ಹೌದು ಹುಟ್ಟಿದವರು ಸಾಯಲೇ ಬೇಕು ಎನ್ನುವುದು ಜಗದ ನಿಯಮವಾಗಿದೆ. ಹಾಗಾಗಿಯೇ ಹುಟ್ಟು ಆಕಸ್ಮಿಕ. ಸಾವು ಖಚಿತ ಎನ್ನುವುದು ಸಾಮಾನ್ಯ ಮಾತಾಗಿದೆ. ಗುಜರಾತ್‌ನ ಜಾಮ್ ನಗರಕ್ಕೆ ಸೇರಿದ 41 ವರ್ಷದ ಹೃದಯತಜ್ಞ ಡಾ. ಗೌರವ್ ಗಾಂಧಿ ಅವರು ಇದುವರೆವಿಗೂ ಸುಮಾರು 16,000 ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿ, ಸಾವಿರಾರು ಕುಟುಂಬಗಳ ಶ್ರೀರಕ್ಷೆಯನ್ನು ಪಡೆದಿದ್ದಂತಹವರು ಮೊನ್ನೆ ರಾತ್ರಿ ಇದ್ದಕ್ಕಿದ್ದಂತೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
1982 ರಲ್ಲಿ ಜನಿಸಿದ ಡಾ. ಗಾಂಧಿ ಅವರು ತಮ್ಮ ಮೂಲ ವೈದ್ಯಕೀಯ ಪದವಿಯನ್ನು ಜಾಮ್‌ನಗರದಿಂದ ಪೂರ್ಣಗೊಳಿಸಿದ ನಂತರ ಅಹಮದಾಬಾದ್‌ನಲ್ಲಿ ಹೃದ್ರೋಗ ಶಾಸ್ತ್ರದಲ್ಲಿ ವಿಶೇಷ ಪರಿಣಿತಿಯನ್ನು ಪಡೆದು ತಮ್ಮ ಹುಟ್ಟೂರಿನಲ್ಲಿಯೇ ಸೇವೆ ಮಾಡಬೇಕೆಂಬ ಆಸೆಯಿಂದ ಜಾಮ್ ನಗರದಲ್ಲಿಯೇ ವೈದ್ಯಕೀಯ ಅಭ್ಯಾಸವನ್ನು ಆರಂಭಿಸಿ ತಮ್ಮ ಕೌಶಲ್ಯದಿಂದ ಕೆಲವೇ ಸಮಯದಲ್ಲಿ ಹೆಸರಾಂತ ಹೃದಯ ಶಸ್ತ್ರಚಿಕಿತ್ಸಕರಾಗಿ, ಸಾವಿರಾರು ಆಂಜಿಯೋಗ್ರಫಿ ಕಾರ್ಯವಿಧಾನ ಮತ್ತು ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮೂಲಕ ಹೆಸರುವಾಸಿಯಾಗಿದ್ದರು. ಅಷ್ಟೇ ಅಲ್ಲದೇ ಸಾಮಾಜಿಕಜಾಲತಾಣವಾದ ಫೇಸ್‌ಬುಕ್‌ನಲ್ಲಿ ಹಾಲ್ಟ್ ಹಾರ್ಟ್ ಅಟ್ಯಾಕ್ ಎಂಬ ಅಭಿಯಾನದೊಂದಿಗೆ ನಿಕಟವಾದ ಸಂಬಂಧ ಹೊಂದುವ ಮೂಅಕ ಜನಸಾಮಾನ್ಯರಿಗೆ ಹೃದಯಘಾತದ ಬಗ್ಗೆ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಸವಿರವಾಗಿ ತಿಳಿಸಿಕೊಡುತ್ತಿದ್ದರು.
ಕಳೆದ ಸೋಮವಾರ, ಜೂನ್ 5, 20203 ರಂದು ಎಂದಿನಂತೆ ಇಡೀ ದಿನ ರೋಗಿಗಳನ್ನು ಪರೀಕ್ಷಿಸಿ ಅವರಿಗೆ ಸೂಕ್ತವಾದ ಚಿಕಿತ್ಸೆಗಳನ್ನು ನೀಡಿ ಸಂಜೆ ಸಹಜವಾಗಿಯೇ ಜಾಮ್ ನಗರದ ಅರಮನೆ ರಸ್ತೆಯಲ್ಲಿರುವ ತಮ್ಮ ಮನೆಗೆ ಮರಳಿ ಎಲ್ಲರೊಂದಿಗೂ ಕುಳಿತುಕೊಂಡು ಊಟವನ್ನು ಮಾಡಿ ಯಾವುದೇ ರೀತಿಯ ತೊಂದರೆಗಳು ಅಥವಾ ಬದಲಾವಣೆಗಳಿಲ್ಲದೆ ತಮ್ಮ ಕೋಣೆಯಲ್ಲಿ ನಿದ್ರೆಗೆ ಜಾರಿದ್ದಾರೆ. ಪ್ರತೀ ದಿನ ಬೆಳಿಗ್ಗೆ ಬೇಗ ಎದ್ದು ತಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡುತ್ತಿದ್ದ ಗಾಂಧಿಯವರು ಮರುದಿನ ಮಂಗಳವಾರ ಬೆಳಗ್ಗೆ 6 ಗಂಟೆಯಾದರೂ ಹಾಸಿಗೆಯಿಂದ ಏಳದೇ ಹೋದಾಗ, ಅವರನ್ನು ಎಬ್ಬಿಸಲು ಕುಟುಂಬಸ್ಥರು ಹೋದಾಗ, ಡಾ. ಗಾಂಧಿಯವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನ್ನು ಕಂಡು ಕೂಡಲೇ ಅವರನ್ನು ಹತ್ತಿರದ ಜಿಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಗೆ ತಲುಪಿ ಸುಮಾರು 45 ನಿಮಿಷಗಳ ಕಾಲ ಸೂಕ್ತವಾದ ಚಿಕಿತ್ಸೆಯನ್ನು ನೀಡಿದರೂ, ಚಿಕಿತ್ಸೆಯು ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ಎಂಪಿ ಶಾ ವೈದ್ಯಕೀಯ ಕಾಲೇಜಿನ ಡೀನ್ ಡಾ ನಂದಿನಿ ದೇಸಾಯಿ ಅವರು ಧೃಢಪಡಿಸಿದಾಗ ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದೆ.
ಕೇವಲ 41 ವರ್ಷದ ಯುವಕರಾಗಿದ್ದ ಗೌರವ್ ಗಾಂಧಿಯವರ ದೈನಂದಿನ ಚಟುವಟಿಕೆ ಅತ್ಯಂತ ಸರಳವಾಗಿತ್ತು. ಅವರ ಸಸ್ಯಾಹಾರಿಗಳಾಗಿದ್ದು ಉತ್ತಮ ಆಹಾರ ಪದ್ದತಿಯನ್ನು ಅವರು ರೂಡಿಸಿಕೊಂಡಿದ್ದರು. ಪ್ರತೀ ದಿನವೂ ವ್ಯಾಯಾಮ ಮಾಡುತ್ತಿದ್ದರಲ್ಲದೇ, ಸಮಯ ಸಿಕ್ಕಾಗ ಜಿಮ್ ಹೋಗುವುದನ್ನು ರೂಢಿಯಾಗಿಟ್ಟುಕೊಂಡಿದ್ದಲ್ಲದೇ, ವಾರಾಂತ್ಯದಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರೊಡನೆ ಸೇರಿಕೊಂಡು ಕ್ರಿಕೆಟ್ ಆಟ ಆಡುತ್ತಿದ್ದರು ಎಂದು ತಿಳಿದು ಬಂದಿದೆ. ಯಾವುದೇ ರೀತಿಯ ದುಶ್ಚಟಗಳೂ ಇಲ್ಲದೇ, ಕಾಫೀ ಟೀಯನ್ನೂ ಕುಡಿಯದೇ, ದಿನಕ್ಕೆ 14 ಗಂಟೆಗಳ ಕಾಲ ದುಡಿಯುತ್ತಿದ್ದ ಸಢೃಢರಾಗಿದ್ದ ವೈದ್ಯರೇ, ಅಂತಿಮವಾಗಿ ಮಾರಣಾಂತಿಕ ಹೃದಯದ ರಕ್ತನಾಳದ ತೊಂದರೆಯಿಂದ ಮೃತಪಟ್ಟರೆ ಇನ್ನು ಸಾಮಾನ್ಯ ಜನರ ಗತಿ ಏನು ಎಂಬುದೇ ಎಲ್ಲರ ಕಳವಳಕಾರಿಯಾಗಿದೆ. ಡಾ. ಗಾಂಧಿಯವರು ವಯಸ್ಸಾದ ತಂದೆ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಇದೇ ರೀತಿ ಚೈತನ್ಯದ ಚಿಲುಮೆಯಾಗಿದ್ದ, ವರ ನಟ ಡಾ. ರಾಜಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜಕುಮಾರ್ ಸಹಾ ಸಣ್ಣ ವಯಸ್ಸಿನಲ್ಲಿಯೇ ತೀವ್ರವಾದ ಹೃದಯಸ್ಥಂಭನದಿಂದ ನಿಧನ ಹೊಂದಿದ ನಂತರ 40+ ವಯಸ್ಸಿನ ಅನೇಕರಿಗೆ ಒಂದು ರೀತಿಯ ಭಯದ ಛಾಯೆಯು ಆವರಿಸಿದ್ದು, ಜೀವನದ ಬಗ್ಗೆಯೇ ವಿಪರೀತ ಜಿಗುಪ್ಸೆ ಆಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಯುವಕರು ಏಕೆ ಹೃದಯಾಘಾತದಿಂದ ಸಾಯುತ್ತಿದ್ದಾರೆ ಎಂಬುದನ್ನು ನೋಡಿದಾಗ ಥಟ್ ಅಂತಾ ಹೊಳೆಯೋದೇ ಮನಸ್ಸು. ದೇಹದ ಸೂಕ್ಷ್ಮ ಅಸ್ತಿತ್ವವೇ ಮನಸ್ಸು ಮತ್ತು ಮನಸ್ಸಿನ ಸ್ಥೂಲ ಅಸ್ತಿತ್ವವೇ ದೇಹ. ದೇಹ ಮತ್ತು ಮನಸ್ಸು ಎರಡೂ ಸಹಾ ಪರಸ್ಪರ ಪ್ರಭಾವ ವಲಯದಲ್ಲಿ ಇರುತ್ತವೆ. ಮನಸ್ಸು ನೆಮ್ಮದಿಯಾಗಿದ್ದಾಗ ಮನುಷ್ಯ ಆರೋಗ್ಯವಂತನಾಗಿರುತ್ತಾನೆ. ಅದೇ ರೀತಿಯಲ್ಲಿ ದೇಹ ಆರೋಗ್ಯವಾಗಿದ್ದಾಗ ಮನಸ್ಸಿಗೂ ಒಂದು ರೀತಿಯ ನೆಮ್ಮದಿ ಇರುತ್ತದೆ. ಅಕಸ್ಮಾತ್ ದೇಹಕ್ಕೆ ಬಾಧೆ ಒದಗಿದಾಗ ಮನಸ್ಸು ಕೂಡ ವಿಲಿವಿಲಿ ಒದ್ದಾಡುವುದು. ಆದೇ ರೀತಿ ಮನಸ್ಸಿನಲ್ಲಿ ಪ್ರಸನ್ನತೆ ಇಲ್ಲದೇ ಅನಾವಶ್ಯಕವಾದ ದುಗುಡ ದುಮ್ಮಾನಗಳನ್ನು ತುಂಬಿಕೊಂಡು ವಿಪರೀತವಾದ ಯೋಚನೆ ಮಾಡತೊಡಗುತ್ತಿದ್ದಂತೆಯೇ ಇಡೀ ದೇಹ ಅಶಾಂತಿಯ ಗೂಡಾಗಿ ಅನಾರೋಗ್ಯದ ತಾಣವಾಗುತ್ತದೆ. ಹಾಗಾಗಿ ಮನಸ್ಸಿನ ಆರೋಗ್ಯವೆಂದರೆ ಮನಸ್ಸು ಸದಾಕಾಲವೂ ಹರ್ಷಚಿತ್ತದಿಂದ ಇರಬೇಕು. ಹರ್ಷಚಿತ್ತದಿಂದ ಇರುವುದೇ ಮನಸ್ಸಿಗೆ ಕೊಡುವ ವ್ಯಾಯಾಮ.
ಹಾಗಾಗಿ ಕೇವಲ ಹಣವೊಂದೇ ಜೀವನದಲ್ಲಿ ನೆಮ್ಮದಿಯನ್ನು ತಂದು ಕೊಡದು. ಹಣದ ಹಿಂದೆ ಎಂದಿಗೂ ಹೋಗಬಾರದು. ಅಷ್ಟೇ ಅಲ್ಲದೇ, ಉತ್ತಮವಾದ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಅತ್ಯಾವಶ್ಯಕ. ದುರಾದೃಷ್ಟವಷಾತ್, ಮನೋರಂಜನೆ ಎನ್ನುವ ಹೆಸರಿನಲ್ಲಿ ಹೊಡೆದಾಟ ಬಡಿದಾಟ, ಇಲ್ಲವೇ ಅತಿಯಾದ ಕಾಮೋದ್ರೇತಿತ ಚಿತ್ರಗಳನ್ನು ನೋಡುವುದು ಅದರ ಜೊತೆ ಅತಿಯಾದ ಧೂಮಪಾನ,ಮತ್ತು ಮದ್ಯಪಾನ ಇನ್ನೂ ಕೆಲವರು ಅವೆರಡನ್ನೂ ಮೀರಿ ಮಾದಕದ್ರೌವ್ಯಗಳ ಚಟಕ್ಕೆ ಬೀಳುವುದು ಸಹಾ ದೇಹದ ಮೇಲೆ ಬಹಳ ಪರಿಣಾಮವನ್ನು ಚಿಕ್ಕ ವಯಸ್ಸಿನಲ್ಲಿಯೇ ನಾನಾ ಖಾಯಿಲೆಗಳಿಗೆ ತುತ್ತಾಗಿ ಈ ರೀತಿಯಾಗಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಒಂದು ಅಧ್ಯಯನದ ಪ್ರಕಾರ ಇತ್ತೀಚಿನ ದಿನಗಳಲ್ಲಿ ಸೋಮವಾರಗಳಂದೇ ಹೆಚ್ಚಿನ ಹೃದಯಾಘಾತಗಳು ಆಗುತ್ತಿವೆ ಎಂಬುದನ್ನು ಗಮನಿಸಿದ್ದಾರೆ. ಈ ದಿನದಂದು ಬಹಳಷ್ಟು ಆರೋಗ್ಯವಂತರು ಹೃದಯಾಘಾತದಿಂದ ಸಾಯುತ್ತಿರುವ ಹಿನ್ನಲೆಯನ್ನು ಗಮನಿಸಿದಾಗ, ಸಣ್ಣ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ದೊಡ್ಡ ದೊಡ್ಡ ಹುದ್ದೆಗಳಿಗೆ ಏರುವ ಮೂಲಕ ಕೋಟ್ಯಾಂತರ ರೂಪಾಯಿ ಹಣವನ್ನು ಗಳಿಸುವ ಹಿಂದೆ ಬಿದ್ದಿರುತ್ತಾರೆ. ಸಹಜವಾಗಿ ಅಷ್ಟು ದೊಡ್ಡ ಮೊತ್ತದ ಹಣವವನ್ನು ಸಂಬಳದ ರೂಪದಲ್ಲಿ ನೀಡುವ ಕಂಪನಿಗಳೂ ಅವರಿಂದ ಕೊಡುವ ಸಂಬಳಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಅರ್ಥಾತ್ ಕಬ್ಬಿನ ಜಲ್ಲೆಯನ್ನು ಹಿಂಡಿ ಹಿಂಡಿ ಕಬ್ಬಿನ ರಸವನ್ನು ತೆಗೆಯುವಂತೆ ಒತ್ತಡವನ್ನು ಹೇರಿದಾಗ, ಹೃದಯದ ಆರೋಗ್ಯಕ್ಕೆ ಹಾನಿಕಾರಕವಾದ ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಮಧುಮೇಹದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಈ ರೀತಿಯ ಖಾಯಿಲೆಗಳು ಆರಂಭದಲ್ಲೇ ಮಾರಣಾಂತಿಕವಾಗಿ ಗೋಚರಿಸದೇ ನಿಧಾನವಾಗಿ ದೇಹದ ಮೇಲೆ ಪರಿಣಾಮವನ್ನು ಬೀರುತ್ತಲೇ ಇರುತ್ತದೆ. ಆದರೆ, ವಹಿಸಿಕೊಂಡ ಜವಾಬ್ಧಾರಿಯಲ್ಲಿ ನಿಗಧಿತ ಸಮಯಕ್ಕೆ ಕೊಟ್ಟ ಕೆಲಸವನ್ನು ಮುಗಿಸುವ ಭರದಲ್ಲಿ ಈ ರೀತಿಯ ಖಾಯಿಲೆಗಳ ಬಗ್ಗೆ ಅಲಕ್ಷವಹಿಸಿವುದರಿಂದಲೂ ಇಲ್ಲವೇ ಎಲ್ಲಾದಕ್ಕೂ ವಾರಾಂತ್ಯಕ್ಕೇ ಕಾಯುವ ದುರಾಭ್ಯಾಸವನ್ನು ಮಾಡಿಕೊಂಡಿರುವ ಪರಿಣಾಮ ಈ ಖಾಯಿಲೆಗಳಿಗೆ ಸೂಕ್ತವಾದ ಚಿಕಿತ್ಸೆಯೇ ದೊರೆಯದೇ ಈ ರೀತಿಯ ಅಕಾಲಿಕ ಮರಣವು ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು.
ಹಾಗಾಗಿ ಹೃದಯಾಘಾತದ ಪ್ರಮುಖ ಚಿಹ್ನೆಗಳಾದ ಆಗ್ಗಾಗ್ಗೆ ಕಾಣಿಸಿಕೊಳ್ಳುವ ಎದೆ ನೋವು, ಅಸ್ವಸ್ಥತೆ, ದುರ್ಬಲ ಭಾವನೆ, ದವಡೆ, ಕುತ್ತಿಗೆ ಮತ್ತು ಬೆನ್ನಿನಲ್ಲಿ ನೋವು, ಭುಜ ಮತ್ತು ಬೆನ್ನಿನಲ್ಲಿ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆ ಇಂತಹವುಗಳು ಕಂಡು ಬಂದ ತಕ್ಷಣ ತಡಮಾಡದೇ ಸಕಾಲಿಕ ವೈದ್ಯಕೀಯ ಸಹಾಯ ಪಡೆದಾಗ ಈ ರೀತಿಯ ಹೃದಯಾಘಾತಗಳನ್ನು ತಡೆಯಬಹುದಾಗಿದೆ.
ಇನ್ನು ಜೀವ ಇದ್ದಲ್ಲಿ ಮಾತ್ರವೇ ಜೀವನ ಎಂಬುದನ್ನು ತೀವ್ರವಾಗಿ ಮನಸ್ಸಿನಲ್ಲಿ ಇಟ್ಟುಕೊಂಡು ಎಲ್ಲಾ ಕೆಲಸಗಳಿಗೂ ನಿಗಧಿತ ಸಮಯವನ್ನು ನಿಯೋಜಿಸಿ, ಪ್ರತಿ ದಿನವೂ ಕುಟುಂಬದೊಂಡನೆ ಸ್ವಲ್ಪ ಕಾಲ ಸಮಯ ಕಳೆಯುವುದು ಒತ್ತಡದ ನಿವಾರಣೆಗೆ ಉತ್ತಮವಾದ ಸಾಧನವಾಗಿದೆ. ಇನ್ನು ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಉತ್ತಮವಾಗಿದೆ ಎನ್ನುವಂತೆ ಬೆಳಗ್ಗೆ ಸ್ವಲ್ಪ ಕಾಲ ವ್ಯಾಯಾಮ, ಯೋಗಾಭ್ಯಾಸ, ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಮಾಡುವುದಲ್ಲದೇ, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮತ್ತು ನಿದ್ರೆಯನ್ನು ಮಾಡುವುದು ಸಹಾ ಅತ್ಯಾವಶ್ಯಕವಾಗಿದೆ.
ಆಸೆಯೇ ದುಃಖಕ್ಕೆ ಮೂಲ ಎನ್ನುವಂತೆ ಅತಿಯಾದ ದುರಾಸೆಯೂ ಸಹಾ ಒತ್ತಡಕ್ಕೆ ಎಣೆ ಮಾಡಿಕೊಡುತ್ತದೆ. ನೆಮ್ಮದಿಯ ಜೀವನಕ್ಕೆ ರೋಟಿ, ಮಕಾನ್, ಕಪಡ, ಎನ್ನುವಂತೆ ಎರಡು/ಮೂರು ಹೊತ್ತು ಊಟ,ತಿಂಡಿ, ದೇಹದ ಮಾನ ಮುಚ್ಚುವ ಸಲುವಾಗಿ ಮತ್ತು ಆರೋಗ್ಯ ಕಾಪಾಡುವುದಕ್ಕಾಗಿ ಉತ್ತಮವಾದ ಬಟ್ಟೆಗಳು ಮತ್ತು ವಾತಾವರಣದ ವೈಪರೀತ್ಯಗಳಿಂದ ಚನ್ನಾಗಿ ಇರಲು ಒಂದು ಒಳ್ಳೆಯ ಮನೆ ಮತ್ತು ಕಣ್ತುಂಬ ನಿದ್ದೆ ಇದ್ದರೆ ಅದೇ ಸ್ವರ್ಗಕ್ಕೆ ಕಿಚ್ಚು ಹತ್ತಿಸಿದಂತೆ. ಆದರೆ ಇಂದು ಬೇಕೋ ಬೇಡವೋ ನೋಡಿದ್ದಲ್ಲವನ್ನೂ ಪಡೆದುಕೊಳ್ಳಲೇ ಬೇಕೆಂಬ ಕೊಳ್ಳುಬಾಕತನ ಹೊಸಾ ಕಾರು, ಬೈಕು ಮೊಬೈಲ್ ಟಿವಿ ಆಭರಣಗಳು, ಉಡುಗೆ ತೊಡಿಗೆಗಳೂ ಸಹಾ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಮೊಬೈಲ್ ಕೊಡಿಸಿಲ್ಲ, ಪರೀಕ್ಷೆಯಲ್ಲಿ ಚೆನ್ನಾಗಿ ಅಂಕಗಳನ್ನು ಗಳಿಸಿದ್ದಕ್ಕೆ ಗದುರಿದ್ದಕ್ಕೆ ಸಣ್ಣ ಸಣ್ಣ ವಯಸ್ಸಿನ ಮಕ್ಕಳೂ ಸಹಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ಮನಸ್ಸಿನವರು ಇಂದಿನ ಕಾಲದಲ್ಲಿ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ಸಹಾ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರೆ ಅಚ್ಚರಿ ಆಗುತ್ತದೆ ಅಲ್ಲವೇ? ಅನೇಕ ಬಾರಿ ನಾವು ಮಾಡುತ್ತಿರುವ ಕೆಲಸವೇ ಕಷ್ಟ. ಭಗವಂತ ನಮಗೇ ಎಲ್ಲಾ ಕಷ್ಟಗಳನ್ನು ಕೊಟ್ಟಿದ್ದಾನೆ ಎಂದು ಭಾವಿಸಿ ನಮಗೇ ಅರಿವಿಲ್ಲದಂತೆ ನಾವೇ ನಮ್ಮ ಮೇಲೆ ಒತ್ತಡವನ್ನು ಹಾಕಿಕೊಂಡಿರುತ್ತೇವೆ. ಆದರೆ ನಿಜವಾಗಿಯೂ ಕಷ್ಟದಲ್ಲಿ ಇರುವವರ ಬಳಿ ಹೋದಾಗ ಅವರ ಕಷ್ಟವನ್ನು ಕೇಳಿದಾಗ ನಾವು ಅನುಭವಿಸುತ್ತಿರುವ ಕಷ್ಟ ಅವರ ಶೇ ೫ ರಷ್ಟೂ ಇಲ್ಲಾ ಎಂಬುದು ಅರಿತಾಗ ನಮ್ಮ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಅದೇ ರೀತಿ ಅವರ ಕಷ್ಟಕ್ಕೆ ನಮ್ಮ ಕೈಲಾದ ಸಯಾಯವನ್ನು ಮಾಡಿ ಆದರಿಂದ ಅವರ ಕಷ್ಟಗಳೆಲ್ಲವೂ ನಿವಾರಣೆಯಾಗಿ ನೆಮ್ಮೆದಿಯ ಜೀವನಕ್ಕೆ ಮರಳಿ ಅವರು ನಮಗೆ ಕೃತಜ್ಞನೆಯನ್ನು ಹೇಳಿದಾಗ ಸಿಗುವ ಅನಂದ ಕೋಟಿ ರೂಪಾಯಿಗೂ ಹೆಚ್ಚು ಎಂದರೂ ಅತಿಶಯವಲ್ಲಾ. ಸರಳವಾಗಿ ಹೇಳ ಬೇಕೆಂದರೆ ಹಸಿದವರಿಗೆ ಒಂದು ತುತ್ತು ಅನ್ನವನ್ನು, ಬಟ್ಟೆ ಇಲ್ಲದವರಿಗೆ ಒಂದು ಒಳ್ಳೆಯ ಬಟ್ಟೆಯನ್ನು ಕೊಟ್ಟಾಗ ಅವರಲ್ಲಿ ಆಗುವ ಆ ಆನಂದ ಬೇರಲ್ಲೂ ಕಾಣ ಸಿಗದು.
ಹಾಗಾಗಿ, ನೆನ್ನೆ ಡಾ. ಗೌರವ್ ಗಾಂಧಿ, ಇಂದು ಯಾರೋ? ನಾಳೆ ಮತ್ತೊಬ್ಬರು. ಮುಂದೊಂದು ದಿನ ನಾವು. ಹೀಗೆ ಖಂಡಿತವಾಗಿಯೂ ಈ ಭೂಮಿಯಲ್ಲಿ ಹುಟ್ಟಿರುವ ಪ್ರತಿಯೊಂದು ಜೀವಿಗೂ ಒಂದು ಅಂತ್ಯ ಎಂಬುದು ಇರುವ ಕಾರಣ, ಇರುವಷ್ಟು ಸಮಯದಲ್ಲೇ ಪರೋಪಕಾರಿಯಾಗಿ, ಅತ್ಯಂತ ಆನಂದದಾಯಕವಾಗಿ ಕಳೆಯುವುದೇ ಉತ್ತಮವಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
Monday blues ಗೆ ಒಳಗಾಗಿ ಹೃದಯಾಘಾತ ಆಗುತ್ತಿರುವುದು ವಿಷಾದನೀಯ.
LikeLiked by 1 person