ದೀಪಾವಳಿಯ ಹುಡುಗಾಟಿಕೆಗಳು

ದೀಪಾವಳಿ ಹೇಳಿ ಕೇಳಿ ಬೆಳಕಿನ ಹಬ್ಬ. ಉಳಿದ ಹಬ್ಬಗಳಂತೆ ಮಡಿ ಹುಡಿ ಆಚಾರ ವಿಚಾರ ಈ ಹಬ್ಬದಲ್ಲಿ ಸ್ವಲ್ಪ ಗೌಣವಾಗಿದ್ದು, ಬಗೆ ಬಗೆಯ ಭಕ್ಷ ಭೋಜನಗಳು ಮೋಜು ಮಸ್ತಿಗೆಂದೇ ಹೆಚ್ಚಿನ ಪ್ರಾಶಸ್ತ್ಯ ಇರುವ ಕಾರಣ ದೇಶಾದ್ಯಂತ ಬಹುತೇಕರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ದೀಪಾವಳಿ ಹಬ್ಬ ಎಂದರೆ ಬಹಳ ಅಚ್ಚು ಮೆಚ್ಚು ಎಂದರೂ ತಪ್ಪಾಗದು. ವಯಕ್ತಿಕವಾಗಿ ನನ್ನ ಸಣ್ಣ ವಯಸ್ಸಿನಲ್ಲಿ ದೀಪಾವಳಿ ಹಬ್ಬ ಬಂದಿತೆಂದರೆ ಸುಮಾರು ಒಂದು ಒಂದೂವರೆ ತಿಂಗಳುಗಳ ಕಾಲ ಹೆಚ್ಚಿನ ಜವಾಬ್ಧಾರಿಯ ಜೊತೆಗೆ ನನ್ನ ಕೈಯಲ್ಲಿ ಸ್ವಲ್ಪ ಹೆಚ್ಚಿನ ದುಡ್ಡು ಕಾಸು ಓಡಾಡುವ ಸಮಯ. ಇವೆಲ್ಲದರ ಮಧ್ಯೆಯೂ ದೀಪಾವಳಿ ಹಬ್ಬದ ಸಮಯದಲ್ಲಿ ಮಾಡುತ್ತಿದ್ದ ಹುಡುಗಾಟಿಕೆಯನ್ನು ನೆನೆಸಿಕೊಂಡಾಗ ಈಗಲೂ ತುಟಿಯ ಮೇಲೆ ಒಂದು ಸಣ್ಣನೆಯ ನಗು ತರಿಸುವ ಕಾರಣ ಅವುಗಳಲ್ಲಿ ಕೆಲವೊಂದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಗಿದೆ

pataki_Chitಅದು ಎಂಭತ್ತರ ದಶಕ. ಅಪ್ಪ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು ದೀಪಾವಳಿ ಹಬ್ಬದ ಸಲುವಾಗಿ ಪಟಾಕಿಗೆಂದು ಅವರ ಸ್ನೇಹಿತರು ನಡೆಸುತ್ತಿದ್ದ ಪಟಾಕಿ ಚೀಟಿಯಲ್ಲಿ ಎರಡು ಚೀಟಿ ಹಾಕಿ ತುಂಬಾ ಪಟಾಕಿ ತರುತ್ತಿದ್ದರಿಂದ ನಮ್ಮ ಮನೆಯಲ್ಲಿ ಎಂದಿಗೂ ಪಟಾಕಿಗೆ ಬರ ಇರುತ್ತಿರಲಿಲ್ಲ. ಅದೊಮ್ಮೆ ದೀಪಾವಳಿ ಹಬ್ಬಕ್ಕೆ ಇನ್ನೇನು ಒಂದು ತಿಂಗಳು ಬಾಕಿ ಇದೆ ಎನ್ನುವಾಗ ಆ ಚೀಟೀ ನೆಡೆಸ್ಜುತ್ತಿದ್ದ ನಮ್ಮ ತಂದೆಯ ಸಹೋದ್ಯೋಗಿಗಳು ಹಣಕಾಸಿನ ಸಮಸ್ಯೆಯಿಂದಾಗಿ ಅತ್ಮಹತ್ಯೆ ಮಾಡಿಕೊಂಡಾಗ, ಅನಿವಾರ್ಯವಾಗಿ ವಿಧಿ ಇಲ್ಲದೇ, ನಮ್ಮ ತಂದೆ ಸ್ವತಃ ಕೈಯ್ಯಿಂದ ಹಣ ಖರ್ಚು ಮಾಡಿ ಪಟಾಕಿಗಳನ್ನು ತಂದುಕೊಡುವಂತಹ ಪರಿಸ್ಥಿತಿ ಬಂದು ನಂತರದ ದಿನಗಳಲ್ಲಿ ನಾವೇ ಪಟಾಕಿ ನಡೆಸುವಂತಾಗಿ ಆರಂಭದಲ್ಲಿ80-100 ಸದಸ್ಯರಿಂದ ಶುರುವಾಗಿ ನಂತರದ ವರ್ಷಗಲಲ್ಲಿ 500-600 ಜನ ಸದಸ್ಯರಷ್ಟು ದೊಡ್ಡದಾಗಿ ಬೆಳೆದದ್ದು ಈಗ ಇತಿಹಾಸ.

ಹೀಗೆ ಅನಿವಾರ್ಯವಾಗಿ, ಅಚಾನಕ್ಕಾಗಿ ನಮ್ಮ ಮನೆಯಲ್ಲಿ ಪಟಾಕಿ ಚೀಟಿಯನ್ನು ನಡೆಸ ಬೇಕಾಗಿ ಬಂದು, ಪ್ರತೀ ತಿಂಗಳು ಕೆಲ ನಿರ್ಧಿಷ್ಟ ಮೊತ್ತದ ಹಣವನ್ನು ಆರು ತಿಂಗಳು ಕಟ್ಟಿದ ನಂತರ ದೀಪಾವಳಿ ಹಬ್ಬಕ್ಕೆ ಕೆಲ ವಾರಗಳ ಮುಂಚೆ ಕಟ್ಟಿದ ಹಣಕ್ಕೆ ಬಂದ ಅಲ್ಪ ಸ್ವಲ್ಪ ಬಡ್ದಿಯನ್ನೂ ಸೇರಿಸಿ ಪಟಾಕಿಯ ಜೊತೆಗೆ ಸಣ್ಣ ಉಡುಗೊರೆಯನ್ನು ನೀಡುವ ಪದ್ದತಿ ಮುಂದುವರೆದು, ಆರಂಭದಲ್ಲಿ ಪಟಾಕಿ ಹೆಚ್ಚು ಮತ್ತು ಸಾಂಕೇತಿಕವಾಗಿ ಉಡುಗೊರೆ ಇದ್ದದ್ದು ನಂತರದ ದಿನಗಳಲ್ಲಿ ಹೆಂಗಳೆಯರ ಒತ್ತಡದಿಂದಾಗಿ ಉಡುಗೊರೆಗೇ ಹೆಚ್ಚಿನ ಪ್ರಾಶಸ್ತ್ಯ ದೊರೆತು ಪಟಾಕಿಯೇ ನಗಣ್ಯವಾದಾಗ ಸಂಭ್ರಮದಿಂದ ಪಟಾಕಿ ಹೊಡೆಯಲು ಸಾಧ್ಯವಾಗದೇ ಹೋಗುತ್ತಿದ್ದದ್ದನ್ನು ಮನಗಂಡು ನಮ್ಮ ಉದ್ದೇಶ ತೀರದ ಕಾರಣ ಮತ್ತು ಮತ್ತೊಬ್ಬರ ಕಷ್ಟಕ್ಕೆ ಸಹಾಯ ಮಾಡುವ ಸಲುವಾಗಿ ಸಾಲಕ್ಕೆ ಶೂರಿಟಿ ಹಾಕಿ ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬಿಇಎಲ್ ಕಾರ್ಖಾನೆಯಿಂದ ಅವಧಿಗೆ ಮುನ್ನವೇ ಸ್ವಯಂ ನಿವೃತ್ತಿ ಪಡೆದ ಕಾರಣ, ನಾವು ಪಟಾಕಿ ಚೀಟಿ ನಡೆಸುವುದನ್ನೇ ಕೈ ಬಿಡಬೇಕಾಯಿತು.

ನಾವುಗಳು ಬಹುಕಾಲ ಪಟಾಕಿ ಚೀಟಿ ನಡೆಸುತ್ತಿದ್ದ ಕಾರಣ, ದೀಪಾವಳಿ ಹಬ್ಬಕ್ಕೆ ಐದಾರು ವಾರಗಳ ಮುಂಚೆಯೇ ಚಿಕ್ಕ ಪೇಟೆಯ ನಿರ್ಧಿಷ್ಟವಾದ ಅಂಗಡಿಗಳಿಗೆ ಹೋಗಿ ಆಗಿನ ಕಾಲಕ್ಕೇ ಸಾವಿರಾರು ರೂಪಾಯಿಗಳ ಪಟಾಕಿಗಳನ್ನೂ ಮತ್ತದರ ಜೊತೆಗೆ ಉಡುಗೊರೆಗಳನ್ನು ಕೊಂಡು ತಂದು ಅದನ್ನೆಲ್ಲಾ ಸರಿ ಸಮನಾಗಿ ವಿಂಗಡಿಸಿ ಚೀಟಿ ಹಾಕಿದ್ದ ಎಲ್ಲರ ಮನೆಗಳಿಗೂ ತಲುಪಿಸಿದರೆ ಏನೋ ಮಹತ್ಕಾರ್ಯ ಸಾಧಿಸಿದ ಅನುಭವ. ದೀಪಾವಾಳಿ ಹಬ್ಬಕ್ಕೂ ಒಂದು ವಾರದ ಮುಂಚೆ ಸಂಜೆ ಬಿಇಎಲ್ ಕಾರ್ಖಾನೆಯ ಮುಖ್ಯದ್ವಾರದ ಬಳಿ ನಿರ್ಧಿಷ್ಟ ಸ್ಥಳದಲ್ಲಿ ಪಟಾಕಿ ಚೀಲಗಳನ್ನು ಮತ್ತು ಉಡುಗೊರೆಗಳನ್ನು ಇಟ್ಟುಕೊಂಡಿದ್ದರೆ, ನಮ್ಮ ತಂದೆಯವರ ಸಹೋದ್ಯೋಗಿಗಳು ಬಂದು ನಮ್ಮ ತಂದೆಯವರು ಸಹಿ ಮಾಡಿರುತ್ತಿದ್ದ ಚೀಟಿಗಳನ್ನು ಕೊಟ್ಟು ಪಟಾಕಿಗಳನ್ನು ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಸಂಧರ್ಭದಲ್ಲಿಯೇ ನಮ್ಮ ಶಾಲೆಯ ಶಿಕ್ಷರಿಗೂ ನಾವು ಪಟಾಕಿ ಚೀಟಿ ನಡೆಸುತ್ತಿದ್ದ ವಿಷಯ ತಿಳಿದು ನಮ್ಮ ಶಾಲೆಯ ಮುಖ್ಯೋಪಾಧ್ಯಾರಾದಿಯಾಗಿ, ಅನೇಕ ಗುರುಗಳು ನಮ್ಮ ಪಟಾಕಿ ಚೀಟಿಯ ಸದಸ್ಯರಾಗಿದದ್ದು ಗಮನಾರ್ಹವಾಗಿತ್ತು. ಹೀಗೆ ಪಟಾಕಿ ವಿಂಗಡಿಸುವ ಮತ್ತು ಹಂಚುವ ವೇಳೆಗೆ ಸರಿಯಾಗಿ ದಸರಾ ಹಬ್ಬವಿರುತ್ತಿದ್ದ ಕಾರಣ ನಮ್ಮ ಚಿಕ್ಕಮ್ಮನ ಮಕ್ಕಳೂ ಮತ್ತು ನಮ್ಮ ಮನೆಯ ಅಕ್ಕ ಪಕ್ಕದ ಸಮಾನ ವಯಸ್ಕ/ಮನಸ್ಕ ಗೆಳೆಯರೂ ನಮ್ಮೊಡನೆ ಸಡಗರ ಸಂಭ್ರಮದಿಂದ ಪಟಾಕಿಗಳನ್ನು ವಿಂಗಡಿಸಲು ಮತ್ತು ಹಂಚಲು ಜೊತೆಯಾಗುತ್ತಿದ್ದರು. ನಂತರ ಅವರೆಲ್ಲರಿಗೂ ಯಥೇಚ್ಚವಾಗಿ ಪಟಾಕಿಗಳನ್ನು ಕೊಡುತ್ತಿದ್ದದ್ದು ಇನ್ನೂ ನನ್ನ ಮನದಾಳಲ್ಲಿ ಅಚ್ಚಳಿಯದಂತೆ ಉಳಿದಿದೆ.

crackersಈ ರೀತಿಯಾಗಿ ಎಲ್ಲರಿಗೂ ಸಮನಾಗಿ ಪಟಾಕಿ ತರುವ ಸಮಯದಲ್ಲೇ ನಾನು ಅಂದಿನ ಕಾಲಕ್ಕೆ ನಮ್ಮ ತಂದೆಯವರ ಬಳಿ 2-3 ಸಾವಿರ ರೂಗಳನ್ನು ಸಾಲ ಪಡೆದು ಬಗೆ ಬಗೆಯ ಮತ್ತು ನವ ನವೀನ ಪಟಾಕಿಗಳನ್ನು ತರುತ್ತಿದ್ದದ್ದಲ್ಲದೇ, ನಮ್ಮ ತಾಯಿಯವರಿಗೆ ಡಂ ಡಂ ಪಟಾಕಿ ಆಗುತ್ತಿರಲಿಲ್ಲವಾದ ಕಾರಣ, ಅವರಿಗೆಂದೇ ವಿಶೇಷವಾಗಿ ಹೆಚ್ಚು ಶಬ್ಧ ಮಾಡದ ಮತ್ತು ರಾತ್ರಿ ಹೊತ್ತಿನಲ್ಲಿ ಉರಿಸಬಹುದಾದಂತಹ ಪಟಾಕಿಗಳನ್ನು ತರುತ್ತಿದ್ದೆ. ಹೀಗೆ ಹೆಚ್ಚುವರಿಯಾಗಿ ತಂದ ಪಟಾಕಿಗಳನ್ನು ನಮ್ಮ ಅಕ್ಕ ಪಕ್ಕದವರಿಗೆ ಮತ್ತು ಸ್ನೇಹಿತರಿಗೆ ಸ್ವಲ್ಪ ಲಾಭ ಇಟ್ಟುಕೊಂಡು ಮಾರುವ ಮೂಲಕ ಅಪ್ಪನಿಂದ ಪಡೆದ ಸಾಲವನ್ನು ಹಿಂದಿರುಗಿಸಿ ನನ್ನ ಇಡೀ ವರ್ಷಕ್ಕೆ ಬೇಕಾಗುವಷ್ಟು ಖರ್ಛನ್ನು ಸಂಪಾದಿಸಿಕೊಳ್ಳುತ್ತಿದ್ದದ್ದಲ್ಲದೇ, ಇನ್ನೂ ಮಾರಾಟವಾಗದೇ ಉಳಿಯುತ್ತಿದ್ದ ವಿವಿಧ ಪಟಾಕಿಗಳನ್ನು ಜೊತೆಯಲ್ಲಿ ಅಮ್ಮನಿಗಾಗಿಯೇ ತಂದ ಪಟಾಕಿಗಳನ್ನು ಯಾವುದೇ ಖರ್ಛಿಲ್ಲದೇ ಬಳಸುತ್ತಿದ್ದ. ಆರಂಭದಲ್ಲಿ ನನ್ನ ಉಪ ಸಂಪಾದನೆಗಾಗಿ ೨-೩ ಸಾವಿರಕ್ಕೆ ತರುತ್ತಿದ್ದ ಪಟಾಕಿಗಳು ನಂತರ ಅಂದಿನ ಕಾಲಕ್ಕೆ ೮-೧೦ ಸಾವಿರ ದಾಟಿತ್ತು ಎನ್ನುವುದು ವಿಶೇಷವಾಗಿತ್ತು.

lakshmi_Bombಪಟಾಕಿ ಕುರಿತಂತೆ ಇಷ್ಟೇ ಆಗಿದ್ದರೆ ಅದಕ್ಕೇನೂ ಮಜಾ ಇರುವುದಿಲ್ಲ. ವಿದ್ಯಾರ್ಥಿ ದಸೆಯಿಂದಲೂ ಇತರೇ ಚಟುವಟಿಕೆಗಳೊಂದಿಗೆ ಓದಿನಲ್ಲೂ ಮುಂದಿದ್ದ ಕಾರಣ, ಶಾಲೆಯಲ್ಲಿ ಎಲ್ಲಾ ಶಿಕ್ಷಕರಿಗೂ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿತ್ತು. ಪಿಯೂಸಿ ವರೆಗೂ ಕುಳ್ಳಗೆ/ಸಣ್ಣಗೆ ಇದ್ದ ಕಾರಣ, ತರಗತಿಯಲ್ಲಿ ಮೊದಲೇ ಬೆಂಚಿನ ಮೊದಲನೇ ಹುಡಗನಾಗಿ ಕೂರುತ್ತಿದ್ದ ಕಾರಣ, ಎಲ್ಲರೂ ನನ್ನನ್ನು ಬಹಳ ಸೌಮ್ಯ ಸ್ವಭಾವದ ಹುಡುಗನೆಂದೇ ತಿಳಿದಿದ್ದರೂ, ನನ್ನೊಳಗೂ ವಯೋಸಹಜ ತುಂಟಾಂಟಕ್ಕೇನೂ ಕಡಿಮೆ ಇರಲಿಲ್ಲ. ದೀಪಾವಳಿ ಸಮಯದಲ್ಲಿ ಶಾಲೆಯ ಶೌಚಾಲಯದಲ್ಲಿ ಪಟಾಕಿ ಹೊಡೆಯುವುದು (ಟೈಂ ಬಾಂಬ್) ಇಡುವುದು ಅಂದಿನ ಕಾಲದಲ್ಲಿ ಅತ್ಯಂತ ಹುಡುಗಾಟಿಕೆಯಾಗಿತ್ತು.

patakiಇಡೀ ಶಾಲೆಯಲ್ಲಿ ಅತ್ಯಂತ ನಿಶ್ಯಬ್ಧವಾಗಿ ಪಾಠ ಪ್ರವಚನಗಳು ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ಹುಡುಗರ ಶೌಚಾಲಯದಿಂದ ಡಂ ಡಂ ಎಂದು ಪಟಾಕಿ ಶಬ್ಧ ಕೇಳುತ್ತಿದ್ದಂತೆಯೇ ಶಾಲೆಯ ಎಲ್ಲಾ ತರಗತಿಯ ಹುಡುಗರೂ ಹೋ…… ಎಂದು ಕೂಗಿಕೊಳ್ಳುವುದನ್ನು ಕೇಳುವುದೇ ಕರ್ಣಾನಂದವಾಗಿ ಅದನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದ್ದರೆ ಇನ್ನೂ ಹೆಚ್ಚಿನ ಮಜ ಸಿಗುತ್ತದೆ. ಪಟಾಕಿ ಸದ್ದು ಕೇಳುತ್ತಿದ್ದಂತೆಯೇ ನಮ್ಮ ಪಿಟಿ ಮೇಸ್ಟ್ರ ಆದಿಯಾಗಿ ಎಲ್ಲರೂ ಹುಡುಗರ ಶೌಚಾಲಯದ ಕಡೆ ಹೋಗಿ ಯಾರು ಈ ಕುಕೃತ್ಯವನ್ನು ಮಾಡಿದ್ದಾರೆ ಎಂದು ನೋಡಲು ಹೋದಾಗ, ಹೈಡ್ರೋಜನ್ ಬಾಂಬ್ ಮದ್ದಿನ ವಾಸನೆಯೋ, ಇಲ್ಲವೇ ಲಕ್ಷ್ಮೀ ಪಟಾಕಿಯ ಪೇಪರ್ ರಾಶಿಯ ಮಧ್ಯೆ ಉರಿಯುತ್ತಿದ್ದ ಊದುಕಡ್ಡಿ ಕಾಣಿಸಿಕೊಂಡು ಎಲ್ಲರನ್ನೂ ಉರಿಸುತ್ತಿತ್ತು.

ನಮ್ಮ ಶಾಲೆಯ ಕೆಲ ಧೈರ್ಯವಂತ ಹುಡುಗರು ( ವಿಶೇಷವಾಗಿ ಹಿಂದಿನ ಸಾಲಿನ ಹುಡುಗರು) ತರಗತಿಯ ಮಧ್ಯದಲ್ಲಿ ಶೌಚಾಲಯಕ್ಕೆ ಹೋಗಿ ಯಾರೂ ಇಲ್ಲದ್ದದ್ದನ್ನು ಗಮನಿಸಿ, ಶೌಚಾಲಯದಲ್ಲಿ ಉದ್ದನೆಯ ಊದುಕಡ್ಡಿಗೆ ಪಟಾಕಿ ಬತ್ತಿಯನ್ನು ಸುತ್ತಿ ಊದುಕಡ್ಡಿಯನ್ನು ಹತ್ತಿಸಿ ಸದ್ದಿಲ್ಲದೇ ತರಗತಿಗೆ ಬಂದು ಕುಳಿತು ತರಗತಿಯಲ್ಲಿ ಪಾಠ ನಡೆಯುತ್ತಿದ್ದರೂ ಪಟಾಕಿ ಸದ್ದಾಗುವುದನ್ನೇ ಕಾಯುತ್ತಿದ್ದರು. ಈ ರೀತಿಯ ಪ್ರಕ್ರಿಯೆಗೆ ಅಂದಿನ ಕಾಲದಲ್ಲಿ ಟೈಂ ಬಾಂಬ್ ಎಂದು ಕರೆಯುತ್ತಿದ್ದು, ಅದನ್ನು ಯಾರು? ಎಲ್ಲಿ? ಯಾವಾಗ ಈ ರೀತಿಯ ಟೈ ಬಾಂಬ್ ಇಡುತ್ತಾರೆ ಎಂದು ಗೊತ್ತಾಗದಿರುವಷ್ಟು ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಿದ್ದದ್ದು ವಿಶೇಷವಾಗಿತ್ತು.

ನಿಜ ಹೇಳ ಬೇಕೆಂದರೆ ಆ ರೀತಿಯಲ್ಲಿ ಟೈ ಬಾಂಬ್ ಇಡುತ್ತಿದ್ದದ್ದು ನಮ್ಮ ತರಗತಿಯ ಹಿಂದಿನ ಬೆಂಚಿನ ಹುಡುಗರಾದರೂ ಅವರಿಗೆ ಆ ರೀತಿಯ ಪಟಾಕಿ ತಂದುಕೊಡುತ್ತಿದದ್ದು ಅಂದಿನ ಕಾಲದ ಪರಮ ಪುಕ್ಕಲು ಹುಡುಗನಾಗಿದ್ದ ನಾನೇ ಎಂದು ಇದುವರೆವಿಗೂ ನಮ್ಮ ಶಿಕ್ಷಕರಿಗೆ ತಿಳಿಯದಿರುವುದೇ ಒಂದು ಸೋಜಿಗ. ಅಕಸ್ಮಾತ್ ಟೈಂ ಬಾಂಬ್ ಇಟ್ಟ ಹುಡುಗರೇನಾದರೂ ಸಿಕ್ಕಿ ಕೊಂಡಲ್ಲಿ ಅವರೇ ತಪ್ಪು ಒಪ್ಪಿಕೊಳ್ಳಬೇಕೇ ಹೊರತು ಅಪ್ಪಿ ತಪ್ಪಿಯೂ ನನ್ನ ಹೆಸರನ್ನು ಹೇಳಬಾರದು ಎಂಬ ಅಲಿಖಿತ ಒಪ್ಪಂದ ನಮ್ಮ ನಡುವೆ ಆಗಿರುತ್ತಿದ್ದ ಕಾರಣ, ಟೈ ಬಾಂಬ್ ಹಿಂದಿನ ನನ್ನ ಪಾತ್ರ ಎಂದಿಗೂ ಹೊರಬೀಳದೇ ಇರುವುದು ನಮ್ಮ ಗೆಳೆತನದ ಒಗ್ಗಟ್ಟು ಮತ್ತು ನಂಬಿಕೆಯನ್ನು ಎತ್ತಿ ಹಿಡಿಯುತ್ತದೆ.

deep1ಇಂದಿಗೂ ದೀಪಾವಳಿ ಹಬ್ಬದ ಸಮಯದಲ್ಲಿ ನನ್ನ ಹಳೆಯ ಗೆಳೆಯರು ಇಲ್ಲವೇ ನಮ್ಮ ಅಣ್ಣ ತಮ್ಮಂದಿರೂ, ಒಂದೆಡೆ ಸೇರಿದಾಗ ಅಂದು ನಾವುಗಳು ಮಾಡುತ್ತಿದ್ದ ಈ ರೀತಿಯ ತುಂಟಾಟಗಳನ್ನು ಮೆಲುಕು ಹಾಕುವ ಮೂಲಕ ಹಬ್ಬವನ್ನು ಸಂಭ್ರಮಿಸುತ್ತೇವೆ. ಹೀಗೆ ನನ್ನ ಬಾಲ್ಯದಿಂದ ಆರಂಭವಾದ ಪಟಾಕಿ ಹೊಡೆಯುವ ಅಭ್ಯಾಸ ಇಂದಿಗೂ ಮುಂದುವರೆದು ಅಂದಿನಷ್ಟು ಇಲ್ಲದೇ ಹೋದರೂ, ನಮ್ಮ ಮಕ್ಕಳು ಅಪ್ಪಾ ಸಾಕಪ್ಪಾ ಎಂದು ಮುಂದಿನ ವರ್ಷಕ್ಕೂ ಉಳಿಸುವಷ್ಟು ಪಟಾಕಿಗಳನ್ನು ಮನೆಗೆ ತರುತ್ತೇವೆ. ಕತ್ತಲಿನಿಂದ ಬೆಳಕಿಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಸಂಕೇತವೇ ದೀಪಾವಳಿ ಹಬ್ಬವಾಗಿದ್ದು ಹಚ್ಚಿರುವ ಹಣತೆ ಸಾಂಕೇತಿಕವಾಗಿ ಕೆಲಕಾಲ ಉರಿದು ಆರಿ ಹೋಗಬಹುದು. ಆದರೆ ನಮ್ಮ ಜೀವನೋತ್ಸಾಹದ ಹಣತೆ ಎಂದೂ ಆರದಿರಲಿ. ಅದರ ಹೊಂಬೆಳಕು ನಮ್ಮ ಮನೆ ಮನಗಳನ್ನು ಸದಾ ಬೆಳಗುತ್ತಿರಲಿ.

deepavali2ಇತ್ತೀಚೆಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪರಿಸರ ಮತ್ತು ಶಬ್ಧ ಮಾಲಿನ್ಯತೆಯ ಹೆಸರಿನಲ್ಲಿ ನಮ್ಮ ಹಿಂದೂ ಧಾರ್ಮಿಕ ಆಚರಣೆಗಳ ವಿರುದ್ಧ ಪದೇ ಪದೇ ಆಕ್ಷೇಪಣೆ ಎತ್ತುತ್ತಿರುವುದಲ್ಲದೇ ಅದರ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆಯನ್ನೂ ಹೂಡುತ್ತಿರುವುದು ನಿಜಕ್ಕೂ ಛೇಧವಾಗಿದ್ದು. ಹಾಗಿ ವಿರೋಧಿಸುವ ಹಬ್ಬಗಳಲ್ಲಿ ದೀಪಾವಳಿ ಹಬ್ಬವೂ ಒಂದಾಗಿರುವ ಕಾರಣ, ನಾವೆಲ್ಲರೂ ಆದಷ್ಟೂ ನಮ್ಮ ಸಂಪ್ರದಾಯದಂತೆ ನಮ್ಮ ಕೈಯಲ್ಲಾಗುವ ಮಟ್ಟಿಗೆ ಜಾಗೃತಿಯಿಂದ ಯಾರಿಗೂ ತೊಂದರೆಯಾಗದಂತೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸೋಣ. ಪಟಾಕಿ ಹೊಡೆಯುವ ಜೊತೆಗೆ ಪರಿಸರದ ಬಗ್ಗೆ ಕಾಳಜಿಯಿಂದ ನಮ್ಮ ಮನೆಯ ಸುತ್ತ ಮುತ್ತ ಮರ ಗಿಡಗಳನ್ನು ಬೆಳೆಸೋಣ. ವಾಯುಮಾಲಿನ್ಯವನ್ನು ಆದಷ್ಟೂ ತಡೆಯೋಣ. ಮನೆಯ ಸುತ್ತಲೂ ಹಣತೆಗಳನ್ನು ಹಚ್ಚಿ ಅರ್ಥ ಪೂರ್ಣವಾಗಿ ದೀಪಾವಳಿಯನ್ನು ಆಚರಿಸೋಣ ನಮ್ಮ ಮುಂದಿನ ಪೀಳಿಗೆಯವರಿಗೂ ನಮ್ಮ ಸಂಪ್ರದಾಯವನ್ನು ಉಳಿಸೋಣ ಮತ್ತು ಬೆಳೆಸೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment