ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ?

ಹಾವು ಅಥವಾ ಉರಗ ಎಂಬುದು ಸರೀಸೃಪ ಜಾತಿಗೆ ಸೇರಿದ ಪ್ರಾಣಿಯಾಗಿದ್ದು. ಇವುಗಳಿಗೆ ಬೆನ್ನು ಮೂಳೆ ಇಲ್ಲದ ಕಾರಣ, ಇದೊಂದು ಆಕಶೇರುಖ ಪ್ರಾಣಿಯಾಗಿದ್ದು, ಇವುಗಳಿಗೆ ಕಾಲು ಇಲ್ಲದೇ ಕಾರಣ, ತನ್ನ ದೇಹವನ್ನೇ ಅತ್ತ ಇತ್ತ ಸರಿಸುತ್ತಾ ತೆವಳುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತವೆ, ಇನ್ನು ಶರೀರಶಾಸ್ತ್ರದದ ಪ್ರಕಾರ, ಹಾವುಗಳು ಹಲ್ಲಿಗಳ ಜಾತಿಗೆ ಸೇರುತ್ತವೆ ಮತ್ತು ಇಡೀ ಪ್ರಪಂಚದಲ್ಲಿ ಸುಮಾರು ೧೫ ಕುಟುಂಬಕ್ಕೆ ಸೇರಿದ ೨೯೦೦ಕ್ಕೂ ಹೆಚ್ಚು ಜಾತಿಯ ಹಾವುಗಳನ್ನು ನೋಡಾಹುದಾಗಿದೆ. ಎಲ್ಲಾ ಹಾವುಗಳು ವಿಷಕಾರಿ ಆಲ್ಲದಿದ್ದರೂ ಜನಸಾಮಾನ್ಯರಿಗೆ ಅವುಗಳ ಅರಿವಿಲ್ಲದ ಕಾರಣ, ಹಾವುಗಳನ್ನು ಕಂಡರೆ ಇಂದಿಗೂ ಸಹಾ ಅತ್ಯಂತ ಭಯ ಪಡುವುದನ್ನು ಕಾಣಬಹುದಾಗಿದ್ದು, ಆಹಾರಗಳನ್ನು ಹುಡುಕಿಕೊಂಡು ಅಕಸ್ಮಾತ್ ಮನುಷ್ಯರುಗಳು ಇದುವ ಪ್ರದೇಶಕ್ಕೆ ಬಂದರೆ, ಗಾಭರಿಯಾಗಿ ಹೆಚ್ಚಿನವರು ಹಾವುಗಳನ್ನು ಹೊಡೆದು ಕೊಂದು ಹಾಕಿದರೆ, ಇತ್ತೀಚೆಗೆ ಹಾವಿನ ಬಗ್ಗೆ ಸ್ವಲ್ಪ ತಿಳುವಳಿಗೆ ಬಂದ ಕಾರಣ, ಅನೇಕರು ಹಾವು ಹಿಡಿಯುವವರನ್ನು ಕರೆಸಿ ಅವುಗಳನ್ನು ಹಿಡಿಸಿ ಅವುಗಳನ್ನು ದೂರದ ಕಾಡು ಪ್ರದೇಶಗಳಲ್ಲಿ ಬಿಟ್ಟು ಬರುವುದನ್ನು ರೂಢಿಮಾಡಿಕೊಂಡಿರುವುದು ನಿಜಕ್ಕೂ ಉತ್ತಮವಾದ ಬೆಳವಣಿಗೆಯಾಗಿದೆ.

naresh4ಇಂದು ದೇಶಾದ್ಯಂತ ಸ್ಥಳೀಯವಾಗಿ ಹಾವುಗಳನ್ನು ಹಿಡಿಯುವವರ ಸಂಖ್ಯೆ ಹೆಚ್ಚಾಗಿದ್ದು, ಅಂತಹವರುಗಳಲ್ಲಿ ಚಿಕ್ಕಮಗಳೂರಿನ ಸ್ನೇಕ್ ನರೇಶ್ ಸಹಾ ಒಬ್ಬರಾಗಿದ್ದರು. ವೃತ್ತಿಯಲ್ಲಿ ಟೈಲರ್ ಆಗಿದ್ದರೂ ಪ್ರವೃತ್ತಿಯಲ್ಲಿ ಹಾವು ಹಿಡಿಯವುದು ಅವರ ಹವ್ಯಾಸವಾಗಿತ್ತು. ಮೂಲತಃ ಟೈಲರಿಂಗ್ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದ ಸ್ನೇಕ್ ನರೇಶ್, ನಂತರದ ದಿನಗಳಲ್ಲಿ ಹಾವುಗಳನ್ನು ಸುಲಭವಾಗಿ ಹಿಡಿಯುವುದನ್ನು ರೂಢಿಸಿಕೊಂಡ ಪರಿಣಾಮ ಕಾಫಿನಾಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾರು ಕರೆದರೂ ಕೂಡಲೇ ಅಲ್ಲಿಗೆ ಹೋಗಿ ಹಾವುಗಳಿಗೆ ಕಿಂಚಿತ್ತೂ ಏಟಾಗದಂತೆ ಹಿಡಿದು ಅವುಗಳನ್ನು ಹತ್ತಿರದ ಕಾಡಿಗೆ ಬಿಟ್ಟು ಬರುತ್ತಿದ್ದ ಕಾರಣ ಸ್ನೇಕ್ ನರೇಶ್ ಎಂದೇ ಖ್ಯಾತಿ ಪಡೆದಿದ್ದರು. ಇದುವರೆವಿಗೂ ಕಾಳಿಂಗ ಸರ್ಪವೂ ಸೇರಿದಂತೆ ಸಾವಿರಾರು ಹಾವುಗಳನ್ನ ಸೆರೆಹಿಡಿದಿದ್ದ ಹೆಗ್ಗಳಿಕೆ ನರೇಶ್ ಅವರದ್ದಾಗಿತ್ತು.

ವೃತ್ತಿ ಮತ್ತು ಪ್ರವೃತ್ತಿಯ ನಡುವಿನ ಬಿಡುವಿನ ಸಮಯದಲ್ಲಿ ಚಿಕ್ಕಮಗಳೂರಿನ ಸುತ್ತಮುತ್ತಲಿನ ಶಾಲಾ ಮಕ್ಕಳಿಗೆ ಹೋಗಿ ಅಲ್ಲಿನ ಮಕ್ಕಳಿಗೆ ಹಾವಿನ ಬಗ್ಗೆ ಅನಾವಶ್ಯಕ ಭಯ ಪಡುವುದು ಅವಶ್ಯಕತೆ ಇಲ್ಲ. ಎಲ್ಲಾ ಹಾವುಗಳೂ ಸಹಾ ವಿಷ ಸರ್ಪವಾಗಿರುವುದಿಲ್ಲ. ನಿಜ ಹೇಳಬೇಕೆಂದರೆ, ಹಾವುಗಳು ರೈತರ ಸ್ನೇಹಿತರಾಗಿದ್ದು ಅವುಗಳು ರೈತರ ಬೆಳೆಯನ್ನು ನಾಶ ಮಾಡುವ ಇಲಿ, ಹೆಗ್ಗಣ್ಣಗಳಲ್ಲದೇ ಅನೇಕ ಕ್ರೀಮಿ ಕೀಟಗಳನ್ನು ಹಿಡಿದು ತಿನ್ನುವ ಮೂಲಕ ರೈತರಿಗೆ ಸಹಾಯ ಮಾಡುತ್ತದೆ ಎಂಬುದಾಗಿ ಜಾಗೃತಿ ಮೂಡಿಸುತ್ತಿದ್ದರು. ಅಷ್ಟೇ ಅಲ್ಲದೇ ಮನೆಗಳಿಗೆ ಹಾವು ಹೊಕ್ಕಾಗ ಹೇಗೆ ವರ್ತಿಸಬೇಕು ಮತ್ತು ಅವುಗಳನ್ನು ಹೇಗೆ ಸುಲಭವಾಗಿ ಹಿದಿಯಬಹುದು ಎಂಬುದರ ಕುರಿತಾಗಿ ಪ್ತಾತ್ಯಕ್ಷತೆಗಳನ್ನೂ ಸಹಾ ಮಕ್ಕಳಿಗೆ ತೋರಿಸಿ, ಮಕ್ಕಳಿಗೆ ಹಾವಿನ ಬಗ್ಗೆ ಇರಬಹುದಾದ ಭಯವನ್ನು ಹೋಗಲಾಡಿಸುತ್ತಿದ್ದರು. ಹೀಗೆ ಸೆರೆ ಹಿಡಿದ ಹಾವುಗಳನ್ನು ಕಾಲಕಾಲಕ್ಕೆ ಕಾಡಿಗೆ ಬಿಡುವ ಪರಿಪಾಟ ರೂಢಿಸಿಕೊಂಡಿದ್ದ ಸ್ನೇಕ್‌ ನರೇಶ್‌ ಅವರು ನಗರ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಹಾವು ಸೆರೆ ಹಿಡಿಯುವುದರಲ್ಲಿ ನಿಷ್ಣಾತರಾಗಿದ್ದ ಕಾರಣ ಉರಗ ಪ್ರೇಮಿ ಎಂದೇ ಚಿರಪರಿಚಿತರಾಗಿದ್ದರು. ಸುಮಾರು 25 ವರ್ಷಗಳಿಂದ ಈ ಹವ್ಯಾಸ ರೂಢಿಸಿಕೊಂಡಿದ್ದರು. ಹೀಗೆ ಜಿಲ್ಲೆಯಾದ್ಯಂತ ಖ್ಯಾತಿ ಗಳಿಸಿದ್ದ ಹಿನ್ನೆಲೆಯಲ್ಲಿಯೇ 2013ರಲ್ಲಿ ಪಕ್ಷೇತರರಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ಸೋಲನ್ನು ಅನುಭವಿಸಿದ ನಂತರ ಮತ್ತೆ ತಮ್ಮ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ತೊಡಗಿಸಿಕೊಂದಿದ್ದರು.

naresh2ನೆನ್ನೆ ಮೇ 30 2023ರ ಮಂಗಳವಾರ ಬೆಳಿಗ್ಗೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ಬೆಳಗ್ಗೆ ನಾಗರಹಾವೊಂದನ್ನು ಹಿಡಿದು ಅದನ್ನು ಒಂದು ಚೀಲದಲ್ಲಿ ಬಂಧಿಸಿ ತಮ್ಮ ಸ್ಕೂಟಿಯಲ್ಲಿ ಇಟ್ಟಿದ್ದ ಸ್ನೇಕ್‌ ನರೇಶ್, ಮತ್ತೆ ಮಧ್ಯಾಹ್ನ ಮತ್ತೊಂದು ಕಡೆ ಹಾವು ಬಂದಿದೆ ಎಂಬುದನ್ನು ತಿಳಿದು ಆ ಹಾವನ್ನು ಹಿಡಿಯಲು ಹೊರಡುವ ಸಮಯದಲ್ಲಿ ಹಾವಿದ್ದ ಚೀಲದ ಗಂಟನ್ನು ಬಿಗಿ ಮಾಡಲು ತಮ್ಮ ಸ್ಕೂಟಿಯ ಡಿಕ್ಕಿಯನ್ನು ತೆರೆದು, ಚೀಲದ ಗಂಟನ್ನು ಸರಿಪಡಿಸಲು ಮುಂದಾದಾಗ, ಚೀಲಕ್ಕೆ ಕಟ್ಟಿದ್ದ ದಾರ ಸಡಿಲವಾಗಿದ್ದ ಕಾರಣದಿಂದಲೋ ಏನೋ, ಆ ಚೀಲದಲ್ಲಿದ್ದ ಬೆಳಿಗ್ಗೆ ಹಿದಿದಿದ್ದ ನಾಗರಹಾವು ನರೇಶ್‌ ಅವರ ಕೈಗೆ ಕಚ್ಚಿದೆ. ಹಾವಿನ ವಿಷ ಕೂಡಲೇ ನರೇಶ್ ಅವರ ದೇಹದ ಮೇಲೆ ಪರಿಣಾಮ ಬೀರುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ನರೇಶ್‌ನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ರವಾನಿಸುವ ಮಧ್ಯದಲ್ಲೇ ಅವರ ದೇಹಕ್ಕೆ ನಾಗರ ಹಾವಿನ ವಿಷವೇರಿ ಮೃತಪಟ್ಟಿದ್ದರು ದಾರಿಯಲ್ಲೇ ಅಸುನೀಗಿದ್ದಾರೆ. ನಂತರ ವೈದ್ಯರೂ ಸಹಾ ಅನೇಕ ರೀತಿಯ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಉರಗತಜ್ಞ ನರೇಶ್ ಅವರು ಅಧಿಕೃತವಾಗಿ ತಮ್ಮ 51ನೇ ವಯಸ್ಸಿನಲ್ಲೇ ಸಾವನ್ನಪ್ಪಿರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ. ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

snake_Nareshಸ್ನೇಕ್ ನರೇಶ್ ಎಂದೇ ಹೆಸರು ವಾಸಿಯಾಗಿದ್ದ ನರೇಶ್, ಕಳೆದ 27 ವರ್ಷಗಳಿಂದಲೂ ಚಿಕ್ಕಮಗಳೂರು ಸುತ್ತ ಮುತ್ತ ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಲ್ಲಿ ಸುಮಾರು 250 ಕ್ಕೂ ಹೆಚ್ಚು ಕಾಳಿಂಗ ಸರ್ಪಗಳು, ಸುಮಾರು 40 ಹೆಬ್ಬಾವುಗಳು, 20 ಸಾವಿರಕ್ಕೂ ಅಧಿಕ ಇತರ ಹಾವುಗಳನ್ನು ಹಿಡಿದು ರಕ್ಷಣೆ ಮಾಡುವ ಮೂಲಕ ಪರಿಸರ ಸ್ನೇಹಿಯಾಗಿದ್ದಲ್ಲದೇ, ಸಾವಿರಾರು ಜನರ ಜೀವವನ್ನು ಕಾಪಾಡಿದ್ದರು. ಮೃತರಾದ ಶ್ರೀ ಸ್ನೇಕ್ ನರೇಶ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸಾಮಾನ್ಯವಾಗಿ ಈ ರೀತಿಯ ಹಾವುಗಳನ್ನು ಹಿಡಿಯುವವರಿಗೆ ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯವಿದ್ದು ಅವರಿಗೆ ಈ ರೀತಿಯ ಹಾವುಗಳನ್ನು ಹಿಡಿದು ಕಾಡಿಗೆ ಬಿಡುಗಡೆ ಮಾಡಲು ಒಂದು ರೀತಿಯ ಅಧಿಕೃತವಾದ ಪರವಾನಗಿ ಇರುತ್ತದೆ. ಹಾಗೆ ಹಿಡಿದ ಹಾವುಗಳನ್ನು ಮತ್ತೊಬ್ಬರಿಗೆ ವ್ಯಾಪಾರ ಮಾಡುವುದಾಗಲೀ ಅಥವಾ ಅವುಗಳನ್ನು ಅನಧಿಕೃತವಾಗಿ ಸಾಕಿದಲ್ಲಿ ಇಲ್ಲವೇ ಆ ಹಾವುಗಳಿಂದ ಆದಾಯ ಮಾಡಿಕೊಳ್ಳುವುದು ಶಿಕ್ಷಾರ್ಹವಾದ ಅಪರಾಧವಾಗುತ್ತದೆ.

naresh3ತಾವೇ ಹಿಡಿದ ನಾಗರಹಾವು ಕಚ್ಚಿದ ಪರಿಣಾಮವಾಗಿ ಉರುಗ ತಜ್ಞ ನರೇಶ್ ಮೃತಪಟ್ಟ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಕೇಸನ್ನು ದಾಖಲಿಸಿಕೊಂಡ ಸ್ಥಳೀಯ ಪೋಲೀಸರು ಪರಿಶೀಲನೆಗೆಂದು ನರೇಶ್ ಅವರ ಮನೆಗೆ ಹೋದಾಗ ಅಲ್ಲಿನ ದೃಷ್ಯವನ್ನು ಕಂಡು ಇಡೀ ತನಿಖಾ ಪೊಲೀಸರೇ ಬೆಚ್ಚಿಬಿದ್ದಿದೆ. ಏಕೆಂದರೆ ಸ್ನೇಕ್ ನರೇಶ್ ಮನೆಯಲ್ಲಿ ನೂರಾರು ನಾಗರಹಾವುಗಳು ಸೇರಿದಂತೆ ಅನೇಕ ಬಗೆಯ ಹಾವಿನ ಮರಿಗಳು ಅಲ್ಲಿ ಸಿಕ್ಕಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಸ್ನೇಕ್ ನರೇಶ್ ಮನೆಯಲ್ಲಿ ರಾಶಿ ರಾಶಿ ಹಾವುಗಳನ್ನು ಕಂಡ ತನಿಖಾ ಪೊಲೀಸರು ಮತ್ತು ನೆರೆದಿದ್ದ ಸ್ಥಳೀಯರೂ ಸಹಾ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಚೀಲಗಳಲ್ಲಿ ಮತ್ತು ಬ್ಯಾರಲ್‌ಗಳಲ್ಲಿ ಸಂಗ್ರಹಿಸಿದ್ದ ನೂರಾರು ಹಾವುಗಳನ್ನು ಅರಣ್ಯ ಇಲಾಖೆಯವರನ್ನು ಕರೆಸಿ ಅವರಿಗೆ ಅಧಿಕೃತವಾಗಿ ಹಸ್ತಾಂತರ ಮಾಡುವ ಮೂಲಕ ರಕ್ಷಣೆ ಮಾಡಲಾಗಿದೆ.

ಹಾವುಗಳ ವಿಷವೂ ಸಹಾ ಅನೇಕ ಔಷಧೀಯ ಗುಣಗಳನ್ನು ಹೊಂದಿವೆ ಎಂದೇ ವ್ಯಾಪಕವಾಗಿ ನಂಬಲಾಗಿದೆ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮತ್ತು ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇದು ಪರಿಣಾಮಕಾರಿಯಾಗಿದೆ ಎಂದೇ ನಂಬಲಾಗಿದೆ. ಅನೇಕ ಕಡೆ ಎಥೆನಾಲ್ ಮಿಶ್ರಿನ್ತ ಅಕ್ಕಿಯಿಂದ ತಯಾರಿಸಲಾಗುವ ವೈನ್ ಗಳ ತಯಾರಿಕೆಯಲ್ಲಿ ವಿಷಕಾರಿ ಹಾವುಗಳನ್ನು ಬಳಸುವ ಪದ್ದತಿ ಇದೆ. ಅದೇ ರೀತಿ ಅನೇಕ ಅನಧಿಕೃತವಾಗಿ ವಿವಿಧ ರೀತಿಯ ಮಧ್ಯದ ಜೊತೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಾವಿನ ವಿಷವನ್ನು ಸೇರಿಸಿ ಕುಡಿಯುವರಿಂದ ಕುಡಿತದ ಮದವನ್ನು ಹೆಬ್ಬಿಸುತ್ತದೆ ಎಂದು ನಂಬಲಾಗಿರುವ ಕಾರಣ ಹಾವಿನ ವಿಷಕ್ಕೂ ಸಹಾ ಅತ್ಯಂತ ಹೆಚ್ಚಿನ ಬೆಲೆಯಿದೆ. ಅದೇ ರೀತಿಯಲ್ಲಿ ಇನ್ನೂ ಹಲವೆಡೆ ವಿವಿಧ ರೀತಿಯ ಬೆಲ್ಟ್ ಮತ್ತು ವ್ಯಾನಿಟೀ ಬ್ಯಾಗ್ ತಯಾರಿಕೆಯಲ್ಲಿಯೂ ಸಹಾ ಹಾವಿನ ಚರ್ಮವನ್ನು ಬಳಸುವ ಕಾರಣ ಹಾವುಗಳಿಗೆ ಅತ್ಯಂತ ಬೇಡಿಕೆ ಇದ್ದು, ನರೇಶ್ ಮನೆಯಲ್ಲಿ ಈ ಪರಿಯಾದ ವಿವಿಧ ಬಗೆಯ ಅನಧಿಕೃತ ಹಾವುಗಳು ದೊರೆತಿರುವುದು ನರೇಶ್ ಅವರ ಮೇಲೆ ಅನುಮಾನ ವ್ಯಕ್ತವಾಗುತ್ತಿದೆಯಲ್ಲದೇ ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ? ಎಂಬ ಅನುಮಾನ ಮೂಡುತ್ತಿರುವುದು ವಿಪರ್ಯಾಸವಾಗಿದೆ. ಬೆಳ್ಳಗಿರುವುದೆಲ್ಲಾ ಹಾವಲ್ಲ. ಎಲ್ಲಾ ಹಾವುಗಳೂ ವಿಷಕಾರಿಯಲ್ಲ. ಹಾವು ಹಿಡಿಯುವವರೆಲ್ಲಾ ಪರಿಸರ ಪ್ರೇಮಿಗಳೇ ಆಗಿರುವುದಿಲ್ಲಾ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

3 thoughts on “ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ?

  1. ಏಕೋ ಹಿಂದಿಯ ದಾಲ್ ಮೇ ಕುಚ್ ಕಾಲಾ ಹೈ ನೆನಪಾಗ್ತಿದೆ. ಸೂಕ್ತ ತನಿಖೆ ಆಗಬೇಕು

    Liked by 1 person

    1. ಹೌದು ನಿಜ. ಈ ವಿಷಯ ದೊಡ್ಡದಾಗಬಹುದು ಎಂದು ಭಾವಿಸಿ ಮನೆಯವರೂ ಸಹಾ ಅವರು ಏನು ಮಾಡುತ್ತಿದ್ದರು ಎಂದು ನಮಗೇನೂ ಗೊತ್ತಿಲ್ಲ ಎಂದು ತಿಪ್ಪೇ ಸಾರಿಸುವ ಮೂಲಕ ತನಿಖೆಯೂ ಖಂಡಿತವಾಗಿಯೂ ಹಳ್ಳ ಹಿಡಿಯುತ್ತದೆ. ಇಂದು ಸಮಾಜ ಸೇವೆ ಮಾಡುತ್ತಿದ್ದೇವೆ ಎನ್ನುವ ಬಹುತೇಕರ ಮತ್ತೊಂದು ಮುಖ ಕರಾಳವಾಗಿರುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಜ್ವಲಂತ ಸತ್ಯವಾಗಿದೆ. ಈಗ ಈ ಕುರಿತಂತೆ ನಿಸ್ಪಕ್ಷವಾದ ತನಿಖೆಯನ್ನು ನಡೆಸಿ ನಿಜವಾದ ಸತ್ಯ ಹೊರಗೆ ಬರುವಂತೆ ಮಾಡಲು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎನ್ನುವುದೇ ಈಗ ಪ್ರಶ್ನೆಯಾಗಿದೆ

      ಏನಂತೀರೀ?

      Like

      1. ಇತ್ತೀಚೆಗೆ ಘಂಟೆಯೇ ಬೆಕ್ಕಿನ ಕೈ ಸೇರಿತು. ಇನ್ನು ಕೆಲಕಾಲ ನಿಷ್ಪಕ್ಷಪಾತ ತನಿಖೆ ಕಷ್ಟ. ಹಾವು ಹೊಡೆದು ಹದ್ದಿಗೆ ಹಾಕುವ ಪ್ರಕ್ರಿಯೆ ಆರಂಭವಾಗಿದೆ.

        Liked by 1 person

Leave a comment