಕೇ ಹೇಳುವುದು ಗುರು ಶಿಷ್ಯರ ಸಂಬಂಧ ಎಂದು. ಮತೀಯ ಸೌಹಾರ್ದತೆ ಹಾಗೂ ಭಾವೈಕ್ಯತೆಯನ್ನು ಬೀರಿದ ಈ ಅಪರೂಪದ ಮತ್ತು ಅನುರೂಪದ ಗುರು ಶಿಷ್ಯಂದಿರ ಸಂಬಧ ಸಾವಿನಲ್ಲಿಯೂ ಅವಿನಾಭಾವವಾಗಿ ಉಳಿದುಹೋಗಿದೆ.

shar6ಜೀವನದಲ್ಲಿ ಯಶಸ್ಸನ್ನು ಸಾಧಿಸ ಬೇಕಾದರೆ ಮುಂದೆ ಸ್ಪಷ್ಟವಾದ ಗುರಿ ಇರಬೇಕು ಮತ್ತು ಹಿಂದೆ ದಿಟ್ಟ ಗುರು ಇರಬೇಕು. ಈ ಗುರು ಪೂರ್ಣಿಮೆಯಂದು ಎಲ್ಲರಿಗೂ ಗೋವಿಂದ ಭಟ್ಟರು ಮತ್ತು ಶಿಶುನಾಳ ಶರೀಷರಂತಹ ಗುರುವಿನ ಅನುಗ್ರಹವಾಗಲಿ ತನ್ಮೂಲಕ ಸದ್ವಿದ್ಯೆ ಸದ್ಬುದ್ಧಿ ದೊರೆತು ನಾಡೆಲ್ಲಾ ಸಂವೃದ್ಧವಾಗಲಿ ಎಂದು ಹಾರೈಸೋಣ.

ಏನಂತೀರೀ?

ಈ ಲೇಖನ ಉದಯವಾಣಿಯಲ್ಲಿ ಪ್ರಕಟಿತವಾದ ಶ್ರೀ ಮಹೇಶ್ ಜೋಶಿಯವರ ಲೇಖನದಿಂದ ಪ್ರಭಾವಿತವಾಗಿರುವ ಕಾರಣ ಇದರ ಶ್ರೇಯ ಮೂಲ ಲೇಖಕರಿಗೂ ಸಮಾನವಾಗಿ ಸಲ್ಲುತ್ತದೆ.

One thought on “ಅಪರೂಪ ಮತ್ತು ಅನುರೂಪದ ಗುರು-ಶಿಷ್ಯಂದಿರು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s