ಲೈಫ್ ಇಷ್ಟೇ ಗುರು

ಕುಟುಂಬದ ಮುಖ್ಯಸ್ಥರ ಮರಣದ ನಂತರ ಆಸ್ತಿ ಮತ್ತು ಹಣಕಾಸಿನೊಂದಿಗೆ ವ್ಯವಹರಿಸಿದ್ದವರ ಕಷ್ಟ ನಷ್ಟಗಳ ಕುರಿತಾದ ಈ ಸುದೀರ್ಘವಾದ ಲೇಖನವನ್ನು ಸ್ವಲ್ಪ ಸಮಯ ಕೊಟ್ಟು ಸಮಚಿತ್ತದಿಂದ ಓದ ಬೇಕೆಂದು ಕಳಕಳಿಯ ಮನವಿ.

ಗಂಡ ಸಾಫ್ಟ್ ವೇರ್ ಇಂಜೀನಿಯರ್ ಆಗಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ಅವರ ಮಡದಿ ಚಾರ್ಟಡ್ ಅಕೌಂಟೆಂಟ್ ಆಗಿದ್ದರು. ಇಬ್ಬರಿಗೂ ಕೈ ತುಂಬಾ ಕೆಲಸ ಜೋಬು ತುಂಬಿ ತುಳುಕುವಷ್ಟು ಹಣ ಇದ್ದ ಕಾರಣ ಮನೆ ಮಠ ಸಂಸಾರದ ಮಕ್ಕಳು ಮಾಡಿಕ್ಕೊಳ್ಳುವುದಕ್ಕೂ ಪುರುಸೊತ್ತು ಇಲ್ಲದಷ್ಟು ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಅವರ ಬಂಧು-ಮಿತ್ರರಿಗೆಲ್ಲಾ ಈ ದಂಪತಿಗಳನ್ನು ನೋಡಿದಾಕ್ಷಣ ಆಬ್ಬಾ ಇವರಿಗೇನಪ್ಪಾ ತೊಂದರೆ ಎನ್ನುವಷ್ಟರ ಮಟ್ಟಿಗೆ ಇದ್ದ ಸುಂದರವಾದ ಸಂಸಾರಕ್ಕೆ ಬರ ಸಿಡಿಲು ಬಡಿದಂತೆ ರಸ್ತೆಯ ಅಪಘಾತದಲ್ಲಿ ಮನೆಯ ಜನಮಾನರು ಸಾವನ್ನಪ್ಪಿದ ನಂತರ ಅವರ ಹೆಂಡತಿ ಮನದಾಳದ ಮಾತು ಇದೋ ನಿಮಗಾಗಿ.

ನನ್ನ ಗಂಡನ ಮರಣದ ನಂತರ ನಾನು ಕಲಿತ ಕೆಲವು ವಿಷಯಗಳು ಈ ರೀತಿಯಾಗಿವೆ

ನಮ್ಮ ನಂಬಿಕೆಯ ಪ್ರಕಾರ ಕೆಟ್ಟ ಸಂರ್ಭಗಳು ಕೇವಲ ಬೇರೆಯವರಿಗೆ ಬರುತ್ತದೆ ಮತ್ತು ನಾವು ಮಾತ್ರಾ ಶಾಶ್ವತವಾಗಿ ಬದುಕುತ್ತೇವೆ ಎನ್ನುವ ಭ್ರಮಾ ಲೋಕದಲ್ಲಿ ಸದಾಕಾಲವೂ ವಿಹರಿಸುತ್ತಿರುತ್ತೇವೆ .

ಅನಿರೀಕ್ಷಿತ ಘಟನೆಗಳು ನಮ್ಮ ಜೀವನದಲ್ಲಿ ಸಂಭವಿಸಿದಾಗ ಮಾತ್ರವೇ ವಾಸ್ತವದ ಸಂಗತಿ ನಮಗೆ ಅರಿವಾಗುತ್ತದೆ. ದುರಾದೃಷ್ಟವಷಾತ್ ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.

ನನ್ನ ಪತಿ ಐಟಿ ಟೆಕಿ ಮತ್ತು ನಾನು ಚಾರ್ಟರ್ಡ್ ಅಕೌಂಟೆಂಟ್ ಇವೆರಡೂ ಅದ್ಭುತವಾದ ಸಂಯೋಜನೆ ಎಂದು ಎಲ್ಲರೂ ಭಾವಿಸುತ್ತಾರೆ.

ಪತಿ ಟೆಕ್ಕಿ ಆದ್ದರಿಂದ ಆತನ್ ಎಲ್ಲಾ ಕಾರ್ಯಚರಣೆಯ ಪಟ್ಟಿಗಳು ಅವರ ಲ್ಯಾಪ್ ಟ್ಯಾಪಿನ ಒಂದು ಫೈಲಿನಲ್ಲಿದೆ, ಎಲ್ಲಾ ರೀತಿಯ ಬಿಲ್ಲುಗಳು, ಉಳಿತಯ ಖಾತೆಗಳು ಮತ್ತು ಬ್ಯಾಂಕ್ ವಿವರಗಳೆಲ್ಲವೂ ಅವರ ಇಮೇಲ್‌ನಲ್ಲಿದೆ. ಅದರ ಎಲ್ಲಾ ರಹಸ್ಯ ವಿವರಗಳನ್ನೂ IMPWDS ಎಂಬ ಫೋಲ್ಡರ್ ನಲ್ಲಿ ಚೆನ್ನಾಗಿ ಇಟ್ಟಿದ್ದಾರೆ. ಅದರಲ್ಲಿ ತಮ್ಮ ಎಲ್ಲಾ ಆನ್‌ಲೈನ್ ಖಾತೆಗಳ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಬರೆದಿಟ್ಟಿದ್ದಲ್ಲದೇ, ಇದನ್ನು ಬೇರೆಯವರ ಕೈಗೆ ಸಿಗದಂತೆ ತಮ್ಮ ಲ್ಯಾಪ್‌ಟಾಪಿಗೂ ಯಾರಿದಂಲೂ ಭೇಧಿಸಲಾಗದ ಕಠಿಣವಾದ ಪಾಸ್‌ವರ್ಡ್ ಹಾಕಿ ಅದನ್ನು ಪ್ರತಿ 30 ದಿನಗಳಿಗೊಮ್ಮೆ ಬದಲಾಯಿಸುವ ಪರಿಪಾಠವನ್ನೂ ರೂಢಿಯಲ್ಲಿಟ್ಟು ಕೊಂಡಿದ್ದರು. ಅಕಸ್ಮತ್ ನಾನು ಅವರ ಲ್ಯಾಪ್‌ಟಾಪ್ ಬಳಸುವ ಅನಿವರ್ಯ ಸಂದರ್ಭ ಬಂದಲ್ಲಿ ಅವರ ಬಳಿ ಅವರ ಪ್ರಸ್ತುತ ಪಾಸ್ ವರ್ಡ್ ಕೇಳಿಯೇ ಬಳಸುತ್ತಿದೆ.

ನಾನು ಚಾರ್ಟರ್ಡ್ ಅಕೌಂಟೆಂಟ್ ಆಗಿರುವುದರಿಂದ ನಾನು ಪ್ರತಿಯೊಂದು ದಾಖಲೆಯನ್ನೂ ಮತ್ತು ಲೆಕ್ಕಾಚಾರಗಳನ್ನು ಸರಿಯಾಗಿ ಇಟ್ಟಿರುತ್ತೇವೆ ಎಂದು ನೀವೆಲ್ಲರೂ ಭಾವಿಸಿರುತ್ತೀರಿ. ಆದರೆ ದೂರದ ಬೆಟ್ಟ ನುಣ್ಣಗೆ ಎಂದು ನಾವು ನಮ್ಮ ಗ್ರಾಹಕರ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತೇವೆಯಾದರೂ ಸ್ವಂತ ಕೆಲಸವೆಂದರೆ ಅಷ್ಟಕಷ್ಟೇ. ದೀಪದ ಕೆಳಗೆ ಕತ್ತಲೆಯಂತೆ ನಮ್ಮದೆಲ್ಲವೂ ಅಯೋಮಯವೇ.

ಅದೊಂದು ಬೆಳಗ್ಗೆ ಮನೆಯಿಂದ ಕಛೇರಿಗೆ ಬೈಕಿನಲ್ಲಿ ಹೋಗುವ ದಾರಿಯ ಮಧ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 33 ವರ್ಷದ ನನ್ನ ಪತಿ ಅಸುನಿಗಿದರು. ಆ ಅಪಘಾತದ ಸಮಯದಲ್ಲಿಯೇ ಅವರ ಲ್ಯಾಪ್‌ಟಾಪ್ ಕೂಡಾ ನುಚ್ಚುನೂರಾಗಿ ಅದರ ಹಾರ್ಡ್ ಡಿಸ್ಕ್ನಲ್ಲಿ ಇದ್ದ ಎಲ್ಲಾ ಡೇಟಾ ಕೂಡಾ ಎಲ್ಲವೂ ನಾಶವಾಗಿಹೋಗಿತ್ತು. ಈಗಾಗಲೇ ತಿಳಿಸಿದ IMPWDSನ ಫೋಲ್ಡರ್ ನನಗೆ ಸಿಗದ ಕಾರಣ ನನ್ನ ಪತಿಯ ಆರ್ಥಿಕ ವ್ಯಹಹಾರಗಳ ದಾಖಲೆಗಳೇ ನನಗೆ ತಿಳಿಯದಾಗಿ ಹೋಯಿತು.

ಒಂಭತ್ತು ವರ್ಷಗಳ ಸುಂದರ ಸಂಸಾರ ಇದ್ದಕ್ಕಿದ್ದಂತೆಯೇ ನುಚ್ಚು ನೂರಾಗಿ ನಾನು ಪ್ರಥಮಬಾರಿಗೆ ಒಬ್ಬಂಟಿಗಳಾಗಿ ಹೋದೆ.

ಪತಿಯ ಅಂತಿಮ ವಿಧಿ ವಿಧಾನಗಳೆಲ್ಲವೂ ಮುಗಿದ ನಂತರ ಅವರ ಮರಣ ಪತ್ರವನ್ನು ಪಡೆದು ಎಲ್ಲಾ ಬ್ಯಾಂಕುಗಳಿಗೂ ಮತ್ತು ವಿಮಾಕಂಪನಿಗಳಿಗೆ ಎಡತಾಕಿದಾಗಲೇ ನನ್ನ ಪತಿ ನಿರ್ಲಕ್ಷಗಳು ಒಂದೊಂದೇ ಬಾಣಗಳಾಗಿ ನನಗೆ ಚುಚ್ಚತೊಡಗಿದವು. ಅವರ ಬ್ಯಾಂಕ್ ಉಳಿತಾಯ ಖಾತೆಗಳು ಮತ್ತು ಅವರ ಸಂಬಳ ಬ್ಯಾಂಕ್ ಖಾತೆಗಳಿಗೆ ಯಾವುದೇ ನಾಮಿನಿ ಇರಲಿಲ್ಲ. ಅವರ ವಿಮೆಯಲ್ಲಿ ಇನ್ನೂ ಅವರ ತಾಯಿಯೇ ನಾಮಿನಿಯಾಗಿದ್ದು ಆಕೆಯೂ ಕೂಡಾ ಎರಡು ವರ್ಷಗಳ ಹಿಂದೆ ತೀರಿಹೋಗಿದ್ದರು. ಅವರ ಎಲ್ಲಾ ಇ-ಬಿಲ್ಲುಗಳಿಗೆ ಬರುತ್ತಿದ್ದರೂ ಅವರ ಈ-ಮೇಲ್ ಪಾಸ್‌ವರ್ಡ್ ನನಗೆ ತಿಳಿದಿರಲಿಲ್ಲವಾದ್ದರಿಂದ ಅವರು ಪೂರ್ವ ನಿರ್ಧಾರದ ಸೂಚನೆಗಳ ಮೂಲಕ ಅವರು ಯಾವ ವೆಚ್ಚವನ್ನು ಯಾರಿಗೆ ಪಾವತಿಸುತ್ತಿದ್ದಾರೆಂವ ವಿವರ ನನಗೆ ತಿಳಿಯುತ್ತಿರಲಿಲ್ಲ.

ಇತ್ತೀಚೆಗಷ್ಟೇ ನನ್ನ ಪತಿ ಹೊಸಾ ಕಂಪನಿಗೆ ಸೇರಿದ್ದ ಕಾರಣ ಅವರ ಹೊಸಾ ಕಛೇರಿಯ ಸ್ನೇಹಿತರು, ಅವರ ಮೇಲಧಿಕಾರಿಗಳು ಪರಿಚಯವಿಲ್ಲದಿದ್ದ ಕಾರಣ ಅವರ ಅಂತಮ ಪಾವತಿಗಳ ವಿವರಗಳನ್ನು ಪಡೆಯಲೂ ಬಹಳ ಕಷ್ಟ ಪಡಬೇಕಾಯಿತು.

ಇಬ್ಬರೂ ಕೈ ತುಂಬಾ ಸಂಪಾದನೆ ಮಾಡುತ್ತಿದ್ದರಿಂದ ಇಬ್ಬರೂ ಸೇರಿ ದೊಡ್ಡದಾದ ಮನೆಯನ್ನು ಬಹಳ ದೊಡ್ಡ ಮೊತ್ತದ ಸಾಲದೊಂದಿಗೆ ಖರೀದಿಸಿದ್ದೆವು. ಗೃಹ ಸಾಲದ ಮೇಲೆ ವಿಮೆ ಮಾಡಿಸಲು ಸೂಚಿಸಿದಾಗ, ಸುಮ್ಮನೆ ವಿಮೆಗೆ ಕಟ್ಟುವ ಬದಲು ಅದೇ ಹಣವನ್ನು ಸಾಲಕ್ಕೇ ಕಟ್ಟಿದರೆ ಸಾಲ ಬಲು ಬೇಗನೆ ತೀರಿಸಬಹುದೆಂದು ನಿರ್ಧರಿಸಿ ವಿಮೆಯನ್ನೂ ಪಡೆದಿರಲಿಲ್ಲ. ಅವರಿಲ್ಲದೇ ಒಬ್ಬಳ ಸಂಬಳದಿಂದ ಅಷ್ಟೊಂದು ಗೃಹಸಾಲವನ್ನು ಕಟ್ಟಲು ಈಗ ಕಷ್ಟವಾಗುತ್ತಿದೆ.

ರಸ್ತೆ ಅಪಘಾತದ ಪ್ರಕರಣವಾಗಿದ್ದರಿಂದ ಎಲ್ಲಡೆಯಲ್ಲಿಯೂ ಆವರ ಮರಣ ಪತ್ರ, ಎಫ್ಐಆರ್ ವರದಿ, ಪೋಸ್ಟ್ ಮಾರ್ಟಮ್ ವರದಿ ಎಲ್ಲವನ್ನೂ ಸಲ್ಲಿಸ ಬೇಕಿತ್ತಲ್ಲದೇ ಪ್ರತಿಯೊಂದಕ್ಕೂ ನೋಟರಿ ಸಹಿ ಅದೂ ಇದೂ ಎಂದು ಗಂಟೆಗಟ್ಟಲೆ ಸಮಯವನ್ನು ವ್ಯಯ ಮಾಡಬೇಕಿತ್ತು.

ಮನೆ, ಭೂಮಿ, ಕಾರು, ಬೈಕು ಕಡೆಗೆ ಜಂಟಿಯಾಗಿ ತೆಗೆದುಕೊಂಡಿದ್ದ ಮನೆ ಎಲ್ಲದರ ಮಾಲಿಕತ್ವದ ಜೊತೆ ಅಡುಗೆ ಅನಿಲದ ಸಂಪರ್ಕ, ನೀರು, ವಿದ್ಯುತ್ ಮೀಟರ್, ಆವರ ಹೂಡಿಕೆಗಳು ಎಲ್ಲವನ್ನೂ ನನ್ನ ಹೆಸರಿನಲ್ಲಿ ಬದಲಾಯಿಸಿಕೊಳ್ಳಲು ಹರ ಸಾಹಸ ಪಡಬೇಕಾಗಿತ್ತು. ನಾನು ಸಹಾ ಕೆಲಸ ಮಾಡುತ್ತಿದ್ದರಿಂದ ಎಲ್ಲದಕ್ಕೂ ವಾರಾಂತ್ಯದಲ್ಲೇ ಮುಗಿಸಲು ಪ್ರಯತ್ನಿಸುತ್ತಿದ್ದ ಕಾರಣ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿದ್ದದ್ದು ಮತ್ತೊಮ್ಮೆ ಎಲ್ಲವನ್ನೂ ಹೊಸದಾಗಿಯೇ ತೆಗೆದುಕೊಳ್ಳುತ್ತಿದ್ದ ಕಾರಣ,ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿತ್ತು. ಕಬ್ಬಿಣ ಕಾದಾಗಲೇ ಬಗ್ಗಿಸಬೇಕು ಎನ್ನುವಂತೆ ಸಾವು ಸಂಭವಿಸಿದ ಕೆಲವೇ ದಿನಗಳೊಳಗೇ ಎಲ್ಲಾ ಕೆಲಸಗಳನ್ನು ಮುಗಿಸಬೇಕಾಗಿದ್ದರಿಂದ ನಮ್ಮ ಕುಟುಂಬದ ಇತರೇ ಸಂಬಂಧೀಕರೊಂದಿಗೆ ಸಮಯವನ್ನು ಕಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ನನ್ನ ಬಹುತೇಕ ಸಮಯವು ಕಾಗದ ಪತ್ರಗಳನ್ನು ವಿಂಗಡಿಸುವಲ್ಲಿಯೇ ಕಳೆದು ಹೋಗುತ್ತಿತ್ತು.

ಕೆಲ ತಿಂಗಳುಗಳ ಹಿಂದೆ ನಮ್ಮ ಹಿತೈಷಿಯೊಬ್ಬರು ನಮ್ಮ ಸ್ಥಿರಸ್ತಿಗಳ ಕುರಿತಾದ ವಿಲ್ ಮಾಡಲು ಸೂಚಿಸಿದ್ದಾಗ ನಾವಿಬ್ಬರೂ ಹೇ… ನಮಗೇನು ಅಂತಾ ವಯಸ್ಸಾಗಿದೆ. ನಮಗಿನ್ನೂ ಮಕ್ಕಳು ಮರಿಗಳೇ ಆಗಿಲ್ಲ ಎಂದು ನಕ್ಕಿದ್ದೆವು. ಆದರೆ ಪತಿಯ ಹಠಾತ್ ಮರಣದ ನಂತರ ಈಗ ನಾನು ನನ್ನ ಜೀವನವನ್ನು ಅತ್ಯಂತ ಹೆಚ್ಚು ಗಂಭೀರವಾಗಿ ಪರಿಗಣಿಸ ಬೇಕೆಂದು ತಿಳಿದುಕೊಂಡಿದ್ದೇನೆ.

ನಾನು ಇಂತಹ ಕಠಿಣ ಸಂಧರ್ಭದಲ್ಲಿ ಕಲಿತ ಪಾಠಗಳನ್ನು ಇತರರೊಡನೆ ಹಂಚಿಕೊಳ್ಳುವ ಮುಖಾಂತರ ಮುಂದೆ ಅವರ ಪ್ರೀತಿ ಪಾತ್ರರು ಇಂತಹ ಕಠಿಣ ಸಂಧರ್ಭಗಳನ್ನು ಎದುರಿಸಬಾರದು ಎಂಬುದು ನನ್ನ ಆಶಯವಾಗಿದೆ.

 1. ನಿಮ್ಮ ಎಲ್ಲಾ ನಾಮನಿರ್ದೇಶನಗಳನ್ನು ಪರಿಶೀಲಿಸಿ …
  ನಾವೆಲ್ಲಾ ದುಡಿಯುವುದೇ ನಮ್ಮ ಕುಟುಂಬಕ್ಕಾಗಿ. ಹಾಗಾಗಿ ಮದುವೆಗೆ ಮುಂಚೆ ನಮ್ಮ ಬಹುತೇಕ ದಾಖಲೆಗಳಲ್ಲಿ ತಂದೆ ಅಥವಾ ತಾಯಿಯವರನ್ನು ನಾಮನಿರ್ದೇಶನಗಳಲ್ಲಿ ನಮೂದಿಸುವುದು ಸಹಜ ಪ್ರಕ್ರಿಯೆಯಾದರೂ, ಮದುವೆಯಾದ ನಂತರ ಮತ್ತು ಕಾಲ ಕಾಲಕ್ಕೆ ಅನುಗುಣವಾಗಿ ಅದನ್ನು ಬದಲಿಸುತ್ತಿರಬೇಕು ಹಾಗಾಗಿ ನಿಮ್ಮ ಈ ಎಲ್ಲಾ ನಾಮಪತ್ರಗಳನ್ನು ಒಮ್ಮೆ ಪರಿಶೀಲಿಸಿ
 2. ಬ್ಯಾಂಕ್ ಖಾತೆಗಳು
 3. ಸ್ಥಿರ ಠೇವಣಿ, ಎನ್‌ಎಸ್‌ಸಿ
  ಬ್ಯಾಂಕ್ ಲಾಕರ್ಸ್
  ಡಿಮ್ಯಾಟ್ ಖಾತೆಗಳು
  ವಿಮೆ (ಜೀವ, ಬೈಕು ಅಥವಾ ಕಾರು ಅಥವಾ ಆಸ್ತಿ)
  ಹೂಡಿಕೆಗಳು
  ಪಿಎಫ್ ಪಿಂಚಣಿ ನಮೂನೆಗಳು
 4. ಪಾಸ್‌ವರ್ಡ್‌ಗಳು ..
  ಪ್ರಾಯೋಗಿಕವಾಗಿ ಭಧತ್ರಾ ಕಾರಣಗಳಿಂದಾಗಿ ಎಲ್ಲದ್ದಕ್ಕೂ ನಾವು ಪಾಸ್‌ವರ್ಡ್‌ಳ ಮೂಲಕ ಸುರಕ್ಷಿತವಾಗಿ ಇಡುತ್ತೇವೆ. ಹಾಗಾಗಿ ನಾವು ಬಳಸುವ ಲ್ಯಾಪ್‌ಟಾಪ್‌, ಇಮೇಲ್ ಖಾತೆಗಳು, ಬ್ಯಾಂಕ್ ಖಾತೆಗಳ ಎಲ್ಲದರ ವಿವರಗಳನ್ನು ಕಂಪ್ಯೂಟರ್ ನಲ್ಲಿ ಇಡುವ ಜೊತೆಯಲ್ಲಿಯೇ ಕಾಗದ ಮೇಲೂ ಅದನ್ನು ಬರೆದು ಸುರಕ್ಷಿತವಾದ ಸ್ಥಳದಲ್ಲಿ ಇಡುವ ಅಭ್ಯಾಸ ಮಾಡಿಕೊಳ್ಳಿ ಮತ್ತು ಕಾಲ ಕಾಲಕ್ಕೆ ತಕ್ಕಂತೆ ಪಾಸ್ವರ್ಡ್ಗಲು ಬದಲಾದಾಗ ಈ ಲಕೋಟೆಯಲ್ಲಿಯೂ ಬದಲಾಯಿಸುವುದನ್ನು ರೂಡಿ ಮಾಡಿಕೊಳ್ಳಿ.
 5. ಹೂಡಿಕೆಗಳು.
  ತೆರಿಗೆಯನ್ನು ಉಳಿಸುವ ಸಲುವಾಗಿ ಪ್ರತಿಯೊಬ್ಬರೂ ಹಲವಾರು ಹೂಡಿಕೆಗಳನ್ನು ಮಾಡುತ್ತೇವೆ ಮತ್ತು ಅದರ ವಿವರಗಳನ್ನು ಎಕ್ಸೆಲ್ ಶೀಟ್ ನಲ್ಲಿ ಇಡುವುದರ ಜೊತೆಯಲ್ಲಿಯೇ ಅದರ ಕಾಗದ ಪತ್ರಗಳನ್ನು ಮನೆಯ ಸುರಕ್ಷಿತ ಜಾಗದಲ್ಲಿಟ್ಟು ಅದರ ವಿವರಗಳು ನಮ್ಮ ಕುಟುಂಬದವರಿಗೆ ತಿಳಿದಿರಲಿ.
 6. ವಿಲ್.
  ವಿಲ್ ಮಾಡುವುದಕ್ಕೆ ಯಾವುದೇ ವಯಸ್ಸಿನ ನಿಬಂಧನೆ ಇರುವುದಿಲ್ಲ ಮತ್ತು ಅದನ್ನು ಎಷ್ಟು ಬಾರಿ ಬೇಕಾದರೂ ಬದಲಿಸಬಹುದಾದ ಕಾರಣ ಕಾಲ ಕಾಲಕ್ಕೆ ಅನುಗುಣವಾಗಿ ನಮ್ಮೆಲ್ಲರ ಚರ ಮತ್ತು ಸ್ಥಿರಾಸ್ತಿಗಳನ್ನು ನಮ್ಮ ನೆಚ್ಚಿನವರಿಗೆ ಸೇರಬೇಕಾದ ಪಾಲನ್ನು ವಿಲ್ ಮುಖಾಂತರ ನಮೂದಿಸಿ ಅದನ್ನು ರಿಜಿಸ್ಟರ್ ಮಾಡಿಸಿದ್ದಲ್ಲಿ ನಮ್ಮ ಅಗಲಿಕೆಯ ನಂತರದ ಕಾಗದ ಪತ್ರಗಳ ಕೆಲಸ ಸುಲಭವಾಗುತ್ತದೆ ಮತ್ತು ನಮ್ಮ ಆಸ್ತಿ ಅಪಾತ್ರರ ಪಾಲಾಗುವುದಿಲ್ಲ.
 7. ಹೊಣೆಗಾರಿಕೆಗಳು.
  ನಾವು ಸಾಲ ತೆಗೆದುಕೊಂಡಾಗ ನನ್ನ ನಂತರ ಸಾಲ ಕಟ್ಟುವುದು ಹೇಗೆ ಎಂಬುದನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ. ಸಾಲದ ಮೇಲೆ ವಿಮೆ ಪಡೆದಿದ್ದಲ್ಲಿ ನಾವು ಅಗಲಿದ ನಂತರ ಯಾವುದೇ ಹೆಚ್ಚಿನ ಹಣ ಕಟ್ಟದೇ ನಮ್ಮ ಮನೆ ಅಥವಾ ವಾಹನ ಸುಲಭವಾಗಿ ನಮ್ಮ ಕುಟುಂಬಕ್ಕೆ ಸೇರುತ್ತದೆ.

ನನ್ನ ಯುದ್ಧಗಳು ಇದೀಗ ಪ್ರಾರಂಭವಾಗಿವೆ … ಆದರೆ ನಾವು ಹೋದ ನಂತರ ನಮ್ಮ ಪ್ರೀತಿಪಾತ್ರರು ತೊಂದರೆ ಅನುಭವಿಸದಂತೆ ಕನಿಷ್ಠ ಪ್ರಯತ್ನಗಳನ್ನು ಇಂದಿನಿಂದಲೇ ಮಾಡೋಣ. ಭವಿಷ್ಯದಲ್ಲಿ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲವಾದ್ದರಿಂದ ಎಲ್ಲದ್ದಕ್ಕೂ ಮೊದಲಿನಿಂದಲೇ ಸಿದ್ದರಾಗಿರೋಣ.

ಯಾರನ್ನೋ ಮೆಚ್ಚಿಸುವ ಸಲುವಾಗಿ ಎಂದಿಗೂ ಜೀವನ ನಡೆಸಬೇಡಿ. ನಮ್ಮನ್ನು ಪ್ರೀತಿಸುವ ಕುಟುಂಬ ಮತ್ತು ಬಂಧು ಮಿತ್ರರೊಡನೆ ಜೀವಿಸುವುದನ್ನು ರೂಡಿಸಿಕೊಳ್ಳಿ.

ಇದೊಂದು ನೈಜವಾದ ಘಟನೆಯಾಗಿದ್ದು ಯಾವುದೇ ಕಲ್ಪನಿಕ ಕಥೆಯಾಗದಿರುವ ಕಾರಣ ಎಲ್ಲರೂ ಇದರ ಬಗ್ಗೆ ಸ್ವಲ್ಪ ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳಿ.

ಟಿವಿ ಧಾರಾವಾಹಿಗಳನ್ನು ನೋಡುವುದಕ್ಕೋ ಇಲ್ಲವೇ, ಕ್ರಿಕೆಟ್, ಚಲನಚಿತ್ರಗಳನ್ನು ನೋಡಲು ನಾವು ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಇವೆಲ್ಲದರ ಮಧ್ಯೆ ದಯವಿಟ್ಟು ಸುಮಾರು ೧೦- 15 ನಿಮಿಷಗಳ ಸಮಯ ಮಾಡಿಕೊಂಡು ನಿಮ್ಮ ಪ್ರೀತಿ ಪಾತ್ರರಿಗಾಗಿ ಈ ಲೇಖನವನ್ನು ಮೂರ್ನಾಲ್ಕು ಬಾರಿ ಓದಿ ಮತ್ತು ಅದನ್ನು ಕಾರ್ಯರೂಪಕ್ಕೆ ತನ್ನಿ.

ಸಾರ್ವಜನಿಕರ ಹಿತಾಸಕ್ತಿಗಾಗಿ ದಯವಿಟ್ಟು ನಿಮ್ಮ ಬಂಧು ಮಿತ್ರರೊಡನೆ ಇಂತಹ ಅತ್ಯುತ್ತಮ ಸಂದೇಶವನ್ನು ರವಾನಿಸುವುದನ್ನು ಮರೆಯದಿರಿ.

ಈ ಸಂದೇಶ ಕೇವಲ ದುಡಿಯುವವರಿಗೆ ಮಾತವಲ್ಲದೇ, ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಸೂಕ್ತವೆನಿಸುತ್ತದೆ. ಕುಟುಂಬ ನಿರ್ವಹಣೆ ಎಂದರೆ, ಕೇವಲ ಅಡುಗೆ ಮಾಡುವುದು, ಮನೆಯನ್ನು ಶುಚಿಗೊಳಿಸುವುದು, ಅವಲಂಬಿತರನ್ನು ನೋಡಿಕೊಳ್ಳುವುದು ಮಾತ್ರವಲ್ಲದೇ ಹಣಕಾಸಿನ ಸಂಕೀರ್ಣ ಕಾರ್ಯಾಚರಣೆಯ ಜ್ಞಾನವನ್ನೂ ಒಳಗೊಂಡಿರುತ್ತದೆ ಎಂಬುದನ್ನು ಮರೆಯದಿರೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ಸೂಚನೆ : ಈ ಲೇಖನ ಆತ್ಮೀಯರೊಬ್ಬರು ಕಳುಹಿಸಿದ್ದ ಆಂಗ್ಲ ಸಂದೇಶದ ಭಾವಾನುವಾದವಾಗಿದ್ದು ಇದನ್ನು ಬರೆದ ಅನಾಮಿಕ ಲೇಖಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

4 thoughts on “ಲೈಫ್ ಇಷ್ಟೇ ಗುರು

 1. ನಿಜ ಜೀ. ನನಗೆ ಪಾರ್ಶ್ವವಾಯು ಆಘಾತವಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಾಗ ನನ್ನ ನಂಬಿ ಬಂದವಳ ಗತಿ ಏನು ಎಂದು ಚಿಂತೆಯಾಗಿತ್ತು. ಉಳಿತಾಯ ಇದ್ದದ್ದೇ ೩೦,೦೦೦ .ಆದಿನಗಳಲ್ಲಿ ಅದೇ ದೊಡ್ಡಮೊತ್ತವಾಗಿತ್ತು. ಈಗಲೂ ಅಷ್ಟೇ…

  Liked by 1 person

 2. ಜೀವನ ಅನಿಶ್ಚಿತತೆಯ ಸಂತೆ, ಮರಣೋತ್ತರ ಆರ್ಥಿಕ ವ್ಯವಹಾರಗಳ ಬಗ್ಗೆ ನಿಶ್ಚಿತ ರೂಪದ ಮಾರ್ಗಸೂಚಿ ಅರ್ಹ ಫಲಾನುಭವಿಗಳಿಗೆ ತಿಳಿಸುವ ಹೊಣೆ ಸಂಪಾದಿಸುವ ಹೆಗಲಿನ ಮೇಲಿರುತ್ತದೆ. ಈ ಲೇಖನ ಖಂಡಿತಾ ಹಲವಾರು ಮಂದಿಗೆ ಎಚ್ಚರಿಕೆಯ ಕರೆ ಮತ್ತು ತಮ್ಮ ಪ್ರೀತಿಪಾತ್ರರ ಭವಿಷ್ಯದ ಬಗ್ಗೆ ನಿರಾಳತೆ ಭಾವ ಮೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಪ್ರೇರೇಪಿಸುತ್ತದೆ.

  Liked by 1 person

 3. ತುಂಬ ಒಳ್ಳೆಯ ವಿಷಯ ತಿಳಿಸಿ ದ್ದಿರ, ಎಲ್ಲರಿಗೂ ಈ ದರ ಅರಿವು ಮೂಡಬೇಕು.
  ಧನ್ಯವಾದಗಳು.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s