ಕರ್ನಾಟಕದ ರಾಜಧಾನಿ, ಬೆಂಗಳೂರಿನಲ್ಲಿ ಎರಡು ವಿಶ್ವಪ್ರಸಿದ್ಧ ಉದ್ಯಾನಗಳಿದ್ದು ಒಂದು ಕಬ್ಬನ್ ಪಾರ್ಕ್ ಅಗಿದ್ದರೆ ಮತ್ತೊಂದು ಅದಕ್ಕಿಂತಲು ಹಳೆಯದಾದ ಲಾಲ್‌ಬಾಗ್ ಇರುವ ಕಾರಣ ಉದ್ಯಾನ ನಗರಿ ಎಂದೇ ಪ್ರಖ್ಯಾತಿ ಪಡೆದಿದೆ. ಬೆಂಗಳೂರಿನ ಸಿದ್ದಾಪುರ, ಉಪ್ಪಾರಹಳ್ಳಿ ಅರ್ಥಾತ್ ಮಾವಳ್ಳಿಯ ಪ್ರದೇಶದಲ್ಲಿರುವ ಸಾವಿರಾರು ಬಗೆಯ ಸಸ್ಯಗಳನ್ನು ಹೊಂದಿರುವ ಸಸ್ಯಕಾಶಿ ಲಾಲ್‌ಬಾಗ್ ಕುರಿತಾದ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಮೈಸೂರು ಸಂಸ್ಥಾನದ ಕುದುರೆಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿಕೊಂಡ ಪೈಲ್ವಾನ್ ಹೈದರ್ ಅಲಿ ನಂತರದ ದಿನಗಳಲ್ಲಿ ತನ್ನ ಸಾಮರ್ಥ್ಯದಿಂದ ಹಂತ ಹಂತವಾಗಿ ಬೆಳುದೆಉ ಮೈಸೂರು ಸಂಸ್ಥಾನದ ಸೇನಾಧಿಪತಿಯಾಗಿ ನೇಮಕಗೊಂಡ ಹೈದರ್ ನಂತರದ ದಿನಗಳಲ್ಲಿ ಮೈಸೂರು ಸಂಸ್ಥಾನವನ್ನೇ ತನ್ನ ಸುಪರ್ಧಿಗೆ ತೆಗೆದುಕೊಂಡ ಪರಿಣಾಮ ಬೆಂಗಳೂರು ನಗರವೂ ಸಹಾ ಸಹಜವಾಗಿ ಅತನ ಸುಪರ್ಧಿಗೆ ಬರುತ್ತದೆ.
1760ರಲ್ಲಿ ಬೆಂಗಳೂರಿನಿಂದ ಸುಮಾರು 120 ಕಿಮೀ ದೂರದಲ್ಲಿರುವ ತುಮಕೂರಿನ ಬಳಿಯ ಶಿರಾದಲ್ಲಿದ್ದ ಮೊಘಲ್ ಉದ್ಯಾನವನದಂತೆಯೇ ಬೆಂಗಳೂರಿನಲ್ಲಿಯೂ ಅದೇ ಮೊಘಲ್ ಉದ್ಯಾನದ ಮಾದರಿಯಲ್ಲಿ ಒಂದು ಸುಂದರವಾದ ಉದ್ಯಾನವನ್ನು ನಿರ್ಮಿಸಲು ಯೋಚಿಸಿ, ಸಿದ್ದಾಪುರ, ಉಪ್ಪಾರಹಳ್ಳಿ ಅರ್ಥಾತ್ ಮಾವಳ್ಳಿಯ ಬಳಿ ಇದ್ದ ಕೆರೆಯ ಸುತ್ತಮುತ್ತಲೂ ಸುಮಾರು 30 ಎಕರೆ ಜಾಗವನ್ನು ಗುರುತಿಸಿ ಆ ಜಾಗದಲ್ಲೊಂದು ಸುಂದರವಾದ ಉದ್ಯಾನವನ್ನು ನಿರ್ಮಿಸಿ ಹೈದರಾಲಿಯು ತೋಟಗಾರಿಕೆಯಲ್ಲಿ ಉತ್ತಮ ತಿಳಿವಳಿಕೆ ಹೊಂದಿದ್ದ ತಿಗಳ ಸಮುದಾಯದ ಜನರನ್ನು ಈ ಕೆಲಸಕ್ಕಾಗಿ ನೇಮಿಸಿ, ಅಲ್ಲಿ ದೇಶ ವಿದೇಶಗಳಿಂದ ವಿವಿಧ ರೀತಿಯ ಸಸ್ಯಗಳನ್ನು ಬೆಳೆಸಿ ಅದು ಒಂದು ಹಂತಕ್ಕೆ ಬಂದಾಗ, ಆ ಸಸ್ಯೋದ್ಯಾನವನ್ನು ವೀಕ್ಷಿಸಲು ಹೈದರ್ ಅಲಿ ಮಗ ಟಿಪ್ಪು ಸುಲ್ತಾನ್ ಜೊತೆಯಲ್ಲಿ ಅಂದು ಸುಂದರವಾಗಿ ಅರಳಿದ್ದ ಉದ್ಯಾನವನ್ನು ನೋಡಿ ತನ್ನ ಮಗನಿಗೆ ಹೇಗಿದೇ ಈ ತೋಟ? ಎಂದು ಕೇಳಿದಾಗ, ಅಲ್ಲಿ ಬೆಳೆಸಿದ್ದ ಕೆಂಪು ಗುಲಾಬಿಗಳನ್ನು ನೋಡಿದ ಟಿಪ್ಪು, ಏ ಲಾಲ್ ಬಾಗ್ ಜೈಸಾ ಹೈ (ಇದು ಕೆಂಪು ತೋಟದಂತಿದೆ) ಎಂದು ಹೇಳಿದ್ದನ್ನೇ ಕೇಳಿ ಆ ಉದ್ಯಾನವನಕ್ಕೆ ಲಾಲ್‌ಬಾಗ್ ಎಂದು ಹೆಸರಿಸಲಾಯಿತು ಎಂದು ಬಲ್ಲವರು ಹೇಳುತ್ತಾರೆ. ಈ ಉದ್ಯಾನವನ ಪೂರ್ಣಗೊಳ್ಳುವ ಮೊದಲೇ, ಹೈದರ್ ಅಲಿ ಮರಣ ಹೊಂದಿದ ನಂತರ ಅವರ ಮಗ ಟಿಪ್ಪು ಸುಲ್ತಾನ್ ಕಾಲದಲ್ಲಿ ಈ ಉದ್ಯಾನವನ್ನು ಪೂರ್ಣಗೊಂಡು ಸಾರ್ವಜನಿಕರಿಗೆ ಅರ್ಪಿತವಾಗುತ್ತದೆ. ಟಿಪ್ಪು ಸುಲ್ತಾನನ ಮರಣ ನಂತರ ಬೆಂಗಳೂರು ಸಂಪೂರ್ಣವಾಗಿ ಬ್ರಿಟೀಷರ ಕೈವಶವಾದ ನಂತರ, 1856ರಲ್ಲಿ ಲಾಲ್ ಬಾಗ್ ಅಧಿಕೃತವಾಗಿ ಸರ್ಕಾರಿ ಸಸ್ಯೋದ್ಯಾನ ಎಂದು ಹೆಸರಿಸಲಾಯಿತು.
ಹೀಗೆ ಅಂದು ಆರಂಭವಾದ ಲಾಲ್‌ಬಾಗ್ ಅರ್ಥಾತ್ ಕೆಂಪು ತೋಟ, ಎರಡೂವರೆ ಶತಮಾನಗಳು ಕಳೆದರೂ, ಇಂದಿಗೂ ವಿವಿಧ ರೀತಿಯ ಸಸ್ಯಗಳಿಂದ ಕೂಡಿ ಸಸ್ಯಕಾಶಿ ಎನಿಸಿಕೊಂಡಿರುವುದಲ್ಲದೇ, ವರ್ಣರಂಜಿತ ಫಲ-ಪುಷ್ಪ ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನವನವಾಗಿದೆ. ಅಲ್ಲಿರುವ ಪ್ರಸಿದ್ಧ ಗಾಜಿನ ಮನೆಯಲ್ಲಿ ಪ್ರತೀ ವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಆಯೋಜಿಸಲಾಗುವ ಫಲ ಪುಷ್ಪ ಪ್ರದರ್ಶನ ವಿಶ್ವವಿಖ್ಯಾತವಾಗಿದ್ದರೆ, ಅಲ್ಲಿರುವ ಹೂವಿನ ಗಡಿಯಾರ, ಮತ್ಸ್ಯಾಗಾರ ಮತ್ತು ಸುಂದರವಾದ ಕೆರೆಯ ಜೊತೆ ನೂರಾರು ವರ್ಷಗಳಷ್ಟು ಹಳೆಯದಾದ ವಿಶಾಲವಾದ ಮರಗಳು ಉದ್ಯಾನವನಕ್ಕೆ ಬರುವ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ.
ಕೇವಲ 30 ಎಕರೆಯಷ್ಟು ಜಾಗದಲ್ಲಿ ಆರಂಭಿಸಲಾದ ಈ ಉದ್ಯಾನವನ್ನು 1889ರಲ್ಲಿ, ಪೂರ್ವ ಭಾಗಕ್ಕೆ ಮತ್ತೆ 30 ಎಕರೆಯಷ್ಟು ಜಾಗವನ್ನು ಸೇರ್ಪಡೆ ಮಾಡುವ ಮೂಲಕ ಮತ್ತಷ್ಟು ದೊಡ್ಡದಾಗಿಸಿದರೆ, 1891ರಲ್ಲಿ ಕೆಂಪೆಗೌಡ ಗೋಪುರ ಹೊಂದಿರುವ ಬಂಡೆಯ ಜೊತೆಗೆ 13 ಎಕರೆಯನ್ನು ಸೇರಿಸಿಕೊಂಡು ನಂತರ 1894 ರಲ್ಲಿ ಹೆಚ್ಚುವರಿಯಾಗಿ ಪೂರ್ವದ ಬಂಡೆಯ ಕೆಳಗಿನ 94 ಎಕರೆ ಸೇರಿಸಿಕೊಂಡ ನಂತರ ಇಂದು ಸುಮಾರು 240 ಎಕರೆಯಷ್ಟು ವಿಶಾಲವಾದ ಉದ್ಯಾನವನವಾಗಿದ್ದು ಸುಮಾರು 1,854 ಜಾತಿಯ ಸಸ್ಯಗಳಿಗೆ ನೆಲೆಗೊಂಡು ಸಸ್ಯಕಾಶಿ ಎನಿಸಿಕೊಂಡಿದೆ.
ವಿಕ್ಟೋರಿಯಾ ರಾಣಿಯ ಮೊಮ್ಮಗ ಮತ್ತು ವೇಲ್ಸ್‌ನ ಅಂದಿನ ರಾಜಕುಮಾರನಾಗಿದ್ದ ಆಲ್ಬರ್ಟ್ ವಿಕ್ಟರ್ ಬೆಂಗಳೂರಿಗೆ ಭೇಟಿ ನೀಡಿದ ನೆನಪಿನಲ್ಲಿ ನವೆಂಬರ್ 30 1898 ರಂದು ಲಂಡನ್ನಿನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯಲ್ಲಿ ಗಾಜಿನ ಮನೆ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಿದರೆ, ಲಾಲ್ ಬಾಗಿನ ಮೇಲ್ವಿಚಾರಕರಾಗಿದ್ದ ಜೇಮ್ಸ್ ಕ್ಯಾಮರಾನ್ ಅವರ ನೇತೃತ್ವದಲ್ಲಿ ಸುಮಾರು 160 ಅಡಿ X 80 ಅಡಿಗಳಷ್ಟು ಉದ್ದ ಮತ್ತು ಅಗಲದ ಬಿಡಿ ಭಾಗಗಳನ್ನು ಲಂಡನ್ನಿನಲ್ಲಿಯೇ ತಯಾರಿಸಿ, ಹಡಗಿನ ಮೂಲಕ ತಂದು ಇಲ್ಲಿ ಜೋಡಿಸುವ ಮೂಲಕ ಭಾರತದಲ್ಲಿ ನಿರ್ಮಿಸಲಾದ ಮೊದಲ ಪೂರ್ವ-ನಿರ್ಮಿತ (pre-fabricated structures) ರಚನೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಇದರ ಮೂಲ ಪ್ರತಿ ಲಂಡನ್‌ನಲ್ಲಿರುವ ಕ್ರಿಸ್ಟಲ್ ಪ್ಯಾಲೇಸ್ 1936 ರಲ್ಲಿ ನಾಶವಾದರೂ ಅದರ ಪ್ರತಿಕೃತಿ ಲಾಲ್ ಬಾಗಿನಲ್ಲಿ ಇಂದಿಗೂ ಶಾಶ್ವತವಾಗಿ ಉಳಿದುಕೊಂದಿರುವುದು ಗಮನಾರ್ಹವಾಗಿದೆ. ಈ ಗ್ಲಾಸ್ ಹೌಸ್ ಅನ್ನು ಆರಂಭದಲ್ಲಿ ಆಲ್ಬರ್ಟ್ ವಿಕ್ಟರ್ ಕನ್ಸರ್ವೇಟರಿ ಎಂದು ಕರೆಯಲಾಗುತ್ತಿದ್ದದ್ದಲ್ಲದೇ, ರಾಜಕುಮಾರನ ಸ್ವಾಗತ ಕೂಟವನ್ನು ಅಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಚಾಮರಾಜ ಒಡೆಯರ್ ಆಯೋಜಿಸಿದ್ದರು.
ಲಾಲ್‌ಬಾಗ್ ಉದ್ಯಾನವನಕ್ಕೆ ಪೂರ್ವ, ಪಶ್ಚಿಮ. ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಒಟ್ಟು ನಾಲ್ಕು ದ್ವಾರಗಳಿವೆ ಪಶ್ಚಿಮ ದ್ವಾರವು ಸಿದ್ದಾಪುರ ವೃತ್ತದ ಬಳಿ ಇದೆ. ಈ ದ್ವಾರವನ್ನು ಪ್ರವೇಶಿಸಿ ಉದ್ಯಾನದ ಸಿಲ್ವಾನ್ ವಾತಾವರಣವನ್ನು ಆನಂದಿಸಬಹುದು. ಹೊರಗೆ ಕಾಂಪೌಂಡ್ ಗೇಟ್ ಮುಟ್ಟಿದರೆ ಕೃಂಬಿಗಲ್ ರಸ್ತೆ ಸಿಗುತ್ತದೆ.
ಬೆಂಗಳೂರಿನ ನಿರ್ಮಾತ ಶ್ರೀ ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆ ಬೆಂಗಳೂರಿನ ನಾಲ್ಕು ಭಾಗಗಳಲ್ಲಿ ನಿರ್ಮಿಸಿದ ಕಾವಲು ಗೋಪುರಗಳಲ್ಲಿ ಒಂದು ಗೋಪುರ ಲಾಲ್ ಭಾಗ್ ಉದ್ಯಾನವನದಲ್ಲಿರುವ ಸುಮಾರು 3000 ಸಾವಿರ ಮಿಲಿಯನ್ ವರ್ಷಗಳಷ್ಟು ಹಳೆಯ ಗುಡ್ಡದ ಮೇಲೆ ನಿರ್ಮಿಸಿದ್ದು ಇದು ಸಹಾ ಲಾಲ್ಬಾಗಿಗೆ ಬರುವ ಪ್ರವಾಸಿಗರ ಆಕಷ್ಟಣೆಯ ಕೇಂದ್ರವಾಗಿದ್ದು, ಉದ್ಯಾನವನದಲ್ಲಿ ಸುತ್ತು ಹಾಕಿ ಸುಸ್ತಾದ ಮೇಲೇ ಈ ಬಂಡೆಗಳ ಮೇಲೆ ಕುಳಿತು ಪಾಪ್ ಕಾರ್ನ್ ತಿನ್ನುತ್ತಾ ಆಯಾಸ ಪರಿಹರಿಸಿಕೊಳ್ಳುವುದು ವಿಶೇಷವಾಗಿದೆ.
1983 ರಲ್ಲಿ ನಮ್ಮ ದೇಶದ ಗಡಿಯಾರಗಳ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಹೆಚ್.ಎಂ.ಟಿ ಸಂಸ್ಥೆಯ ಸಹಯೋಗದೊಂದಿಗೆ ಲಾಲ್‌ಬಾಗಿನಲ್ಲಿ ಮುಖ್ಯ ದ್ವಾರದ ಬಳಿ ಸ್ಥಾಪಿಸಿದ ಹೂವಿನ ಗಡಿಯಾರವೂ ಮತ್ತೊಂದು ಆಕರ್ಷಣೆಯಾಗಿದೆ. ಸುಮಾರು ಏಳು-ಮೀಟರ್ ಅಗಲದ ಈ ಗಡಿಯಾರದ ಸುತ್ತಲೂ ಆಂಗ್ಲ ಜಾನಪದ ಕತೆಗಳಲ್ಲಿ ಬರುವ ಸ್ನೋ ವೈಟ್ ಮತ್ತು ಸೆವೆನ್ ಡ್ವಾರ್ಫ್ಸ್‌ನಂತಹ ಜನಪ್ರಿಯ ಕಾಲ್ಪನಿಕ ಕಥೆಗಳ ಪ್ರತಿಮೆಗಳನ್ನು ಇರಿಸುವ ಮೂಲಕ ಉದ್ಯಾನವನಕ್ಕೆ ಬರುವ ಸಣ್ಣ ಮಕ್ಕಳನ್ನು ಆಕರ್ಷಿಸುವುದರಲ್ಲಿ ಇಂದಿಗೂ ಮುನ್ನಲೆಯಲ್ಲಿದೆ.
ಈ ಉದ್ಯಾನವನದ ಆರಂಭದಲ್ಲಿ ಪರ್ಷಿಯಾ, ಅಫಘಾನಿಸ್ತಾನ ಮತ್ತು ಫ್ರಾನ್ಸ್‌ನಿಂದ ತರಿಸಲ್ಪಟ್ಟ ಅಪರೂಪದ ಹಲವಾರು ಸಸ್ಯಗಳನ್ನು ಇಲ್ಲಿ ಬೆಳೆಸಲು ಆರಂಭಿಸಿದರೆ. 1908ರಲ್ಲಿ ಜರ್ಮನಿ ಮೂಲದ ತೋಟಗಾರಿಕೆಯಲ್ಲಿ ವಿಶೇಷ ತರಭೇತನ್ನು ಪಡೆದಿದ್ದ ಶ್ರೀ ಜಿ.ಎಚ್.ಕೃಂಬಿಗಲ್ (ಗುಸ್ಟಾವ್ ಹರ್ಮನ್ ಕೃಂಬಿಗಲ್) ಅವರನ್ನು ಮೈಸೂರಿನ ಮಹಾರಾಜರು ಬರೋಡದಿಂದ ಕರೆತಂದ ನಂತರ, ಬೆಂಗಳೂರಿನ ಲಾಲ್ ಬಾಗ್ ಕಳೆಯೇ ಬದಲಾಯಿತು ಎಂದರೂ ಅತಿಶಯವೇನಲ್ಲ. 1908 ರಿಂದ 1932ರ ಕಾಲ ಸುಧೀರ್ಘವಾಗಿ ಲಾಲ್ ಬಾಗಿನಲ್ಲಿ ಕೆಲಸ ಮಾಡಿದ ಕೃಂಬಿಗಲ್ ಅವರು ಬಹುತೇಕ ಎಲ್ಲಾ ಸರ್ಕಾರಿ ತೋಟಗಳು ಮತ್ತು ರಾಜರ ಅರಮನೆಗಳಲ್ಲಿ ತೋಟಗಾರಿಗಾ ವಿಷಯದಲ್ಲಿ ತಮಗಿದ್ದ ಅಪಾರವಾದ ಜ್ಞಾನವನ್ನು ಇಲ್ಲಿ ಸಾಕಾರಗೊಳಿಸಿದ್ದರು. 1912 ರಲ್ಲಿ ಪ್ರಥಮಬಾರಿಗೆ ಮೈಸೂರು ಹಾರ್ಟಿಕಲ್ಚರಲ್ ಸೊಸೈಟಿಯನ್ನು ಪ್ರಾರಂಭಿಸಿದ ಶ್ರೀ ಕ್ರುಂಬಿಗೆಲ್ ಅವರು, ಕೇವಲ ಉದ್ಯಾನವನಗಳಲ್ಲಿ ಅಲ್ಲದೇ, ಸಮಾಜದ ಹೊರೆಗೆ ಎಲ್ಲರ ಮನೆಗಳಲ್ಲಿ ಮತ್ತು ಸಾರ್ವಜನಿಕ ಮತ್ತು ಖಾಸಗೀ ಉದ್ಯಮಿಗಳೂ ತಮ್ಮ ತಮ್ಮ ಕಾರ್ಖಾನೆಗಳಲ್ಲಿ ತೋಟಗಾರಿಕೆಯನ್ನು ಬೆಳೆಸುವ ಸಲುವಾಗಿ ಲಾಲ್ ಬಾಗಿನಲ್ಲಿ ನರ್ಸರಿಯನ್ನು ಆರಂಭಿಸಿ ಅಲ್ಲಿನ ವಿವಿಧ ರೀತಿಯ ಸಸ್ಯಗಳ ಬೀಜ ಮತ್ತು ಸಸಿಗಳನ್ನು ಉಚಿತವಾಗಿ ಹಂಚಿದ್ದಲ್ಲದೇ ದೇಶವಿದೇಶಗಳಲ್ಲಿ ಆವರಿಗಿದ್ದ ಸಂಪರ್ಕಗಳನ್ನು ಬಳಸಿಕೊಂಡು ಅಲ್ಲಿಂದ ವಿಶೇಷವಾದ ಸಸ್ಯಗಳು ಮತ್ತು ಬೀಜಗಳನ್ನು ತರಿಸಿ ಲಾಲ್ಭಾಗಿನಲ್ಲಿ ಬೆಳೆಸುವ ಮೂಲಕ ಉದ್ಯಾನವನವನ್ನು ಮತ್ತಷ್ಟು ಆಕರ್ಷಣೀಯವಾಗಿಸಿದರು.
ನಂತರದ ದಿನಗಳಲ್ಲಿ ಲಾಲ್‌ಬಾಗ್‌ನ ಮೊದಲ ಭಾರತೀಯ ಅಧೀಕ್ಷಕರು ಮತ್ತು ತೋಟಗಾರಿಕಾ ತಜ್ಞರಾದ ಎಚ್. ಸಿ. ಜವರಯ್ಯ ಮತ್ತು ಲಾಲ್ ಬಾಗಿನ ನಿರ್ದೇಶಕರಾಗಿದ್ದ ಡಾ. ಎಂ. ಎಚ್. ಮರಿಗೌಡರಂತಹ ಮಹನೀಯರುಗಳ ಅವಿರತ ಪರಿಶ್ರಮದಿಂದಾಗಿ ಲಾಲ್ ಬಾಗಿನಲ್ಲಿ ಹಳೆಯದ್ದನ್ನೂ ಕಾಪಾಡಿಕೊಳ್ಳುವುದರ ಜೊತೆಗೆ ಅನೇಕ ಹೊಸಾ ಆವಿಷ್ಕಾರಗಳನ್ನು ತರುವುದರ ಮೂಲಕ ಇಂದಿಗೂ ಲಾಲ್ ಬಾಗಿನ ಕಂಪು ನಿತ್ಯ ನಿರಂತರವಾಗಿರುವಂತೆ ನೋಡಿಕೊಂಡಿರುವುದು ನಿಜಕ್ಕೂ ಶ್ಲಾಘನೀಯವಾದ ಕೆಲಸವಾಗಿದೆ.
ಹೀಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಖಾಸಗಿಯವರು ಬೆಳೆದ ಹೂವು ಹಣ್ಣು ಮತ್ತು ತರಕಾರಿಗಳ ಪ್ರದರ್ಶನಗಳನ್ನು ಸಾರ್ವಜನಿಕರ ಮುಂದೆ ಪ್ರದರ್ಶನ ಮಾಡುವಂತಹ ವ್ಯವಸ್ಥೆ ಮಾಡಿದ್ದಲ್ಲದೇ ಅವರ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸಿ ಅವರಿಗೆ ಬಹುಮಾನ ಕೊಡುವಂತಹ ವ್ಯವಸ್ಥೆಯನ್ನು ಆರಂಭಿಸಿದ್ದು, ಅದು ಇಂದಿಗೂ ಸಹಾ ವರ್ಷಕ್ಕೆ ಎರಡು ಬಾರಿ ಆಗಸ್ಟ್ 15 ಸ್ವಾತಂತ್ರ ದಿನಾಚರಣೆ ಮತ್ತು ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಫಲಪುಷ್ಪ ಪ್ರದರ್ಶನ ಪ್ರಮುಖವಾಗಿ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಇತ್ತೀಚೆಗಂತೂ ಪ್ರಚಲಿತ ವಿದ್ಯಾಮಾನಗಳಿಗೆ ಅನುಗುಣವಾಗಿ ವಿಷಯಾಧಾರಿತವಾಗಿ (theme based) ನಡೆಸುವ ಫಲಪುಷ್ಪ ಪ್ರದರ್ಶನಗಳನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಕೆಂಪುತೋಟಕ್ಕೆ ಬರುವುದು ವಿಶೇಷವಾಗಿದೆ.
ಲಾಲ್‌ಬಾಗ್ ನಲ್ಲಿ ಇರುವ ಸುಂದರವಾದ ಕೆರೆಯೂ ಸಹಾ ಪ್ರಕೃತಿ ಪ್ರಿಯರಿಗೆ ಮತ್ತು ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೀಯವಾದ ಸ್ಥಳವಾಗಿದೆ ಎಂದರೂ ತಪ್ಪಾಗದು. ಈ ಪ್ರದೇಶದಲ್ಲಿ ಸುರ್ಯೋದಯ ಮತ್ತು ಸೂರ್ಯಾಸ್ತವನ್ನು ಸವಿಯಲು ಬೆಳಿಗ್ಗೆ ಮತ್ತು ಸಂಜೆ ಸಾವಿರಾರು ಜನರು ಆ ಕೆರೆಯ ಅಂಗಣಕ್ಕೆ ಬಂದು ಅಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುವುದನ್ನು ವರ್ಣಿಸುವುದಕ್ಕಿಂಗಲೂ ಅನುಭವಿಸಿದರೇ ಚಂದ. ಇದೇ ಸುಂದರವಾದ ಕೆರೆಯನ್ನು ನೋಡಿಯೇ 1760 ರಲ್ಲಿ ಹೈದರ್ ಅಲಿ ಲಾಲ್‌ಬಾಗ್ ಅನ್ನು ಸ್ಥಾಪಿಸಲು ಮುಂದಾದ ಎಂದೂ ಸಹಾ ಹೇಳಲಾಗುತ್ತದೆ. ಮುಂದೆ 1890 ರಲ್ಲಿ, ಲಾಲ್‌ಬಾಗ್‌ನ ಅಂದಿನ ಅಧೀಕ್ಷಕರಾಗಿದ್ದ ಜೇಮ್ಸ್ ಕ್ಯಾಮರೂನ್ ಈ ಕೆರೆಯನ್ನು ಜೀರ್ಣೋದ್ಧಾರ ಮಾಡಿದ್ದಲ್ಲದೇ ಅದರ ಸುತ್ತಲೂ ಏರಿಯನ್ನು ಕಟ್ಟಿಸಿ ಅದರೊಳಗೆ ಕಮಲದ ಹೂವುಗಳನ್ನು ಬೆಳೆಸಿದ ನಂತರ ಅದು ಕಮಲದ ಕೆರೆ ಎನಿಸಿಕೊಂಡಿದ್ದಲ್ಲದೇ, ಏರಿಯ ಮೇಲೆ ಆರಾಮವಾಗಿ ಕುಳಿತುಕೊಂಡು ಅಲ್ಲಿನ ಅಹ್ಲಾದಕರ ಸವಿಯನ್ನು ಸವಿಯುವಂತಹ ಆಸನಗಳನ್ನು ನಿರ್ಮಿಸಿದ ನಂತರ ಅಲ್ಲಿಗೆ ವಾಯುವಿಹಾರಕ್ಕೆಂದು ಬರುವ ಜನರ ಸಂಖ್ಯೆ ಹೆಚ್ಚಾಯಿತು ಎಂದು ಬಲ್ಲರವರು ಹೇಳುತ್ತಾರೆ. ಇನ್ನು ಸುಂದರವಾಗಿ ವಿನ್ಯಾಸಗೊಳಿಸಿರುವ ಉದ್ಯಾನವನದ ಹುಲ್ಲುಹಾಸುಗಳು, ಹೂವಿನ ಪಾತಿಗಳು ಮತ್ತು ಕಾರಂಜಿಗಳಿಗೂ ಸಹಾ ಇದೇ ಕೆರೆಯ ನೀರನ್ನು ಬಳಸುವ ಮೂಲಕ ನೀರಿನ ಸದ್ಬಳಕೆ ಆಗುತ್ತಿದೆ.
ಈ ಉದ್ಯಾನವನವು ವರ್ಷದ 365 ದಿನಗಳು, ಬೆಳಿಗ್ಗೆ 6 ಘಂಟೆಯಿಂದ ಸಂಜೆ 7.00 ಘಂಟೆಯವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರುತ್ತದೆ. ವಾಯುವಿಹಾರಕ್ಕೆ ಬರುವವರಿಗೆ, ಪ್ರವಾಸಿಗರಿಗೆ, ಮತ್ತು ದೇಹಾರೋಗ್ಯ ಕಾಪಾಡಿಕೊಳ್ಳ ಬಯಸುವರಿಗೆ ಬೆಳಿಗ್ಗೆ6 ರಿಂದ 9ರವರೆಗೆ ಮತ್ತು ಸಂಜೆ 6ರಿಂದ 7ರವರೆಗೆ ಉಚಿತ ಪ್ರವೇಶವಿದ್ದರೆ, ಉಳಿದ ಅವಧಿಯಲ್ಲಿ ರೂ. 10/- ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಮಕ್ಕಳಿಗೆ ಮತ್ತು ಅಂಗವಿಕಲರಿಗೆ ದಿನ ಸಂಪೂರ್ಣ ಉಚಿತ ಪ್ರವೇಶವಿದ್ದರೆ, ಫಲಪುಷ್ಪ ಪ್ರದರ್ಶನದ ವೇಳೆ ಮತ್ತು ವಿಶೇಷ ದಿನಗಳಂದು ಪ್ರವೇಶ ಶುಲ್ಕದಲ್ಲಿ ಬದಲಾವಣೆ ಇರುತ್ತದೆ.
ಇಂತಹ ವಿಶಾಲವಾದ ಉದ್ಯಾನದಲ್ಲಿ ನಡೆದುಕೊಂಡು ಹೋಗಲು ಆಗದ ವಯಸ್ಸಾದವರಿಗೆ, ವಯಸ್ಸಾದವರಿಗೆ, ಮಕ್ಕಳಿಗೆ ಮತ್ತು ಅಂಗವಿಕಲರಿಗೆ ಉದ್ಯಾನವನ್ನು ಸುತ್ತಿ ಹಾಕಲು ಎಲೆಕ್ಟ್ರಿಕ್ ಮೋಟಾರ್ ವ್ಯವಸ್ಥೆಯನ್ನೂ ಸಹಾ ಇತ್ತೀಚೆಗೆ ಮಾಡಲಾಗಿದ್ದು ಪ್ರತಿ ಪ್ರಯಾಣಿಕರಿಗೆ ಕೇವಲ 100/-ರೂ ದವರನ್ನು ನಿಗಧಿಪಡಿಸಲಾಗಿದೆ. ಲಾಲ್ ಬಾಗಿನ ಬೆಟ್ಟದ ಬಳಿಯಿಂದ ಆರಂಭವಾಗುವ ಈ ಪ್ರಯಾಣ, ಗ್ಲಾಸ್ ಹೌಸ್ ಮುಂಭಾಗದಿಂದ, ಗುಲಾಬಿ ವನ, ಕೇದಿಗೆವನವನ್ನು ಹಾದು, ಅಲ್ಲಿಂದ ಕೆರೆಯ ಏರಿಯ ಬಳಿ ಹೋಗಿ ಕೆರೆಯ ಸೌಂದರ್ಯವನ್ನು ಸವಿದು ಅಲ್ಲಿಂದ ನೇರವಾಗಿ ಉದ್ಯಾನವದಲ್ಲಿರುವ ಅತ್ಯಂತ ಹಳೆಯದಾದ ಮತ್ತು ಬೃಹತ್ ವೃಕ್ಷಗಳ ಸಾಲಿನ ಮುಖಾಂತರ ಆರಂಭಿಸಿದ ಜಾಗಕ್ಕೆ ತಲುಪುತ್ತದೆ. ಈ ಪ್ರಯಾಣ ಸುಮಾರು 30-40 ನಿಮಿಷಗಳ ಕಾಲವಿದ್ದು, ಈ ವಾಹನದಲ್ಲಿ ಪ್ರಯಾಣಿಸುವವರ ಅನುಕೂಲಕ್ಕೆ ತಕ್ಕಂತೆ ಕನ್ನಡ, ಇಂಗ್ಲೀಷ್ ಭಾಷೆಗಳಲ್ಲದೇ ಇದರೇ ಭಾರತೀಯ ಭಾಷೆಗಳಲ್ಲಿಯೂ ಸಹಾ, ಲಾಲ್ ಬಾಗ್ ನ ಇತಿಹಾಸ, ವಿಶೇಷ ಸಸ್ಯಗಳು ಫಲ-ಪುಷ್ಪಗಳ ಬಗ್ಗೆ ವಿವರಣೆಯನ್ನು ಕೊಡುವುದು ವಿಶೇಷವಾಗಿದೆ.
ಇನ್ನು ಪ್ರತಿ ತಿಂಗಳ ಎರಡನೆಯ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ಇದೇ ಉದ್ಯಾನವನದಲ್ಲಿ ಕರ್ನಾಟಕ ಸರ್ಕಾರದ ಸಾರಥ್ಯದಲ್ಲಿ ಆಯೋಜಿಸಲಾಗುವ ಜನಪದ ಜಾತ್ರೆಯೂ ಸಹಾ ಉದ್ಯಾನವನದ ಮತ್ತೊಂದು ಆಕರ್ಷಣೆಯಾಗಿದೆ. ಈ ಜನಪದ ಜಾತ್ರೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದಲೂ ಬರುವ ಜನಪದ ಕಲಾವಿದರುಗಳು, ತಮ್ಮ ನೃತ್ಯ, ಹಾಡು ಮತ್ತು ನಾಟಕಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ಬಗೆ ಬಗೆಯ ಸಂಗೀತ ವಾದ್ಯಗಳನ್ನು ನುಡಿಸುವ ಮೂಲಕ ಕರ್ನಾಟಕದ ಸಾಂಸ್ಕೃತಿಕ ಜಾನಪದ ಸೊಗಡನ್ನು ಪ್ರವಾಸಿಗರಿಗೆ ಪರಿಚಯ ಮಾಡಿಕೊಡುತ್ತಾರೆ. ಅನೇಕ ಬಾರಿ ಜನಪದ ಉಡುಗೆ ತೊಡುಗೆ, ವಾದ್ಯಗಳು ಮತ್ತಿತರ ಕಲಾತ್ಮಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯೂ ಇರುತ್ತದೆ.
ಕೇವಲ ಸಸ್ಯಗಳಷ್ಟೇ ಅಲ್ಲದೇ ಉದ್ಯಾನವನದಲ್ಲೊಂದು ಪುರಾತನವಾದ ಆದರೇ ಆಷ್ಟೇ ಸುಂದರವಾದ ಮತ್ಯಾಲಯವೂ ಇದ್ದು ಇತ್ತೀಚೆಗಷ್ಟೇ ಅದು ನವೀಕರಣಗೊಂದಿದೆ. ಇಲ್ಲಿ ವಿವಿಧ ಬಗೆಯ ಬಣ್ಣ ಬಣ್ಣದ ಮೀನುಗಳು ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ಪುಟ್ಟ ಮಕ್ಕಳ ಗಮನ ಸೆಳೆಯುತ್ತದೆ.
ಈ ಉದ್ಯಾನದಲ್ಲಿ ಒಂದು ಕಾಲದಲ್ಲಿ ಹುಲಿ, ಸಿಂಹ, ಆನೆ, ತೋಳಗಳು, ಘೇಂಡಾಮೃಗ, ಕರಡಿ, ಕಪ್ಪು ಚಿರತೆ, ವಿವಿಧ ಜಾತಿಯ ಮಂಗಗಳು, ನವಿಲುಗಳು, ಕಪ್ಪು ಹಂಸಗಳು, ಮೊಲ ಮತ್ತು ಜಿಂಕೆಗಳನ್ನು ಹೊಂದಿದ್ದಂತಹ ಸಣ್ಣ ಮೃಗಾಲಯವೂ ಸಹಾ ಇಲ್ಲಿತ್ತು. ಇದಕ್ಕೆ ಪುರಾವೆ ಎನ್ನುವಂತೆ ಮಾರ್ಚ್ 1913 ರಲ್ಲಿ, ಇಂದಿನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ಸೆರೆಹಿಡಿಯಲಾದ ಹುಲಿಯನ್ನು ಲಾಲ್ಬಾಗ್ ಪ್ರಾಣಿಸಂಗ್ರಹಾಲಯಕ್ಕೆ ತರಲಾಗಿತ್ತು. ಸುಮಾರು ನಾಲ್ಕು ತಿಂಗಳ ನಂತರ ಜೂನ್‌ನಲ್ಲಿ ಅಲ್ಲಿನ ಸಿಬ್ಬಂಧ್ಧಿ ವರ್ಗದವರು ಅದರ ಪಂಜರವನ್ನು ಸ್ವಚ್ಛಗೊಳಿಸುತ್ತಿದ್ದಾಗ ಆ ಹುಲಿ ಅಲ್ಲಿಂದ ತಪ್ಪಿಸಿಕೊಂಡು ಸುಮಾರು 6 ಅಡಿ ಎತ್ತರದ ಗೋಡೆಯನ್ನು ಲಾಲ್‌ಬಾಗ್‌ನ ಪಶ್ಚಿಮ ಭಾಗದಲ್ಲಿರುವ ಮಾವಳ್ಳಿ ಪ್ರದೇಶದ ಉಪ್ಪಾರಹಳ್ಳಿಯ ಕಡೆಗೆ ಹೋಗಿ ಅಲ್ಲಿನ ಪ್ರದೇಶದ ಜನರು ಭಯಭೀತರಾಗುವಂತೆ ಮಾಡಿತು. ಹೀಗೆ ತಪ್ಪಿಸಿಕೊಂಡ ಹುಲಿಯನ್ನು ಶ್ರೀ ಕೃಂಬಿಗಲ್ ಮತ್ತು ಉದ್ಯಾನವನದ ಸಿಬ್ಬಂಧಿಯವರು ಹರಸಾಹಸ ಪಟ್ಟು ಹಿಡಿದು ಮತ್ತೆ ಪಂಜರದಲ್ಲಿ ಹಿಡಿದಿಟ್ಟ ಕತೆಯೇ ಬಹಳ ರೊಚಕವಾಗಿದೆ. 1937ರಲ್ಲಿ ಇಲ್ಲಿನ ಪ್ರಾಣಿಗಳನ್ನು ನೋಡಿಕೊಳ್ಳುವುದು ಕಷ್ಟ ಎನಿಸಿದಾಗ, ಅಲ್ಲಿದ್ದ ಎಲ್ಲಾ ಪ್ರಾಣಿಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಮೈಸೂರಿನ ಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸಿ ಇಂದು ಕೇವಲ ಜಿಂಕೆ ಉದ್ಯಾನವನ ಮಾತ್ರವೇ ಅಸ್ತಿತ್ವದಲ್ಲಿದ್ದು ಚಿತ್ತಾರದ ಹತ್ತಾರು ಚಿಂಕೆಗಳು ಮಕ್ಕಳ ಆಕರ್ಷಣೀಯ ಕೇಂದ್ರವಾಗಿದೆ.
ಹೀಗೆ ಒಂದು ಕಾಲದಲ್ಲಿ ಕೆರೆ, ಅದರ ಸುತ್ತಲೂ ವಿಶಾಲವಾದ ಮಾವಿನ ತೋಪು ಇದ್ದು ಶತಮಾನಗಳಿಗೂ ಹಿಂದೆ ಈ ಪ್ರದೇಶದಲ್ಲಿ ನಡೆದ ಯುದ್ಧಗಳ ಕುರುಹಾಗಿ ಇಂದಿಗೂ ಮಾಸ್ತಿಕಲ್ಲು ಮತ್ತು ವೀರಗಲ್ಲು ಜೊತೆಯಲ್ಲಿ ಪಟ್ಟಾಲಮ್ಮನ ದೇವಾಲಯ ಅಸ್ತಿತ್ವದಲ್ಲಿದ್ದ ಪ್ರದೇಶ, 18 ನೇ ಶತಮಾನದಲ್ಲಿ, ಸುಂದರವಾದ ಉದ್ಯಾನವನವಾಗಿ ಮಾರ್ಪಟ್ಟು ಲಾಲ್‌ಬಾಗ್ ಎಂಬ ಹೆಸರಿನಲ್ಲಿ ಇಂದು ಪ್ರಪಂಚದ ಪ್ರವಾಸಿ ಮತ್ತು ತೋಟಗಾರಿಕೆ ನಕ್ಷೆಯಲ್ಲಿ ಹೆಸರು ಗಳಿಸಿರುವುದು ನಿಜಕ್ಕೂ ಅದ್ಭುತ ಮತ್ತು ಅನನ್ಯವೇ ಸರಿ. ಬೆಂಗಳೂರಿನ ಹೃದಯಭಾಗದಲ್ಲೇ ಇರುವ ಈ ಉದ್ಯಾನವನಕ್ಕೆ ಬರಲು ಬೆಂಗಳೂರಿನ ವಿವಿಧ ಬಡಾವಣೆಗಳಿಂದ ಬರಲು ಸಾಕಷ್ಟು ಬಸ್ ಸೌಕರ್ಯವು ಇದ್ದು, ಕೆಲ ವರ್ಷಗಳ ಹಿಂದೆ ಮೆಟ್ರೋ ಸಂಪರ್ಕವೂ ಸಹಾ ಆಗಿದೆ. ಅದಲ್ಲದೇ ಖಾಸಗೀ ವಾಹನಗಳಲ್ಲಿ ಸಹಾ ಬರಬಹುದಾಗಿದ್ದು, ಅದೃಷ್ಟವಿದ್ದಲ್ಲಿ ಉದ್ಯಾನವನದೊಳಗೇ ಪಾರ್ಕಿಂಗ್ ಮಾಡಬಹುದಾಗಿದೆ.
ನಾಡಿನ ಖ್ಯಾತ ಶಿಕ್ಷಣ ತಜ್ಞರಾಗಿದ್ದ ಡಾ. ಎಚ್.ನರಸಿಂಹಯ್ಯನವರಿಗೂ ಲಾಲ್ ಬಾಗಿಗೂ ಅವಿನಾಭಾವ ಸಂಬಂಧವಿತ್ತು. ಅವರ ನ್ಯಾಷಿನಲ್ ಕಾಲೇಜಿನಿಂದ ಕೂಗಳತೇ ದೂರದಲ್ಲೇ ಇದ್ದ ಲಾಲ್ ಬಾಗಿನಲ್ಲಿ ಸಮಯ ಸಿಕ್ಕಾಗಲೆಲ್ಲಾ ವಾಯುವಿಹಾರಕ್ಕೆ ಬರುತ್ತಿದ್ದ ಹೆಚ್. ಎನ್ ಅವರಿಗೆ ಲಾಲ್ಬಾಗಿನಲ್ಲಿದ್ದ ಗಿಡಮರಗಳೆಲ್ಲವೂ ಅವರಿಗೆ ಚಿರಪರಿತರಾಗಿದ್ದವು.
ತಮ್ಮ ಲೇಖನವೊಂದರಲ್ಲಿ ಲಾಲ್ ಬಾಗ್ ಕುರಿತಾಗಿ ಬಹಳ ಸುಂದರವಾಗಿ ತಮಾಷೆಯಾಗಿ ಈ ರೀತಿಯಾಗಿ ಬರೆದಿದ್ದಾರೆ. ಲಾಲ್ ಬಾಗಿನಲ್ಲಿ ವಾಯುವಿಹಾರಕ್ಕೆ ನಾಯಿಗಳನ್ನು ಕರೆದುಕೊಂಡು ಬರುವ ಬಹುತೇಕರುಗಳು Tommy come, Tommy Go, Tommy Sit, Tommy Keep quiet, ಎಂದು ಇಂಗ್ಲೀಷಿನಲ್ಲಿಯೇ ಸಂಭಾಷಿಸುತ್ತಿದ್ದದ್ದನ್ನು ಗಮನಿಸಿ ಅವರು ಲಾಲ್ ಬಾಗಿನಲ್ಲಿ ಕಂಡುಬರುವ 🐕ನಾಯಿಗಳೆಲ್ಲವೂ ಇಂಗ್ಲಿಷ್ ಮಧ್ಯಮದ ನಾಯಿಗಳು ಎಂದು ಅವರು ಉಲ್ಲೇಖಿಸಿದ್ದಾರೆ. ಅದೇ ರೀತಿಯಲ್ಲಿ ಗಂಭೀರವಾದ ಹಾಸ್ಯ ರೂಪದಲ್ಲಿ ತಮ್ಮ ಮರಣಾನಂತರ ತಮ್ಮ ಪಾರ್ಥೀವ ಶರೀರ ನಗರಪಾಲಿಕೆಯ ಶವ ವಾಹನದಲ್ಲಿ ಲಾಲ್ಬಾಗ್ ಮುಂದಿನ ಕೃಂಬಿಗಲ್ ರಸ್ತೆಯ ಮೂಲಕ (ಆಗ ದ್ವಿಮುಖ ಸಂಚಾರವಿತ್ತು) ವಿಲ್ಸನ್ ಗಾರ್ಡನ್ ಸ್ಮಶಾನಕ್ಕೆ ಕರೆದುಕೊಂಡು ಹೋಗುವಾಗ, ಅವರ ನೆಚ್ಚಿನ ಮರಗಳೂ ಸಹ ತಮಗೆ ಖಂಡಿತವಾಗಿಯೂ ವಿದಾಯ ಹೇಳುತ್ತವೆ ಎಂದು ಉಲ್ಲೇಖಿಸಿದ್ದದ್ದು ಇಲ್ಲಿ ಗಮನಾರ್ಹವಾಗಿದೆ

ಲಾಲ್ ಬಾಗ್ ಅರ್ಥಾತ್ ಕೆಂಪುತೋಟದ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ನಂತರ ಇನ್ನೇಕ ತಡಾ ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಕುಟುಂಬ ಸಮೇತ, ಅದರಲ್ಲೂ ವಿಶೇಷವಾಗಿ ಮಕ್ಕಳೊಂದಿಗೆ ಲಾಲ್ ಬಾಗಿಗೆ ಹೋಗಿ ಅಲ್ಲಿನ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ