ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಹುಟ್ಟಿದ ರೋಚಕತೆ

ಕರ್ನಾಟಕಕ್ಕೂ ಮತ್ತು ಪ್ರಭು ಶ್ರೀರಾಮನಿಗೂ ಅವಿನಾಭಾವ ಸಂಬಂಧ. ರಾಮ ಸೀತೆ ಮತ್ತು ಲಕ್ಶ್ಮಣರು ತಮ್ಮ ವನವಾಸದಲ್ಲಿ ಕೆಲಕಾಲ ಕರ್ನಾಟಕದಲ್ಲಿ ಕಳೆದಿರುವುದಕ್ಕೆ ಅನೇಕ ಕುರುಹುಗಳನ್ನು ಕಳೆದ ಲೇಖನದಲ್ಲಿ ತಿಳಿದುಕೊಂಡಿದ್ದೆವು. ಅಯೋಧ್ಯೆಯಲ್ಲಿ 500 ವರ್ಷಗಳ ದಾಸ್ಯದ ಸಂಕೋಲೆಯನ್ನು ಕಳಚಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿತ್ತಿದ್ದು,2024 ಜನವರಿ 22 ರಂದು ಗರ್ಭಗುಡಿಯಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯುವಂತಹ ಸಂದರ್ಭದಲ್ಲಿ, ರಾಮನ ಮಂದಿರಲ್ಲಿ ಅನೇಕ ಭಾಷೆಗಳ ಭಕ್ತಿಗೀತೆಗಳು ಪ್ರಸಾರವಾಗುತ್ತಲಿದ್ದು ಅದರಲ್ಲಿ ಕನ್ನಡ ಭಾಷೆಯಿಂದ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ಎಂಬ ಭಕ್ತಿ ಗೀತೆಯೂ ಪ್ರಸಾರವಾಗಿದೆ. ರವಿ ಕಾಣದ್ದನ್ನು ಕವಿ ಕಂಡ ಎನ್ನುವಂತೆ, ಈ ಗೀತೆಯನ್ನು ರಚಿಸಿರುವ ಡಾ. ಗಜಾನನ ಶರ್ಮಾ ಅವರ ಮನಸ್ಸಿಗೆ ಈ ಸಾಲು ಹೊಳೆದ ಹಿಂದಿನ ಕಥೆಯೇ ಅತ್ಯಂತ ರೋಮಾಂಚನವಾಗಿದೆ.

gajanasharma

ಗಜಾನನ ಶರ್ಮ ಅವರು ಮೂಲತಃ ಲಿಂಗನಮಕ್ಕಿ ಅಣೆಕಟ್ಟಿನ ಸಮೀಪದ ಹುಕ್ಕಲಿನವರಾಗಿದ್ದು ಬಹಳ ಸಂಪ್ರದಾಯಸ್ಥ ಕುಟುಂಬದವರಾಗಿದ್ದಾರೆ. ಮನೆಯೇ ಮೊದಲ ಪಾಠ ಶಾಲೆ ತಾಯಿ ತಂದೆಯರೇ ಮೊದಲ ಗುರುಗಳು ಎನ್ನುವಂತೆ ಮನೆಯಲ್ಲಿಯೇ ಸಂಸ್ಕೃತದ ಬಾಲ ಪಾಠ, ಶ್ಲೋಕಗಳ ಜೊತೆಗೆ ಸಂಸ್ಕಾರ ಸಂಸ್ಕೃತಿಗಳನ್ನು ಕಲಿತ ಬಾಲಕ ಗಜಾನನ ಶರ್ಮ ಆಟ ಪಾಠಗಳಲ್ಲಿಯೂ ಚುರುಕಾಗಿದ್ದು, ತಮ್ಮೂರಿನಲ್ಲಿ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಮುಗಿಸಿ ಉತ್ತಮ ಅಂಕಗಳೊಡನೆ ತೇರ್ಗಡೆ ಹೊಂದಿ ಮೈಸೂರಿನಲ್ಲಿ ತಮ್ಮ ಎಲೆಕ್ಟ್ರಿಕಲ್ ಇಂಜೀನಿಯರಿಂಗ್ ಮುಗಿಸಿ ನಂತರ ಮೈಸೂರಿನ ಎನ್‌ಐಇ ಕಾಲೇಜಿನಿಂದ ಎಂ ಟೆಕ್ ಪದವಿಯನ್ನು ಸಹಾ ಮುಗಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಕಿರಿಯ ಅಧಿಕಾರಿಗಳಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

chenna_byradevi

ವೃತ್ತಿ ವಿದ್ಯುತ್ ಅಧಿಕಾರಿಯಾಗಿದ್ದರೂ ಪ್ರವೃತ್ತಿಯಲ್ಲಿ ಅವರ ವಿದ್ವತ್ತನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಅನೇಕ ಲೇಖನಗಳು, ಕಥೆಗಳು ಮತ್ತು ಕವಿತೆಗಳನ್ನು ರಚಿಸಿ ಅವುಗಳಲ್ಲಿ ಬಹುತೇಕವು ರಾಜ್ಯದ ವಿವಿಧ ವೃತ್ತಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಗಜಾನನ ಶರ್ಮರವರು, ನಟ, ನಾಟಕಕಾರ, ನಿರ್ದೇಶಕ, ಸಾಹಿತಿ ಹಾಗೂ ಇತಿಹಾಸಕಾರರಾಗಿಯೂ ಪ್ರಸಿದ್ದರಾಗಿದ್ದಾರೆ. ಶರಾವತಿ ಪ್ರಾಂತ್ಯದ ಮುಳುಗಡೆ ವಿಷಯದ ಕುರಿತಾದ ಪುನರ್ವಸು ಪುಸ್ತಕ, ಕಾಳು ಮೆಣಸಿನ ರಾಣಿ ಚನ್ನಾಬೈರಾದೇವಿಯ ಕುರಿತಾದ ಐತಿಹಾಸಿಕ ಪುಸ್ತಕ ಅತ್ಯಂತ ಜನಪ್ರಿಯವಾಗಿದ್ದರೆ, ಬ್ರಿಟೀಷರು ನಡೆಸಿದ ಟ್ರಿಗ್ನೆಮೆಟ್ರಿಕ್ ಆಧಾರದ ವೈಜ್ಞಾನಿಕ ಸರ್ವೇ ಕುರಿತಾದ ಅವರ ಇತ್ತೀಚಿನ ಪುಸಕ್ತ ಪ್ರಮೇಯವೂ ಸಹಾ ಅತ್ಯಂತ ಜನಪ್ರಿಯ ಪುಸ್ತಕಗಳಲ್ಲಿ ಒಂದಾಗಿದೆ. ಟೆಕ್ನಿಕಲ್ ವೃತ್ತಿಯಲ್ಲಿದ್ದರೂ ಅವರಲ್ಲಿದ್ದ ಸಾಹಿತಿಯು ಜಾಗೃತಗೊಂಡ ಪರಿಣಾಮ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಎಂಎ ಮತ್ತು ಹಂಪಿಯ ಕನ್ನಡ ವಿವಿಯಿಂದ ಪಿಎಚ್‌ಡಿ ಪದವಿಯನ್ನು ಸಹಾ ಪಡೆಯುವ ಮೂಲಕ ಅಧಿಕೃತವಾಗಿ ಡಾ. ಗಜಾನನ ಶರ್ಮಾ ಸಹಾ ಆಗಿರುವ ಹೆಗ್ಗಳಿಕೆ ಅವರದ್ದು. ಸುಮಾರು 30+ ವರ್ಷಗಳ ಸುಧೀರ್ಘಕಾಲ ಕೆಪಿಟಿಸಿಎಲ್ ನಲ್ಲಿ ಸೇವೆಯನ್ನು ಸಲ್ಲಿಸಿ ಅಂತಿಮವಾಗಿ ಪೂರ್ಣ ಹಿರಿಯ ಅಧಿಕಾರಿಯಾಗಿ ನಿವೃತ್ತಿಯಾಗಿರುವ ಶ್ರೀ ಡಾ. ಗಜಾನನ ಶರ್ಮಾ ಬಿಡುವಿನ ವೇಳೆಯಲ್ಲಿ ವಿವಿಧ ಪ್ರಾಕಾರದ ಸಾಕಷ್ಟು ಪುಸ್ತಕಗಳನ್ನು ಸಹಾ ಬರೆದಿದ್ದು ಅವುಗಳೆಲ್ಲವೂ ಪ್ರಕಟವಾಗಿರುವುದಲ್ಲದೇ ಅತ್ಯಂತ ಬೇಡಿಕೆಯ ಪುಸ್ತಕಗಳಾಗಿ ಇರುವುದು ಗಮನಾರ್ಹವಾಗಿದೆ.

ಚಿಕ್ಕಂದಿನಿಂದಲೂ ಮನೆಯಲ್ಲಿ ಕಲಿತ ಸಂಸ್ಕಾರ ಮತ್ತು ಸಂಸ್ಕೃತಿಗಳ ಅನುಗುಣವಾಗಿ ಅವರು ಕರ್ನಾಟಕದ ಶಿವಮೊಗ್ಗದ ಹೊಸನಗರ ತಾಲ್ಲೂಕಿನಲ್ಲಿರುವ ರಾಮಚಂದ್ರಾಪುರ ಮಠದ ಅನುಯಾಯಿಗಳಾಗಿರುತ್ತಾರೆ. ಆದಿ ಶಂಕರಾಚಾರ್ಯರು ಮೂಲತಃ ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗೋಕರ್ಣದ ಬಳಿ ಸ್ಥಾಪಿಸಿದ ಈ ಮಠವನ್ನು ಆರಂಭದಲ್ಲಿ ರಘುತ್ತಮ ಮಠ ಎಂದು ಕರೆಯಲಾಗುತ್ತಿದ್ದು, ಆ ಮಠಕ್ಕೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕರ್ನಾಟಕದ ಶಿವಮೊಗ್ಗ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿರುವ ಹವ್ಯಕ ಬ್ರಾಹ್ಮಣರು ಅನುಸರಿಸುತ್ತಾರೆ. ಪ್ರಸ್ತುತ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ. ಶ್ರೀ ರಾಮಚಂದ್ರಾಪುರ ಮಠದ 36ನೇ ಮಠಾಧೀಶರಾಗಿ ತಮ್ಮ ಸೇವೆ ಮತ್ತು ಕೈಂಕರ್ಯ ಅದರಲ್ಲೂ ವಿಶೇಷವಾಗಿ ಆವರ ಕಲ್ಪನೆಯ ಗೋಸ್ವರ್ಗದಲ್ಲಿ ಸುಮಾರು 15 ವಿವಿಧ ಸ್ಥಳೀಯ ದೇಸಿ ತಳಿಗಳನ್ನು ನೈಸರ್ಗಿಕ ಪರಿಸರದಲ್ಲಿ ರಕ್ಷಿಸಲು ಮತ್ತು ಅಭಿವೃದ್ಧಿಗೊಳಿಸಲು ಕೈಗೊಂಡಿರುವ ಕಾರ್ಯ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅದೇ ರೀತಿ ಗುರುಕುಲ ಪದ್ದತಿಯನ್ನು ಮತ್ತೆ ರೂಡಿಗೆ ತರುವ ನಿಟ್ಟಿನಲ್ಲಿ ಆರಂಭಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಂ (ವಿವಿವಿ), ಭವಿಷ್ಯದ ಪೀಳಿಗೆಗೆ ಭರತದ ವೈಭವಯುತ ಸಂಪ್ರದಾಯಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಇಂತಹ ಮಠದ ಅನುಯಾಯಿಗಳಾದ ಶ್ರೀ ಗಜಾನನ ಶರ್ಮರವರು ಆಗ್ಗಾಗ್ಗೆ ಶ್ರೀಮಠಕ್ಕೆ ಭೇಟಿ ನೀಡುತ್ತಾ, ತಮ್ಮ ಕೈಲಾದ ಕೈಂಕರ್ಯಗಳನ್ನು ಮಾಡುತ್ತಾ ಬಲು ಶೀಘ್ರದಲ್ಲೇ ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಶ್ರೀ ರಾಘವೇಶ್ವರ ಭಾರತಿಯವರು ಶ್ರೀ ಮಠವಲ್ಲದೇ ದೇಶದ ವಿವಿಧ ಕಡೆಗಳಿಗೆ ಪ್ರರ್ಯಟನೆ ಮಾತುತ್ತಾ ಮಾಡುವ ರಾಮಾಯಣ ಪ್ರವಚನ ಅತ್ಯಂತ ಹೆಸರುವಾಸಿಯಾಗಿದೆ. ಶ್ರೀಗಳಿಂದ ರಾಮಾಯಣ ಕೇಳುವ ಸೌಭಾಗ್ಯವನ್ನು ಹೇಳುವುದಕ್ಕಿಂತಲೂ ಕೇಳಿ ಆನಂದಿಸಿದರೇ ಮಹದಾನಂದವಾಗುತ್ತದೆ ಎಂದರೂ ತಪ್ಪಾಗದು. ಈ ರೀತಿ ರಾಮಾಯಣಕ್ಕೂ ಮುನ್ನಾ ಅನೇಕ ಭಜನೆ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುವುದು ವಿಶೇಷ.

2012ರಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ನಂದನ ಚಾತುರ್ಮಾಸ್ಯ ಸಂದರ್ಭದಲ್ಲಿ  ಶ್ರೀಗಳು ಗಜಾನನ ಶರ್ಮ ಅವರಿಗೆ ನಿಮ್ಮಿಂದ  ರಾಮನ ‌ಕುರಿತಾದ ಒಂದು  ಅದ್ಭುತವಾದ ಗೀತೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳುತ್ತಾರೆ. ಗುರುಗಳ ನಿರೀಕ್ಷೆ ಎಂದರೆ ಅದು ಆಶೀರ್ವಾದ ಪೂರ್ವಕ ಆಜ್ಞೆ ಎಂದು ಭಾವಿಸಿದ ಶ್ರೀ ಗಜಾನನರು ಶರ್ಮರವರೂ ಸಹಾ ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಗುರುಗಳೇ ಎಂದು ಹೇಳಿ ಅಂದಿನಿಂದ ರಾಮನ ಕುರಿತಾಗಿ ಗೀತೆಯನ್ನು ಬರೆಯಲು ಮುಂದಾಗುತ್ತಾರೆ. ಕತೆ, ಕವನಗಳು ಥಟ್ ಎಂದು ಮನಸ್ಸಿಗೆ ಹೊಳೆದು ನಂತರ ಅದು ಕೃತಿ ರೂಪದಲ್ಲಿ ಬರುತ್ತದೆಯೇ ಹೊರತು ಬಲವಂತಕ್ಕೆ ಮನಸ್ಸಿನಲ್ಲಿ ಮೂಡುವುದಲ್ಲಾ ಎಂದು ಆಗ ಅವರಿಗೆ ಅರಿವಾಗುತ್ತದೆ. ಮುಂದಿನ 10-12 ದಿನಗಳ ಕಾಲ ಅದೇ ಕುರಿತಾಗಿ ಮನಸ್ಸಿನಲ್ಲಿ ಅಲೋಚಿಸುತ್ತಿದ್ದರೂ ಅವರ ಮನಸ್ಸಿಗೆ ರಾಮನ ಕುರಿತಾದ ಒಂದು ಒಳ್ಳೆಯ ನಾಲ್ಕು ಸಾಲುಗಳು ಮೂಡುವುದಿಲ್ಲ.

dil2

ಅದೇ ಗುಂಗಿನಲ್ಲೇ ಕಛೇರಿಯಿಂದ ತಮ್ಮ ಮನೆಗೆ ಕಾರಿನಲ್ಲಿ ಹೋಗುವಾಗ ಆ 90ರ ದಶಕದಲ್ಲಿ ಪ್ರಖ್ಯಾತವಾಗಿದ್ದ ಕೋಲಾ ಒಂದರ ಏ ದಿಲ್ ಮಾಂಗೇ ಮೋರ್ ಎಂಬ ಜಾಹೀರಾತಿನ ಫಲಕ ಅವರ ಕಣ್ಣಿಗೆ ಬೀಳುತ್ತದೆ. ಪ್ರತೀ ದಿನವೂ ಅದೇ ದಾರಿಯಲ್ಲಿ ಕ್ರಮಿಸುತ್ತಾ ಆ ಜಾಹೀರಾತನ್ನು ಅನೇಕ ಬಾರಿ ನೋಡಿರುವುದಲ್ಲದೇ ಟಿವಿಯಲ್ಲಿ ಸದಾಕಾಲವೂ ಆ ಜಾಹೀರಾತನ್ನು ನೋಡಿದ್ದರೂ ಅಂದು ಅವರು ಅದನ್ನು ವಿಶೇಷವಾಗಿ ಗಮನಿಸಿದ ಕೂಡಲೇ ಅವರ ಮನಸ್ಸಿನಲ್ಲಿ ಅದರ ಕನ್ನಡದ ಅನುವಾದ ಮೂಡಿದ್ದೇ ತಡಾ ತಮ್ಮ ಡೈರಿಯಲ್ಲಿ ಬರೆದುಕೊಂಡ ಸಾಲೇ, ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ.. ರಾಮಾ.. ರಾಮಾ..

dil1

ಹೀಗೆ ಮೊದಲ ಸಾಲು ಹೊಳೆಯುತ್ತಿದಂತೆಯೇ ಮನೆಗೆ ಹೋಗಿ ಕೈ ಕಾಲು ತೊಳೆದುಕೊಂಡು ಮನೆಯ ದೇವರಿಗೆ ದೀಪವನ್ನು ಬೆಳಗಿ ಪುಸ್ತಕ ಮತ್ತು ಲೇಖನಿ ಹಿಡಿಯುತ್ತಿದ್ದಂತೆಯೇ ಸರಾಗವಾಗಿ ಇಡೀ ಹಾಡು ಅವರಿಂದ ಪ್ರಭು ಶ್ರೀರಾಮನೇ ಬರೆಸಿಕೊಂಡು ಹೋದ ಎಂದರೂ ಅತಿಶಯವಾಗದು.

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ| ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
ನಾ ವಿಭೀಷಣ ಶರಣುಭಾವ ಕೊಡು ರಾಮ| ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
ಕಣ್ಣೀರ ಕರೆಯುವೆನು ನನ್ನತನ ಕಲೆ ರಾಮ| ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ಋತ ನೀನೆ ಋತು ನೀನೆ ಶೃತಿ ನೀನೆ ರಾಮ| ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ| ಪೂರ್ಣ ನೀ ಪ್ರಕಟ ನೀ ಆನಂದ ರಾಮ|
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ರಘುರಾಮ ರಘುರಾಮ ರಘುರಾಮ ರಘುರಾಮ|
ನಗುರಾಮ ನಗರಾಮ ಜಗರಾಮ ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ರಾಮ ರಾಮ ರಾಮ ರಾಮ|

WhatsApp Image 2024-01-11 at 06.47.22

ಹೀಗೆ ಬರೆದ ಆ ಅದ್ಭುತವಾದ ಸಾಲುಗಳನ್ನು ಗುರುಗಳ ಬಳಿ ತೋರಿಸಿದಾಗ ಅವರೂ ಸಹಾ ಸಂತಸಗೊಂಡ ನಂತರ ಗಜಾನನ ಶರ್ಮಾರವರ ಸುಪುತ್ರ ಶ್ರೀ ಸಾಕೇತ್ ಶರ್ಮ ಸಂಗೀತ ಸಂಯೋಜಿಸಿದ‌ ನಂತರ ಗೀತೆ ಅದ್ಭುತವಾಗಿ ಮೂಡಿ ಬರುತ್ತದೆ.

ಇಂಥದ್ದೊಂದು ಅಧ್ಬುತ ರಚನೆ ಎಲ್ಲರ ಮನಸ್ಸಿಗೂ ಮತ್ತು ಹೃದಯಕ್ಕೆ ತಟ್ಟಿದ್ದಲ್ಲದೇ ಸಂಗೀತದಲ್ಲೂ ಮಾಧುರ್ಯವಿದ್ದ ಕಾರಣ, ಬಹುತೇಕರಿಗೆ ಒಮ್ಮೆ ಕೇಳಿದರೆ. ಏ ದಿಲ್ ಮಾಂಗೇ ಮೋರ್ ಎನ್ನುವಂತೆ ಪದೇ ಪದೇ ಕೇಳಬೇಕೆಂಬ ಭಾವನೆ ಮೂಡಿದ ಕಾರಣ ಅತ್ಯಂತ ಕಡಿಮೆ ಸಮಯದಲ್ಲೇ ಬಹಳ ಪಸಿದ್ಧಿಯನ್ನು ಪಡೆಯುವುದಲ್ಲದೇ, ಒಂದು ಲೆಕ್ಕಾಚಾರದ ಪ್ರಕಾರ 2 ಕೋಟಿ ಸಲ ಈ ಹಾಡನ್ನು ಮೀಡಿಯಾದಲ್ಲಿ, ಯೂಟ್ಯೂಬ್‌ನಲ್ಲಿ 1.3 ಲಕ್ಷ, ಇತರ ಮೀಡಿಯಾಗಳಲ್ಲಿ 70 ಲಕ್ಷ ಸಲ ಕೇಳಲಾಗಿದೆಯಂತೆ .

ನಂತರ ದಿನಗಳಲ್ಲಿ ಈ ಹಾಡು ತಮಿಳು ತೆಲುಗು ತುಳು ಭಾಷೆಗಳಿಗೆ ಅನುವಾದವಾದಿಸಿದರೂ ಮೂಲ ಸಂಗೀತವನ್ನೇ ಉಳಿಸಿಕೊಂಡು ಅಲ್ಲಿಯೂ ಸಹಾ ಬಹಳ ಸುಪ್ರಸಿದ್ಧಿಯನ್ನು ಪಡೆದಿದೆ. ಸ್ವತಃ ಉತಮ ಸಂಗೀತಗಾರರೂ ಮತ್ತು ಗಾಯಕರೂ ಆದ ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀಗಳು ಮತ್ತು ಹೊಸನಗರ ಶ್ರೀಗಳು ಸಹಾ ಈ ಹಾಡಿಗೆ ಮನಸೋತು ತಮ್ಮ ಧನಿಗೂಡಿಸಿರುವುದು ಆ ಹಾಡು ಮತ್ತು ಅದರ ರಾಗ ಸಂಯೋಜನೆಗೆ ಇರುವ ಸತ್ವ ಎಂದರೂ ತಪ್ಪಾಗದು.

gajanan2

ಹೀಗೆ 90ರ ದಶಕದಿಂದಲೂ ಶ್ರೀ ಮಠದ ಅಧಿಕೃತವಾದ ಭಜನೆಯಾಗಿದ್ದ ಈ ಹಾಡು ಇದೀಗ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ಪ್ರಸಾರವಾಗಿದ್ದು, ಎಲ್ಲರ ಮೆಚ್ಚುಗೆಗೆ ಮತ್ತೊಮ್ಮೆ ಪಾತ್ರವಾಗಿದೆ. ಇಂತಹ ಸುಂದರವಾದ ಹಾಡನ್ನು ರಚಿಸಿದ್ದರೂ ಅದನ್ನು ಎಲ್ಲಿಯೂ ಯಾರ ಬಳಿಯೂ ಹೇಳಿಕೊಳ್ಳದ ಎಲೆ ಮರೆಕಾಯಿಯಂತಹ ಸರಳ ವ್ಯಕ್ತಿತ್ವ ಶ್ರೀ ಗಜಾನನ ಶರ್ಮಾ ಅವರದ್ದು. ಆವರ ಈ ಹಾಡು ಅಯೋಧ್ಯೆಯ ರಾಮಮಂದಿರವನ್ನು ತಲುಪಿರುವುದು ಶ್ರೀ ಗಜಾನನ ಶರ್ಮರಿಗೆ ಗೊತ್ತೇ ಇರಲಿಲ್ಲವಂತೆ. ಅವರ ಸ್ನೇಹಿತರೊಬ್ಬರು ಕರೆ ನಿಮ್ಮ ಆ ಹಾಡು ಅಯೋಧ್ಯೆಯಲ್ಲಿ ಪ್ರಸಾರವಾಗಿದೆ ಎಂದು ತಿಳಿಸಿದಾಗ, ಅವರಿಗೆ ಎಲ್ಲಿಲ್ಲದ ಸಂತೋಷವಾಗಿ ತಾವು ಆ ಗೀತೆ ರಚನೆ ಮಾಡಿದ್ದಕ್ಕೂ ಸಾರ್ಥಕವಾಯಿತು ಎನ್ನುವ ಭಾವ ಮೂಡಿದೆ ಮತ್ತು ಆ ಗೀತೆಯನ್ನು ಆಯ್ಕೆ ಮಾಡಿ ಪ್ರಸಾರ ಮಾಡಿದ ರಾಮ ಮಂದಿರದ ಇಡೀ ತಂಡಕ್ಕೆ ತಮ್ಮ ಹೃತ್ಪೂರ್ವಕ ಧನ್ಯವಾದಗಳು ಡಾ. ಗಜಾನನ ಶರ್ಮಾ ಅವರು ತಿಳಿಸಿದ್ದಾರೆ.

dil3

ರಾಮಚ್ರಂದ್ರ ಪುರದ ಶ್ರೀ ಮಠದ ಗೀತೆ ಇನ್ನು ಜಗತ್ತಿನ ಶ್ರೀ ರಾಮ ಭಕ್ತರ ನಿತ್ಯ ಗೀತೆ ಆಗಲಿದ್ದು, ಈ ಗೀತೆಯನ್ನು ಯಾರೇ ಕೇಳುಗರು ಕೇಳುತ್ತಿದ್ದಂತಯೇ, ಮನಸ್ಸಿಗೆ ಒಂದು ರೀತಿಯ ನೆಮ್ಮದಿಯನ್ನು ಕೊಡುವುದಲ್ಲದೇ ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಮೂಡಿಸುತ್ತದೆ. ಅದೇ ರೀತಿಯಲ್ಲಿ 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಟೈಗರ್ ಹಿಲ್ ಅನ್ನು ಯಶಸ್ವಿಯಾಗಿ ವಶ ಪಡಿಸಿಕೊಳ್ಳುವ ಸಮಯದಲ್ಲಿ ಅಲ್ಪ ಸ್ವಲ್ಪ ಗಾಯಗೊಂಡಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಅವರ ಹಿರಿಯ ಸೇನಾಧಿಕಾರಿಗಳು ಆದೇಶಿಸಿದ್ದರೂ ಆತನೂ ಸಹಾ ಇದೇ ಜಾಹೀರಾತಿನಿಂದ ಪ್ರಭಾವಿತನಾಗಿ ಏ ದಿಲ್ ಮಾಂಗೇ ಮೋರ್ ಎಂದು ಹೇಳುತ್ತಾ ನನ್ನ ದೇಶಕ್ಕಾಗಿ ನಾನು ಇನ್ನಷ್ಟು ಹೆಚ್ಚು ಶಿಖರಗಳನ್ನು ವಶ ಪಡಿಸಿಕೊಳ್ಳಲು ಬಯಸುತ್ತೇನೆ ಎಂದು ಹುತಾತ್ಮರಾಗಿದ್ದು ಈಗ ಇತಿಹಾಸ.

ಏ ದಿಲ್ ಮಾಂಗೇ ಮೋರ್ ಎಂಬ ಜಾಹೀರಾತಿನ ಪ್ರಭಾವದಿಂದ ಒಬ್ಬ ಕವಿಗೆ ಅದ್ಭುತವಾದ ಹಾಡನ್ನು ಬರೆಯಲು ಮತ್ತು ಒಬ್ಬ ಕವಿ ಒಬ್ಬ ಸೈನ್ಯಾಧಿಕಾರಿಯ ಮನಸ್ಥಿತಿಯನ್ನು ಹೆಚ್ಚಿಸಲು ಪ್ರಭಾವ ಬೀರಿತ್ತು ಎನ್ನುವುದು ಅಚ್ಚರಿಯ ಸಂಗತಿ ಅಲ್ವೇ? ಆದಕ್ಕೇ ನಮ್ಮ ಹಿರಿಯರು ಹೇಳೋದು, ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಯಾರು ಕಾಣರು ಎಂದು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment