ಶ್ರೀ ಎನ್. ಪಿ. ರಾಘವೇಂದ್ರ ರಾವ್ (NPR)

ಭವಭೂತಿಯ ಉತ್ತರ ರಾಮ ಚರಿತೆ ಕೃತಿಯ ಪ್ರಸಿದ್ಧ ಶ್ಲೋಕವೊಂದರಲ್ಲಿ ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ ಎನ್ನುವ ಸಾಲಿದೆ. ವಜ್ರದಂತೆ ಕಠೊರವಾಗಿದ್ದರೂ ಅವರ ಮನಸ್ಸು ಪುಷ್ಪದಂತೆ ಮೃದುವಾಗಿದ್ದರು ಎನ್ನುವುದು ಇದರ ಅರ್ಥ. ಇಂದು ಆಶಾಢ ಮಾಸದ ಪೌರ್ಣಿಮೆ. ಈ ದಿನವನ್ನು ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆ ದಿನದಂದು ಈ ಮೇಲಿನ ಶ್ಲೋಕಕ್ಕೆ ಅನ್ವರ್ಥವಾಗುವಂತೆಯೇ ಇರುವ ಸುಮಾರು 29 ವರ್ಷಗಳ ಕಾಲ ಬಿಇಎಲ್ ಶಿಕ್ಷಣಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಈಗ ವಿಶ್ರಾಂತ ಜೀವನವನ್ನು ನಡೆಸುತ್ತಿರುವ ಶ್ರೀ ಎನ್. ಪಿ. ರಾಘವೇಂದ್ರ ರಾವ್ (NPR) ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಪರಿಚಯ ಮಾಡಿಕೊಳ್ಳೋಣ ಬನ್ನಿ.

1970-90ರ ದಶಕದ ವರೆಗೆ ಬಿಇಎಲ್ ಶಿಕ್ಷಣ ಸಂಸ್ಥೆಯಲ್ಲಿ ಓದಿರುವ ವಿದ್ಯಾರ್ಥಿಗಳ ಬಳಿ ಹೋಗಿ ನಿಮಗೆ NPR ಗೊತ್ತೇ? ಎಂದು ಕೇಳಿದ ತಕ್ಷಣ, ಹೌಹಾರಿ ಬಿಡುತ್ತಾರೆ. ಅದಕ್ಕೆ ಮುಖ್ಯ ಕಾರಣ ಅವರು ಪಾಠ ಹೇಳಿಕೊಡುತ್ತಿದ್ದದ್ದು ಬಹುತೇಕ ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎನ್ನುವಂತಹ ಗಣಿತದ ವಿಷಯವಾದರೆ, ಮತ್ತೊಂದು ದೂರ್ವಾಸ ಮುನಿಯಂತಹ ಅವರ ಸಿಟ್ಟು. ತರಗತಿಗೆ ಅವರು ಬರುತ್ತಿದ್ದದ್ದೇ ರೂಲ್ ದೊಣ್ಣೆ ಹಿಡಿದುಕೊಂಡೇ. ನೋಡಲು ಅತ್ಯಂತ ಸರಳ ಅಷ್ಟೇ ಸುಂದರವಾಗಿದ್ದ, ಸದಾಕಾಲವೂ ಇನ್ ಶರ್ಟ್ ಮಾಡಿರುತ್ತಿದ್ದ, ಮುಖಕ್ಕಿಂತಲೂ ದೊಡ್ಡಾದಾದ ಕನ್ನಡಕವನ್ನು ಧರಿಸುತ್ತಿದ್ದ ಶ್ರೀ ರಾಘವೇಂದ್ರ ರಾಯರು, ತಾವಾಯಿತು ತಮ್ಮ ಕೆಲಸವಾಯಿತು. ಪ್ರತೀ ದಿನವೂ ಹಿಂದಿನ ದಿನ ಮಾಡಿರುತ್ತಿದ್ದ ಲೆಕ್ಕಗಳನ್ನು ಮನೆಯಲ್ಲಿ ಮತ್ತೊಮ್ಮೆ ಮಾಡಿ ತರಬೇಕಿತ್ತು. ಅದನ್ನು ಗಮನಿಸಲು ಪ್ರತೀ ಬೆಂಚಿಗೊಬ್ಬ ಲೀಡರ್, ನೇಮಿಸಿ ಅವರ ಮೂಲಕ ಎಲ್ಲವನ್ನೂ ಗಮನಿಸುತ್ತಾ, ಮನೆಗೆಲಸ (ಹೋಮ್ ವರ್ಕ್) ಮಾಡಿಕೊಂಡು ಬರದೇ ಇರುವವರಿಗೆ ಅದೇ ರೂಲ್ ದೊಣ್ಣೆಯಿಂದಲೇ ಬಿಸಿ ಬಿಸಿ ಕಜ್ಜಾಯ ಬೀಳುತ್ತಿದ್ದ ಕಾರಣ, ತರಗತಿಯಲ್ಲಿ ಉಳಿದೆಲ್ಲಾ ವಿಷಯಗಳ ಮನೆಕೆಲಸ ಮಾಡುತ್ತಾರೋ ಇಲ್ಲವೋ ಗಣಿತದ ಮನೆಗೆಲಸವನ್ನು ಮಾತ್ರಾ ತಪ್ಪಿಸುತ್ತಿಸಿರಲಿಲ್ಲ.

ನಿಜ ಹೇಳಬೇಕೆಂದರೆ ಕೇವಲ ತರಗತಿಯಲ್ಲಿ ಮಾತ್ರವೇ ಹಾಗೆ ದೂರ್ವಾಸ ಮುನಿಗಳ ರೀತಿಯಲ್ಲಿ ಇರುವವರು ತರಗತಿಯ ಹೊರಗೆ ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರಾದರೂ, ಅವರ ಮೇಲಿನ ಭಯದಿಂದ ಯಾರೂ ಸಹಾ ಮಾತನಾಡಿಸುತ್ತಿರಲಿಲ್ಲ. ನಮ್ಮ ರಾಘವೇಂದ್ರ ರಾಯರ ಮತ್ತೊಂದು ಒಳ್ಳೆಯ ಗುಣವೆಂದರೆ ಅವರು ತಮಗಿಂತ ಹಿರಿಯರು ಮತ್ತು ಕಿರಿಯರು ಯಾರೇ ಇರಲೀ, ಅಂದಿನಿಂದ ಇಂದಿನವರೆಗೂ ಏಕವಚನದಲ್ಲಿ ಸಂಭೋಧಿಸಿರುವುದನ್ನು ಕೇಳೇ ಇಲ್ಲಾ. ತಮಗಿಂತಲೂ ಹಿರಿಯವರಿಗೆ ಸಾಹೇಬ್ರೇ ಎಂದೇ ಕರೆಯುತ್ತಿದ್ದರೆ, ಚಿಕ್ಕವರಿಗೂ ಸಾರ್ ಎಂದೇ ಕರೆಯುತ್ತಿದ್ದದ್ದು ನಿಜಕ್ಕೂ ಅನನ್ಯ ಮತ್ತು ಅನುಕರಣೀಯ.

ತರಗತಿಯಲ್ಲಿ ಎಷ್ಟೇ ಕೋಪಿಷ್ಟ ಎನಿಸಿಕೊಂಡರೂ, ವಿದ್ಯಾರ್ಥಿಗಳಲ್ಲಿದ್ದ ಪ್ರತಿಭೆಯನ್ನು ಕಂಡು ಹಿಡಿದು ಅವರನ್ನು ಪ್ರೋತ್ಸಾಹಿಸುತ್ತಿದ್ದ ಅವರ ಗುಣ ಮೆಚ್ಚುವಂತಿದ್ದು. ಅವರು ಕೊಟ್ಟ ಲೆಖ್ಖವನ್ನು ಯಾರು ಶೀಘ್ರವಾಗಿ ಬಿಡಿಸಿ ಸರ್, ನಂದು ಆಯ್ತು ಎಂದ ಕೂಡಲೇ ಅದನ್ನು ನೋಡಿ ಅದು ಸರಿ ಇದ್ದಲ್ಲಿ ಅದೇ ಲೆಖ್ಖವನ್ನು ಬೋರ್ಡಿನ ಮೇಲೆ ಬಿಡಿಸಲು ಹೇಳುವ ಮೂಲಕ ಎಲ್ಲರಿಗೂ ಅವಕಾಶವನ್ನು ಕೊಡುತ್ತಿದ್ದರು. ಅವರು ಉಲ್ಲಾಸಕರವಾದ ಮನಸ್ಥಿತಿಯಲ್ಲಿ ಇದ್ದಂತಹ ದಿನ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಫಟಿಂಗ, ಬುದ್ದಿವಂತ, ಪಂಡಿತ ಹೀಗೆ ಅವರವರ ಗುಣಕ್ಕೆ ಅನುಗುಣವಾಗಿ ಅನ್ವರ್ಥನಾಮ ಇಡುವ ಮೂಲಕ ತರಗತಿಯ ಮಧ್ಯೆ ರಂಜಿಸುತ್ತಾ ಪಾಠ ಮಾಡುತ್ತಿದ್ದರು.

ಇವೆಲ್ಲದಕ್ಕಿಂತಲೂ ಅವರ ದೊಡ್ಡ ಗುಣವೆಂದರೆ, ನಮ್ಮ ಶಾಲೆಯಲ್ಲಿ ಕನ್ನಡ ಮತ್ತು ಅಂಗ್ಲ ಮಾಧ್ಯಮ ಒಟ್ಟಿಗೇ ಇದ್ದು, ಕನ್ನಡ ಮಾಧ್ಯಮದ ಮಕ್ಕಳು ಆಂಗ್ಲ ಮಾಧ್ಯಮ ಮಕ್ಕಳಿಗೆ ಹೋಲಿಸಿದರೆ ಚುರುಕಿನಲ್ಲಿ ಸ್ವಲ್ಪ ಕಡಿಮೆ ಇರುತ್ತಿದ್ದ ಕಾರಣ, ಬಹುತೇಕ ಅಧ್ಯಾಪಕರು ಕನ್ನಡ ಮಾಧ್ಯಮಗಳಿಗೆ ಪಾಠ ಹೇಳಿಕೊಡಲು ಹಿಂಜರಿಕೆ ತೋರುತ್ತಿದ್ದರೆ, ನಮ್ಮ ರಾಯರು ಪ್ರತೀ ವರ್ಷವೂ ಬಯಸೀ ಬಯಸೀ ಕನ್ನಡ ಮಾಧ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. 85-90 ಅಂಕಗಳನ್ನು ತೆಗೆದುಕೊಳ್ಳುವವರಿಗೆ 100 ಅಂಕಗಳನ್ನು ಗಳಿಸುವಂತಹ ಪಾಠ ಮಾಡುವುದು ಹೆಗ್ಗಳಿಕೆಯಲ್ಲ. ಗಣಿತದಲ್ಲಿ ಅನುತ್ತೀರ್ಣರಾಗುವಂತಹ ಹುಡುಗರಿಗೆ ಕನಿಷ್ಟ ಪಕ್ಷ 35+ ಅಂಕಗಳನ್ನು ಗಳಿಸುವಷ್ಟು ಪಾಠ ಹೇಳಿಕೊಟ್ಟರೇ ಅದುವೇ ಸಾರ್ಥಕತೆ ಎನ್ನುವುದು ಅವರ ಭಾವನೆಯಾಗಿತ್ತು.

ಹೀಗೆ 80ರ ದಶಕದ ವರೆಗೂ ಪ್ರೌಢಶಾಲೆಯಲ್ಲಿ ಗಣಿತವನ್ನು ಹೇಳಿಕೊಡುತ್ತಿದ್ದ ರಾಯರು, ನಂತರ ಕಾಲೇಜಿನಲ್ಲಿ ಸಮಾಜಶಾಸ್ತ್ರವನ್ನು ಹೇಳಿಕೊಡಲು ಆರಂಭಿಸಿ, ನಂತರ ಪ್ರೌಢಶಾಲೆ ಮತ್ತು ಕಾಲೇಜಿಗೆ ಪ್ರಾಂಶುಪಾಲರಾಗಿ ನಿವೃತ್ತರಾಗಿ ಈಗ ಸರ್ವಜ್ಞ, ಬಸವಣ್ಣನವರ ವಚನಗಳು, ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಉಪನ್ಯಾಸದ ಜೊತೆಗೆ ವ್ಯಕ್ತಿತ್ವ ವಿಕಸನ ಕುರಿತಾದ ಕಮ್ಮಟಗಳನ್ನು ನಡೆಸುವಷ್ಟರ ಮಟ್ಟಿಗೆ ಬೆಳೆದಿರುವ ಹಿಂದಿನ ಕಥೆ ನಿಜಕ್ಕೂ ಅದ್ಭುತವಾಗಿದ್ದು ಅದು ಇಂದಿನ ಯುವ ಜನತೆಗೆ ಪ್ರೇರಣೆಯಾಗುವಂತಿದೆ.

WhatsApp Image 2023-07-02 at 18.34.42

ನಮ್ಮ ರಾಘವೇಂದ್ರರಾಯರು ಮೂಲತಃ ದೇವನಹಳ್ಳಿ ಕಡೆಯವರು. ಸರ್ಕಾರಿ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿದ್ದ ಸಂಪ್ರದಾಯಸ್ಥರಾಗಿದ್ದ ಶ್ರೀ ಎನ್ ಪ್ರಾಣೇಶ್ ರಾವ್ ಮತ್ತು ಶ್ರೀಮತಿ ಸರೋಜಮ್ಮನವರ ಮಗನಾಗಿ 20.05.1940ರಲ್ಲಿ ನಮ್ಮ ರಾಘವೇಂದ್ರರ ಜನನವಾಗುತ್ತದೆ. ಅವರ ತಾತನವರಾಗಿದ್ದ ಶ್ರೀ ಶ್ರೀನಿವಾಸರಾಯರು ಸಹಾ ಅಂದಿನ ಕಾಲದಲ್ಲಿ ಬಹಳ ಪ್ರಸಿದ್ಧರಾಗಿರುತ್ತಾರೆ. ಸರ್ಕಾರಿ ಕೆಲಸದಲ್ಲಿ ಇದ್ದ ಕಾರಣ, ವಿವಿದೆಡೆಯಲ್ಲಿ ವರ್ಗಾವಣೆ ಆಗುತ್ತಿದ್ದ ಕಡೆಯಲೆಲ್ಲಾ ಕುಟುಂಬವನ್ನು ಕರೆದುಕೊಂಡು ಹೋಗುತ್ತಿದ್ದ ಕಾರಣ ರಾಯರ ಬಾಲ್ಯದ ಮತ್ತು ಪೌಢ ಶಿಕ್ಷಣ ದೇವನಹಳ್ಳಿ ಆದಿಯಾಗಿ ಹತ್ತು ಹಲವಾರು ಕಡೆಯಲ್ಲಿ ನಡೆದರೆ, ಮಂಡ್ಯದಿಂದ 5-6 ಕಿಮೀ ದೂರದಲ್ಲಿದ್ದ ಕೊತ್ತೆತ್ತಿ ಎಂಬ ಊರಿಗೆ ಅವರ ತಂದೆಯವರಿಗೆ ವರ್ಗವಾದಾಗ ಪ್ರತೀ ದಿನ ಲಡಕಾಸಿ ಸೈಕಲ್ಲಿನಲ್ಲಿ ಮಂಡ್ಯಕ್ಕೆ ಬಂದು ತಮ್ಮ ಇಂಟರ್ಮೀಡಿಯಟ್ ಮುಗಿಸಿ ನಂತರ ತಮ್ಮ ಬಿ.ಎಸ್.ಸಿ ಯನ್ನು ಬೆಂಗಳೂರಿನಲ್ಲಿ ಮುಗಿಸುವಷ್ಟರಲ್ಲಿ ಇನ್ನೇನು ನಿವೃತ್ತಿಯ ಅಂಚಿನಲ್ಲಿದ್ದ ಅವರ ತಂದೆಯವರಿಗೆ ಆನೇಕಲ್ ತಾಲ್ಲೂಕ್ಕಿನ ದೊಮ್ಮಸಂದ್ರಕ್ಕೆ ವರ್ಗಾವಣೆ ಆಗುತ್ತದೆ.

ರಾಯರ ಬಿ.ಎಸ್.ಸಿ ಮುಗಿಯುತ್ತಿದ್ದಂತೆಯೇ ಅವರ ತಂದೆಯವರು ಅಲ್ಲೇ ಅತ್ತಿಬೆಲೆಯ ಖಾಸಗೀ ಶಾಲೆಯೊಂದರಲ್ಲಿ ಮೇಷ್ಟ್ರು ಕೆಲಸ ಖಾಲಿ ಇದೇ ಅಲ್ಲಿಗೆ ಹೊಗಿ ಸೇರಿಕೋ ಎಂದು ಹೇಳಿದಾಗ, ಆರಂಭದಲ್ಲಿ ಶಿಕ್ಷಕನಾಗಲು ಒಪ್ಪದ ರಾಯರು ಅದನ್ನು ತಮ್ಮ ಭಾವಾಜಿ (ತಂದೆಯವರನ್ನು ಹಾಗೆಯೇ ಸಂಬೋಧಿಸುತ್ತಿದ್ದರಂತೆ) ಅವರ ಬಳಿ ಹೇಳಿಕೊಳ್ಳುವಷ್ಟು ಧೈರ್ಯ ಬಾರದೇ, ಅಮ್ಮನ ಮೂಲಕ, ತಮಗೆ ಮೇಷ್ಟ್ರು ಕೆಲ್ಸ ಇಷ್ಟಾ ಇಲ್ಲಾ! ಎಂದು ಹೇಳಿಸಿದಾಗ, ಅವನು ಮಾಡಿರೋ ಪುಟಕೋಸಿ ಬಿ.ಎಸ್.ಸಿ. ಗೆ ಮೇಷ್ಟ್ರು ಕೆಲಸ ಅಲ್ಲದೇ, ಇನ್ನೇನು ಕರೆದು ಗೌರ್ವರ್ನರ್ ಕೆಲಸ ಕೊಡ್ತಾರ್ಯೇ? ನನಗೆ ಬರೋ 20ರೂ ಪಿಂಚಣಿ ಹಣದಲ್ಲಿ ತುಂಬಿದ ಸಂಸಾರ ನಡೆಸುವುದು ಕಷ್ಟ ಎಂಬುದರ ಅರಿವಿದೆಯೇ? ಎಂದಾಗಾ, ಪಿತೃವಾಕ್ಯ ಪರಿಪಾಲಕನಾದ ಶ್ರೀರಾಮ ಚಂದ್ರನಂತೆ, ರಾಯರು ಶಿಕ್ಷಕ ವೃತ್ತಿಯನ್ನೇ ಆರಿಸಿಕೊಳ್ಳುತ್ತಾರೆ.

WhatsApp Image 2023-07-02 at 18.34.43

ಅದೃಷ್ಟವೋ ಎನ್ನುವಂತೆ ಅತ್ತಿಬೆಲೆಯ ಖಾಸಗಿ ಶಾಲೆಯ ಅಂದಿನ ಮುಖ್ಯೋಪಾಧ್ಯಾಯರು ದೇವನಹಳ್ಳಿಯ ಕಡೆಯವರಾಗಿದ್ದು ಅವರಿಗೆ ರಾಯರ ತಾತನವರ ಪರಿಚಯ ಚನ್ನಾಗಿ ಇದ್ದ ಕಾರಣ, BScಯಲ್ಲಿ PCM ಮಾಡಿದ್ದರಿಂದ, ಮೊದಲನೇ ದಿನವೇ 8 ನೇ ತರಗತಿ ಅಂಕಗಣಿತ ಹೇಳಿ ಕೊಡಲು ಕಳುಹಿಸುವ ಮೂಲಕ ನಮ್ಮ ರಾಯರು 1961ರಲ್ಲಿ 85/- ರೂಪಾಯಿ ಸಂಬಳಕ್ಕೆ ಗಣಿತದ ಮೇಷ್ಟ್ರಾಗುತ್ತಾರೆ. ಅಲ್ಲಿ ಒಂದೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ಅಲ್ಲೇ ಹತ್ತಿರದ ಸರ್ಜಾಪುರದ ಮತ್ತೊಂದು ಶಾಲೆಯಲ್ಲಿ ತಿಂಗಳಿಗೆ 100 ರೂಪಾಯಿ ಸಂಬಳಕ್ಕೆ ಸೇರಿಕೊಂಡಾಗ ಅವರ ಕುಟುಂಬಕ್ಕೆ ಆನಂದವೋ ಆನಂದ. ನಮ್ಮ ಹುಡುಗನಿಗೆ 100/- ರೂಪಾಯಿ ಸಂಬಳ ಎಂದು ಇಡೀ ಊರಿಗೇ ಅವರ ತಂದೆಯವರು ಹೇಳಿಕೊಂಡು ಕೊಂಡಾಡಿದ್ದರಂತೆ.

ಸುಮಾರು 6 ವರ್ಷಗಳ ಕಾಲ ಆ ಶಾಲೆಯಲ್ಲಿ ಇರುವಾಗಲೇ, ಆರ್. ವಿ. ಟೀಚರ್ಸ್ ಕಾಲೇಜಿನಲ್ಲಿ ಬಿಎಡ್ ಮುಗಿಸಿದ್ದಲ್ಲದೇ, ಹೇಳಿಕೊಳ್ಳಲು ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಾಲೆಯಾದರೂ, ಅಲ್ಲಿ ಬಹುತೇಕ ತೆಲುಗು ಭಾಷೇಯದ್ದೇ ಪ್ರಾಭಲ್ಯ ಇದ್ದ ಕಾರಣ, ಆ ಮಕ್ಕಳಿಗೆ ಸುಲಭವಾಗಿ ಅರ್ಥ ಆಗಲೆಂದು ಆರಂಭದಲ್ಲಿ ಹರುಕು ಮುರುಕು ತೆಲುಗಿನಲ್ಲಿ ಪಾಠ ಮಾಡಲು ಆರಂಭಿಸಿದ ರಾಯರು ನಂತರದ ದಿನಗಳಲ್ಲಿ ತಕ್ಕ ಮಟ್ಟಿಗೆ ತೆಲುಗು ಕಲಿತಿದ್ದರು ಎನ್ನುವುದಕ್ಕೆ ಅವರು ಸದಾ ಕಾಲವೂ ಬುದ್ದುಂಟೇ ಬೂ ತಿಂತಾಡು, ಲೇಕಂಪೋತೇ ಪೀ ತಿಂತಾಡು. ಚನ್ನಾಗಿ ಕಲಿತು ಬುದ್ದಿವಂತನಾದರೆ, ಒಳ್ಳೆಯ ಪದಾರ್ಥವನ್ನು ತಿನ್ನುತ್ತಾನೆ. ಇಲ್ಲದೇ ಹೋದರೆ, ಹೇಸಿಗೆ ತಿನ್ನಬೇಕಾಗುತ್ತದೆ ಎಂಬ ಮಾತನ್ನು ಸದಾಕಾಲವು ಹೇಳುತ್ತಿದ್ದರು.

ಆನಂತರ 2 ವರ್ಷಗಳ ಕಾಲ ಐಟಿಐ ವಿದ್ಯಾಮಂದಿದಲ್ಲಿ ಕೆಲಸ ಮಾಡಿದ ನಂತರ Employment exchange ಮೂಲಕ ದೊಡ್ಡಬಳ್ಳಾಪುರ ಮತ್ತು ರಾಮನಗರದ ಸರ್ಕಾರಿ ಶಾಲೆಯಲ್ಲಿ ಕೆಲವು ತಿಂಗಳುಗಳ ಕಾಲ ಪಾಠ ಮಾಡಿ, ಅದು ಅವರಿಗೆ ಇಷ್ಟವಾಗದೇ, ಅಂತಿಮವಾಗಿ 1969ರ ಆಗಸ್ಟ್ 3ರಂದು ಬಿಇಎಲ್ ಪೌಢ ಶಾಲೆಗೆ ಅಧ್ಯಾಪಕರಾಗಿ ಸೇರಿಕೊಳ್ಳುತ್ತಾರೆ. ಅಂದಿನ ದಿನಗಳಲ್ಲಿ ಉನ್ನತ ಸರ್ಕಾರಿ ಕೆಲಸದಲ್ಲಿರುವವರಿಗೆ ರೂ 130-230/- ಸಂಬಳ ಸಿಗುತ್ತಿದ್ದರೆ, ಬಿಇಎಲ್ ಪೌಢಶಾಲೆಯಲ್ಲಿ ರೂ 150-300/- ಸಂಬಳ ಸಿಗುತ್ತಿದ್ದ ಕಾರಣ ಕೆಲಸಕ್ಕೆ ಸೇರಿಕೊಂಡ 4 ದಿನಗಳಲ್ಲೇ ನೈಜೀರಿಯಾದಿಂದ ಸಂದರ್ಶನ ಬಂದರೂ ಅದಕ್ಕೆ ಹೋಗದೇ ಇಲ್ಲಿಯೇ ಕೆಲಸವನ್ನು ಮುಂದುವರೆಸುತ್ತಾರೆ.

ಆಗ ಬಿಇಎಲ್ ಪೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಪಿ. ಆರ್. ಕೇಶವಮೂರ್ತಿಯವರು ರಾಯರ ಚುರುಕು, ಕಾರ್ಯತತ್ಪರತೆ, ಮತ್ತು ವಿಧೇಯತೆಯನ್ನು ಗುರುತಿಸಿ ಅವರ ಸರ್ವಾಂಗೀಣ ಅಭಿವೃದ್ದಿಗೆ ಬಹಳ ಮುಖ್ಯಪಾತ್ರ ವಹಿಸುತ್ತಾರೆ. ಇನ್ನೂ ಸಣ್ಣ ವಯಸ್ಸಿನ ತರುಣ ಕೇವಲ ಶಿಕ್ಷಕನಾಗಿದ್ದ ಮಾತ್ರಕ್ಕೇ ಸಾಲದು ಆತ ದೊಡ್ಡ ದೊಡ್ಡ ಹುದ್ದೆಯನ್ನು ಏರಬೇಕು ಎಂಬ ಮಹದಾಸೆಯಿಂದ ರಾಯರಿಗೆ ಸ್ನಾತಕೋತ್ತರ ಪದವಿ ಮಾಡಲು ಸಲಹೆ ನೀಡುತ್ತಾರೆ. ಹಿರಿಯರ ಸಲಹೆಯನ್ನು ಶಿರಸಾವಹಿಸಿದ ರಾಯರು, ಎಂಎಡ್ ಮುಗಿಸಿಕೊಂಡಿದ್ದಲ್ಲದೇ, ಬೇಸಿಗೆಯ ರಜೆಯ ಸಂದರ್ಭದಲ್ಲಿ ಧಾರವಾಡ ವಿಶ್ವವಿದ್ಯಾನಿಲಯದ ಮೂಲಕ ಸಮಾಜಶಾಸ್ತ್ರ ನಂತರ ರಾಜಕೀಯ ವಿಜ್ಞಾನವಲ್ಲದೇ, ಮಾನವಶಾಸ್ತ್ರದಲ್ಲೂ ಎಂ.ಎ. ಮುಗಿಸಿ ಅರ್ಥಶಾಸ್ತ್ರದ ಎಂ.ಎ. ಪರೀಕ್ಷೆ ತೆಗೆದುಕೊಂಡು ಕಾರಣಾಂತರದಿಂದ ಅದನ್ನು ಮುಗಿಸಲಾಗದೇ ಹೋದರೂ, ನಾಲ್ಕು ಸ್ನಾತಕೋತ್ತರ ಪದವಿಧರರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಅಂದು ಪಿ.ಆರ್.ಕೇ. ಅವರು ಹೇಳಿದ ಮಾತು ನಿಜವಾಗಿ 1981 ಬಿಇಎಲ್ ಕಾಲೇಜ್ ಆರಂಭವಾದಾಗ, ಪ್ರೌಢಶಾಲೆಯಲ್ಲಿ ಗಣಿತ ಹೇಳಿಕೊಡುತ್ತಲೇ ಕಾಲೇಜಿನಲ್ಲಿ ಸಾಮಾಜಿಕ ಶಾಸ್ತ್ರವನ್ನು ಹೇಳಿಕೊಡುತ್ತಿದ್ದವರು ನಂತರ 1986 ರಲ್ಲಿ ಶಾಶ್ವತವಾಗಿ ಕಾಲೇಜು ಅಧ್ಯಾಪಕರಾಗಿ ಅಂತಿಮವಾಗಿ ಬಿಇಎಲ್ ಶಿಕ್ಷಣ ಸಂಸ್ಥೆಯಲ್ಲಿ ಸುಮರು 29 ವರ್ಷಗಳ ಕಾಲ ಸುಧೀರ್ಘವಾದ ಸೇವೆಸಲ್ಲಿಸಿ 1998ರಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗುತ್ತಾರೆ.

WhatsApp_Image_2023-07-02_at_18.34.46-removebg-preview

ಇವೆಲ್ಲದರ ಮಧ್ಯೆ 1970ರಲ್ಲಿ ತಮ್ಮ ದೂರದ ಸಂಬಂಧಿಗಳಾದ ಮೈಸೂರಿನವರಾದ ಗಣಿತದಲ್ಲಿ ಬಿ.ಎ.ಸ್ಸಿ ಮಾಡಿದ್ದ ಶ್ರೀಮತಿ ನಾಗರತ್ನ ಅವರನ್ನು ವರಿಸಿ ಅವರಿಬ್ಬರ ಸುಖೀ ದಾಂಪತ್ಯದ ಕುರುಹಾಗಿ ಉಡುಪಿಯಲ್ಲಿರುವ ಹಿರಿಯ ಮಗಳು ಬೃಂದ ಮತ್ತು ದೂರದ ಭತ್ತೀಸ್ ಘಡ್ ನ ಬಿಲಾಸ್ ಪುರದಲ್ಲಿ ದಂತ ವೈದ್ಯೆಯಾಗಿರುವ ಸೌಮ್ಯರ ಜೊತೆಗೆ ಗಂಡು ಮಕ್ಕಳಿಲ್ಲಾ ಎನ್ನುವ ಕೊರತೆಯನ್ನು ನೀಗಿಸಿರುವ ಅಳಿಯಂದಿರು ಮತ್ತು ಮುದ್ದಾದ ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.

WhatsApp_Image_2023-07-02_at_18.47.02-removebg-preview

ರಾಯರು ನಿವೃತ್ತರಾದ ನಂತರ ಅವರ ಸುದೀರ್ಘವಾದ ಅನುಭವವನ್ನು ಬಳಸಿಕೊಳ್ಳುವ ಸಲುವಾಗಿ ಅನೇಕ ಖಾಸಗೀ ಶಿಕ್ಷಣ ಸಂಸ್ಥೆಗಳು ಅವರಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ನೀಡಿದರೂ, ತಮ್ಮ ಅನುಕೂಲಕ್ಕಾಗಿ ಶಿಕ್ಷಕರಾಗಲು ಸೂಕ್ತವಾದ ವಿದ್ಯಾರ್ಹತೆ ಹೊಂದಿರದಿದ್ದರನ್ನೆಲ್ಲಾ ಸೇರಿಸಿಕೊಂಡು ಪಾಠ ಮಾಡಿಸುತ್ತಿದ್ದದ್ದನ್ನು ನೋಡಿ ಬೇಸತ್ತು ಆ ಎಲ್ಲಾ ಶಿಕ್ಷಣ ಸಂಸ್ಥೆಗಳಿಂದಲೂ ಹೊರಬಂದು ರಾಮ ಕೃಷ್ಣಾ ಗೋವಿಂದಾ! ಎಂದು ಪ್ರತೀ ನಿತ್ಯ ಬೆಳಿಗ್ಗೆ ಮತ್ತು ಸಂಜೆ ದೇವರ ಪೂಜೆ ಮಾಡಿಕೊಂಡು ಸಮಯ ಸಿಕ್ಕಾಗಲೆಲ್ಲಾ ಉಪನ್ಯಾಸಗಳನ್ನು ನೀಡುತ್ತಾ, ಕೆಲವೊಂದು ಪತ್ರಿಕೆಗಳ ವಾಚಕರವಾಣಿಯಲ್ಲಿ ನಿರಂತರವಾಗಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಾ, ತಮ್ಮ ಮಡದಿಯೊಂದಿಗೆ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ

kaggaಜೀವನದಲ್ಲಿ ಅಚಾನಕ್ಕಾಗಿ ಘಟಿಸುವ ಘಟನೆಗಳು ಜೀವನವನ್ನೇ ಹೇಗೆ ಬದಲಿಸುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಂತೆ, ಅದೊಮ್ಮೆ ಗೋಕುಲದಲ್ಲಿ ಹೋಗುತ್ತಿರುವಾಗ ನಿನ್ನ ಹೆಣವನು ನೀನು ಹೊತ್ತು ಸಾಗಿಸಬೇಕು ಎಂಬ ಪದ್ಯದ ಸಾಲಿರುವ ಚೀಟಿ ಸಿಕ್ಕು ಅದರ ಅರ್ಥವಾಗದೇ ಮಾರನೇ ದಿನ ಅಂದಿನ ಕನ್ನಡ ಅಧ್ಯಾಪಕರಾಗಿದ್ದ ಸಿ.ಎಮ್.ಕೆ ಅವರ ಬಳಿ ತೋರಿಸಿದಾಗ, ಇದು ಕನ್ನಡದ ಭಗವದ್ಗೀತೆ ಎಂದೇ ಪ್ರಖ್ಯತವಾದ ಡಿವಿಜಿ ವಿರಚಿತ ಮುಂಕು ತಿಮ್ಮನ ಕಗ್ಗದ ಪದ್ಯವಾಗಿದೆ ಎಂದಾಗ, ಅದರ ಬಗ್ಗೆ ಕುತೂಹಲ ಮೂಡಿ ಅಂದೇ ತಮ್ಮ ಮನೆ ಚಾಮರಾಜಪೇಟೆಯಲ್ಲೇ ಇರುವ ವೇದಾಂತ ಬುಕ್ ಹೌಸ್ ಗೆ ಹೋಗಿ ಮಂಕುತಿಮ್ಮನ ಕಗ್ಗದ ಪುಸ್ತಕವನ್ನು ಹಿಡಿದವರು, ಇಂದಿಗೂ ಬಿಟ್ಟಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ನಿರರ್ಗಳವಾಗಿ ಸರ್ವಜ್ಞ, ಬಸವಣ್ಣನವರ ವಚನಗಳು ಮತ್ತು ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಉಪನ್ಯಾಸದ ಜೊತೆಗೆ ವ್ಯಕ್ತಿತ್ವ ವಿಕಸನ ಕುರಿತಾದ ಕಮ್ಮಟಗಳನ್ನು ನಡೆಸುತ್ತಿದ್ದಾರೆ. ಒಮ್ಮೆ ರಾಯರಿಗೆ ಕಗ್ಗದ ಪರಿಚಯವಾದ ನಂತರ ಕಾಲೇಜಿನಲ್ಲಿ ಅವರ ಪ್ರತಿನಿತ್ಯದ ಪಾಠಗಳು ಒಂದೋ ಕಗ್ಗದಿಂದ ಆರಂಭವಾಗುತ್ತಿತ್ತು ಇಲ್ಲವೇ ಕಗ್ಗದಿಂದ ಅಂತ್ಯ ಮಾಡುವ ಮೂಲಕ ಕಗ್ಗವನ್ನು ನಮ್ಮೆಲ್ಲರಿಗೂ ಪರಿಚಯಿಸಿದ ಮಹಾನುಭಾವರು.

WhatsApp_Image_2023-07-02_at_18.34.45-removebg-preview

ಅಷ್ಟೆಲ್ಲಾ ವಿದ್ಯಾರ್ಹತೆ ಇದ್ದರೂ, ಜೀವಮಾನವಿಡೀ ಖಾಸಗೀ ಮನೆ ಪಾಠ ಏಕೆ ಮಾಡಲಿಲ್ಲಾ? ಎಂದು ವಿಚಾರಿಸಿದಾಗ ಅವರು ನೀಡಿದ ಉತ್ತರ ಇಂದಿನ ಶಿಕ್ಷಕರ ಕೆನ್ನೆಗೆ ಬಾರಿಸುವಂತಿತ್ತು ಎಂದರೂ ತಪ್ಪಾಗದು. ನನಗೆ ನಾನು ಬಹಳ ಸಾಧಿಸಿದ್ದೇನೆ ಎಂಬ ಹಮ್ಮು ಬಿಮ್ಮು ಇಲ್ಲಾ. ಏಕೆಂದರೆ, ಖಂಡಿತವಾಗಿಯೂ ನನಗಿಂತಲೂ ಹೆಚ್ಚಿನದ್ದನ್ನು ಸಾಧಿಸಿರುವವರು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಅದೂ ಅಲ್ಲದೇ ಸರ್ಕಾರ ನನಗೆ ಪಾಠ ಹೇಳಿಕೊಡಲು ಕೈ ತುಂಬಾ ಸಂಬಳ ಕೊಡುತ್ತಿರುವಾಗ ನಾನೇಕೆ ಹೆಚ್ಚಿನ ಸಂಬಳಕ್ಕೆ ಅಸೆ ಪಡಬೇಕು? ಹಾಗಾಗಿ ತಾವು ಎಂದಿಗೂ ಎಲ್ಲೂ ಮನೆ ಪಾಠ ಮಾಡದಿರುವ ನಿರ್ಧಾರವನ್ನು ತೆಗೆದುಕೊಂಡೆ ಎನ್ನುತ್ತಾರೆ. ಅದೇ ರೀತೀಯಲ್ಲಿ ಇಂದಿನವರು ಬಳಿ 100ರೂ ಇದ್ದರೂ ಸಾಕು 500 ರೂಪಾಯಿ ಇರುವ ಹಾಗೆ ಆಡುವಾಗ, ನನ್ನ ಬಳಿ 100 ರೂಪಾಯಿ ಇದ್ದರೆ 5 ರೂಪಾಯಿ ಇರುವ ಹಾಗೆ ವಿಧೇಯಕನಾಗಿ ಇರಬೇಕು ಎಂದು ಬಾಲ್ಯದಲ್ಲಿ ತಮ್ಮ ತಂದೆಯವರು ಹೇಳಿ ಕೊಟ್ಟಿದ್ದನ್ನು ಜೀವನದುದ್ದಕ್ಕೂ ಪರಿಪಾಲಿಸಿಕೊಂಡು ಬಂದಿದ್ದಾರೆ.

ತಂದೆಯಂತೆಯೇ ಮಂತ್ರಾಲಯದ ಗುರು ರಾಘವೇಂದ್ರರ ಕರುಣೆ ಆವರ ಮೇಲೆ ಅಪಾರವಾಗಿದ್ದು, ಚಿಕ್ಕವಯಸ್ಸಿನಲ್ಲಿ ರಾಘವೇಂದ್ರ ಮಹಿಮೆ ಸಿನಿಮಾ ನೋಡುವಾಗ, ಅದರಲ್ಲಿ ತಮಗೆ ಯಾರಾದರೂ ಯಾವುದೇ ರೀತಿಯಲ್ಲಿ ಸಹಾಯ ಮಾಡಿದರೂ ಅದನ್ನು ಮತ್ತೆ ಯಾವುದಾದರೊಂದು ರೀತಿಯಲ್ಲಿ ಹಿಂದಿರುಗಿಸಲೇ ಬೇಕು. ಅವರು 10 ರೂಪಾಯಿ ಕೊಟ್ಟಲ್ಲಿ ನಾವು ಸಾಧ್ಯವಾದರೆ, 2 ರೂಪಾಯಿ ಕೊಡಬೇಕು, ಅದು ಸಾಧ್ಯ ಇಲ್ಲಾ ಅಂದರೆ ಮನೆಗೆ ಕರೆಸಿ ಒಂದು ಲೋಟ ಹಾಲು ಅದೂ ಆಗದೇ ಹೋದರೆ, ಕಡೇ ಪಕ್ಷಾ ಒಂದು ಲೋಟ ನೀರನ್ನಾದರೂ ಕೂಡುವ ಮೂಲಕ ಅವರ ಋಣವನ್ನು ತೀರಿಸಬೇಕು ಎನ್ನುವ ಮನೋಭಾವನೆ ಬೆಳಸಿಕೊಂಡ ಪರಿಣಾಮ, ಇಂದಿಗೂ ಅವರ ಮನೆಗೆ ಹೋದವರು ಹಸಿದ ಹೊಟ್ಟೆ ಇಲ್ಲವೇ ಬರೀ ಕೈನಿಂದ ಹಿಂದಿರುಗುವುದೇ ಇಲ್ಲ. ಪ್ರತೀ ವರ್ಷ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಾಲೆಯ ಒಂದಲ್ಲಾ ಒಂದು ವರ್ಷದ ವಿದ್ಯಾರ್ಥಿಗಳು ಕರೆದು ಇವರಿಗೆ ಸನ್ಮಾನ ಮಾಡಿದ ಒಂದೆರಡೂ ವಾರಗಳ ಸಮಯದಲ್ಲೇ ಆಷ್ಟೂ ವಿದ್ಯಾರ್ಥಿಗಳಿಗೆ ಉಳಿದ ಶಿಕ್ಷಕರೊಂದಿಗೆ ಸೇರಿಕೊಂಡು ಊಟವನ್ನು ಹಾಕಿಸುವ ಸತ್ ಸಂಪ್ರದಾಯವನ್ನು ಇಂದಿಗೂ ಪರಿಪಾಲಿಸಿಕೊಂಡು ಬರುವ ಮೂಲಕ ಇಂದಿನ ಅನೇಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಗಳಾಗಿದ್ದಾರೆ ಎಂದರೂ ತಪ್ಪಾಗದು.

ಈ ಗುರುಪೂಜಾ ದಿನದಂದು ಅಂತಹ ಹಿರಿಯ ಶಿಕ್ಷಕರಾದ ಶ್ರೀ ರಾಘವೇಂದ್ರ ರಾಯರಿಗೆ ಭಕ್ತಿಪೂರ್ವಕವಾದ ನಮನಗಳನ್ನು ಸಲ್ಲಿಸುವುದರೊಂದಿಗೆ ಭಗವಂತನ ಅನುಗ್ರಹದಿಂದ ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ ಮತ್ತು ಇಂತಹ ಹೃದಯವಂತ ನಿಸ್ವಾರ್ಥ ಶಿಕ್ಷಕರ ಸಂಖ್ಯೆ ಅಗಣಿತವಾಗಲಿ ಎನ್ನುವುದೇ ನಮ್ಮ ನಿಮ್ಮೆಲ್ಲರ ಅಶಯವಾಗಿದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

10 thoughts on “ಶ್ರೀ ಎನ್. ಪಿ. ರಾಘವೇಂದ್ರ ರಾವ್ (NPR)

  1. ತಮಗೂ, ಅಂತಹ ಗುರುಗಳಿಗೂ ಭಲೇ ಅನ್ನದೆ ಇನ್ನೇನು ಅನ್ನಲಿ? 🙏🙏

    Liked by 1 person

      1. What a wonderful teacher he was, I think I did so well in Geometry because of him. His one habit of making us write all the theorems every day made it easy for many of us in 10 th final exam.
        For sure will not get teachers like him today. I also liked his nick name students used to refer him with

        Liked by 1 person

  2. ಅಕ್ಷರಗಳು ತುಂಬಾ ಸಣ್ಣದಾಗಿ ಬರುತ್ತಿವೆ ಸರಿಪಡಿಸಿ 

    Sent from Yahoo Mail on Android

    Like

  3. Thanks for creating this page as gratitude for our inspiring teachers. I developed more interest on the subject only after his inspiring classes. Thank you very much sir.

    Liked by 1 person

  4. Really thanks for our teachers who have made our today’s. Because of their art of teaching we are leaving a good respectful and responsible person in society.

    Liked by 1 person

Leave a comment