ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ

ಕಳೆದ ವರ್ಷ ದ ಕಾಶ್ಮೀರ್ ಫೈಲ್ಸ್ ಜಗತ್ತಿನಾದ್ಯಂತ ಸುದ್ದಿ ಮಾಡಿದರೆ, ಇತ್ತೀಚೆಗಷ್ಟೇ ಬಿಡುಗಡೆ ಆದ ಕೇರಳಾ ಸ್ಟೋರಿಯೂ ಸಹಾ ಅದೇ ಹಾದಿಯಲ್ಲಿದ್ದು, ಈ ಎರಡೂ ಚಿತ್ರಗಳೂ  ಹಿಂದೂ ಮುಸ್ಲಿಂ ಹಿನ್ನಲೆಯ ಕತೆಯಾಗಿದ್ದು, ಹೇಗೆ ಮುಸಲ್ಮಾನರು ಸಾಮ ದಾನ ಬೇಧ ದಂಡಗಳನ್ನು ಉಪಯೋಗಿಸಿ ಹಿಂದೂಗಳನ್ನು ಧಮನಿಸುತ್ತಿದ್ದಾರೆ ಮತ್ತು ಮುಸಲ್ಮಾನರಾಗಿ ಮತಾಂತರ ಮಾಡುತ್ತಿದ್ದಾರೆ ಎಂಬುದರ ಕುರಿತಾಗಿದ್ದು ಅದರ ವಿಮರ್ಶೆಗಳನ್ನು ಈಗಾಗಲೇ ಓದಿದ್ದೀರಿ. ಮೂರು ವಾರಗಳ ಹಿಂದೆ ಅದೇ ರೀತಿಯ ಶೀರ್ಷಿಕೆಯುಳ್ಳ ಮತ್ತು ಹೆಚ್ಚೂ ಕಡಿಮೆ ಹಿಂದೂ ಮುಸ್ಲಿಂ ಸಂಬಂಧಿಸಿದ ಡೇರ್ ಡೆವಿಲ್ ಮುಸ್ತಾಫಾ ಎಂಬ ಸಿನಿಮಾ ಕರ್ನಾಟಕದಲ್ಲಿ ಸದ್ದಿಲ್ಲದೆ ಬಿಡುಗಡೆಯಾಗಿ ಅದಕ್ಕೆ ಕೆಲವೊಂದು ಉತ್ತಮ ಪ್ರತಿಕ್ರಿಯೆಗಳೂ ಬಂದಾಗ, ಸಿನಿಮಾ ನೋಡಲೇ ಬೇಕು ಎಂಬ ಕುತೂಹಲ ಮೂಡಿಸಿದ್ದಂತೂ ಸತ್ಯ. ಇತ್ತೀಚೆಗೆ ಕನ್ನಡ ಸಿನಿಮಾಗಳು ಸಿನಿಮಾ ಮಂದಿರದಲ್ಲಿ ಓಡುವುದೇ ಇಲ್ಲಾ ಎನ್ನುವ ಅಪವಾದಕ್ಕೆ ವಿರುದ್ಧವಾಗಿ ಸಿನಿಮಾ ಮೂರನೇ ವಾರದಲ್ಲೂ ಪ್ರದರ್ಶನ ಆಗುತ್ತಿದೆ ಎಂದರೆ ನಿಜಕ್ಕೂ ಅದರಲ್ಲಿ ಏನೋ ಸ್ತತ್ವ ಇದೆ ಎಂದು ನೆನ್ನೆ ತಡರಾತ್ರಿ ಕುಟುಂಬ ಸಮೇತವಾಗಿ ಸಿನಿಮಾ ನೋಡಿ ಮನೆಗೆಹಿಂದಿರುಗುವಾಗ ವಾವ್! ಬಹುತೇಕ ಹೊಸಬರೇ ಇರುವ ಒಂದು ತಂಡ ಇಂತಹ ಅದ್ಭುತವಾದ ಸಿನಿಮಾವನ್ನು ಕೊಟ್ಟರೆ ಕನ್ನಡಿಗರು ಖಂಡಿತವಾಗಿಯೂ ಒಪ್ಪಿ ಅಪ್ಪಿಕೊಳ್ಳುತ್ತಾರೆ ಎಂದೆನಿಸಿದ್ದಂತೂ ಸುಳ್ಳಲ್ಲ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕುವೆಂಪು ಅವರು ಕನ್ನಡದ ಹೆಸರಾಂತ ಲೇಖಕರಾದರೆ, ಅವರ ಮಗನಾದ ಶ್ರೀ ತೇಜಸ್ವಿಯವರೂ ಸಹಾ ಅಷ್ಟೇ ಪ್ರಸಿದ್ದರು. ಅಂತಹ ಅಪ್ಪನ ಮಗನಾಗಿದ್ದರೂ ಅಪ್ಪನ ಬರವಣಿಗೆಗಿಂತ ವಿಭಿನ್ನವಾಗಿ ತಮ್ಮದೇ ವಿಶಿಷ್ಟವಾದ ಬರವಣಿಗೆಯ ಶೈಲಿಯಿಂದ ತಮ್ಮದೇ ಆದ ಓದುಗರ ಬಳಗವನ್ನು ಸೃಷ್ಟಿಸಿಕೊಂಡಿರುವ ಹೆಗ್ಗಳಿಕೆ ಅವರದ್ದು. 70-80ರ ದಶಕದ ಅವರದ್ದೇ ಡೇರ್ ಡೆವಿಲ್ ಮುಸ್ತಾಫಾ ಕಥೆಯನ್ನೇ ಅತ್ಯಂತ ಸೊಗಸಾಗಿ ಸಿನಿಮಾಕರಿಸಿದ ನಿರ್ದೇಶಕರಾದ ಶಶಾಂಕ್ ಸೋಗಾಲ ಮತ್ತು ಅವರ ತಂಡಕ್ಕೆ ನಿಜಕ್ಕೂ ಒಂದು ದೊಡ್ಡ ಅಭಿನಂದನೆ ಹೇಳಲೇ ಬೇಕು. ಅದರಲ್ಲೂ ಪ್ರಸ್ತುತವಾಗಿ ಹಿಂದೂ ಮುಸ್ಲಿಂ ಸಂಬಂಧ ಪಟ್ಟ ಕತೆಯನ್ನು ತೆರೆಯ ಮೇಲೆ ತರುವುದೆಂದರೆ ಎರಡು ಅಲಗಿನ ಕತ್ತಿಯ ಮೇಲೆ ನಡೆದಂತಿದ್ದು, ಸ್ವಲ್ಪ ಹೆಚ್ಚು ಕಡಿಮೆ ಆದರೂ ಅಪಾಯ ತಪ್ಪಿದ್ದಲ್ಲ. ಅಂತಹ ಸೂಕ್ಷ್ಮ್ನವಾದ ವಿಷಯವನ್ನು ಅತ್ಯಂತ ನಾಜೂಕಿನ ರೀತಿಯಲ್ಲಿ ಒಮ್ಮೇ ಅವರು ಹೆಚ್ಚಾಗಿ ತೋರಿಸುತ್ತಿದ್ದಾರೇನೋ ಎಂದೆನಿಸುವಷ್ಟರಲ್ಲಿ ಮತ್ತೊಬ್ಬರನ್ನು ಅದಕ್ಕೆ ಸರಿ ಸಮನಾಗಿ ನಿಲ್ಲಿಸುತ್ತಾ, ಕಡೆಯ ದೃಶ್ಯದವರೆಗೂ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡಿರುವ ನಿರ್ದೇಶಕರ ಸಾಹಸ ನಿಜಕ್ಕೂ ಮೆಚ್ಚುವಂತಾಗಿದ್ದು ಖಂಡಿತವಾಗಿಯೂ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಅನೇಕ ಉದಯೋನ್ಮುಕ ನಟ/ನಟಿಯರು ಮತ್ತು ತಂತ್ರಜ್ಞರನ್ನು ಕೊಡುಗೆಯಾಗಿ ನೀಡುವಲ್ಲಿ ಸಫಲವಾಗಿದೆ ಎಂದರೂ ಅತಿಶಯೋಕ್ತಿ ಎನಿಸಲಾರದು.

ಸಿನಿಮಾ ಆರಂಭ ಆಗೋದೇ ತೇಜಸ್ವಿ ಮತ್ತು ಜಯಂತ್ ಕಾಯ್ಕಿಣಿಯವರ ಸಂದರ್ಶನದಲ್ಲಿ ಇಂದಿನ ಯುವಪೀಳಿಗೆಯು ಮತೀಯವಾದದ ಹಿಂದೆ ಹೋಗುವುದರ ಕುರಿತಾಗಿ ಆತಂಕ ವ್ಯಕ್ತಪಡಿಸಿದ ಒಂದು ಸಣ್ಣ ತುಣಿಕಿನಿಂದಲೇ ಆದರೂ ಸಿನಿಮಾದ ಅಂತ್ಯದವರೆಗೂ ಈ ದೃಶ್ಯವನ್ನು ನಿರ್ದೇಶಕರು ಏಕೆ ತೋರಿಸಿದರು ಎಂಬುದನ್ನು ಕುತೂಹಲಕಾರಿಯಾಗಿ ಇಟ್ಟಿಕೊಂಡು ಹೋಗಿರುವುದು ನಿರ್ದೇಶಕರ ಜಾಣ್ಮೆಯಾಗಿದೆ.

mustafa4ಕತೆ 80ರ ದಶಕದ್ದಾಗಿರುವುದರಿಂದ ಇಡೀ ಸಿನಿಮಾದಲ್ಲಿ ಅದೇ ದಶಕಕ್ಕೆ ಅನುಗುಣವಾಗಿಯೇ ವಸ್ತ್ರವಿನ್ಯಾಸ್ಯ, ಕಟ್ಟಡಗಳು, ಸಂಭಾಷಣೆ ಮತ್ತು ಸಂಗೀತಗಳನ್ನು ಅಳವಡಿಸಿಕೊಂಡಿರುವುದು ಚಿತ್ರದ ಹೈಲೈಟ್. ಇದರ ಜೊತೆ ಜೊತೆಯಲ್ಲೇ ಬಳಸಿರುವ ಅನಿಮೇಷನ್ ದೃಶ್ಯಗಳು ಅದರಲ್ಲೂ ತಿರುಚುನಾಪಳ್ಳಿಯ ಪೈಲ್ವಾನರನ್ನು ಸೋಲಿಸುವ ರಣಧೀರ ಕಂಠೀರವ ಪಾತ್ರ ವರ ನಟ ಡಾ. ರಾಜಕುಮಾರ್ ಅವರ ಹೋಲಿಕೆಯಲ್ಲಿರುವುದು ಸಿನಿಮಾದ ಓಘವನ್ನು ಹೆಚ್ಚಿಸಿರುವುದಲ್ಲದೇ, ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿ ಸಿಳ್ಳೇ ಗಿಟ್ಟಿಸುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಇತ್ತೀಚೆಗೆ ಹಾಸ್ಯದ ಹೆಸರಿನಲ್ಲಿ ಮಾಡುವ ಆಶ್ಲೀಲ ಸಂಭಾಷಣೆ ಮತ್ತು ಆಂಗೀಕ ಅಭಿನಯಗಳ ಸೋಂಕಿಲ್ಲದೇ, ಶುದ್ಧವಾದ ಸಂಭಾಷಣೆ ಮತ್ತು ಅಭಿನಯದಿಂದಲೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿರುವುದು ಸಹಾ ಸಿನಿಮಾದ ಯಶಸ್ವಿಗೆ ಕಾರಣವಾಗಿದೆ.

mustafa3ಹಿಂದೂ ಬಾಹುಳ್ಯವುಳ್ಳ ಮಲೆನಾಡಿನ ಅಬಚೂರು ಎಂಬ ಊರಿನಲ್ಲಿ ಹಿಂದು ಮುಸ್ಲಿಂ ಕೋಮು ಗಲಭೆಗಳು ಸರ್ವೇ ಸಾಮಾನ್ಯವಾಗಿದ್ದು ಅದರಲ್ಲೂ ಗಣೇಶನ ವಿಸರ್ಜನೆಯಂತೂ ಇಡೀ ಊರಿಗೇ ತಲೆ ನೋವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲೇ ಆಗ ತಾನೇ 10ನೇ ತರಗತಿಯನ್ನು ಪೂರ್ಣಗೊಳಿಸಿ, ಶಾಲೆಯಿಂದ ಕಾಲೇಜಿಗೆ ಸೇರಿಕೊಳ್ಳುವ ಆ ಊರಿನ ಸಂಪ್ರದಾಯಸ್ಥ ಮನೆತನದಿಂದ ಬಂದ ರಾಮಾನುಜ ಅಯ್ಯಂಗಾರಿ ಮತ್ತವನ ಗೆಳೆಯರ ಪಟಾಲಂ ಒಂದೆಡೆಯಾದರೆ, ಕಾಲೇಜಿಗೆ 20 ದಿನಗಳಷ್ಟು ತಡವಾಗಿ ಬಂದು ಸೇರಿಕೊಳ್ಳುವ ಜಮಾಲ್ ಎಂಬ ಮುಸಲ್ಮಾನ ಹುಡುಗ, ಅವರೆಲ್ಲರ ಆಕರ್ಷಣಾ ಕೇಂದ್ರ ಬಿಂದುವಾಗಿ ರಮಾಮಣಿ ಎನ್ನುವ ಸಹಪಾಟಿ ಮತ್ತೊಂದೆಡೆ. ಶಾಲಾದಿನಗಳಿಂದಲೂ ರಾಮಾನುಜಂ ಆದಿಯಾಗಿ ಅವನ ಗೆಳೆಯರು ರಮಾಮಣೀಯನ್ನು ಒಲಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದರೆ, ಲೇಟಾಗಿ ಬಂದರೂ ಲೇಟಸ್ಟಾಗಿ ಬಂದ ಜಮಾಲ್ ಮೇಲೆ ರಮಾಮಣಿಯ ಮನಸ್ಸನ್ನು ಬಿದ್ದದ್ದನ್ನು ಕಂಡು, ಮೊದಲೇ ಅನ್ಯ ಕೋಮಿನವ ಎಂದು ದ್ವೇಷ ಸಾಧಿಸುತ್ತಿದ್ದ ರಾಮಾನುಜ ಅಯ್ಯಂಗಾರಿಗೆ ಮತ್ತು ಜಮಾಲ್ ನಡುವೆ ಒಂದು ರೀತಿಯ ವೈರತ್ವ ಬೆಳೆದು ಸಾಧ್ಯವಾದ ಕಡೆಯಲ್ಲೆಲ್ಲಾ ಜಮಾಲ್ ನನ್ನು ತುಳಿಯಲು ಆ ಹುಡುಗರ ತಂಡ ಮಾಡುವ ವಿವಿಧ ಪ್ರಯತ್ನದಲ್ಲಿರುವಾಗಲೇ,

ಕಾಲೇಜಿಗೆ ಅಚಾನಕ್ಕಾಗಿ ಬರುವ ಪೋಲಿಸರನ್ನು ಕಂಡು ಜಮಾಲ್ ತಮ್ಮ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದಾನೆ ಎಂದು ಭಾವಿಸಿದ ಆ ಹುಡುಗರು ಮನೆಯಿಂದ ಎರಡು ದಿನಗಳ ಕಾಲ ಓಡಿ ಹೋಗಿ ಕಾಡು ಮೇಡು ಅಲೆದು ಅಂತಿಮವಾಗಿ ಪೋಲೀಸರ ಬಳಿ ಶರಣಾಗಲು ಹೋಗಿ ಅಲ್ಲಿಯೂ ಅಚಾತುರ್ಯದಿಂದ ಒಂದು ದಿನಗಳ ಕಾಲ ಸರೆಮನೆಯನ್ನು ಅನುಭವಿಸುತ್ತಿರುವಾಗಲೇ ಊರಿನಲ್ಲಿ ವಿಜೃಂಭಣೆಯಿಂದ ಬಾಣ ಬಿರುಸುಗಳಿಂದ, ಕುಣಿದು ಕುಪ್ಪಳಿಸುತ್ತಾ ಸಾಗುತ್ತಿದ್ದ ಗಣೇಶನ ಮೆರವವಣಿಗೆಯನ್ನು ಜಮಾಲ್ ತನ್ನ ಬಂಧು ಬಾಂಧವರ ಜೊತೆಯಲ್ಲಿ ಮಸೀದಿಯ ಗೋಡೆಯ ಮೇಲೆ ಕುಳಿತು ವೀಕ್ಷಿಸುತ್ತಿದ್ದ ಸಮಯದಲ್ಲೇ ಗಲಭೆಗಳು ಹುಟ್ಟಿಕೊಂಡಾಗ ಪ್ರೇಕ್ಷಕರ ಮನಸ್ಸಿನಲ್ಲಿ ಕಳವಳ ಉಂಟು ಮಾಡುತ್ತದೆ.

ಹೀಗೆ ಸಿನಿಮಾದ ಮೊದಲಾರ್ಧ ವಿದ್ಯಾರ್ಥಿಗಳ ಈ ರೀತಿಯ ಕುಚೇಷ್ಟೆಯ ಜೊತೆಗೆ ಕಾಲೇಜಿನ ಪ್ರಾಂಶುಪಾಲ ಓಬಯ್ಯ, ವಯಸ್ಸಾದ ಇತಿಹಾಸದ ಮೇಷ್ಟ್ರು, ಸಣ್ಣ ವಯಸ್ಸಿನ ಕನ್ನಡ ಮೇಷ್ಟ್ರು ಇಂಗ್ಲೀಷ್ ಟೀಚರ್ ಒಲಿವಿಯಾರನ್ನು ಒಲಿಸಿಕೊಳ್ಳಲು ಪಡುವ ಹರಸಾಹಸ, ಕ್ರಿಕೆಟ್ ಪ್ರೇಮಿ ಕಾಲೇಜಿನ ಜವಾನರ ಸುತ್ತಲೇ ಗಿರಕಿ ಹೊಡೆಯುವಷ್ಟರಲ್ಲಿ, ಧಾರಾವಾಹಿಗಳಲ್ಲಿ ಹಾಸ್ಯಪಾತ್ರಗಳಲ್ಲಿ ಯಶಸ್ವಿಯಾಗಿರುವ ಕರಾವಳಿ ಮೂಲದ ನಟ ಶೋಭರಾಚ್ ಕಾಲೇಜಿನ ಪಿಟಿ ಟೀಚರ್ ಆಗಿ ಬಂದ ನಂತರವಷ್ಟೇ ಸಿನಿಮಾ ವೇಗವನ್ನು ಪಡೆದುಕೊಳ್ಳುತ್ತದೆ.

ದ್ವಿತೀಯಾರ್ಥದಲ್ಲಿ, ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಗಣೇಶ ವಿಸರ್ಜನೆಯ ಸಮಯದಲ್ಲಿ ಆದ ಘಟನೆ ಕೋಮು ದಳ್ಳುರಿಯಾಗಿರದೇ, ಅದೊಂದು ಅಚಾತುರ್ಯವಾಗಿದ್ದು, ಅದನ್ನು ಜಮಾಲ್ ಬಂದು ಪರಿಹರಿಸಿದ ರೀತಿಯನ್ನು ತೋರಿಸಿರುವ ಪರಿ ನಿಜಕ್ಕೂ ಮನ ಮುಟ್ಟುವಂತಿದೆ. ಇನ್ನು ಪಿಟಿ ಮೇಷ್ಟ್ರು ಆರಂಭದಲ್ಲಿ ಪುಟ್ಬಾಲ್ ತಂಡವನ್ನು ಕಟ್ಟಿ ಚನ್ನಾಗಿ ಆಡುತ್ತಿದ್ದ ಜಮಾಲ್ ನನ್ನು ನಾಯಕನನ್ನಾಗಿಸಿದಾಗ ಕೋಪಗೊಂಡ ರಾಮಾನುಜ,  ಕ್ರಿಕೆಟ್ ತಂಡವನ್ನು ಕಟ್ಟಲು ದಂಬಾಲು ಬಿದ್ದಾಗ, ಎಲ್ಲರ ಆಟವನ್ನೂ ಗಮನಿಸಿ ಅತ್ಯುತ್ತಮವಾಗಿ ಆಡುತ್ತಿದ್ದ ರಾಮಾನುಜನ್ನೇ ನಾಯಕನನ್ನಾಗಿಸಿ ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿಗೆ ಅಭ್ಯಾಸ ಮಾಡುತ್ತಿರುವ ಸಂದರ್ಭವೇ ಚಿತ್ರದ ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತದೆ.

mustafa1ಕಾಲೇಜು ಹುಡುಗರು ಕ್ರಿಕೆಟ್ ಆಡುತ್ತಿದ್ದ ಸಮಯದಲ್ಲೇ ಅಲ್ಲಿಗೆ ಬರುವ ಸ್ಥಳೀಯ ಮುಸ್ಲಿಂ ಯುವಕರ ನಡುವೆ ಮೈದಾನದ ಕುರಿತಾಗಿ ಗಲಾಟೆಯಾಗಿ ನಂತರ ಇಬ್ಬರೂ ಸೇರಿ ಒಟ್ಟಾಗಿ ಪಂದ್ಯವನ್ನಾಡುವ ಒಪ್ಪಂದವಾಗಿ ಆ ಪಂದ್ಯದ ನಂತರ ಆಗುವ ಗಲಾಟೆ, ಕಾಲೇಜು ಪ್ರಾಂಶುಪಾಲರವರೆಗೂ ತಲುಪಿ, ಪಿಟಿ ಮೇಷ್ಟ್ರ ಮಧ್ಯಸ್ತಿಕೆಯಲ್ಲಿ ಅಂತಿಮವಾಗಿ ಅಬಚೂರು ಕಾಲೇಜಿನ ಹುಡುಗರು ಮತ್ತು ಆ ಮುಸ್ಲಿಂ ಹುಡುಗರ ತಂಡದ ನಡುವಿನ ಕ್ರಿಕೆಟ್ ಪಂದ್ಯಾವಳಿ ನಡೆಯಬೇಕು ಎನ್ನುವ ನಿರ್ಧಾರಕ್ಕೆ ಬಂದಾಗ, ಅಮೀರ್ ಖಾನ್ ಅಭಿನಯದ ಲಗಾನ್ ನೆನಪಾಗುತ್ತದೆ.

ರಾಮಾನುಜನ ಬದಲಾಗಿ ಜಮಾಲ್ ಏಕೆ ತಂಡದ ನಾಯಕನಾದ? ಜಮಾಲ್ ನಿಗೆ ರಾಮಾನುಜಾ ಮತ್ತವನ ಪಟಾಲಂ ಸಹಾಯ ಮಾಡಿತೇ? ಕಾಲೇಜು ತಂಡ ಮತ್ತು ಮುಸ್ಲಿಂ ಯುವಕರ ನಡುವಿನ ಆ ಪಂದ್ಯದ ಫಲಿತಾಂಶ ಏನಾಯಿತು? ಪಂದ್ಯದ ಗೆಲುವಿನ ರೂವಾರಿ ಯಾರು? ರಾಮಾನುಜನಿಗೆ ವಯಕ್ತಿಕವಾಗಿ ಮುಸಲ್ಮಾರ ಕಂಡರೆ ದ್ವೇಷ ಏಕೇ? ಎಂಬುದೆಲ್ಲವನ್ನೂ ಇಲ್ಲಿ ವಿವರಿಸುವುದಕ್ಕಿಂತಲೂ ಚಿತ್ರವನ್ನು ನೋಡಿ ಅನುಭವಿಸುವುದೇ ಆನಂದ.

ಇಂಗ್ಲೀಶ್ ಟೀಚರ್ ಒಲಿವಿಯ ಸರಿ ನಮ್ಮ ಕಾಲೇಜು ತಂಡ ಸೋತರೆ ನಿಮಗೆ ಬಹಳವಾಗಿ ನಷ್ಟವಾಗುತ್ತದೆ ಅಲ್ಲವೇ? ಎಂದು ಕೇಳಿದಾಗ, ಪಿಟಿ ಮೇಷ್ಟು. ಅರೇ ಹಾಗೇಕೆ ಹೇಳುತ್ತೀರೀ? ಇಲ್ಲಿ ಆಡುತ್ತಿರುವ ಎರಡೂ ತಂಡಗಳ ಆಟಗಾರರಉ ನಮ್ಮೂರಿನವರೇ, ಆ ಎರಡೂ ತಂಡಗಳ ಆಟವನ್ನು ನೋಡಲು ಊರಿನವರೆಲ್ಲಾ ಇಲ್ಲಿಗೆ ಬಂದಿದ್ದಾರೆ ಎನ್ನುವುದೇ ಒಂದು ದೊಡ್ಡ ಸಂಗತಿ. ಹಾಗಾಗಿ ಪಂದ್ಯದ ಫಲಿತಾಂಶ ನನ್ನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು ಎಂದು ಹೇಳುವ ದೃಶ್ಯವೇ ಪೈಸಾ ವಸೂಲ್.

mustafa2ಚಿತ್ರದಲ್ಲಿ ಬರುವ ಒಂದೆರಡು ಹಾಡುಗಳಲ್ಲಿ ರಂಗಕರ್ಮಿ ಬಿ.ವಿ. ಕಾರಂತ್ ಸಂಯೋಜಿಸಿದ್ದ ಮೈಸೂರು ರಾಜ್ಯದ ದೊರೆಯೇ ರಣಧೀರ ನಾಯಕನೇ, ನಿನ್ನಂಥೋರ್ ಯಾರೂ ಇಲ್ವಲ್ಲೋ. ಹಾಡು ಮತ್ತೆ ಮತ್ತೆ ಗುನುಗುವಂತಿದ್ದು, ಉಳಿದಂತೆ ಸಂಗೀತ ನಿರ್ದೇಶಕ ನವನೀತ್ ಶ್ಯಾಮ್ ಅವರ ಹಿನ್ನಲೆ ಸಂಗೀತ ಪೂರಕವಾಗಿದೆ. ರಾಮಾನುಜಾ ಅಯ್ಯಂಗಾರಿ ಮತ್ತವರ ಪಟಾಲಂ, ಜಮಾಲ್, ರಮಾಮಣಿ, ಹಿರಿಯ ನಟ ಎಂ.ಎಸ್.ಉಮೇಶ್, ಮಂಡ್ಯ ರಮೇಶ್, ನಾಗಭೂಷಣ, ಸುಂದರ್ ವೀಣ, ಶೋಭರಾಜ್ ಪಾವೂರ್ ಅವರ ಅಭಿನಯ ಒಂದು ತಕ್ಕಡಿಯಲ್ಲಿಟ್ಟರೆ, ಆರ್ಕೆಷ್ಟ್ರಾ ಮೈಸೂರು ಚಿತ್ರದ ಮೂಲಕ ಕನ್ನಡಿಗರ ಮನಸ್ಸೂರೆಗೊಂಡಿದ್ದ ಪೂರ್ಣಚಂದ್ರ ಈ ಚಿತ್ರದಲ್ಲಿ ಖ್ಯಾತೆ ತೆಗೆಯುವ ಸುಲ್ತಾನ್ ಪೇಟೆಯ ಮುಸ್ಲಿಮ್ ಹುಡುಗನಾಗಿ, ಮುಸ್ಲಿಂ ಹುಡುಗರ ಕ್ರಿಕೆಟ್ ತಂಡದ ನಾಯಕನಾಗಿ ಮೋರಿಲೀ ಮೀನು ಹಿಡಿಯೋ ಹುಡುಗರು, ಕ್ಯಾ ಮಾ ಪುಳಿಯೊಗ್ರೆ, ಕಡ್ಲೆಕಾಯ್ ಕಿ ಬದ್ಬೂ ಆರೀ, ಎಂದು ವಿರುದ್ಧ ತಂಡದವರನ್ನು ಛೇಡಿಸುತ್ತಾ, ಮಾಡಿರುವ ಅಭಿನಯ ಹೆಚ್ಚಿನ ತೂಕ ಎನಿಸುತ್ತದೆ

mustafa5ಅಂತಿಮವಾಗಿ ಚಿತ್ರ ನೋಡಿ ಮನೆಗೆ ಮರಳುವಾಗ ಶಿವಮೊಗ್ಗದ ಮೂಲದ ರಾಮಾನುಜ ಐಯ್ಯಂಗಾರಿ ಪಾತ್ರಧಾರಿ ಆದಿತ್ಯ ಆಶ್ರೀಅಂಗಸೌಷ್ಟವ ಮತ್ತು ಅಭಿನಯ ಕನ್ನಡಕ್ಕೆ ಮತ್ತೊಬ್ಬ ಅರ್ಜುನ್ ಸರ್ಜಾನನ್ನು ನೆನಪಿಸಿದರೆ, ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಪೋಲಿಸ್ ಇನ್ಸ್ಪೆಕ್ಟರ್ ಅವರ ವೇಷಭೂಷಣ ಮತ್ತು ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ನಿವೃತ್ತ ಹಿರಿಯ ಪೋಲೀಸ್ ಅಥಿಕಾರಿಗಳಾದ ಜೆ.ಬಿ.ರಂಗಸ್ವಾಮಿ (ಜೇಬರ್) ಆವರನ್ನು ನೆನಪಿಸುತ್ತದೆ. ಅಂತಿಮವಾಗಿ ಇಷ್ಟು ಸೂಕ್ಷ್ಮವಾದ ಕತೆಯನ್ನು ಯಾರಿಗೂ ಯಾವ ರೀತಿಯಲ್ಲೂ ಧಕ್ಕೆ ಬಾರದಂತೆ ಸಿನಿಮಾದ ಕಡೆಯ ವರೆಗೂ ಪ್ರೇಕ್ಷಕರಿಗೆ ಬೇಸರ ಬಿಡಿ, ಆಕಳಿಕೆ, ತೂಕಡಿಕೆಯೂ ಬಾರದಂತೆ ಕೂತೂಹಲಕಾರಿಯಾಗಿ ತೆರೆಯ ಮೇಲೆ ಪ್ರಸ್ತುತ ಪಡಿಸಿರುವ ಅದರಲ್ಲೂ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿರ್ಣಾಯಕ ಕಡೆಯ ಚಂಡಿನಲ್ಲಿ ಫಲಿತಾಂಶ ತೋರಿಸಿರುವ ನಿರ್ದೇಶಕರಾದ ಶ್ರೀ ಶಶಾಂಕ್ ಸೋಗಲ್ ಕನ್ನಡ ಚಿತ್ರರಂಗದಲ್ಲಿ ದೀರ್ಘಕಾಲ ಉಳಿಯಬಲ್ಲರು ಎಂಬ ಭರವಸೆಯನ್ನು ಹುಟ್ಟು ಹಾಕುತ್ತಾರೆ.

ಬಹುತೇಕ ನಿರ್ದೇಶಕರು ಮೊದಲ ಸಿನಿಮಾದ ಯಶಸ್ಸು ತಲೆಗೆ ಏರಿ ಮುಂದೆ ಖಾಲಿ ಡಬ್ಬಾ ಆಗಿರುವಂತೆ ಶಶಾಂಕ್ ಸೋಗಲ್ ಸೋಗಾಲ್ ಆಗದೇ, ಕನ್ನದದ ಹಿರಿಮೆ ಮತ್ತು ಗರಿಮೆಯನ್ನು ಅಂತರಾಷ್ಟೀಯ ಮಟ್ಟಕ್ಕೆ ತೆಗೆದುಕೊಂಡ ಹೋಗಿರುವ ಕಾರ್ನಾಡ್, ಕಾಸರವಳ್ಳಿ, ಸತ್ಯ, ಕಾರಾಂತ್, ಶೇಷಾದ್ರಿಯವರ ಸಾಲಿನಲ್ಲಿ ನಿಲ್ಲುವಂತಾಗಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆಯಾಗಲಿ.

ಕಡೆಯದಾಗಿ ಈ ವಿಮರ್ಶೆ ಓದಿದ ನಂತರ ಓಟಿಟಿಯಲ್ಲಿ ಸಿನಿಮಾ ಬರುವವರೆಗೂ ಕಾಯದೇ, ತಪ್ಪದೇ ಸಿನಿಮಾ ಮಂದಿರಕ್ಕೆ ಹೋಗಿ ನೋಡಿ, ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚ್ಕೋತೀರೀ ತಾನೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

3 thoughts on “ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ

  1. ಬೆಂಗಳೂರಿಗೆ ಬಂದಾಗ ನೋಡಬೇಕಷ್ಟೇ… ನಮ್ಮ ಕೋಲಾರದಲ್ಲಿ ತೆಲುಗುಚಿತ್ರಗಳ ಭರಾಟೆಯೇ ಅಧಿಕ.
    ನಿಮ್ಮ ಈ ಮನಮುಟ್ಟುವ ವಿಮರ್ಶೆ ಓದಿದ ಮೇಲೆ ಆದಷ್ಟು ಬೇಗ ಚಿತ್ರವನ್ನು ನೋಡುವ ಆಸೆಯಾಗಿದೆ…. ಆದರೆ ಕಾಯಲೇಬೇಕು ಕನಿಷ್ಠ ಒಂಭತ್ತನೆಯ ದಿನಾಂಕದವರೆಗೆ.

    Liked by 1 person

  2. Great to know that Pu.Ch.Te’s short story is made into a movie. Great and detailed review sir. Thanks a lot. After seeing Abachoorina postaffice, kiragoorina gayyaligalu I had felt really bad about the way the original story was handled … felt that those stories at best can be enjoyed only reading and use imagination as you read. After reading your review, now I will watch this movie.

    Liked by 1 person

Leave a reply to ವಿ ಲೋಕೇಶ್ Cancel reply