ಕಾರ್ತೀಕ ಮಾಸ ಬಂದಿತೆಂದರೆ ಬೆಂಗಳೂರಿಗೆ ಒಂದು ವಿಚಿತ್ರ ಅನುಭವ. ಮಾಗಿಯ ಚಳೆ ಒಂದೆಡೆಯಾದರೆ, ಮತ್ತೊಂದೆಡೆ ಇತ್ತೀಚಿನ ಕೆಲವು ವರ್ಷಗಳಿಂದ ನಗರ ವಿವಿಧ ಕಡೆಗಳಲ್ಲಿ ಕಾರ್ತೀಕ ಸೋಮವಾರಗಳಂದು ನಡೆಸುವ ಕಡಲೇ ಕಾಯಿ ಪರಿಷೆಯ ಸಂಭ್ರಮ. ಎಲ್ಲಾ ಕಡೆಗಳಲ್ಲಿಯೂ ನಡೆಯುವ ಕಡಲೇ ಕಾಯಿ ಪರಿಷೆ ಒಂದು ತೂಕವಾದರೆ, ಅದರಕ್ಕಿಂತಲೂ ಹೆಚ್ಚಿನ ತೂಕ ಮತ್ತು ಆಕರ್ಷಣೆಯನ್ನು ಇಂದಿಗೂ ಬೆಂಗಳೂರಿನ ಬಸವನಗುಡಿಯ ಕಡಲೇ ಕಾಯಿ ಪರಿಷೆ ಉಳಿಸಿಕೊಂಡಿದೆ ಎಂದರೂ ತಪ್ಪಾಗದು. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹೈಟೆಕ್ ಸಿಟಿ ಬೆಂಗಳೂರು, ಭಾರತದ ಸಿಲಿಕಾನ್ ಸಿಟಿ ಎನಿಸಿಕೊಂಡು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಎಷ್ಟೇ ಒಗ್ಗಿ ಕೊಂಡಿದ್ದರೂ, ಊರ ಹಬ್ಬ, ಅಣ್ಣಮ್ಮನ ಜಾತ್ರೆ, ಕರಗ, ರಾಮ ನವಮಿ, ರಾಜ್ಯೋತ್ಸವ ಮತ್ತು ಪಡಲೇಕಾಯಿ ಪರಿಷೆ ಬಂದಿತೆಂದರೆ ಸಾಕು, ಬೆಂಗಳೂರಿಗರು ಎಲ್ಲವನ್ನೂ ಮರೆತು ಹಿಂದಿನ ಅಪ್ಪಟ ಗ್ರಾಮೀಣ ಸೊಗಡಿನ ರೀತಿಯಲ್ಲೇ ಜಾತ್ರೆಗಳನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಮೆಚ್ಚುವಂತಹ ವಿಷಯವಾಗಿದ್ದು ನಾವಿದಂದು ೨೦೨೩೪ರ ಬೆಂಗಳೂರು ಬಸವನಗುಡಿಯ ದೊಡ್ಡಬಸವಣ್ಣನ ಗುಡಿಯ ಮುಂದೆ ನಡೆದ ಕಡಲೇಕಾಯಿ ಪರಿಶೆಯನ್ನು ಮನೆಯಿಂದಲೇ ನೋಡೋಣ ಬನ್ನಿ.
ನೂರಾರು ವರ್ಷಗಳಿಂದಲೂ ಬಸವನಗುಡಿಯಲ್ಲಿ ಕಡಲೇ ಪರಿಷೆ ನಡೆಯುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಅದನ್ನು ನೋಡಲು ತಂಡೋಪ ತಂಡವಾಗಿ ಲಕ್ಷಾಂತರ ಜನರು ಬರುತ್ತಿದ್ದನ್ನು ಗಮನಿಸಿ ಪರಿಷಯ ಆಯೋಜಕರು ಕೇವಲ ಕಡೆಯ ಕಾರ್ತೀಕ ಸೋಮವಾರಕ್ಕಷ್ಟೇ ಮೀಸಲಾಗಿಡದೆ, ಶನಿವಾರದಿಂದ ಮಂಗಳವಾರ ಕೆಲವೊಮ್ಮೆ ಬುಧವಾರದವರೆಗೂ ವಿಸ್ತರಿರುವ ಉದಾಹರಣೆ ಇದೆ. ವಾರಾಂತ್ಯದಲ್ಲಂತೂ ಚಿಕ್ಕವರು ದೊಡ್ಡವರು, ಹಿರಿಯರು ಕಿರಿಯರು, ಎಂಬ ಯಾವುದೇ ಬೇಧವಿಲ್ಲದೇ, ಎಲ್ಲರೂ ಜನಜಂಗುಳಿಯಲ್ಲಿ ಮಿಂದು ಸರತಿಯ ಸಾಲಿನಲ್ಲಿ ನಿಂತು ದೊಡ್ಡ ಗಣೇಶ ಮತ್ತು ಬಸವಣ್ಣನ ದರ್ಶನ ಪಡೆದು ಪುನೀತರಾಗುವುದಲ್ಲದೇ, ಜಾತ್ರೆಯಲ್ಲಿ ಬೇಕೋ ಬೇಡವೋ, ಅರೋಗ್ಯಕರವೋ ಅನಾರೋಗ್ಯಕರವೋ ಯವುದನ್ನೂ ಲೆಕ್ಕಿಸದೇ, ಕಣ್ಣಿಗೆ ಆಕರ್ಷಣಿಯವಾಗಿ ಕಾಣಿಸಿದ್ದಲ್ಲವನ್ನೂ ಕೊಂಡು ತಿಂಡು ಮಜ ಮಾಡುವುದನ್ನು ವರ್ಣಿಸುವುದಕ್ಕಿಂತಲು ಅನುಭವಿಸರೇ ಚಂದ.
ನಮಗೆಲ್ಲರಿಗೂ ಈ ಕಡಲೇ ಕಾಯಿ ಪರಿಷೆಯ ಹಿನ್ನೆಲೆ ತಿಳಿದಿದ್ದರೂ ಮತ್ತೊಮ್ಮೆ ಮಗದೊಮ್ಮೆ ಕೇಳಲು ಅತ್ಯಂತ ರೋಚಕವಾಗಿದೆ ಎಂದರೂ ತಪ್ಪಾಗದು. ನೂರಾರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ರೈತರು ಕಡಲೆಕಾಯಿಯನ್ನು ಬೆಳೆಯುತ್ತಿದ್ದರಂತೆ. ಸಮೃದ್ಧವಾಗಿ ಬೆಳೆದಿದ್ದ ಕಡಲೇ ಕಾಯಿ ಇನ್ನೇನು ಕಟಾವು ಮಾಡಲೇ ಬೇಕು ಅನ್ನೋಷ್ಟರಲ್ಲಿ, ರಾತ್ರೋ ರಾತ್ರಿ ಅವರ ಹೊಲಕ್ಕೆ ಯಾರೋ ನುಗ್ಗಿ, ಅವರು ಬೆಳೆದಿದ್ದ ಕಡಲೇ ಕಾಯಿ ಎಲ್ಲವನ್ನೂ ಧ್ವಂಸ ಮಾಡಿ ಬಿಡುತ್ತಿದ್ದರಿಂದ ನೊಂದ ರೈತರು, ಪದೇ ಪದೇ ತಮ್ಮ ಬೆಳೆಯನ್ನು ನಷ್ಟ ಮಾಡುತ್ತಿರುವವರು ಯಾರು? ಆವರನ್ನು ಹಿಡಿಯಲೇ ಬೇಕೆಂದು ನಿರ್ಧರಿಸಿ, ಅದೊಂದು ರಾತ್ರಿ ದೊಡ್ಡ ದೊಡ್ಡ ದೊಣ್ಣೆಗಳನ್ನು ಹಿಡಿದು ತಮ್ಮ ತಮ್ಮ ಹೊಲವನ್ನು ಕಾಯಲು ನಿಂತ್ತಿದ್ದಾರ, ಏಕಾ ಏಕಿ ಅದೆಲ್ಲಿಂದಲೋ ಬೃಹದಾಕಾರದ ಹೋರಿಯೊಂದು ಬಂದು ಅವರ ಹೊಲದಲ್ಲಿ ಬೆಳೆದಿದ್ದ ಕಡಲೇ ಕಾಯಿಯನ್ನು ತಿನ್ನುತ್ತಿದ್ದದ್ದನ್ನು ನೋಡಿದಾಕ್ಷಣ ಇದು ಸಾಮಾನ್ಯವಾದ ಹೋರಿಯಲ್ಲ. ಇದು ಶಿವನ ವಾಹನ ನಂದಿಯ ಪ್ರತಿರೂಪವೇ ಇರಬೇಕೆಂದು ನಿರ್ಧರಿಸಿ, ಆ ರೈತರೆಲ್ಲರೂ ಆ ಬಸವನ ಬಳಿ ಕೈ ಮುಗಿದು, ಅಯ್ಯಾ ಬಸವಣ್ಣನೇ, ದಯವಿಟ್ಟು ನಾವು ಕಷ್ಟ ಪಟ್ಟು ಬೆಳೆಸಿದ ಬೆಳೆಗಳನ್ನು ಈ ರೀತಿಯಾಗಿ ಹಾಳು ಮಾಡಬೇಡ.
ನಾವೆಲ್ಲರೂ ಇದೇ ಸ್ಥಳದಲ್ಲಿ ನಿನಗೊಂದು ದೊಡ್ಡದಾದ ಗುಡಿಯೊಂದನ್ನು ಕಟ್ಟಿ, ಪ್ರತೀವರ್ಷ ಕಾರ್ತೀಕ ಮಾಸದ ಕಡೆಯ ಸೋಮವಾರದಂದು ನಾವು ಬೆಳೆದ ಕಡಲೆಕಾಯಿಯನ್ನು ನಿನಗೆ ಅರ್ಪಿಸುತ್ತೇವೆ ಮತ್ತು ನಿನ್ನ ಹೆಸರಿನಲ್ಲಿಯೇ ಕಡಲೆಕಾಯಿ ಪರಿಷೆ ನಡೆಸುತ್ತೇವೆ ಎಂದು ಕೋರಿ ಕೊಂಡಿದ್ದಕ್ಕೆ ಒಪ್ಪಿದ ಆ ಬಸವಣ್ಣ ಅಲ್ಲೇ ಇದ್ದ ಬಂಡೆಯ ಮೇಲೆ ಹೋಗಿ ಕುಳಿತುಕೊಳ್ಳುತ್ತಿದ್ದಂತೆಯೇ ಅದು ಕಲ್ಲಿನ ಬಸವಣ್ಣನ ರೂಪ ಪಡೆದಾಗ, ತೈತರೆಲ್ಲರೂ ಅಲ್ಲೇ ದೊಡ್ಡದಾದ ದೇವಸ್ಥಾನವನ್ನು ಕಟ್ಟಿದರಂತೆ, ಅಂದಿನಿಂದ ಮುಂದೆಂದೂ ಬಸವಣ್ಣನಿಂದ ತಮ್ಮ ಬೆಳೆ ನಾಶವಾಗದೇ ಹೋದದ್ದಕ್ಕಾಗಿ ಕೃತಜ್ಞಾತಾಪೂರ್ವಕವಾಗಿ ಕಡಲೇಕಾಯಿ ಪರಿಡ್ಜೆಯನ್ನು ಆರಂಭಿಸಿದರು ಎಂಬ ಹಿನ್ನಲೆಯಾಗಿದೆ.
ಅಂದಿನಿಂದಲೂ ಇಂದಿನ ವರೆಗೂ ಕೇವಲ ಬೆಂಗಳೂರಿನ ಕಡಲೇ ಕಾಯಿ ವ್ಯಾಪಾರಿಗಳಲ್ಲದೇ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ರಾಜ್ಯದ ನಾನಾ ಭಾಗಗಳಲ್ಲದೇ, ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ರೈತರುಗಳೂ ಸಹಾ ತಾವು ಬೆಳೆದ ವಿವಿಧ ರೀತಿಯ ಕಡಲೇಕಾಯಿಯನ್ನು ತಂದು ಭಕ್ತಿಯಿಂದ ದೊಡ್ದ ಗಣೇಶ ಮತ್ತು ದೊಡ್ದಗಣಪತಿಗೆ ಅರ್ಪಿಸಿ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಲೇ ಸಹಾ ಈ ಪರಿಷೆಯಲ್ಲಿ ತಾವು ಬೆಳೆದ ಕಡಲೇ ಕಾಯಿಯೊಂದಿಗೆ ಭಾಗವಹಿಸುತ್ತಾರೆ.
ಆರಂಭದಲ್ಲಿ ಕೇವಲ ದೊಡ್ಡ ಗಣೇಶನ ಗುಡಿಯ ಅಕ್ಕ ಪಕ್ಕಕಷ್ಟೇ ಸೀಮಿತವಾಗಿದ್ದ ಪರಿಷೆ ಇಂದು ರಾಮಕೃಷ್ಣ ಆಶ್ರಮದ ಎದುರಿಗಿರುವ ವಿವೇಕಾನಂದ ಪುತ್ಧಳಿಯ ವೃತ್ತದಿಂದ ಆರಂಭವಾಗಿ ಬಸವಣ್ಣನ ದೇವಸ್ಥಾನವನ್ನೂ ದಾಟಿ ಸುಮಾರು ಅರ್ಥ ಮುಕ್ಕಾಲು ಮೈಲಿಗಳ ದೂರ ಹೋಗುವುದಲ್ಲದೇ, ಇನ್ನು ಈ ಭಾಗದಲ್ಲಿ ಜಾಗ ಸಿಗದ ವ್ಯಾಪಾರಿಗಳು ಹನುಮಂತನಗರ, ಗವಿ ಗಂಗಾಧರೇಶಶ್ವರ ದೇವಸ್ಥಾನಗಳಿಗೆ ಹೋಗುವ ರಸ್ತೆ, ಇನ್ನೂ ತಡವಾಗಿ ಬಂದವರು ರಾಮಕೃಷ್ಣ ಆಶ್ರಮದಿಂದ ಚಾಮರಾಜಪೇಟೆಯ 5ನೇ ಮುಖ್ಯ ರಸ್ತೆಯೆಡೆಗೆ ಸಾಗುವ ಜಾಗಗಳಲ್ಲಿ ಬಿಡಾರ ಹೂಡುತ್ತಾರೆ. ಹೀಗೆ ಇಡೀ ಮೂರ್ನಾಲ್ಕು ದಿನಗಳ ಕಾಲ ಬಸವನ ಗುಡಿಯ ಸುತ್ತಮತ್ತಲಿನ ಪ್ರದೇಶ ಕಡಲೇಕಾಯಿಯ ವ್ಯಾಪಾರಕ್ಕಾಗಿಯೇ ಮೀಸಲಾಗಿರುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ರಾಶಿ ರಾಶಿ ಕಡಲೆಕಾಯಿ ಪರಿಶೆಗೆ ಬರುವ ಗ್ರಾಹಕರನ್ನು ಸೆಳೆಯುತ್ತವೆ. ಮೂರು ಬೀಜದ ಉದ್ದನೆಯ ಕಾಯಿ, ಎರಡು ಬೀಜದ ಗಿಡ್ಡ ಕಾಯಿಗಳು, ಕಡುಗುಲಾಬಿ ಬಣ್ಣದ ಬೀಜ ಹಾಗೂ ತಿಳಿ ಗುಲಾಬಿ ಬಣ್ಣದ ಬೀಜಗಳು ಗ್ರಾಹಕರ ಬಾಯಲ್ಲಿ ನೀರೂರಿಸಿದರೆ, ಅದರ ಜೊತೆ ಅಲ್ಲೇ ಬಿಸಿ ಬಿಸಿಯಾಗಿ ಹುರಿದ ಕಡಲೇ ಕಾಯಿಯ ಜೊತೆ ಬಿಸಿಯಾಗಿ ಹದವಾಗಿ ಬೇಯಿಸಿದ ಕಡಲೇಕಾಯಿಯೂ ಭಕ್ತಾದಿಗಳಿಗೆ ಲಭ್ಯವಿರುತ್ತದೆ.
ಕಡಲೆ ಕಾಯಿ ಪರಿಷೆಯಲ್ಲಿ ಕಡಲೇ ಕಾಯಿ ಮಾತ್ರವಲ್ಲದೇ, ಕಡಲೇಪುರಿ, ಬೆಂಡು ಬತ್ತಾಸು, ವಿವಿಧ ರೀತಿಯ ಜಾತ್ರೇ ಸಿಹಿ ತಿಂಡಿಗಳು ಹಿಂದೆಲ್ಲಾ ಲಭ್ಯವಿರುತ್ತಿದ್ದರೆ ಈಗ ಕಾಲಾಯ ತಸ್ಮೈ ನಮಃ ಎನ್ನುವಂತೆ ಭೇಲ್ ಪುರಿ, ಬಿಸಿ ಬಿಸಿ ಸ್ವೀಟ್ ಕಾರ್ನ್, ಕಾಟನ್ ಕ್ಯಾಂಡಿ, ಪಾಪ್ ಕಾರ್ನ್ ಕರಿದ ಬೋಂಡ ಹೀಗೆ ಬಗೆ ಬಗೆಯ ತಿಂಡಿ ತಿನಿಸುಗಳ ತಳ್ಳುಗಾಡಿಗಳು, ಜೊತೆಗೆ ಗೋಲಿ ಸೋಡ ಹೀಗೆ ಅಪ್ಪಟ ಗ್ರಾಮೀಡ ಸೊಗಡನ್ನು ಒಂದೇ ಕಡೆ ಕಾಣಬಹುದಾಗಿದೆ.
ಹೆಣ್ಣು ಮಕ್ಕಳಿಗೆ ಬಳೆ, ಓಲೆ ಸೇರಿದಂತೆ ಜಾತ್ರೆಯಲ್ಲಿ ಸಿಗುವ ತರಹೇವಾರಿ ವಸ್ತುಗಳನ್ನು ಲಭ್ಯವಿದ್ದರೆ ಇನ್ನು ಚಿಕ್ಕ ಮಕ್ಕಳಿಗೆಂದೇ, ಬಣ್ಣ ಬಣ್ಣದ ಪೀಪೀ, ಬೆಲೂನುಗಳು, ವಿವಿಧ ಆಟಿಕೆಗಳಲ್ಲದೇ ಮಕ್ಕಳ ಮನೋರಂಜನೆಗಾಗಿ ರಾಟೆ, ಉಯ್ಯಾಲೆಗಳು, ಮೇರಿಗೋರೌಂಡ್ ಆಟಗಳು ಅಲ್ಲಿರುತ್ತದೆ. ಇವೆಲ್ಲವುದಕ್ಕಿಂತಲೂ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ವಿವಿಧ ದೇವರುಗಳ ಮಣ್ಣಿನ, ಪಿಂಗಾಣಿ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ಸಿನಿಂದ ತಯಾರಿಸಿದ ಗೊಂಬೆಗಳಲ್ಲದೇ ದೂರದ ಮಧುರೈ ಗೊಂಬೆಗಳು, ಕಾಂಚೀಪುರದ ರಾಮ ಸೀತೆ, ದಶಾವತಾರದ ಗೊಂಬೆಗಳಲ್ಲದೇ ತಿರುಪತಿಯ ಪಟ್ಟದ ಗೊಂಬೆಗಳನ್ನು ಕೊಳ್ಳಲು ಹೆಂಗಳೆಯರ ಸಾಲೇ ಅಲ್ಲಿರುತ್ತದೆ.
ಪ್ರತೀ ವರ್ಷದ ಪರಿಶೆಯಲ್ಲಿಯೂ ಮೈಪೂರ ಬೆಳ್ಳಿಯ ಬಣ್ಣವನ್ನು ಹಚ್ಚಿಕೊಂಡು ಮಹಾತ್ಮಾ ಗಾಂಧಿಯವರಂತೆಯೇ ಕನ್ನಡಕ ಮತ್ತು ಕೋಲು ಹಿಡಿದು ಕೊಂಡು ಅಲುಗಾಡದೇ ನಿಂತು ಕೊಳ್ಳುತ್ತಿದ್ದ ವೃದ್ಧರನ್ನು ನೋಡಿದಾಗ ಛೇ ಹೊಟ್ಟೇ ಪಾಡಿಗೆ ಈ ಪರಿಯಾಗಿ ಕಷ್ಟ ಪಡಬೇಕಲ್ಲಾ ಎಂಬ ನೋವಿನ ವ್ಯಥೆಯ ನಡುವೆಯೂ ಅವರ ಪಕ್ಕದಲ್ಲಿ ನಿಂತುಕೊಂಡು ಒಂದು ಸೆಲ್ಫಿ ಇಲ್ಲವೇ ಪೋಟೋ ತೆಗೆಸಿಕೊಂಡು ಕೈಲಾದ ಮಟ್ಟಿಗೆ ಹಣವನ್ನು ಅಲ್ಲೇ ಇಟ್ಟಿದ್ದ ತಟ್ಟೆಯಲ್ಲಿ ಹಾಕಿ ಮನಸ್ಸಿಗೆ ತುಸು ನೆಮ್ಮದಿ ತಂದುಕೊಳ್ಳುತ್ತಿದ್ದರೆ, ಈ ಬಾರಿಯ ಪರಿಷೆಯಲ್ಲಿ ಅವರನ್ನು ಕಾಣದೇ, ಒಂದು ರೀತಿಯ ಅನಾಥ ಪ್ರಜ್ಞೆ ಕಾಡಿದ್ದಲ್ಲದೇ, ಆವರು ಇನ್ನೂ ಇದ್ದಾರಾ? ಇಲ್ಲವೇ ಹೋಗಿ ಬಿಟ್ರಾ! ಛೇ ಛೇ ಬಿಡ್ತು ಅನ್ನು ಎಂದು ನಮಗೆ ನಾವೇ ಹೇಳಿಕೊಳ್ಳುವಂತಾಗಿತು.
ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಈ ಕಡಲೆಕಾಯಿ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದಾದರೂ, ಬೆಂಗಳೂರಿಗರಿಗೆ ತಮ್ಮ ಸಂಸ್ಕೃತಿಯ ಭಾಗವಾಗಿರುವ ಈ ಕಡಲೇ ಕಾಯಿ ಪರಿಷೆಯಲ್ಲಿ ಬೆಲೆ ಏರಿಕೆ ನಗಣ್ಯವಾಗಿ ಹಿಂದೆಲ್ಲಾ ರೂಪಾಯಿ ಒಂದು ಸೇರು ಸಿಗುತ್ತಿದ್ದ ಕಡಲೇಕಾಯಿ ಇಂದು ನೂರು ರುಪಾಯಿಗೆ ಮೂರು ಇಲ್ಲವೇ ನಾಲ್ಕು ಸೇರುಗಳು ಸಿಗುತ್ತಿವೆ.
ಈ ಬಾರಿ ಪ್ಲಾಸ್ಟಿಕ್ ಮುಕ್ತ ಪರಿಷಯನ್ನಾಗಿ ಮಾಡುವ ಸಲುವಾಗಿ ಬಿಬಿಎಂಪಿ, ಸ್ಥಳೀಯ ಕೆಲವು ಶಾಲಾ ಕಾಲೇಜುಗಳು ಮತ್ತು ಅಧಮ್ಯ ಚೇತನದ ಸಹಯೋಗದೊಂದಿಗೆ ದಯವಿಟ್ಟು ಪರಿಷೆಗೆ ಬರುವಾಗ ಕೈ ಚೀಲ ಹಿಡಿದುಕೊಂಡು ಬನ್ನಿ ಎಂಬ ಆಭಿಯಾನವನ್ನು ನಡೆಸಿದ್ದಲ್ಲದೇ, ಕೇವಲ ೧೦-೧೫ ರೂಪಾಯಿಗಳಷ್ಟು ಕೈಗೆಟುಕುವ ಬೆಲೆಯಲ್ಲೇ ಮರು ಬಳಕೆ ಮಾಡಬಹುದಾದಂತಹ ಬಟ್ಟೆಯ ಕೈ ಚೀಲಗಳನ್ನು ಮಾರುತ್ತಿದ್ದರೂ, ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ ಎನ್ನುವಂತೆ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದಂತೆ ಮುಂದುವರೆದಿದ್ದು ನಿಜಕ್ಕೂ ಎಲ್ಲರ ಪರಿಶ್ರಮ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತೆ ಆಯಿತಲ್ಲಾ ಎನಿಸಿದ್ದಂತೂ ಸುಳ್ಳಲ್ಲ.
ಈ ಬಾರಿಯ ಪರಿಶೆಯ ಮತ್ತೊಂದು ಆಕರ್ಷಣೀಯವೆಂದರೆ, ಮಂಡ್ಯಾದ ರೈತರುಗಳ ರಾಸಾಯನಿಕ ಮುಕ್ತ ಬೆಲ್ಲದ ಮಳಿಗೆ ಎಂದರೂ ಅತಿಶಯವಲ್ಲ. ಪರಿಷೆಯ ಅಂಗವಾಗಿ ಅವರ ಮಳಿಗೆಗೆ ಬರುವ ಪ್ರತಿಯೊಬ್ಬ ಗ್ರಾಹಕರನ್ನೂ ಶಾಂತ ಚಿತ್ತದಿಂದ ಮಾತನಾಡಿಸಿ ತಮ್ಮ ಸಾವಯವ ಬೆಲ್ಲದ ಕುರಿತಾಗಿ ಮಾಹಿತಿ ನೀಡುವುದಲ್ಲದೇ< ಶುದ್ಧವಾದ ಬೆಲ್ಲವನ್ನು ಕಂಡು ಹಿಡಿಯುವುದು ಹೇಗೆ? ಎಂಬ ಕಿವಿಮಾತನ್ನೂ ತಿಳಿಸಿಕೊಡುತ್ತಿದ್ದದ್ದು ನಿಜಕ್ಕೂ ಶ್ಲಾಘನೀಯವೇ ಸರಿ.
ಆಧುನಿಕವಾಗಿ ನಾವುಗಳು ಎಷ್ಟೇ ಮುಂದುವರೆದಿದ್ದರೂ ನಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಾತ್ರೆಗಳನ್ನು ಅರ್ಥಪೂರ್ಣವಾಗಿ ನಮ್ಮ ಮುಂದಿನ ಪೀಳಿಗೆಯವರಿಗೂ ತಲುಪಿಸಲೇ ಬೇಕಾದ ಕರ್ತವ್ಯ ನಮ್ಮ ನಿಮ್ಮೆಲ್ಲರಮೇಲೆಯೇ ಇದೆ ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ
ಬಸವನಗುಡಿಯ ಕಡಲೇಕಾಯಿ ಪರಿಷೆಯನ್ನು ಈ ವೀಡೀಯೋ ಮೂಲಕ ಕಣ್ತುಂಬಿಸಿ ಕೊಳ್ಳೋಣ ಬನ್ನಿ