ಬಿಂಡಿಗದ ಶ್ರೀ ದೇವೀರಮ್ಮ

devi4ನಮ್ಮ ಸನಾತನ ಧರ್ಮದಲ್ಲಿ ಮುಕ್ಕೋಟಿ ದೇವಾನು ದೇವತೆಗಳು ಇದ್ದು, ವರ್ಷದ ಪ್ರತಿಯೊಂದು ದಿನವೂ ಸಹಾ ಒಂದೊಂದು ವಿಶೇಷ ಆಚರಣೆಗಳು ಇರುತ್ತವೆ. ಅದೇ ರೀತಿಯಲ್ಲಿ ನಮ್ಮ ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಇರುವ ದೇವಾಲಯಗಳಿಗೂ ಅದರದ್ದೇ ಆದ ಐತಿಹಾಸಿಕ ಇಲ್ಲವೇ ಪೌರಾಣಿಕ ಹಿನ್ನಲೆ ಇರುವುದನ್ನು ಕಾಣಬಹುದಾಗಿದೆ. ವರ್ಷಕ್ಕೊಮ್ಮೆ ದೀಪಾವಳಿ ಹಬ್ಬದ ಸಮಯದಲ್ಲಿ 10-12 ದಿನಗಳ ಕಾಲ ಹಾಸನದ ಹಾಸನಾಂಬೆ ದೇವಾಲಯ ಭಕ್ತಾದಿಗಳಿಗೆ ತೆರೆದಿರುವಂತೆ, ಕರ್ನಾಟಕದ ಕಾಫಿ ನಾಡು ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿರುವ ದೇವೀರಮ್ಮನ ದೇವಾಲಯವೂ ಸಹಾ ವರ್ಷಕ್ಕೊಮ್ಮೆ ನರಕ ಚತುರ್ದಶಿಯಂದು ಮಾತ್ರವೇ ಭಕ್ತಾದಿಗಳ ದರ್ಶನಕ್ಕೆಂದು ತೆರೆದಿರುವ ಕಾರಣ ದೇವಿಯ ದರ್ಶನಕ್ಕೆ ದೇಶ ವಿದೇಶಗಳಿಂದ ಸಹಸ್ರಾರು ಜನರು ಬರುವುದು ವಿಶೇಷವಾಗಿದ್ದು, ಆ ಶ್ರೀಕ್ಷೇತ್ರದ ಪೌರಾಣಿಕ ಹಿನ್ನಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

devi6ಈಗಾಗಲೆ ತಿಳಿಸಿದಂತೆ ಚಿಕ್ಕಮಗಳೂರು ಬಳಿಯ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿ ಚಂದ್ರದ್ರೋಣ ಪರ್ವತ ಶ್ರೇಣಿಗೆ ಚಾಚಿಕೊಂಡಿರುವ ಸುಮಾರು 3 ಸಾವಿರ ಅಡಿ ಎತ್ತರದ ಬೆಟ್ಟವಿದ್ದು, ಅಂತಹ ಸುಂದರ ಪ್ರಕೃತಿಯ ಮಡಿಲ ಮಧ್ಯದಲ್ಲಿ ತಾಯಿ ಶ್ರೀ ದೇವೀರಮ್ಮ ನೆಲೆಸಿರುವ ಕಾರಣ ಅದನ್ನು ದೇವೀರಮ್ಮ ಬೆಟ್ಟ ಎಂದು ಕರೆಯಲಾಗುತ್ತಿದ್ದು, ಈ ದೇವಿಯನ್ನು ಬಿಂಡಿಗ ದೇವೀರಮ್ಮ ಎಂದೂ ಸಹಾ ಕರೆಯಲಾಗುತ್ತದೆ.

devi9ಪೌರಾಣಿಕ ಹಿನ್ನಲೆಯ ಪ್ರಕಾರ, ನವರಾತ್ರಿಯ ಸಂಧರ್ಭದಲ್ಲಿ ಮೈಸೂರಿನಲ್ಲಿದ್ದ ರಾಕ್ಷಸ ಮಮಹಿಷಾಸುರನನ್ನು ಸಕಲ ದೇವಾನು ದೇವತೆಗಳಿಂದ ಪಡೆದ ಆಯುಧದ ಸಹಾಯಿಂದ ಸಂಹರಿಸಿದ ನಂತರ, ಉಗ್ರಳಾಗಿದ್ದ ತಾಯಿ ಚಾಮುಂಡಿಯ ಕೋಪದ ತಾಪಕ್ಕೆ ತನ್ನ ಭಕ್ತರು ಸಿಲುಕಿಕೊಳ್ಳದಿರಲಿ ಎಂದು ಮನಃಶಾಂತಿಗಾಗಿ ಸೂಕ್ತವಾದ ಸ್ಥಳವನ್ನು ಅರಸುತ್ತಿದ್ದಾಗ, ತಾಯಿ ಚಾಮುಂಡೇಶ್ವರಿಗೆ ಈ ಚಂದ್ರದ್ರೋಣ ಪರ್ವತದ ಈ ಬೆಟ್ಟ ಪ್ರಶಾಂತವಾಗಿ ಕಾಣಿಸಿಸುತ್ತದೆ. ಆ ಪರ್ವತದಲ್ಲಿ ಅದಾಗಲೇ, ರುದ್ರಮುನಿ, ಸೀತಯ್ಯ, ಮುಳ್ಳಯ್ಯ, ದತ್ತಾತ್ರೇಯ ಮತ್ತು ಗಾಳಲ್ಲಿ ಅಜ್ಜಯ್ಯ ಎಂಬ ಐದು ತಪಸ್ವಿಗಳು ನೆಲೆಸಿದ್ದ ಕಾರಣ, ತಾಯಿಯು ತನಗೆ ಈ ಪ್ರಶಾಂತ ವಾತಾವರಣದಲ್ಲಿ ನೆಲೆಸಲು ಅನುವು ಮಾಡಿಕೊಡುವಂತೆ ಕೇಳಿದಾಗ, ಅವರೆಲ್ಲರೂ ಪುರುಷರಾಗಿದ್ದರಿಂದ ಕಾರಣ, ತಾವು ಇದ್ದ ಸ್ವಲ್ಪ ದೂರದಲ್ಲೇ ಇದ್ದ ಬೆಟ್ಟದಲ್ಲಿ ನೆಲೆಸುವಂತೆ ತಾಯಿಯನ್ನು ಕೊರಿಕೊಂಡ ಪರಿಣಾಮ ಚಾಮುಂಡೇಶ್ವರಿ ಆ ಪ್ರದೇಶದಲ್ಲಿ ಬೆಟ್ಟದಲ್ಲಿ ದೇವೀರಮ್ಮನಾಗಿ ನೆಲೆಸಿದಳೆಂದು ಸ್ಥಳೀಯರ ನಂಬಿಕೆಯಾಗಿದ್ದು, ಅಂದಿನಿಂದ ಇಂದಿಗೂ ಆ ಉಗ್ರ ರೂಪದ ತಾಯಿ ಚಾಮುಂಡೇಶ್ವರಿಯು ವರ್ಷಕ್ಕೊಮ್ಮೆ ದೀಪಾವಳಿಯ ನರಕ ಚತುರ್ದಶಿಯಂದು ಬೆಟ್ಟದ ಮೇಲೆ ಮಾತ್ರವೇ ಭಕ್ತಾದಿಗಳ ದರ್ಶನ ನೀಡುವುದು ಇಲ್ಲಿನ ಸಂಪ್ರದಾಯವಾಗಿದೆ. ಹೀಗೆ ಕೇವಲ ವರ್ಷಕ್ಕೊಮ್ಮೆ ಮಾತ್ರವೇ ತಾಯಿಯ ದರ್ಶನ ಕೊಡುವುರದಿಂದ ಬೇಸರಗೊಂಡ ಭಕ್ತಾದಿಗಳು, ವರ್ಷವಿಡೀ ದರ್ಶನ ನೀಡುವಂತೆ ಆ ಮಹಾ ತಾಯಿಯೊಂದಿಗೆ ಪ್ರಾರ್ಥಿಸಿಕೊಂಡಾಗ, ಭಕ್ತರ ನಿವೇದನೆಯನ್ನು ಪುರಸ್ಕರಿಸಿ, ಉಗ್ರರೂಪದ ಮಹಿಷಾಸುರ ಮರ್ದಿನಿಯು ಶಾಂತ ರೂಪವಾಗಿ ಬೆಟ್ಟದಿಂದ ಕೆಳಗಿಳಿದು ಬೆಟ್ಟದ ಕೆಳಗಿರುವ ಬಿಂಡಿಗ ಗ್ರಾಮದಲ್ಲಿ ದೇವೀರಮ್ಮನ ರೂಪದಲ್ಲಿ ನೆಲೆಸುತ್ತಾಳೆ.

devi5ಪ್ರತೀ ದೀಪಾವಳಿಯ ಮೊದಲನೇ ದಿನ ಬೆಟ್ಟದ ಕೆಳಗಿರುವ ದೇವಿರಮ್ಮ ದೇವಾಲಯದಿಂದ ಉತ್ಸವ ಮೂರ್ತಿಯನ್ನು ದುರ್ಗಮವಾದ ಬೆಟ್ಟದ ಮೂಲ ಸ್ಥಾನದಲ್ಲಿ ಇಟ್ಟನಂತರ, ಈ ತಾಯಿಯ ಶಕ್ತಿಯ ಅಪಾರವಾಗಿದ್ದು ತಮ್ಮೆಲ್ಲಾ ಇಷ್ಟಾರ್ಥಗಳನ್ನು ನಿಶ್ಚಿತವಾಗಿಯೂ ಈಡೇರಿಸುತ್ತಾಳೆ ಎಂಬ ಭಾವನೆ ಸಕಲ ಭಕ್ತಾದಿಗಳಲ್ಲಿ ಇರುವ ಕಾರಣ, ದೇಶ ವಿದೇಶಗಳಿಂದಲೂ ಸಹಸ್ರಾರು ಹರಕೆ ಹೊತ್ತ ಭಕ್ತಾದಿಗಳು, ಬರಿಗಾಲಿನಲ್ಲಿ ಆ ದುರ್ಗಮ ಬೆಟ್ಟವನ್ನು ರಾತ್ರಿಯ ಕತ್ತಲನ್ನೂ ಲೆಕ್ಕಿಸದೇ ಯಾವುದೇ ಆಹಾರವನ್ನು ಸೇವಿಸದೇ ಉಪವಾಸವಿದ್ದು ಬಹಳ ಶ್ರದ್ಧಾ ಭಕ್ತಿಗಳಿಂದ ಹತ್ತಿ ಹರಕೆಯ ರೂಪದಲ್ಲಿ ದೇವಿಗೆ ತುಪ್ಪ, ಬಳೆ, ಬಟ್ಟೆ, ಕಟ್ಟಿಗೆಗಳೊಂದಿಗೆ ಆಗಮಿಸಿ ನರಕ ಚತುರ್ದಶಿಯಂದು ಬೆಟ್ಟದ ಮೇಲಿನ ದೇವಿಗೆ ಅರ್ಪಿಸಿ ದೇವಿಯ ದರ್ಶನ ಪದೆದು ಬೆಟ್ಟದಿಂದ ಕೆಳಗೆ ಇಳಿಯುತ್ತಾರೆ.

devi10ಹೀಗೆ ಭಕ್ತಾದಿಗಳು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳನ್ನು ಬೆಟ್ಟದ ಮೇಲೆ ಒಟ್ಟು ಗೂಡಿಸಿ ಸೂರ್ಯಾಸ್ತವಾದ ನಂತರ ಅದಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ ದೇವೀರಮ್ಮನ ಬೆಟ್ಟದ ಮೇಲಿನ ಜ್ಯೋತಿಯನ್ನು ನೋಡಿದ ನಂತರವೇ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನರು ತಮ್ಮ ಮನೆಯ ದೇವರಿಗೂ ಮತ್ತು ಆ ಜ್ಯೋತಿಗೂ ಆರತಿ ಮಾಡಿದ ನಂತವಷ್ಟೇ ತಮ್ಮ ಮನೆಗಳ ದೀಪಗಳನ್ನು ಬೆಳಗಿಸಿ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಿ ಆಹಾರವನ್ನು ಸೇವಿಸುತ್ತಾರೆ. ಬೆಟ್ಟದ ಮೇಲಿರುವ ತಾಯಿ ಶ್ರೀ ಚಾಮುಂಡೇಶ್ವರಿಯಾಗಿರುವ ಕಾರಣ, ಈ ದೇವಿಗೂ ಮತ್ತು ಮೈಸೂರಿನ ಅರಸರಿಗೂ ಬಹಳ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಹಾಗಾಗಿ ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷವೂ ಮೈಸೂರಿನ ಅರಮನೆಯಿಂದ ಈ ದೇವಾಲಯಕ್ಕೆ ಎಣ್ಣೆ, ಸೀರೆ, ಅರಿಶಿನ-ಕುಂಕುಮ ಸೇರಿದಂತೆ ಎಲ್ಲಾ ರೀತಿಯ ಪೂಜಾ ಸಾಮಾಗ್ರಿಗಳನ್ನು ಕಳುಹಿಸಿಕೊಡುವುದಲ್ಲದೇ, ಸಂಜೆ ಇಲ್ಲಿ ಜ್ಯೋತಿಯ ನಂತರವೇ ಮೈಸೂರಿನ ಅರಮನೆಯಲ್ಲಿ ದೀಪವನ್ನು ಹತ್ತಿಸಿ ದೇವರ ಪುಜೆ ಮಾಡುವ ಸಂಪ್ರದಾಯವನ್ನು ಇಂದಿಗೂ ಮೈಸೂರು ರಾಜವಂಶಸ್ಥರೂ ಪಾಲಿಸುತ್ತಾರೆ ಎನ್ನುವುದು ಗಮನಾರ್ಹವಾಗಿದೆ.

devi3ಇನ್ನು ದೀಪಾವಳಿಯ ಎರಡನೇ ದಿನ ಅಮಾವಾಸ್ಯೆಯಂದು ಬೆಟ್ಟದ ಕೆಳಗಿರುವ ಬಿಂಡಿಗ ದೇವಸ್ಥಾನದಲ್ಲಿನ ಬಾಗಿಲು ತನ್ನಿಂದ ತಾನೆ ತೆರೆಯುತ್ತದೆ ಎಂಬ ಪ್ರತೀತಿ ಇದ್ದು ಅದನ್ನು ನೋಡಲೆಂದೇ ಸಹಸ್ರಾರು ಭಕ್ತಾದಿಗಳು ಬೆಟ್ಟದ ಕೆಳಗಿರುವ ದೇವೀರಮ್ಮನ ದೇವಾಲಯಕ್ಕೆ ಬರುತ್ತಾರೆ. ಇದೇ ಸಮಯದಲ್ಲಿ ಮೂರು ದಿನಗಳ ಕಾಲ ಅತಿ ದೊಡ್ಡ ಜಾತ್ರಾ ಮಹೋತ್ಸವ ಇಲ್ಲಿ ನಡೆದು, ದೇವಿಯ ದರ್ಶನ ಪಡೆದ ನಂತರ ಆ ಜಾತ್ರೆಯಲ್ಲಿ ಪಾಲ್ಗೊಂಡರೆ ಭಕ್ತರ ಆಸೆಗಳೆಲ್ಲವೂ ಈಡೇರುತ್ತದೆ ಎನ್ನುವುದು ಇಲ್ಲಿನವರ ನಂಬಿಕೆಯಾಗಿದೆ.

devi7ಈ ಬೆಟ್ಟಕ್ಕೆ ಹೋಗಲು ಯಾವುದೇ ವ್ಯವಸ್ಥಿತವಾದ ರಸ್ತೆ ಇಲ್ಲವಾಗಿದ್ದು, ಕಲ್ಲು ಮುಳ್ಳಿನ ಕಡಿದಾದ ಹಾದಿಯಲ್ಲೇ ಬರೀಗಾಲಿನಲ್ಲೇ ಈ ಬೆಟ್ಟವನ್ನು ಹತ್ತಿಕೊಂಡು ಬರುವುದು ವಿಶೇಷವಾಗಿದ್ದು, ದೀಪಾವಳಿಯ ಮೂರು ದಿನಗಳ ಕಾಲ ಇಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಕೊಳ್ಳುವುದಲ್ಲದೇ ಕಡೆಯ ದಿನ ಕೆಂಡಸೇವೆಯೊಂದಿಗೆ ಕೊನೆಗೊಳ್ಳುವ ದೇವೀರಮ್ಮ ಉತ್ಸವದಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಳ್ಳುವುದನ್ನು ವರ್ಣಿಸುವುದಕ್ಕಿಂತಲೂ ಅಲ್ಲಿಗೆ ಹೋಗಿ ಅನುಭವಿಸಿದರೆ ಚಂದವೆನಿಸುತ್ತದೆ.

devi8ಈ ಹಬ್ಬದ ಹೊರತಾಗಿಯೂ ಉಳಿದ ದಿನಗಳಲ್ಲಿ ಚಿಕ್ಕಮಗಳೂರಿನಿಂದ ಕೇವಲ 22 ದೂರವಿರುವ ಬಿಂಡಿಗದ ಈ
ಸುಂದರ ದೇವಾಲಯಕ್ಕೆ ಬರಲು ಉತ್ತಮವಾದ ರಸ್ತೆಯ ಸಂಪರ್ಕದ ಜೊತೆಗೆ ತರೀಕೆರೆ, ಕಡೂರು, ಬಿರೂರುಹಾಗೂ ಚಿಕ್ಕಮಗಳೂರಿನಿಂದ ರಸ್ತೆ ಸಾರಿಗೆ. ಬಸ್ಸುಗಳು ಹೇರಳವಾಗಿದ್ದು ಸುಂದರವಾದ ಅಹ್ಲಾದಕರ ಮತ್ತು ಪ್ರಶಾಂತವಾದ ವಾತಾವರಣದಲ್ಲಿ ವಿಶಾಲವಾಗಿರುವ ಈ ದೇವಾಲಯದಲ್ಲಿ ದರ್ಶನ ಪಡೆದ ನಂತರ ಮಧ್ಯಾಹ್ನ ಪ್ರಸಾದ ವ್ಯವಸ್ಥೆಯೂ ಇದೆ.

devi1ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ನಂತರ ಇನ್ಣೇಕೆ ತಡಾ, ಈ ವಾರಾಂತ್ಯದ ದೀಪಾವಳಿಯ ಸಮದಲ್ಲಿ ಅಥವಾ ರಜೆ ಇದ್ದಾಗ ಬಿಂಡಿಗದ ಶ್ರೀ ದೇವೀರಮ್ಮನ ದರ್ಶನವನ್ನು ಪಡೆದು ಆದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment