ಉಡುಪಿ ಉಪಹಾರ ಗೃಹ

udu6ಉಡುಪಿ ಎಂದೊಂಡನೆಯೇ ಆಸ್ಥಿಕರಿಗೆ ಉಡುಪಿಯ ಶ್ರೀ ಕೃಷ್ಣ, ಅಷ್ಟ ಮಠಗಳು, ಸಂಸ್ಕೃತ-ವೇದ ಪಾಠ ಶಾಲೆಗಳು,  ರಥದ ಬೀದಿ, ಇತ್ತೀಚೆಗೆ ಅಗಲಿದ ಪೇಜಾವರ ಶ್ರೀಗಳು ನೆನಪಿಗೆ ಬಂದರೆ, ವಾಣಿಜ್ಯೋದ್ಯಮಿಗಳಿಗೆ  ಅವಿಭಜಿತ ದಕ್ಷಿಣ ಕರ್ನಾಟಕದ ಭಾಗವಾಗಿ ಉಡುಪಿಯಿಂದಲೇ ಆರಂಭವಾಗಿ ಇಂದು ಹಲವಾರು ರಾಷ್ಟ್ರೀಕೃತ ಬ್ಯಾಂಕಿನೊಂದಿಗೆ ವಿಲೀನವಾಗಿ ಹೋದ, ಕೆನರ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕುಗಳು ನೆನಪಾಗುತ್ತದೆ.  ಇನ್ನು  ತಿಂಡಿ ಪೋತರಿಗೆ ಉಡುಪಿ ಎಂದೊಡನೆ ನೆನಪಿಗೆ ಬರುವುದೇ, ಉಡುಪಿ ಶ್ರೀಕೃಷ್ಣ ಮಠದ ಭೋಜನಶಾಲೆ ಮತ್ತು  ರಾಜ್ಯಾದ್ಯಂತ, ದೇಶಾದ್ಯಂತ ಏನು ಪ್ರಪಂಚಾದ್ಯಂತ ಹರಡಿಕೊಂಡಿರುವ ಶುಚಿ ರುಚಿಯಾದ, ಶುಧ್ಧ ಸಸ್ಯಾಹಾರಿ  ಅಪ್ಪಟ ದಕ್ಷಿಣ ಭಾರತದ ಅಡುಗೆಯ  ಉಡುಪಿ ಹೋಟೆಲ್ಗಳು ಎಂದರೆ ಅತಿಶಯೋಕ್ತಿಯೇನಲ್ಲ.

udupiಇದಕ್ಕೆ ಪೂರಕವಾಗುವಂತಹ  ಬಹಳ ಹಳೆಯದಾದ ಜೋಕ್ ಒಂದಿದೆ. ಪ್ರಪಂಚಾದ್ಯಂತ  ಎಲ್ಲಿಂದ ಎಲ್ಲಿಗೆ ಹೋದರೂ, ಅಲ್ಲೊಂದು ಮಲೆಯಾಳೀ ಟೀ ಅಂಗಡಿ ಸಿಗುತ್ತದಂತೆ.  ಚಂದ್ರನ ಮೇಲೆ  ಪ್ರಪ್ರಥಮವಾಗಿ ಕಾಲಿಟ್ಟವರು ನಾವೇ ಎಂದು ಬೀಗುತ್ತಿದ್ದ  ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಬುಝ್ ಆಲ್ಡ್ರಿನ್  ಅವರಿಗೆ ಚಾಯ್ ಚಾಯ್ ಎಂದು ಒಬ್ಬ ಮಲೆಯಾಳಿ ಎದುರಾದರೆ ಅವನ ಹಿಂದೆ ಬಿಸಿ ಬಿಸಿ ಇಡ್ಲಿ ವಡೆ, ಉಪ್ಪಿಟ್ಟು ಇದೆ ಏನ್ ಕೊಡ್ಲಿ ಮಾರಾಯಾ ಅಂತಾ ಕೇಳಿದ್ರಂತೇ ಉಡುಪಿಯ ಭಟ್ಟರುಸಿರಿಗನ್ನಡಂ ಗೆಲ್ಗೆ ಎನ್ನುವುದನ್ನು ಸಿರಿಗನ್ನಡಂ ಗಲ್ಲಿ ಗಲ್ಲಿಗೆ  ಎಂದು ಬದಲಾವಣೆ ಮಾಡಿಕೊಂಡಂತೆ ಈಗ  ಗಲ್ಲಿ ಗಲ್ಲಿಗೊಂದು ಉಡುಪಿ ಹೋಟೆಲ್ಗಳಿದ್ದು ಎಲ್ಲಡೆಯಲ್ಲೂ  ಕನ್ನಡದ ಆಹಾರ ಪದ್ದತಿಯ ಜೊತೆ ಕನ್ನಡತನವನ್ನು ಪಸರಿಸಿದ ಕೀರ್ತಿ ಉಡುಪಿ ಹೋಟೆಲ್ ಅವರದ್ದು ಎಂದರೂ ತಪ್ಪಾಗಲಾರದು.

ಈಗಂತೂ ಒಂದು ಊರಿನಲ್ಲಿ ಒಂದು ಹೊಸಾ ಬಡಾವಣೆ  ತಲೆ  ಎದ್ದಿತೆಂದರೆ  ಖಂಡಿತವಾಗಿಯೂ ಅಲ್ಲೊಂದು  ಉಡುಪಿ ಹೋಟೆಲ್ ಇದ್ದೇ ಇರುತ್ತದೆ.  ಆಡು ಮುಟ್ಟದ ಸೊಪ್ಪಿಲ್ಲ, ಅನ್ನೋ ಹಾಗೆ ಉಡುಪಿ ಹೋಟೆಲ್ ಗಳಿಲ್ಲದ ಊರೇ ಇಲ್ಲ. ಮೊದ ಮೊದಲು ಹೋಟೆಲ್ ನಡೆಸುವ ಆಸೆ, ಅಥವಾ ಯೋಚನೆ ಉಡುಪಿಯವರಿಗೇ ಏಕೆ ಬಂತು? ಅನ್ನುವ ಬಗ್ಗೆ ಸರಿಯಾದ ಮಾಹಿತಿ ಎಲ್ಲಿಯೂ ಸಿಗುವುದಿಲ್ಲವಾದರೂ, ಶಿವರಾಮ ಕಾರಾಂತರ ಮರಳಿ ಮಣ್ಣಿಗೆ ಪುಸ್ತಕದಲ್ಲಿ ಬರುವ ಎಳೆಯಂತೆ ಕುಂದಾಪುರದ ಕಡೆಯ ಶಿವಳ್ಳಿ ಬ್ರಾಹ್ಮಣರು ತಮ್ಮ ಮಕ್ಕಳು ತಮ್ಮಂತೆಯೇ ಊರಿನಲ್ಲಿಯೇ ಇರುವ ಬದಲು ದೂರದ ಪಟ್ಟಣಗಳಿಗೆ ಹೋಗಿ ಓದಿ ದೊಡ್ಡ ಕಛೇರಿಗಳಲ್ಲಿ ಕೆಲಸ ಮಾಡಲಿ ಎಂದು ಬಯಸಿದ್ದರಿಂದ ಮಕ್ಕಳನ್ನು ಹೊರ ಊರಿಗೆ ಕಳುಹಿಸಿದರು. ಅಲ್ಲಿ ತಮ್ಮ ಮಕ್ಕಳಿಗೆ ಊಟ ಸರಿಯಾಗಿ ಸಿಗದ ಕಾರಣ ಅವರ ಜೊತೆ ಇಡೀ ಸಂಸಾರಗಳೂ ಆ ಪಟ್ಟಣಗಳಲ್ಲಿ  ವಲಸೆ ಹೋಗಿ ಜೀವನಾವಶ್ಯಕಕ್ಕಾಗಿ ಬೇಸಾಯ ಮತ್ತು  ಅಡುಗೆ ಬಿಟ್ಟು  ಬೇರೇನೂ ಬಾರದ ಕಾರಣ ಅಲ್ಲಿಯೇ ಸಣ್ಣದಾಗಿ ಹೋಟೆಲ್ ಆರಂಭಿಸಿದರುಇಂಗು ತೆಂಗು ಕೊಟ್ಟರೆ ಮಂಗವೂ ಅಡುಗೆ ಚೆನ್ನಾಗಿಯೇ ಮಾಡುತ್ತದೆ ಎನ್ನುವ ಗಾದೆಯಂತೆ,  ಯಥೇಚ್ಚಚಾಗಿ ಇಂಗು ತೆಂಗು ಬಳಸಿ ಶುಚಿ ರುಚಿಯಾಗಿ ಮಾಡಿದ ಅಡುಗೆಗಳು ಎಲ್ಲರ ನಾಲಿಗೆ ಬರವನ್ನು ಕಳೆದದ್ದರಿಂದ ಆ ಹೋಟೇಲ್ಗಳು  ಬಹುಬೇಗನೆ ಹೆಸರುವಾಸಿಯಾಗ ತೊಡಗಿದವು. ಇದರ ಹೊರತಾಗಿ ಬೇರೇ ಯಾವುದಾದರೂ ಕಾರಣಕ್ಕಾಗಿ ಉಡುಪಿಯ ಹೊಟೇಲ್ಗಳು ಪ್ರಸಿದ್ಧವಾಗಿದೆ ಎಂದರೆ ಬಲ್ಲವರಾಗಲೀ ಅಥವಾ ಉಡುಪಿ  ಕಡೆಯವರೇ ಹೇಳಬೇಕು. ತಿಂಡಿಪೋತ ಅನ್ನೋ ಹೆಸರು ಗಳಿಸಿರೋ ಕೃಷ್ಣ ಇರೋ ಊರಿನವರಾದ್ದರಿಂದ,  ಆಷ್ಟ ಮಠಗಳ ಪಾಕ ಶಾಲೆ ಮತ್ತು ದೇವಾಲಯಗಳಲ್ಲಿ ಇದ್ದವರೇ   ಕರ್ನಾಟಕಾದ್ಯಂತ,  ಭಾರತಾದ್ಯಂತ  ಹಲವಾರು ರಾಜ್ಯಗಳಲ್ಲಿ,ಅದರಲ್ಲೂ, ಮಹಾರಾಷ್ಟ್ರ, ತಮಿಳುನಾಡು,  ದೆಹಲಿಯಯ ಕಡೆಗಳಲ್ಲಿ   ಅಲ್ಲದೇ ವಿದೇಶಗಳಲ್ಲಿಯೂ ವಿಶೇಷವಾಗಿ ಉಡುಪಿ ಹೋಟೆಲ್ಗಳನ್ನು   ಆರಂಭಿಸಿ ಉಡುಪಿಯ ಹೆಸರನ್ನು ವಿಶ್ವವಿಖ್ಯಾತ ಮಾಡಿರುವುದಂತೂ ಸತ್ಯವೇ ಸರಿ.

udu918ನೇ ಶತಮಾನದ ಅಂತ್ಯ ಮತ್ತು  19ನೇ ಶತಮಾನದ ಆರಂಭದಲ್ಲಿ ತಮಿಳುನಾಡಿಗೆ ಲಗ್ಗೆ ಇಟ್ಟ  ಈ ಉಡುಪಿ ಹೋಟೆಲ್ಗಳು  ತಮಿಳ್ನಾಡಿನಲ್ಲಿನಲ್ಲಂತೂ ಹೇಗೆ ಹಾಸುಹೊಕ್ಕಾಗಿದೆ ಎಂದರೆ  ಉಡುಪಿ ಎಂದರೆ   ಸಸ್ಯಾಹಾರಿ ಎನ್ನುವಂತಹ ಅನ್ವರ್ಥನಾಮ ಬಂದುಬಿಟ್ಟಿದೆ. ವನಸ್ಪತಿ ಎಣ್ಣೆ ಎಂದರೆ ಜನರಿಗೆ ಹೇಗೆ   Dalda ಎನ್ನುವುದು ಮನಸ್ಸಿಗೆ ಮೂಡುತ್ತದೆಯೋ ಅದೇ ರೀತಿ   ವೆಜಿಟೇರಿಯನ್ (ಸಸ್ಯಹಾರಿ)  ಅಂತ ಹೇಳುವ  ಬದಲು ಎಲ್ಲರೂ ಉಡುಪಿ ಅಂತಷ್ಟೇ ಹೇಳುತ್ತಾರೆ. ಸರವಣ ಭವನ್ (ಉಡುಪಿ) ಅನ್ನೋ ಬೋರ್ಡ್ ಇಂದೂ ಸಹಾ ಎಲ್ಲಾ ಕಡೆಯಲ್ಲಿಯೂ ಕಾಣಬಹುದಾಗಿದೆ.  ಹೀಗೆ  ಆ ಹೋಟೆಲ್ ಗಳ ಮಾಲಿಕರು   ಆಂಧ್ರದವರಾಗಿರಬಹುದು, ಅಥವಾ ಉತ್ತರ ಭಾರತೀಯರೇ ಆಗಿರಬಹುದು ಅದು ವೆಜಿಟೇರಿಯನ್  ಹೋಟೆಲ್ ಆಗಿದ್ದಲ್ಲಿ ಅಲ್ಲಿಯ ಜನ ಗುರುತಿಸೋದೇ  ಉಡುಪಿ ಹೋಟೆಲ್ ಅಂತಲೇ.

udupi10ಇದೇ ರೀತಿಯ ಅನುಭವ ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೂರದ ಅಮೇರಿಕಾದಲ್ಲಿಯೂ ಸ್ವತಃ ನಮಗಾಗಿದೆಅಮೇರೀಕಾದ ಲಾಸ್ ಏಂಜಲೀಸ್ ನಗರದಲ್ಲಿ ಭಾರತೀಯ ಅಂಗಡಿಗಳೇ ಹೆಚ್ಚಾಗಿರುವ ಲಿಟಲ್ ಇಂಡಿಯಾ ರಸ್ತೆಯಲ್ಲಿ ಹೋಗುತ್ತಿರುವಾಗ ಧುತ್ತೆಂದು ನಮ್ಮ ಕಣ್ಣಿಗೆ ಉಡುಪಿ ಪ್ಯಾಲೇಸ್ ಕಾಣಿಸಿದ ಕೂಡಲೇ ಎಲ್ಲೋ ನಿಧಿ ಸಿಕ್ಕಿದಂತೆ  ಅನುಭವವಾಗಿ  ಗೂಳಿಯಂತೆ  ಒಳಗೆ ನುಗ್ಗಿದೆವುಮೆನು ಏನೋ ಕನ್ನಡದ ಆಡುಗೆಗಳಾಗಿದ್ದರೂ, ಕನ್ನಡದ ಕಂಪು ಒಂದು ಚೂರು ಅಲ್ಲಿಲ್ಲದ್ದನ್ನು ಕಂಡು ಕಸಿವಿಸಿಗೊಂಡು ಹೋಟೆಲ್ ಮ್ಯಾನೇಜರ್ ಅವರನ್ನು ವಿಚಾರಿಸಿದಾಗ ತಿಳಿದ ವಿಷಯವೇನೆಂದರೆ  ಹೋಟೆಲ್ಲಿನ ಒಬ್ಬ ಮಾಲಿಕರು ಮಂಗಳೂರು ಕಡೆಯ ಕೊಂಕಣಿಯವರಾಗಿದ್ದ ಕಾರಣ  ತಮ್ಮ ಸಸ್ಯಹಾರೀ ಹೋಟೆಲ್ಲಿನ ಜನಾಕರ್ಷಣೆಗೆಂದು ಉಡುಪಿಯ ಹೆಸರಿಟ್ಟಿರುವುದಾಗಿ ತಿಳಿದುಬಂದಿತು.

ಈಗಾಗಲೇ ತಿಳಿಸಿದಂತೆ ಸಣ್ಣ ಸಣ್ಣದಾಗಿ ಮೈಸೂರು,  ಬಾಂಬೆ, ತಮಿಳುನಾಡು ಮತ್ತು ಆಂಧ್ರದ ಕೆಲವು ಕಡೆ ಆರಂಭವಾದ ಉಡುಪಿ ಹೋಟೆಲ್ಲುಗಳಲ್ಲಿ ಅತ್ಯಂತ  ವೇಗವಾಗಿ ಪ್ರಸಿದ್ಧಿ ಪಡೆದು ದೊಡ್ಡ ಮಟ್ಟದಲ್ಲಿ ಬೆಳೆದ  ಹೋಟೆಲ್ಲುಗಳೆಂದರೆ ಮೈಸೂರಿನ ದಾಸ್ ಪ್ರಕಾಶ್, ತಮಿಳುನಾಡಿನ ವುಡ್ ಲ್ಯಾಂಡ್ ಮತ್ತು ಬೆಂಗಳೂರಿನ  ಎಂಟಿಆರ್ ಹೋಟೆಲ್ಲುಗಳು. ಸರಿ ಸುಮಾರು 1920ನೇ ಇಸ್ವಿಯಲ್ಲಿ  ಹತ್ತು ಹನ್ನೆರಡು ವರ್ಷದ  ಉಡುಪಿಯ ಮೂಲದ ರಾಮ ನಾಯಕ್ ಎನ್ನುವರು ಉದ್ಯೋಗ ಅರೆಸಿಕೊಂಡು  ದಕ್ಷಿಣ ಭಾರತೀಯರೇ ಹೆಚ್ಚಾಗಿರುವ ಮಾತುಂಗ  ಪ್ರದೇಶಕ್ಕೆ ಬರುತ್ತಾರೆ. ಆರಂಭದಲ್ಲಿ  ಅಲ್ಲಿಯೇ ಸಣ್ಣ ಹೋಟೆಲ್ ಒಂದರಲ್ಲಿ  ಮುಸುರೆ ಕೆಲಸಕ್ಕೆ  ಸೇರಿ, ನಂತರ ತರಕಾರಿ ಹೆಚ್ಚಿಕೊಡುವ ಕೆಲಸ ಮಾಡುತ್ತಲೇ ಕೆಲವೇ ವರ್ಷಗಳಲ್ಲಿ ಒಳ್ಳೆಯ ಬಾಣಸಿಗರಾಗಿ ಭಡ್ತಿ ಪಡೆದು ಉತ್ತರ ಭಾರತದ ಎಲ್ಲಾ ರೀತಿಯ ಅಡುಗೆಯನ್ನು ಕರಗತ ಮಾಡಿಕೊಳ್ಳುತ್ತಾರೆ.

ಹೇಳಿ ಕೇಳಿ ಮುಂಬೈ ನಗರದ ಸದಾ ಜನಗಂಗುಳಿಯಿಂದ ಗಿಜಿ ಗಿಜಿ ಗುಟ್ಟುತ್ತಲೇ ಇರುತ್ತದೆ. ಬೆಳಗಿನ ಜಾವ ನಾಲ್ಕಕ್ಕೆ ದಿನ ಆರಂಭವಾದರೆ  ಮಧ್ಯರಾತ್ರಿ ಎರಡಕ್ಕೆ ಮುಕ್ತಾಯವಾಗುವಂತಹ ನಗರ ಅಲ್ಲಿ  1930ರಲ್ಲಿ ರಾಮ ನಾಯಕರು ಸಣ್ಣದಾಗಿ ತಮ್ಠ ಸ್ವಂತದ್ದೊಂದು ಹೋಟೆಲ್ ಆರಂಭಿಸಿ  ಇಡ್ಲಿ, ವಡೆ, ಉಪ್ಪಿಟ್ಟು ದೋಸೆ ಹೀಗೆ ಉಡುಪಿ ಶೈಲಿಯ ಅಡುಗೆಗಳನ್ನು  ಅಲ್ಲಿಯ ಜನಕ್ಕೆ ಪರಿಚಯಿಸಿ, ಕಡೆಗೆ 1942 ರಲ್ಲಿ ಉಡುಪಿ ಹೋಟೆಲ್ ಎಂಬ ಹೆಸರಿನಲ್ಲಿ ದೊಡ್ದದಾಗಿ ಹೋಟೆಲ್ ಆರಂಭಿಸುವ ಮೂಲಕ  ಉಡುಪಿಯ ಹೆಸರು ಮುಂಬೈಯಲ್ಲಿ ಅಜರಾಮರವಾಗುವಂತೆ ಮಾಡುತ್ತಾರೆ. ಮುಂದೇ ಇದೇ ಹೋಟೆಲ್  ದಕ್ಷಿಣ ಕನ್ನಡದ ಅದೆಷ್ಟೋ ಹುಡುಗರಿಗೆ ಆಶ್ರಯ ತಾಣವಾಗುತ್ತದೆ.  ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರುವಾಸಿಯಾಗಿರುವ ದಯಾನಾಯಕ್ ಅವರೂ ಸಹಾ ಮುಂಬೈಯ್ಯಿಗೆ ಹೋದ ಆರಂಭದ ದಿನಗಳಲ್ಲಿ ಇದೇ ಹೋಟೆಲ್ ಆಶ್ರಯ ನೀಡಿತ್ತು ಎಂದು ತಮ್ಮ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿರುವುದು ಈ ಉಡುಪಿ ಹೋಟೆಲ್ಲಿನ ಹೆಗ್ಗಳಿಕೆಯಾಗಿದೆ.

udu7ಮೈಸೂರಿನಲ್ಲಿ  ಉಡುಪಿಯ ಮೂಲದವರೇ ಆದ  ಕೆ. ಸೀತಾರಾಮ ರಾವ್ ಅವರು   ದಾಸ್ ಪ್ರಕಾಶ್ ಹೋಟೆಲ್ ಎಂಬ ಹೆಸರಿನಲ್ಲಿ ಉಡುಪಿಯ ಪ್ರಸಿದ್ಧ ಖಾದ್ಯಗಳಾದ ಕಡುಬು ಚಟ್ನಿ, ಕಾಯಿ ಹಾಲು, ನೀರು ದೋಸೆ, ಕಾಯಿ ಕಡುಬು, ಹಲಸಿನ ಎಲೆ ಕಡುಬು, ಸುಳಿ ಕಡಬು, ಉಂಡೆ ಕಡಬು, ಗಸಿ ಪತ್ರೊಡೆ, ಹಲಸಿನ ಹಣ್ಣಿನ ಗಟ್ಟಿ, ಯಲ್ಲಪ್ಪ, ಗುಳಿಯಪ್ಪ, ಅಕ್ಕಿರೊಟ್ಟಿ, ಉದ್ದಿನ ನಿಟ್ಟು, ಮಣ್ಣಿ ಲಡ್ಡು, ಹೋಳಿಗೆಗಳ ಮುಖಾಂತರ ದೇಶ ವಿದೇಶಗಳಲ್ಲಿ ಹೋಟೆಲ್ಲುಗಳನ್ನು ಆರಂಭಿಸಿ  ವಿಶ್ವವಿಖ್ಯಾತ ಗಳಿಸಿದ್ದು ಈಗ ಇತಿಹಾಸವಾಗಿದೆ.

udu5ಅವಿಭಜಿತ ದಕ್ಷಿಣ ಕನ್ನಡ  ಕಡಂಡಲೆ  ಎಂಬ ಗ್ರಾಮದಲ್ಲಿ ಜನಿಸಿದ ಕೆ. ಕೃಷ್ಣ ರಾವ್ ಬಾಲ್ಯದಲ್ಲಿಯೇ  ಉಡುಪಿಯ ಪುತ್ತಿಗೆ ಮಠದಲ್ಲಿ ತಮ್ಮ ಚಿಕ್ಕಪ್ಪನೊಂದಿಗೆ ಕೆಲಸಕ್ಕೆ ಸೇರಿಕೊಂಡು ನಂತರ  ಮಠದ ಕಡೆಯಿಂದಲೇ ಮದ್ರಾಸಿಗೆ ಹೋಗಿ ಅಲ್ಲಿಯ ಮಠವೊಂದರ  ಸ್ವಾಮಿಗಳ ಶಿಷ್ಯರಾಗಿ ಸೇರಿಕೊಂಡು ಸಮಯ ಸಿಕ್ಕಾಗಲೆಲ್ಲಾ ಹತ್ತಿರದ  ರೆಸ್ಟೋರೆಂಟ್‌ನಲ್ಲಿ  ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು  ಅದಾದ ಕೆಲದಿನಗಳಲ್ಲಿ ಮದ್ರಾಸಿನ  ಜಾರ್ಜ್ ಟೌನ್‌ನ ಶಾರದಾ ವಿಲಾಸ್ ಬ್ರಾಹ್ಮಣರ ಹೋಟೆಲ್ಲಿಗೆ  ಅಡುಗೆ ಹುಡುಗನಾಗಿ ಸೇರಿಕೊಂಡು 1925 ರಲ್ಲಿ  ಅದೇ ಹೋಟೆಲ್ಲನ್ನು  700 ರೂಪಾಯಿಗಳಿಗೆ ಖರೀದಿಸಿ ತಕ್ಕ ಮಟ್ಟಿಗಿನ ವ್ಯಾಪಾರ ನಡೆಸತೊಡಗಿದರು.  ಈಗಲೂ ನಮ್ಮೆಲ್ಲರ ಅಚ್ಚುಮೆಚ್ಚಿನ ವಿಶ್ವವಿಖ್ಯಾತ ಗರಿ ಗರಿಯದ  ಮಸಾಲೇ ದೋಸೆಯ ಜನಕರೂ ಸಹಾ ಇದೇ ಕೆ ಕೃಷ್ಣರಾವ್ ಎಂಬುದು ಗಮನಾರ್ಹ ಸಂಗತಿ.

udu2ಮದ್ರಾಸಿನ ಮೌಂಟ್ ರಸ್ತೆಯಲ್ಲಿ   ಒಂದೇ ಒಂದು  ಯೋಗ್ಯ ಸಸ್ಯಾಹಾರಿ ರೆಸ್ಟೋರೆಂಟ್  ಇರಲಿಲ್ಲವಾದ್ದರಿಂದ  1926-27 ರ ಸಮಯದಲ್ಲಿ   ಕೃಷ್ಣ ರಾವ್  ಅವರು ಅಲ್ಲಿ ಉಡುಪಿ ಶ್ರೀ ಕೃಷ್ಣ ವಿಲಾಸ್ ಮತ್ತು ಉಡುಪಿ ಹೋಟೆಲ್ ಎಂಬ ಹೆಸರಿನಲ್ಲಿ ಎರಡು ಹೋಟೆಲ್ಲನ್ನು  ಆರಂಭಿಸಿದರು. ಪುನಃ  1939 ರಲ್ಲಿ ರಾವ್ ಉಡ್ ಲ್ಯಾಂಡ್ಸ್ ಎಂಬ ಹೋಟೆಲ್ ಆರಂಭಿಸಿದರು     (ಪ್ರಸ್ತುತ ಅದನ್ನು ಓಲ್ಡ್ ವುಡ್ಲ್ಯಾಂಡ್ಸ್  ಎಂದು ಕರೆಯಲ್ಪಡುತ್ತದೆ)  1952 ರಲ್ಲಿ  ಮೈಲಾಪುರದ ಕ್ಯಾಥೆಡ್ರಲ್ ರಸ್ತೆಯಲ್ಲಿ ನ್ಯೂ ಉಡ್ ಲ್ಯಾಂಡ್ಸ್  ಎಂಬ ಹೆಸರಿನಲ್ಲಿ  ಮತ್ತೊಂದು  ಹೋಟೆಲ್  ಆರಂಭಿಸಿ ಅತ್ಯಂತ ಹೆಸರುವಾಸಿಯಾಗಿದ್ದಲ್ಲದೆ. ಸಾಂಪ್ರದಾಯಿಕ ಹೋಟೆಲ್ ಗಳಲ್ಲದೇ ಡ್ರೈವ್-ಇನ್ ರೆಸ್ಟೋರೆಂಟ್ ಕೂಡಾ ಆರಂಭಿಸಿ ಜನರು ತಮ್ಮ ವಾಹನಗಳಲ್ಲಿಯೇ ಕುಳಿತು ತಿನ್ನುವಂತಹ ವ್ಯವಸ್ಥೆಯನ್ನು ಅಂದಿನ ಕಾಲದಲ್ಲಿಯೇ ಆರಂಭಿಸಿದರು. ಮುಂದೆ  ಇವರದ್ದೇ ಹೋಟೆಲ್ಗಳು  ಬೆಂಗಳೂರು, ಕೊಯಮತ್ತೂರು, ಸೇಲಂ, ಅಹಮದಾಬಾದ್, ನವದೆಹಲಿ, ಮತ್ತು ಬಾಂಬೆ ಮುಂತಾದ ನಗರಗಳಲ್ಲದೇ  ಲಂಡನ್, ನ್ಯೂಯಾರ್ಕ್ ಮತ್ತು ಸಿಂಗಾಪುರಗಳಲ್ಲಿಯೂ ಉಡ್ ಲ್ಯಾಂಡ್ಸ್ ಎಂಬ ಹೆಸರಿನಲ್ಲಿ ಹೊಟೆಲ್ಗಳನ್ನು ಆರಂಭಿಸಿ  ವಿಶ್ವವಿಖ್ಯಾತರಾದರು.

udu3ಇನ್ನು ಬೆಂಗಳೂರಿನ ಲಾಲ್ ಬಾಗ್ ಪ್ರದೇಶದ ಮಾವಳ್ಳಿಯಲ್ಲಿ 1924 ರಲ್ಲಿ ಪರಂಪಲ್ಲಿ ಯಜ್ಞನಾರಾಯಣ ಮೈಯ್ಯ ಮತ್ತು ಅವರ ಸಹೋದರರು  ಎಂಟಿಆರ್  ( ಮಾವಳ್ಳಿ ಟಿಫನ್ ರೂಮ್ )  ಎಂಬ ಹೆಸರಿನಲ್ಲಿ  ಸಣ್ಣ ಪ್ರಮಾಣದ  ರೆಸ್ಟೋರೆಂಟ್ ಒಂದನ್ನು ಆರಂಭಿಸಿ ಕೆಲವೇ ಕೆಲವು ವರ್ಷಗಳಲ್ಲಿ ವಿಶ್ವ ವಿಖ್ಯಾತವಾಗುವಂತೆ ಮಾಡುವುದರಲ್ಲಿ ಯಶಸ್ವಿಯಾದರು.   ಅಪ್ಪಟ್ಟ ದೇಸೀ ಬೆಣ್ಣೆ ಮತ್ತು ತುಪ್ಪ ಬಳೆಸುವ ಮೂಲಕ ಯಾವುದೇ ರೀತಿಯ ಕಲಬೆರಕೆ ಇಲ್ಲದ ಪರಿಶುದ್ಧವಾದ  ಶುದ್ಧವಾದ ಸಾಮಾನುಗಳನ್ನು ಬಳೆಸಿ ತಯಾರಿಸುತ್ತಿದ್ದ  ಆಹಾರ ಬಲು ಬೇಗನೆ ಪ್ರಸಿದ್ಧಿಯನ್ನು ಪಡೆದುಕೊಂಡಿತು.  ಲಾಲ್ ಬಾಗಿನಲ್ಲಿ ಬೆಳಗಿನ ವಾಕಿಂಗ್ ಮುಗಿಸಿ ಕೊಂಡು ಅಲ್ಲಿಯ ಬಿಸಿ ಬಿಸಿ ಫಿಲ್ಟರ್ ಕಾಫೀ ಮತ್ತು ತಿಂಡಿಗಳನ್ನು ತಿನ್ನಲು ಜನ ಇಂದಿಗೂ ಸಾಲು ಸಾಲು ನಿಲ್ಲುತ್ತಾರೆ.

ಅಲ್ಲಿಯ ಜನದಟ್ಟಣೆ  ಆಂದಿಗೂ ಮತ್ತು ಇಂದಿಗೂ ಎಷ್ಟು ಇರುತ್ತದೆ ಎಂದರೆ ಒಬ್ಬರು ತಿಂಡಿ ತಿನ್ನುತ್ತಿದ್ದರೆ ಅವರ ಪಕ್ಕದಲ್ಲಿ ಆ ಜಾಗ ಹಿಡಿಯಲು ಮತ್ತೊಬ್ಬರು ನಿಂತುಕೊಂಡಿರುತ್ತಾರೆ. ಕಲವೊಮ್ಮೆ ಗಂಟೆ ಗಟ್ಟಲೆ ಕಾಯಬೇಕಾದಂತಹ ಪರಿಸ್ಥಿತಿ ಇದೆ.  ಆರಂಭದಲ್ಲಿ  ಪರಿಶುದ್ಧತೆಗಾಗಿ ಬೆಳ್ಳಿ ತಟ್ಟೆ, ಲೋಟ ಮತ್ತು ಚಮಚಗಳನ್ನು ಬಳೆಸುತ್ತಿದ್ದವರು ಈಗ ಊಟದ ಸಮಯದಲ್ಲಿ ಬೆಳ್ಳಿ ಲೋಟಗಳಿಗೆ ಮಾತ್ರವೇ ಸೀಮಿತ ಗೊಳಿಸಿದ್ದಾರೆ.    ಕೆಲವರು ಹೇಳುವ ಪ್ರಕಾರ ಎಂಟಿಆರ್ ದೋಸೆಗಳು ಬೆಳ್ಳಂಬೆಳಿಗ್ಗೆ ವಿಮಾನದಲ್ಲಿ  ಬೆಂಗಳೂರಿನಿಂದ ಬಾಂಬೆಗೆ ವಿಮಾನದಲ್ಲಿ ಪಾರ್ಸಲ್ ಆಗುತ್ತಿದ್ದಂತೆ. 1970 ರ ದಶಕದಲ್ಲಿ ಭಾರತ ಪಾಕೀಸ್ಥಾನದ ಯುದ್ಧದ ಸಮಯದಲ್ಲಿ  ದೇಶಾದ್ಯಂತ ಅಕ್ಕಿಯ ಸಮಸ್ಯೆಯಾದಾಗ, ಅನೇಕ ಹೋಟೆಲ್ಲುಗಳಲ್ಲಿ ಇಡ್ಲಿ ಮಾಡಲು  ಅಕ್ಕಿಯೇ ಪ್ರಧಾನವಾಗಿದ್ದ ಕಾರಣ ಅಕ್ಕಿಯೇ ಸಿಗದೇ ಮುಚ್ಚ ಬೇಕದಂತಹ ಸಮಯ ಬಂದಾಗ ಎಂಟಿಆರ್ ಹೋಟೆಲ್ಲಿನವರು  ರವೆ ಇಡ್ಲಿಯನ್ನು ಆವಿಷ್ಕರಿಸಿ ವಿಶ್ವವಿಖ್ಯಾತರಾದರು. ಇದರಿಂದ ಉತ್ತೇಜಿತರಾಗಿ  ಮುಂದೆ ಪಾಕಶಾಸ್ತ್ರದಲ್ಲಿ  ಅನೇಕ ರೀತಿಯ ಈ ಆವಿಷ್ಕಾರಗಳಿಗೆ  ಮುಂದಾಗಿ ಬಹಳಷ್ಟು  ದಿನಗಳು ಇಟ್ಟರೂ ಹಾಳಾಗದಂತಹ  ದಿಢೀರ್ ಎಂದು ಸಿದ್ಧ ಪಡಿಸಬಹುದಾದಂತಹ ಸಿದ್ಧಪಡಿಸಿದ ತಿಂಡಿ ಪದಾರ್ಥಗಳು, ಬಗೆ ಬಗೆಯ  ಸಾರಿನ ಪುಡಿ, ಹುಳಿ ಪುಡಿ ಚೆಟ್ನಿ ಪುಡಿಗಳಂತಹ    ಮಸಾಲಾ ಪುಡಿಗಳು ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು.  ಗಡಿ ಕಾಯುವ ಯೋಧರಿಗೆ  ಅತ್ಯಂತ  ಪೌಷ್ಹಿಕವಾದ ಮತ್ತು  ಎತ್ತರ ಪ್ರದೇಶಗಳಿಗೆ ಕೊಂಡೊಯ್ಯಲು ಸುಲಭವಾದ ಮತ್ತು ಅಂತಹ  ಹವಾಗುಣಕ್ಕೆ ಹಾಳಗದಂತಹ  ಸಿದ್ಧ ಆಹಾರಗಳನ್ನು ಸಹಾ ತಯಾರಿಸಿಕೊಟ್ಟು ಎಲ್ಲಾ ಮೆಚ್ಚುಗೆಗೆ ಪಾತ್ರವಾಗಿದೆ ಎಂಟಿಆರ್ ಬಳಗ.  2007 ರಲ್ಲಿ ನಾರ್ವೇಜಿಯನ್ ಕಂಪನಿಯಾದ ಓರ್ಕ್ಲಾಕ್ಕೆ ಎಂಟಿಆರ್ ಸಿದ್ಧ ಪಡಿಸಿದ ಆಹಾರದ ಉದ್ಯಮವನ್ನು ಮಾರಿ ಕೆಲವು ವರ್ಷಗಳ ನಂತರ ಮಯ್ಯಾಸ್ ಹೆಸರಿನಲ್ಲಿ ಮತ್ತೆ  ಅನೇಕ ರೆಸ್ಟೋರೆಂಟ್ ಮತ್ತು  ಸಿದ್ಧ ಪಡಿಸಿದ ಆಹಾರಗಳನ್ನು ತಯಾರಿಸುತ್ತಾ ಇಂದಿಗೂ ಜನ ಮನ್ನಣೆಗಳಿಸಿದೆ.  ಎಂಟಿಆರ್ ಏಳು ಗಂಟೆಗಳಲ್ಲಿ 21,000 ಗ್ರಾಹಕರಿಗೆ ಸೇವೆ ಸಲ್ಲಿಸಿದ ವಿಶ್ವದ ಮೊದಲ ಫಾಸ್ಟ್ ಫುಡ್ ರೆಸ್ಟೋರೆಂಟ್ ಎಂಬ ದಾಖಲೆಯನ್ನೂ ಹೊಂದಿದೆ

udu4ಉಡುಪಿಯ ಅಷ್ಟ ಮಠದ  ಭೋಜನ ಶಾಲೆಯಲ್ಲಿ ಪಾಕ ತಜ್ಞರಾಗಿದ್ದವರು ಅಥವಾ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಶಿವಳ್ಳಿ ಬ್ರಾಹ್ಮಣರು ಮತ್ತು ಮಾಧ್ವ ಸಂಪ್ರದಾಯದ ಬ್ರಾಹ್ಮಣರು ಕಾಲ ಕ್ರಮೇಣವಾಗಿ ದೇಶ ವಿದೇಶಗಳಲ್ಲಿ ನಾನಾ ಹೆಸರಿನಲ್ಲಿ  ಉಡುಪಿ ಹೋಟೆಲ್ ಗಳನ್ನು ಆರಂಭಿಸಿ ದೇವಾಲಯದ ಪಾಕಶಾಲೆಯ ಸಾತ್ವಿಕ ರುಚಿ  ಮತ್ತು ಅಭ್ಯಾಸಗಳ ಜೊತೆ ಉಡುಪಿಯ ತಿಂಡಿಗಳನ್ನು ಮತ್ತು ಆಹಾರ ಪದ್ದತಿಯನ್ನು  ಎಲ್ಲರಿಗೂ ಪರಿಚಯಿಸಿ ಹೋಟೆಲ್ ಎಂದರೆ ಉಡುಪಿ ಹೋಟೆಲ್ ಎಂಬ ಅನ್ವರ್ಥನಾಮ ಬರುವಂತೆ ಮಾಡಿದ್ದಲ್ಲದೇ ಲಕ್ಷಾಂತರ ಜನರಿಗೆ  ಉದ್ಯೋಗದಾತರಾಗಿದ್ದಾರೆ. ಇಂದಿಗೂ ಸಹಾ ಜನ ಉಡುಪಿ ಎಂಬ ಹೆಸರಿದ್ದರೆ ಸಾಕು ಸಕ್ಕರೆಗೆ ಇರುವೆಗಳು ಮುತ್ತುವಂತೆ  ಹೋಟೆಲ್ಲಿಗೆ ಪ್ರವೇಶಿಸುವಂತೆ  ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.   ಉಡುಪಿಯಲ್ಲದವರು, ಉಡುಪಿ ಹೋಟೆಲ್ ಎಂಬ ತಮ್ಮ ಬ್ರಾಂಡ್ ಬಳೆಸಿಕೊಂಡರೂ ಯಾವುದೇ ದಾವೆ ಹೂಡದೇ, ಅದಕ್ಕೆ ಕೊಂಚವೂ ಬೇಸರಿಸಿಕೊಳ್ಳದೇ ಸರ್ವೇ ಜನಾಃ ಸುಖಿನೋ ಭವಂತು. ಸಮಸ್ತ ಲೋಕಾನಿ ಸನ್ಮಂಗಳಾನಿ ಭವಂತು ಎಂದು  ಎಲ್ಲರೂ ಉದ್ದಾರವಾಗಲಿ ಎಂಬ ವಿಶಾಲ ಹೃದಯವಂತರಾಗಿದ್ದಾರೆ.

ಶ್ರೀಮತಿ ಲಕ್ಷ್ಮೀ ಜೋಷಿ ಅವರ ಅವರ ಸಂಪಾದಕತ್ವದಲ್ಲಿ ಶ್ರೀ ವಿಜೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ದಿ. 14.04.2022 ರಂದು ಮೈಸೂರಿನಲ್ಲಿ ಬಿಡುಗಡೆಯಾದ ಬ್ರಾಹ್ಮಣ ಶಿಕಾರಿ ಎಂಬ ಪುಸ್ತಕದಲ್ಲಿ ಈ ಲೇಖನ ಪ್ರಕಟವಾಗಿದೆ. ಕೆಲಸದ ಒತ್ತಡಗಳಿಂದಾಗಿ ಖುದ್ದಾಗಿ ಪುಸ್ತಕ ಬಿಡುಗಡೆಗೆ ಹೋಗಲು ಆಗದ ಕಾರಣ ನನ್ನ ಪರವಾಗಿ ನನ್ನ ಚಿಕ್ಕಪ್ಪನವರಾದ                 ಶ್ರೀ ಬಿ. ಎನ್ ಮುರಳೀಧರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನನ್ನ ಈ ಲೇಖನವೂ ಸೇರಿದಂತೆ ನಾಡಿನ ಪ್ರಖ್ಯಾತ ಲೇಖಕರ ಉಳಿದ 24 ಸ್ವಾರಸ್ಯಕರ ಲೇಖನಕ್ಕಾಗಿ ದಯವಿಟ್ಟು ಈ ಪುಸ್ತಕವನ್ನು ಮೈಸೂರಿನ ಭಾರತ್ ವೆಂಚರ್ಸ್, ಪ್ರಕಾಶನ ವಿಭಾಗದ ಶ್ರೀ ಅತುಲ್ಯ 9740063596 ಇವರಿಂದ ಕೊಂಡು ಓದಬೇಕೆಂದು ಸವಿನಯ ಪ್ರಾರ್ಥನೆ.

ನಿಮ್ಮವನೇ ಉಮಾಸುತ

bs

2 thoughts on “ಉಡುಪಿ ಉಪಹಾರ ಗೃಹ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s