ಅದು ಮಾಗಿಯ ಕಾಲ. ವಾತಾವರಣವೆಲ್ಲಾ ಬಹಳ ತಣ್ಣಗಿದ್ದು, ಕೈ ಕಾಲು ಹೆಪ್ಪುಗಟ್ಟುವಷ್ಟರ ಮಟ್ಟಿಗಿನ ಚಳಿ ಇತ್ತು. ಆ ಊರಿನ ಸಾಹುಕಾರರೊಬ್ಬರು ಇನ್ನೇನೂ ತನ್ನ ಭವ್ಯವಾದ ಬಂಗಲೆಯನ್ನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಚಳಿಯಿಂದ ತಮ್ಮ ಮನೆಯ ಹೊರಗೆ ಅಂತಹ ಮೈಕೊರೆಯುವ ಛಳಿಯಲ್ಲೂ ಮೈಮೇಲೆ ಸರಿಯಾದ ಬಟ್ಟೆಗಳಿಲ್ಲದ ಒಬ್ಬ ವಯಸ್ಸಾದ ವ್ಯಕ್ತಿಯನ್ನು ಗಮನಿಸಿದರು. ಕೂಡಲೇ ತನ್ನ ಕಾರಿನಿಂದ ಇಳಿದ ಅವರು ಏನಪ್ಪಾ ನಿನಗೆ ಛಳಿಯಾಗುತ್ತಿಲ್ಲವೇ? ಇದೇಕೇ ಹೀಗೆ ಹೊದಿಕೆ ಇಲ್ಲದೇ ಇರುವೇ? ಎಂದು ಕೇಳಿದರು.
ಸ್ವಾಮೀ ನಾನು ಬಡವ ಹಾಗಾಗಿ ನನ್ನ ಬಳಿ ಛಳಿಯಿಂದ ರಕ್ಷಿಸಿಕೊಳ್ಳಲು ಸರಿಯಾದ ಹೊದಿಕೆ ಇಲ್ಲ. ಆದರೆ ನನ್ನ ದೇಹ ಇಂತಹ ಛಳಿ ಮತ್ತು ಗಾಳಿಗೆ ಒಗ್ಗಿಹೋಗಿದೆ ಎಂದು ಹೇಳಿದರು ಆ ವಯೋವೃದ್ಧರು. ವೃದ್ಧರ ಮಾತುಗಳಿಂದ ಮರುಗಿದ ಸಾಹುಕಾರರು, ಇಲ್ಲೇ ಇರೀ, ನಾನು ನನ್ನ ಮನೆಯೊಳಗಿನಿಂದ ನಿಮಗೊಂದು ಹೊದ್ದಿಕೆಯನ್ನು ತಂದು ಕೊಡುತ್ತೇನೆ ಎಂದು ಹೇಳಿ ಮನೆಯೊಳಗೆ ಹೋದರು.
ಸಾಹುಕಾರರ ಈ ಮಾತುಗಳಿಂದ ಸಂತೃಷ್ಟರಾದ ಆ ವೃದ್ಧರು ಖಂಡಿತವಾಗಿಯೂ ನಿಮಗಾಗಿ ನಾನು ಇಲ್ಲಿಯೇ ಕಾಯುತ್ತಿರುತ್ತೇನೆ ಎಂದು ಪ್ರತ್ಯುತ್ತರಿಸಿದರು. ವಯೋವೃದ್ಧರಿಗೆ ಹೊದಿಕೆಯನ್ನು ತಂದು ಕೊಡಲು ಮನೆಯೊಳಗೆ ಪ್ರವೇಶಿಸಿದ ಸಾಹುಕಾರರಿಗೆ ಯಾವುದೋ ಕರೆ ಬಂದು ಅದರಲ್ಲಿಯೇ ಮಗ್ನರಾಗಿ ಹೋಗಿ ಆ ವೃದ್ಧರಿಗೆ ಹೊದಿಕೆ ಕೊಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದನ್ನು ಸಂಪೂರ್ಣವಾಗಿ ಮರೆತೇ ಬಿಟ್ಟರು.
ಮಾರನೇ ದಿನ ಬೆಳಿಗ್ಗೆ ಎದ್ದ ಕೂಡಲೇ ಆ ಸಾಹುಕಾರರಿಗೆ ತಾವು ವೃದ್ಧರಿಗೆ ಹೊದಿಕೆ ತಂದು ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದು ನೆನಪಾಗಿ ಕೂಡಲೇ ಆ ವೃದ್ಧರನ್ನು ಹುಡುಕಿಕೊಂಡು ಮನೆಯ ಹೊರಗೆ ಬಂದು ನೋಡಿದರೇ, ಆ ವಯೋವೃದ್ಧರು, ವಿಪರೀತವಾದ ಛಳಿಯಿಂದಾಗಿ ಅವರ ಮೈ ಎಲ್ಲಾ ಹೆಪ್ಪುಗಟ್ಟಿ ಮೃತಪಟ್ಟಿರುತ್ತಾರೆ. ಛೇ ನನ್ನಿಂದ ಹೀಗಾಗಿ ಹೋಯಿತಲ್ಲಾ ಎಂದು ಸಾಹುಕಾರರು ಪರಿತಪಿಸುತ್ತಿರುವಾಗಲೇ ಆ ವೃದ್ಧರ ಕೈಯ್ಯಲ್ಲೊಂದು ಚೀಟಿ ಕಾಣಿಸುತ್ತದೆ.
ಕುತೂಹಲದಿಂದ ಆ ಚೀಟಿಯನ್ನು ತೆಗೆದುಕೊಂಡು ಓದಲಾರಂಭಿಸಿದರೆ, ಅದರಲ್ಲಿ ವೃದ್ಧರು ಹೀಗೆ ಬರೆದಿರುತ್ತಾರೆ. ನನ್ನ ಬಳಿ ಯಾವುದೇ ಬೆಚ್ಚಗಿನ ಬಟ್ಟೆಗಳನ್ನು ಹೊಂದಿರದಿದ್ದಾಗ, ಶೀತದ ವಿರುದ್ಧ ಹೋರಾಡುವ ಶಕ್ತಿ ನನ್ನ ಬಳಿ ಇತ್ತು ಏಕೆಂದರೆ ಅದಕ್ಕೆ ನನ್ನ ಮೈ ಒಗ್ಗಿ ಹೋಗಿತ್ತು ಮತ್ತು ನನ್ನ ಮನಸ್ಸು ಛಳಿಯನ್ನು ಎದುರಿಸುವ ಸ್ಥೈರ್ಯವನ್ನು ಹೊಂದಿತ್ತು. ಆದರೆ ನೀವು ನನಗೆ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಿದ್ದಂತೆಯೇ ಎಂತಹ ಛಳಿಯನ್ನು ಬೇಕಾದರೂ ಎದುರಿಸಬಲ್ಲೆ ಎಂದಿದ್ದ ನನ್ನ ಮನಸ್ಥೈರ್ಯ ಇದ್ದಕ್ಕಿದ್ದಂತೆಯೇ ಕುಸಿದು ಹೋಗಿ, ಕೊರೆಯುವ ಛಳಿಯನ್ನು ಎದುರಿಸುವ ಪ್ರತಿರೋಧದ ಶಕ್ತಿಯನ್ನು ನನ್ನ ಮೈ ಕಳೆದುಕೊಂಡು ಬೆಚ್ಚಗಿನ ಹೊದಿಕೆಗಾಗಿ ಹಾತೊರೆಯತೊಡಗಿತು. ಎಷ್ಟು ಹೊತ್ತಾದರೂ ನಿಮ್ಮಿಂದ ಹೊದಿಗೆ ಬಾರದಿದ್ದ ಕಾರಣ, ನನ್ನ ದೇಹದ ಒಂದೋಂದೇ ನರನಾಡಿಗಳು ಹೆಪ್ಪುಗಟ್ಟುತ್ತಿದೆ.
ಈ ಹೃದಯಸ್ಪರ್ಶಿ ಘಟನೆಯಿಂದ ನಾವುಗಳು ಕಲಿಯಬಹುದಾದ ಸಂಗತಿಯೆಂದರೆ, ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾದಲ್ಲಿ ಮಾತ್ರವೇ ಮತ್ತೊಬ್ಬರಿಗೆ ಭರವಸೆ ನೀಡಬೇಕು ಮತ್ತು ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳಲು ನಮ್ಮಿಂದಾಗದೇ ಹೋದಲ್ಲಿ ಅಂತಹ ಭರವಸೆಗಳನ್ನು ನೀಡದೇ ಇರುವುದು ಒಳಿತು. ನಾವು ಕೊಟ್ಟ ಭಾಷೆ ತಪ್ಪಿದ್ದಕ್ಕಾಗಿ ನಮಗೆ ಅದರಿಂದ ಯಾವುದೇ ಸಮಸ್ಯೆಗಳು ಆಗದೇ ಇರವಹುದು. ಆದರೆ ನಮ್ಮ ಭರವಸೆಯನ್ನೇ ನಂಬಿಕೊಂಡವರ ಮೇಲೆ ಖಂಡಿತವಾಗಿಯೂ ಅತ್ಯಂತ ಘನಘೋರವಾದ ಪ್ರತಿಕೂಲ ಪರಿಣಾಮ ಬೀರಿಯೇ ತೀರುತ್ತದೆ.
ಏನಂತೀರೀ?
ಇಂತೀ ನಿಮ್ಮನೇ, ಉಮಾಸುತ
ಆತ್ಮೀಯರಾದ ಶ್ರೀ ಪ್ರೇಮ್ ಅವರು ಕಳುಹಿಸಿಕೊಟ್ಟಿದ್ದ ಆಂಗ್ಲ ಸಂದೇಶದ ಭಾವಾನುವಾದ
ಸಂದೇಶ ಚೆನ್ನಾಗಿದೆ
LikeLiked by 1 person
ಇದರ ಸಂಪೂರ್ಣ ಶ್ರೇಯ ಮೂಲ ಲೇಖಕರಿಗೇ ಸಲ್ಲಬೇಕು
LikeLike
Nice
LikeLike