ಒಮ್ಮೆ ಇಬ್ಬರು ವ್ಯಕ್ತಿಗಳು ಅರಳೀ ಕಟ್ಟೆಯ ಬಳಿ ಕುಳಿತು ಲೋಕೋಭಿರಾಮವಾಗಿ ಹರಟುತ್ತಿದ್ದರು. ಅದಾಗಲೇ ಸಂಜೆಯಾಗಿದ್ದು ದಟ್ಟವಾದ ಕಾರ್ಮೋಡ ಕವಿದಿತ್ತು. ಅಷ್ಟೊತ್ತಿಗೆ ಅಲ್ಲಿಗೆ ಅಪರಿಚಿತ ವ್ಯಕ್ತಿಯೊಬ್ಬರ ಆಗಮನವಾಗಿ, ಅಭ್ಯಂತರವಿಲ್ಲದಿದ್ದರೆ, ನಾನೂ ನಿಮ್ಮೊಂದಿಗೆ ಸೇರಿಕೊಳ್ಳಬಹುದೇ ಎಂದು ಕೇಳಿದಾಗ ಅವರಿಬ್ಬರೂ ಓಹೋ ಅಗತ್ಯವಾಗಿ ಎಂದು ಹೇಳಿದರು.
ಅವರೆಲ್ಲರೂ ತಮ್ಮ ಮಾತುಕಥೆ ಮುಂದುವರೆಸುತ್ತಿದ್ದಂತೆಯೇ, ಜೋರಾಗಿ ಮಳೆ ಬರಲು ಪ್ರಾರಂಭಿಸಿದಾಗ ಎಲ್ಲರೂ ಹತ್ತಿರದ ದೇವಸ್ಥಾನದ ಒಳಗೆ ಹೋಗಿ ಮಳೆಯಿಂದ ತಮ್ಮನ್ನು ರಕ್ಷಿಸಿಕೊಂಡರು. ಆಷ್ಟರಲ್ಲಿ ಆ ಆಗಂತುಕನು ನನಗೆ ಹಸಿವಾಗುತ್ತಿದೆ ಎಂದಾಗ ಉಳಿದ್ದಬ್ಬರೂ ಸಹಾ ಹೌದು ನಮಗೂ ಹಸಿವಾಗುತ್ತಿದೆ ಎಂದು ಧನಿಗೂಡಿಸಿದರು.
ಒಬ್ಬನ ಬಳಿ 3 ರೊಟ್ಟಿ ಮತ್ತು ಮತ್ತೊಬ್ಬನ ಬಳಿ 5 ರೊಟ್ಟಿಗಳಿದ್ದ ಕಾರಣ ಎಲ್ಲರೂ ಅದನ್ನೇ ಹಂಚಿಕೊಂಡು ತಿನ್ನಲು ನಿರ್ಧರಿಸಿದರು. ಆದರೆ 8 ರೊಟ್ಟಿಗಳನ್ನು 3 ಜನರು ಹೇಗೆ ಹಂಚಿಕೊಳ್ಳುವುದು? ಎಂಬ ಜಿಜ್ಞಾಸೆ ಕಾಡತೊಡಗಿತು.
ಆಗ ಮೊದಲನೇ ವ್ಯಕ್ತಿ ಪ್ರತೀ ರೋಟ್ಟಿಗಳನ್ನು ಮೂರು ಭಾಗಗಳಾಗಿ ಮಾಡಿದಲ್ಲಿ 3×8 = 24 ತುಂಡುಗಳಾಗುತ್ತದೆ. ಆಗ ಸುಲಭವಾಗಿ ಪ್ರತಿಯೊಬ್ಬರೂ ತಲಾ 8 ತುಂಡುಗಳನ್ನು ಹಂಚಿಕೊಂಡು ತಿನ್ನಬಹುದು ಎಂದಾಗ ಎಲ್ಲರಿಗೂ ಆ ನಿರ್ಧಾರ ಸರಿ ಎನಿಸಿ ಅದೇ ರೀತಿಯಾಗಿ ಅವರು 24 ತುಂಡುಗಳನ್ನು ಮಾಡಿ ತಲಾ 8 ತುಂಡುಗಳನ್ನು ತಿಂದು ತಮ್ಮ ಹಸಿವನ್ನು ನೀಗಿಸಿಕೊಂಡಿದ್ದಲ್ಲದೇ, ಮಳೆ ಇನ್ನೂ ಜೋರಾಗಿಯೇ ಸುರಿಯುತ್ತಿದ್ದ ಕಾರಣ ಆ ರಾತ್ರಿ ಅಲ್ಲಿಯೇ ಮಲಗಿದರು.
ಮಾರನೆಯ ದಿನ ಬೆಳಿಗ್ಗೆ ಆ ಆಗಂತಕನು ತಮ್ಮೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ತಮ್ಮಲ್ಲಿದ್ದ ರೊಟ್ಟಿಗಳನ್ನೂ ಹಂಚಿಕೊಂಡಿದ್ದಕ್ಕಾಗಿ ಉಳಿದವರಿಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಲ್ಲದೇ, ಕೃತಜ್ಞತಾ ಪೂರ್ವಕವಾಗಿ ಅವರಿಗೆ 8 ಚಿನ್ನದ ನಾಣ್ಯಗಳನ್ನು ನೀಡಿ ಪರಸ್ಪರ ಹಂಚಿಕೊಳ್ಳಲು ತಿಳಿಸಿ ತಮ್ಮ ಮಾರ್ಗವನ್ನು ಮುಂದುವರಿಸಿದನು.
ಅವನು ಹೋದ ನಂತರ, ಮೊದಲ ವ್ಯಕ್ತಿ ತಲಾ 4 ನಾಣ್ಯಗಳನ್ನು ಹಂಚಿಕೊಳ್ಳೋಣ ಎಂದರೆ, ಅದಕ್ಕೊಪ್ಪದ ಎರಡನೆಯ ವ್ಯಕ್ತಿ ನಾನು 5 ರೊಟ್ಟಿಗಳನ್ನು ಮತ್ತು ನೀನು 3 ರೊಟ್ಟಿಗಳನ್ನು ನೀಡಿದ್ದರಿಂದ 5:3ರ ಅನುಪಾತದಲ್ಲಿ ನನಗೆ 5 ಚಿನ್ನದ ನಾಣ್ಯಗಳು ಸಲ್ಲಬೇಕು ಎಂಬ ವಾದವನ್ನು ಮಂಡಿಸಿದನು. ಈ ವಾದಕ್ಕೆ ಒಪ್ಪದ ಮೊದಲನೆಯವನು ಒಪ್ಪದ ಕಾರಣ, ಜಗಳ ತಾರಕ್ಕೇರಿ, ನ್ಯಾಯಕ್ಕಾಗಿ ಗ್ರಾಮದ ಮುಖ್ಯಸ್ಥರ ಬಳಿಗೆ ಹೋದರು. ಇವರಿಬ್ಬರ ವಾದಗಳನ್ನು ಆಲಿಸಿದ ಮುಖ್ಯಸ್ಥರು, ಆ ನಾಣ್ಯಗಳನ್ನು ನನ್ನ ವಶಕ್ಕೊಪ್ಪಿಸಿ ಬಿಡಿ. ನಾನು ಈ ಕುರಿತಂತೆ ಯೋಚಿಸಿ ಮರುದಿನ ತೀರ್ಪು ನೀಡುತ್ತೇನೆ ಎಂದು ಇಬ್ಬರನ್ನೂ ಸಾಗಹಾಕಿದರು.
ಊರಿನ ಮುಖ್ಯಸ್ಥರು, ಊಟವಾದ ನಂತರ ಈ ಸಮಸ್ಯೆಗೆ ಹೇಗೆ ಪರಿಹಾರವನ್ನು ಸೂಚಿಸುವುದೇ ಎಂಬುದನ್ನೇ ಯೋಚಿಸುತ್ತಲೇ ನಿದ್ರೆಗೆ ಜಾರಿದಾಗ, ಅವರ ಕನಸಿನಲ್ಲಿ ದೇವರು ಕಾಣಿಸಿಕೊಂಡು, ಮಾರನೇಯ ದಿನ ನೀನು ಯಾವ ರೀತಿಯಾಗಿ ನ್ಯಾಯ ನೀಡುತ್ತೀಯೇ? ಎಂದು ವಿಚಾರಿಸಿದನು. ಆಗ ಆ ಮುಖ್ಯಸ್ಥನು, ನನಗೆ ಎರಡನೆಯ ವ್ಯಕ್ತಿಯ 5: 3 ಅನುಪಾತ ತಾರ್ಕಿಕವಾಗಿ ಕಾಣುತ್ತಿದೆ ಎಂದನು.
ಅದಕ್ಕೆ ದೇವರು ನಗುತ್ತಾ, ನೀನು ಈ ವಿಷಯದಲ್ಲಿ ಗಂಭೀರವಾದ ಆಲೋಚನೆ ಮಾಡದಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದಿದ್ದಲ್ಲದೇ, ನನ್ನ ನ್ಯಾಯದ ಪ್ರಕಾರ ಮೊದಲ ವ್ಯಕ್ತಿಯು ಕೇವಲ ಒಂದು ಚಿನ್ನದ ನಾಣ್ಯಕ್ಕೆ ಅರ್ಹನಾಗಿರುತ್ತಾನೆ ಮತ್ತು ಉಳಿದ 7 ಚಿನ್ನದ ನಾಣ್ಯಗಳನ್ನು ಎರಡನೆಯ ವ್ಯಕ್ತಿಯು ಪಡೆಯಲು ಆರ್ಹನಾಗಿರುತ್ತಾನೆ ಎಂದು ಹೇಳಿದಾಗ, ಅದನ್ನು ಕೇಳಿದ ಗ್ರಾಮದ ಮುಖ್ಯಸ್ಥರಿಗೆ ಆಶ್ಚರ್ಯವಾಯಿತು.
ಮತ್ತೆ ಮಾತನ್ನು ಮುಂದುವರೆಸಿದ ದೇವರು, ಮೊದಲ ವ್ಯಕ್ತಿ ನಿಸ್ಸಂದೇಹವಾಗಿ ತನ್ನ ಮೂರು ರೊಟ್ಟಿಗಳಲ್ಲಿ ಒಂಬತ್ತು ತುಣುಕುಗಳನ್ನು ಮಾಡಿದ್ದು ಹೌದಾದರೂ, ಆದರೆ ಅದರಲ್ಲಿ ಸ್ವತಃ 8 ತುಂಡುಗಳನ್ನು ಅತನೇ ತಿಂದು ಕೇವಲ ಒಂದೇ ಒಂದು ತುಂಡನ್ನು ಮಾತ್ರ ಆಗಂತಕನೊಂದಿಗೆ ಹಂಚಿಕೊಂಡಿದ್ದಾನೆ. ಆದರೆ ಅದೇ, ಎರಡನೇ ವ್ಯಕ್ತಿ ತನ್ನ ಬಳಿ ಇದ್ದ 5 ರೊಟ್ಟಿಗಳಲ್ಲಿ 15 ತುಣುಕುಗಳನ್ನು ಮಾಡಿ ಸ್ವತಃ 8 ತುಂಡುಗಳನ್ನು ತಾನು ತಿಂದು ಉಳಿದ 7 ತುಣುಕುಗಳನ್ನು ಆಗಂತಕನೊಂದಿಗೆ ಹಂಚಿಕೊಂಡಿದ್ದಾನೆ. ಹಾಗಾಗಿ ನನ್ನ ಲೆಕ್ಕಾಚಾರದ ಪ್ರಕಾರ 1: 7 ಹಂಚಿಕೆಯು ನ್ಯಾಯಯುತವಾಗಿದೆ ಎಂದು ತಿಳಿಸಿದನು. ಮರುದಿನ ಬೆಳಿಗ್ಗೆ ಗ್ರಾಮದ ಮುಖ್ಯಸ್ಥರು ದೇವರು ಕನಸಿನಲ್ಲಿ ಹೇಳಿದಂತೆಯೇ ತಾರ್ಕಿಕತೆಯನ್ನು ವಿವರಿಸಿ ಸಮಸ್ಯೆಯನ್ನು ಸೂಕ್ತರೀತಿಯಲ್ಲಿ ಇಬ್ಬರೂ ಒಪ್ಪಿಗೆಯಾಗುವಂತೆ ಬಗೆಹರಿಸಿದನು.
ಈ ಕಥೆಯಿಂದ ನಾವು ಅರ್ಥಮಾಡಿಕೊಳ್ಳುವುದೇನಂದರೇ, ಪ್ರತೀ ಸಮಸ್ಯೆಗಳಿಗೂ ಹಲವಾರು ರೀತಿಯ ಪರಿಹಾರವಿರುತ್ತದೆ ಮತ್ತು ವಿವಿಧ ದೃಷ್ಟಿಕೋನಗಳಿರುತ್ತವೆ. ಹಾಗಾಗಿಯೇ, ಆ ಸಮಸ್ಯೆಯನ್ನು ನಾವು ನೋಡಿದ ರೀತಿಗೂ ದೇವರು ನೋಡಿದ ರೀತಿಗೂ ಬಹಳ ಭಿನ್ನವಾಗಿತ್ತು. 30 ಕೋಟಿ ರೂಪಾಯಿಗಳನ್ನು ಹೊಂದಿದ್ದಂತಹ ವ್ಯಕ್ತಿಕೊಡುವ 3 ಲಕ್ಷ ರೂ. ದೇಣಿಗೆಗಿಂತಲೂ 3000 ರೂಪಾಯಿ ಹೊಂದಿರುವ ವ್ಯಕ್ತಿ ಕೊಡುವ 300 ರೂಗಳು ಹೆಚ್ಚಿನ ಮಹತ್ವವನ್ನು ಪಡೆದಿರುತ್ತದೆ. ಹೆಚ್ಚಿನ ಮೊತ್ತವನ್ನು ನೀಡುವುದು ಮುಖ್ಯವಲ್ಲ, ಆದರೆ ನಮ್ಮಲ್ಲಿರುವ ಪಾಲಿನಲ್ಲಿ ಹೆಚ್ಚಿನ ಅಂಶವನ್ನು ಹಂಚಿಕೊಳ್ಳುವುದು ಮುಖ್ಯವಾಗುತ್ತದೆ.
ನಾವು ಮಾಡುವ ಧಾನ ಧರ್ಮಗಳು ಪ್ರತಿಫಲಾಕ್ಷೆ ಇಲ್ಲದೇ ನಿಸ್ವಾರ್ಥವಾಗಿರ ಬೇಕು.ಬಲಗೈಯಲ್ಲಿ ಕೊಟ್ಟದ್ದು ಎಡಗೈಯ್ಯಿಗೂ ಗೊತ್ತಾಗದ ರೀತಿಯಲ್ಲಿ ಇರಬೇಕು. ನಾವು ಮಾಡುವ ಪ್ರತೀ ಕಾರ್ಯಗಳ ಲೆಕ್ಕಾಚಾರ ಆ ಭಗವಂತನ ಬಳಿ ಇದ್ದು ಅದರ ಫಲವನ್ನು ಖಂಡಿತವಾಗಿಯೂ ಒಂದಲ್ಲಾ ಒಂದು ದಿವಸ ಅನುಭವಿಸಿಯೇ ತೀರುತ್ತೇವೆ. ನಾವು ಅನುಭವಿಸಲು ಸಾಧ್ಯವಾಗದಿದ್ದರೂ ಆ ಪುಣ್ಯಕಾರ್ಯಗಳು ನಮ್ಮ ಕುಟುಂಬವನ್ನು ತಲೆತಲಾಂತರಗಳ ಕಾಲ ಕಾಪಾಡುತ್ತದೆ. ಹಾಗಾಗಿ ನಮಗೆ ಎಷ್ಟು ಬೇಕೋ ಅಷ್ಟುನ್ನು ಇಟ್ಟುಕೊಂಡು ಉಳಿದದ್ದನ್ನು ಹಂಚಿ ತಿನ್ನುವುದರಲ್ಲಿಯೇ ಸ್ವರ್ಗ ಸುಖಃವಿದೆ. ಅದಕ್ಕೇ ಅಲ್ವೇ ಶ್ರೀ ಕೃಷ್ಣ ಪರಮಾತ್ಮ ಗೀತೆಯಲ್ಲಿ ಹೇಳಿರುವುದು, ನಿನ್ನ ಕರ್ಮಗಳನ್ನು ನೀನು ಸರಿಯಾಗಿ ನಿಭಾಯಿಸು. ಫಲಾಪಲಗಳನ್ನು ನನ್ನ ಮೇಲೆ ಬಿಡು ಎಂದು.
ಏನಂತೀರೀ?
ಆತ್ಮೀಯರೊಬ್ಬರು ವಾಟ್ಸಾಪ್ಪಿನಲ್ಲಿ ಕಳುಹಿಸಿದ್ದ ಆಂಗ್ಲ ಸಂದೇಶವೊಂದರ ಭಾವಾನುವಾದವಾಗಿದೆ.