ಕಹಿ ಘಟನೆಗಳನ್ನು ಆದಷ್ಟು ಬೇಗ ಮರೆತು ಬಿಡಬೇಕು ಅಂತಾ ದೊಡ್ಡವರು ಹೇಳ್ತಾರೆ. ಆದ್ರೇ ಏನ್ಮಾಡೋದು? ಕೆಲವೊಂದು ಘಟನೆಗಳು ಒಂದೊಂದು ಜಾಗ ಒಂದೊಂದು ಹಬ್ಬ ಇಲ್ಲವೇ ವಸ್ತುಗಳೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಅದನ್ನು ನೋಡಿದ ತಕ್ಷಣವೇ ಥಟ್ ಅಂತಾ ನೆನಪಾಗಿ ಬಿಡುತ್ತವೆ. ಅದೇ ರೀತಿಯಲ್ಲಿ ಭೀಮನ ಅಮಾವಾಸ್ಯೆ ಬಂದ್ರೇ ಗಂಡನ ಪೂಜೆ, ಭಂಡಾರ ಒಡೆಯುವ ಜೊತೆ ವರನಟ ಅಣ್ಣಾವ್ರೇ ನೆನಪಾಗ್ತಾರೆ ನೋಡಿ.
ಅದು 2000ನೇ ಇಸವಿ ಜುಲೈ ತಿಂಗಳು ಭೀಮನ ಅಮಾವಾಸ್ಯೆಯ ದಿನ. ನಮ್ಮ ಮನೆಗೆ ಮಹಾಲಕ್ಷ್ಮಿಯಾಗಿ ಮಗಳು ಬಂದು ಕೇವಲ ಎರಡು ತಿಂಗಳಾಗಿತ್ತು. ಮಗಳು ಹುಟ್ಟಿದ ನಂತರದ ಮೊದಲ ಹಬ್ಬ. ಹಾಗಾಗಿ ಮನೆಯಲ್ಲಿ ಭೀಮನ ಅಮಾವಾಸ್ಯೆ ಕಳೆ ಕಟ್ಟಿತ್ತು ಎಂದರೂ ತಪ್ಪಾಗಲಾರದು. ಮಡದಿ ಬಾಣಂತನಕ್ಕೆ ತವರಿಗೆ ಹೋಗಿದ್ದಳು. ಚಿಕ್ಕ ತಂಗಿ ಅವರ ಮನೆಯಲ್ಲಿ ಭಂಡಾರ ಹೊಡೆಯುವುದಕ್ಕೆ ಆದಾಗಲೇ ಕರೆದಾಗಿತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಅಂದು ಕಛೇರಿಯೂ ಇತ್ತು. ಹಾಗಾಗಿ ಬೆಳ್ಳಂಬೆಳಗ್ಗೆಯೇ ಎದ್ದು ಎಣ್ಣೆ ನೀರು ಸ್ನಾನ ಮಾಡಿ ನಮ್ಮ ಮನೆಯಲ್ಲಿ ಪೂಜೆ ಮುಗಿಸಿ ಅಲ್ಲಿಂದ ತಂಗಿಯ ಮನೆಗೆ ಹೋಗಿ ಭಂಡಾರ ಒಡೆದು ತಿಂಡಿ ತಿಂದು ಅಲ್ಲಿಂದ ಅತ್ತೆಯ ಮನೆಗೆ ಹೋಗಿ ಗೌರೀ ದಾರ ಕಟ್ಟಿಕೊಂಡ ಮಡದಿ ಮತ್ತು ಮಗಳನ್ನು ಮಾತನಾಡಿಸಿಕೊಂಡು ಕಛೇರಿಗೆ ಹೋಗಬೇಕು ಎಂದು ರಾತ್ರಿಯೇ ನಿರ್ಧರಿಸಿಯಾಗಿತ್ತು.
ಬೆಳಿಗ್ಗೆ ಎದ್ದೊಡನೆಯೇ ಅಂದು ಕೊಂಡಂತೆ ಮನೆಯಲ್ಲಿ ಪೂಜೆ ಮಾಡಿಕೊಂಡು ತಂಗಿಯ ಮನೆಗೆ ಭಂಡಾರ ಒಡೆದು ಇನ್ನೇನು ಉದ್ದಿನ ಕಡುಬಿಗೆ ಕೈ ಹಾಕಬೇಕು ಎನ್ನುವಷ್ಟರಲ್ಲಿ ನಮ್ಮ ತಂಗಿಯ ಮನೆಯ ಪಕ್ಕದವರು ವಿಷ್ಯಾ ಗೊತ್ತಾಯ್ತಾ? ವೀರಪ್ಪನ್ ಅಣ್ಣಾವ್ರನ್ನಾ ಕಿಡ್ನಾಪ್ ಮಾಡ್ಬಿಟ್ಟಿದ್ದಾನಂತೇ ಅಂದ್ರೂ. ಅರೇ ಹೌದಾ? ನನಗೇ ಗೊತ್ತೇ ಇರಲಿಲ್ಲ ಎಂದು ದೇವ್ರೇ ದೇವ್ರೇ ಅವರು ಹೇಳಿದ್ದು ಸುಳ್ಳಾಗಿರಲಿ ಅಂತ ಮನಸ್ಸಿನಲ್ಲಿ ಅನ್ಕೊಂಡು ಟಿವಿ ಹಾಕಿ ಫ್ಲಾಷ್ ನ್ಯೂಸ್ ನೋಡ್ತಿದ್ದೇ ತಡಾ ಎದೆ ಧಸಕ್ ಎಂದಿತು. ಅವರು ಹೇಳಿದ್ದು ನಿಜ. ಹೀಗೆ 21 ವರ್ಷದ ಹಿಂದೆ ಭೀಮನ ಅಮಾವಾಸ್ಯೆಯ ಹಿಂದಿನ ದಿನ ಅಚಾನಕ್ಕಾಗಿ ಕತ್ತಲಿನಲ್ಲಿ ಅಣ್ಣಾವ್ರನ್ನು ಅವರ ಸ್ವಗ್ರಾಮವಾದ ಗಾಜನೂರಿನಿಂದಲೇ ವೀರಪ್ಪನ್ ಅಪಹರಿಸಿದ್ದ.
ಕೂಡಲೇ ಸಮಸ್ಯೆಯ ಗಂಭೀರತೆ ಅರಿವಾಗಿತ್ತು. ಆಗ ನನ್ನ ಆಫೀಸ್ ಇದ್ದದ್ದು ಬೆಂಗಳೂರಿನ ಹೃದಯಭಾಗವಾದ ಎಂ. ಜಿ. ರೋಡನಲ್ಲಿ. ನಮ್ಮ ಮನೆಯಿಂದ ಅಲ್ಲಿಗೆ ತಲುಪಲು ಮೇಖ್ರೀ ಸರ್ಕಲ್ ಇಲ್ಲವೇ ಸದಾಶಿವ ನಗರ ದಾಟಿಯೇ ಹೋಗಬೇಕಾಗಿತ್ತು. ಸುಮ್ಮನೆ ಹೋಗಿ ಸಮಸ್ಯೆಗೆ ಏಕೆ ಸಿಲುಕಿಕೊಳ್ಳಬೇಕು ಎಂದು ಅಂದು ಕಛೇರಿಗೆ ಹೋಗದಿರಲು ನಿರ್ಧರಿಸಿ ಸೀದ ಅತ್ತೆಯ ಮನೆಗೆ ಹೋಗಿ ಮಗಳು ಮತ್ತು ಮಡದಿಯನ್ನು ನೋಡಿಕೊಂಡು ಅತ್ತೆಯ ಮನೆಯ ಆತಿಥ್ಯವನ್ನೂ ಸವಿದು ಮನೆಗೆ ಹಿಂತಿರುಗಿ ಬರುವಷ್ಟರಲ್ಲಿ ನಮ್ಮ ಕಛೇರಿಯಿಂದ ಮನೆಗೆ ಫೋನ್ ಮಾಡಿ ನಂತರ ನಮ್ಮ ಮಾವನ ಮನೆಯ ಲ್ಯಾಂಡ್ ಲೈನ್ ನಂಬರ್ ತೆಗೆದುಕೊಂಡು ಅಲ್ಲಿಗೂ ಕರೆಮಾಡಿದ್ದರು. ವಿಷಯದ ಗಂಭೀರತೆಯನ್ನು ತಿಳಿಸಿ ಪರಿಸ್ಥಿತಿ ತಿಳಿಯಾದ ಮೇಲೆ ಕಛೇರಿಗೆ ಬರುತ್ತೇನೆ ಎಂದು ತಿಳಿಸಿದೆ. ಅವರೂ ಸಹಾ ಅದಕ್ಕೆ ಒಪ್ಪಿ ಅಗತ್ಯವಿದ್ದಾಗ ಫೋನಿನಲ್ಲಿಯೇ ಸಹಕರಿಸು ಎಂದು ಕೇಳಿಕೊಂಡಿದ್ದರು. ಹೇಗೂ ನನ್ನ ತಂಡ 24×7 ಕೆಲಸ ಮಾಡುತ್ತಿತ್ತು. ಅವರಿಗೆ ಕರೆ ಮಾಡಿ ಏನೇನು, ಹೇಗೇಗೇ ಮಾಡಬೇಕು ಎಂದು ಮತ್ತೊಮ್ಮೆ ತಿಳಿಸಿದೆ. ಈಗಿನ ರೀತಿ ಮೊಬೈಲ್ ಇರಲಿಲ್ಲವಾದ್ದರಿಂದ ಯಾವುದೇ ಸಮಸ್ಯೆ ಇದ್ದರೂ ನಮ್ಮ ಮನೆಗಾಗಲೀ ಅಥವಾ ನಮ್ಮ ಮಾವನ ಮನೆಯ ಲ್ಯಾಂಡ್ ಲೈನಿಗೆ ಕರೆ ಮಾಡಿ ಎಂದು ತಿಳಿಸಿದೆ.
ಮಧ್ಯಾಹ್ನದ ಹೊತ್ತಿಗೆ ನನ್ನ ಪ್ರಾಣ ಸ್ನೇಹಿತ ಕೃಷ್ಣ, ಮನೆಯ ಲ್ಯಾಂಡ್ ಲೈನಿಗೇ ಕರೆ ಮಾಡಿ ಎಲ್ಲಿದ್ದೀಯೋ ಅಂದಾ? ಲ್ಯಾಂಡ್ ಲೈನಿಗೆ ಕರೆ ಮಾಡಿ ಎಲ್ಲಿದ್ದೇಯಾ ಅಂತಾ ಕೇಳ್ತೀಯಾ? ಅಂತಾ ಜೋರಾಗಿ ನಗುತ್ತಾ ಮನೆಯಲ್ಲಿಯೇ ಇದ್ದೇನೆ ಏನು ಸಮಾಚಾರ ಅಂದೆ. ಸಮಾಚಾರ ಅಂತೇ ಸಮಾಚಾರ ಎಲ್ಲಾ ನನ್ನ ಗ್ರಹಚಾರ.. ಆಫೀಸಿಗೆ ಹೋಗಿದ್ಯಾ? ಅಂತ ಕೇಳ್ದಾ. ಹೇ ಹೇಗೋ ಹೋಗೋದಿಕ್ಕೆ ಆಗುತ್ತೇ? ಅಣ್ಣಾವ್ರ ಕಿಡ್ನಾಪ್ ವಿಷ್ಯ ತಿಳಿದ್ಮೇಲೆ ಆಫೀಸಿಗೆ ಹೋಗ್ಲಿಲ್ಲ ಅಂದೇ. ನೀನು ಆಫೀಸಿಗೆ ಹೋಗಲ್ಲಾ ಅಂದ್ರೇ ನನಗೆ ಯಾಕೆ ಹೇಳಲಿಲ್ಲಾ ಬಂದೇ ಇರು ಮನೆಗೆ ಬಂದ್ ಮಾಡೀನಿ ಎಂದ. ಅವನು ಹಾಗೆ ಅಂದಾಗಲೇ ನನಗೆ ನೆನಪಿಗೆ ಬಂದಿದ್ದು. ಪ್ರತೀ ದಿನ ಕೃಷ್ಣನನ್ನು ಪಿಕ್ ಅಪ್ ಮಾಡಿ ಎಂಜಿ ರಸ್ತೆಯ ಅನಿಲ್ ಕುಂಬ್ಲೆ ಸರ್ಕಲ್ ಬಳಿ ಇದ್ದ ಅವನ ಇನಿಸ್ಟಿಟ್ಯೂಟ್ ಬಳಿ ಬಿಟ್ಟು ಹೋಗ್ತಾ ಇದ್ದೆ. ಆದ್ರೇ ಅವತ್ತು ಅವಸರದಲ್ಲಿ ಕೃಷ್ಣನಿಗೆ ಆಫೀಸಿಗೆ ಹೋಗ್ತಾ ಇಲ್ಲಾ ಅನ್ನೋದನ್ನು ಹೇಳೋದು ಮರ್ತಿದ್ದೆ.
ಐದು ಹತ್ತು ನಿಮಿಷದಲ್ಲಿಯೇ ಬುಸು ಬುಸುಗುಟ್ಟುತ್ತಲೇ ಮನೆಗೆ ಬಂದ ಕೃಷ್ಣ ನಿನ್ನಿಂದ ಎಷ್ಟು ಅನಾಹುತ ಆಯ್ತು ಗೊತ್ತಾ? ಬೆಳಿಗ್ಗೆ ನಿನಗೆ ಕಾದೂ ಕಾದೂ ಸುಸ್ತಾಗಿ ಲೇಟ್ ಆಗುತ್ತೇ ಅಂತಾ ಬಸ್ಸಿನಲ್ಲಿ ಇನಿಸ್ಟಿಟ್ಯೂಟಿಗೆ ಹೋದ್ಮೇಲೆ ಅಣ್ಣಾವ್ರ ಕಿಡ್ನಾಪ್ ಆಗಿದ್ದ ಕಾರಣ ಇನಿಸ್ಟಿಟ್ಯೂಟಿಗೆ ರಜೆ ಕೊಟ್ಟಿದ್ದಾರೆ ಅಂತ ಗೊತ್ತಾಯ್ತು. ಸರಿ ಮನೆಗೆ ಹಿಂದಿರಿಗಿ ಬರುವುದಕ್ಕೆ ಯಾವ ಬಸ್ಸೂ ಸಿಗದೇ ಹಾಗೂ ಹೀಗೂ ಸದಾಶಿವನಗರ ಪೋಲೀಸ್ ಸ್ಟೇಷನ್ ವರೆಗೂ ಯಾರ್ಯಾದೋ ಡ್ರಾಪ್ ತೆಗೆದುಕೊಂಡು ಬಂದು ಅಲ್ಲಿಂದ ನಡ್ಕೊಂಡು ರಾಮಯ್ಯ ಕಾಲೇಜ್ ವರೆಗೂ ಬಂದ್ರೇ ಅಲ್ಲಿ ಕೆಲವರು ಅಣ್ಣಾವ್ರ ಕಿಡ್ನಾಪ್ ಆಗಿದ್ದಕ್ಕೆ ಟೈರ್ ಸುಡ್ತಾ ಇದ್ರು. ಅವರು ನನ್ನನ್ನು ನೋಡಿದ ಕೂಡಲೇ ಏನೂ ನಿನ್ನ ಹೆಸ್ರೂ ಅಂದ್ರು. ನಾನು ಕೃಷ್ಣಾ ಎಂದಿದ್ದೇ ತಡಾ, ಫಟ್ ಅಂತಾ ಯಾರೋ ಹಿಂದಿನಿಂದ ತಲೆ ಮೇಲೆ ಹೊಡೆದ ಹಾಗಾಯ್ತು. ಯಾರೋ ಅದು ಹೊಡೆದದ್ದು ಅಂತಾ ತಿರುಗಿ ನೋಡುತ್ತಿದ್ದಂತೆಯೇ ಮತ್ತೊಂದು ಹೊಡೆತ. ಈ ತಮಿಳ್ರೆಲ್ಲಾ ಬಂದು ನಮ್ಮ ಅಣ್ಣಾವ್ರನ್ನು ಕಿಡ್ನಾಪ್ ಮಾಡ್ಬಿಟ್ಟಿದ್ದಾರೆ. ಇವರನ್ನು ಸುಮ್ಮನೇ ಬಿಡಬಾರದು ಅಂತಾ ಯಾರೋ ಹೇಳಿದ್ದು ಕೇಳಿಸ್ತು. ಅರೇ ನಾನು ತಮಿಳಿಗನಲ್ಲ. ಅಪ್ಪಟ ಕನ್ನಡಿಗ. ನನ್ನ ಹಣೆ ಮೇಲಿರುವ ಮುದ್ರೇ ನೋಡಿ ಅಂತಾ ತೋರಿಸಿದ್ದಕ್ಕೆ ಮತ್ತೊಂದು ಒದೆ ಕೊಟ್ತು ಹೋಗ್ ಅಂತಾ ಕಳಿಸಿದ್ರು ನೋಡು. ಎಲ್ಲಾ ನಿನ್ನಿಂದಲೇ ಆಗಿದ್ದು ಎಂದ. ನನಗೆ ಅವನ ಪರಿಸ್ಥಿತಿ ಅರಿವಾಗಿ ನಗು ಬರ್ತಾ ಇದ್ರೂ ಅದನ್ನು ತೋರಿಸಿಕೊಳ್ಳಲಿಲ್ಲ ಸಾರಿ ಸಾರಿ ನನ್ನದೇ ತಪ್ಪು ಎಂದು ಸಮಾಧಾನ ಪಡಿಸಿದೆ. ಅದೇನಪ್ಪಾ ಅಂದ್ರೇ ನನ್ನ ಗೆಳೆಯ ಅವನ ಹೆಸರಿಗೆ ಅನ್ವರ್ಥದಂತೇ ಕೃಷ್ಣ ವರ್ಣದವ. ಅಪ್ಪಟ್ಟ ಕನ್ನಡಿಗನಾದರೂ ನೋಡಲು ಪಕ್ಕಾ ತಮಿಳರಂತೆಯೇ ಇದ್ದ ಕಾರಣ ಈ ರೀತಿಯ ಮುಜುಗರಕ್ಕೆ ಒಳಗಾಗಿದ್ದ.
ಎರಡು ಮೂರು ದಿನ ಎಲ್ಲರ ಬಾಯಿಯಲ್ಲಿ, ಟಿವಿಯಲ್ಲಿ, ಪೇಪರಿನಲ್ಲಿ ಎಲ್ಲಾ ಕಡೆಯೂ ಅಣ್ಣಾವ್ರ ಮಾತೇ. ಇಡೀ ರಾಜ್ಯ ಅಘೋಷಿತ ಬಂದ್. ಅಣ್ಣಾವ್ರು ಕಿಡ್ನಾಪ್ ಆದಾಗ ಆಫೀಸಿನಲ್ಲಿ ಇದ್ದವರು ಹೊರಗೆ ಬರಲಾಗದೇ ಮೂರ್ನಾಲ್ಕು ದಿನ ಎಲ್ಲವೂ ಅಲ್ಲಿಯೇ. ಅವರ ಪುಣ್ಯಕ್ಕೆ ನಮ್ಮ ಆಫೀಸಿನ ಪಕ್ಕದಲ್ಲಿಯೇ ಇದ್ದ ಬೃಂದಾವನ್ ಹೋಟೆಲ್ ಇದ್ದ ಕಾರಣ ಅಲ್ಲಿಂದಲೇ ನಮ್ಮ ಕಛೇರಿಯವರು ಎಲ್ಲರಿಗೂ ಊಟ ತಿಂಡಿ ವ್ಯವಸ್ಥೆಯನ್ನು ಮಾಡ್ದಿದ್ದ ಕಾರಣ ವಿಧಿ ಇಲ್ಲದೇ ಅವರೆಲ್ಲರೂ ಎಂದಿನಂತೆ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದ ಕಾರಣ ನನಗೆ ಸ್ವಲ್ಪ ನಿರಾಳವಾಗಿತ್ತು. ಅಗತ್ಯವಿದ್ದಾಗ ಲಾಂಡ್ ಲೈನಿನಿಂದ ಡೈಯಲ್ ಮಾಡಿ, ರಿಮೋಟ್ ಕಂಟ್ರೋಲ್ ಮುಖಾಂತರ ಅಲ್ಪಸ್ವಲ್ಪ ಕೆಲಸ ಮುಗಿಸಿ ಉಳಿದದ್ದೆಲ್ಲವನ್ನೂ ಹುಡುಗರಿಗೆ ಪೋನ್ ಮುಖಾಂತರ ಮಾಡಿ ಹಾಗೂ ಹೀಗೂ ಕೆಲಸ ಮುಗಿಸುತ್ತಿದ್ದೆ.
ನಮ್ಮದೋ online portal ಕಂಪನಿ. ಕ್ಷಣ ಕ್ಷಣಕ್ಕೂ ಅಣ್ಣಾವ್ರ ಕಿಡ್ನಾಪ್ ಬಗ್ಗೆ ಅಪ್ಡೇಟ್ ಮಾಡ್ಬೇಕಾಗಿತ್ತು. ಹಾಗೂ ಹೀಗೂ ಮೂರ್ನಾಲ್ಕು ದಿನ ಕಳೆದ ನಂತರ ಸ್ವಲ್ಪ ತಿಳಿಯಾದ ನಂತರ ನಾನು ಕಛೇರಿಗೆ ಹೋದೆ. ಹೋದ ತಕ್ಷಣವೇ ನಮ್ಮ ಬಾಸ್ ಕರೆದು, ಅಂದಿನ ಕಾಲಕ್ಕೆ ಪ್ರಸಿದ್ಧವಾಗಿದ್ದ Nokia6100 Box piece ಕೈಗಿತ್ತು ಇನ್ನು ಮುಂದೆ ಇದು ನಿನ್ನ official phone ಎಂದು ಕೈಗಿತ್ತಾಗ ಸ್ವರ್ಗಕ್ಕೆ ಮೂರೇ ಗೇಣು. ಅಂದೆಲ್ಲಾ Incoming callಗೆ 4ರೂ. & outgoing callಗೆ 8ರೂ ಇದ್ದ ಜಮಾನ. ಮೊಬೈಲ್ ಫೋನ್ ಸೊಂಟಕ್ಕೆ ನೇತು ಹಾಕಿಕೊಳ್ಳುವುದೇ ಒಂದು ಘನತೆ ಎನ್ನುವಂತಹ ಕಾಲದಲ್ಲಿ ಅಣ್ಣಾವ್ರ ದಯೆಯಿಂದ ನನಗೆ official ಮೊಬೈಲ್ ಬಂದಿತ್ತು.
ಅಣ್ಣಾವ್ರು ಇವತ್ತು ಬಿಡುಗಡೆ ಆಗ್ತಾರೆ ನಾಳೆ ಬಿಡುಗಡೆ ಆಗ್ತಾರೆ ಅಂತ ನಾವೂ ನಮ್ಮ Portalನಲ್ಲಿ ಹಾಕ್ತಾನೇ ಇದ್ವೀ. ಸಮಸ್ತಕನ್ನಡಿಗರೂ ಬಕ ಪಕ್ಷಿಗಳ ತರಹ ಅಣ್ಣಾವ್ರ ಬಿಡುಗಡೆಗೆ ಕಾಯ್ತಾನೇ ಇದ್ರು. ವೀರಪ್ಪನ್ ಕ್ಯಾಸೆಟ್ ಮೇಲೆ ಕ್ಯಾಸೆಟ್ ಕಳಿಸ್ತಾ ಇದ್ನೇ ಹೊರ್ತು ಅವನು ಮಾತ್ರ ನಮ್ಮ ಕರ್ನಾಟಕದ ಪೋಲೀಸರ ಕೈಗೆ ಸಿಗಲೇ ಇಲ್ಲ. ಇಷ್ಟರ ಮಧ್ಯೆ ವೀರಪ್ಪನ್ ತರಹಾನೇ ಮೀಸೆ ಬಿಟ್ಕೊಂಡಿದ್ದ ನಕ್ಕಿರನ್ ಗೋಪಾಲ್ ಮಾತ್ರಾ ಅಡುಗೆ ಮನೆ ಬಚ್ಚಲು ಮನೆಗೆ ಹೋಗುವ ಹಾಗೆ ನಾಡಿಗೂ ಕಾಡಿಗೂ ಅಡ್ಡಾಡುತ್ತಾ ಅಣ್ಣಾವ್ರ ಫೋಟೋ ತಂದು ತೋರಿಸ್ತಿದ್ದದ್ದೇ ಆಯ್ತು. ನಾಗಪ್ಪ ವೀರಪ್ಪನಿಂದ ತಪ್ಪಿಸಿಕೊಂಡು ಬಂದಾಗ ನಮ್ಮ ಆಫೀಸಿನಲ್ಲಿಯೇ ಅವನ Interview ಕೂಡಾ ಮಾಡಿದ್ವಿ. ಅಂತೂ ಇಂತೂ 108 ದಿನಗಳ ನಂತರ ಅಣ್ಣಾವ್ರು ಬಿಡುಗಡೆ ಯಾದ್ಮೇಲೇನೇ ಕರ್ನಾಟಕದಲ್ಲಿ ಹಬ್ಬದ ವಾತಾವರಣ. ಅಣ್ಣಾವ್ರು ನಮ್ಮ ಜೊತೆ ಇಲ್ಲಾ ಅಂತಾ ಬಹುತೇಕ ಕನ್ನಡಿಗರೂ ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ಬರುವ ಒಂದೂ ಹಬ್ಬವನ್ನೇ ಆಚರಿಸಲಿರಲಿಲ್ಲ.
ಹೀಗೆ ಪ್ರತೀ ವರ್ಷ ಭೀಮನ ಅಮಾವಾಸ್ಯೆ ಬಂದಾಗಲೂ ನನಗೆ ಅಣ್ಣಾವ್ರು ನನ್ನ ಕಣ್ಣ ಮುಂದೇನೇ ಬಂದು ಹೋಗ್ತಾರೆ. ಅಣ್ಣಾವ್ರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರ ಸಿನಿಮಾಗಳ ಮುಖಾಂತರ ನಮ್ಮೊಂದಿಗೆ ಚಿರಕಾಲವೂ ಇದ್ದೇ ಇರ್ತಾರೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ