ಲಾಲ್ ಬಹದ್ದೂರ್ ಶಾಸ್ತ್ರಿ

ನಮ್ಮ ದೇಶದಲ್ಲಿ ಅಧಿಕಾರವನ್ನು ಕೆಲವರು ಆಯ್ಕೆ ಮುಖಾಂತರ ದಕ್ಕಿಸಿಕೊಂಡು  ಹತ್ತಾರು ವರ್ಷಗಳ ಕಾಲ ದೇಶವನ್ನು ಆಳಿದರೂ ಹೇಳಿಕೊಳ್ಳುವ ಸಾಧನೆ ಮಾಡದೇ ಹೋಗುತ್ತಾರೆ. ಇನ್ನು ಹಲವರು ಜನರಿಂದ ರಾಜತಾಂತ್ರಿಕವಾಗಿ ಆಯ್ಕೆಯಾಗಿ ಅಧಿಕಾರದಲ್ಲಿ ಕೆಲವೇ ತಿಂಗಳುಗಳ ಕಾಲ ಇದ್ದರೂ ಇಡೀ ದೇಶವೇ ನೂರಾರು ವರ್ಷಗಳ ಕಾಲ ನೆನಪಿಸಿಕೊಳ್ಳುವಂತಹ ಸಾಧನೆಯನ್ನು ಮಾಡಿ ಎಲೆಮರೆ ಕಾಯಿಯಂತೆ ಹೋಗಿಬಿಡುತ್ತಾರೆ. ಇಂದು ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ಗ್ರಿಗಳು ಎರಡನೇ ರೀತಿಯ ವ್ಯಕ್ತಿಯಾಗಿದ್ದಾರೆ.

ಲಾಲ್ ಬಹದ್ದೂರ್ ಶಾಸ್ಗ್ರಿಗಳು ತಮ್ಮ ಒಡಹುಟ್ಟಿದ 13 ಜನರ ಪೈಕಿ ಕಡೆಯವರಾಗಿದ್ದ ಕಾರಣ ಪ್ರೀತಿಯಿಂದ  ನನ್ಹೆ ಅರ್ಥಾತ್ ಪುಟ್ಟ  ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮುಂದೆ ಅದೇ ಅನ್ವರ್ಥವಾಗಿ ಶಾಸ್ತ್ರಿಗಳು ಕೇವಲ  5 ಅಡಿ 2 ಇಂಚು ಎತ್ತರದ ಸರಳ ಸಾಧಾರಣವದ ಖಾದಿಯ ಧೋತಿ ಧರಿಸುತ್ತಲೇ ದೇಶದ ಅತ್ಯುನ್ನತ ಪ್ರಧಾನಿ ಪಟ್ಟಕ್ಕೆ ಏರಿದ್ದರು ಎಂದರೆ ಅವರ ಸಾಮರ್ಥ್ಯ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.

ಉತ್ತರ ಪ್ರದೇಶದ ಹಿಂದೂಗಳ ಪರಮ ಪವಿತ್ರ ಕ್ಷೇತ್ರವಾದ ವಾರಾಣಸಿಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ  ಮುಗಲ್ ಸರಾಯ್ ಎಂಬ ಪುಟ್ಟ ಹಳ್ಳಿಯಲ್ಲಿ ಅಕ್ಟೋಬರ್ 2, 1904ರಂದು ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದರು. ಶಾಲಾ ಶಿಕ್ಷಕರಾಗಿದ್ದ ಅವರ ತಂದೆ ಶಾಸ್ತ್ರಿಯವರಿಗೆ ಕೇವಲ ಒಂದೂವರೆ ವರ್ಷದವರಾಗಿರುವಾಗಲೇ ತೀರಿಕೊಂಡಾಗ, ಅದಾಗಲೇ ೧೩ ಮಕ್ಕಳ ತಾಯಿಯಗಿದ್ದ  ಇಪ್ಪತ್ತರ ಆಸುಪಾಸಿನ  ಅವರ ತಾಯಿ ಅಷ್ಟೂ ಮಕ್ಕಳನ್ನು ಕರೆದುಕೊಂಡು ತಮ್ಮ ತವರಿಗೆ ಹೋಗುತ್ತಾರೆ. ಮನೆಯಲ್ಲಿದ್ದ ಕಿತ್ತು ತಿನ್ನುವ ಬಡೆತನದ ನಡುವೆಯೂ ಅವರ ಪ್ರಾಥಮಿಕ ಶಿಕ್ಷಣ ಅವರ ಪುಟ್ಟ ಹಳ್ಳಿಯಲ್ಲೇ ನಡೆದು ಪ್ರೌಢ ಶಿಕ್ಷಣಕ್ಕಾಗಿ ತಮ್ಮ ಮಾವನೊಡನೆ ಅವರನ್ನು ವಾರಾಣಸಿಗೆ ಕಳುಹಿಸಲಾಯಿತು. ಕಾಲಿಗೆ ಚಪ್ಪಲಿಗಳು ಇಲ್ಲದೇ ಸುಡು ಬಿಸಿಲಿನಿಂದ ಕಾದ ರಸ್ತೆಯ ಮೇಲೆ ಮೈಲುಗಟ್ಟಲೆ ನಡೆಯ ಬೇಕಾಗಿದ್ದಲ್ಲದೇ ಗಂಗಾನದಿಯನ್ನೂ ದಾಟಿಕೊಂಡು ಹೋಗಬೇಕಾಗುತ್ತಿತ್ತು.

lb1ಅದೇ ಸಮಯದಲ್ಲಿ ದೇಶದಲ್ಲಿ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿದ್ದ  ಸ್ವಾತ್ರಂತ್ರ್ಯ ಚಳುವಳಿಗಳು ನಡೆಯುತ್ತಿದ್ದನ್ನು ಗಮನಿಸಿದ ಶಾಸ್ತ್ರಿಗಳು ಹನ್ನೊಂದನೇ ವರ್ಷಕ್ಕೇ ಪ್ರಭಾವಿತರಾಗಿದ್ದಲ್ಲದೇ, ತಮ್ಮ ಹದಿನಾರನೇ ವಯಸ್ಸಿಗೆ ಓದಿಗೆ ತಿಲಾಂಜಲಿ ಕೊಟ್ಟು,ಗಾಂಧಿಯವರ ಅಸಹಕಾರ ಚಳುವಳಿಗೆ ಧುಮಿಕಿದವರು ಅಲ್ಲಿಂದ ಹಿಂದಿರುಗಿ ನೋಡಲೇ ಇಲ್ಲ. ಮಗ ಚೆನ್ನಾಗಿ ಓದಿ ದೊಡ್ಡ ಹುದ್ದೆಯನ್ನು ಗಳಿಸುತ್ತಾನೆ  ಎಂಬ ಭರವಸೆಯನ್ನು ಹೊಂದಿದ್ದ ಅವರ ತಾಯಿಗೆ ನಿರಾಶೆಯಾದರೂ,  ಶಾಸ್ತ್ರಿಗಳು ಒಮ್ಮೆ ನಿರ್ಣಯ ತೆಗೆದುಕೊಂಡ ಬಳಿಕ ಅವರ ಮನಸ್ಸನ್ನು ಎಂದೂ ಬದಲಾಯಿಸದ, ಬಾಹ್ಯವಾಗಿ ಮೃದುವಾಗಿ ಕಂಡರು ಆಂತರಿಕವಾಗಿ ಕಲ್ಲಿನಂತಹ ದೃಢ ಮನಸ್ಸಿನವ  ಎಂಬುದರ ಅರಿವಿದ್ದ ಕಾರಣ ಅವರ  ಎದುರು ಮಾತನಾಡದೇ ಸುಮ್ಮನಾಗಿ ಹೋದರು.

ಅಸಹಕಾರ ಚಳುವಳಿ ಸ್ವಲ್ಪ ತಣ್ಣಗಾದ ಮೇಲೆ ಮತ್ತೆ ಕಾಶಿ ವಿದ್ಯಾ ಪೀಠದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದಾಗ ಅಲ್ಲಿ ದೇಶದ ಶ್ರೇಷ್ಠ ಬುದ್ಧೀವಿಗಳು ಮತ್ತು ರಾಷ್ಟ್ರೀಯವಾದಿಗಳೆಲ್ಲರ ಒಡನಾಟ ದೊರೆತು ಅವರೆಲ್ಲರ  ಪ್ರಭಾವಕ್ಕೆ ಒಳಗಾದರು.  ಅನೇಕರಿಗೆ ಶಾಸ್ತ್ರಿ ಎಂಬ ಹೆಸರು ವಂಶಪಾರಂಪರ್ಯವಾಗಿ ಬಂದರೆ, ಲಾಲ್ ಬಹದ್ದೂರ್ ಅವರು ಮಾತ್ರ ಅಧಿಕಾರಯುತವಾಗಿ  ವಿದ್ಯಾಪೀಠದಿಂದ  ಶಾಸ್ತ್ರಿ ಎಂಬ ಪದವಿಗೆ ಪಾತ್ರರಾಗಿ ಮುಂದೆ ಲಾಲ್ ಬಹದ್ದೂರ್ ಶಾಸ್ತ್ರೀ ಎಂದೇ ಜಗದ್ವಿಖ್ಯಾತರಾದರು.

1927ರಲ್ಲಿ ಅವರ ಪಕ್ಕದ ಹಳ್ಳಿಯಾದ ಮಿರ್ಜಾಪುರದ ಲಲಿತಾ ದೇವಿ ಅವರೊಂದಿಗೆ ಸರಳವಾಗಿ ವಿವಾಹವಾದರು. ವಿವಾಹವಾದಾಗ ಅವರು ವರದಕ್ಷಿಣೆಯಾಗಿ ಚರಕ ಮತ್ತು ಕೈಮಗ್ಗದ ಕೆಲವು ಬಟ್ಟೆಗಳನ್ನು ಪಡೆದು ಎಲ್ಲರ ಹುಬ್ಬೇರಿಸಿದ್ದರು.  1930ರಲ್ಲಿ ಮಹಾತ್ಮಾ ಗಾಂಧಿ ದಂಡಿಯಾತ್ರೆ ಆರಂಭವಾಗಿ ಅದರ ಬಿಸಿ ಇಡೀ ದೇಶಾದ್ಯಂತ ಹಬ್ಬತೊಡಗಿದಾಗ. ಲಾಲ್ ಬಹಾದ್ದೂರ್ ಶಾಸ್ತ್ರಿಗಳು ಸಂಪೂರ್ಣವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ್ದಲ್ಲದೇ ಹಲವಾರು ಚಳುವಳಿಗಳಲ್ಲಿ ನಾಯುಕತ್ವವನ್ನು ವಹಿಸಿದ್ದ ಪರಿಣಾಮ ಸುಮಾರು ಏಳು ವರ್ಷಗಳ ಕಾಲ ಸೆರೆಮನೆಯಲ್ಲಿ ಕಳೆಯಬೇಕಾಯಿತು.

ಇವರ ನಾಯಕತ್ವವನ್ನು ಗುರುತಿಸಿದ್ದ ಕಾಂಗ್ರೇಸ್ ಪಕ್ಷ ಸ್ವಾತಂತ್ರ್ಯ ನಂತರ  ಅಧಿಕಾರಕ್ಕೆ ಬಂದಾಗ, ಶಾಸ್ತ್ರಿಗಳನ್ನು ಉತ್ತರ ಪ್ರದೇಶದ ಸಂಸದೀಯ ಕಾಯದರ್ಶಿಯಾಗಿ ಕೆಲ ಕಾಲ ನೇಮಿಸಿ ನಂತರ ಅವರನ್ನು ಉತ್ತರ ಪ್ರದೇಶದ ಗೃಹ ಸಚಿವರನ್ನಾಗಿ ಮಾಡಲಾಯಿತು. ವಹಿಸಿದ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಕಠಿಣ ಪರಿಶ್ರಮ ಮತ್ತು ತಮ್ಮ ಸಾಮರ್ಥ್ಯದಿಂದ ನಿಭಾಯಿಸಿದ ರೀತಿ ಎಲ್ಲರ ಮನೆ ಮಾತಾದ ಕಾರಣ, 1951ರಲ್ಲಿ ಅವರನ್ನು ಕೇಂದ್ರ ಮಂತ್ರಿಮಂಡಲಕ್ಕೆ ಸೇರಿಸಿಕೊಂಡು  ರೈಲ್ವೆ, ಸಾರಿಗೆ ಮತ್ತು ಸಂಪರ್ಕ ಸಚಿವರನ್ನಾಗಿ ಮಾಡಲಾಯಿತು. ಹೀಗೆ ರೈಲ್ವೆ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ 7-9-1965ರಲ್ಲಿ ಮೊಘಲ್ ಸರಾಯ್ನಲ್ಲಿ ನಡೆದ ರೈಲ್ವೆ ಅಪಘಾತದಲ್ಲಿ 117 ಜನರು ಮೃತಪಟ್ಟ ಘಟನೆಯಿಂದ ಮನನೊಂದು ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಧಿಕಾರ ಮುಖ್ಯವಲ್ಲ ಎಂದು ತೋರಿಸಿ ತಾವೊಬ್ಬ ಅನುಪಮ ಶ್ರೇಷ್ಠ ರಾಜಕಾರಣಿ ಎಂಬುದನ್ನು ಸಾಭೀತು ಪಡಿಸಿದರು.

ಇಡೀ ದೇಶವಾಸಿಗಳ ಒತ್ತಾಯದ ಮೇರೆಗೆ ಮತ್ತೊಮ್ಮೆ ಮಂತ್ರಿಮಂಡಲಕ್ಕೆ ಸೇರಿದ ಶಾಸ್ತ್ರಿಗಳು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದಲ್ಲದೇ ಕೇಲವೇ ದಿನಗಳಲ್ಲಿ ತಮ್ಮ ದಿಟ್ಟತನದಿಂದ  ಗೃಹ ಸಚಿವರಾದರು. ಕೇಂದ್ರದಲ್ಲಿ ಮಂತ್ರಿಗಳಾಗಿದ್ದರು ಒಂದು ಸ್ವಂತದ ಮನೆಯನ್ನು ಹೊಂದಿರದಿದ್ದ ಕಾರಣ, homeless home minister ಎಂದೇ ಎಲ್ಲರೂ ಗುರುತಿಸುತ್ತಿದ್ದರು ಎಂದರೆ, ಶಾಸ್ತ್ರೀಜೀಯವರ ಜನಪ್ರಿಯತೆ ಎಷ್ಟಿತ್ತು ಎಂಬುದರ ಅರಿವಾಗುತ್ತದೆ. ಶಾಸ್ತ್ರಿಯವರ ಏಳಿಗೆ ಅಂದಿನ ಪ್ರಧಾನಿಗಳಾಗಿದ್ದ ನೆಹರು ಅವರಿಗೆ ಒಂದು ರೀತಿಯಲ್ಲಿ  ಕಸಿವಿಸಿ ತಂದಿತ್ತು ಎಂದರೂ ತಪ್ಪಾಗದು. ಅವರ ಅಸಹನೆ ಯಾವ ಮಟ್ಟಕ್ಕೆ ಏರಿತ್ತೆಂದರೆ, ಶಾಸ್ತ್ರಿಗಳ ಎಲ್ಲಾ ಖಾತೆಗಳನ್ನೂ ಕಿತ್ತುಕೊಂಡು ಖಾತೆ ರಹಿತ ಮಂತ್ರಿಯನ್ನಾಗಿಸಿ  ಅವಮಾನವನ್ನು ಮಾಡಿದ್ದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.

ಇದೇ ಸಮಯದಲ್ಲಿ ನೆಹರು ಅವರ ನಿಧನರಾದಾಗ, ಕೆಲ ನೆಹರು ಕುಟುಂಬ ದಾಸ್ಯದ ಕಾಂಗ್ರೇಸ್ಸಿಗರು  ಶಾಸ್ತ್ರಿಯವರು ಎಲ್ಲಿ ತಮಗೆ ಅಡ್ಡಗಾಲಾಗುತ್ತಾರೋ? ಎಂಬ ಭಯದಿಂದ ನೆಹರು ನಂತರ ಯಾರು? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿ ನೆಹರು ಅವರ ಮಗಳು ಇಂದಿರಾ ಗಾಂಧಿಯವರೇ ನೆಹರು ಅವರ ಸೂಕ್ತವಾದ ಉತ್ತರಾಧಿಕಾರಿ ಎಂದು ಬಿಂಬಿಸಿದರೂ ನಿಷ್ಠಾವಂತ ದೇಶಭಕ್ತ ಸಾಂಸದರು ಶಾಸ್ತ್ರಿಗಳನ್ನು ದೇಶದ ಪ್ರಧಾನಿಗಳನ್ನಾಗಿ ಮಾಡಿದ್ದು ಇಂದಿರಾಗಾಂಧಿಯನ್ನೊಳಗೊಂಡಂತೆ ಅನೇಕ ಕಾಂಗ್ರೇಸ್ಸಿಗರ ಹೊಟ್ಟೆಯನ್ನು ಉರಿಸಿದ್ದಂತೂ ಸುಳ್ಳಲ್ಲ.

lb2ಶಾಸ್ತ್ರಿಯವರು ಅಧಿಕಾರಕ್ಕೆ ಏರಿದಾಗ ಪ್ರಧಾನಮಂತ್ರಿ ಪಟ್ಟ ಮೃದುವಾಗಿರದೇ, ಕಲ್ಲು ಮುಳ್ಳು ತುಂಬಿದ್ದ ಕಗ್ಗಂಟ್ಟಾಗಿತ್ತು.  ಕೆಲವೇ ವರ್ಷಗಳ ಹಿಂದೆಯಷ್ಟೇ ಚೀನಾಕ್ಕೆ ಸೋತು ಸುಣ್ಣವಾಗಿತ್ತು. 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ! ಎಂದು ಶಾಸ್ತ್ರಿಯವರು ಗುಡುಗಿದಾಗ ಬಹಳಷ್ಟು ಜನರು ಅನುಮಾನ ಪಟ್ಟಿದ್ದಲ್ಲದೇ,  ದುರ್ಬಲ ಕೃಶಕಾಯದ ಕಾಯದ ಕುಬ್ಜ ವ್ಯಕ್ತಿ ಏನು ತಾನೆ ಮಾಡಲು ಸಾಧ್ಯ? ಎಂಬ ಅಸಡ್ಡೆ ತೋರಿದವರೇ ಹೆಚ್ಚು.  ಇದನ್ನೇ ಮುಂದಾಗಿಸಿಕೊಂಡಿದ್ದ ಪಾಕೀಸ್ಥಾನ ಅದೇ ಆಗಸ್ಟ್ ತಿಂಗಳ ಕಡೆಯ ವಾರ ಭಾರತದ ಮೇಲೆ ಧಾಳಿ ನಡೆಸಲು ಮುಂದಾಗುತ್ತಿದೆ ಎಂಬ ಸುದ್ಧಿಯನ್ನು ಕೇಳಿದ ಕೂಡಲೇ, ಕೇವಲ ಐದೇ ನಿಮಿಷಗಳಲ್ಲಿ ಪಾಪೀಸ್ಥಾನದ ಮೇಲೆ ಯುದ್ದವನ್ನು ಮಾಡುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರು.

ಅದಾಗಲೇ ಜಮ್ಮುವಿನ ಛಾಂಬ್ ಪಾಕಿಸ್ತಾನಿ ಪಡೆಗಳು ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್ಗಳ ಮೂಲಕ ಭಾರತದ ಮೇಲೆ ಮುಗಿಬಿದ್ದಿದ್ದವು. ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಕಾಶ್ಮೀರವೇ ಕೈ ಬಿಟ್ಟು ಹೋಗಬಹುದು ಎಂದು  ಏರ್ ಚೀಫ್ ಮಾರ್ಷಲ್ ಅರ್ಜನ್ ಸಿಂಗ್ ಅನುಮಾನ ವ್ಯಕ್ತಪಡಿಸುತ್ತಿದ್ದರೆ,  ಶಾಸ್ತ್ರೀಜಿ ಸ್ವಲ್ಪವೂ ಅಳುಕಲಿಲ್ಲ ಮತ್ತು  ನೆಹರು ಅವರಂತೆ ಗೋಗರೆಯುತ್ತ ವಿಶ್ವಸಂಸ್ಥೆಯ ಕದವನ್ನಂತೂ ತಟ್ಟಲಿಲ್ಲ. ಅಂತಾರಾಷ್ಟ್ರೀಯ ಒತ್ತಡದ ಬಗ್ಗೆಯಾಗಲೀ ವಿಶ್ವದ ಇತರೇ ನಾಯಕರು ಏನನ್ನುತ್ತಾರೋ ಎಂಬ ಯೋಚನೆಯಂತೂ ಮಾಡಲೇ ಇಲ್ಲ. ಕೇವಲ ಹದಿನೈದೇ ದಿನಗಳ ಹಿಂದೆಯಷ್ಟೇ ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ ಎಂದು ಅವರೇ  ಆಡಿದ್ದ ಮಾತುಗಳು ಅವರ ಕಿವಿಯಲ್ಲಿ ಗುಂಯ್ ಗುಟ್ಟುತ್ತಿತ್ತು. ಅವರು ನಮ್ಮ ಛಾಂಬ್ ವಶಪಡಿಸಿಕೊಳ್ಳುವ ಮುನ್ನಾ ಅವರ ಲಾಹೋರನ್ನು ವಶಪಡಿಸಿಕೊಳ್ಳಿ ಎಂದು ಭಾರತೀಯ ಸೈನಿಕರಿಗೆ ಆದೇಶ ನೀಡಿದ್ದರು.

ಅದೇ ರೀತಿ ಪಾಕ್ ಮೇಲೆ ಆಕ್ರಮಣ ನಡೆಸಿದ ನಡೆಸಿದ ಭಾರತೀಯ ಸೇನೆ, ಸಪ್ಟೆಂಬರ್ 10ರಂದು ಅಸಲ್ ಉತ್ತರ್  ಬಳಿ ನಡೆದ ನಿರ್ಣಾಯಕ ಸಮರದಲ್ಲಿ ಪಾಕ್ ಸೇನೆಯ 97 ಟ್ಯಾಂಕ್ಗಳನ್ನು ವಶಪಡಿಸಿಕೊಂಡಿದ್ದಲ್ಲದೇ ಅಕ್ಷರಶಃ. ಲಾಹೋರನ್ನು ರಣರಂಗವಾಗಿಸಿದ್ದನ್ನು ಕಂಡು ಪಾಕೀಸ್ಥಾನದ ಜನರಲ್ ಅಯೂಬ್ ಖಾನ್ ಬೆಚ್ಚಿಬಿದ್ದಿದ್ದಂತೂ ಸತ್ಯ. ಈ ಮಧ್ಯೆ ಪಾಕೀಸ್ಥಾನದ ಪರ ವಕಾಲತ್ತು ವಹಿಸಲು ಬಂದ ಚೀನಾಕ್ಕೂ ಸಡ್ಡು ಹೊಡೆದು ಯುದ್ಧವನ್ನು ಮುಂದುವರಿಸಿಕೊಂಡೇ ಹೋದರು.

ಯುದ್ಧ ಹೀಗೆಯೇ ಮುಂದುವರೆದಲ್ಲಿ ಲಾಹೋರ್ ಕೈ ತಪ್ಪಿ ಹೋಗುತ್ತದೆ  ಎಂಬುದನ್ನು ಅರಿತ ಪಾಕ್ ಅಮೇರಿಕಾಕ್ಕೆ ಮಧ್ಯಸ್ಥಿಕೆ ವಹಿಸಿಕೊಳ್ಳಲು ಕೋರಿಕೊಂಡಿತು. ಯುದ್ಧವನ್ನು ಹೀಗೆಯೇ ಮುಂದುವರಿಸಿದಲ್ಲಿ, ಅಮೇರಿಕಾದಿಂದ ಕಳುಹಿಸಿಕೊಡುತ್ತಿದ್ದ  ಗೋಧಿಯನ್ನು ನಿಲ್ಲಿಸುತೇವೆ ಎಂದು ಅಮೇರಿಕಾ ಒತ್ತಡ ಹೇರಿದಾಗ, ನಮ್ಮದೇನೂ ಅಭ್ಯಂತರವಿಲ್ಲ ದಯವಿಟ್ಟು ನಿಲ್ಲಿಸಿ ಬಿಡಿ ಎಂದ್ದಿದ್ದಲ್ಲದೇ, ದೊಡ್ಡು ಕೊಟ್ಟು ನಿಮ್ಮ ಕಳಪೆಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ,ಹಸಿವಿನಿಂದ ಸಾಯುವುದೇ ವಾಸಿ.ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ ಎಂದು  ಧೈರ್ಯದಿಂದಲೇ ಅಮೇರಿಕಾಕ್ಕೆ ಉತ್ತರ ನೀಡಿದ್ದರು.

lb4ಕೂಡಲೇ,  ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿರುವ ಸಮಯದಲ್ಲೇ ಅಮೇರಿಕ ಸಹಾ ಗೋಧಿಯ ರಫ್ತನ್ನು ತಡೆಹಿಡಿದಿದೆ. ಹಾಗಾಗಿ ದೇಶದ ಜನ  ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡುವುದರ ಜೊತೆಗೆ ಪ್ರತಿ ಸೋಮವಾರ ನೀವು ಉಪವಾಸವನ್ನು ಆಚರಿಸಿದಲ್ಲಿ, ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯುವುದಲ್ಲದೇ, ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು  ಎಂಬ ಕರೆ ನೀಡಿದರು. ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶವೇ  ಓಗೊಟ್ಟು ಸೇನೆಗೆ ಧನ ಸಹಾಯ ಮಾಡಿದ್ದಲ್ಲದೇ ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು. ಈ ಉಪವಾಸ ವ್ರತಕ್ಕೆ ಇದಕ್ಕೆ ಸ್ವತಃ ಶಾಸ್ತ್ರೀಜಿಯರ ಮುಂದಾಳತ್ವವಿತ್ತು.

ಯುದ್ಧ ತೀವ್ತತೆಯನ್ನು ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿದ ಕಾರಣ,  ಸೆಪ್ಟೆಂಬರ್ 21ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳುವ ಮುಖಾಂತರ ಪಾಕೀಸ್ಥಾನ ಸೋತು ಸುಣ್ಣವಾಗುವ ಅವಮಾನವನ್ನು ತಪ್ಪಿಸಿಕೊಂಡಿತ್ತು.

ರಷ್ಯಾ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆಯಲ್ಲಿ 1966, ಜನವರಿಯಲ್ಲಿ ರಷ್ಯಾದ ಟಾಷ್ಕಂಟ್ ನಲ್ಲಿ  ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಅಯೂಬ್ ಖಾನ್ ನಡುವೆ ಸಂಧಾನ ಸಭೆ ಏರ್ಪಟ್ಟಿತ್ತು. ಮುಂದೆಂದೂ ಈ ರೀತಿಯ ಬಲಪ್ರಯೋಗ ಮಾಡುವುದಿಲ್ಲ ಎಂದು ಪಾಕೀಸ್ಥಾನ ಲಿಖಿತರೂಪದಲ್ಲಿ ಬರೆದು ಕೊಡಬೇಕೆಂದು ಶಾಸ್ತ್ರೀಜಿ ಪಟ್ಟು ಹಿಡಿದರು. ಇದಕ್ಕೆ ಅಯೂಬ್ ಖಾನ್ ಒಪ್ಪದೇ ಹೋದಾಗ Then you will have to find another PM ಎಂದು ಮುಖಕ್ಕೆ ಹೊಡೆದಂತೆ ಶಾಸ್ತ್ರಿಗಳು  ಹೇಳಿದಾಗ ಇವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂಬುದನ್ನರಿತ  ಅಯೂಬ್ ಖಾನ್ ಒಲ್ಲದ ಮನಸ್ಸಿನಿಂದಲೇ, ಜನವರಿ 10ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ್ದ, ಅದೇ ರಾತ್ರಿ ತಮ್ಮ ಕೊಠಡಿಯಲ್ಲಿ ಊಟ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಶಾಸ್ತ್ರಿಗಳು  ಮಧ್ಯರಾತ್ರಿ 1 ಗಂಟೆ 32 ನಿಮಿಷಕ್ಕೆ ಮೃತಪಟ್ಟರು ಎಂಬ ಸುದ್ದಿ ಪ್ರಕಟವಾದಾಗ ಇಡೀ ಭಾರತ ದೇಶಕ್ಕೇ ಬರಸಿಡಿಲು ಬಡಿದಂತಾಗಿತ್ತು.

ಶಾಸ್ತ್ರೀಜಿ ಯವರ ಈ ಅನುಮಾನಾಸ್ಪದ ಸಾವು ಹೃದಯಾಘಾತ ಎನ್ನುವುದಕ್ಕಿಂತಲೂ ಸಂಚಿತ ಕೊಲೆ ಎಂದೇ ಇಡೀ ದೇಶದ ಜನ ಮಾತನಾಡಿಕೊಂಡರು. ಇದಕ್ಕೆ ಪುರಾವೆ ಎಂಬಂತೆ ಅವರ ಮರಣೋತ್ತರ ಪರೀಕ್ಷೆಯನ್ನೂ ಮಾಡದೇ ತುರಾತುರಿಯಲ್ಲಿ ಶಾಸ್ತ್ರಿಗಳ ಪಾರ್ಥೀವ ಶರೀರವನ್ನು ಭಾರತಕ್ಕೆ ಕಳುಹಿಸಿಕೊಡಲಾಗಿತ್ತು. ಭಾರತಕ್ಕೆ ಬಂದ ಶಾಸ್ತ್ರಿಗಳ ಶರೀರ ವಿಷ ಪ್ರಾಶನವಾದಂತೆ ನೀಲಿಗಟ್ಟಿತ್ತು ಎಂದು  ಸ್ವತಃ ಲಲಿತಾ ಶಾಸ್ತ್ರಿಗಳೇ ಹೇಳಿದರೂ  ಅಂದಿನ ಕಾಂಗ್ರೇಸ್ ಸರ್ಕಾರ ತಳ್ಳಿಹಾಕಿದ್ದಲ್ಲದೇ, ಗಾಂಧೀಜಿ ಮತ್ತು ನೆಹರು ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಶಾಸ್ತ್ರಿಯವರ ಅಂತ್ಯ ಸಂಸ್ಕಾರ ನಡೆಸಲು ಅಡ್ಡಗಾಲು ಹಾಕಿ, ದೇಹವನ್ನು ಅಲಹಾಬಾದಿಗೆ ತೆಗೆದುಕೊಂಡು ಹೋಗಲು ಸೂಚಿಸುತ್ತು. ಲಲಿತಾ ಶಾಸ್ತ್ರಿಗಳು ಧರಣಿ ಕೂರುತ್ತೇನೆ ಎಂಬ ಬೆದರಿಕೆಗೆ ಅಂಜಿ ಕಡೆಗೆ ದೆಹಲಿಯಲ್ಲೇ ಅಂತ್ಯ ಸಂಸ್ಕಾರ ಮಾಡಲಾಯಿತು.

ಲಾಲ ಬಹದ್ದೂರ್ ಶಾಸ್ತ್ರಿಗಳು  ಕೇವಲ 17 ತಿಂಗಳು ಪ್ರಧಾನಿಯಾಗಿದ್ದರೂ  17 ವರ್ಷಗಳ ಕಾಲ ದೇಶವನ್ನಾಳಿದ ನೆಹರು ಅವರನ್ನೇ ಮರೆಯುವಂತೆ ಮಾಡಿದ್ದರು ಎಂದರೂ ಅತಿಶಯೋಕ್ತಿಯೇನಲ್ಲ.

lb5ಸರಳ, ನಿಸ್ವಾರ್ಥ ಅಪ್ಪಟ ದೇಶಪ್ರೇಮಿ ಶಾಸ್ತ್ರೀಜೀ ಯಂತಹ ಮಹಾತ್ಮರೊಬ್ಬರು ನಮ್ಮ ದೇಶದ ಪ್ರಧಾನಿಯಾಗಿದ್ದರು ಎಂಬುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.  ಅವರ ಜನ್ಮ ದಿನವಾದ ಅಕ್ಟೋಬರ್ 2ರಂದು  ಅಂತಹ ಪ್ರಾಥಃಸ್ಮರಣೀಯರನ್ನು ನೆನೆಯದೇ ಹೋದಲ್ಲಿ ನಾವು ಬದಕಿದ್ದೂ  ಸತ್ತಂತೆಯೇ ಸರಿ.. ಹಾಗಾಗಿ ಅವರ ಮೆಚ್ಚಿನ ಘೋಷಣೆಯಾದ ಜೈ ಜವಾನ್ ಜೈ ಕಿಸಾನ್ ಎಂಬುದನ್ನು ಒಮ್ಮೆ  ಗಟ್ಟಿಯಾದ ಧ್ವನಿಯಲ್ಲಿ ಹೇಳುವುದರ ಜೊತೆಗೆ ತುಂಬು ಹೃದಯದಿಂದ ಅವರಿಗೊಂದು ನಮನಗಳನ್ನು ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೇ ಹೌದು.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s