ಕಹಳೆ ಬಂಡೆ (ಬ್ಯೂಗಲ್ ರಾಕ್)

ಬೆಂಗಳೂರು ನಗರದ ನಿರ್ಮಾತೃ ಶ್ರೀ ಕೆಂಪೇಗೌಡರು ರಾತ್ರಿಯ ಹೊತ್ತಿನಲ್ಲಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿಯೂ ಕಾವಲು ಕಾಯಲು ಕಾವಲು ಗೋಪುರಗಳನ್ನು ನಿರ್ಮಾಣ ಮಾಡಲು ಆಲೋಚಿಸುತ್ತಿದ್ದಾಗ, ಬೆಂಗಳೂರು ದಕ್ಷಿಣಭಾಗವಾದ ಬಸವನಗುಡಿಯ ಪ್ರದೇಶದಲ್ಲಿ ನೈಸರ್ಗಿಕವಾಗಿಯೇ ಎತ್ತರವಾಗಿದ್ದ ಈ ಬಂಡೆಯ ಮೇಲೆಯೇ ತನ್ನ ನಾಲ್ಕು ಕಾವಲು ಗೋಪುರಗಳಲ್ಲಿ ಒಂದನ್ನು ನಿರ್ಮಿಸಿ ಅದಕ್ಕೆ ಕಹಳೆ ಬಂಡೆ(ಬ್ಯೂಗಲ್‌ ರಾಕ್) ಎಂದು ಹೆಸರಿದರು. ಈ ಕಹಳೆಬಂಡೆಯ ಕುರಿತಾದ ವಿಶೇಷ ಮಾಹಿತಿಗಳನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಶ್ರೀ ಕೆಂಪೇಗೌಡರು ಹಂಪೆಯನ್ನು ನೋಡಿಕೊಂಡು ಬಂದ ನಂತರ ಅದೇ ರೀತಿಯ ಸುಸಜ್ಜಿತವಾದ ನಗರವೊಂದನ್ನು ತಮ್ಮ ರಾಜ್ಯದಲ್ಲೂ ನಿರ್ಮಿಸ ಬೇಕು ಎಂದು ಕನಸನ್ನು ಕಂಡ ಪರಿಣಾಮವಾಗಿಯೇ ಸುಮಾರು 500 ವರ್ಷಗಳ ಹಿಂದೇ ಈ ಬೆಂಗಳೂರು ನಗರವನ್ನು ನಿರ್ಮಿಸಿ, ಜನರ ಹಿತದೃಷ್ಟಿಯಿಂದಾಗಿ ಎತ್ತರ ಮತ್ತು ತಗ್ಗು ಪ್ರದೇಶಗಳನ್ನು ಗುರುತಿಸಿ ಸುಮಾರು 500ಕ್ಕೂ ಹೆಚ್ಚಿನ ನೈಸರ್ಗಿಕ ಕೆರೆಗಳನ್ನು ನಿರ್ಮಿಸಿದ್ದರು. ಹೀಗೆ ಅಂದಿನ ಕಾಲದಲ್ಲೇ ಅತ್ಯಂತ ವೈಭವೋಪೇತವಾಗಿ ನಿರ್ಮಿಸಿದ್ದ ನಗರದ ರಕ್ಷಣೆಗಾಗಿ ಮತ್ತು ಬೆಂಗಳೂರಿನ ವಿಸ್ತರಣೆಯ ಮಿತಿಗಳನ್ನು ನಿಗದಿಪಡಿಸುವ ಸಲುವಾಗಿ ನಗರದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕಾವಲು ಗೋಪುರಗಳನ್ನು ನಿರ್ಮಿಸಿದರು. ಇದರಲ್ಲಿ ದಕ್ಷಿಣ ಗಡಿಯ ಕಾವಲು ಗೋಪುರವನ್ನು ಬಸವನಗುಡಿಯದ್ದ ಈ ನೈಸರ್ಗಿಕವಾದ ಸುಮಾರು 3,000 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾದ ಏಕ ಶಿಲೆಯ ಮೇಲೆ ಸ್ಥಾಪಿಸಿದರೆ, ಉಳಿದ ಮೂರು ಕಾವಲು ಗೋಪುರಗಳಲ್ಲಿ ಪಶ್ಚಿಮದಲ್ಲಿ ಕೆಂಪಾಂಬುದಿ ಕೆರೆಯ ದಕ್ಷಿಣ ದಂಡೆಯಲ್ಲಿ,ಲಸೂರು ಸರೋವರದ ಬಳಿ ಮತ್ತು ಬಳ್ಳಾರಿ ರಸ್ತೆಯ ಮೇಖ್ರೀ ವೃತ್ತದ ಬಳಿ ಇರುವ ರಮಣ ಮಹರ್ಷಿ ಆಶ್ರಮಕ್ಕೆ ಹೊಂದಿಕೊಂಡಿರುವ ಉದ್ಯಾನವನದಲ್ಲಿ ಸ್ಥಾಪಿಸಲಾಯಿತು.

br3ವರ್ಷದ 365 ದಿನಗಳೂ ದಿನದ 24 ಗಂಟೆಗಳೂ ಈ ಕಾವಲು ಗೋಪುರದಲ್ಲಿ ಸರದಿಯಂತೆ ಕಾವಲುಗಾರರಿದ್ದು. ಸೂರ್ಯಾಸ್ತದ ಸಮಯದಲ್ಲಿ ಕಹಳೆಯನ್ನು ಊದುವ ಮೂಲಕ ನಾವು ಜಾಗರೂಕರಾಗಿ ನಗರವನ್ನು ಕಾಯುತ್ತಿದ್ದೇವೆ ಎಂಬುದನ್ನು ಮಹಾಜನತೆಗೆ ತಿಳಿಯ ಪಡಿಸುತ್ತಿದ್ದರು. ಒಂದು ಅಂದಾಜಿನ ಪ್ರಕಾರ ಅವರು ಊದುತ್ತಿದ್ದ ಕಹಳೆಯ ಸದ್ದು ಅವರ ನಂತರ ಗೋಪುರದ ಕಾವಲು ಭಟರಿಗೆ ಕೇಳಿಸಿ ಅವರು ಸಹಾ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು. ಇನ್ನು ರಾತ್ರಿಯ ಹೊತ್ತು ಸಹಾ ಇದೇ ರೀತಿ ಪಂಜನ್ನು ಹಿಡಿದು ಕೊಂಡ ಕಾವಲುಗಾರರು ನಿಗಧಿತ ಸಮಯಕ್ಕೆ ಸರಿಯಾಗಿ ಕಹಳೆಯನ್ನು ಊದುವ ಮೂಲಕ ಆ ಸ್ಥಳದಲ್ಲಿ ಸದ್ಯಕ್ಕೆ ಎಲ್ಲವೂ ಸುರಕ್ಷಿತವಾಗಿದೆ ಎಂದು ಜನರಿಗೆ ತಿಳಿಸಲು ಮತ್ತು ನಗರಕ್ಕೆ ಯಾವುದೇ ರೀತಿಯಲ್ಲಿ ಒಳನುಗ್ಗುವ ದುಷ್ಟ ದುರುಳರನ್ನು ಎಚ್ಚರಿಸುವ ಸಲುವಾಗಿ ಈ ಕಹಳೆಯ ಮೊಳಗು ಒಂದು ರೀತಿಯ ಎಚ್ಚರಿಕೆಯ ಗಂಟೆಯಾಗಿತ್ತು ಎಂದರೂ ತಪ್ಪಾಗದು. ಹೀಗೆ ನಗರದ ರಕ್ಷಣಾ ಭಟರು ಆ ಬಂಡೆಯ ಮೇಲಿದ್ದ ಕಾವಲು ಗೋಪುರದ ಮೇಲೆ ನಿಂತು ಕಹಳೆ ಊದುತ್ತಿದ್ದರಿಂದ ಜನರ ಬಾಯಿಯಲ್ಲಿ ಅದು ಕಹಳೆ ಬಂಡೆ ಎಂದೇ ಪ್ರಸಿದ್ಧವಾದರೆ, ನಂತರದ ದಿನಗಳಲ್ಲಿ ಅದು ಆಂಗ್ಲಮಯವಾಗಿ ಬ್ಯೂಗಲ್ ರಾಕ್ ಎಂದೇ ಹೆಸರುವಾಸಿಯಾಗಿದೆ.

br1ಬಸವನ ಗುಡಿಯ ದೊಡ್ಡ ಗಣಪತಿ ದೇವಾಲಯಕ್ಕೆ ಅಂಟಿಕೊಂಡಂತೆಯೇ ಇರುವ ಸುಮಾರು 16 ಎಕರೆ(6.5 ಹೆಕ್ಟೇರ್) ಯಷ್ಟು ವಿಸ್ತಾರವಾಗಿರುವ ಈ ಪ್ರದೇಶದಲ್ಲಿರುವ ಹೆಚ್ಚಿನ ಬಂಡೆಗಳು ಅತ್ಯಂತ ಟೊಳ್ಳು ಅಗಿರುವುದರಿಂದಲೇ, ಬಂಡೆ ಒಡೆಯುವವರು ಅದರತ್ತ ಗಮನ ಹರಿಸದೇ ಇರುವ ಕಾರಣ ಇಂದಿಗೂ ಸಹಾ ಅದು ತನ್ನ ಸೌಂದರ್ಯವನ್ನು ಉಳಿಸಿಕೊಂಡು ಬಂದಿದ್ದು, ಇಲ್ಲಿಯ ಬಂಡೆಗಳು ಭೂಮಿಯ ಅತ್ಯಂತ ಹಳೆಯ ಸಂರಚನೆಗಳಲ್ಲಿ ಒಂದು ಎನ್ನಲಾಗಿದ್ದು, ಭೂಗೋಳ ತಜ್ಞರಿಗೆ ಇದು ಅಧ್ಯಯನಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಈ ಬಂಡೆಗಳು ಲಾಲ್‌ಬಾಗ್ ಗೋಪುರದ ಬಳಿ ಇರುವ ಬಂಡೆಗಳ ರೂಪವನ್ನೇ ಹೋಲುವುದು ವಿಶೇಷವಾಗಿದೆ.

ದೊಡ್ಡ ಬಸವಣ್ಣ ದೇವಾಲಯದಲ್ಲಿರುವ ಒಂದು ಶಾಸನದ ಪ್ರಕಾರ, ನಂದಿಯ ಕೆಳಗಿರುವ ಚಿಲುಮೆಯೇ ಬೆಂಗಳೂರಿನ ಪಶ್ಚಿಮಕ್ಕೆ ಹರಿಯುವ ವೃಷಭಾವತಿ ನದಿಯ ಉಗಮಸ್ಥಾನವಾಗಿದೆ ಎಂದು ಹೇಳಲಾಗುತ್ತದೆ. ಮೂರನೇ ಮೈಸೂರು ಯುದ್ಧದ ಸಮಯದಲ್ಲಿ, ಮೈಸೂರು ಸೈನ್ಯದ ತುಕಡಿಯು ಬ್ರಿಟಿಷ್ ಸೈನ್ಯದ ಮೇಲೆ ದಾಳಿ ಮಾಡುವ ಮೊದಲು ಮೀರ್ ಖಮರ್-ಉದ್-ದಿನ್ ನೇತೃತ್ವದಲ್ಲಿ ಇದೇ ಬಂಡೆಯ ಪ್ರದೇಶದಲ್ಲೇ ಕೆಲ ಕಾಲ ಆಶ್ರಯ ಪಡೆದು ಸಮರ್ಥವಾದ ಸೈನ್ಯವನ್ನು ಒಗ್ಗೂಡಿಸಿಕೊಂಡಿತು ಎಂದು ಇತಿಹಾಸಕಾರರು ಹೇಳುತ್ತಾರೆ.

bt6ನಂತರದ ದಿನಗಳಲ್ಲಿ ಉಬ್ಬು ಮತ್ತು ತಗ್ಗುಗಳಿಂದ ಕೂಡಿದ್ದ ಪ್ರದೇಶವಾದ ಕಾರಣ ನೈಸರ್ಗಿಕವಾಗಿ ಆಲ, ಅರಳಿ, ಬಾದಾಮಿ, ಮಹಾಗನಿ, ಮಾವು, ಅತ್ತಿ ಮೊದಲಾದ 200 ಕ್ಕೂ ಹೆಚ್ಚು ಪ್ರಭೇದಗಳ ಮರಗಳು ಬೆಳೆದುಕೊಂಡು ಜನರ ಕಣ್ಮನಗಳನ್ನು ತಣಿಸುವಂತಹ ಸ್ಥಳವಾಗಿ ಮಾರ್ಪಟ್ಟ ಕಾರಣ ಅದು ಒಂದು ರೀತಿಯ ನೈಸರ್ಗಿಕವಾದ ಉದ್ಯಾನವನವಾಗಿ ಮಾರ್ಪಟ್ಟು ಅಲ್ಲಿನ ಸುತ್ತಮುತ್ತಲಿನ ಜನರ ಮುಂಜಾನೆ ಮತ್ತು ಮುಸ್ಸಂಜೆ ವಾಯುವಿಹಾರಕ್ಕೂ ಹಾಗು ಲಘು ವ್ಯಾಯಾಮಕ್ಕೆ ಸೂಕ್ತವಾದ ಸ್ಠಳವಾಗಿ ಮಾರ್ಪಟ್ಟಿತ್ತು. ಸುಮಾರು ಮೂರು-ನಾಲ್ಕು ದಶಕಗಳ ಹಿಂದೆ ಇದೇ ಸ್ಥಳದಲ್ಲಿ ಕನ್ನಡ ಚಲನಚಿತ್ರರಂಗದ ಅಧಿಕೃತ ಇತಿಹಾಸಕಾರರೆಂದೇ ಪ್ರಸಿದ್ಧರಾಗಿದ್ದ ಶ್ರೀ ಕಾನಕಾನಳ್ಳಿ ಗೋಪಿಯವರು ನಡೆಸುತ್ತಿದ್ದ ಸೇವಾದಳಕ್ಕೆ ಅಲ್ಲಿನ ಸುತ್ತ ಮುತ್ತಲಿನ ಬಡಾವಣೆಯ ಪುಟ್ಟ ಪುಟ್ಟ ಹುಡುಗರು ಹೋಗುವ ಮೂಲಕ ಶಿಸ್ತು ಮತ್ತು ಸಂಯಮಗಳನ್ನು ಕಲಿತುಕೊಳ್ಳುತ್ತಿದ್ದರು ಎಂದು ಅಲ್ಲಿನ ಹಿರಿಯರೊಬ್ಬರು ನೆನಪಿಸಿಕೊಂಡರು.

br4ಆನಂತರದ ದಿನಗಳಲ್ಲಿ ಮಹಾನಗರ ಪಾಲಿಕೆಯು ಆಸ್ತೆಯನ್ನು ವಹಿಸಿದ ಕಾರಣ ಅಲ್ಲೊಂದು ಸುಂದರವಾದ ಉದ್ಯಾನವನ ನಿರ್ಮಾಣವಾಗಿದ್ದು, ಸುಮಾರು 300 ಜನರು ಕುಳಿತು ನೋಡಬಹುದು ತೆರೆದ ಸಭಾಂಗಣವನ್ನೂ ಕಟ್ಟಲಾಗಿದೆ. ಇದರ ಜೊತೆಗೆ ವಾರಾಂತ್ಯಗಳಲ್ಲಿ ಸಂಗೀತ ಕಾರಂಜಿಯ ವ್ಯವಸ್ಠೆಯನ್ನೂ ಮಾಡಿದ್ದಾರೆ. ಕಹಳೇ ಬಂಡೆಯ ಇರುವ ಬಸವನಗುಡಿ ಹಾಗೂ ಹತ್ತಿರದ ಹನುಮಂತನಗರದ ಸಾಂಸ್ಕೃತಿಕ ಸಂಘಟನಾ ಕೂಟಗಳು ಅಗ್ಗಾಗ್ಗೆ ಇದೇ ಸ್ಥಳದಲ್ಲಿ ವಿವಿಧ ಬಗೆಯ ಅದೇ ರೀತಿ ನಾನಾ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಿದರೆ, ನಗರದ ಹೆಸರಾಂತ ವಾದ್ಯಗೋಷ್ಠಿಗಳು ಸಹಾ ಇಲ್ಲಿ ತಮ್ಮ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರ ಮನರಂಜಿಸುತ್ತಿರುವುದು ಶ್ಲಾಘನೀಯವಾಗಿದೆ.

br2ಮೂರು ದೇವಾಲಯಗಳನ್ನು ಒಳಗೊಂಡಿರುವ ಮತ್ತು ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯು ಅಭಿವೃದ್ಧಿಪಡಿಸಿದ ದಟ್ಟವಾದ ಮರಗಳಿಂದ ಕೂಡಿರುವ ಈ ಉದ್ಯಾನವನವನ್ನು ಪಾದಚಾರಿಗಳ ಸ್ವರ್ಗ (walkers paradise) ಎಂದೇ ಪರಿಗಣಿಸಲಾಗಿದ್ದು, ಪ್ರತಿದಿನವೂ ಸುಮಾರು 750 ರಿಂದ 1000 ಸಣ್ಣ ಮಕ್ಕಳಾದಿಯಾಗಿ ಜನರು ಈ ಉದ್ಯಾನಕ್ಕೆ ಭೇಟಿ ನೀಡಿದರೆ, ಅದದಲ್ಲಿ 70% ಹಿರಿಯ ನಾಗರಿಕರೇ ಇರುವುದು ಗಮನಾರ್ಹವಾಗಿದ್ದು ಉದ್ಯಾನ ನಗರಿಯಾದ ಬೆಂಗಳೂರಿನ ಹೆಸರನ್ನು ಮತ್ತಷ್ಟರ ಮಟ್ಟಿಗೆ ಅನ್ವರ್ಥ ಗೊಳಿಸುವಂತಿದೆ.

batಇಲ್ಲಿರುವ ಸುಮಾರು 50 ರಿಂದ 60 ವರ್ಷಗಳಷ್ಟು ಹಳೆಯದಾದ 40-50 ಅಡಿಯಷ್ಟು ಎತ್ತರವಿರುವ ರೂಸ್ಟ್ ಮರಗಳು ಉದ್ಯಾನದ ಮಧ್ಯ ಭಾಗದಲ್ಲಿದ್ದು ಅವುಗಳಿಗೆ ಬೇರಾವುದರಿಂದಲು ತೊಂದರೆ ಇರದ ಕಾರಣ, ಈ ಮರಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಾವಲಿಗಳು ಮರಕ್ಕೆ ನೇತು ಹಾಕಿಕೊಂಡಿರುವುದನ್ನು ಕಾಣಬಹುದಾಗಿದೆ. ಈ ಬಾವಲಿಗಳನ್ನು ಪರೀಕ್ಷಿಸಿರುವ ಜೀವಶಾಸ್ತ್ರಜ್ಞರು ಇದು ಬಹಳ ಅಪರೂಪದ ತಳಿಗಳು (ಪ್ಟೆರೋಪಸ್ ಗಿಗಾಂಟಿಯಸ್) ಎಂದು ಹೇಳಿರುವ ಕಾರಣ, ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರೇಟ್ ಹಲವು ವರ್ಷಗಳಿಂದ ಇಲ್ಲಿ ಗೂಡುಕಟ್ಟಿರುವ ಬಾವಲಿಗಳನ್ನು ಸಂರಕ್ಷಿಸಲು ಸಜ್ಜಾಗಿರುವುದು ಗಮನಾರ್ಹವಾಗಿದೆ.

br5ಕೆಂಪೇಗೌಡರ ಕಾಲದಲ್ಲಿ ಈ ಕಾವಲು ಗೋಪುರವನ್ನು ನಿರ್ಮಿಸುವ ಸಮಯದಲ್ಲಿ ಇಲ್ಲಿ ಕಟ್ಟಿದ ದೊಡ್ಡದಾದ ತೊಟ್ಟಿಯೊಂದು ಈಗಲೂ ಸಹಾ ಅತ್ಯುತಮವಾಗಿಯೇ ಇದ್ದು, ಅಂದಿನ ಕಾಲದಲ್ಲಿ . ಕಾವಲು ಕಾಯುವ ಸೈನಿಕರಿಗೆ ಇದೇ ತೊಟ್ಟಿಯಿಂದಲೇ ನೀರು ಪೂರೈಕೆಯಾಗುತ್ತಿತ್ತಂತೆ. ಸದ್ಯ ಈ ವೃತ್ತಾಕಾರದ ತೊಟ್ಟಿಯ ಗೋಡೆಯ ಮೇಲೆ ಶ್ರೀ ಕೆಂಪೇಗೌಡರು, ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಹಿರಿಯ ಸಾಹಿತಗಳಾಗಿದ್ದ ಶ್ರೀ ಡಿ ವಿ ಗುಂಡಪ್ಪನವರು, ಕನ್ನಡದ ಆಸ್ತಿ ಎಂದೇ ಪ್ರಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ತಾಯಿ ನಾಡು ಪತ್ರಿಕೆ ಖ್ಯಾತಿಯ ಶ್ರೀ ಪಿ.ಆರ್.ರಾಮಯ್ಯನವರು ಪತ್ರಕರ್ತರಾಗಿದ್ದಲ್ಲದೇ, ಸ್ವಾತಂತ್ರ್ಯಾ ನಂತರ ಕ್ಷೇತ್ರದ ಮೊದಲ ಶಾಸಕರಾಗಿದ್ದರು. ಗಾಂಧಿ ಬಜಾರ್‌ನಲ್ಲಿದ್ದ ಕಲಾಮಂದಿರದ ಸಂಸ್ಥಾಪಕರಾದ ಕಲಾವಿದ ಶ್ರೀ ಎ.ಎನ್. ಸುಬ್ಬರಾವ್, ವಕೀಲರಾದ ಶ್ರೀ ಎಂ.ಪಿ. ಸೋಮಶೇಖರ ರಾವ್ ಮತ್ತು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಶ್ರೀ ನಿಟ್ಟೂರು ಶ್ರೀನಿವಾಸ ರಾವ್ ಅಲ್ಲದೇ, ಬೆಂಗಳೂರಿನ ವಿಜಯಾ ಕಾಲೇಜಿನ ಸಂಸ್ಥಾಪಕರು ಮತ್ತು ಪ್ರಾಂಶುಪಾಲರಾಗಿದ್ದ ಪ್ರೊ. ವಿ.ಟಿ. ಶ್ರೀನಿವಾಸನ್, ಅಲ್ಲದೇ ಉಳಿದ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಮತ್ತು ಗಣ್ಯರ ಉಬ್ಬು ಚಿತ್ರಗಳ ಜೊತೆ ಅವರ ಬಗ್ಗೆ ಮಾಹಿತಿಯನ್ನೂ ಸಹಾ ಕೆತ್ತಲಾಗಿರುವುದು ವಿಶೇಷವಾಗಿದೆ.

bugual_rakಈ ಉದ್ಯಾನವನಕ್ಕೆ ಈ ಕ್ಷೇತ್ರದ ಶಾಸಕರು ಮತ್ತು ಸಂಸದರಾಗಿದ್ದ ಶ್ರೀ ಟಿ.ಆರ್ ಶಾಮಣ್ಣನವರ ಹೆಸರನ್ನು ಇಡುವ ಮೂಲಕ ಅವರ ಸಾಧನೆಗಳನ್ನು ಇಂದಿನ ಮಕ್ಕಳು ಸಹಾ ನೆನೆ ಮಾನವೀಯ ಮತ್ತು ಸ್ಥಳೀಯ ರಾಜಕಾರಣಿ. ಇದು ರಾಕಿ ಮೆಟ್ಟಿಲುಗಳೊಂದಿಗೆ ಭೂದೃಶ್ಯದೊಂದಿಗೆ ಸುಗಮಗೊಳಿಸಲ್ಪಟ್ಟಿದೆ. ಪ್ರಭಾವಶಾಲಿ ಪ್ರವೇಶದ್ವಾರವನ್ನು ಕಲ್ಲಿನ ಕಂಬಗಳಿಂದ ಕೆತ್ತಲಾಗಿದೆ ಮತ್ತು ನೀರಿನ ತೊಟ್ಟಿಯ ಬಳಕೆಯಾಗದ ಹೊರ ಗೋಡೆಯ ಮೇಲೆ ಭಿತ್ತಿಚಿತ್ರಗಳನ್ನು ಸೇರಿಸುವ ಮೂಲಕ ಪ್ರಸಿದ್ಧ ವ್ಯಕ್ತಿಗಳ ಮುಖಗಳ ಕೆತ್ತನೆಗಳನ್ನು ಮಾಡಲಾಗಿದೆ.

br8ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಬಸವನ ಗುಡಿಯ ದೊಡ್ಡಗಣೇಶ ಮತ್ತು ಬಸವಣ್ಣನ ದರ್ಶನ ಪಡೆದು ಹಾಗೇ ಕಹಳೆ ಬಂಡೆಯ ಟಿ.ಆರ್.ಶಾಮಣ್ಣ ಉದ್ಯಾನವನದ ಆಹ್ಲಾದಕರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

4 thoughts on “ಕಹಳೆ ಬಂಡೆ (ಬ್ಯೂಗಲ್ ರಾಕ್)

  1. ಎಂದಿನಂತೆ ಸೊಗಸಾದ ಲೇಖನ. ಇಲ್ಲಿ ” ನಾ ಮೆಚ್ಚಿದ ಹುಡುಗನಿಗೆ ” ಗೀತೆಯ ಚಿತ್ರೀಕರಣವೂ ಆಗಿದೆ. ಶ್ರೀನಾಥ್, ಕಲ್ಪನಾ ಕಲಾವಿದರು.

    Liked by 1 person

Leave a reply to ಶ್ರೀಕಂಠ ಬಾಳಗಂಚಿ Cancel reply