ದ್ವಾದಶಿಯಂದು ಅಗಸೆ ಸೊಪ್ಪಿನ ಬಳಕೆಯ ಮಹತ್ವ

ನಮ್ಮ ಸನಾತನ ಧರ್ಮದ ಪಂಚಾಗಂದಲ್ಲಿ ಪ್ರತೀ ತಿಂಗಳನ್ನು ಕೃಷ್ಣಪಕ್ಷ ಮತ್ತು ಶುಕ್ಲ ಪಕ್ಷ ಎಂದು ಎರಡು ಪಕ್ಷಗಳಾಗಿ ವಿಂಗಡಿಸಿದ್ದು, ಪ್ರತೀ ಪಕ್ಷದ 11ನೇಯ ದಿನವನ್ನು ಏಕಾದಶಿ ಎಂದು ಕರೆಯಲಾಗುತ್ತದೆ. ಈ ಏಕಾದಶಿಯಂದು ಬಹುತೇಕ ಆಸ್ತಿಕರು ಕಟ್ಟು ನಿಟ್ಟು ಉಪವಾಸವನ್ನು ಮಾಡುತ್ತಾ ಭಗವಂತನ ಧ್ಯಾನದಲ್ಲಿ ನಿರತರಾಗಿರುವುದು ಅನೂಚಾನಾಗಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಈ ಉಪವಾಸ ಪದ್ದತಿಯು ವೈಜ್ಞಾನಿಕವಾಗಿಯೂ ಅತ್ಯಂತ ಮಹತ್ವ ಎನಿಸಿದೆ. ಲಂಘನಂ ಪರಮೌಷಧಂ ಎಂದರೆ ಉಪವಾಸವಾಸ ಮಾಡುವುದೂ ಒಂದು ರೀತಿಯ ಔಷಧ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದ್ದು, ಈ ರೀತಿಯ ಉಪವಾಸದ ಮುಖಾಂತರ ಪಚನ ಕ್ರಿಯೆ ಶುದ್ಧಿಗೊಳ್ಳುವುದಲ್ಲದೇ, ಇಡೀ ದಿನ ದೇವರ ಧ್ಯಾನದಲ್ಲಿ ಆಸಕ್ತರಾಗಿರುವ ಕಾರಣ, ಅದು ಆತ್ಮವನ್ನು ಶುದ್ಧೀಕರಿಸಿಮೋಕ್ಷವನ್ನು ಸಾಧಿಸಲು ಸಹಾಯಕವಾಗುತ್ತದೆ. ಹೀಗೆ ನಿರಾಹಾರಿಗಳಾಗಿ ಭಗವಂತನ ಸ್ಮರಣೆ ಮಾಡುವುದರಿಂದ ಸಾತ್ವಿಕ ಗುಣ ಹೆಚ್ಚಾಗಿ ದೇಹ ಮತ್ತು ಮನಸ್ಸು ಸ್ವಸ್ಥವಾಗಿ ಇರುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ. ಇನ್ನು ದ್ಚಾದಶಿಯಂದು ಬೆಳಿಗ್ಗೆ ಸ್ನಾನ ಸಂಧ್ಯಾವಂಧನೆಗಳನ್ನು ಮುಗಿಸಿ ಭಗವಂತನ ಪೂಜೆ ಮಾಡಿ ದ್ವಾದಶಿ ಪಾರಾಯಣೆ ಮಾಡುವ ಪದ್ದತಿಯಿದ್ದು ಆ ದ್ವಾದಶಿ ಅಡುಗೆಯಲ್ಲಿ ಅಗಸೆ ಸೊಪ್ಪನ್ನು ಬಳಸುವ ಪದ್ದತಿ ರೂಢಿಯಲ್ಲಿದ್ದು ಆ ರೀತಿಯ ಆಚರಣೆಯ ಹಿಂದೆ ಒಂದು ಸುಂದರವಾದ ಪೌರಾಣಿಕ ಕಥೆಯಿದ್ದು ಅದನ್ನು ತಿಳಿಯೋಣ ಬನ್ನಿ.

Krisna_Pandavaಅದೊಂದು ಏಕಾದಶಿಯ ದಿನ ಪಾಂಡವರಲ್ಲಿ ಅಗ್ರಜನಾದ ಶ್ರೀ ಧರ್ಮರಾಯನು ಭಗವಾನ್ ಶ್ರೀಕೃಷ್ಣನನ್ನು ದ್ವಾದಶಿಯ ಪಾರಾಯಣಕ್ಕೆ ತಮ್ಮ ಮನೆಗೆ ಬರಬೇಕೆಂದು ಆಹ್ವಾನಿಸಿದಾಗ ಶ್ರೀಕೃಷ್ಣನು ಸಹಾ ಬಹಳ ಸಂತೋಷದಿಂದ ಆ ಆಮಂತ್ರಣವನ್ನು ಸ್ವೀಕರಿಸುತ್ತಾನೆ. ಶ್ರೀಕೃಷ್ಣನು ಪಾಂಡವರ ಮನೆಗೆ ಬರುವ ವಿಷಯವನ್ನು ತಿಳಿದ ಕೌರವರ ಅಗ್ರಜ ದುರ್ಯೋಧನನು ಸಹಾ ಅದೇ ದ್ವಾದಶಿಯಂದು ತಮ್ಮ ಮನೆಗೆ ಬರಬೇಕೆಂದು ಶ್ರೀಕೃಷ್ಣನನ್ನು ಆಹ್ವಾನಿಸಿದಾಗ, ಶ್ರೀ ಕೃಷ್ಣನು ಯಾರ ಮನೆಗೆ ಊಟಕ್ಕೆ ಹೋಗಬೇಕೆಂಬ ಸಂದಿಗ್ಧ ಪರಿಸ್ಥಿತಿಗೆ ಒಳಗಾಗಿ ಕೆಲ ಕ್ಷಣ ಸಾವರಿಸಿಕೊಂಡು ಯಾರ ಮನೆಯಲ್ಲಿ 108 ತರಕಾರಿಗಳೊಂದಿಗೆ ಊಟವನ್ನು ತಯಾರಿಸುತ್ತಾರೋ, ಅಂತಹವರ ಮನೆಗೆ ತಾನು ಊಟಕ್ಕೆ ಬರುತ್ತೇನೆ ಎಂದು ತಿಳಿಸುವ ಮೂಲಕ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ, ಸಾವಿರ ವರ್ಷ ಆಯಸ್ಸು ಎನ್ನುವಂತೆ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಶ್ರೀಕೃಷ್ಣನು ನಿಭಾಯಿಸುತ್ತಾನೆ.

ಕೇವಲ 108 ತರಕಾರಿಗಳು ತಾನೇ ಎಂಬ ದುರಹಂಕಾರದಿಂದ ದುರ್ಯೋಧನನು ತಕ್ಷಣವೇ ತನ್ನ ಎಲ್ಲಾ ಸೇವಕರನ್ನೂ ಕರೆಯಿಸಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಾರುಕಟ್ಟೆಗಳಿಂದಲೂ ತರಕಾರಿಗಳನ್ನು ತರಲು ಆಜ್ಞಾಪಿಸುತ್ತಾನೆ. ರಾಜನ ಆಜ್ಞೆಯಂತ ಆತನ ಭಟರು ಇಡೀ ರಾಜ್ಯವನ್ನು ಸುತ್ತಾಡಿ ತರಕಾರಿಗಳನ್ನು ಖರೀಧಿಸಿ ಅರಮನೆಯ ಪಾಕಶಾಲೆಗೆ ತಂದು ಲೆಕ್ಕ ಹಾಕಿದಾಗ ಅಂತಿಮವಾಗಿ ಅಲ್ಲಿ ಕೇವಲ 105 ಬಗೆಯ ತರಕಾರಿಗಳು ಮಾತ್ರಾ ಲಭ್ಯವಿದ್ದು ಶ್ರೀಕೃಷ್ಣನು ಹೇಳಿದ 108 ತರಕಾರಿಗಳಲ್ಲಿ 3 ತರಕಾರಿಗಳು ಬಾಕಿ ಉಳಿದಾಗ ಮತ್ತೆ ಆ 3 ತರಕಾರಿಗಳನ್ನು ತರಲು ತಿಣುಕಾಡುತ್ತಿರುತ್ತಾರೆ. ತನ್ನ ಸೇವಕರಿಗೆ ಸಿಗದೇ ಹೋದ ತರಕಾರಿ ಪಾಂಡವರು ಹೇಗೆ ತಂದಿರುತ್ತಾರೆ? ಎಂಬ ಕುತೂಹಲದಿಂದ ಪಾಂಡವರ ಮನೆಗೆ ತನ್ನ ಸೇವಕರನ್ನು ಗುಪ್ತವಾಗಿ ಕಳುಹಿಸಿ ಅಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ಬರಲು ಸೂಚಿಸುತ್ತಾನೆ. ಪಾಂಡವರ ಮನೆಯಿಂದ ಹಿಂದಿರುಗಿದ ಆ ಸೇವಕನು, ರಾಜಾ, ಪಾಂಡವರ ಅರಮನೆಯಲ್ಲಿ ನಾವು ತಂದ ಹಾಗೆ ಯಾವುದೇ ತರಕಾರಿಗಳನ್ನು ತರದೇ ಹೋದರೂ ಧರ್ಮರಾಜನು ಯಾವುದೇ ರೀತಿಯ ಆತಂತಕವಿಲ್ಲದೇ ನಿರಾಳರಾಗಿದ್ದಾರೆ ಎಂದು ತಿಳಿಸಿದಾಗ, ಆಹಾ!!, ತನ್ನ ಬಳಿ 108 ತರಕಾರಿಯಲ್ಲಿ 105 ಬಗೆಯ ತರಕಾರಿಗಳು ಇದ್ದು ಕೇವಲ 3 ತರಕಾರಿಗಳಲ್ಲಿ ಮಾತ್ರಾ ಇಲ್ಲದೇ ಇರುವುದನ್ನು ಮನ್ನಿಸಿ ಶ್ರೀಕೃಷ್ಣನು ತನ್ನ ಮನೆಗೆ ಭೋಜನಕ್ಕೆ ಬರುತ್ತಾನೆ ಎಂದು ನಂಬಿ ಭೂರೀ ಭೋಜನವನ್ನು ತಯಾರಿ ಮಾಡಲು ತನ್ನ ಬಾಣಗಿಸಿಗರಿಗೆ ಸೂಚಿಸುತ್ತಾನೆ.

dhuryadonaದ್ವಾದಶಿಯಂದು, ಶ್ರೀ ಕೃಷ್ಣನು ನೇರವಾಗಿ ದುರ್ಯೋಧನನ ನಿವಾಸಕ್ಕೆ ಆಗಮಿಸಿ ಅಲ್ಲಿ 3 ತರಕಾರಿಗಳು ಕಡಿಮೆ ಇರುವುದನ್ನು ತಿಳಿದು, ತಾನು ಧರ್ಮರಾಜನ ಮನೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ನೋಡಿ ಮತ್ತೆ ಬರುತ್ತೇನೆ ಎಂದು ಹೇಳಿದಾಗಲೂ ಧುರ್ಯೋಧನನು ಸಂತೋಷದಿಂದಲೇ ಇರುವುದಲ್ಲದೇ, ಶ್ರೀ ಕೃಷ್ಣನು ತನ್ನ ಮನೆಗೇ ಊಟಕ್ಕೆ ಬರುತ್ತಾನೆ ಎಂದೇ ನಂಬಿರುತ್ತಾನೆ. ಧರ್ಮರಾಯನ ಮನೆಗೆ ಹೋಗಿ ಎಷ್ಟು ಹೊತ್ತಾದರೂ ಶ್ರೀಕೃಷ್ಣನು ಬಾರದೇ ಹೋದಾಗ, ಹಸಿವಿವಿಂದಲೇ ಪಾಂಡವರ ಮನೆಗೆ ಧುರ್ಯೋಧನನು ಬಂದಾಗ ಶ್ರೀ ಕೃಷ್ಣನು ಆಗ ತಾನೇ ಅತ್ಯಂತ ಚಿಕರವಾದ ಭೋಜನವನ್ನು ಸ್ವೀಕರಿಸಿ ಸಂತೋಷದಿಂದ ಭುಕ್ತಾಯಾಸವನ್ನು ಪರಿಹರಿಸಿಕೊಳ್ಳಲು ಪಾಂಡವರೊಡನೆ ಲೋಕಾಭಿರಾಮವಾಗಿ ಹರಟುತ್ತಿರುವುದನ್ನು ಗಮನಿಸಿ ಕೆಂಡಾಮಂಡಲವಾಗಿದ್ದಲ್ಲದೇ, ತನಗೆ ಸಿಗದ 108 ತರಕಾರಿಗಳು ಪಾಂಡವರಿಗೆ ಹೇಗೆ ಲಭಿಸಿತು ಎಂದು ಅಸಮಾಧನಗೊಂಡು ಅದನ್ನು ಪರಿಹರಿಸಿಕೊಳ್ಳುವ ಸಲುವಾಗಿ ಕುತೂಹಲದಿಂದ ಶ್ರೀಕೃಷ್ಣನನ್ನೇ ಊಟ ಹೇಗಿತ್ತು? ಪಾಂಡವರು ಬಡಿಸಿದ 108 ತರಕಾರಿಗಳು ಯಾವುದು ಎಂದು ವಿಚಾರಿಸುತ್ತಾನೆ..

agaseಅದಕ್ಕೆ ಅಷ್ಟೇ ಮುಗ್ಧವಾಗಿ ಮುಗುಳ್ನಗುತ್ತಾ ಉತ್ತರಿಸಿದ ಶ್ರೀಕೃಷ್ಣನು,  ಇಂದು ಪಾಂಡವರ ಮನೆಯಲ್ಲಿ ನಾನು ಶುಂಠಿ ಚಟ್ನಿ ಮತ್ತು ಅಗಸೇ ಸೊಪ್ಪಿನ ಪಲ್ಯವನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದೆ ಎಂದು ಹೇಳಿ ತನ್ನ ಮಾತನ್ನು ಮುಂದುವರೆಸುತ್ತಾ, ಶುಂಠಿಯಲ್ಲಿ 38 ಪೋಷಕಾಂಶಗಳು ಮತ್ತು ಅಗಸೆ ಸೊಪ್ಪಿನಲ್ಲಿ 70 ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ ಹಾಗಾಗಿ ಅವರೆಡೂ ಸೇರಿದಲ್ಲಿ ಒಟ್ಟು 108 ತರಕಾರಿಗಳು ತಿಂದಷ್ಟೇ ಪೋಷಕಾಂಶಗಳು ದೊರೆಯುತ್ತವೆ ಎಂದು ತಿಳಿಸಿದಾಗ, ಧುರ್ಯೋಧನಿಗೆ ಮೂರ್ಛೆ ಹೋಗುವುದೊಂದೇ ಬಾಕಿ.

ಈ ಕಾರಣದಿಂದಲೇ ಏಕಾದಶಿ ಉಪವಾಸದ ನಂತರ ಪ್ರತಿ ದ್ವಾದಶಿಯ ಊಟದಲ್ಲಿ ಶುಂಠಿ ಚಟ್ನಿ ಇಲ್ಲವೇ ಶುಂಠಿ ಗೊಜ್ಜು ಮತ್ತು ಅಗಸೆ ಸೊಪ್ಪಿನ ಪಲ್ಯ ಇಲ್ಲವೇ ಹುಳಿಯನ್ನು ಮಾಡಲಾಗುತ್ತದೆ. ನಮ್ಮ ಪೂರ್ವಜರಿಗೆ ಆಹಾರ ಪದ್ದತಿಯ ಬಗ್ಗೆ ಉತ್ತಮವಾದ ಪರಿಜ್ಞಾನವಿದ್ದು ಯಾವ ಸಮಯದಲ್ಲಿ ಯಾವ ರೀತಿಯ ಮತ್ತು ಎಷ್ಟು ಪ್ರಮಾಣದ ಆಹಾರವನ್ನು ಸೇವಿಸಿದಲ್ಲಿ ದೀರ್ಘಕಾಲಿಕ ಆರೋಗ್ಯಕರವಾದ ಜೀವನವನ್ನು ನಡೆಸಬಹುದೆಂಬುದನ್ನು ಹಬ್ಬ ಹರಿದಿನಗಳು ಮತ್ತು ಸಂಪ್ರದಾಯದ ಮೂಲಕ ಜಾರಿಗೆ ತಂದಿದ್ದರು. ಹೀಗಾಗಿಯೇ ನಮ್ಮ ಪೂರ್ವಜರು ನೂರಾರು ವರ್ಷಗಳ ಕಾಲ ಯಾವುದೇ ಖಾಯಿಲೆ/ಕಸಾಲೆಗಳಲ್ಲಿದೆ ಜೀವನ ನಡೆಸುತ್ತಿದ್ದರು

ದುರಾದೃಷ್ಟವಶಾತ್, ಇಂದು ಪಾಶ್ಚಿಮಾತ್ಯ ಅಂಧಾನುಕರಣೆಯಿಂದ ನಮ್ಮ ಸಾಂಪ್ರದಯಿಕ/ಆರೋಗ್ಯಕರವಾದ ಆಹಾರ ಪದ್ದತಿಗೆ ತಿಲಾಂಜಲಿ ಇತ್ತು Fast/Junk foodಗಳನ್ನು ಸೇವಿಸುವುದನ್ನು ರೂಢಿ ಮಾಡಿಕೊಳ್ಳುತ್ತಿರುವ ಪರಿಣಾಮ ಸಣ್ಣ ವಯಸ್ಸಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ನಂತಹ ವಿವಿಧ ಮಹಾಮಾರಿಗಳಿಗೆ ತುತ್ತಾಗಿ ವಯಸ್ಸು 30-40 ಆಗುವಷ್ಟರಲ್ಲಿಯೇ ಅನೇಕರು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ.

ಅಗಸೆ ಸೊಪ್ಪಿನ ಪ್ರತಿಯೊಂದು ಭಾಗವೂ ಅತ್ಯಂತ ಪೌಷ್ಟಿಕಾಂಶವನ್ನು ಹೊಂದಿದ್ದು ಮಾನವನ ಎಲ್ಲಾ ಆರೋಗ್ಯ ಅಗತ್ಯಗಳನ್ನು ಪೂರೈಸುತ್ತದೆ, ಇದರ ಅಸಂಖ್ಯಾತ ಆರೋಗ್ಯ ಪ್ರಯೋಜನಗಳು ಮತ್ತು ಔಷಧೀಯ ಮೌಲ್ಯದಿಂದಾಗಿ ಇದನ್ನು ಹಸಿರು ಎಲೆಗಳ ರಾಜ ಎಂದೂ ಸಹಾ ಕರೆಯಲಾಗುತ್ತದೆ.

agase_flowerದೇಹದಿಂದ ವಿಷವನ್ನು ತೆಗೆದುಹಾಕಲು ಇದು ಅತ್ಯುತ್ತಮ ಆಹಾರವಾಗಿರುವ ಕಾರಣ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆದರೂ ತಿಂಗಳಿಗೆ ಎರಡು ಬಾರಿ ಸೇವಿಸುವುದು ಉತ್ತಮವಾಗಿದೆ. ಇದರ ಎಲೆ, ಹೂವು, ಎಣ್ಣೆ, ಮತ್ತು ಬೀಜಗಳನ್ನೂ ಸಹಾ ಸೇವಿಸಬಹುದಾಗಿದೆ. ಅಗಸೆ ಬೀಜಗಳು ರಕ್ತದೊತ್ತಡವನ್ನು ನಿಯಂತ್ರಿಸಿ, ಉದ್ವೇಗವನ್ನು ಕಡಿಮೆ ಮಾಡುತ್ತವೆ. ಸತತವಾಗಿ ಆರು ತಿಂಗಳ ಕಾಲ ಪ್ರತಿದಿನ 30 ಗ್ರಾಂ ಅಗಸೆ ಬೀಜಗಳನ್ನು ಸೇವಿಸಿದಲ್ಲಿ ಅವರ ದೇಹದ ಸಿಸ್ಟೊಲಿಕ್ ರಕ್ತದೊತ್ತಡದಲ್ಲಿ 10 mm Hg ಯಷ್ಟು ಇಳಿಕೆಯನ್ನು ಗಮನಿಸಬಹುದಾಗಿದೆ. ನೇರವಾಗಿ ಅಗಸೇ ಬೀಜವನ್ನು ತಿನ್ನಲು ಆಗದೇ ಹೊದವರು ಅಗಸೇ ಬೀಜವನ್ನು ಹುರಿದು ತಿನ್ನಬಹುದಾಗಿದೆ. ಇನ್ನೂ ಕೆಲವರು ಚಟ್ನಿಪುಡಿಯಂತೆ ಅಗಸೇ ಬೀಜದ ಪುಡಿಯನ್ನು ಸಿದ್ಧ ಪಡಿಸಿಕೊಂಡು ಊಟದ ಜೊತೆಯಲ್ಲಿ ಸೇವಿಸಬಹುದಾಗಿದೆ.

FlaxSeedಮಧುಮೇಹದವರಿಗೂ ಅಗಸೆ ಬೀಜಗಳು ಅತ್ಯುತ್ತಮ ಔಷಧಿಯಾಗಿದ್ದು, ರಕ್ತದಲ್ಲಿನ ಅಧಿಕ ಪ್ರಮಾಣದ ಸಕ್ಕರೆ ಉತ್ಪಾದನೆಯನ್ನು ನಿಯಂತ್ರಣದಲ್ಲಿರಿಸಿ, ಮಧುಮೇಹವನ್ನು ಹತೋಟಿಗೆ ತರುವಲ್ಲಿ ಅಗಸೆ ಬೀಜಗಳು ಉತ್ತಮವಾದ ಪಾತ್ರವನ್ನು ವಹಿಸುತ್ತದೆ. ಅಗಸೆ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಕಾರಣ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮೂಲಕ ಅಪಧಮನಿಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಪಾರ್ಶ್ವವಾಯು, ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ವಿವಿಧ ಹೃದಯ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ.

ಇನ್ನು ತೂಕ ಇಳಿಸಿಕೊಳ್ಳುವವರಿಗೂ ಸಹಾ ಅಗಸೆ ಬೀಜಗಳು ರಾಮಬಾಣ ವಾಗಿದ್ದು ಅತ್ಯಂತ ಸಣ್ಣದಾದ ಈ ಬೀಜಗಳಲ್ಲಿ ಅತ್ಯಂತ ಹೆಚ್ಚಿನ ಫೈಬರ್‌ ಇರುವ ಕಾರಣ, ಕರುಳಿನ ಆರೋಗ್ಯ ಮತ್ತುಜೀರ್ಣಶಕ್ತಿಯನ್ನು ಉತ್ತಮವಾಗಿಸಲು ಸಹಾಯ ಮಾಡುವುದಲ್ಲದೇ, ಇದು ಹಸಿವು ಮತ್ತು ಹೆಚ್ಚು ತಿನ್ನುವಿಕೆಯನ್ನು ನಿಗ್ರಹಿಸುವ ಕಾರಣ, ಅಗಸೆಬೀಜಗಳು ಅಧಿಕ ತೂಕ ಮತ್ತು ಸ್ಥೂಲಕಾಯತೆ ಹೊಂದಿರುವ ಜನರಲ್ಲಿ ಕೊಬ್ಬಿನ ಅಂಶವನ್ನು ಕರಗಿಸಲು ಸಹಾಯ ಮಾಡುತ್ತದೆ.

ಏಕಾದಶಿಯ ಉಪವಾಸದ ನಂತರ ದೇಹದ ಮೇಲಾದ ಆಮ್ಲೀಯತೆಯನ್ನು ನಿಯಂತ್ರಿಸಲು, ಅಗಸೆ ಬೀಜಗಳು, ಎಲೆಗಳು ಹೆಚ್ಚು ಪ್ರಯೋಜನಕಾರಿ ಎಂಬುದು ನಮ್ಮ ಪೂರ್ವಜರಿಗೆ ಮತ್ತು ನಮ್ಮ ಋಷಿಗಳಿಗೆ ತಿಳಿದಿತ್ತು. ನಿಜ ಹೇಳಬೇಕೆಂದರೆ, ನಮ್ಮ ಋಷಿ ಮುನಿಗಳು ಕೇವಲ ಧಾರ್ಮಿಕ ಗುರುಗಳಲ್ಲದೇ, ವಾಸ್ತವಿಕವಾಗಿ ಅವರು ವಿಜ್ಞಾನಿಗಳಾಗಿದ್ದರು ಎಂದರೂ ತಪ್ಪಾಗದು ಹಾಗಾಗಿಯೇ ನಮ್ಮ ಸನಾತನ ಧರ್ಮದ ಋಷಿ ಮುನಿಗಳು ಮತ್ತು ನಮ್ಮ ಪೂರ್ವಜರು ಆಹಾರದ ಪದ್ದತಿಯ ಬಗ್ಗೆ ಹೆಚ್ಚು ತಿಳುವಳಿಕೆಯುಳ್ಳವರಾಗಿದ್ದು ಸಂಪ್ರದಾಯ ಮತ್ತು ಸಂಸ್ಕಾರ ರೂಪದಲ್ಲಿ ಕೆಲವೊಂದು ಆಚರಣಾ ಪದ್ದತಿಗಳನ್ನು ರೂಢಿಗೆ ತರುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.

ನಾವು ಸೇವಿಸುವ ಆಹಾರ ರುಚಿ ರುಚಿಯಾಗಿರಬೇಕು, ಬಣ್ಣ ಬಣ್ಣದ್ದಾಗಿರಬೇಕು ಅದು ಹೊಟ್ಟೆ ತುಂಬುವಂತಿರ ಬೇಕು ಎಂದು ಬಯಸಿದಲ್ಲಿ ನಾವು ನಮ್ಮ ಕೈಯ್ಯಾರೆ ಅನಾರೋಗ್ಯವನ್ನು ತಂದುಕೊಳ್ಳುತ್ತಿದ್ದೇವೆ ಎಂದರ್ಥ. ನಾವು ಸೇವಿಸುವ ಆಹಾರವು ಪಂಚಪ್ರಾಣಗಳಿಗೆ ಹಿತವಾಗಿ, ಶಕ್ತಿದಾಯಕವಾಗಿ ಮತ್ತು ಮಿತವಾಗಿರ ಬೇಕೇ ಹೊರತು ರುಚಿಗೆ ಪ್ರಾಮುಖ್ಯತೆ ಕೊಡುವುದಲ್ಲ. You should earn the food ಎನ್ನುವ ಮಾತಿದೆ. ಅಂದರೆ ಅದು ಕೇವಲ ದುಡಿದು ತಿನ್ನು ಎನ್ನುವ ಮಾತಲ್ಲದೇ, ದೇಹವನ್ನು ದಂಡಿಸಿ‌ ತಿನ್ನೂ ಎನ್ನುವ ಅರ್ಥವೂ ಬರುತ್ತದೆ.

ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್ ।
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ॥
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ ।
ಜೀರ್ಣಿಸದ ಋಣಶೇಷ – ಮಂಕುತಿಮ್ಮ ॥ ೭೪೮ ॥

ಊಟ ಮಾಡಲು ಕುಳಿತಾಗ ನಿನಗೆ ನೀನು ಒಂದು ಪ್ರಶ್ನೆ ಹಾಕಿಕೊ, ಅನ್ನ ಬೇಯಿಸಿದ ನೀರು ನಿನ್ನ ದುಡಿತದ ಬೆವರಿನದೋ ಅಥವ ಅನ್ಯರ ಕಣ್ಣೀರಿನದೋ? ತಿನ್ನು ನೀನು ಜಗಕೆ ನೀಡಿದಷ್ಟು. ಹೆಚ್ಚಾದದ್ದು ಜೀರ್ಣಿಸದ ಋಣಶೇಷ. – ಮಂಕುತಿಮ್ಮ

ನಮ್ಮ ಹಿರಿಯರು ಸೇವಿಸುತ್ತಿದ್ದ ಆಹಾರ ಪದ್ದತಿ ಹೇಗಿತ್ತೆಂದರೆ, ಅವರು ಆಹಾರಕ್ಕೆ ಸರಿಸಮನಾಗಿ ಅಮೃತ ಸಮಾನವಾದ ನೀರನ್ನು ಬಳಸುತ್ತಿದ್ದರು ಅದಕ್ಕೆ ಹಾಸಿಗೆ ರೂಪವನ್ನು ಕೊಡುತ್ತಿದ್ದರು. ಅಮೃತೋಪ ಸ್ತರಣಮಸಿ ಎನ್ನುವ ಹಾಗೆ ಊಟ ಮಾಡುವ ಮೊದಲು ಸಾಕಷ್ಟು ನೀರನ್ನು ಕುಡಿದ ನಂತರ ಆಹಾರ ಸೇವಿಸಬೇಕೇ ಹೊರತು, ಊಟದ ಮಧ್ಯದಲ್ಲಿ ನೀರನ್ನು ಕುಡಿಯಬಾರದು. ಪುನಃ ಊಟವಾದ ನಂತರ ಸಾಕಷ್ಟು ನೀರನ್ನು ಕುಡಿದು ಉಪಸ್ತರಣ ಅಂದರೆ ಹೊದಿಕೆಯ ರೂಪವನ್ನು ಕೊಡುತ್ತಿದ್ದರು. ಈ ರೀತಿ ನಮ್ಮ ಸಾಂಪ್ರದಾಯಿಕ ಆಹಾರ ಪದ್ದತಿಯ ಉಪಯೋಗವನ್ನು ಅರಿತುಕೊಂಡು ನಮ್ಮ ಆಹಾರ ಪದ್ದತಿಗಳನ್ನು ಅದರಂತೆ ಬದಲಾವಣೆ ಮಾಡಿಕೊಳ್ಳುವ ಮೂಲಕ ಸದೃಢತೆಯನ್ನು ಪಡೆದುಕೊಳ್ಳೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನದಲ್ಲಿ ತಿಳಿಸಿರುವ ಪೌರಾಣಿಕ ಕಥೆಯು ಅನಾಮಿಕ ಲೇಖಕರ ಆಂಗ್ಲ ಸಂದೇಶವೊಂದರ ಭಾವಾನುವಾದವಾಗಿದೆ.

One thought on “ದ್ವಾದಶಿಯಂದು ಅಗಸೆ ಸೊಪ್ಪಿನ ಬಳಕೆಯ ಮಹತ್ವ

  1. ಅಗಸೆ ಸೊಪ್ಪು sesbenia grandiflora

    ಅಗಸೆ ಬೀಜ Linum usitatissimum ಹೀಗಾಗಿ ಎರಡನ್ನು ಬೇರೆ ಬೇರೆಯಾಗಿ ಬರೆಯಬಹುದಿತ್ತು

    Like

Leave a reply to Gururaj Cancel reply