ವಿದ್ಯಾರ್ಥಿ ಭವನ, ಗಾಂಧಿಬಜಾರ್

ಮನೆಯಲ್ಲಿ ಎಷ್ಟೇ ಚೆನ್ನಾಗಿ ಅಡುಗೆ ಮಾಡಿದರೂ ಹೋಟೆಲ್ ತಿಂಡಿ ತಿನಿಸುಗಳು ಎಂದಾಕ್ಷಣ ಬಾಯಿಯಲ್ಲಿ ನೀರು ಸೋರುವುದು ಸಹಜ. ಅದರಲ್ಲೂ ಹೋಟೆಲ್ಲಿನ ಮಸಾಲೆ ದೋಸೆ ಎಂದರಂತೂ ಹೇಳುವುದೇ ಬೇಡ. ನಾವಿಂದು ಬೆಂಗಳೂರಿನ ಗಾಂಧಿಬಜಾರ್ ನಲ್ಲಿ ಇರುವ ಸುಮಾರು 75+ ವರ್ಷಗಳಷ್ಟು ಹಳೆಯದಾದ ವಿದ್ಯಾರ್ಥಿ ಭವನದ ವೈಶಿಷ್ಟ್ಯಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ, ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

vb4ಬಸವನಗುಡಿ ಅರ್ಥಾತ್ ಗಾಂಧೀಬಜಾರ್ ಹಳೆಯ ಬೆಂಗಳೂರಿನ ಹೃದಯಭಾಗ ಎಂದರೂ ತಪ್ಪೇನಿಲ್ಲ. ನಾಡಿನ ಖ್ಯಾತ ಸಾಹಿತಿಗಳು, ಬುದ್ದಿಜೀವಿಗಳು ನಟ ನಟಿಯರು ಹೀಗೆ ಪ್ರಖ್ಯಾತರೆಲ್ಲರೂ ಒಂದಾನೊಂದು ಕಾಲದಲ್ಲಿ ಬಸವನಗುಡಿಯ ಅಕ್ಕ ಪಕ್ಕದಲ್ಲೇ ವಾಸಿಸಿತ್ತಿದ್ದವರೇ. ಅದೇ ರೀತಿ ಬಸವನ ಗುಡಿ ವಿದ್ಯಾಕ್ಷೇತ್ರ ಎಂದರೂ ತಪ್ಪಾಗದು. ನ್ಯಾಷನಲ್ ಹೈಸ್ಕೂಲ್, ಬೆಂಗಳೂರು ಹೈಸ್ಕೂಲ್, ವಿಜಯ ಕಾಲೇಜ್, ರಾಷ್ಟ್ರೀಯ ವಿದ್ಯಾಲಯ ಸೇರಿದಂತೆ ಹತ್ತಾರು ಪ್ರತಿಷ್ಠಿತ ಶಾಲೆಗಳು ಈ ಸುತ್ತಮುತ್ತಲೂ ಇದೆ. ನ್ಯಾಷನಲ್ ಹೈಸ್ಕೂಲ್ ಮತ್ತು ಆಚಾರ್ಯ ಪಾಠಶಾಲೆಯ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು ಒಂದು ಸಣ್ಣ ಕ್ಯಾಂಟೀನ್ ರೂಪದಲ್ಲಿ ಆಗಿ ಪ್ರಾರಂಭವಾಗಿ ನಂತರ ವಿದ್ಯಾರ್ಥಿಗಳಿಗೆಂದೇ ಆರಂಭಿಸಲಾದ ಕಾರಣ ಅದಕ್ಕೆ ಅನ್ವರ್ಥವಾಗುವಂತೆಯೇ ವಿದ್ಯಾರ್ಥಿ ಭವನ ಎಂಬ ಹೆಸರನ್ನೇ ಇಟ್ಟುಕೊಂಡು ಶುದ್ಧವಾದ ಶುಚಿ-ರುಚಿಯಾದ ತಿಂಡಿ ತಿನಿಸುಗಳನ್ನು ಕೈಗೆಟುಕುವ ದರದಲ್ಲಿ ಕೊಡುವಂತಹ ಹೋಟೇಲ್ ಅದಾಗಿತ್ತು.

ಕರ್ನಾಟಕದಲ್ಲಿ ಹೋಟೆಲ್ ಉದ್ಯಮಿಗಳು ಎಂದರೆ ಥಟ್ ಅಂತಾ ಮನಸ್ಸಿಗೆ ಬರುವುದೇ ಉಡುಪಿ ಮೂಲದವರು. ಆರಂಭದಲ್ಲಿ ಉಡುಪಿ ಮೂಲದ ಸಂಪ್ರದಾಯಸ್ಥ ಬ್ರಾಹ್ಮಣರು ಆರಂಭಿಸಿದ ಉಡುಪಿ ಬ್ರಾಹ್ಮಣರ ಹೋಟೆಲ್ ದೇಶದ್ಯಂತ ಅತ್ಯಂತ ಪ್ರಸಿದ್ದವಾದರೆ, ಅದೇ ಹೋಟೆಲ್ಲುಗಳಲ್ಲಿ ಆರಂಭದಲ್ಲಿ ಕೆಲಸ ಮಾಡಿ ಅನುಭವವನ್ನ್ ಪಡೆದ ಶೆಟ್ಟಿ ಜನಾಂಗದವರು ನಂತರ ದಿನಗಳಲ್ಲಿ ಉಡುಪಿ ಹೋಟೆಲ್ಲುಗಳನ್ನು ಎಗ್ಗಿಲ್ಲದೇ ಪ್ರಾರಂಭಿಸಿದರು. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಶೇ90ರಷ್ಟು ಹೋಟೆಲ್ ಮಾಲಿಕರು ದಕ್ಷಿಣ ಕನ್ನಡದ ಮೂಲದವರು ಎಂದರೂ ತಪ್ಪಾಗದು. ಉಡುಪಿ ಹೋಟೆಲ್ ಆರಂಭವಾದ ಸಂಪೂರ್ಣ ವಿವರಗಳನ್ನು ಈ ಕೊಂಡಿಯ ಮೂಲಕ ತಿಳಿಯಬಹುದಾಗಿದೆ.

uralaಅದೇ ರೀತಿಯಲ್ಲೇ ಉಡುಪಿ ಜಿಲ್ಲೆಯ ಸಾಲಿಗ್ರಾಮ ಮೂಲದ ಶ್ರೀ ವೆಂಕಟರಾಮ ಉರಾಳರು 1943ರಲ್ಲಿ ಈ ಹೋಟೆಲ್ಲಿನ ಸ್ಥಾಪಕರು ಎಂದು ಹೇಳುತ್ತಾರಾದರೂ, ಬಲ್ಲ ಮೂಲಗಳ ಪ್ರಕಾರ ಯಡಿಯೂರು ಮಧ್ಯಸ್ಥ ಎಂಬವರು ಇದೇ ಸ್ಥಳದಲ್ಲಿ ನಡೆಸುತ್ತಿದ್ದ ಹೋಟೆಲ್ಲನ್ನು ಶ್ರೀ ವೆಂಕಟರಮಣ ಉರಾಳರು ಖರೀಧಿಸಿ ಮುಂದುವರೆಸಿ ಕೊಂಡು ಹೋದರು ಎನ್ನಲಾಗುತ್ತದೆ. ವಿವಿಧ ರೀತಿಯ ಪಡೆದು ನಡೆಸುತ್ತಿದ್ದರು[ ಕಳೆದಂತೆ, ಹೋಟೇಲಿನ ಖಾದ್ಯಗಳ ರುಚಿ ಇತರ ಗ್ರಾಹಕರನ್ನು ಮಸಾಲೆ ದೋಸೆಯೂ ಒಳಗೊಂಡಂತೆ, ವಿವಿಧ ದೋಸೆಗಳು, ರವೆ ವಡೆ, ಇಡ್ಲಿ, ಖಾರಾ ಬಾತ್, ಕೇಸರಿ ಬಾತ್, ಪೂರಿ ಸಾಗು ಜೊತೆ ಬಿಸಿ ಬಿಸಿಯಾದ ಫಿಲ್ಟರ್ ಕಾಫಿ ಮತ್ತು ಟೀ ಈ ಹೋಟೆಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದಲ್ಲದೇ ಬೆಲೆಯೂ ಸಹಾ ಕೈಗೆಟುಕುವಂತ್ತಿದ್ದ ಕಾರಣ, ಕೇವಲ ವಿದ್ಯಾರ್ಥಿಗಳಲ್ಲದೇ, ಸಾರ್ವಜನಿಕರೂ, ಖ್ಯಾತ ಸಾಹಿತಿಗಳು, ಸಿನೆಮಾ ನಟರು, ರಾಜಕೀಯ ಧುರೀಣರು ಸಹ ಈ ಹೋಟೆಲಿಗೆ ಭೇಟಿ‌ ನೀಡಲು ಆರಂಭಿಸುತ್ತಿದ್ದಂತೆಯೇ, ಬಾಯಿ ಮಾತಿನಲ್ಲಿಯೇ ಪ್ರಚಾರವನ್ನು ಪಡೆದು ದಕ್ಷಿಣ ಬೆಂಗಳೂರಿನ ಪ್ರಖ್ಯಾತ ಹೋಟೆಲ್ಲಾಗಿ ಹೋದದ್ದು ಈಗ ಇತಿಹಾಸ.

ramವೆಂಕಟರಮಣ ಉರಾಳರ ನಂತರ ಅವರ ಸೋದರ ಪರಮೇಶ್ವರ ಉರಾಳರು ಈ ವಿದ್ಯಾರ್ಥಿ ಭವನವನ್ನು ಕೆಲ ಕಾಲ ನಡೆಸಿಕೊಂಡು ಬಂದರಾದರೂ 1970ರಲ್ಲಿ ಕುಂದಾಪುರದ ಹತ್ತಿರದ ಶಂಕರನಾರಾಯಣ ಮೂಲದ ಶ್ರೀ ರಾಮಕೃಷ್ಣ ಅಡಿಗರಿಗೆ ವಿದ್ಯಾರ್ಥಿ ಭವನದ ನಿರ್ವಹಣೆಯನ್ನು ವಹಿಸಿಕೊಟ್ಟರು. ಕೇವಲ ಹೋಟೆಲ್ ಮಾಲಿಕರು ಬದಲಾದರೂ, ಈ ಈ‌ ಹಿಂದೆ ಇದ್ದ ಕೆಲಸಗಾರರೇ ಮುಂದುವರೆದ ಕಾರಣ, ಹೋಟೆಲ್ ಮತ್ತಷ್ಟು ಮಗದಷ್ಟು ಬೆಳೆದದ್ದಲ್ಲದೇ, ತಿನ್ನಲು ಜಾಗ ಸಿಗದೇ ಉದ್ದುದ್ದದ ಸರದಿ ಸಾಲು ನಿಲ್ಲುವಂತಾಯಿತು.

ಜಾಗವೂ ಸಹಾ ಸಣ್ಣದಾಗಿ ಸದಾಕಾಲವೂ ಗಿಜಿಗಿಜಿಗುಟ್ಟುವ ಕಾರಣದಿಂದ ಇಡೀ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ಹಾಯಾಗಿ ಬೆಣ್ಣೆ ದೋಸೆ ಸವಿಯುವುದು ಕಷ್ಟವೆನ್ನಿಸಿದರೂ ಅಲ್ಲಿನ ದೋಸೆಯ ರುಚಿಗೆ ಒಗ್ಗಿ ಹೋಗಿದ್ದ ಜನರು ಬಿಸಿಲು ಮಳೆ ಛಳಿ ಗಾಳಿ ಇದಾವುದಕ್ಕೂ ಲೆಕ್ಕಿಸದೇ, ಸರದಿಯಲ್ಲಿಯೇ ನಿಂತಿರುವಾಗಲೇ ಬೆಣ್ಣೆ ದೋಸೆಯ ಘಮಲನ್ನು ಆಹ್ಲಾದಿಸುತ್ತಾ, ಮನಸ್ಸಿನಲ್ಲೇ ಮಂಡಿಗೆ ಸವಿಯುತ್ತಾ ವಾರಕ್ಕೊಮ್ಮೆಯಾದರೂ ಇಲ್ಲಿಗೆ ಬಂದು ಬೆಣ್ಣೆ ಮಸಾಲೆ ದೋಸೆ, ಅದರೊಳಗೆ ಆಲೂಗೆಡ್ಡೆ ಪಲ್ಯ ಅದರ ಜೊತೆ ಅಷ್ಟೇ ರುಚಿಯಾದ ಕಾಯಿ ಚಟ್ನಿಯೊಂದಿಗೆ ತಿಂದು ಹದವಾದ ಕಾಫಿ ಸವಿಯುವುದು ಪ್ರತಿಷ್ಟೆಯ ಸಂಕೇತವಾಗಿ ಹೋದದ್ದು ಸುಳ್ಳಲ್ಲ.

vb3ಈ ಹೋಟೆಲ್ಲಿನ ಪ್ರಮುಖ ಆಕರ್ಷಣೆಯೆಂದರೆ, ಇಲ್ಲಿನ ಮಾಣಿ ಒಂದೇ ಸಮಯಕ್ಕೆ ಸುಮಾರು 14 ಮಸಾಲೆ ದೋಸೆಯದೋಸೆ ತಟ್ಟೆಗಳನ್ನು ಒಟ್ಟಿಗೆ ಚಂದಗೆ ಜೋಡಿಸಿಕೊಂಡು ಬಂದು ಎಲ್ಲರಿಗೂ ಅದನ್ನು ಪಟ ಪಟನೆ ಹಂಚುವುದು ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ ಇದರ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅದನ್ನು ನೋಡಿದ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ಅವರೂ ಸಹಾಮೆಚ್ಚುಗೆ ವ್ಯಕ್ತಪಡಿಸಿದ್ದದ್ದು ಗಮನಾರ್ಹವಾಗಿದೆ. ಅದೇ ರೀತಿಯಲ್ಲಿ ಇಲ್ಲಿನ ತಟ್ಟೆ ಲೋಟ ಮತ್ತು ಚಮಚಗಳ ಮೇಲೆ ವಿದ್ಯಾರ್ಥಿ ಭವನದಿಂದ ಕದ್ದದ್ದು ಎಂದು ಬರೆಸಿರುವುದು ಸಹಾ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

sra-arunಆಡಿಗರು ತಮ್ಮ ಹೋಟೆಲ್ ವ್ಯವಹಾರದಲ್ಲಿ ನಿರತರಾಗಿದ್ದರೆ, ಅವರ ಮಕ್ಕಳಿಬ್ಬರೂ ತಮಗೂ ಹೋಟೆಲ್ಲಿಗೂ ಸಂಬಂಧವೇ ಇಲ್ಲವೆನ್ನುವಂತೆ, ಚನ್ನಾಗಿ ಓದಿ ಹಿರಿಯ ಮಗ ಅರುಣ್ ಅಡಿಗ ಟೆಲಿಕಾಂ ಇಂಜಿನಿಯರಿಂಗ್ ಮಾಡಿ ಖಾಸಗಿ ಕಂಪೆನಿಯಲ್ಲಿ ಆರು ಅಂಕಿಯ ಸಂಬಳದ ಕೆಲಸದಲ್ಲಿ ಇದ್ದರೆ, ಮತ್ತೊಬ್ಬ ಮಗ ಇಂಜಿನಿಯರಿಂಗ್ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೋದವರು ಅಲ್ಲೇ ಕೆಲಸಕ್ಕೆ ಸೇರಿಕೊಂಡು ಭಾರತಕ್ಕೆ ಬರುವುದು ಗಗನ ಕುಸುಮ ಎನಿಸಿದ ಕಾರಣ, ವಯೋಸಹಜ ಕಾರಣದಿಂದ ಅಡಿಗರು ಹೋಟೆಲ್ ವ್ಯವಹಾರವನ್ನು ಶಾಶ್ವತವಾಗಿ ನಿಲ್ಲಿಸಿ ಆ ಹಳೆಯ ಕಟ್ಟಡವನ್ನು ಕೆಡವಿ ಆ ಜಾಗದಲ್ಲೊಂದು ವಾಣಿಜ್ಯ ಸಂಕೀರ್ಣವನ್ನು ಕಟ್ಟಿಸಲು ನಿರ್ಧರಿಸಿದ ವಿಷಯವನ್ನು ತಿಳಿದ ಇನ್ಫೋಸಿಸ್ ಸಂಸ್ಥೆಯ ಶ್ರೀ ನಾರಾಯಣಮೂರ್ತಿಗಳೇ ಅರುಣ್ ಅಡಿಗರನ್ನು ಕರೆದು ಇಷ್ಟು ಒಳ್ಳೆಯ ಹೋಟೆಲ್ ಮುಚ್ಚದೇ ಅದನ್ನು ಮುಂದುವರೆಸಿಕೊಂಡು ಹೋಗಲು ಸೂಚಿಸಿದರು. ಆರಂಭದಲ್ಲಿ ಅದಕ್ಕೊಪ್ಪದೇ ಹೋದರೂ ನಂತರ 2005ರಲ್ಲಿ ಧೃಡ ನಿರ್ಧಾರ ತೆಗೆದುಕೊಂಡು ತಮ್ಮ ಕೆಲಸಕ್ಕೆ ರಾಜೀನಾಮೇ ನೀಡಿ ತಂದೆಯರೊಡನೆ ಭುಜಕ್ಕೆ ಭುಜ ಕೊಟ್ಟು ನಿಂತು ತಂದೆಯ ವ್ಯವಹಾರವನ್ನು ನೋಡಿಕೊಂಡ ಪರಿಣಾಮವಾಗಿಯೇ ಇಂದಿಗೂ ಸಹಾ ಹಳೆಯ ವಿದ್ಯಾರ್ಥಿ ಭವನದ ಸವಿಯನ್ನು ಸವಿಯಬಹುದಾಗಿರುವುದು ಶ್ಲಾಘನೀಯವಾಗಿದೆ.

vb_rateವಿದ್ಯಾರ್ಥಿ ಭವನ ಸೋಮವಾರದಿಂದ ಗುರುವಾರದವರೆಗೆ ಬೆಳಿಗ್ಗೆ6:30 ರಿಂದ 11:30 ರವಗೆ ಮತ್ತು ಮಧ್ಯಾಹ್ನ2 ರಿಂದ ರಾತ್ರಿ 8 ಗಂಟೆ ವರೆಗೆ ಗ್ರಾಹಕರ ಸೇವೆಗೆ ತೆರೆದಿದ್ದರೆ, ಇನ್ನು ವಾರಾಂತ್ಯವಾದ ಶನಿವಾರ ಹಾಗೂ ಭಾನುವಾರದಲ್ಲಿ ಹೆಚ್ಚಿನ ಗ್ರಾಹಕರು ಬರುವುದರಿಂದ ಅವರ ಅನುಕೂಲಕ್ಕಾಗಿ ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 12 ರವರೆಗೆ, ಹಾಗೂ ಮಧ್ಯಾಹ್ನ 1:30 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಶುಕ್ರವಾರ ವಾರದ ರಜೆ ಇರುವುದು ಈ ಹೋಟೆಲ್ಲಿನ ವಿಶೇಷವಾಗಿದ್ದು ಅದರ ಹಿಂದೆಯೂ ಒಂದು ರೋಚಕವಾದ ಐತಿಹಾಸಿಕ ಹಿನ್ನಲೆ ಇದೆ.

idyವಿದ್ಯಾರ್ಥಿಭವನದ ಆರಂಭಿಕ ಮಾಲಿಕರಾದ ವೆಂಕಟೇಶ್ವರ ಮತ್ತು ಪರಮೇಶ್ವರ ಉರಾಳರ ಸಹೋದರರು ಸ್ವಾತ್ರಂತ್ರ್ಯ ಪ್ರೇಮಿಗಳಾಗಿದ್ದು, ವ್ಯವಹಾರದ ನಿಮಿತ್ತ ಸ್ವಾತ್ರಂತ್ಯ್ರ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗದೇ ಹೋದರೂ ಪರೋಕ್ಷವಾಗಿ ಸ್ವಾತ್ರಂತ್ಯ್ರ ಹೋರಾಟಗಾರರ ಪರವಾಗಿದ್ದರು. 1947 ಆಗಸ್ಟ್ 15ರಂದು ನಮ್ಮ ದೇಶಕ್ಕೆ ಬ್ರಿಟೀಷರಿಂದ ಸ್ವಾತ್ರಂತ್ರ್ಯ ದೊರೆತ ದಿನವನ್ನು ಬಹಳ ವಿಶೇಷವಾಗಿ ಆಚರಿಸಲು ನಿರ್ಧರಿಸಿದ ಪರಮೇಶ್ವರ ಉರಾಳರು, ಪ್ರತೀದಿನಕ್ಕಿಂತಲೂ ಮುಂಚೆಯೇ ಎದ್ದು ಖುದ್ದಾಗಿ ತಾವೇ ಆಸ್ಥೆ ವಹಿಸಿ ಎಂದಿಗಿಂತಲೂ ನಾಲ್ಕೈದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಸಿಹಿತಿಂಡಿಗಳನ್ನು ತಯಾರಿಸಿ ಆದನ್ನು ತಮ್ಮ ವಿದ್ಯಾರ್ಥಿ ಭವನದ ಬಾಗಿಲಿನ ಮುಂದೆ ಇಟ್ಟು ಗಾಂಧಿಬಜಾರ್ ಚೌಕಕ್ಕೆ ಬಂದವರೆಲ್ಲರಿಗೂ ಹಂಚಿ ಸಂಭ್ರಮಿಸುವ ಮೂಲಕ ದೇಶಪ್ರೇಮಿಗಳಾದ ಶ್ರೀ ಪರಮೇಶ್ವರ ಉರಾಳರು ಸ್ವಾತಂತ್ರ್ಯ ಹೋರಾಟಕ್ಕೆ ತಾವೂ ಮತ್ತು ತಮ್ಮ ವಿದ್ಯಾರ್ಥಿ ಭವನ ತನ್ನದೇ ರೀತಿಯಲ್ಲಿ ಸೇವೆ ಸಲ್ಲಿಸಿದ್ದದ್ದು ಎಲ್ಲರ ಮೆಚ್ಚುಗೆ ಪಡೆಯಿತು.

Friday_Holidayಹೀಗೆ ಮೊದಲ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಸಾಂಗೋಪಾಂಗವಾಗಿ ಬೆಂಗಳೂರಿಗರಿಗೆ ಸಿಹಿಯನ್ನು ಹಂಚಿ ಸಂಭ್ರಮಿಸಿದ ದಿನ ಶುಕ್ರವಾರವಾಗಿತ್ತು. ನಂತರದ ದಿನಗಳಲ್ಲಿ ವಾರವಿಡೀ ಕಷ್ಟಪಟ್ಟು ದುಡಿದು ದಣಿವಾಗಿರುತ್ತಿದ್ದ ತಮ್ಮ ಹೋಟೇಲ್ಲಿನ ನೌಕರರಿಗೆ ವಾರಕ್ಕೊಮ್ಮೆಯಾದರೂ ವಿಶ್ರಾಂತಿ ಕೊಡುವ ಮನಸ್ಸಾದಾಗ, ದೇಶದ ಸ್ವಾತಂತ್ರ್ಯ ದಿನದ ಸವಿನೆನಪು ಸದಾಕಾಲವೂ ಹಚ್ಚ ಹಸಿರಾಗಿಯೇ ಇರಬೇಕೆಂದು ನಿರ್ಧರಿಸಿ, ತಮ್ಮ ಹೋಟೆಲ್ಲಿಗೆ ಪ್ರತೀ ಶುಕ್ರವಾರವನ್ನು ವಾರದ ರಜೆಯನ್ನಾಗಿಸಿದರು. ಅಂದು ಹೀಗೆ ಆರಂಭವಾದ ಶುಕ್ರವಾರದ ವಾರದ ರಜೆಯ ಸಂಪ್ರದಾಯ, ಮಾಲಿಕರು ಬದಲಾದರೂ ಇಂದಿಗೂ ಅದನ್ನೇ ಮುಂದುವರೆಸಿಕೊಂಡು ಹೋಗಿರುವುದು ನಿಜಕ್ಕೂ ಅನನ್ಯ ಮತ್ತು ಅನುಕರಣೀಯವಾಗಿದೆ.

VB40ರ ದಶಕದಲ್ಲಿ ಆರಂಭವಾದ ವಿದ್ಯಾರ್ಥಿಭವನ ಇಂದಿಗೂ ಅದೇ ಸ್ಥಳದಲ್ಲಿಯೇ ಇದ್ದು ಕಾಲ ಕಾಲಕ್ಕೆ ತಕ್ಕಂತೆ ಅದರ ಒಳಾಂಗಣದಲ್ಲಿ ಸಣ್ಣ ಪುಟ್ಟ ನವೀಕರಣ ಮತ್ತು ದಿನನಿತ್ಯದ ಬೆಳೆಯುತ್ತಿರುವ ಗ್ರಾಹಕರಿಗೆ ಅನುಕೂಲ ಆಗುವಂತೆ ಅಲ್ಪ ಸ್ವಲ್ಪ ಹೆಚ್ಚುವರಿ ಸೌಕರ್ಯವನ್ನು ಹೊರತು ಪಡಿಸಿದರೆ ಶುಚಿ ಮತ್ತು ರುಚಿಯಲ್ಲಿ ಕೊಂಚೂ ಬದಲಾಗದೇ ಇರುವುದು ನಿಜಕ್ಕೂ ಅದ್ಭುತವಾಗಿದೆ. ವಿದ್ಯಾರ್ಥಿ ಭವನದಲ್ಲಿ ಒಮ್ಮೆ ದೋಸೆ ತಿಂದು ಸಾಬೂನು ಹಾಕಿ ಕೈ ತೊಳೆದರೂ ಅದರ ಸುವಾಸನೆ ಕೈಯಲ್ಲಿ ಹಾಗೆಯೇ ಇರುತ್ತದೆ ಎನ್ನುವುದು ಇಲ್ಲಿನ ದೊಸೆಯನ್ನು ಸವಿದವರ ಮಾತಾಗಿರುವುದಕ್ಕೆ ಕಾರಣವೇ ಅವರು ಬಳಸುವ ಪದಾರ್ಥಗಳಾಗಿದೆ. ಯಾವುದೇ ರೀತಿಯ ಕೃತಕ ಆಹಾರ ಸಾಮಗ್ರಿಗಳನ್ನು ಬಳಸದೇ, ಶುದ್ಧ ಬೆಣ್ಣೆಯಿಂದ ಮಾಡಿದ ತುಪ್ಪ ಹಾಗೂ ಮಸಾಲೆ ದೋಸೆಯ ಮೇಲೆ ಹಳ್ಳಿಯಿಂದ ತರಿಸಲಾದ ಬೆಣ್ಣೆಯನ್ನು ಬಳಸುವುದರಿಂದಲೇ ಆ ದೋಸೆಯ ರುಚಿ ಮತ್ತು ಅದರ ಘಮಲು ಇಂದಿಗೂ ಹಾಗೆಯೇ ಇದೆ. ಇದೇ ಕಾರಣಕ್ಕಾಗಿಯೇ ಇಂದಿಗೂ ಇಲ್ಲಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಪ್ರತಿದಿನವೂ ಹೆಚ್ಚೂ ಕಡಿಮೆ ಸರಿ ಸುಮಾರು 1000 ಮಸಾಲೆ ದೋಸೆಗಳು ಖರ್ಚಾದರೆ, ವಾರಾಂತ್ಯದಲ್ಲಿ ಅದರ ದುಪ್ಪಟ್ಟು ಮಸಾಲೆ ದೋಸೆಗಳು ಖರ್ಚಾಗುವುದು ಇಲ್ಲಿನ ಹೆಗ್ಗಳಿಕೆಯಾಗಿದೆ.

Dr_Rajkumar_1689340954990

70-80ರ ದಶಕದಲ್ಲಿ ವಿದ್ಯಾರ್ಥಿ ಭವನ ಕೇವಲ ಒಂದು ಸಾಮಾನ್ಯವಾದ ಹೋಟೇಲ್ ಆಗಿರದೇ ಅದೊಂದು ಸಾಹಿತಿಗಳು, ರಾಜಕಾರಣಿಗಳು, ಸಿನೆಮಾ ನಟ ನಟಿಯರ ಅಚ್ಚುಮೆಚ್ಚಿನ ತಾಣವಾಗಿತ್ತು. ಕನ್ನಡದ ನಟ ಡಾ. ರಾಜ್‌ಕುಮಾರ್ ದಂಪತಿಗಳು, ವಿಷ್ಣುವರ್ಧನ್ ದಂಪತಿಗಳು ನಿಯಮಿತವಾಗಿ ಇಲ್ಲಿಗೆ ಬಂದು ಇಲ್ಲಿನ ಮಸಾಲೆ ದೋಸೆಯ ಸವಿಯನ್ನು ಅನುಭವಿಸುತ್ತಿದ್ದರು.

vb6ವಿದ್ಯಾರ್ಥಿ ಭವನವನ್ನು ನಾನು ಹೋಟೆಲ್ ಎಂದು ಭಾವಿಸುವುದಿಲ್ಲ. ಅದೊಂದು ಸಾಂಸ್ಕೃತಿಕ ತಾಣ ಎಂದೇ, ಶತಾಯುಷಿಗಳಾಗಿದ್ದ ಇಗೋ ಕನ್ನಡ ಖ್ಯಾತರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಅಭಿಪ್ರಾಯವಾಗಿತ್ತು. ಖ್ಯಾತ ಪತ್ರಕರ್ತರಾಗಿದ್ದ ಮತ್ತು ಕನ್ನಡ ಪ್ರಭಾ ಪತ್ರಿಕೆಯ ಸಂಪಾದಕರಾಗಿದ್ದ ಶ್ರೀ ವೈಎನ್ಕೆ ಅವರು ಎಲ್ಲಿ ಸಿಗದೇ ಹೋದರೂ ಸಂಜೆಯ ಹೊತ್ತು ಇದೇ ವಿದ್ಯಾರ್ಥಿ ಭವನದಲ್ಲಿ ಸಿಕ್ಕೇ ಸಿಗುತ್ತಾರೆ ಎಂಬುದು ಅವರ ಆಪ್ತರ ನಂಬಿಕೆಯಾಗಿತ್ತು ಎಂದರೆ ವಿದ್ಯಾರ್ಥಿ ಭವನದ ಖ್ಯಾತಿ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.

vb_malleswaraಕಳೆದ ವರ್ಷ ದಕ್ಷಿಣ ಬೆಂಗಳೂರಿನ ವಿದ್ಯಾರ್ಥಿ ಭವನವು ಮಲ್ಲೇಶ್ವರಂನಲ್ಲಿ ಶೀಘ್ರದಲ್ಲೇ ಬರಲಿದೆ ಎಂಬ ಜಾಹೀರಾತು ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ಕಂಡ ಉತ್ತರ ಭಾಗದ ಬೆಂಗಳೂರಿಗರು ಅತ್ಯಂತ ಸಂತೋಷ ಪಟ್ಟುಕೊಂಡಿದ್ದರು. ಆದರೆ ವಿದ್ಯಾರ್ಥಿ ಭವನ ನಿಜಕ್ಕೂ ಹೋಟೆಲ್ ರೂಪದಲ್ಲಿ ಮಲ್ಲೇಶ್ವರಕ್ಕೆ ಬಾರದೇ, ಅದು ಬೆಂಗಳೂರು ಥಿಯೇಟರ್ ಫೌಂಡೇಶನ್ ಸಹಯೋಗದಲ್ಲಿ ಖ್ಯಾತ ರಂಗಕರ್ಮಿಗಳಾದ ಶ್ರೀ ರಾಜೇಂದ್ರ ಕಾರಂತ್ ಬರೆದು, ಅರ್ಜುನ್ ಕಬ್ಬಿನ ನಿರ್ದೇಶನದಲ್ಲಿ ನಾಟಕ ರೂಪದಲ್ಲಿ 2022ರ ಮೇ 6,7 ಮತ್ತು 8ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನಗೊಂಡು ಎಲ್ಲಾ ಕಲಾರಸಿಕರ ಮನಗೆದ್ದದ್ದು ಈಗ ಇತಿಹಾಸ.

vb2ವಿದ್ಯಾರ್ಥಿ ಭವನದ ಕುರಿತಾಗಿ ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಬಸವನಗುಡಿ ದೊಡ್ಡಗಣೇಶ ಮತ್ತು ದೊಡ್ಡ ಗಣೇಶನ ದರ್ಶನ ಪಡೆದು ಹಾಗೆಯೇ ವಿದ್ಯಾರ್ಥಿ ಭವನದ ಬೆಣ್ಣೆ ದೋಸೆಯನ್ನು ಸವಿದು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

Leave a comment