ಭಾರತೀಯರಾದ ನಾವು ಜನ್ಮ ಕೊಟ್ಟ ತಂದೆ ತಾಯಿಯರನ್ನೇ ಪ್ರತ್ಯಕ್ಷ ದೇವರು ಎಂದೇ ನಂಬಿರುವ ಕಾರಣ ನಾವು ಮೊದಲು ಮಾತೃ ದೇವೋಭವ, ಪಿತೃದೇವೋಭವ ಎಂದು ಅವರಿಗೆ ಆದ್ಯ ಗೌರವವನ್ನು ಸೂಚಿಸಿದರೆ, ಅವರ ನಂತರದ ಸ್ಥಾನವನ್ನು ನಮಗೆ ವಿದ್ಯಾ ಬುದ್ಧಿಯನ್ನು ಕಲಿಸಿ ಸಮಾಜದಲ್ಲಿ ಒಂದು ಗೌರವ ಸ್ಥಾನವನ್ನು ಕಲ್ಪಿಸಿ ಕೊಡುವ ಗುರುಗಳಿಗೆ ಮೀಸಲಿಟ್ಟು ಆಚಾರ್ಯದೇವೋಭವ ಎಂದು ನಮಿಸುತ್ತೇವೆ.
ಅದಾವ ಜನ್ಮದ ಸುಕೃತವೋ ಕಾಣೆ ನಮ್ಮ ಪೋಷಕರಿಗೆ ಈ ದೇಶದ ಹೆಮ್ಮೆಯ ಸಾರ್ವಜನಿಕ ಉದ್ಯೋಗ ವಲಯದ ಕಾರ್ಖಾನೆಯಾದ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ ಕೆಲಸ ಸಿಕ್ಕ ಕಾರಣ, ಅದೇ ಸಂಸ್ಥೆ ನಡೆಸುವ ಪ್ರತಿಷ್ಥಿತ ವಿದ್ಯಾಸಂಸ್ಥೆಯಾದ ಬಿಇಎಲ್ ಶಾಲೆಯಲ್ಲಿ ಅದರಲ್ಲಿ ಪ್ರಾಧಮಿಕ, ಪ್ರೌಢ ಮತ್ತು ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಸುವರ್ಣಾವಕಾಶ ನಮಗೆ ಸಿಕ್ಕಿತ್ತು. ಅಲ್ಲಿ ದೇವದುರ್ಲಭ ಎನಿಸುವಂತಹ ಗುರುಗಳು ನಮಗೆ ಸಿಕ್ಕ ಕಾರಣ, ಅಷ್ಟೋ ಇಷ್ಟೋ ವಿದ್ಯೆಯ ಜೊತೆಗೆ ವಿನಯವನ್ನೂ ಕಲಿತು, ಜೀವನವನ್ನು ತಕ್ಕ ಮಟ್ಟಿಗೆ ನಡೆಸುವಷ್ಟು ಆರ್ಥಿಕವಾಗಿ ಸಧೃಢರಾಗಿದ್ದೇವೆ.
ಒಂದಕ್ಷರವಂ ಕಲಿಸಿದಾತಂ ಗುರು ಎನ್ನುವಂತೆ ನಮಗೆ ವಿದ್ಯಯನ್ನು ಕಲಿಸಿದ ಗುರುಗಳಿಗೆ ಯಾವ ರೀತಿಯಲ್ಲಿಯೂ ಋಣವನ್ನು ತೀರಿಸಲಾಗದೇ ಇದ್ದರೂ ಅವರೇ ಹೇಳಿಕೊಟ್ಟಂತೆ ಕನಿಷ್ಟ ಪಕ್ಷ ಅವರನ್ನು ಆಗ್ಗಾಗ್ಗೆ ನೆನಸಿಕೊಳ್ಳುವುದು ಉತ್ತಮ ಸಂಪ್ರದಾಯ ಎಂದು ನೆನೆದು 1989ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿಯನ್ನು ಮುಗಿಸಿದ ವಿದ್ಯಾರ್ಥಿಗಳು ಮೂರ್ನಾಲ್ಕು ಬಾರಿ ತಮ್ಮ ಸಮಪಾಠಿಗಳು ಮತ್ತು ಶಿಕ್ಷಕರನ್ನು ಒಟ್ಟಿಗೆ ಒಂದೆಡೆಯಲ್ಲಿ ಸೇರಿಸುವ ಸತ್ ಸಂಪ್ರದಾಯವನ್ನು ರೂಢಿಯಲ್ಲಿಟ್ಟು ಕೊಂಡಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.
ಅದೇ ರೀತೀ ೨೦೨೨ರ ಸೆಪ್ಟಂಬರ್ 5 ಶಿಕ್ಷರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 4 ರಂದು ಸುಮಾರು 15-20 ಗುರುಗಳು ಮತ್ತು 30-40 ವಿದ್ಯಾರ್ಥಿಗಳು ಬಿಇಎಲ್ ಅಧಿಕಾರಿಗಳ ಕ್ಲಬ್ ನಲ್ಲಿ ಒಟ್ಟಾಗಿ ಸೇರಿ ಒಂದಷ್ಟು ಹೊತ್ತು ಮಾತನಾಡಿ ಗುರುಗಳ ಹಿತವಚನವನ್ನು ಕೇಳಿ ಅವರಿಗೆ ಯಥಾಶಕ್ತಿ ಸತ್ಕರಿಸಿದ್ದದ್ದು ನಿಜಕ್ಕೂ ಅನನ್ಯ ಮತ್ತು ಅನುಕರಣೀಯ.
ಈಗಾಗಲೇ ಹೇಳಿದಂತೆ ಶಿಕ್ಷಕರದ್ದು ಒಂದು ರೀತಿಯ ತಾಯಿಯ ಪ್ರತಿರೂಪ ಎಂದರೂ ತಪ್ಪಾಗದು. ವಿದ್ಯಾರ್ಥಿಗಳು ನಮ್ಮನ್ನು ಕರೆಸಿ ಸತ್ಕರಿಸಿದರೆ ಅವರಿಗೂ ತಮ್ಮ ಕಡೆಯಿಂದ ಆಶೀರ್ವಾದಪೂರ್ವಕವಾಗಿ ಏನಾದರೂ ಮಾಡಲೇ ಬೇಕು ಎಂದು ನಿರ್ಧರಿಸಿ, ಮತ್ತೆ ಅದೇ ಸ್ಥಳದಲ್ಲಿ, ಅಕ್ಟೋಬರ್ 9 ರಂದು ಎಲ್ಲರನ್ನು ಕರೆಯಿಸಿ ಎಲ್ಲರನ್ನು ಒಟ್ಟಾಗಿ ಸೇರಿಸಿ, ಶಾಲೆಯಲ್ಲಿ ಇದ್ದಾಗ ಹೇಗಿದ್ದರೂ ಅದೇ ರೀತಿಯ ಬಾಲ್ಯವನ್ನು ಮತ್ತೆ ಮರುಕಳಿಸುವಂತೆ ಹಾಡು ಹಸೆಗಳನ್ನು ಹೇಳಿಸಿ ಸಂಭ್ರಮಿಸಿದ ನಂತರ ಎಲ್ಲರಿಗೂ ತಮ್ಮ ಸಾರಥ್ಯದಲ್ಲೇ ಸುಗ್ರಾಸವಾದ ಭೂರೀ ಭೋಜನವನ್ನು ಹಾಕಿಸಿದ್ದು ನಿಜಕ್ಕೂ ಅಪರೂಪದ ಸಂಗತಿಯಾಗಿತ್ತು.
ಎಲ್ಲೆಡೆಯಲ್ಲೂ ವಿದ್ಯಾರ್ಥಿಗಳು ಗುರುಗಳಿಗೆ ಸತ್ಕಾರ ಮಾಡುವುದು ಸಹಜವಾದರೆ ಇಲ್ಲಿ ಅಪರೂಪ ಮತ್ತು ಅನುರೂಪ ಎನ್ನುವಂತೆ ಗುರುಗಳು ಸೇರಿ ಶಿಹ್ಯಂದಿರಿಗೆ ಸತ್ಕಾರ ಮಾಡುವ ಸಂದರ್ಭವನ್ನು ಹೇಳುವುದಕ್ಕಿಂತಲೂ ಅನುಭವಿಸಿದವರಿಗೇ ಗೊತ್ತು ಅದರ ಆನಂದ. ಇನ್ನು ವಯಕ್ತಿಕವಾಗಿ ನಾನು 1989ನೇ ಶೈಕ್ಷಣಿಕ ಸಾಲಿಗಿಂತಲೂ 3 ವರ್ಷ ಮುಂಚೆಯೇ ವಿದ್ಯಾಭ್ಯಾಸವನ್ನು ಮಾಡಿದ್ದರೂ ನನ್ನ ನೆಚ್ಚಿನ ಗುರುಗಳಾದ ಶ್ರೀ ಬಿ.ಕೆ.ಗೋಪಣ್ಣನವರ ಪ್ರೀತಿ ಪೂರ್ವಕ ಆಗ್ರಹದ ಮೇರೆಗೆ ಭಾಗವಹಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಮಹಾ ಪ್ರಸಾದವೇ ಎನಿಸಿತ್ತು.
ಬಹುತೇಕ ನಾವುಗಳೇ ೫೦ರ ಆಸುಪಾಸಿನ ವಯಸ್ಸಾಗಿದ್ದರೆ, ಕಾರ್ಯಕ್ರಪದಲ್ಲಿ ಉಪಸ್ಥಿತರಿದ್ದ ನಮ್ಮ ಗುರುಗಳ ವಯಸ್ಸು ಸುಮಾರು 60-80+ ಆಗಿದ್ದರೂ, ವಯಸ್ಸಾಗಿರುವುದು ದೇಹಕ್ಕಷ್ಟೇ ಮನಸ್ಸಿಗಲ್ಲಾ ಎನ್ನುತ್ತಾ ಉತ್ಸಾಹದಲ್ಲಿ ಅವರೇ ಖುದ್ದಾಗಿ ನಿಂತು ಎಲ್ಲರಿಗೂ ಕೇಳಿ ಕೇಳಿ ಬಲವಂತ ಮಾಡಿ ಊಟವನ್ನು ಬಡಿಸುತ್ತಿದ್ದಾಗ, ನಿಜಕ್ಕೂ ಅವರಲ್ಲಿದ್ದ ಮಾತೃ ಸ್ವರೂಪತನ ಎದ್ದು ತೋರುತ್ತಿತ್ತು.
ಸುಮಾರು ಎರಡು ಮೂರು ಪಂಕ್ತಿಗಳಲ್ಲಿ ಎಲ್ಲರ ಊಟ ಮುಗಿದ ನಂತರ ಮತ್ತೆ ಕಾರ್ಯಕ್ರಮದ ಎರಡನೇ ಭಾಗವಾಗಿ ಎಲ್ಲರೂ ಒಂದೆಡೆ ಸೇರಿ ಆಸಕ್ತ ವಿದ್ಯಾರ್ಥಿಗಳು ತಮ್ಮ ತಮ್ಮ ಅನುಭವ ಮತ್ತು ಗುರುವಂದನೆಗಳನ್ನು ಸಲ್ಲಿಸಿದರೆ, ನಂತರ ಗೋಪಣ್ಣನವರು ಮತ್ತು ಪಿ.ವಿ ವಾಣುಕುಬೇಬರ್ ಸರ್ ಅವರುಗಳು ಚುಟುಕಾದ ಹಿತವಚನದ ನಂತರ ಹಿರಿಯರಾದ ಶ್ರೀ ಎನ್. ಪಿ ರಾಘವೇಂದ್ರರಾವ್ ಅವರು ತಮ್ಮ ಅದ್ಭುತವಾದ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನೆರೆದಿದ್ದವರೆಲ್ಲರಿಗೂ ಆಶೀರ್ವಜನದ ರೀತಿಯಲ್ಲಿ ಮಾತನಾಡಿ ಅಂತಿಮವಾಗಿ ನೆರೆದಿದ್ದವರ ಕೋರಿಕೆಯ ಮೇರೆಗೆ ಸಮಯೋಚಿತ ಮಂಕುತಿಮ್ಮನ ಕಗ್ಗದ ಸಗ್ಗವನ್ನು ಉಣಬಡಿಸಿದ್ದು ಎಲ್ಲರಿಗೂ ಮುದ ನೀಡಿತು. ಅಂತಿಮವಾಗಿ ಶಿಕ್ಷಕರ ಪರವಾಗಿ ರವೀಂದ್ರ ಜಿ ಭಟ್ ಸರ್ ಅವರು ವಂದನಾರ್ಪಣೆ ಸಲ್ಲಿಸಿದರು.
ಅದಾಗಲೇ ಮೋಡ ಕವಿದ ವಾತಾವರಣ ಏರ್ಪಟ್ಟು, ದಟ್ಟವಾದ ಕಾರ್ಮೋಡ ನೆರೆದು ಯಾವಾಗ ಬೇಕಾದರು ಮೇಘಸ್ಪೋಟ ಆಗಬಹುದು ಎಂಬ ವಾತಾವರಣ ಏರ್ಪಟ್ಟಾಗ, ಎಲ್ಲರೂ ನೆನಪಿನಾರ್ಥವಾಗಿ ಒಟ್ಟಿಗೆ ಸೇರಿ ಪೋಟೋಗಳನ್ನು ತೆಗೆಸಿಕೊಂಡ ನಂತರ ಗುರುಗಳೇ ತಮ್ಮ ಕೈಯ್ಯಾರೆ ಬಂದಿದ್ದ ಎಲ್ಲರಿಗೂ ಉಡುಗೊರೆಯನ್ನು ಕೊಡುತ್ತಿದ್ದರೆ ಅದರ ಪಕ್ಕದಲ್ಲೇ ಫಲ ತಾಂಬೂಲವನ್ನು ಕೊಡುತ್ತಿದ್ದದ್ದನ್ನು ನೋಡಿದಾಗ ಇಂತಹ ಅದ್ಭುತ ಕಾರ್ಯಕ್ರಮದ ಭಾಗವಾಗಿದ್ದಕ್ಕೆ ಸಾರ್ಥಕತೆ ದೊರೆಯುವಂತೆ ಮಾಡಿತ್ತು.
ಬಹಳ ವರ್ಷಗಳ ನಂತರ ಅನೇಕರು ಮತ್ತೆ ಒಂದೆಡೆಯಲ್ಲಿ ಸೇರಿದ್ದ ಕಾರಣ, ಬಾಲ್ಯದ ಸವಿನನಪ್ಪನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ, ಒಬ್ಬರಿಗೊಬ್ಬರು ಇಟ್ಟುಕೊಂಡಿದ್ದ ಪ್ರೀತಿಯ ಅಡ್ಡ ಹೆಸರಿನಿಂದ ಕರೆದು ಕಾಲು ಎಳೆಯುತ್ತಾ ಕೆಲಕಾಲ ಆಟಾಗಳನ್ನು ಆಡುವಷ್ಟರಲ್ಲಿ ಸೂರ್ಯ ತಾನು ಬಂದ ಕೆಲಸವಾಯಿತು ಎಂದು ಹೊರಡಲು ಅನುವಾದರೇ, ನನ್ನ ಪಾಳಿಯಲ್ಲಿ ನಾನು ಬಂದಿದ್ದೇನೆ ಎಂದು ಚಂದ್ರ ಇಣುಕಿ ನೋಡುತ್ತಿದ್ದ.
ಬೆಳಿಗ್ಗೆ ಎಲ್ಲರೂ ಸಡಗರ ಸಂಭ್ರಮದಿಂದ ಒಬ್ಬರನ್ನೊಬ್ಬರು ಅಪ್ಪಿ ಮುದ್ದಾಡಿ ಸಂಭ್ರಮಿಸಿದ್ದರೆ, ಸಂಜೆ ಪ್ರೇಮಿಗಳು ಭಾರದ ಹೃದಯದೊಂದಿಗೆ ಅಗಲುವಂತೆ ಆಗಿದ್ದಲ್ಲದೇ ಮತ್ತೆ ಆದಷ್ಟು ಬೇಗ ಸೇರೋಣ ಎಂದು ಬೀಳ್ಕೊಡುವ ಮೂಲಕ ಈ ಸುಂದರ ಕಾರ್ಯಕ್ರಮಕ್ಕೆ ಅಂತಿಮ ತೆರೆ ಬಿದ್ದಿತ್ತು. ಹಾಗೆ ಎಲ್ಲರೂ ಮನೆಗಳಿಗೆ ಹಿಂದಿರುಗುವಾಗ ಆವರ ಮನದಲ್ಲಿ ಸುದೀಪ್ ನಟಿಸಿ ನಿರ್ದೇಶಿಸಿರುವ, ಕವಿರಾಜ್ ಅವರು ಬರೆದಿರುವ ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲಿ ಬಚ್ಚಿಕೊಂಡಿರುವ
ಅಚ್ಚಳಿಯದ ನೂರೊಂದು ನೆನಪು ಹಾಡು ಗುನುಗುತ್ತಿದ್ದದ್ದಂತೂ ಸುಳ್ಳಲ್ಲ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಬಹಳ ಸುಂದರವಾಗಿ ಮೂಡಿಬಂದಿದೆ.
LikeLike
ಧನ್ಯೋಸ್ಮಿ
LikeLike