ಇತ್ತೀಚೆಗೆ ಹಲವಾರು ಬುದ್ದಿ ಜೀವಿಗಳು ಅಸಹಿಷ್ಣುತೆ ಎಂಬ ಹೆಸರಿನಲ್ಲಿ ಸರ್ಕಾರ ತಮಗೆ ನೀಡಿದ್ದ ಪ್ರಶಸ್ತಿಗಳನ್ನು ಹಿಂದಿರುಗಿಸುವುದೇ ಒಂದು ದೊಡ್ಡ ಪ್ರಹಸನವಾಗಿದೆ. ಹಾಗೆ ಪ್ರಶಸ್ತಿಗಳನ್ನು ಹಿಂದಿರುಗಿಸುವವರು ಕಾಟಾಚಾರಕ್ಕೆ ಕೇವಲ ಪ್ರಶಸ್ತಿ ಪ್ರಮಾಣ ಪತ್ರ ಇಲ್ಲವೇ ಪದಕಗಳನ್ನು ಹಿಂದಿರುಗಿಸಿದ್ದಾರೆಯೇ ಹೊರತು ಯಾರೂ ಸಹಾ ಆ ಪ್ರಶಸ್ತಿಯೊಂದಿಗೆ ಸರ್ಕಾರ ನೀಡಿದ್ದ ಹಣವನ್ನು ಹಿಂದುರಿಗಿಸದೇ ಆವರ ಹಾರಾಟ, ಚೀರಾಟಗಳೆಲ್ಲವೂ ಹಾಸ್ಯಾಸ್ಪದ ಎನಿಸಿಕೊಂಡಿವೆ. ಆದರೆ, ಇದಕ್ಕೆ ಅಪರೂಪದ ಅಪವಾದ ಎನ್ನುವಂತೆ, ವಿಶ್ವದ ಅತಿದೊಡ್ಡ ಪ್ರಕಾಶಕನ ಸಂಸ್ಥೆಗಳಲ್ಲಿ ಒಂದಾದ ಉತ್ತರ ಪ್ರದೇಶದ ಗೋರಖ್ಪುರದ ಗೀತಾ ಪ್ರೆಸ್ ಪ್ರಕಾಶನ ಸಂಸ್ಥೆಗೆ ಕೇಂದ್ರ ಸರ್ಕಾರವು 2021ರ ಗಾಂಧಿ ಶಾಂತಿ ಪ್ರಶಸ್ತಿಯ ಜೊತೆಗೆ 1 ಕೋಟಿ ಬಹುಮಾನದಲ್ಲಿ ಕೇವಲ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸಲು ಒಪ್ಪಿಕೊಂಡು ಹಣವನ್ನು ಸ್ವೀಕರಿಸಲು ನಿರಾಕರಿಸುವ ಮೂಲಕ ಎಲ್ಲರ ಹುಬ್ಬನ್ನು ಏರಿಸುವಂತೆ ಮಾಡಿದೆ ಎಂದರೂ ಅತಿಶಯವಲ್ಲ.
ಅಹಿಂಸಾತ್ಮಕ ಮತ್ತು ಇತರ ಗಾಂಧಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪತ್ರಿಕೆಗಳಿಗೆ ನೀಡಲಾಗುತ್ತಿದೆ. ಭಾನುವಾರ 18.06.2023 ರಂದು ನಮ್ಮ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ತೀರ್ಪುಗಾರರ ಸಮಿತಿಯು ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವ ಗೋರಖ್ಪುರದ ಗೀತಾ ಪ್ರೆಸ್ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಗಾಂಧಿ ಶಾಂತಿ ಪ್ರಶಸ್ತಿಯು ಮಹಾತ್ಮ ಗಾಂಧಿಯವರ 125 ನೇ ಜನ್ಮದಿನದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಆದರ್ಶಗಳಿಗೆ ಗೌರವವಾಗಿ 1995 ರಲ್ಲಿ ಸರ್ಕಾರವು ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿದ್ದು, ಈ ಪ್ರಶಸ್ತಿಯು ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿದೆ. ಪ್ರಶಸ್ತಿಯು 1 ಕೋಟಿ ರೂ., ಪ್ರಶಸ್ತಿ ಪತ್ರ, ಫಲಕ ಮತ್ತು ಸೊಗಸಾದ ಸಾಂಪ್ರದಾಯಿಕ ಕರಕುಶಲ/ಕೈಮಗ್ಗದ ವಸ್ತುವನ್ನು ಒಳಗೊಂಡಿರುತ್ತದೆ. 2019ರಲ್ಲಿ ಈ ಪ್ರಶಸ್ತಿಯನ್ನು ಒಮಾನ್ ದೇಶದ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಅವರಿಗೆ ನೀಡಲಾಗಿದ್ದರೆ, 2020ರಲ್ಲಿ ಬಾಂಗ್ಲಾದೇಶದ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ನೀಡಲಾಗಿತ್ತು.
ಗೀತಾ ಪ್ರೆಸ್ ಸಂಸ್ಥೆಯು ಪ್ರಶಸ್ತಿಗೆ ಭಾಜನರಾಗಿದ್ದಕ್ಕಾಗಿ, ಪ್ರಧಾನಿ ಮೋದಿಯವರು ಗೋರಖ್ಪುರದ ಗೀತಾ ಪ್ರೆಸ್ ಕಳೆದ 100 ವರ್ಷಗಳಲ್ಲಿ ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗಳನ್ನು ಹೆಚ್ಚಿಸಲು ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ತಮ್ಮ ಟ್ವೀಟ್ ಮೂಲಕ ಅಭಿನಂದಿಸಿದ್ದರು.
ಈ ವಿಷಯವನ್ನು ತಿಳಿಯುತ್ತಿದ್ದಂತೆಯೇ, ಎಂದಿನಂತೆ ಕಾಂಗ್ರೇಸ್ ಪಕ್ಷವು ಗೀತಾ ಪ್ರೆಸ್ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿರುವುದನ್ನು ಖಂಡಿಸಿ, ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಈ ವರ್ಷ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಗೋರಖ್ಪುರದ ಗೀತಾ ಪ್ರೆಸ್ಗೆ 2021ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಿರುವುದು ಒಂದು ಅಪಹಾಸ್ಯವಾಗಿದ್ದು ಇದು ಸಾವರ್ಕರ್ ಹಾಗೂ ಗೋಡ್ಸೆಗೆ ಪ್ರಶಸ್ತಿ ನೀಡಿದಂತೆ ಆಗಿದೆ ಎಂದು ತಮ್ಮ ಆಕ್ರೋಶವನ್ನು ಟ್ವೀಟ್ ಮುಖಾಂತರ ಹೊರಕಾಕಿದ್ದಾರೆ. ಕಾಂಗ್ರೇಸ್ಸಿನ ಆಕ್ರೋಶಕ್ಕೆ ಮೂಲವೇನು ಎಂಬುದನ್ನು ಹುಡುಕಿದಾಗ, ಅಕ್ಷಯ ಮುಕುಲ್ ಎಂಬ ಲೇಖಕರು 2015ರಲ್ಲಿ ಗೀತಾ ಪ್ರೆಸ್ ಮತ್ತು ಮೇಕಿಂಗ್ ಆಫ್ ಹಿಂದೂ ಇಂಡಿಯಾ ಎಂಬ ಪುಸ್ತಕದಲ್ಲಿ ಮಹಾತ್ಮ ಗಾಂಧಿ ಮತ್ತು ಗೀತಾ ಪ್ರೆಸ್ ನೊಂದಿಗೆ ಇದ್ದ ವಿರೋಧಾಭಾಸದ ಕುರಿತಾಗಿ ವಿವರಿಸಿದ್ದಾಗಿ, ಕಾಂಗ್ರೇಸ್ ಈಗ ಸೇಡನ್ನು ತೀರಿಸಿಕೊಳ್ಳುವ ಮೂಲಕ ತನ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಜಗಜ್ಜಾಹೀರಾತು ಗೊಳಿಸಿರುವುದು ವಿಪರ್ಯಾಸವಾಗಿದೆ.
ಸ್ವಾತ್ರಂತ್ರ್ಯ ಹೋರಾಟದದ ಸಮಯದಲ್ಲಿ ಮಹಾತ್ಮಾ ಗಾಂಧಿಯವರು ಮುಂದಾಳತ್ವವನ್ನು ವಹಿಸಿದ್ದರ ಕುರಿತಾಗಿ ಇಡೀ ದೇಶವಾಸಿಗಳಿಗೆ ಗಾಂಧಿಯವರ ಬಗ್ಗೆ ಅಭಿಮಾನವಿದ್ದರೂ, ಅನೇಕ ಸಂಧರ್ಭಗಳಲ್ಲಿ ಹಿಂದೂ ವಿರೋಧಿಯಾಗಿ ಮತ್ತೊಂದು ಧರ್ಮದ ಪರವಾಗಿ ನಿಂತದ್ದಕ್ಕಾಗಿ ವಿರೋಧವಿದೆ. ಅಭಿವ್ಯಕ್ತಿ ಸ್ವಾತ್ರಂತ್ಯ್ರದ ಅಡಿಯಲ್ಲಿ ಆ ಸತ್ಯವನ್ನು ಹೇಳಿದ್ದಕ್ಕೆ ಈ ಪರಿಯಾಗಿ ಕಾಂಗ್ರೇಸ್ ಪಕ್ಷ ವಿರೋಧ ವ್ಯಕ್ತಪಡಿಸುವುದು ಹಿಟ್ಲರ್ ಸಂಸ್ಕೃತಿಯನ್ನು ತೋರಿಸುತ್ತದೆ
ಈ ಎಲ್ಲಾ ವಾದ ವಿವಾದಗಳ ನಡುವೆ ಗೀತಾ ಪ್ರಸ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದು, ತಮ್ಮ ಸಂಸ್ಥೆಗೆ ನೀವು ನೀಡಿರುವ ಪ್ರಶಸ್ತಿ ಪುರಸ್ಕಾರ ಅತ್ಯಂತ ಗೌರವದ ಸಂಗತಿಯಾಗಿದೆ ಎಂದು ಹೇಳಿದೆ. ಆದರೆ, ಆ ಪ್ರಶಸ್ತಿಯೊಂದಿಗೆ ನೀಡಲಾಗುವ 1 ಕೋಟಿ ರೂಪಾಯಿ ನಗದು ಬಹುಮಾನ ಸ್ವೀಕರಿಸಲಾಗುವುದಿಲ್ಲ ಎಂದು ತಿಳಿದೆ. ತಮ್ಮ ಸಂಸ್ಥೆಯಯಲ್ಲಿ ಯಾವುದೇ ರೀತಿಯ ದೇಣಿಗೆಯನ್ನು ಸ್ವೀಕರಿಸಬಾರದು ಎಂಬುದು ತಮ್ಮ ತತ್ವವಾಗಿದ್ದು, ಪ್ರಶಸ್ತಿಯನ್ನು ಯಾವುದೇ ವಿತ್ತೀಯ ರೂಪದಲ್ಲಿ ತೆಗೆದುಕೊಳ್ಳದಿರಲು ಟ್ರಸ್ಟಿ ಬೋರ್ಡ್ ನಿರ್ಧರಿಸಿದೆ ಎಂದು ಗೀತಾ ಪ್ರೆಸ್ ಸೋಮವಾರ ತಿಳಿಸಿದೆ ಹಾಗಾಗಿ ನಿಗಧಿತ ದಿನದಂದು ಎಲ್ಲರ ಸಮ್ಮುಖದಲ್ಲಿ ಕೇವಲ ಪ್ರಶಸ್ತಿ ಮತ್ತು ಫಲಕವನ್ನು ಮಾತ್ರವೇ ಸ್ವೀಕರಿಸುತ್ತೇವೆ ಎಂದು ಗೀತಾ ಪ್ರೆಸ್ ಮ್ಯಾನೇಜರ್ ಲಾಲಮಣಿ ತ್ರಿಪಾಠಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗೀತಾಪ್ರೆಸ್ ನವರ ಈ ರೀತಿಯ ನಿರ್ಧಾರ ನಮ್ಮ ನಾಡು ಕಂಡ ಶ್ರೇಷ್ಠ ಬರಹಗಾರ, ಇತಿಹಾಸ ತಜ್ಞ ಮತ್ತು ವಾಗ್ಮಿಗಳಾದ ಶ್ರೀ ಎಸ್ ಎಲ್ ಭೈರಪ್ಪ ಅವರಂತಿದೆ. ಭೈರಪ್ಪನವರೂ ಸಹಾ ತಮಗೆ ಕೊಡಲಾಗುವ ಸರ್ಕಾರಿ ಪ್ರಶಸ್ತಿಗಳ ಫಲಕ ಮತ್ತು ಪ್ರಮಾಣಪತ್ರವನ್ನು ಮಾತ್ರವೇ ಸ್ವೀಕರಿಸಿ ಅದರೊಂದಿಗೆ ಕೊಡುವ ಹಣವನ್ನು ನಯವಾಗಿ ನಿರಾಕರಿಸುತ್ತಾರೆ. ಆಯೋಜಕರು ಬಹಳ ಒತ್ತಾಯ ಮಾಡಿದಲ್ಲಿ ಅವರಿಗೆ ಬೇಸರವಾಗದಿರಲೆಂದು ಸ್ವೀಕರಿಸಿ, ಅದೇ ವೇದಿಕೆಯ ಮೇಲಿಂದಲೇ ತಮಗೆ ಬಂದ ಪ್ರಶಸ್ತಿಯ ಹಣವನ್ನು ಮತ್ತೊಬ್ಬರಿಗೆ ದಾನವಾಗಲೀ ಇಲ್ಲವೇ ಪುದುವಟ್ಟುವಾಗಿ ಇಡುವ ಸಂಪ್ರದಾಯವನ್ನು ರೂಡಿಸಿಕೊಂಡಿದ್ದಾರೆ. ಸರ್ಕಾರಿ ಸೇವೆಯಿಂದ ನಿವೃತ್ತರಾಗಿರುವ ಕಾರಣ ಅವರಿಗೆ ವಿಶ್ರಾಂತಿ ವೇತನ ಬರುತ್ತದೆ. ಅದಲ್ಲದೇ ಅವರ ಪುಸ್ತಕಗಳ ರಾಯಲ್ಟಿಯಿಂದಲೂ ಸಾಕಷ್ಟು ಹಣ ಬರುವ ಕಾರಣ, ತಮಗೆ ಕೊಡಲಾಗುವ ಪ್ರಶಸ್ತಿಯ ನಗದನ್ನು ಸ್ವೀಕರಿಸದೇ ಇರುವ ಪದ್ದತಿಯನ್ನು ರೂಢಿಮಾಡಿಕೊಂಡಿರುವ ಭೈರಪ್ಪನವರು ಇತರರಿಗೆ ಮಾದರಿಯಾಗಿದ್ದಾರೆ ಎಂದರು ತಪ್ಪಾಗದು
ಸನಾತನ ಧರ್ಮದ ತತ್ವಗಳನ್ನು ಸರಳ ಮತ್ತು ಸುಲಭವಾಗಿ ಪ್ರಚಾರ ಮಾಡುವ ಸಲುವಾಗಿ ಶ್ರೀ ಜಯ ದಯಾಳ್ ಗೋಯಂಕಾ ಮತ್ತು ಘನಶ್ಯಾಮ್ ದಾಸ್ ಜಲನ್ ಅವರು 1923 ರಲ್ಲಿ ಸ್ಥಾಪಿಸಿದ ಈ ಪ್ರಕಾಶನ ಸಂಸ್ಥೆ ಕನ್ನಡವೂ ಸೇರಿದಂತೆ ಸುಮಾರು 15 ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುವ ಮೂಲಕ, ಗೀತಾ ಪ್ರೆಸ್ ಹಿಂದೂ ಧಾರ್ಮಿಕ ಗ್ರಂಥಗಳ ವಿಶ್ವದ ಅತಿದೊಡ್ಡ ಪ್ರಕಾಶಕ ಸಂಸ್ಥೆ ಎಂದು ಜಗದ್ವಿಖ್ಯಾತವಾಗಿದ್ದು ಇದರ ಎಲ್ಲಾ ಕಾರ್ಯಗಳು ಗೋರಖ್ಪುರದಲ್ಲಿನ ಕೇಂದ್ರ ಕಛೇರಿಯಿಂದಲೇ ನಡೆಯುತ್ತಿವೆ.
2022-23ರ ಆರ್ಥಿಕ ವರ್ಷದಲ್ಲಿ, ಎಂದಿನಂತೆ ಗ್ರಾಹಕರಿಗೆ ಕೈಗೆಟುಕವ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಮುದ್ರಣದ ಸುಮಾರು 2.40 ಕೋಟಿ ಪುಸ್ತಕಗಳನ್ನು ಮುದ್ರಿಸಿ ಮಾರಾಟ ಮೂಲಕ 111 ಕೋಟಿಗಳ ವ್ಯವಹಾರ ಮಾಡಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಇವರ ಪುಸ್ತಕಗಳ ಬೇಡಿಕೆ ಅಂತ್ಯತ ಹೆಚ್ಚಾಗಿದ್ದು, ಅಲ್ಲಿನ ಕಾರ್ಮಿಕರ ಸರ್ವ ಪ್ರಯತ್ನಗಳ ಹೊರತಾಗಿಯೂ, ಬೇಡಿಕೆಗೆ ತಕ್ಕಂತೆ ಪುಸ್ತಕಗಳನ್ನು ಸರಬರಾಜು ಮಾಡಲು ಸಾಧ್ಯವಾಗದೇ ಇರುವುದುದಕ್ಕಾಗಿ ಶ್ರೀ ತಿಪಾಠಿಯವರು ಬೇಸರವನ್ನು ವ್ಯಕ್ತಪಡಿಸುತ್ತಾರೆ.
1923 ರಲ್ಲಿ ಸ್ಥಾಪನೆಯಾದ ಗೀತಾ ಪ್ರೆಸ್ ವಿಶ್ವದ ಅತಿದೊಡ್ಡ ಪ್ರಕಾಶಕರಲ್ಲಿ ಒಂದಾಗಿದ್ದು, 16.21 ಕೋಟಿ ಶ್ರೀಮದ್ ಭಗವದ್ಗೀತೆ ಸೇರಿದಂತೆ 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದೆ. ಇನ್ನೂ ಅಚ್ಚರಿಯ ವಿಷಯವೆಂದರೆ ಸಂಸ್ಥೆಯ ತನ್ನ ಆದಾಯಕ್ಕಾಗಿ ಯಾವುದೇ ರೀತಿಯ ಜಾಹೀರಾತನ್ನು ಬಳಸದೇ, ತನ್ನ ಅಂಗಸಂಸ್ಥೆಗಳೊಂದಿಗೆ, ಹಿಂದೂ ಧರ್ಮದ ಉನ್ನತಿಗಾಗಿ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಶ್ರಮಿಸುತ್ತಿರುವುದು ಗೀತಾ ಪ್ರೆಸ್ಸಿನ ಹೆಗ್ಗಳಿಕೆಯಾಗಿದೆ.
ಅನೇಕ ವರ್ಷಗಳಿಂದಲೂ ಗೀತಾ ಪ್ರೆಸ್ ಸಂಸ್ಥೆಯ ನೌಕರರ ಮುಷ್ಕರದಿಂದಾಗಿ ಅತ್ಯಂತ ಪುರಾತನವಾದ ಗೀತಾಪ್ರೆಸ್ ಮುಚ್ಚಿಹೋಗುತ್ತಿದೆ. ಹಾಗಾಗಿ ಅದಕ್ಕೆ ತಮ್ಮ ಕೈಲಾದ ಮಟ್ಟಿಗಿನ ಆರ್ಥಿಕ ಸಹಾಯ ಮಾಡಿ ಪುನರುಜ್ಜೀವನಗೊಳಿಸಿ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಬಹುತೇಕರು ಗಮನಿಸಿ, ಮಾನವೀಯತೆ ಮತ್ತು ಹಿಂದೂ ಧರ್ಮದ ನಂಬಿಕೆಯ ದೃಷ್ಟಿಯಿಂದ ಮತ್ತಷ್ಟು ಜನರಿಗೆ ಆ ಸಂದೇಶವನ್ನು ರವಾನೆ ಮಾಡಿರಲೂ ಬಹುದು. ನಿಜ ಹೇಳಬೇಕೆಂದರೆ, ಆ ರೀತಿಯ ಯಾವುದೇ ಅಹಿತಕರ ಘಟನೆಗಳು ಗೀತಾ ಪ್ರೆಸ್ಸಿನಲ್ಲಿ ನಡೆದಿಲ್ಲ. ಅಲ್ಲಿ ಕೆಲಸ ಮಾಡುವ ಬಹುತೇಕರು ಕೇವಲ ಸಂಬಳಕ್ಕಾಗಿ ದುಡಿಯದೇ, ಹಿಂದೂ ಧರ್ಮದ ಮೇಲಿನ ಶ್ರದ್ಧೆಯಿಂದ ದುಡಿಯುತ್ತಿರುವ ಕಾರಣ ಅಂತಹ ಘಟನೆಗಳು ಸಂಭವಿಸುವುದಿಲ್ಲ ಎನ್ನುವುದೇ ಸಕಲ ಆಸ್ತಿಕರ ನಂಬಿಕೆಯಾಗಿದೆ. ಹಾಗಾಗಿ ನಿಜವಾಗಿಯೂ ಗೀತಾ ಪ್ರೆಸ್ ಮೇಲೆ ಮಮಕಾರ ಇದ್ದಲ್ಲಿ ಅವರ ಪ್ರಕಟಣೆಯ ಪುಸ್ತಕಗಳನ್ನು ನಮ್ಮ ಮನೆಗಳ ಶುಭ ಸಮಾರಂಭದಲ್ಲಿ ಹಂಚುವ ಮೂಲಕ ಪರೋಕ್ಷವಾಗಿ ಗೀತಾ ಪ್ರೆಸ್ಸಿಗೆ ಸಹಾಯ ಮಾಡಬಹುದರ ಜೊತೆಗೆ ಧರ್ಮಕಾರ್ಯವನ್ನೂ ಮಾಡಿದಂತಾಗುತ್ತದೆ.
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ಒಂದು ಸಾರ್ಥಕ ಕಾರ್ಯಕ್ಕೆ ಪೀಠಿಕೆ ಹಾಕಿದ್ದೀರಿ. ಧನ್ಯವಾದಗಳು. ಅಂದಹಾಗೆ ಈ ಸಂಸ್ಥೆಗೂ ಬಳೆಪೇಟೆಯ ಗೀತಾ ಬುಕ್ ಹೌಸ್ ಗೂ ಸಂಬಂಧ ವಿದೆಯೇ?
LikeLiked by 1 person
ಆ ಎರಡೂ ಸಂಸ್ಥೆಗಳ ಹೆಸರು ಒಂದೇ ಇದ್ದು, ಎರಡೂ ಸಂಸ್ಥೆಗಳೂ ಧಾರ್ಮಿಕ ಸಂಬಂಧ ಪಟ್ಟ ಪ್ರಕಾಶನಗಳನ್ನು ಮಾಡುತ್ತಿದ್ದರೂ, ಆ ಎರಡೂ ಸಂಸ್ಥೆಗಳಿಗೆ ಯಾವುದೇ ರೀತಿಯ ಸಂಬಂಧವಿಲ್ಲ.
LikeLike
ಅತ್ಯುತ್ತಮ ಲೇಖನಗಳ ಕರ್ತ್ವುವಿಗೆ ಧನ್ಯವಾದಗಳು
LikeLiked by 1 person