ಪಡುಮುಂಡು ಕಲ್ಲು ಗಣಪತಿ ದೇವಸ್ಥಾನ

kallu4ಹೇಳೀ ಕೇಳಿ ಅವಿಭಜಿತ ದಕ್ಷಿಣ ಕನ್ನಡ ದೇವಾಲಯಗಳ ಬೀಡು. ಅದರಲ್ಲೂ ಉಡುಪಿ ಬಳಿಯ ಸುಮಾರು 365 ದೇವಾಲಯಗಳು ಇರುವ ಬಾರ್ಕೂರು ಮತ್ತು ಸುತ್ತಮುತ್ತಲಂತೂ ದೇವಾಲಗಳ ತವರೂರು ಎಂದರೂ ಅತಿಶಯವಲ್ಲ. ಅಂತಹ ಬಾರ್ಕೂರಿನ ಹತ್ತಿರದ ಶಿರಿಯಾರ ಗ್ರಾಮದ ಪ್ರಕೃತಿಯೇ ನಿರ್ಮಿಸಿದ ಮೂರು ಅಂತಸ್ತಿನ ಪಡುಮುಂಡು ಕಲ್ಲು ಗಣಪತಿ ದೇವಸ್ಥಾನದ ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಪ್ರಸ್ತುತ ಆಧುನಿಕವಾಗಿ ಇಷ್ಟೆಲ್ಲಾ ಮುಂದುವರೆದಿರುವಾಗ ಇಂದಿನವರು ನಾವು ಆ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದ್ದೇವೆ. ಇದನ್ನು ಮಾಡಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೆ ತಟ್ಟಿಕೊಳ್ಳುವುದನ್ನು ನೋಡುತ್ತೇವೆ. ಆದರೆ ಈ ರೀತಿಯ ಯಾವುದೇ ಸೌಲಭ್ಯಗಳಾಗಲೀ, ಸೌಕರ್ಯಗಳಾಗಲೀ ಇಲ್ಲದೇ ಇರುವಾಗಲೇ ನಮ್ಮ ಹಿಂದಿನವರು ಅದೆಷ್ಟೋ ದೇವಾಲಯಗಳನ್ನು ತಾಂತ್ರಿಕವಾಗಿ ಇಂದಿನವರಿಗೂ ಕಂಡು ಹಿಡಿಯಲು ಸಾಧ್ಯವಾಗದ ಹಾಗೆ ಕಟ್ಟಿರುವುದು ನೋಡಿದಾಗ ಬೆಚ್ಚಿ ಬೀಳುವಂತಾಗುತ್ತದೆ. ಅಂತಹ ಅದೆಷ್ಟೋ ದೇವಾಲಯಗಳು ಇತ್ತೀಚಿನವರೆಗೂ ಅಜ್ಞಾತವಾಗಿಯೇ ಇದ್ದು ಈಗ ಬೆಳಕಿಗೆ ಬಂದು ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. ಉಡುಪಿ ಜಿಲ್ಲೆಯ ಶಿರಿಯಾರ ಗ್ರಾಮದ ಪಡುಮುಂಡುವಿನ ಈ ಕಲ್ಲು ಗಣಪತಿ ದೇವಾಲಯವು ಸಹಾ ಅದೇ ರೀತಿಯ ಅನ್ವೇಷಿಸದ ಪ್ರಾಚೀನ ಸ್ಥಳವಾಗಿದೆ ಎಂದರೂ ಅತಿಶಯವಾಗದು. ಕಾಡಿನ ನಡುವೆ ಪ್ರಶಾಂತವಾದ ಬಂಡೆಯ ಗುಹೆಯೊಳಗೆ ಸ್ಥಾಪಿಸಲಾದ ಈ ದೇವಾಲಯವು ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.

kallu1ಮೂರು ಅಂತಸ್ತಿನ ಪ್ರಕೃತಿ ನಿರ್ಮಿತ ಕಲ್ಲುಬಂಡೆಗಳಿಂದ ಕೂಡಿದ ಗುಹಾಂತರ ದೇವಾಲಯ ಪ್ರಕೃತಿಯ ಮಡಿಲಲ್ಲಿ ಹಸಿರು ಹೊದಿಕೆಯ ನಡುವೆ ಭಕ್ತಾದಿಗಳ ಹೃನ್ಮನಗಳನ್ನು ತಣಿಸುತ್ತದೆ. ಬೃಹದಾಕಾರದ ಒಂದರ ಮೇಲೆ ಒಂದು ಜೋಡಿಸಿರುವ ಕಲ್ಲುಬಂಡೆಗಳ ನಡುವೆ ಶಿವ, ಪಾರ್ವತಿ ಮತ್ತು ಗಣಪತಿ ಇಲ್ಲಿ ವಿರಾಜಮಾನವಾಗಿರುವುದು ವಿಶೇಷವಾಗಿದ್ದು, ಎಂದಿನ ರೀತಿಯ ವಿಶೇಷವಾದ ಕಟ್ಟಡಗಳಿಲ್ಲದೇ ಕಲ್ಲುಗಳ ನಡುವೆಯೇ ಇರುವುದರಿಂದ ಇದು ಕಲ್ಲು ಗಣಪತಿ ದೇವಸ್ಥಾನ ಎಂದೇ ಪ್ರಸಿದ್ಧವಾಗಿದೆ. ಇಲ್ಲಿನ ಇತಿಹಾಸ ಪ್ರಕಾರ ಈ ದೇವಾಲಯವನ್ನು 12ನೇ ಶತಮಾನದಲ್ಲಿ ಈ ತುಳುನಾಡನ್ನು ಆಡಳಿತ ಮಾಡಿದ ಭೂತಾಳ ಪಾಂಡ್ಯ ಎಂಬ ರಾಜನು ಸ್ಥಾಪಿಸಿದನು ಎಂಬ ಪ್ರತೀತಿ ಇದೆ. ಈ ಆಧುನಿಕ ಯುಗದಲ್ಲಿ ಮನುಷ್ಯ ತಾನು ಎಷ್ಟೋಂದು ಮುಂದುವರೆದು ತಾನು ನಿರ್ಮಿಸಿದ್ದೇ ಶ್ರೇಷ್ಠ ಎಂಬ ಅಹಂ ಮನಸ್ಥಿತಿಯನ್ನು ಇಟ್ಟುಕೊಂಡು ಈ ದೇವಾಲಯಕ್ಕೆ ಬಂದಾಗ, ಖಂಡಿತವಾಗಿಯೂ ಇಲ್ಲಿನ ದೇವಾಲಯವನ್ನು ನೋಡಿದ ಕೂಡಲೇ ಅವನ ಅಹಂಕಾರವೆಲ್ಲವೂ ಜರ್ ಎಂದು ಇಳಿದು ಇಲ್ಲಿನ ಪ್ರಕೃತಿಯ ಮುಂದೆ ಖಂಡಿತವಾಗಿಯೂ ತಲೆ ಬಾಗಲೇಬೇಕು. ಇಲ್ಲಿ ಪ್ರಕೃತಿ ತಾನೂ ಎಲ್ಲದ್ದಕ್ಕಿಂತಲು ಮಿಗಿಲು ಎಂಬುದನ್ನು ಈ ದೇವಾಲಯದ ಮೂಲಕ ಸೂಚ್ಯವಾಗಿ ತೋರಿಸುತ್ತದೆ.

kallu7ಎತ್ತೆರೆತ್ತದ ಮರಗಳನ್ನು ದಾಟಿಕೊಂಡು ಗದ್ದೆಗಳ ಮಧ್ಯದ ರಸ್ತೆಯಲ್ಲಿ ಸಾಗಿ ಮುಂದುವರಿದು ಈ ಕ್ಷೇತ್ರವನ್ನು ತಲುಪಿದಾಗ, ಮನುಷ್ಯರು ತೆರಳುವುದಕ್ಕೆ ಕಷ್ಟವಾಗಿರುವಂತಹ ಇಂತಹ ದುರ್ಗಮ ಪ್ರದೇಶದಲ್ಲಿ ಇಷ್ಟು ಸುಂದರವಾದ ಕಲ್ಲಿನ ಗುಡಿ‌ ನಿರ್ಮಿಸಿದ್ದು ಹೇಗೆ ಒಂದು ಕ್ಷಣ ಎಲ್ಲರಿಗೂ ಸಹಜವಾಗಿಯೂ ಮೂಡುತ್ತದೆ. ದೇಗುಲದ ಆರಂಭದಲ್ಲಿನ ಸುಂದರ ಕಲ್ಲಿನ ಮೆಟ್ಟಿಲುಗಳನ್ನು ಹತ್ತುತ್ತಾ, ಹಾಗೇ ಮೆಟ್ಟಿಲುಗಳನ್ನು ಹತ್ತುತ್ತಲೇ, ಸ್ವಲ್ಪ ಎತ್ತಿ ನೋಡುತ್ತಿದ್ದಂತೆಯೇ ಎದೆ ಝಲ್ ಎನ್ನಿಸುವಂತೆ ಎರಡು ಬಂಡೆಗಳ ಮಧ್ಯೆ ಒಂದಕ್ಕೊಂದು ಅಂಟಿದಂತೆ ಸಿಲುಕಿ ನಿಂತಿರುವ ಬೃಹತ್ ಗಾತ್ರದ ಕಲ್ಲುಗಳು ನಮ್ಮ ತಲೆಯ ಮೇಲೆ ಬಿದ್ದರೆ ಏನು ಗತಿ? ಎನ್ನುವ ಯೋಚನೆಯೂ ಬರುತ್ತದೆ. ಆ ಬೃಹತ್ ಬಂಡೆಗಳ ನಡುವಿನ ರಂಧ್ರಗಳ ಮೂಲಕ ಚಾಚುವ ಸೂರ್ಯನ ಬೆಳಕು ಮನಸ್ಸಿಗೆ ಅತ್ಯಂತ ಮುದ ನೀಡುತ್ತದೆ. ಈ ಗುಹಾಂತರ ದೇವಾಲಯವನ್ನು ನೋಡುತ್ತಿದ್ದಾಗ ಅದು ಸ್ವಲ್ಪ ಉತ್ತರ ಕನ್ನಡದ ಯಾಣವನ್ನು ನೆನಪಿಸಿದರೂ, ಯಾಣದಲ್ಲಿರುವ ಸೀಳು ಬಂಡೆಗಳಿಗೂ ಇಲ್ಲಿರುವ ಬಂಡೆಗಳಿಗೂ ಬಹಳ ವ್ಯತ್ಯಸವಿದೆ. ಹೀಗೆ ಬಂಡೆಗಳನ್ನು ಏರಿ ಮೇಲೆ ಹೋದ ಕೂಡಲೇ ದೇವಸ್ಥಾನದ ಬಳಿಯ ವಾರಾಹಿ ನದಿಯನ್ನು ನೋಡುತ್ತಿದ್ದಂತೆಯೆ ನಮ್ಮೆಲ್ಲಾ ದುರಾಲೋಚನೆಗಳೂ ದೂರವಾಗಿ ಅಹ್ಲಾದಕರ ಅನುಭವವನ್ನು ಕೊಡುತ್ತದೆ.

kallu2ಸಾಮಾನ್ಯವಾಗಿ ಬಹುತೇಕ ಕಡೆ ಗಣೇಶನ ದೇವಾಲಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ಜೊತೆಯಲ್ಲಿ ಶಿವ, ಪಾರ್ವತಿಯರು ಇದ್ದು ಅವೆರಡೂ ಉದ್ಬವ ದೇವರುಗಳು ಎನ್ನುವುದು ಇಲ್ಲಿನ ವಿಶೇಷವಾಗಿದೆ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಇಲ್ಲವೇ ಕೆಲವೊಂದು ವಿಶೇಷ ಸಂಧರ್ಭದಲ್ಲಿ ಮಾತ್ರಾ ಕೆಲವು ದೇವಾಲಯಗಳಲ್ಲಿ ಸೂರ್ಯನ ಕಿರಣಗಳು ನೇರವಾಗಿ ಗರ್ಭಗುಡಿಯಲ್ಲಿರುವ ದೇವರ ಮೇಲೆ ಕೆಲವೇ ಕೆಲವು ಕ್ಷಣಗಳು ಮಾತ್ರವೇ ಬೀಳುವ ವಿಷಯವನ್ನು ಕೇಳಿದ್ದೇವೆ. ಆದರೆ ಇಲ್ಲಿ ಪ್ರತಿ ದಿನ ಮುಂಜಾನೆ ಸುಮಾರು ಅರ್ಧಗಂಟೆಗಳ ಕಾಲ ಸೂರ್ಯನ ಕಿರಣಗಳು ದೇವಾಲಯದ ದ್ವಾರವನ್ನು ದಾಟಿಕೊಂಡು ಬೃಹತ್ತಾದ ಬಂಡೆಗಳನ್ನು ಸೀಳಿಕೊಂಡು ಪಾರ್ವತಿ ಪರಮೇಶ್ವರರ ಮೇಲೆ ಬೀಳುವ ಮೂಲಕ ಆ ಎರಡೂ ದೇವರುಗಳು ಅತ್ಯಂತ ಪ್ರಕಾಶ ಮಾನವಾಗಿ ಕಾಣುವುದು ಇಲ್ಲಿನ ವಿಶೇಷವಾಗಿದೆ. ಸುಮಾರು ಶತಮಾನಗಳಿಂದಲೂ ಜನರಿಗೆ ಅಪರಿಚಿತವಾಗಿಯೇ ಇದ್ದ ಈ ದೇವಾಲಯ, ಇತ್ತೀ‍ಚಿನ ವರ್ಷಗಳಲ್ಲಿ ಸಿನಿಮಾ ಚಿತ್ರೀಕರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರದಿಂದಾಗಿ ಪ್ರಾಮುಖ್ಯತೆ ಪಡೆದುಕೊಂಡು ಹೆಚ್ಚು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿ ಮೆಚ್ಚಿಕೊಳ್ಳ ಬೇಕಾದ ಮತ್ತೊಂದು ಅಂಶವೆಂದರೆ, ಇದು ಗುಹಾಂತರ ದೇವಾಲಯವಾದರೂ ಬಹಳ ಉತ್ತಮವಾಗಿ ನಿರ್ವಹಿಸಲಾಗಿದ್ದು ಪ್ರತಿದಿನವೂ ಶ್ರದ್ಧಾ ಭಕ್ತಿಯಿಂದ ಪೂಜೆ ಪುನಸ್ಕಾರಗಳು ನಡೆಯುತ್ತಿದೆಯಲ್ಲದೇ, ಹೊರಗೆ ಎಷ್ಟೇ ಬಿಸಿಲಿದ್ದರೂ, ಬಂಡೆಗಳ ಕೆಳಗಿರುವ ಈ ದೇವಾಲದಲ್ಲಿ ವರ್ಷದ ೩೬೫ ದಿನಗಳೂ ತಂಪಾಗಿರುತ್ತದೆ.

ಶ್ರಧ್ಧಾ ಭಕ್ತಿಯಿಂದ ಈ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತಲ್ಲಿ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇರುವ ಕಾರಣ ಸ್ಥಳೀಯರು ಆಗ್ಗಾಗ್ಗೆ ಇಲ್ಲಿ ರಂಗಪೂಜೆಗಳನ್ನು ನಡೆಸುವುದು ಇಲ್ಲಿನ ವಿಶೇಷವಾಗಿದೆ. ದೇವರ ಮೇಲೆ ನಂಬಿಕೆ ಇಲ್ಲದೇ, ಮೋಜು ಮಸ್ತಿ ಇಲ್ಲವೇ ಪ್ರವಾಸಿ ತಾಣ, ಚಿತ್ರೀಕರಣ ತಾಣ, ಇಲ್ಲವೇ ಮನಸ್ಸಿನಲ್ಲಿ ಬೇರೇ ದುರುದ್ದೇಶವಿಟ್ಟು ಕೊಂಡು ಬಂದರೆ ಖಂಡಿತವಾಗಿಯೂ ಅದರ ಶಾಪ ತಟ್ಟುತ್ತದೆ ಎನ್ನುವುದು ಸ್ಥಳೀಯರ ನಂಬಿಕೆಯಾಗಿದ್ದು, ಇದಕ್ಕ ಪುರಾವೆ ಎನ್ನುವಂತೆ ಇಲ್ಲಿ ಚಿತ್ರೀಕರಣವಾಗಿರುವ ಬಹುತೇಕ ಕನ್ನಡ ಚಲನಚಿತ್ರಗಳು ನೆಲಕಚ್ಚಿವೆ ಎಂದು ಇಲ್ಲಿಯವರು ಹೇಳುತ್ತಾರೆ.

ದೇವರ ದರ್ಶನವನ್ನು ಮಾಡಿದ ನಂತರ ಕೆಲ ಕಾಲ ಆ ದೇವಾಲಯದ ಸುತ್ತಮುತ್ತಲಿನ ಕೃಷಿಭೂಮಿಯಲ್ಲಿ ಹಚ್ಚ ಹಸುರಾಗಿ ಕಾಣುವ ಭತ್ತದ ಗದ್ದೆಗಳು ಅದರ ನಡುವೆಯೇ ಬೈತಲೆಯಂತೆ ಹಾದು ಹೋಗುವ ವರ್ಷದ 365 ದಿನಗಳೂ ನೀರಿರುವ ವಾರಾಹಿ ನದಿ ಅತ್ಯಂತ ರಮಣೀಯವಾಗಿದ್ದು, ಸ್ವಲ್ಪವೇ ದೂರದಲ್ಲಿ ಆ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಎಲ್ಲವನ್ನೂ ನೋಡುತ್ತಾ ನಿಂತಲ್ಲಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ ದೇವರ ಮೇಲೆ ನಂಬಿಕೆ ಇರುವವರು, ಭಕ್ತಿಭಾವದಿಂದ ದೇವರನ್ನು ಪೂಜಿಸುವ ಮನಸ್ಸಿದ್ದವರು ಜೊತೆಯಲ್ಲಿ ಸ್ವಲ್ಪ ಪ್ರಕೃತಿ ಸೌಂದರ್ಯವನ್ನು ಸವಿಯಬೇಕು ಎಂಬ ಸದುದ್ದೇಶವಿದ್ದವರು ಖಂಡಿತವಾಗಿಯೂ ಪ್ರಕೃತಿ ಮಡಿಲಿನಲ್ಲಿರುವ ಈ ದೇವಸ್ಥಾನಕ್ಕೆ ಅವಶ್ಯವಾಗಿ ಒಮ್ಮೆಯಾದರೂ ಭೇಟಿ ನೀಡಲೇಬೇಕು ಎಂದರೂ ತಪ್ಪಾಗದು.

kallu6ಈ ಕಲ್ಲು ಗಣಪತಿ ದೇವಸ್ಥಾನವು ಉಡುಪಿಯಿಂದ ಉತ್ತರಕ್ಕೆ ಸುಮಾರು 30 ಕಿಮೀ, ಕುಂದಾಪುರದಿಂದ ದಕ್ಷಿಣಕ್ಕೆ ಸುಮಾರು 20 ಕಿಮೀ ದೂರವಿದ್ದು ಬಸ್ಸಿನಲ್ಲಿ ಬರುವಾರು ಕುಂದಾಪುರದ ಬ್ರಹ್ಮಾವರದಿಂದ ಸಾಯಿಬ್ರಕಟ್ಟೆ ತಲುಪಿ ಅಲ್ಲಿಂದ ಕಸುವಿದ್ದವರು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಸುಮಾರು 4 ಕಿ.ಮೀ. ನಡೆದುಕೊಂಡು ಹೋಗಬಹುದು ಇಲ್ಲವೇ ಅಲ್ಲಿ ಸಿಗುವ ಬಾಡಿಗೆ ಆಟೋ ಮೂಲಕವೂ ತಲುಪಬಹುದು. ಅದೇ ರೀತಿ ಸಾಯಬ್ರಕಟ್ಟೆಯಿಂದ ಹಾಲಾಡಿ ಕಡೆಗೆ ಹೋಗುವ ಬಸ್ಸುಗಳಲ್ಲಿ ಹತ್ತಿ ಕುದುರೆಕಟ್ಟೆ ಎಂಬ ಹಳ್ಳಿಯ ಬಳಿ ಇಳಿದರೆ ಅಲ್ಲಿಂದ ಕೇವಲ 2.5 ಕಿಮೀ ದೂರದಲ್ಲಿರುವ ದೇವಾಲಯಕ್ಕೆ ನಡೆದು ಕೊಂಡೋ ಇಲ್ಲವೇ ಆಟೋ ಮೂಲಕ ಹೋಗಬಹುದು. ಸ್ವಂತ ಕಾರು ಇಲ್ಲವೇ ಸಾರಿಗೆಯ ಮೂಲಕ ಕುಟುಂಬದವರೆಲ್ಲರೂ ಒಟ್ಟಾಗಿ ಹೋಗುವುದು ಉತ್ತಮ. ದೇವಾಲಯದ ಪಕ್ಕದಲ್ಲಿ ಅರ್ಚಕರ ಮನೆ ಬಿಟ್ಟರೆ ಮತ್ತೇನೂ ಇಲ್ಲದ ಕಾರಣ, ಊಟ ತಿಂಡಿ ಎಲ್ಲವನ್ನೂ ತೆಗೆದುಕೊಂಡು ಹೋಗುವುದು ಉತ್ತಮ.

ಕಲ್ಲು ಗಣಪತಿ ದೇವಸ್ಥಾನದಿಂದ ಕೇವಲ 4-5 ಕಿಲೋಮೀಟರ್ ದೂರದಲ್ಲಿ ಮೆಕ್ಕೆಕಟ್ಟು ನಂದಿಕೇಶ್ವರ ದೇವಸ್ಥಾನವಿದ್ದರೆ, ಅದರ ಹತ್ತಿರದಲ್ಲೇ, ಭಾರತದ ಏಕೈಕ ಜಲಧಿವಾಸ ಗಣಪತಿ ದೇವಾಲಯ ಎಂದೇ ಜನಪ್ರಿಯವಾಗಿರುವ ಗುಡ್ಡಟ್ಟು ವಿನಾಯಕ ದೇವಸ್ಥಾನವಿದೆ, ಇನ್ನು ಮಂದಾರ್ತಿ ದೇವಸ್ಥಾನ, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನಗಳು ಸಹಾ 10 ಕಿಮೀ ವ್ಯಾಪ್ತಿಯಲ್ಲಿದ್ದು ವಾರಾಂತ್ಯದಲ್ಲಿ ಸ್ವಲ್ಪ ಸಮಯಮಾಡಿಕೊಂಡು ಈ ಎಲ್ಲಾ ದೇವಾಲಗಳ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

Leave a comment