ಲ್ಯಾಪ್ ಟ್ಯಾಪ್ ಕಳೆದು ಹೋಗಿದೆ

ಶಂಕರ ಪ್ರತಿಷ್ಟಿತ ಕಂಪನಿಯೊಂದರಲ್ಲಿ IT Manager ಆಗಿ ಕೆಲಸ ಮಾಡುತ್ತಿದ್ದ. ಆತನ ತಂಡದಲ್ಲಿ ಸುಮಾರು 35ಕ್ಕೂ ಹೆಚ್ಚಿನ ಸಹೋದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಇವರ ಜೊತೆ outsource ಆಧಾರದ ಮೇಲೆಯೂ ನಾಲ್ಕೈದು ಮಂದಿಯೂ ಸಹಾ ಅವನ ತಂಡದೊಂದಿಗೆ ಇದ್ದರು. ಪ್ರತಿ ದಿವಸವೂ IT Stores Department  ಕೆಟ್ಟು ಹೋಗಿದ್ದ laptopಗಳನ್ನು ರಿಪೇರಿ ಮಾಡಲು ಈ outsource ತಂಡವವರಿಗೆ ಕೊಟ್ಟರೆ, ಸಂಜೆ ಹೊತ್ತಿಗೆ ಅದನ್ನು ರಿಪೇರಿ ಮಾಡಿ ಹಿಂದಿರುಗಿಸಿ ಲೆಖ್ಖಾಚಾರ ಚುಕ್ತ ಮಾಡುವುದು ಅನೂಚಾನವಾಗಿ ದಿನನಿತ್ಯವೂ ನಡೆದುಕೊಂಡು ಬಂದಿದ್ದ ಸಂಗತಿಯಾಗಿದ್ದರಿಂದೆ ಎಲ್ಲವೂ ಸುಗಮವಾಗಿ ಸಾಗುತ್ತಿತ್ತು.

mac4ಅದೊಂದು ದಿನ ರಾತ್ರಿ ಸುಮಾರು 9:30ರ ಆಸು ಪಾಸಿನಲ್ಲಿ IT Stores in-charge  ಶಂಕರನಿಗೆ ಕರೆ ಮಾಡಿ ಸರ್, ನಿಮಗೊಂದು ವಿಷಯ ತಿಳಿಸಬೇಕಿತ್ತು. ಅದನ್ನು ಹೇಗೆ ಹೇಳಬೇಕು ಅಂತಾ ತಿಳಿಯುತ್ತಿಲ್ಲ ಎಂದು ಸ್ವಲ್ಪ ಆತಂಕದಲ್ಲಿ ಹೇಳಿದ. ಟಿವಿಯಲ್ಲಿ ನ್ಯೂಸ್ ನೋಡ್ತಾ ಇದ್ದಾ ಶಂಕರನಿಗೆ ಅರೇ ಇಷ್ಟು ತಡಾರಾತ್ರಿಯಲ್ಲಿ ತಲೆಗೆ ಇದೆಂತಹಾ ಹುಳಾ ಬ್ತಿಡ್ತಾ ಇದ್ದಾನಲ್ಲಪ್ಪಾ ಎಂದು ಅಂದು ಕೊಂಡರೂ, ಅದನ್ನು ತೋರಿಸಿಕೊಳ್ಳದೇ, ಪರವಾಗಿಲ್ಲ ಹೇಳಪ್ಪಾ ಎಂದಾಗ, ಒಂದೆರಡು ಸಾರಿ ತಡವರಿಸುತ್ತಲ್ಲೇ, ಸಾರ್, ಬೆಳಿಗ್ಗೆ ರಿಪೇರಿಗೆಂದು 12 Apple MacBook  ಕೊಟ್ಟಿದ್ದೆ. ಸಂಜೆ ಅದರೊಳಗೆ ಒಂದು ಎಲ್ಲೋ ಕಳೆದು ಹೋಗಿದೆ ಸರ ಎಂದ ಕೂಡಲೇ, ಟಿವಿ ಆರಿಸಿ, ಥಟ್ ಅಂತಾ, ಅರೇ ಏನು ಹೇಳ್ತಾ ಇದ್ಯಾ? ಇದ್ದವರು ಮೂವರು ಕದ್ದವರು ಯಾರು? ಅಂತಾ ಇದುವರೆವಿಗೂ ಈ ರೀತಿಯಾಗಿ ಆಗಿಯೇ ಇಲ್ಲ. ಇವತ್ತು ಹೇಗಾಯ್ತು? ಎಷ್ಟು ಹೊತ್ತಿಗೆ ಗೊತ್ತಾಯ್ತು? ಸರಿಯಾಗಿ ಲೆಕ್ಕ ನೋಡಿದೆಯಾ? ಎಂದು ಹತ್ತಾರು ಪ್ರಶ್ನೆಗಳನ್ನು ಮೇಲಿಂದ ಮೇಲೆ ಕೇಳಿದ.

mac1ಸರ್, ಸಂಜೆ ಸುಮಾರು ಆರು ವರೆಗೆ ನನಗೆ ಗೊತ್ತಾಗುತ್ತಿದ್ದಂತೆಯೇ, ಎಲ್ಲಾ ಕಡೆ ಹುಡುಕಾಡಿದ್ವೀ. ನಮ್ಮ ಎಲ್ಲಾ ಹುಡುಗರನ್ನೂ ಕೇಳಿದ್ವೀ ಸರ್. ಯಾರಿಗೂ ಅದರ ಬಗ್ಗೆ ಗೊತ್ತಿಲ್ಲ ಅಂತಾನೇ ಹೇಳ್ತಾ ಇದ್ದಾರೆ. ಏನು ಮಾಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲಾ ಸರ್ ಎಂದ. ಸರಿ ನಾಳೆ ಬೆಳಿಗ್ಗೆ Servicing Roomನಲ್ಲಿ ಯಾರ್ಯಾರು ಇದ್ರು ಅಂತಾ CC TV Footage ನೋಡೋಣ ಅವಾಗ ಏನಾದ್ರೂ ಗೊತ್ತಾಗಬಹುದು ಎಂದು ಶಂಕರ ಹೇಳಿದ್ದಲ್ಲದೇ, ಹೆಚ್ಚು ಕಡಿಮೆ ಆದರೆ. outsourced ನೌಕರರೇ ಜವಾಬ್ಧಾರರಾಗುತ್ತಾರೆ ಎಂದು ಹೇಳುವುದನ್ನು ಮರೆಯಲಿಲ್ಲ. ಹೌದು ಸರ್, ಹೊರಗುತ್ತಿಗೆ ಹುಡುಗರಿಗೆ ನಾನೂ ಸಹಾ ಇದನ್ನೇ ಹೇಳಿದ್ದೇನೆ. ಅವರು ಸಹಾ ಹುಡುಕುವುದಕ್ಕೆ ಎಲ್ಲಾ ಪ್ರಯತ್ನ ಪಡ್ತಾ ಇದ್ದಾರೆ ಎಂದಿದ್ದಲ್ಲದೇ ಹಾಗೇ ಮಾತು ಮುಂದುವರೆಸಿದ ಆ stores ಹುಡುಗ, ಸರ್ ಇವತ್ತು laptop Service engineer ಬಂದಿರಲಿಲ್ಲಾ ಅಂತಾ ಹೊಸಾ ಹುಡುಗನೊಬ್ಬನನ್ನು ಕಳುಹಿಸಿದ್ದರು. ನಮಗೇಕೋ ಆವನ ಮೇಲೇ ಅನುಮಾನ. ಅವನೂ ಸಹಾ ಬೆಳಗ್ಗಿನಿಂದಲೂ ಅದ್ಯಾರ ಹತ್ರಾನೋ ಗಂಟೆ ಗಟ್ಟಲೇ ಮಾತನಾಡುತ್ತಿದ್ದ ಮತ್ತು ಸಂಜೆ ನಮಗ್ಯಾರಿಗೂ ಹೇಳದೇ ಹೋಗಿದ್ದಾನೆ ಎಂದ. ಇದನ್ನು ಕೇಳಿದ ಕೂಡಲೇ ಶಂಕರನಿಗೂ ಇದರಲ್ಲಿ ಸತ್ಯ ಇರಬಹುದು ಎಂದು ಹೇಗೂ ಇರಲಿ ಎಂದು laptop Escalation ಟೀಮಿಗೆ ಒಂದು ಮೇಲ್ ಹಾಕಿ, ನಡೆದ ವಿಷಯವನ್ನೆಲ್ಲಾ ತಿಳಿಸಿ ಬೆಳಿಗ್ಗೆ ಇದರ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಯಬೇಕು ಎಂದು ತಾಕೀತು ಮಾಡಿ. ಸರಿ ಬಿಡು ನಾಳೇ ನೋಡಿಕೊಳ್ಳೋಣ ಎಂದು ಹೇಳಿದನಾದರೂ, ಈ ವಿಷಯವನ್ನು ತನ್ನ ಮೇಲಾಧಿಕಾರಿಗೆ ತಿಳಿಸುವುದೋ ಬೇಡವೋ ಎಂಬ ದ್ವಂದ್ವದಲ್ಲಿಯೇ ಶಂಕರಿನಿಗೆ ರಾತ್ರಿ ಇಡೀ ನಿದ್ದೆನೇ ಬರ್ಲಿಲ್ಲ.

ಮಾರನೇ ದಿನ ಎಂದಿನಂತ ಸ್ನಾನ ಸಂಧ್ಯಾವಂದನೆ ದೇವರ ಪೂಜೆ ಮುಗಿಸಿದ ಶಂಕರ ಆಫೀಸಿಗೆ ಹೊರಟ ಮಾರ್ಗದ ಮಧ್ಯದಲ್ಲೇ Laptop Escalation team manager ಕರೆ ಮಾಡಿ ಸರ್ ನಿಮ್ಮ ಈ ಮೇಲೇ ನೋಡಿ ನನಗೆ ತುಂಬಾ ಬೇಜಾರು ಆಗಿದೆ. ನೀವು ಹೇಳಿರುವ ಹುಡುಗನ ಮೇಲೆ ಈಗಾಗಲೇ ಇದೇ ರೀತಿಯ ಒಂದು ದೂರು ಮತ್ತೊಂದು ಕಡೆಯಿಂದ ಬಂದಿದ್ದು, ಅದರ ಕುರಿತಾಗಿ ಇನ್ನೂ ತನಿಖೆ ಜಾರಿಯಲ್ಲಿದೆ ಎಂದಾಗ, ಶಂಕರನಿಗೆ ಅನುಮಾನವೇ ಬೇಡ, ಇದೂ ಸಹಾ ಆ ಹುಡುಗನ ಕೆಲಸವೇ ಇರಬೇಕು. ಆತ ನಿಮ್ಮ ಕಛೇರಿಗೆ ಬಂದ ಕೂಡಲೇ ಸರಿಯಾಗಿ ವಿಚಾರಿಸಿ ನಮ್ಮ Laptop ಹುಡುಕಿಸಿ ಕೊಡಿ. ಇಲ್ಲದಿದ್ದರೆ ನಮ್ಮ ಕೆಲಸಕ್ಕೆ ಸಂಚಕಾರ ಬರುತ್ತದೆ ಎಂದು ಸ್ವಲ್ಪ ಜೋರು ಮಾಡಿ ಅಬ್ಬಾ, ಅಂತೂ ನಮ್ಮ ಅನುಮಾನ ಸರಿಯಾಗಿರುವ ಕಾರಣ ಕಳೆದು ಹೋದ Laptop ಸಿಗುವುದರಲ್ಲಿ ಅನುಮಾನವೇ ಇಲ್ಲಾ ಎಂದು ಸ್ವಲ್ಪ ನಿರಾಳನಾಗಿ ಕಛೇರಿಯತ್ತ ತನ್ನ ಕಾರ್ ಚಲಾಯಿಸಿ, ತನ್ನ ಕಛೇರಿಗೆ ತಲುಪಿದ ಕೂಡಲೇ, ಹೇಗಾದರೂ ಆಗಲಿ ಎಂದು ಮತ್ತೊಮ್ಮೆ Laptop Escalation team manager ಮತ್ತು ತನ್ನ ಮೇಲಾಧಿಕಾರಿಗಳಿಗೆ ನಡೆದ ವಿಷಯವನ್ನೆಲ್ಲಾ ತಿಳಿಸಿ, ಇದೇ ವಿಷಯದ ಕುರಿತಾಗಿ ಹೆಚ್ಚಿನ ವಿಚಾರಣೆಗಾಗಿ ತನ್ನ ಇಡೀ ತಂಡವೆಲ್ಲಾ ಸುಮಾರು 10 ಗಂಟೆಗೆ ಸರಿಯಾಗಿ ಒಂದೆಡೆ ಸೇರಿಸಲು ತಿಳಿಸಿದ.

ಗಂಟೆ 10ಕ್ಕೆ ಸರಿಯಾಗಿ ಇಡೀ ತಂಡವೆಲ್ಲಾ ನಿಗಧಿತ ಸ್ಥಳದಲ್ಲಿ ಸೇರಿದ್ದಾಗ ಅವರಲ್ಲಿ outsourced ನೌಕರರು ಸಹಾ ಅಲ್ಲಿಗೆ ಬಂದು ಹಿಂದಿನ ದಿನ ಮತ್ತು ಬೆಳಿಗ್ಗೆ ನಡೆದ ವಿಚಾರವನ್ನೆಲ್ಲಾ ತಿಳಿಸಿದ್ದಲ್ಲದೇ, ನಾವು ಇಷ್ಟು ದಿನ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಒಂದು ಸಣ್ಣ ಸ್ಕ್ರೂ ಸಹಾ ಕಳೆದುಹೋಗಿಲ್ಲ. ಹಾಗಾಗಿ ವೃಥಾ ನಮ್ಮ ಮೇಲೆ ಅನುಮನ ಪಡದಿರಿ. ನಮಗೆ ಬರುವುದೇ ಕಡಿಮೆ ಸಂಬಳ. ದಯವಿಟ್ಟು ನಮ್ಮ ಸಂಬಳದಲ್ಲಿ ಹಿಡಿದುಕೊಳ್ಳುವ ಮೂಲಕ ನಮ್ಮ ಹೊಟ್ಟೆ ಹೊರೆಯ ಬೇಡಿ. ನಮಗೂ ಸಹಾ ಆ laptop service ಹುಡುಗನ ಮೇಲೇಯೇ ಅನುಮಾನವಿದ್ದು. ಅವನೇ ಕದ್ದೊಯ್ದಿದ್ದಾನೆ ಎಂದು ಷರಾ ಬರೆದಿದ್ದಲ್ಲದೇ, ಅವನ ವಿರುದ್ಧ ಪೋಲೀಸರಿಗೆ ದೂರು ನೀಡಲೂ ಸಹಾ ಶಂಕರನಿಗೆ ಸೂಚಿಸುವ ಮೂಲಕ ತಮ್ಮ ಮೇಲೆ ಬಂದಿರುವ ಆಪಾದನೆಯಿಂದ ಮುಕ್ತರಾಗಲು ಪ್ರಯತ್ನಿಸಿದರು.

mac3ಕಛೇರಿಯ ವಿಷಯದಲ್ಲಿ ಪೋಲೀಸರನ್ನು ಕರೆಸುವುದು ಕಡೆಯ ಆಯ್ಕೆ. ಮೊದಲು ನಮ್ಮ ಕಡೆಯಿಂದಲೇ ಎಲ್ಲಾ ರೀತಿಯ ತನಿಖೆ ಮಾಡೋಣ ಎಂದ ಶಂಕರ, ಮತ್ತೊಮ್ಮೆ ಎಲ್ಲರನ್ನೂ ಕೂಡಿಸಿಕೊಂಡು ಹಿಂದಿನ ದಿನ ನಡೆದ ವಿಚಾರವನ್ನೆಲ್ಲಾ ಕೂಲಂಕುಶವಾಗಿ ಕೇಳುತ್ತಾ, ಈ Serial# Laptop ಎಲ್ಲೂ ಕಳೆದು ಹೋಗಿದೆ. ಉದ್ದೇಶ ಪೂರ್ವಕವಾಗಿ ಯಾರೋ ಕದ್ದುಕೊಂಡು ಹೋಗಿರಬಹುದು ಎಂದು ನನಗೆ ಅನ್ನಿಸುತ್ತಿಲ್ಲ ಏಕಂದರೆ ಇದುವರೆವಿಗೂ ಆ ರೀತಿಯ ಪ್ರಕರಣಗಳು ನಮ್ಮಲ್ಲಿ ನಡದೇ ಇಲ್ಲಾ. ಹಾಗೇ ಹಿಂದಿನ ದಿನದ CC TV Footage ಎಲ್ಲವನ್ನೂ ನೋಡಿದಾಗ, ಆ Service room ಗೆ ತಮ್ಮ ಐಟಿ ಹುಡುಗರಲ್ಲದೇ ಹೊರಗಿನವರರಾರೂ ಹೊಗಿರದೇ ಇರುವುದು ಕಂಡುಬರುತ್ತದೆ. ಹಾಗಾಗಿ ಎಲ್ಲಾ ನಮ್ಮ ಹುಡುಗರೇ ಇದ್ದು, ಆ Service room ಗೆ ನಮ್ಮ ಸಹೋದ್ಯೋಗಿಗಳಲ್ಲದೇ ಹೊರಗಿನವರಿಗೆ ಪ್ರವೇಶವೇ ಇಲ್ಲದ ಕಾರಣ, ಕಳ್ಳತನ ಆಗಿದೆ ಎನ್ನಲು ಸಾಧ್ಯವಿಲ್ಲಾ ಆದರೆ, ಇಲ್ಲೇ ಎಲ್ಲೋ ಇರಬಹುದು ಎಂದು ಹುಡುಕಿ ಒಂದು ಅರ್ಧ ಗಂಟೆಯ ನಂತರ ಇಲ್ಲೇ ಸೀಗೋಣ ಎಂದು ಹೇಳುತ್ತಾನಾದರೂ ಅನುಮಾವೆಲ್ಲಾ ಲಿನೋವಾ ಹುಡಗನೇ ಮೇಲೇ ಇರುತ್ತದೆ.

ಇಷ್ಟರ ಮಧ್ಯದಲ್ಲೇ, Laptop Escalation team manager ಕೂಡಾ ಮತ್ತೊಮ್ಮೆ ಕರೆ ಮಾಡಿ, ಸರ್ ನಿಮ್ಮ ವಿಷಯವನ್ನು ನಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ದುರಾದೃಷ್ಟವಷಾತ್ ಆ ಹುಡುಗ ಇನ್ನೂ ನಮ್ಮ ಕಛೇರಿಗೆ ಬಂದಿಲ್ಲ ಮತ್ತು ಕರೆ ಮಾಡಲು ಯತ್ನಿಸಿದಾಗ, ಆತನ ಮೊಬೈಲ್ ಸ್ವಿಚ್ ಆಫ್ ಆಗಿರುವ ಕಾರಣ, ನಮ್ಮ ಅನುಮಾನವೆಲ್ಲ ಅತನ ಮೇಲೆಯೇ ಇದ್ದು ಹೆಚ್ಚಿನ ಮಾಹಿತಿ ತಿಳಿದ ಕೂಡಲೇ ನಿಮಗೆ ತಿಳಿಸುತ್ತೇನೆ ಎಂದು ಹೇಳಿದಾಗ, ಶಂಕರನ ಅನುಮಾನವೆಲ್ಲಾ ಮತ್ತೇ ಆ Serice engineer ಹುಡುಗನ ಮೇಲೆಯೇ ಕೇಂದ್ರೀಕೃತವಾಗುತ್ತದೆ.

mac2ಇಷ್ಟರ ಮಧ್ಯೆ Tower-C 5th floor Service engineer ಶಂಕರಿನಿಗೆ ಕರೆ ಮಾಡಿ, ಸರ್ ನಿಮ್ಮೊಂದಿಗೆ ಆ Laptop ಬಗ್ಗೆ ಸ್ವಲ್ಪ ಮಾತನಾಡ ಬೇಕಿತ್ತು ಎಂದಾಗ, ಹೌದಾ? ಏನು ಸಮಾಚಾರ? Laptop ಸಿಕ್ತಾ? ಎಂದು ಒಂದೇ ಸಮನೆ ಪ್ರಶ್ನೆ ಕೇಳಿದ್ದಕ್ಕೇ, ಸರ್, ಅಲ್ಲಿಗೆ ಬಂದು ನೇರವಾಗಿ ಎಲ್ಲವನ್ನೂ ತಿಳಿಸುತ್ತೇನೆ ಎಂದು ಹೇಳಿದ ಕೆಲವೇ ಕ್ಷಣಗಳಲ್ಲಿ ಶಂಕರನ ಬಳಿಗೆ ಬಂದಾಗ ಆತನ ಕೈಯ್ಯಲ್ಲೊಂದು Mac Laptop ಇದ್ದು ಸರ್ ಇದೇನಾ ಆ ಕಳೆದು ಹೋದ Serial# ಎಂದು ಆತ Serial# ಹೇಳುತ್ತಲೇ ಹೋದಂತೆ, ಅದು ಕಳೆದು ಹೋದ Laptop ಆಗಿರುತ್ತದೆ. ಅರೇ ಕಳೆದು ಹೋದ Laptop ನಿನ್ನ ಬಳಿ ಹೇಗೆ ಬಂತು? ಯಾರು ತಂದು ಕೊಟ್ಟರು? ನಿಜ ಹೇಳು ನಿನಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದಾಗ, ಸರ್, ನನಗೆ ಇದು ಹೇಗೆ ಯಾರು ತಂದಿಟ್ಟರು ಎಂದು ಗೊತ್ತಿಲ್ಲ. ನೀವು ಸ್ವಲ್ಪ ಹೊತ್ತಿನ ಮುಂದೆ ಎಲ್ಲರಿಗೂ ಹುಡುಕಲು ಹೇಳಿದಾಗ, ನಾನು ನನ್ನ Tower-C 5th floorಗೆ ಬಂದು ನಮ್ಮೆಲ್ಲಾ Service engineer ಕಪಾಟುಗಳನ್ನು ಹುಡುಕುತ್ತಿದ್ದಾಗ, ಏಕೂ ಇರಲೀ ಎಂದು ಇಂದು ಕಛೇರಿಗೆ ರಜೆ ಹಾಗಿರುವ ಉಮೇಶನ ಕಪಾಟನ್ನೂ ಹುಡುಕಿದಾಗ ಅಲ್ಲಿ ಎರಡು Laptop ಇದ್ದದ್ದು ನೋಡಿ ಅನುಮನ ಬಂದು ಸರಿಯಾಗಿ ನೋಡಿದಾಗ, ಇದು ಕಳೆದ ಹೋದ Laptop ಎಂದು ತಿಳಿಯಿತು ಎಂದಾಗ, ಒಂದು ಕಡೆ ಸಂತೋಷ ಮತ್ತು ಮತ್ತೊಂದು ಕಡೆ ಕೋಪ ಎಲ್ಲವೂ ಏಕಕಾಲಕ್ಕೆ ಶಂಕರನಿಗೆ ಆದರೂ ಅದನ್ನು ತೋರಿಸಿಕೊಳ್ಳದೇ ಎಲ್ಲರನ್ನೂ ಮತ್ತೆ ಅದೇ ಸ್ಥಳದಲ್ಲಿ ಒಟ್ಟುಗೂಡಲು ತಿಳಿಸುತ್ತಾನೆ.

mac5ಎಲ್ಲರಿಗೂ ಒಂದು ಶುಭಸುದ್ದಿ, ಕಳೆದು ಹೋದ Laptop ಸಿಕ್ಕಿದೆ. ಅದು ಉಮೇಶನ ಕಪಾಟಿನಲ್ಲಿ ಸಿಕ್ಕಿದೆ ಎಂದಾಗ ಎಲ್ಲರಿಗೂ ಒಂದು ರೀತಿಯ ನಿರಾಳವಾದರೇ, ಅಬ್ಬಾ ಬದುಕಿದೆಯಾ ಬಡ ಜೀವ ಎನ್ನುವಂತಾಗಿತ್ತು ಆ outsourced ನೌಕರರದ್ದಾಗಿರುತ್ತದೆ. ಅದು ಸರಿ. ಈ Laptop ಉಮೇಶನ ಕಪಾಟಿನಲ್ಲಿ ಹೇಗೆ ಬಂದಿತು? ಎಂದು ಕೂಲಂಕುಶವಾಗಿ ವಿಚಾರಿಸಿದಾಗ, ಹಿಂದಿನ ದಿನ ಆತ ಮನೆಗೆ ಹೋಗುವ ಮುನ್ನಾ ಏನೋ ಕೇಳಲು ಎಂದು servicing ರೂಮಿಗೆ ಹೋಗಿ ಆ ಹುಡುಗರೊಂದಿಗೆ ತನ್ನ ಸಮಸ್ಯೆಯನ್ನು ಬಗೆಹರಿಸಿಕೊಂಡು ಊರಿಗೆ ಹೋಗುವ ಭರದಲ್ಲಿ ತನ್ನ Laptop ಎಂದು ತಿಳಿದು ಈ laptop ತೆಗೆದುಕೊಂಡು ಹೋಗಿ ತನ್ನ ಕಪಾಟಿನಲ್ಲಿಟ್ಟು ತನ್ನ ಪಾಡಿಗೆ ತಾನು ಊರಿಗೆ ಹೋಗಿದ್ದಾನೆ. ಹಿಂದಿನ ಸಂಜೆ stores ಹುಡುಗ ಎಲ್ಲರಿಗೂ ಕರೆ ಮಾಡುವಾಗ ಉಮೇಶನಿಗೂ ಕರೆ ಮಾಡಿದಾಗ, out of network message ಕೇಳಿ, ಊರಿಗೆ ಹೊಗುವಾಗ network ಸಿಗದೇ ಇರಬಹುದು ಎಂದು ಸುಮ್ಮನಾಗಿದ್ದಾನೆ. ಅದೂ ಅಲ್ಲದೇ, ಉಮೇಶ ಶಂಕರನ ತಂಡದಲ್ಲಿ ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ ಎನ್ನುವಷ್ಟರ ಮಟ್ಟಿಗಿನ ಅಮಾಯಕನಾಗಿದ್ದ ಕಾರಣ, ಯಾರಿಗೂ ಅವನ ಮೇಲೆ ಅನುಮಾನವೇ ಬಂದಿಲ್ಲ.

Laptop ಸಿಕ್ಕ ಖುಷಿಯಲ್ಲಿ, ಮತ್ತೆ Laptop Escalation team manager ಮತ್ತೆ ತನ್ನ ಮೇಲಾಧಿಕಾರಿಗೆ ವಿಷಯ ತಿಳಿಸಿ, ಮುಂದೆ ಈ ರೀತಿ ಆಗದಂತೆ ಎಚ್ಚರಿಗೆ ವಹಿಸಬೇಕೆಂದು ತಿಳಿಸಿ ಈ ವಿಷಯ ಇಲ್ಲಿಗೇ ಮುಕ್ತಾಯ ಹಾಡೋಣ. ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು ಎಂದು ಹೇಳಿ E-mail ಕಳುಹಿಸಿ ನೆಮ್ಮದಿಯಿಂದ ಒಂದು ಕಪ್ ಚಹಾ ಕುಡಿಯಲು ತನ್ನ ಸಂಗಡಿಗರೊಂದಿಗೆ ಪ್ಯಾಂಟ್ರಿಗೆ ಹೋಗಿದ್ದಾನೆ.

ಹೋದ್ಯಾ ಪಿಚಾಚಿ ಅಂದ್ರೇ ಬಂದೇ ಗವಾಕ್ಷೀಲೀ ಎನ್ನುವಂತೆ, ಶಂಕರನ E-mail ನೋಡಿ ಅದಕ್ಕೆ ವಿಷಯ ತಿಳಿಸಿದ್ದಕ್ಕಾಗಿ ಧನವ್ಯಾದಗಳನ್ನು ತಿಳಿಸಿದ laptop Escalation team manager. ಸರ್, ಆಗ ನಮ್ಮ ಹುಡುಗನ ಮೇಲೆ ಪೋಲೀಸ್ ದೂರು ನೀಡಬೇಕು ಎಂದು ಹೇಳಿದ್ದಿರಿ. ಈಗ ನಿಮ್ಮ ಹುಡುಗರ ಮೇಲೆ ಪೋಲೀಸ್ ದೂರು ನೀಡಬೇಕು  ಎಂದು ಕೊಂಡಿದ್ದೇವೆ ಎಂದಾಗ, ಹೇ.. ನೀವು ತುಂಬಾ ಚೆನ್ನಾಗಿ ತಮಾಷೆ ಮಾಡ್ತೀರಿ. ಇದು ನಮ್ಮ ಆಂತರಿಕ ವಿಚಾರ. ನಾವು ನೋಡಿಕೊಳ್ತೀವಿ ಎಂದು ಹೇಳಿದಾಗ, ಸರ್, ಇದು ತಮಾಷೆ ವಿಷಯವಲ್ಲ. ನೆನ್ನೆ ರಾತ್ರಿಯಿಂದ ಇಂದಿನ ಬೆಳಗಿನವರೆಗೆ ನನಗೇ ನಿಮಗೇ ತಿಳಿಯದಿರುವಂತಹ ಒಂದು ಗಂಭೀರ ವಿಷಯ ನಡೆದಿದೆ ಎಂದಾಗ, ಅರೇ, ಇದ್ಯಾವುದಪ್ಪಾ ಹೊಸಾ ವರಸೇ ಎಂದು, ಏನು ಸಮಾಚಾರ? ಎಂದು ಕೇಳಿದ್ದಾನೆ.

Laptop ಕಳೆದು ಹೋಗಿ, ಆ ಅಪವಾದ ತಮ್ಮ ಮೇಲೆ ಬಂದಿದ್ದು ಅದು ಸಿಗದೇ ಹೋದಲ್ಲಿ ತಾವು ಅದರ ಬೆಲೆ ಕಟ್ಟಿಕೊಡ ಬೇಕಾಗಿರುವುದಲ್ಲದೇ, ಅಡಿಕೆಗೆ ಹೋದ ಮಾನ ಆನೇ ಕೊಟ್ರೂ ಬರೋದಿಲ್ಲ ಎಂದು ಆ outsourced ಕೆಲಸಗಾರರೂ ತಮ್ಮ ಎಲ್ಲಾ ಸಂಪರ್ಕ ಬಳಸಿ ಹಿಂದಿನ ದಿನ ಕಛೇರಿಗೆ ಬಂದಿದ್ದ ತಾತ್ಕಾಲಿಕ laptop service engineer ಮನೆಯ ವಿಳಾಸವನ್ನು ಪಡೆದು ಬೆಳ್ಳಂ ಬೆಳಿಗ್ಗೆಯೇ ಅವನ ಮನೆಗೆ ಹೋಗಿ ಆತನ ಬಾಗಿಲು ಬಡಿದಿದ್ದಾರೆ. ಇದ್ದಕ್ಕಿದ್ದಂತೆಯೇ, ಹೇಳದೇ ಕೇಳದೇ, ಹೀಗೆ ತನ್ನ ಮನಗೆ ನುಗ್ಗಿದ ಅವರನ್ನು ಕಂಡು ಆಶ್ವರ್ಯ ಚಕಿತನಾದ ಆ ಹುಡುಗ, ಏನ್ ಸರ್ ನಮ್ಮ ಮನೆಗೆ ಬಂದಿದ್ದೀರಿ? ಎಂದು ಕೇಳಿದರೆ, ಆಹಾ!! ನೋಡು ಏನೂ ತಿಳಿಯದ ಮಳ್ಳನಂತೆ ಇದ್ದಾನೆ ಎಂದು ಹೇಳುತ್ತಾ, ಹಿಂದಿನ ದಿನ ಕಳೆದು ಹೋದ Laptop ಬಗ್ಗೆ ತಿಳಿಸಿ, ಸುಮ್ಮನೇ ಮರ್ಯಾದಿಯಿಂದ ನೀನು ತೆಗೆದುಕೊಂಡು ಹೋಗಿರುವ ಆ Laptop ಕೊಟ್ಟುಬಿಡು. ಇಲ್ಲಾ ಅಂದ್ರೇ, ಪರಿಸ್ಥಿತಿ ನೆಟ್ಟಗೆ ಇರುವುಗಿಲ್ಲ, ನಮಗೆ ಪೋಲೀಸ್ ಐಜಿ ಗೊತ್ತು. ಅಮೇಲೇ ಸುಮ್ಮನೇ ಕಂಬಿ ಎಣಿಸಬೇಕಾಗುತ್ತದೆ ಎಂದು ಧಮ್ಕಿ ಹಾಕಿದ್ದಾರೆ.

ಇಲ್ಲಾ ಸರ್, ನಾನು ಯಾವುದೇ Laptop ತೆಗೆದುಕೊಂಡು ಬಂದಿಲ್ಲಾ. ನನ್ನನ್ನು ನಂಬಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ, ಈ ಹುಡುಗರು ಆರಂಭದಲ್ಲಿ ಏರು ಮಾತಿನಲ್ಲಿ ಆತನ ಮೇಲೆ ಒತ್ತಡ ಹಾಕಿದ್ದಲ್ಲದೇ ನಂತರ ಮಾತು ಮಾತಿಗೆ ಬೆಳೆದು ಆತನ ಮೇಲೆ ಕೈ ಮಾಡುವ ಮಟ್ಟಕ್ಕೆ ಹೋಗಿದೆ. ಯಾವಾಗ ತನ್ನ ಮೇಲೆ ಆಕ್ರಮಣ ಮಾಡಿದರೋ, ತನಗೆ ಬಿದ್ದ ಪೆಟ್ಟಿನಿಂದಲೋ, ಇಲ್ಲವೇ, ಹೆಚ್ಚಿನ ಪೆಟ್ಟು ಬೀಳಬಾರದೆಂಬ ದೂ(ದು)ರಾಲೋಚನೆಯಿಂದಾಗಿ ಆತ ಮೂರ್ಛೆ ತಪ್ಪಿಬಿದ್ದನೋ ಇಲ್ಲವೇ ಬಿದ್ದಂತೆ ನಟಿಸುತ್ತಿದ್ದಂತೆಯೇ, ಈ ಹುಡುಗರಿಗೆ ಅಯ್ಯೋ ರಾಮಾ! ಏನೋ ಮಾಡಲು ಹೋಗಿ ಮತ್ತೇನೋ ಆಗಿಹೋಯ್ತಲ್ಲಪ್ಪಾ! ಎಂಬ ಚಿಂತೆಯಾಗಿ ಆತನ ಮೇಲೆ ನೀರು ಚುಮುಕಿಸಿ, ನೀರು ಕುಡಿಸಿ ಎಚ್ಚರಿಸಲು ಪ್ರಯತ್ನಿಸಿದರೂ, ಆತ ಏಳದೇ ಹೋದಾಗ, ಅವರಿಬ್ಬರೂ ಸದ್ದಿಲ್ಲದೇ ಅಲ್ಲಿಂದ ಪರಾರಿಯಾಗಿದ್ದಲ್ಲದೇ, ಈ ವಿಷಯವನ್ನು ನಮಗೆ ಯಾರಿಗೂ ತಿಳಿಸಿಲ್ಲ.

ನೋಡಿ ಸರ್ ನಿಮ್ಮ ಹುಡುಗರು ಮಾಡಿರುವ ಕೆಲಸ. ನಮ್ಮ ಹುಡುಗನ ಯಾವುದೇ ತಪ್ಪಿಲ್ಲದಿದ್ದರೂ ಅವನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಕಾರಣ, ಆತ ಪ್ರಜ್ಞೆ ತಪ್ಪಿಬಿದ್ದು ನಂತರ ತನ್ನ ಗೆಳೆಯನ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆಪಡೆದು ಈಗ ಕಛೇರಿಗೆ ಬಂದು ನಡೆದ ಎಲ್ಲಾ ವಿಷಯವನ್ನು ತಿಳಿಸಿದ್ದಾನೆ. ಹಾಗಾಗಿ ನಮ್ಮ ಕಂಪನಿಯ ನಿಯಮದ ಪ್ರಕಾರ ನಾವು ನಿಮ್ಮ ಹುಡುಗರ ಮೇಲೆ ಪೋಲೀಸ್ ದೂರು ಕೊಡುತ್ತೇವೆ ಎಂದು ಹೇಳಿದಾಗ, ಈ ವಿಷಯವನ್ನೇ ಅರಿಯದ ಶಂಕರ ಒಂದು ಅರ್ಧಗಂಟೆ ಸಮಯ ಕೊಡಿ ನಮ್ಮ ಹುಡುಗರನ್ನು ವಿಚಾರಿಸಿ ತಿಳಿಸುತ್ತೇನೆ ಎಂದು ಸಮಯ ತೆಗೆದುಕೊಂಡು ತನ್ನ ಹುಡುಗರನ್ನು ಕರೆದು ವಿಚಾರಿಸಿದರೆ, ಆರಂಭದಲ್ಲಿ ಒಪ್ಪಿಕೊಳ್ಳದೇ ಹೋದರೂ, ನಂತರ ಪೋಲೀಸ್ ದೂರು ಕೊಡುತ್ತಾರೆ ಎಂದು ತಿಳಿಸಿದಾಗ ವಿಧಿ ಇಲ್ಲದೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸರ್ ದಯವಿಟ್ಟು ಹೇಗಾದರೂ ನಮ್ಮನ್ನು ಬಚಾವ್ ಮಾಡಿ ಸಾರ್. ನಮ್ಮ ಮೇಲೆ ಅಪವಾದ ಬರಬಾರದೆಂದು ನಾವು ಹೀಗೆಲ್ಲಾ ಮಾಡಬೇಕಾಯ್ತು ಎಂದು ಪರಿ ಪರಿಯಾಗಿ ಕೇಳಿಕೊಳ್ಳುತ್ತಾರೆ.

ಸುಖಾ ಸುಮ್ಮನೇ, ಕೋತಿ ಮೊಸರನ್ನು ತಿಂದು ಮೇಕೆ ಬಾಯಿಗೆ ಒರೆಸಿತಂತೆ ಎಂದು ಯಾರದ್ದೋ ಅಚಾತುರ್ಯದಿಂದಾಗಿ ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಗಮನಿಸಿದ ಶಂಕರ, ಕೂಡಲೇ laptop  Escalation team manager ಮತ್ತು ಆ laptop service ಹುಡುಗನೊಂದಿಗೆ ತನ್ನ outsourced ಹುಡುಗರನ್ನು ಕೂರಿಸಿಕೊಂಡು ಒಂದು ಮೀಟಿಂಗ್ ಮಾಡಿ ಅವರಿಬ್ಬರಿಂದಲೂ ಕ್ಷಮೆಯನ್ನು ಯಾಚಿಸಿ ಮುಂದೆ ಈ ರೀತಿಯಾದ ತಪ್ಪನ್ನು ಮಾಡುವುದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆಸಿಕೊಂಡು ತನ್ನ ಪ್ರಭಾವ ಬಳಸಿ, ವಿಷಯ ಹೆಚ್ಚಿನ ಗಂಭೀರತೆಗೆ ಹೋಗದಂತೆ ನೋಡಿಕೊಳ್ಳುವಷ್ಟರಲ್ಲಿ ಇಡೀ ದಿನವೇ ಕಳೆದು ಕಡೆಗೆ ಸಾಕು ಸಾಕಾಗಿ ಮನೆಗೆ ಹೋಗಿ, ತನ್ನ ಕುಟುಂಬದವರೊಂದಿಗೆ ವಿಷಯ ತಿಳಿಸಿದಾಗ, ಅವರೆಲ್ಲರೂ ಜೋರಾಗಿ ಗೊಳ್ ಎಂದು ನಕ್ಕಾಗ, ಹೌದೌದು, ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ. ನನ್ನ ಕಷ್ಟ ನಿಮಗೇನು ಗೊತ್ತಾಗುತ್ತದೆ ಎಂದು ಹೇಳಿದಾಗ, ಅದಕ್ಕೇ ಅಲ್ವೇ? ನಿಮಗೆ ಅಷ್ಟೊಂದು ಸಂಬಳ ಕೊಡೋದು ಎಂದು ಮಗಳು ಕಿಚಾಯಿಸಿದಾಗ, ಇಂಗು ತಿಂದ ಮಂಗನಂತೆ ಶಂಕರ ಸುಮ್ಮನಾಗಿದ್ದಾನೆ.

ಇಂತಹದ್ದನ್ನೆಲ್ಲಾ ಗಮನಿಸಿಯೇ ಏನೋ? ಆತುರಗಾರನಿಗೆ ಬುದ್ದಿ ಮಟ್ಟ ಮತ್ತು ತಾಳಿದವನು ಬಾಳಿಯಾನು ಎಂಬ ಗಾದೆ ಮಾತನ್ನು ನಮ್ಮ ಹಿರಿಯರು ಮಾಡಿರಬಹುದು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

2 thoughts on “ಲ್ಯಾಪ್ ಟ್ಯಾಪ್ ಕಳೆದು ಹೋಗಿದೆ

  1. ಖಂಡಿತಾ ಹೌದು. ಅಮಾಯಕ ವ್ಯಕ್ತಿ ಸಂಶಯಕ್ಕೆ ಈಡಾಗುವ ಸಾಧ್ಯತೆ ಬಹಳ ಹೆಚ್ಚು. ಕೆಲವೊಮ್ಮೆ ಅಂತಹ ಸಂಶಯ ಸರಿಯಾಗಿರುವುದೂ ಇದೆಯಲ್ಲವೇ? ಇದಕ್ಕೆ diplomatic ಆಗಿ communication gap ಎಂಬ ಹೆಸರು ಕೊಟ್ಟು ತಿಪ್ಪೆ ಸಾರಿಸುತ್ತೇವೆ.

    Like

  2. ಹಾಸ್ಯದ ಲೇಪನವಿದ್ದರೂ‌ ಬದುಕಿನ ಸೂಕ್ಷ್ಮ ಸಂಗತಿಗಳ ಬಗ್ಗೆ ಒಳನೋಟವನ್ನು ಹೊಂದಿದೆ. ಅಂತೂ ಎರಡೂ ಸಂಗತಿಗಳು ಸುಖಾಂತವಾಗಿ ನಮ್ಮ ಮುಖದ ಮೇಲಿನ ನಗು ಹಾಗೇ ಉಳಿಯಿತು. ಧನ್ಯವಾದಗಳು ಅಂತೀನಿ.

    Like

Leave a comment