ನಮ್ಮ ಸನಾತನ ಸಂಸ್ಕೃತಿಯಲ್ಲಿ ಕಣ್ಣಿಗೆ ಕಾಣೋ ದೇವರುಗಳಾದ ತಂದೆ ಮತ್ತು ತಾಯಿಯರ ನಂತರದ ಸ್ಥಾನವನ್ನು ನಮಗೆ ವಿದ್ಯೆ ಕಲಿಸಿಕೊಟ್ಟ ಗುರುಗಳಿಗೆ ನೀಡುತ್ತೇವೆ. ಅಪ್ಪಾ ಅಮ್ಮಾ ಹೊತ್ತು ಹೆತ್ತು, ಸಾಕಿ ಸಲಹಿ 5-6 ವರ್ಷಗಳ ಕಾಲದ ನಂತರ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ ನಂತರ ಆ ಮಕ್ಕಳ ಸಂಪೂರ್ಣ ಜವಾಬ್ಧಾರಿ ಆ ಶಾಲೆ ಮತ್ತು ಅವರಿಗೆ ಪಾಠ ಹೇಳಿಕೊಡುವ ಶಿಕ್ಷಕ/ ಶಿಕ್ಷಕಿಯರದ್ದಾಗಿರುತ್ತದೆ ಎಂದರೂ ತಪ್ಪಾಗದು. ಅಲ್ಲಿ ಆ ವಯಸ್ಸಿನಲ್ಲಿ ಮಕ್ಕಳು ಕಲಿಯುವ ಸಂಸ್ಕಾರ ಮತ್ತು ಸಂಸ್ಕೃತಿಗಳು ಅವರ ಜೀವಮಾನ ಪೂರ್ತಿ ಇರುತ್ತದೆ ಎಂಬುದನ್ನು ನೋಡಬೇಕಾದರೆ, ಪ್ರತೀ ವರ್ಷವೂ ಜನವರಿ ತಿಂಗಳಿನಲ್ಲಿ ಮಲ್ಲೇಶ್ವರಂ ಶಿಶು ವಿಹಾರದ ಹಿರಿಯ ವಿದ್ಯಾರ್ಥಿಗಳು ನಡೆಸುವ ಮಿತ್ರೋತ್ಸವಕ್ಕೆ ಬರಬೇಕು ಎಂದರೂ ತಪ್ಪಾಗದು.
1953 ರಲ್ಲಿ B K ತಿರುಮಲಮ್ಮನವರು ಮಲ್ಲೇಶ್ವರದ ಸರ್ಕಲ್ಲಿನಲ್ಲಿದ್ದ (ಪ್ರಸ್ತುತ ಕೆನರಾ ಬ್ಯಾಂಕ್ ಹಿಂದೆ) ಜಟಕಾ ಸ್ಟಾಂಡಿನ ಎದುರು ಮಧ್ಯಮ ವರ್ಗದವರಿಗೆ ಕೈಗೆಟುಕುವ ಮತ್ತು ಭಾರತೀಯ ಸಂಸ್ಕಾರ, ಸಂಸ್ಕೃತಿ ಮತ್ತು ಶಿಕ್ಷಣ ಪದ್ದತಿಯ ಜೊತೆಗೆ ಕನ್ನಡ ಮಾಧ್ಯಮದಲ್ಲಿ ಶಿಶುವಿಹಾರದಿಂದ ಹಿಡಿದು 7ನೇ ತರಗತಿಯವರೆಗೂ ಆರಂಭಿಸಿದ ಶಾಲೆಯ ಆದಾಗಲೇ70+ ವರ್ಷಗಳನ್ನು ದಾಟಿ 75ನೇ ವಜ್ರ ಮಹೋತ್ಸವತ್ತ ಧಾಪುಗಾಲು ಹಾಕುತ್ತಿರುವ ಮಲ್ಲೇಶ್ವರಂ ಶಿಶುವಿಹಾರದಲ್ಲಿ ತಿರುಮಲಮ್ಮ ಮತ್ತವರ ಶಿಕ್ಷಕ/ಶಿಕ್ಷಕಿಯರ ಗರಡಿಯಲ್ಲಿ ಚಿಕ್ಕ ವಯಸ್ಸಿನಲ್ಲಿ ಕಲಿಸಿತಂತಹ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಹೇಗೆ ತಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡು ಇಂದಿಗೂ ಸಹಾ ಮಲ್ಲೇಶ್ವರಂ ಶಿಶುವಿಹಾರದ ರಾಯಭಾರಿಗಳಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರೂ ಆತಿಶಯವಲ್ಲ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡದಲ್ಲಿಯೇ ಮಾಡಿದ ನಂತರ, ಮುಂದೆ ವಿವಿಧ ಹಂತಗಳ ಶಿಕ್ಷಣವನ್ನು ಮುಗಿಸಿ, ದೇಶ ವಿದೇಶಗಳಲ್ಲಿ ಉನ್ನತ ಸ್ಥಾನಮಾನವನ್ನು ಗಳಿಸುವ ಮೂಲಕ ನೆಮ್ಮದಿಯಾದ ಜೀವನವನ್ನು ಹೇಗೆ ನಡೆ ಸಬಹುದು ಎಂಬುದಕ್ಕೆ ಅಲ್ಲಿಗೆ ಬಂದಿದ್ದ ಬಹುತೇಕರು ಜ್ವಲಂತ ಉದಾಹರಣೆಯಾಗಿ, ಇಂದಿನ ಯುವಜನತೆಗೆ ಪ್ರೇರಣಾದಾಯಿಗಳಾಗಿದ್ದಾರೆ ಎಂದೆರೂ ತಪ್ಪಾಗದು.
ದಿನಾಂಕ 29.01.2024ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಎಂದಿನಂತೆ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಮಲ್ಲೇಶ್ವರಂ ಶಿಶುವಿಹಾರದ ಹಳೆಯ ವಿದ್ಯಾರ್ಥಿಗಳೆಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸೋಣ ಎಂಬ ಮಾಹಿತಿ ಕಳೆದ ಸುಮಾರು ಮೂರ್ನಾಲ್ಕು ತಿಂಗಳುಗಳ ಹಿಂದೆಯೇ ಆಯೋಜಕರು ಕಳುಹಿಸಿ ಮಾನಸಿಕವಾಗಿ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಗಳಾಗುವಂತೆ ಪ್ರೇರೇಪಿಸುತ್ತಿದ್ದದ್ದಲ್ಲದೇ, ಕಾಲ ಕಾಲಕ್ಕೆ ಆ ಕಾರ್ಯಕ್ರಮದ ಸಿದ್ಧತೆ, ಪರಿವಿಡಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿದರುಗಳ ಕಿರು ಪರಿಚಯವನ್ನು ಮಾಡಿಕೊಡುವ ಮೂಲಕ ಕಾರ್ಯಕ್ರಮದ ರೂಪುರೇಷೆಗಳನ್ನು ಮನದಟ್ಟಾಗುವಂತೆ ಮಾಡಿದ್ದದ್ದು ನಿಜಕ್ಕೂ ಅಧ್ಭುತವೇ ಸರಿ.
ಯಥ ಪ್ರಕಾರ ಆರಂಭದಲ್ಲಿ ಅತ್ಯುತ್ಸಾಹದಿಂದ ನಾನು ಬರ್ತೀನಿ, ಮತ್ತಿಬ್ಬರನ್ನು ಕರೆ ತರ್ತೀನಿ ಎಂದು ಹೇಳಿದವರು ಅಂತಿಮ ದಿನದಿಂದು ವಿವಿಧ ಕಾರಣಗಳಿಂದ ಮತ್ತಿಬ್ಬರನ್ನು ಕರೆತರುವುದು ಬಿಡಿ ತಾವೇ ಬಾರದೇ ಹೋದದ್ದು ಕಂಡು ಆಯೋಜಕರಿಗೆ ನಿಜಕ್ಕೂ ಬೇಸರ ತರಿಸಿತ್ತು. ಬೆಳ್ಳಿಗ್ಗೆ 9 ರಿಂದ 10 ಗಂಟೆಯಷ್ಟರಲ್ಲಿ ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿದ್ದ ಹಿರಿಯ ವಿದ್ಯಾರ್ಥಿಗಳು ನೆತ್ತಿಯ ಮೇಲೆ ಸೂರ್ಯ ಏರಿ, ಮಾಗಿಯ ಛಳಿ ಕಡಿಮೆ ಆಗುತ್ತಿದ್ದಂತೆಯೇ ತಂಡೋಪ ತಂಡವಾಗಿ ಅಲ್ಲಿ ಸೇರ ತೊಡಗಿ, ಹಿಂದಿನ ವರ್ಷದಷ್ಟಲ್ಲದ್ದಿದ್ದರೂ, ತಕ್ಕ ಮಟ್ಟಿಗೆ ಬರುತ್ತಿದ್ದಂತೆಯೇ ಆಯೋಜಕರ ಮುಖದಲ್ಲಿ ಮಂದಹಾಸವನ್ನು ಕಾಣಬಹುದಾಗಿತ್ತು.

ನಮಗೇ 50+ ವರ್ಷವಾಗಿ ಜೀವನದಲ್ಲಿ ನಾವೇನೋ ಕಡೆದು ಕಟ್ಟೆಹಾಕಿ ದಬ್ಬಾಕಿ ಬಿಟ್ಟಿದ್ದೇವೆ ಎಂದು ತಮ್ಮ ಬೆನ್ನು ನಾವೇ ತಟ್ಟಿಕೊಳ್ಳುವವರಿಗೆ, ಅಲ್ಲಿ ಬಂದು ಮಿತ್ರೋತ್ಸವದ ಶುಲ್ಕ ಕಟ್ಟಿ ನೋಂದಣಿ ಮಾಡಿಕೊಳ್ಳುವಾಗ ನಾವು 62 ಬ್ಯಾಚ್, ನಾವು 65 ಬ್ಯಾಚ್, 70, 72 ಎಂದು ಹೇಳುತ್ತಾ ಅಲ್ಲೇ ಇಟ್ಟಿದ್ದ ಎಳ್ಳುಬೆಲ್ಲ ಮತ್ತು ಅಪರೂಪಕ್ಕೆ ಖಾರದ ಎಳ್ಳು ಬೆಲ್ಲವನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದದ್ದನ್ನು ನೋಡೀ ಅರೇ ನಮ್ಮಲ್ಲಿ ಅನೇಕರು ಹುಟ್ಟುವ ಎಷ್ಟೋ ವರ್ಷಗಳ ಮುನ್ನವೇ ಅವರುಗಳು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಅವರಲ್ಲಿ ಬಹುತೇಕರು ತಮ್ಮ ಹೈಸ್ಕೂಲ್, ಕಾಲೇಜ್ ಗಳಲ್ಲಿಯೂ ಅದೇ ಸಹಪಾಠಿಗಳೊಂದಿಗೇ ಮುಂದುವರೆಸಿ, ಉನ್ನತ ದರ್ಜೆಯಲ್ಲಿ ಪದವಿಗಳನ್ನು ಪಡೆದು ದೇಶ ವಿದೇಶಗಳಲ್ಲಿ ಸರ್ಕಾರಿ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಈಗ ನಿವೃತ್ತರಾಗಿದ್ದರೂ, ಅವರ ಸರಳತೆ, ಸೌಮ್ಯತೆ, ಸಜ್ಜನಿಕೆ ಮತ್ತು ಬಂದಿದ್ದವರೆಲ್ಲರನ್ನೂ ಆತ್ಮೀಯವಾಗಿ ಹತ್ತಿರದಿಂದ ಕರೆದು ಹೆಗಲ ಮೇಲೆ ಕೈ ಹಾಕಿ ಏನು ಹೆಸರು? ಯಾವ ಬ್ಯಾಚ್? ಈಗ ಏನು ಮಾಡ್ತೀದ್ದೀರೀ? ಎಂದು ಅದೂ ಬಹುವಚನದಲ್ಲೇ ಮಾತಾನಾಡಿಸುತ್ತಿದ್ದಾಗ, down to earth ಎನ್ನುವುದು ಇದಕ್ಕೇನಾ? ಎನ್ನುವಂತೆ ಮೂಡಿಸಿತು ಎಂದರೂ ತಪ್ಪಾಗದು.

ಕಾರ್ಯಕ್ರಮ ಅಧಿಕೃತವಾಗಿ 10 ಗಂಟೆಗೆ ಆರಂಭ ಆಗಬೇಕಿದ್ದರೂ ಅವರಲ್ಲಿ ಅನೇಕರು ಇನ್ನೂ ತಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಕುಶಲೋಪರಿಗಳನ್ನು ವಿಚಾರಿಸುತ್ತಾ, ತಮ್ಮ ಬಾಲ್ಯದ ಚೇಷ್ಟೇ-ಕುಚೇಷ್ಟೆಗಳನ್ನು ನೆನೆಯುತ್ತಾ, ಒಬ್ಬರಿಗೊಬ್ಬರ ಕಾಲೆಳೆಯುತ್ತಿದ್ದದ್ದನ್ನು ಗಮನಿಸಿದ ಅಯೋಜಕರೂ ಸ್ವಲ್ಪ ತಡವಾಗಿ ಕಾರ್ಯಕ್ರಮವನ್ನು ಆರಂಭಿಸುವಷ್ಟರಲ್ಲಿ ಸಾಕಷ್ಟು ಜನರು ಸೇರಿದ್ದರು. ಎಂದಿನಂತೆ ಪ್ರಾರ್ಥನೆಯ ನಂತರ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳೊಂದಿಗೆ ದೀಪ ಪ್ವಜ್ವಲನೆ ಮಾಡಿಸುವ ಮೂಲಕ ಕಾರ್ಯಕ್ರಮ ಆರಂಭವಾಗಿ, ಕಳೆದ ಒಂದು ವರ್ಷದಲ್ಲಿ ನಮ್ಮನ್ನಗಲಿದ ಸಹಪಾಠಿಗಳಿಗೆ ಒಂದು ನಿಮಿಷ ಮೌನವನ್ನು ಆಚರಿಸುವ ಪಟ್ಟಿಯಲ್ಲಿ ವಯಕ್ತಿಕವಾಗಿ ಬಹಳ ಆತ್ಮೀಯರಾಗಿದ್ದ, ಕಳೆದ ಬಾರಿಯಷ್ಟೇ ತಮ್ಮ ಮಗಳು ಮತ್ತು ಶಿಷ್ಯೆಯರೊಂದಿಗೆ ನೃತ್ಯ ಪ್ರದರ್ಶನವನ್ನು ಇದೇ ವೇದಿಕೆಯಲ್ಲೇ ನೀಡಿದ್ದ ಶ್ರೀಮತಿ ನಿವೇದಿತಾ ಶ್ರೀನಿವಾಸ್ ಅವರ ಹೆಸರೂ ಇದ್ದದ್ದು ನಿಜಕ್ಕೂ ಕರುಳು ಚುರುಕ್ ಎಂದಿತ್ತು. ಎಂದಿನಂತೆ ಅರುಣ್ ಅವರ ಚಿಕ್ಕದಾದ ಮತ್ತು ಚೊಕ್ಕದಾದ ನಿರೂಪಣೆಯೊಂದಿಗೆ, ಹಿರಿಯ ವಿದ್ಯಾರ್ಥಿನಿಯೊಬ್ಬರ ಮಗಳ ಸುಶ್ರಾವ್ಯ ಹಾಡುಗಾರಿಕೆಯ ನಂತರ ಮಾಲಿನಿ ರವಿಶಂಕರ್ ಆವರ ಮಗಳು ಮತ್ತು ಶಿಷ್ಯೆಯರು ಸಮಯಾಭಾವದಿಂದ ಪ್ರಸ್ತುತಪಡಿಸಿದ 1-5ರ ವರಗಿನ ಸಂಖ್ಯಾ ಸಮಾಗಮ ನೃತ್ಯ ಎಲ್ಲರ ಮನಸ್ಸೂರೆಗೊಂಡಿದ್ದಲ್ಲದೇ, ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಮಾಡಿದ್ದಲ್ಲದೇ, ಮುಂದಿನ ವರ್ಷಕ್ಕೆ 6-10ರವರೆಗೆ ಕಾಯುವಂತೆ ಮಾಡಿತ್ತು.

ತಮ್ಮ ಆರಂಭಿಕ ಶಿಕ್ಷಣವನ್ನು ಬೇರೆ ಶಾಲೆಯೊಂದರಲ್ಲಿ ಕಲಿತು ಅಲ್ಲಿ ಉದ್ದಾರವಾಗದೇ, ಅಂತಿಮವಾಗಿ ಮಲ್ಲೇಶ್ವರಂ ಶಿಶುವಿಹಾರದಲ್ಲಿ ತಿರುಮಲಮ್ಮನವರ ತೆಕ್ಕೆಗೆ ಬಿದ್ದು ಅವರ ಗರುಡಿಯಲ್ಲಿ ರ್ಯಾಂಕ್ ಪಡೆಯುವಷ್ಟ ಮಟ್ಟಿಗೆ ಬೆಳೆದದ್ದಲ್ಲದೇ, ಪ್ರಸ್ತುತ ತಮ್ಮದೇ ಆದ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಶ್ರೀಯುತ ಅಫ್ತಬ್ ಅಹ್ಮದ್ ಆವರು ತಮ್ಮ ಅನುಭವಗಳನ್ನು ಹಂಚಿಕೊಂಡ ನಂತರ ಅತ್ಯಂತ ಸುಶ್ರಾವ್ಯವಾಗಿ ಪೂಜಿಸಲೆಂದೇ ಹೂಗಳ ತಂದೇ, ದರುಶನ ಕೋರೀ ನಾನಿಂದೇ, ತೆರೆಯೂ ಬಾಗಿಲನೂ ರಾಮಾ… ಎಂಬ ಹಾಡನ್ನು ಹಾಡುವ ಮೂಲಕ ಸ್ನೇಹಕ್ಕೆ ಜಾತಿ ಧರ್ಮ, ಎಲ್ಲವನ್ನೂ ಮೀರಿಸಿ ಭಾವೈಕ್ಯತೆಯನ್ನು ಎತ್ತಿ ತೋರಿಸುವ ತಾಕತ್ ಇದೆ ಎಂಬುದನ್ನು ಜಗಜ್ಜಾಹೀರಾತು ಪಡಿಸಿತು.

ಮಲ್ಲೇಶ್ವರಂ ಶಿಶುವಿಹಾರದ ಮೊದಲನೇ ವಿದ್ಯಾರ್ಥಿನಿಯಾದ ಶ್ರೀಮತಿ ಲಕ್ಷ್ಮೀ ಶ್ರೀಧರನ್ ಅವರ ಉಪಸ್ಥಿತಿ ಮತ್ತು ಅವರು ವಿವಿಧ ಕಾರಣಗಳಿಂದಾಗಿ ಶಾಲೆಯನ್ನು ನಡೆಸಲಾಗದೇ ಕೆಲ ವರ್ಷಗಳ ಕಾಲ ಬೇರೊಬ್ಬರಿಗೆ ಹಸ್ತಾಂತರಿಸಿದ ನಂತರ ಅವರು ಶಾಲೆಯನ್ನು ನಡೆಸಿಕೊಂಡು ಹೋಗುತ್ತಿರುವ ಪರಿ ಸರಿಯಾಗದೇ ಹೋದದ್ದನ್ನು ಕಂಡು ಮತ್ತೆ ಹರ ಸಾಹಸ ಮಾಡಿ ಶಾಲೆಯನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡ ಕೂಡಲೇ ಆ ವಿಷಯವನ್ನು ಅದಾಗಲೇ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಿರುಮಲಮ್ಮನವರ ಮಗ ಪ್ರಸಾದ್ ಅವರಿಗೆ ತಿಳಿಸಿದಾಗ, ಆ ನೋವಿನಲ್ಲಿಯೂ ಹರ್ಷವನ್ನು ವ್ಯಕ್ತಪಡಿಸಿ ಮಾರನೆಯೇ ದಿನವೇ ಇಹಲೋಕವನ್ನು ತ್ಯಜಿಸಿದ ವಿಷಯವನ್ನು ಅವರಿಂದ ಕೇಳಿದಾಗ, ಪ್ರಸಾದ್ ಅವರ ಜೀವ, ಶಾಲೆ ತಮ್ಮ ತೆಕ್ಕೆಗೆ ಬರಲೆಂದೇ ಕಾಯುತ್ತಿತ್ತೇನೋ ಎಂದೆನಿಸಿದ್ದು ಸುಳ್ಳಲ್ಲ.

ಆಷ್ಟು ಹೊತ್ತಿಗಾಗಲೇ, ಗಂಟೆ 1 ನ್ನು ದಾಟಿ ಎಲ್ಲರ ಹೊಟ್ಟೆಯೂ ಕವ ಕವಾ ಎನ್ನುತ್ತಿದ್ದರೂ, ಸಾವಧಾನವಾಗಿ ಎಲ್ಲರೂ ಸಭಾಂಗಣದ ಮೆಟ್ಟಿಲುಗಳ ಮೇಲೆ ಕುಳಿತು ಮಿತ್ರೋತ್ಸವದ ನೆನಪಿನಾರ್ಥವಾಗಿ ಭಾವಚಿತ್ರಗಳನ್ನು ತೆಗೆಸಿಕೊಂಡು ಎಲ್ಲರೂ ನಿಧಾನವಾಗಿ ಊಟದ ಪೆಂಡಾಲಿನತ್ತ ಸಾಗಿ,

ಅವರೇ ಕಾಳಿನ ರೊಟ್ಟಿ, ಗೊಜ್ಜು, ಬಿಸಿ ಬೇಳೆ ಬಾತ್, ಮೊಸರು ಬಜ್ಜಿ, ಅನ್ನಾ, ಸಾರು, ಹುಳಿಯ ನಂತರ ಮೊಸರನ್ನವನ್ನು ಸವಿಯ ತೊಡಗಿದರು. ಅಯ್ಯೋ ನನಗೆ ಷುಗರ್, ಬಿಪಿ ಇದೆ ಹೆಚ್ಚಿಗೆ ತಿನ್ನಲು ಆಗ್ತಾ ಇಲ್ಲಾ ಅಂತಾನೇ ನೆಚ್ಚಿನ ಗೆಳೆಯ/ಗೆಳತಿಯರಿಂದಿಗೆ ಎಂದಿಗಿಂತ ತುಸು ಹೆಚ್ಚಾಗಿಯೇ ಸಿಹಿ ಪದಾರ್ಥಗಳ ರುಚಿಯನ್ನೂ ನೋಡಿದವರಿಗೇನೂ ಕಡಿಮೆ ಇರಲಿಲ್ಲ.

ಮಧ್ಯಾಹ್ನನ ಊಟದ ನಂತರ ಭುಕ್ತಾಯಾಸದ ಸಮಯದ ಕೆಲವು ಮನರಂಜನಾತ್ಮಕ ಚಟುವಟಿಕೆಗಳಲ್ಲಿ ಬೆಂಗಳೂರಿನ ಇತಿಹಾಸ ಕುರಿತಾಗಿ ಮಾತನಾಡಲು ನನಗೆ ಅವಕಾಶ ಸಿಕ್ಕಿದ್ದು ನಿಜಕ್ಕೂ ಸವಾಲಿನದ್ದಾಗಿತ್ತು. ಅಲ್ಲಿದ್ದವರು ಬಹುತೇಕರು ನನಗಿಂತಲೂ ವಿದ್ಯೆ, ವಯಸ್ಸು ಮತ್ತು ಅನುಭವದಲ್ಲಿಯೂ ಹಿರಿಯರು ಅವರ ಮುಂದೆ ಅದೂ ಊಟವಾಗಿ ಜೊಂಪು ಹತ್ತುವ ಸಮಯದಲ್ಲಿ ಹೇಗಪ್ಪಾ ಮಾತಾನಾಡೋದು? ಎಂದು ಅಂದು ಕೊಂಡರೂ, ಬೆಂಗಳೂರು ಇತಿಹಾಸವನ್ನು ನಿಧಾನವಾಗಿ ಚಿಚ್ಚಿಡುತ್ತಾ, ಮಾತು ಮಾತಿನ ಮಧ್ಯೆಯೇ ಚಪ್ಪಾಳೆಗಳನ್ನು ತಟ್ಟಿಸುತ್ತಾ, ಇಪ್ಪತ್ತು ನಿಮಿಷಗಳ ಸಮಯವನ್ನೂ ಮೀರಿ ಸುಮಾರು 35 ನಿಮಿಷಗಳ ಕಾಲ ಬೆಂಗಳೂರು ಕುರಿತಾದ ಆಸಕ್ತಿಕರ ವಿಷಯಗಳ ಜೊತೆ ಕಾರ್ಯಕ್ರಮ ನಡೆಯುತ್ತಿದ್ದ ಹೆಬ್ಬಾಳ ಮತ್ತು ಮೇಖ್ರೀ ವೃತ್ತದ ಬಗ್ಗೆ ತಿಳಿಸಿ ನನ್ನ ಮಾತನ್ನು ಮುಗಿಸಿ ವೇದಿಕೆಯ ಕೆಳಗೆ ಇಳಿದು ಬರುತ್ತಿದ್ದರೆ, ಅರೇ!! ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ಇಷ್ಟು ವರ್ಷಗಳ ಕಾಲ ನೆಲೆಸಿದ್ದರೂ, ಬೆಂಗಳೂರಿನ ಬಗ್ಗೆ ಇಷ್ಟೆಲ್ಲಾ ಮಾಹಿತಿಯೇ ಗೊತ್ತಿರಲಿಲ್ಲಾ!! ಚೆನ್ನಾಗಿ ಮಾತನಾಡಿದ್ದೀರಿ ಎಂದಾಗ, ಅದು ಅಭಿನಂದನೆಗಳಿಗಿಂತಲೂ ಆತ್ಮೀಯ ಹಿರಿಯರ ಆಶೀರ್ವಾದ ಎನಿಸಿದ್ದಂತೂ ಸುಳ್ಳಲ್ಲ

ವಯಸ್ಸು 60 ಆಗಿದ್ದರೂ, ನೋಡಲು ಇನ್ನೂ 45 ರ ಹರೆಯದ ಯುವಕರಂತೆ ಕಾಣುವ. 1979ಬ್ಯಾಚಿನ ಶ್ರೀ ಶಿವಕುಮಾರ್ ಆವರು ಜೀವಿಸುವುದಕ್ಕಷ್ಟೇ ಊಟ ಮಾಡಬೇಕೇ ಹೊರತು, ಊಟಮಾಡುವುದಕ್ಕೆ ಜೀವಿಸುವುದಲ್ಲಾ! ಎಂಬುದನ್ನು ತಮ್ಮ ಸ್ವಂತ ಅನುಭವದ ಮೂಲಕ ತಿಳಿಸಿಕೊಟ್ಟಿದ್ದು ನಿಜಕ್ಕೂ ಅದ್ಭುತವಾಗಿತ್ತು. ಈಗಾಗಲೇ ಹಿರಿತೆರೆ ಮತ್ತು ಕಿರಿ ತೆರೆಗಳಲ್ಲಿ ತಮ್ಮ ಅದ್ಭುತವಾದ ಅಭಿನಯದ ಮೂಲಕ ಮನೆಮಾತಾಗಿರುವ 1982 ಬ್ಯಾಚಿನ ಸುಧಾ ಪ್ರಸನ್ನ ಮತ್ತು ಕನ್ನಡದ NTR N T ರಾಮಸ್ವಾಮಿ ಮತ್ತು ಅವರ ತಂಡದವರ ಹಾಸ್ಯಭರಿತ ಕಿರುಪ್ರಹಸನ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. 1965ನೇ ಬ್ಯಾಚಿನ ಶ್ರೀ ಚಂದ್ರಕಾಂತ್ M G ಆವರ ಸುಶ್ರಾವ್ಯ ಕಂಠದಲ್ಲಿ ಗದುಗಿನ ವೀರನಾರಯಣ ಕುರಿತಾದ ಗಮಕ ವಾಚನ, ನೆರೆದಿದ್ದವರ ಮೈ ರೋಮಾಂಚನಗೊಳಿಸಿತು. ನಂತರ ಉಳಿದಿದ್ದ ಸಮಯದಲ್ಲಿ ಮತ್ತೆ ಸುಧಾ ಪ್ರಸನ್ನ ಗೊಟ್ಟಿಗೇರಿ ಮುದುಕ ಬೆಂಗಳೂರಿಗೆ ಬಂದನೂ.. ಮುದುಕನ ಹೆಂಡತಿ.. ಹೆಂಡತಿಯ ಮಗಳು.. ಮಗಳ ಮಗು.. ಮಗುವಿನ ತೊಟ್ಟಿಲು.. ತೊಟ್ಟಿಲಿನ ಬೊಂಬೆ.. ಬೊಂಬೆಯ ಮೀಸೆ.. ಹೀಗೆ ರಾಗವಾಗಿ ಒಂದ್ದಕ್ಕೊಂದು ಪೋಣಿಸಿಕೊಂಡು ಹೋಗುತ್ತಲೇ ಎಲ್ಲರ ಜ್ಞಾಪಕ ಶಕ್ತಿಯನ್ನು ಚುರುಕುಗೊಳಿಸಿದ ಆಟವೂ ಸಹಾ ಅದ್ಭುತವಾಗಿತ್ತು.
ಅದುವರೆವಿಗೂ ಕುಳಿತಲ್ಲೇ ಕುಳಿತು ಕೈ ಕಾಲುಗಳೆಲ್ಲವೂ ಜುಂ ಹಿಡಿದಿದ್ದನ್ನು ಬಿಡಿಸುವಂತೆ ಎನ್ನುವಂತೆ ಅಳಸಿಂಗ ಮತ್ತವರ ತಂಡ, ಚಂಡು ಮತ್ತು ವಿವಿಧ ಆಟಗಳನ್ನು ಆಡಿಸುವ ಮೂಲಕ ಎಲ್ಲರನ್ನೂ ತಮ್ಮ ಬಾಲ್ಯಕ್ಕೆ ಕೊಂಡೊಯ್ದರು ಎಂದರೂ ತಪ್ಪಾಗದು. ಇಷ್ಟೇಲ್ಲಾ ಆಗುವ ಹೊತ್ತಿಗೆ ಗಂಟೆ 4.00 ದಾಟಿದ ಕಾರಣ ಆಟದಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಿಸಿ, ದಿನದ ಮತ್ತೊಂದು ಆಕರ್ಷಣೆಯಾದ ಅವರೆಕಾಳು ಉಪ್ಪಿಟ್ಟು ಮತ್ತು ಬಿಸಿ ಬಿಸಿ ಕಾಫೀ/ಟೀ ಕುಡಿಯುವ ಮೂಲಕ ಕಾರ್ಯಕ್ರಮಕ್ಕೆ ಅಂತಿಮ ವಿದಾಯ ಹೇಳುವ ಸಮಯವಾಗಿತ್ತು.
ನಮ್ಮಗಳ ಮನೆಯಲ್ಲಿ ಒಂದು ಸಣ್ಣ ಸಮಾರಂಭಕ್ಕೆ ಪರಿಚಿತ ಬಂಧು ಮಿತ್ರರನ್ನೇ ಒಟ್ಟಿಗೆ ಒಂದೆಡೆ ಸೇರಿಸುವುದೇ ಕಷ್ಟ ಎನಿಸಿರುವಾಗ, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ಇತ್ತೀಚಿನ ವಿವರಗಳನ್ನು ಹೆಕ್ಕಿ ಅವರನ್ನೆಲ್ಲಾ ಒಮ್ಮೆ ಮಾತನಾಡಿಸಿ ಕಳೆದ 15 ವರ್ಷಗಳಿಗೂ ಅಧಿಕ ಸಮಯದಿಂದ ಪ್ರತೀವರ್ಷವೂ ಈ ರೀತಿಯಾಗಿ ಸಾಧ್ಯವಾದಷ್ಟು ಹೆಚ್ಚಿನ ಹಿರಿಯ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸಲು ಮುಂದಾಳತ್ವ ವಹಿಸಿರುರುವ ರಜನೀಕಾಂತ್ ಮತ್ತು ಅವರ ತಂಡದವರ ಸಾಧನೆಗೆ ಎಲ್ಲರೂ ಬಾಯಿ ತುಂಬಾ ಹೊಗಳಿದ್ದಲ್ಲದೇ, ಬಹುತೇಕರು ಮತ್ತೆ ಮುಂದಿನ ವರ್ಷ ಇದೇ ಸಮಯದಲ್ಲಿ ಇದೇ ರೀತಿ ಮತ್ತಷ್ಟು ಹೆಚ್ಚಿನವರೊಂದಿಗೆ ಒಟ್ಟಿಗೆ ಸೇರುವ ಭಾಗ್ಯವನ್ನು ನಮ್ಮದಾಗಿಸಪ್ಪಾ! ಎಂದು ಭಗವಂತನನ್ನು ಕೇಳಿಕೊಂಡರು ಎಂದರು ಸುಳ್ಳಾಗದು.
ಈ ಮಿತ್ರೋತ್ಸವಕ್ಕಾಗಿಯೇ ಕೇವಲ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲದೇ, ರಾಜ್ಯದ ನಾನಾ ಕಡೆಯಿಂದ ಅಲ್ಲದೇ, ಹೊರ ರಾಜ್ಯ ಮತ್ತು ವಿದೇಶದಲ್ಲಿ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳೂ ಸಹಾ ಕೇವಲ ತಮ್ಮ ಸಹಪಾಠಿಗಳನ್ನು ಭೇಟಿ ಮಾಡುವುದಕ್ಕಾಗಿಯೇ ಸಮಯ ಮಾಡಿಕೊಂಡು ಈ ರೀತಿಯಾಗಿ ಒಂದೆಡೆ ಸೇರಿ ತಮ್ಮೆಲ್ಲಾ ಬವಣೆಗಳನ್ನು ಮರೆತು ಬೆಳಿಗ್ಗೆಯಿಂದ ಸಂಜೆಯವರೆಗೂ ಬಾಯಿ ತುಂಬಾ ಮಾತಾನಾಡುವುದರ ಜೊತೆಯಲ್ಲೇ ವಿವಿಧ ಸಾಂಸ್ಜೃತಿಕ ಕಾರ್ಯಕ್ರಮಗಳ ಮೂಲಕ ಹೃನ್ಮನಗಳನ್ನು ತುಂಬಿಕೊಂಡಿದ್ದಲ್ಲದೇ ಹೊತ್ತು ಹೊತ್ತಿಗೆ ಸರಿಯಾಗಿ ಪಾನಕ, ರುಚಿಕರವಾದ ಸುಗ್ರಾಸ ವಾದ ಭೋಜನ ಮತ್ತು ಸಂಜೆ ಅವರೇ ಕಾಳಿನ ಉಪ್ಪಿಟ್ಟು ಸೇವಿಸಿದ ಪರಿಯನ್ನು ಈ ರೀತಿಯಾಗಿ ವರ್ಣಿಸುವುದಕ್ಕಿಂತಲೂ ಖುದ್ದಾಗಿ ಅನುಭವಿಸಿದರೇ ಇನ್ನೂ ಆನಂದ.
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಎನ್ನುವಂತೆ ಕಾರ್ಯಕ್ರಮ ಮುಗಿದ ಎರಡು ದಿನಗಳ ನಂತರವಊ ಅದೇ ಗುಂಗಿನಲ್ಲಿಯೇ ಕಾರ್ಯಕ್ರಮದ ಮೆಲುಕು ಹಾಕುತ್ತಾ, ಆಯೋಜಕರು ಹಂಚಿ ಕೊಂಡ ಗ್ರೂಪ್ ಫೋಟೋದಲ್ಲಿ ತಾನೆಲ್ಲಿದ್ದೇನೆ? ತನ್ನ ಅಕ್ಕ ಪಕ್ಕದಲ್ಲಿ ಯಾರಿದ್ದಾರೆ? ಎಂದು ನೋಡಿ ಸಂಭ್ರಮಿಸುವ ಮಜದ ಮುಂದೇ ಬೇರೇ ಮಜವೇ ಇಲ್ಲಾ ಬಿಡಿ.
ಈ ರೀತಿಯ ಬಾಲ್ಯದ ಗೆಳೆಯ/ಗೆಳತಿಯರ ಸ್ನೇಹ ಮಿಲನಗಳು ಎಲ್ಲರ ಆಯಾಸವನ್ನು ಮರೆಸಿ ಆಯಸ್ಸನ್ನು ಹೆಚ್ಚಿಸುವ ಕಾರಣ, ಈ ವರ್ಷ ವಿವಿಧ ಕಾರಣಗಳಿಂದ ಬರಲಾಗದವರು, ಈ ಲೇಖನ ಓದಿದ ನಂತರ ಖಂಡಿತವಾಗಿಯೂ ಇಂತಹ ಸುಂದರ ಕಾರ್ಯಕ್ರಮದಲ್ಲಿ ತಾವೂ ಸಹಾ ಭಾಗಿಗಳಾಗಲೇ ಬೇಕು ಎಂದು ಈ ಕೂಡಲೇ ನಿರ್ಧಾರ ಮಾಡುವ ಮೂಲಕ, ಮುಂದಿನ ವರ್ಷ ಮಾಲಿನಿಯವರ ಸಂಖ್ಯಾ ಸಮಾಗಮ ನೃತ್ಯದ ಮುಂದಿನ ಭಾಗ ಮತ್ತು ಬೆಂಗಳೂರಿನ ಇತಿಹಾಸದ ಮುಂದಿನ ಭಾಗವೋ ಇಲ್ಲವೇ ಕರ್ನಾಟಕಕ್ಕೆ ಮೈಸೂರು ಅರಸರ ಕೊಡುಗೆಗಳ ಕುರಿತಾದ ರಸವತ್ತಾದ ವಿಷಯಗಳನ್ನು ತಿಳಿದುಕೊಳ್ಳಲು ಬಂದೇ ಬರ್ತೀರೀ ತಾನೇ?
ನೀವೂ ಬನ್ನಿ ಮತ್ತು ಜೊತೆಗೆ ಇನ್ನಿಬ್ಬರು ಮಲ್ಲೇಶ್ವರಂ ಶಿಶು ವಿಹಾರದ ಹಿರಿಯ ವಿದ್ಯಾರ್ಥಿಗಳನ್ನು ಕರೆದು ಕೊಂಡು ತಪ್ಪದೇ ಬರ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
I am not aware of the event, I am very old Student & Studied 4 year’s between 1955 & 195. Settled in Bangalore. My old house at 16th Cross MALLESWARM 1st Temple Street still we are keeping. I feel I missed
LikeLiked by 1 person
please let me know your contact no. will inform the organiser to include your no to the alumnai group.
let’s be in touch
LikeLike