ನಾಗೇಶ್ವರ-ಚೆನ್ನಕೇಶವ ದೇವಾಲಯ ಸಂಕೀರ್ಣ, ಮೊಸಳೆ

ಹೇಳೀ ಕೇಳಿ ಕರ್ನಾಟಕ ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ನಾಡು. ಅದರಲ್ಲಿಯೂ ಹಾಸನ ಜಿಲ್ಲೆಯಲ್ಲಿರುವ ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲಿಯೂ ಒಂದೊಂದು ಸುಂದರವಾದ ದೇವಾಲಯಗಳನ್ನು ಹೊಯ್ಸಳರ ಕಾಲದಲ್ಲಿ ಕಟ್ಟಲಾಗಿದ್ದು ಅವುಗಳಲ್ಲಿ ಬೇಲೂರು, ಹಳೇಬೀಡು ದೇವಾಲಯಗಳು ತಮ್ಮ ಅದ್ಭುತವಾದ ಶಿಲ್ಪಕಲೆಗಳಿಂದ ಜಗತ್ಪ್ರಸಿದ್ದಿಯನ್ನು ಪಡೆದಿದ್ದರೆ, ಅವುಗಳಷ್ಟೇ ಸುಂದರವಾದ ಇನ್ನೂ ನೂರಾರು ದೇವಾಲಯಗಳು ಹೆಚ್ಚಿನ ಜನರ ಗಮನಕ್ಕೇ ಬಾರದೇ ಹೋಗಿದೆ. ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ಹಾಸನದಿಂದ ಕೇವಲ 10 ಕಿಮೀ ದೂರದ ಮೊಸಳೆ ಎಂಬ ಗ್ರಾಮದಲ್ಲಿರುವ ನಾಗೇಶ್ವರ-ಚೆನ್ನಕೇಶವ ಅರ್ಥಾತ್ ಅವಳಿ ಹರಿ ಹರೇಶ್ವರ ದೇವಾಲಯದ ಬಗ್ಗೆ ತಿಳಿಯೋಣ ಬನ್ನಿ.

mosale1ಹಿಂದೂ ಸಂಪ್ರದಾಯದಲ್ಲಿ ಶಿವನನ್ನು ಆರಾಧಿಸುವವರನ್ನು ಶೈವರೆಂದೂ ವಿಷ್ಣುವಿನನ್ನು ಆರಾಧಿಸುವರನ್ನು ವೈಷ್ಣವರೆಂದೂ ಕರೆಯಲಾಗುತ್ತದೆ. ಹಾಗಾಗಿ ಶೈವರು ಮತ್ತು ವೈಷ್ಣವರು ತಮ್ಮ ತಮ್ಮ ಶ್ರದ್ಧಾ ಭಕ್ತಿಗೆ ಅನುಸಾರ ದೇವಾಲಯಗಳನ್ನು ನಿರ್ಮಿಸಿಕೊಂಡು ಭಗವಂತನನ್ನು ಆರಾಧಿಸುತ್ತಾರೆ. ಅದಕ್ಕೆ ಪ್ರತೀಕ ಎನ್ನುವಂತೆ ಸುಮಾರು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುವ ಬೇಲೂರಿನ ಚನ್ನಕೇಶವ ದೇವಾಲಯ ವಿಷ್ಣು ದೇವರಿಗೆ ಅರ್ಪಿತವಾಗಿದ್ದರೆ, ಹಳೇಬೀಡಿನ ದೇವಾಲಯ ಶಿವನಿಗೆ ಸಮರ್ಪಿಸಲಾಗಿದೆ. ಹೊಯ್ಸಳರು ಬೇಲೂರು ಮತ್ತು ಹಳೇಬೀಡಿನಲ್ಲಿ ಈ ದೇವಾಲಯಗಳನ್ನು ನಿರ್ಮಿಸುವ ಮುನ್ನಾ ಅದರ ಪ್ರತಿಕೃತಿಯಂತೆ ಹರಿ ಮತ್ತು ಹರನ ಈ ನಾಗೇಶ್ವರ ಮತ್ತು ಚೆನ್ನಕೇಶವ ಆವಳಿ ದೇವಾಲಯವನ್ನು  ಮೊಸಳೆ ಗ್ರಾಮದಲ್ಲಿ ಸುಮಾರು 11ನೇ ಶತಮಾನದಲ್ಲಿ ನಿರ್ಮಿಸಿ, ನಂತರ ಅದರ ಸಾಧಕ ಬಾಧಕಗಳನ್ನು ಗಮನಿಸಿ ಮತ್ತಷ್ಟು ಸುಧಾರಣೆ ಮಾಡಿ  ಮತ್ತಷ್ಟು ವೈಭೋಗದ ದೇವಾಲಯಗಳನ್ನು ಬೇಲೂರು ಮತ್ತು ಹಳೇಬೀಡಿನಲ್ಲಿ ನಿರ್ಮಿಸಿದರು ಎನ್ನಲಾಗುತ್ತದೆ. 

parushu3ಇನ್ನೂ ಈ ಊರಿಗೆ ಮೊಸಳೆ ಎಂಬ ಹೆಸರು ಬರಲೂ ಸಹಾ ಅದ್ಭುತವಾದ ಮೂರ್ನಾಲ್ಕು ಹಿನ್ನಲೆ ಇದೆ. ಪ್ರಾಚೀನ ಕಾಲದಲ್ಲಿ ಜಮದಗ್ನಿ ಮಹರ್ಷಿಗಳು ತಮ್ಮ ಪತ್ನಿ ರೇಣುಕಾ ಜೊತೆಯಲ್ಲಿ ಈ ಸ್ಥಳದಲ್ಲಿ ಕುಟೀರವನ್ನು ನಿರ್ಮಿಸಿ, ವಾಸಿಸುತ್ತಿದ್ದರಂತೆ ಸಂಸ್ಕೃತದಲ್ಲಿ ಮುಸಲಿ ಎಂದರೆ ಪರಶು ಅರ್ಥಾತ್ ಕೊಡಲಿ ಎಂದರ್ಥ. ಇದೇ ಜಮದಗ್ನಿಗಳ ಮಗನಾಗಿ ಭಗವಾನ್ ವಿಷ್ಣು ತನ್ನ ದಶಾವತಾರದಲ್ಲಿ ಒಂದು ಅವತಾರವಾಗಿದ್ದ ಪರುಶುರಾಮನಾಗಿ ಅವತರಿಸಿದ ಕುರುಹಾಗಿ ಈ ಗ್ರಾಮಕ್ಕೆ ಮುಸಲಿ ಎಂಬ ಹೆಸರಾಗಿ ನಂತರ ಜನರ ಆಡು ಭಾಷೆಯಲ್ಲಿ ಅದು ಅಪ್ರಭ್ರಂಷವಾಗಿ ಮೊಸಳೆ ಎಂದಾಗಿದೆ ಎಂದರೆ ಮತ್ತೊಂದು ಐತಿಹ್ಯದ ಪ್ರಕಾರ ಮುಸಲ ಅಂದರೆ ಕುಟ್ಟಾಣಿ ಎಂಬ ಅರ್ಥವಿದ್ದು ಅದೇ ಮುಸಲ ಮುಂದೆ ಮೊಸಳೆ ಎಂದೇ ಪ್ರಖ್ಯಾತವಾಯಿತು ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ಮತ್ತೊಬ್ಬರು ಹೇಳಿದ ಪ್ರಕಾರೆ ಅದೊಮ್ಮೆ ಈ ಪ್ರದೇಶದಲ್ಲಿ ಮುಸಲಧಾರೆ ಅಂದರೆ ಒನಕೆ ಗಾತ್ರದಷ್ಟು ದಪ್ಪ ದಪ್ಪ ಹನಿಯ ಮಳೆ ಸುರಿದ ಪರಿಣಾಮ ಈ ಸ್ಥಳ ಮುಸಲೆ ನಂತರ ಅದೇ ಮೊಸಳೆ ಎಂದೇ ಹೆಸರಾಯಿತು ಎಂದರೆ, ಮತ್ತೊಂದು ಕಥೆಯಂತೆ, ಈ ಊರಿನಲ್ಲಿ ದೊಡ್ಡ ಮತ್ತು ಚಿಕ್ಕ ಎರಡು ಕೆರೆಗಳಿದ್ದು, ಈ ಹಿಂದೆ ನಾಗೇಶ್ವರ-ಚೆನ್ನಕೇಶವ ದೇವಾಲಯದ ಸಮೀಪವೇ ಇರುವ ದೊಡ್ದ ಕೆರೆಯಲ್ಲಿ ಹೇರಳವಾದ ಬಸಳೆ ಸೊಪ್ಪು (ಬಾಯಿ ಬಸಳೆ ಸೊಪ್ಪು) ಬೆಳೆಯುತ್ತಿತ್ತಂತೆ. ಕೇವಲ ಆ ಊರಿನವರಲ್ಲದೇ, ಅಕ್ಕ ಪಕ್ಕದ ಊರಿನವರೆಲ್ಲರೂ ಈ ಬಸಳೆ ಸೊಪ್ಪನ್ನು ಕೊಯ್ದುಕೊಂಡು ಹೋಗಿ ತಮ್ಮ ಮನೆಯ ಅಡುಗೆಯಲ್ಲಿ ಬಳಸುತ್ತಿದ್ದರಂತೆ. ಹಾಗೆ ಪರ ಊರಿನಿಂದ ಈ ಊರಿಗೆ ಬರುವಾಗ ಎಲ್ಲಿಗೆ ಹೋಗ್ತಾ ಇದ್ದೀರಿ ಎಂದಾಗ ಬಸಳೇ ತರಲು ಹೋಗ್ತಾ ಇದ್ದೀವಿ ಎಂದು ಹೇಳುತ್ತಾ ಆದೇ ಬಸಳೆ ಮುಂದೆ ಅಪಭ್ರಂಷವಾಗಿ ಮೊಸಳೆ ಎಂದು ಹೆಸರಾಯಿತು. ಹೀಗೆ ದೇವನೊಬ್ಬ ನಾಮ ಹಲವು ಎನ್ನುವಂತೆ ಈ ಗ್ರಾಮಕ್ಕೆ ಮೊಸಳೆ ಎಂದು ಹೆಸರು ಬರಲು ಈ ರೀತಿಯಾಗಿ ಮೂರ್ನಾಲ್ಕು ವಿಶೇಷ ಹಿನ್ನಲೆ ಇರುವುದು ಗಮನಾರ್ಹವಾಗಿದೆ.

veera_ballalaಅದೇ ರೀತಿಯಲ್ಲಿ ಶಿವ ವಿಷ್ಣುವಿನ ದೇವಾಲಯವನ್ನೂ ಒಂದೇ ಸಂಕೀರ್ಣದಲ್ಲಿ ಕಟ್ಟಿಸಲಾಗಿರುವ ಹಿಂದೆಯೂ ಒಂದು ದೃಷ್ಣಾಂತವಿದೆ. 11ನೇ ಶತಮಾನದಲ್ಲಿ ಹೊಯ್ಸಳರ ದೊರೆ ವೀರಬಲ್ಲಾಳರು ಆಳುತ್ತಿದ್ದ ಸಮಯದಲ್ಲಿ ಈ ಗ್ರಾಮದಲ್ಲಿನ ಜಾತ್ರೆಯ ಸಮಯದಲ್ಲಿ ದೇವರ ಪೂಜೆಯ ಕುರಿತಾಗಿ ಶೈವರಿಗೂ ಮತ್ತು ವೈಷ್ಣವರ ನಡುವೆ ವೈಮನಸ್ಯ ಉಂಟಾದಾಗ, ಅವರಿಬ್ಬರನ್ನೂ ಒಗ್ಗೂಡಿಸಿ ಭಾವೈಕ್ಯತೆಯನ್ನು ಮೂಡಿಸುವ ಸಲುವಾಗಿ ಈ ಅವಳಿ ದೇವಾಲಯಗಳನ್ನು ನಿರ್ಮಿಸಲಾಗಿದೆ ಎನ್ನುತ್ತಾರೆ ಸ್ಥಳೀಯರು. ಇನ್ನು 15ನೇ ಶತಮಾನದಲ್ಲಿ ಜೈನರೂ ಸಹಾ ಈ ಗ್ರಾಮದಲ್ಲಿ ಇದ್ದರು ಎನ್ನುವುದಕ್ಕೆ ಅನೇಕ ಪುರಾವೆಗಳಿದ್ದು ಈ ಗ್ರಾಮ ಅಕ್ಷರಶಃ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು ಎಂದರೂ ಅತಿಶಯವಲ್ಲ.

hoysala1ಈ ದೇವಾಲಯದ ಅಡಿಪಾಯದ ಕಲ್ಲು ಕಾಣೆಯಾಗಿರುವುದು ಮತ್ತು ಈ ದೇವಾಲಯದ ಕುರಿತಾಗಿ ಯಾವುದೇ ಶಾಸನಗಳು ಲಭ್ಯವಿಲ್ಲಿದ ಕಾರಣ, ಈ ದೇವಾಲಯವನ್ನು ಯಾವಾಗ ನಿರ್ಮಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಈ ದೇವಾಲಯದ ನಿರ್ಮಾಣದ ಶೈಲಿಯನ್ನು ಗಮನಿಸಿ ಇದು ೧೧ನೇ ಶತಮಾನದಲ್ಲಿ ಹೊಯ್ಸಳ ರಾಜ ವೀರ ಬಲ್ಲಾಳ II ರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು ಎನ್ನಲಾಗುತ್ತದೆ. ಈ ನಾಗೇಶ್ವರ-ಚೆನ್ನಕೇಶವ ದೇವಾಲಯದ ಸಂಕೀರ್ಣವನ್ನು ಪ್ರವೇಶಿಸುತ್ತಿದ್ದಂತೆಯೇ, ಎಡಭಾಗದಲ್ಲಿ ನಾಗೇಶ್ವರನ ದೇವಾಲಯವಿದ್ದರೆ, ಬಲಭಾಗದಲ್ಲಿ ಚನ್ನಕೇಶವಸ್ವಾಮಿ ದೇವಾಲಯವಿದೆ. ಇನ್ನು ಈ ಜೋಡಿ ದೇವಾಲಯಳು ಹೊರಗಿನಿಂದ ನೋಡಿದರೆ ಬಹುತೇಕ ಒಂದೇ ರೀತಿಯಹಾಗೆ ಕಾಣಿಸುತ್ತದೆ ಆದರೂ ಸೂಕ್ಷ್ಮವಾಗಿ ಗಮನಿಸಿದಲ್ಲಿ ಎರಡೂ ದೇವಾಲಯಗಳು ವಿಭಿನ್ನವಾಗಿದ್ದು ಅದರದ್ದೇ ಆದ ವೈಶಿಷ್ನ್ಯಪೂರ್ಣತೆಯನ್ನು ಹೊಂದಿದೆ. ದಂತಕತೆಯ ಪ್ರಕಾರ ಜೈನ ಗುರುಗಳಾದ ಸುದತ್ತಚಾರ್ಯನು ಸೊಸೆಯೂರಿನ ತಮ್ಮ ಗುರುಕುಲವಿದ್ದ ವಾಸಂತಿಕಾ ಮಂದಿರದಲ್ಲಿ ಹುಲಿಯೊಂದು ಬಂದಾಗ, ಅದನ್ನು ಹೊಡೆಯಲು ಅಲ್ಲಿಯೇ ಇದ್ದ ತಮ್ಮ ಶಿಷ್ಯ ಸಳನಿಗೆ “ಹೊಯ್ ಸಳ” ಎಂದು ಆಜ್ನಾಪಿಸಿದಾಗ, ಗುರುಗಳ ಆಜ್ಞೆಯ ಮೇರೆಗೆ ಸಳನು ಹುಲಿಯನ್ನು ಕೊಂದಿದ್ದಕ್ಕಾಗಿ ನಂತರ ಆತನ ವಂಶವು ಹೊಯ್ಸಳ ಎಂದಾಗಿ, ಸಳನು ಹುಲಿಯನ್ನು ಕೊಲ್ಲುವುದೇ ಅವರ ಲಾಂಛನ ಆಯಿತು ಎನ್ನುವ ಪ್ರತೀತಿ ಇದೇ. ಇದಕ್ಕೆ ಪುರಾವೆ ಎನ್ನುವಂತೆ ಚನ್ನಕೇಶವ ದೇವಾಲಯದ ಶಿಖರದ ಮೇಲೆ ಅತ್ಯಂತ ದೊಡ್ಡದಾದ ಹೊಯ್ಸಳ ಲಾಂಛನವನ್ನು ಸುಂದರವಾಗಿ ಕೆತ್ತಲಾಗಿದ್ದು ನೋಡಲು ನಯನ ಮನೋಹರವಾಗಿದ್ದು ಈ ದೇವಾಲವನ್ನು ಹೊಯ್ಸಳರೇ ಕಟ್ಟಿಸಿದ್ದು ಎನ್ನುವುದಕ್ಕೆ ದೊಡ್ಡ ಪುರಾವೆಯಾಗಿದೆ.

mosale1ಹೊಯ್ಸಳರ ಉಳಿದ ದೇವಾಲಯದಂತೆ ಇಲ್ಲಿಯೂ ಸಹಾ ಹೊಯ್ಸಳರ ವಾಸ್ತುಶಿಲ್ಪದ ಎಲ್ಲಾ ವೈಶಿಷ್ಟ್ಯಗಳೊಂದಿಗೆ ವಿಸ್ತಾರವಾಗಿ ಸಂಕೀರ್ಣವಾದ ಜ್ಯಾಮಿತೀಯ ಮಾದರಿಯನುಸಾರ ನಿರ್ಮಿಸಲಾಗಿದ್ದು, ಒಂದು ಸುಕಾನಸಿ, ಒಂದು ನವರಂಗ ಮತ್ತು ಎರಡೂ ಬದಿಯಲ್ಲಿ ಜಗತಿ ಅರ್ಥಾತ್ ಮುಖಮಂಟಪವನ್ನು ಒಳಗೊಂಡಿದೆ. ಇದರ ಜೊತೆ ಸರಳವಾದ ಏಕೈಕ ಗೋಪುರಗಳ ರಚನೆಗಳು. ಪ್ರವೇಶದಲ್ಲಿ, ಚೌಕಾಕಾರದ ಮುಖಮಂಟಪ ಅಥವಾ ನವರಂಗ ಮೇಲೆ ಬ್ರಹತ್ ಗಾತ್ರದ ಶಿಖರವು ದೇವಾಲಯಕ್ಕೆ ಮನೋಹರತೆ ನೀಡುತ್ತದೆ. ಗರ್ಭಗುಡಿಯು ಮುಂದಿನ ಒಂದು ಪ್ರಾಂಗಣದ ಮೇಲ್‌ಭಾಗವು ಗೋಳಾಕಾರವಾಗಿದ್ದು, ಅವರ ಮೇಲ್ಮೈ ವಿಸ್ತೀರ್ಣವು 2×2 ಮೀಟರ್ ಇರಬಹುದು. ಗುಮ್ಮಟದ ಕೆತ್ತನೆಯ ಅತಿದೊಡ್ಡ ಪಾಲು ಇದಾಗಿದೆ. ಈ ಗೋಳಾಕಾರದ ವಿನ್ಯಾಸವು ದೇವಾಲಯ ಶಿಲ್ಪಕಲೆಯ ದೊಡ್ಡ ತುಣುಕಾಗಿದೆ. ಗೋಪುರದ ತುದಿಯಲ್ಲಿ ಕಲಶವಿದ್ದು, ಇದು ಒಂದು ಅಲಂಕಾರಿಕ ನೀರಿನ ಮಡಕೆ ಎಂತೆ ಬಿಂಬಿಸುತ್ತದೆ. ಈ ಎಲ್ಲಾ ಲಕ್ಷಣಗಳನ್ನು ಎರಡೂ ದೇವಾಲಯಗಳಲ್ಲಿ ಕಂಡುಬರುತ್ತದೆ.

ಇನ್ನು ಚೆನ್ನಕೇಶವ ದೇವಸ್ಥಾನದಲ್ಲಿ ಗರುಡ, ವಿಷ್ಣುವಿನ ವಿವಿಧ ರೂಪಗಳಾದ ಕೇಶವ, ಜನಾರ್ಧನ, ವೇಣುಗೋಪಾಲ, ಮಾಧವ ಮತ್ತು ಭೂಮಿದೇವಿಯ ಪ್ರತಿಮೆಗಳನ್ನು ಹೊಂದಿದೆ. ಇಲ್ಲಿ ಇತರೆ ವಿಷ್ಣು ಸಂಬಂಧಿಸಿದ ಮೂರ್ತಿಗಳಲ್ಲಿ ಪ್ರಮುಖವಾಗಿ, ವಿಷ್ಣುವಿನ ವಿಗ್ರಹವನ್ನು ಕಾಣಬಹುದಾಗಿರುವ ಕಾರಣ ಇದನ್ನು ವೈಕುಂಠ ಎಂದು ಕರೆಯಲಾಗುತ್ತದೆ ಅದೇ ರೀತಿಯಲ್ಲಿ ನಾಗೇಶ್ವರ ದೇವಸ್ಥಾನದಲ್ಲಿ ಚಾಮುಂಡೇಶ್ವರಿ, ಸಪ್ತಮಾರ್ಥಿಕೆ, ಶಿವ, ದುರ್ಗಾ ದೇವಿಯ 7 ರೂಪಗಳು, ಗಣಪತಿ, ಶಾರದಾ ಮತ್ತು ಇತರ ದೇವತೆ ವಿಗ್ರಹಗಳು ಇರುವ ಕಾರಣ ಇದನ್ನು ಭೂಕೈಲಾಸ ಎಂದು ಕರೆಯಲಾಗುತ್ತದೆ.

WhatsApp Image 2023-07-27 at 22.10.03ಚೆನ್ನಕೇಶವ ಕೇಶವ ದೇವಾಲಯದ ಗರ್ಭ ಗುಡಿಯಲ್ಲಿರುವ 6 ಅಡಿಗಳ ಸುಂದರವಾಗಿ ಕೆತ್ತನೆ ಮಾಡಿರುವ ಚೆನ್ನಕೇಶವ ಕೇಶವ ಮೂರ್ತಿಯ ಕಂಗೊಳಿಸುತ್ತಲಿದ್ದು, ಸ್ವಾಮಿಯ ಎರಡೂ ಬದಿಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರು ನೆಲೆಸಿದ್ದು ನೋಡಲು ಬಹಳ ಆಕರ್ಷಕವಾಗಿವೆ. ಚೆನ್ನಕೇಶವ ಮೂರ್ತಿಯ ಹಿಂಬದಿಯಲ್ಲಿ ಪ್ರಭಾವಳಿ ವಿಷ್ಣುವಿನ ಅವತಾರಗಳಾದ ಮತ್ಸ್ಯ, ಕೂರ್ಮ, ಮತ್ತು ವರಾಹ ಪ್ರತಿನಿಧಿಸುತ್ತವೆ. ಗರ್ಭದ್ವಾರವು ಒಂದು ಗಜಲಕ್ಷ್ಮೀಯನ್ನು ಹೊಂದಿದೆ. ಕಮಲದ ಆಕಾರದ ರಂಗಮಂಟಪದಲ್ಲಿ ಇಂದ್ರ, ಅಗ್ನಿ, ವರುಣ, ಮತ್ತು ವಾಯುಯನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ಅದೇ ರೀತಿಯಲ್ಲಿ ಗೋಡೆಗಳ ಮೇಲೆ ಅಷ್ಟದಿಕ್ಪಾಲಕರು ತಮ್ಮ ವಾಹನದ ಮೇಲೆ ಕುಳಿತಿರುವ ಚಿತ್ರಗಳು ಶಿಲ್ಪಿಯ ಕೈಚಳಕವನ್ನು ಎತ್ತಿ ತೋರಿಸುತ್ತದೆ.  

WhatsApp Image 2023-07-27 at 22.10.02 (1)ನಾಗೇಶ್ವರ ದೇವಸ್ಥಾನವಲ್ಲಿಯೂ ಸಹಾ ಒಂದು ಸುಕಾನಸಿ, ನವರಂಗ ಮತ್ತು ಮಂಟಪವನ್ನು ಹೊಂದಿದೆ. ಇನ್ನು ಗರ್ಭಗುಡಿಯಲ್ಲಿ ಸುಮಾರು 3-4 ಅಡಿಗಳಷ್ಟು ಎತ್ತರದ ಶಿವ ಲಿಂಗ ಇದ್ದು, ಶಿವನ ಬಲಭಾಗದಲ್ಲಿ ಸುಂದರವಾದ ವಿಘ್ನೇಶ್ವರನ ಪ್ರತಿಮೆ ಇದ್ದರೆ, ಇನ್ನು ಎಡಭಾಗದಲ್ಲಿ ಬೇರೆ ಯಾವುದೇ ದೇವಾಲಯಗಳಲ್ಲಿಯೂ ನೋಡಲಾಗದಂತಹ ವಿಶೇಷ ಆಕರ್ಷಣೆಯಯ ಶಿವನ ಆತ್ಮಲಿಂಗವನ್ನು ಇಲ್ಲಿ ಕಾಣಸಿಗುವುದು ವಿಶೇಷವಾಗಿದೆ. ಇನ್ನು ಯಥಾಪ್ರಾಕಾರ ಎಲ್ಲಾ ಶಿವನ ದೇವಾಲಯದಲ್ಲಿಯೂ ಇರುವಂತೆ ಇಲ್ಲಿಯೂ ಸಹಾ ಸುಂದರವಾಗಿ ಕೆತ್ತನೆ ಮಾಡಲಾಗಿರುವ ನಂದಿ ವಿಗ್ರಹವನ್ನು ನೋಡಬಹುದಾಗಿದೆ. ಈ ಶಿವನ ದೇವಾಲಯದಲ್ಲಿದ್ದ ಸುಂದರವಾದ ಮಹಿಷಾಸುರ ಮರ್ಧಿನಿ ಮತ್ತು ಸರಸ್ವತಿ ವಿಗ್ರಹವನ್ನು ಕೆಲವು ದುಶ್ಕರ್ಮಿಗಳು ಕಳವು ಮಾಡಿರುವುದು ನಿಜಕ್ಕೂ ಬೇಸರವನ್ನು ಮೂಡಿಸುತ್ತದೆ ಆದರೂ, ಸ್ಥಳೀಯರು ಮತ್ತು ಭಾರತೀಯ ಪುರಾತತ್ವ ಇಲಾಖೆ ಹೆಚ್ಚಿನ ಆಸ್ಥೆ ವಹಿಸಿ ದೇವಾಲಯದ ಸುತ್ತಲೂ ಬೇಲಿಯನ್ನು ನಿರ್ಮಿಸಿ, ಆದಷ್ಟೂ ಸುರಕ್ಷಿತವಾಗಿ ಮತ್ತು ಸ್ವಚ್ಚವಾಗಿ ಇಟ್ಟುಕೊಂಡಿರುವುದು ಶ್ಲಾಘನೀಯವಾಗಿದೆ.

ಹಾಸನದಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಕೇವಲ 10 ಕಿಮಿ ದೂರದಲ್ಲಿರುವ ಈ ಅನರ್ಘ್ಯ ದೇವಾಲಯಕ್ಕೆ ಹೋಗಲು ಸಾರ್ವಜನಿಕ ಸಾರಿಗೆ ಹೆಚ್ಚಿನದಾಗಿ ಲಭ್ಯತೆ ಇಲ್ಲದಾಗಿರುವ ಕಾರಣ ನಮ್ಮ ಸ್ವಂತ ಇಲ್ಲವೇ ಖಾಸಗಿ ವಾಹನಗಳ ಮೂಲಕ ಖಂಡಿತವಾಗಿಯೂ ಹೋಗಿ ನೋಡಲೇ ಬೇಕಾದ ದೇವಾಲವಾಗಿದೆ ಎಂದರೂ ತಪ್ಪಾಗದು.

ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಮೊಸಳೆ ಗ್ರಾಮದ ಈ ನಾಗೇಶ್ವರ-ಚೆನ್ನಕೇಶವ ಅವಳಿ ದೇವಾುಲಯಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆಯುವ ಜೊತೆಗೆ ಸುತ್ತಮುತ್ತಲಿನ ಕೃಷಿ ಪ್ರದೇಶದ ಹಚ್ಚ ಹಸಿರನ್ನು ಒಮ್ಮೆ ಕಣ್ತುಂಬಿಸಿಕೊಂಡು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

One thought on “ನಾಗೇಶ್ವರ-ಚೆನ್ನಕೇಶವ ದೇವಾಲಯ ಸಂಕೀರ್ಣ, ಮೊಸಳೆ

  1. ಮುಂದಿನ ಚಿಕ್ಕಮಗಳೂರಿನ ಭೇಟಿಯ ಸಂದರ್ಭದಲ್ಲಿ, ಖಂಡಿತಾ.
    ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಬಾಣಾವರ ದಿಂದ 5-6 ಕಿಲೋಮೀಟರ್ ಮುಂದೆ ಬಲಭಾಗದಲ್ಲಿ ಕೆರೆಸಂತೆ / ವಿಷ್ಣುಸಮುದ್ರ ಎಂದು ಕರೆಯುವ ಒಂದು ದೊಡ್ಡ ಕೆರೆಯಿದೆ. ಅದರ ಆಚೆ ಸುಮಾರು 1 ಕಿಲೋಮೀಟರ್ ದೂರದಲ್ಲಿ ಮಲ್ಲಾಘಟ್ಟ ಎಂಬ ಹಳ್ಳಿಗೆ ಹೋಗುವ ಕಾಲುದಾರಿಯಲ್ಲಿ ಕೆಲವು ಪಾಳು ದೇಗುಲಗಳಿವೆ.. ಬಳಪದಕಲ್ಲಿನಲ್ಲಿ ಕೆತ್ತಲ್ಪಟ್ಟ ಈ ಸುಂದರ ದೇವಾಲಯಗಳು
    4-5 ದಶಕಗಳ ಹಿಂದೆಯೇ ಪಾಳು ಬಿದ್ದಿದ್ದು ಈಗಿನ ಸ್ಥಿತಿ ತಿಳಿಯದು.

    Liked by 1 person

Leave a comment