ಎಲೆಕೋಸು ಚೆಟ್ನಿ

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಚೆಟ್ನಿ ಇದ್ರೇನೆ ಚೆನ್ನ. ಸಾಮಾನ್ಯವಾಗಿ ಎಲ್ಲರೂ ಮಾಡೋ ಕಾಯಿ ಚೆಟ್ನಿ ಮತ್ತು ಹುರಿಗಡಲೇ ಚೆಟ್ನಿ ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿ ಎಲೇ ಕೋಸು ಚೆಟ್ನಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಎಲೆಕೋಸು ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಸಾಸಿವೆ – 1/2 ಚಮಚ
  • ಕಡಲೇ ಬೇಳೆ – 1 ಚಮಚ
  • ಉದ್ದಿನ ಬೇಳೆ – 2 ಚಮಚ
  • ಒಣಮೆಣಸಿನ ಕಾಯಿ – 6-8 (ಖಾರಕ್ಕೆ ಅನುಗುಣವಾಗಿ)
  • ಕಾಯಿ ತುರಿ – 1/2 ಬಟ್ಟಲು
  • ಹುಣಸೇ ಹಣ್ಣು – 1/2 ಚಮಚ
  • ದೊಡ್ಡ ಗಾತ್ರದ ಹೆಚ್ಚಿದ ಈರುಳ್ಳಿ – 1
  • ಕತ್ತರಿಸಿದ ಎಲೆಕೋಸು – 2 ಬಟ್ಟಲು
  • ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಚಮಚ
  • ಶುಂಠಿ – 1/2 ಇಂಚು
  • ಕರಿಬೇವಿನ ಎಲೆಗಳು 5-6
  • ಬೆಳ್ಳುಳ್ಳಿ – 2-3 ಎಸಳು (ಐಚ್ಚಿಕ)
  • ಅಡುಗೆ ಎಣ್ಣೆ – 1 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು

ಎಲೆಕೋಸು ಚೆಟ್ನಿ ತಯಾರಿಸುವ ವಿಧಾನ

  • ಎಲೆಕೋಸು ಮತ್ತು ಈರುಳ್ಳಿಯನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ
  • ಬಾಣಲೆಯಲ್ಲಿ ಒಂದು ಚಮಚ ಎಣ್ಣೆಯನ್ನು ಹಾಕಿ ಎಣ್ಣೆ ಕಾಯ್ದ ನಂತರ ಕತ್ತರಿಸಿದ ಒಣಮೆಣಸಿನ ಕಾಯಿ, ಕಡಲೇ ಬೇಳೆ ಮತ್ತು ಉದ್ದಿನ ಬೇಳೆಯನ್ನು ಕೆಂಪಗೆ ಹುರಿದುಕುಳ್ಳಿ
  • ಈಗ ಕತ್ತರಿಸಿದ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ
  • ಈ ಮಿಶ್ರಣಕ್ಕೆ ಕತ್ತರಿಸಿದ ಎಲೇ ಕೋಸನ್ನು ಹಾಕಿ ಹಸೀ ಹೋಗುವ ವರೆಗೂ ಹುರಿದುಕೊಳ್ಳಿ
  • ಹುರಿದುಕೊಂಡ ಎಲ್ಲಾ ವಿಶ್ರಣವನ್ನು ಮಿಕ್ಸಿಗೆ ಹಾಕಿಕೊಂಡು ಅದರ ಜೊತೆ ಕಾಯಿತುರಿ, ಕೊತ್ತಂಬರಿ ಸೊಪ್ಪು, ಕರೀಬೇವು, ಶಂಠಿ, ಹುಣಸೇಹಣ್ಣು ಮತ್ತು ಇಷ್ಟವಿದ್ದಲ್ಲಿ ಬೆಳ್ಳುಳ್ಳಿ ಯನ್ನು ಬೆರೆಸಿಕೊಂಡು ಅದರ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ತರಿತರಿಯಾಗಿ ತುಬ್ಬಿಕೊಂಡರೆ ರುಚಿ ರುಚಿಯಾದ ಎಲೆಕೋಸು ಚೆಟ್ನಿ ಸಿದ್ದ.
  • ಇಂಗಿನ ಒಗ್ಗರಣೆಯನ್ನು ಬೆರೆಸಿದಲ್ಲಿ ಈ ಚೆಟ್ನಿಯ ರುಚಿ ಮತ್ತಷ್ಟು ಹೆಚ್ಚುತ್ತದೆ.

ಮೊದಲೇ ತಿಳಿಸಿದಂತೆ ಈ ಚೆಟ್ನಿ ದೋಸೆ, ಇಡ್ಲಿ, ಚಪಾತಿಗಳಲ್ಲದೇ ಅನ್ನದ ಜೊತೆ ಕಲೆಸಿ ಕೊಂಡು ತಿನ್ನಲೂ ಚೆನ್ನಾಗಿರುತ್ತದೆ

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು :

kosu
ಎಲೆಕೋಸು ವರ್ಷದ ಎಲ್ಲಾ ಸಮಯದಲ್ಲಿಯೂ ಸಿಗುವುದಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ಲೆಕೋಸಿನಲ್ಲಿರುವ ಸಿ ವಿಟಾಮಿನ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಇದರಲ್ಲಿರುವ ಕೆ ಜೀವಸತ್ವದಿಂದಾಗಿ ಇದನ್ನು ಸೇವಿಸುವುದರಿಂದ ಅಲ್ಜೀಮರ್ ರೋಗ ಬರದಂತೆಯೂ ತಡೆಯಬಹುದಾಗಿದೆ. ಎಲೆಕೋಸಿನಲ್ಲಿರುವ ಬೀಟಾ ಕೆರೋಟಿನ್ ಕಣ್ಣಿನ ರಕ್ಷಣೆಗೆ ಅಗತ್ಯವಾಗಿದ್ದು, ಇದರ ಸೇವನೆಯಿಂದಾಗಿ ಕಣ್ಣಿನ ಪೊರೆ ಆಗುವುದು ತಪ್ಪುತ್ತದೆ. ನಿಯಮಿತ ಅವಧಿಯಲ್ಲಿ ಎಲೆ ಕೋಸನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳ್ಳುತ್ತದೆಯಲ್ಲದೇ, ಮಲಬದ್ದತೆ, ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಒಂದು ಕಪ್ ಎಲೆಕೋಸಿನಲ್ಲಿ ಕೇವಲ 33 ಕ್ಯಾಲೋರಿ ಮಾತ್ರ ಇರುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ಇದು ಹೇಳಿ ಮಾಡಿಸಿದಂತಹ ತರಕಾರಿಯಾಗಿದೆ.

2 thoughts on “ಎಲೆಕೋಸು ಚೆಟ್ನಿ

    1. ಹೌದು. ಗಡಿಬಿಡಿಯಲ್ಲಿ ಮುಖ್ಯವಾದ ಅಂಶವೇ ಬಿಟ್ಟು ಹೋಗಿತ್ತು. ಈಗ ಅದನ್ನು ಸೇರಿಸಿ ಸರಿಪಡಿಸಿದ್ದೇನೆ.

      ತಪ್ಪನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು

      Like

Leave a comment