ಪ್ರತೀ ದಿನ ಬೆಳಿಗ್ಗೆ ಅದೇ ರೊಟ್ಟಿ, ಚಪಾತಿನಾ? ಎಂದು ಕೇಳುವ ಮಕ್ಕಳಿಗೆ ಯಾವ ತಿಂಡಿ ಮಾಡೋದಪ್ಪಾ ಎಂಬ ಜಿಜ್ಞಾಸೆ ಬಹುತೇಕ ಹೆಣ್ಣುಮಕ್ಕಳಿಗೆ ಕಾಡುವುದು ಸಹಜವಾಗಿದೆ. ಅಂತಹವರಿಗಾಗಿಯೇ ಆಕರ್ಷಣೀಯವಾದ, ಅಷ್ಟೇ ಪರಿಮಳಯುಕ್ತವಾದ, ಪೌಷ್ಥಿಕವಾದ, ರುಚಿಯಾದ ಮನೆಯವರೆಲ್ಲರೂ ಇನ್ನೂ ಬೇಕು ಮತ್ತಷ್ಟು ಬೇಕು ಎಂದು ಕೇಳಿ ಕೇಳಿ ತಿನ್ನುವಂತಹ ಗುಜರಾತಿ ಥೇಪ್ಲ ಮಾಡುವ ವಿಧಾನವನ್ನು ನಮ್ಮ ನಳಪಾಕದಲ್ಲಿ ತಿಳಿದುಕೊಳ್ಳೋಣ.
ಥೇಪ್ಲ ತಯಾರಿಸಲು ಬೇಕಾಗುವ ಪದಾರ್ಥಗಳು
- ಗೋಧಿ ಹಿಟ್ಟು – 2 ಬಟ್ಟಲು
- ಕಡಲೇ ಹಿಟ್ಟು – 1/4 ಬಟ್ಟಲು
- ಅಚ್ಚ ಮೆಣಸಿನ ಪುಡಿ – 1 (ಖಾರಕ್ಕೆ ಅನುಗುಣವಾಗಿ)
- ಬಿಳಿ ಎಳ್ಳು/ನೈಲಾನ್ ಎಳ್ಳು – 1 ಚಮಚ
- ಅರಿಶಿನ – 1/4 ಚಮಚ
- ಓಂ ಕಾಳು -1/4 ಚಮಚ
- ಅಡುಗೆ ಎಣ್ಣೆ – 1/4 ಬಟ್ಟಲು
- ಕತ್ತರಿಸಿದ ಹಸಿ ಮೆಣಸಿನಕಾಯಿ 1-2
- ತುರಿದ ಶುಂಠಿ (ತುರಿದ)
- ಸಣ್ಣಗೆ ಕತ್ತರಿಸಿದ ಮೆಂತ್ಯದ ಸೊಪ್ಪು – 1 ಕಪ್
- ಹುಳಿ ಮೊಸರು – 1/2 ಬಟ್ಟಲು
- ರುಚಿಗೆ ಉಪ್ಪು
- ಹಿಟ್ಟನ್ನು ಕಲೆಸಲು ಅಗತ್ಯವಾದಷ್ತು ನೀರು
ಥೇಪ್ಲ ತಯಾರಿಸುವ ವಿಧಾನ
- ಅಗಲವಾದ ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಮೆಣಸಿನ ಪುಡಿ, ಅರಿಶಿನ, ಎಳ್ಳು, ಓಂ ಕಾಳು ಮತ್ತು ಉಪ್ಪು ಬೆರೆಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಅದೇ ಮಿಶ್ರಣಕ್ಕೆ ಕತ್ತರಿಸಿದ ಹಸಿ ಮೆಣಸಿನಕಾಯಿ ತುರಿದ ಶುಂಠಿ, ಸಣ್ಣಗೆ ಕತ್ತರಿಸಿದ ಮೆಂತ್ಯದ ಸೊಪ್ಪನ್ನು ಬೆರೆಸಿ, ಅದಕ್ಕೆ ಅರ್ಧ ಕಪ್ ಮೊಸರು ಸೇರಿಸಿ ಜೊತೆಗೆ ಅಗತ್ಯವಿದ್ದಷ್ಟು ನೀರನ್ನು ಬೆರೆಸಿ ಚಪಾತಿ ಮಾಡುವ ಹದಕ್ಕೆ ಕಲೆಸಿಕೊಳ್ಳಿ.
- ಕಲೆಸಿದ ಜಿಟ್ಟಿಗೆ 2 ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಕಲೆಸಿ, 5 ನಿಮಿಷಗಳ ಕಾಲ ಹೊಂದಿಕೊಳ್ಳಲು ಬಿಡಿ.
- ಒಲೆಯ ಮೇಲೆ ಕಾವಲಿಯನ್ನು ಬಿಸಿಯಾಗಲು ಬಿಡಿ
- ಕಲೆಸಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಗಿ ಮಾಡಿ ಚಪಾತಿ ಲಟ್ಟಿಸಿದಂತೆ ಲಟ್ಟಿಸಿ ಕಾಯ್ದ ಕಾವಲಿಯ ಮೇಲೆ ಅಗತ್ಯಕ್ಕೆ ತಕ್ಕಷ್ಟು ಎಣ್ಣೆಯನ್ನು ಸೇರಿಸಿ ಎರಡೂ ಬದಿಯಲ್ಲಿ ಬೇಯಿಸಿದಲ್ಲಿ ರುಚಿ ರುಚಿಯಾದ ಘಮ್ಮೆನ್ನುವ ಥೇಪ್ಲ ಸವಿಯಲು ಸಿದ್ಧ.
ಬಿಸಿ ಬಿಸಿಯಾದ ಥೇಪ್ಲವನ್ನು ಉಪ್ಪಿನಕಾಯಿ ಮತ್ತು ಜೀರಿಗೆಪುಡಿ, ಮೆಣಸಿನಪುಡಿ ಮತ್ತು ಉಪ್ಪು ಸಮಪ್ರಮಾಣದಲ್ಲಿ ಬೆರೆಸಿದ ಮೊಸರಿನೊಂದಿಗೆ ತಿನ್ನಲು ಮಜವಾಗಿರುತ್ತದೆ.
ಇದಕ್ಕೇ, ಹಣ್ಣಿನ ಜಾಮ್ ಇಲ್ಲವೇ ಬೆಣ್ಣೆಯನ್ನು ಸವರಿ ರೋಲ್ ಮಾಡಿ ಕೊಟ್ಟಲ್ಲಿ ಮಕ್ಕಳು ಚಪ್ಪರಿಸಿಕೊಂಡು ತಿನ್ನುತ್ತಾರೆ.
ಇನ್ನೇಕೆ ತಡಾ ನೋಡ್ಕೊಳ್ಳೀ, ಮಾಡ್ಕೊಳ್ಳೀ, ತಿನ್ಕೋಳ್ಳಿ
ಏನಂತೀರೀ?
ನಿಮ್ಮವನೇ ಉಮಾಸುತ
ಮನದಾಳದ ಮಾತು : ಮೆಂತ್ಯದ ಸೊಪ್ಪಿನ ಬದಲಾಗಿ ತುರಿದ ಕ್ಯಾರೆಟ್, ಮೂಲಂಗಿ ಇಲ್ಲವೇ, ಬೇಯಿಸಿದ ಆಲೂಗಡ್ಡೆ ಅಥವಾ ನುಣ್ಣಗೆ ಹೆಚ್ಚಿದ ನಾನಾ ವಿವಿಧ ತರಕಾರಿ ಮತ್ತು ಸೊಪ್ಪಿನೊಂದಿಗೂ ತಯಾರಿಸುಬಹುದಾಗಿದೆ. ಥೇಪ್ಲ ರುಚಿಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಸಣ್ಣಗೆ ಜಜ್ಜಿದ ಬೆಳ್ಳುಳ್ಳಿಯನ್ನು ಸೇರಿಸಬಹುದಾಗಿದೆ.
ಇನ್ನು ಮೆಂತ್ಯಾ ಸೊಪ್ಪು ಕಹಿ ಗುಣವನ್ನು ಹೊಂದಿದ್ದರೂ ಅದರಲ್ಲಿರುವ ಅನೇಕ ಔಷಧೀಯ ಗುಣಗಳಿವೆ. ಇದರಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ರಾಮಬಾಣವಾಗಿದೆ. ಇನ್ನು ಪೌಷ್ಟಿಕಾಂಶದ ಆಗರವಾಗಿರುವ ಮೆಂತ್ಯ ಸೊಪ್ಪಿನ್ನು ಹೊಟ್ಟೆ ನೋವು, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮನೆ ಔಷಧಿಯ ರೂಪದಲ್ಲಿ ಬಳಸಬಹುದಾಗಿದೆ. ಹಾಗಾಗಿಯೇ ನಮ್ಮ ಆಯುರ್ವೇದದಲ್ಲಿ ಮೆಂತ್ಯ ಸೊಪ್ಪನ್ನು ಮಧುಮೇಹ, ಮಲಬದ್ಧತೆ ಮತ್ತು ಮೂತ್ರಪಿಂಡದ ಚಿಕಿತ್ಸೆಯಲ್ಲಿ ಔಷಧರೂಪದಲ್ಲಿ ಬಳಸುತ್ತಾರೆ ಹಾಗಾಗಿಯೇ ಮೆಂತ್ಯ ಸೊಪ್ಪನ್ನು ದಿನ ನಿತ್ಯದ ಆಹಾರದಲ್ಲಿ ಬಳಕೆ ಮಾಡುವುದರಿಂದ ಅರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.