ಕಾಶ್ಮೀರದ ಶ್ರೀನಗರದ ಶ್ರೀ ಶಂಕರಾಚಾರ್ಯ ದೇವಾಲಯ

shankaracharyaಸನಾತನದ ಧರ್ಮದ ಅನುಯಾಯಿಗಳು ತಮ್ಮ ದೈನಂದಿನ ಪೂಜಾ ವಿಧಿವಿಧಾನಗಳಲ್ಲಿ ನಮಸ್ತೇಸ್ತು ಶಾರಾದಾದೇವಿ ಕಾಶ್ಮೀರಪುರವಾಸಿನಿ ಎಂದು ಶಾರಾದಾದೇವಿಯನ್ನು ಸ್ತುತಿಸಿದರೆ, ಎಲ್ಲರಿಗೂ ತಿಳಿದಿರುವಂತೆ, ಆದಿಗುರು ಶ್ರೀ ಶಂಕರಾಚಾರ್ಯರು, ಅಲ್ಲಿದ್ದ ಸರ್ವಜ್ಞ ಪೀಠದ ದಕ್ಷಿಣ ಭಾಗದಿಂದ ಪ್ರವೇಶಿಸಿ ಅಲ್ಲಿದ್ದ ಎಲ್ಲಾ ಪಂಡಿತರನ್ನೂ ಸೋಲಿಸಿ ಅಧಿಕಾರಯುತವಾಗಿ ಸರ್ವಜ್ಞ ಪೀಠವನ್ನು ಅಲಂಕರಿಸಿದರೂ, ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ತಮ್ಮ ಕೆಲಸ ಬಹಳಷ್ಟು ಇದೆ ಎಂದು ಅಲ್ಲಿಂದ ಮುಂದೆ ಬರುವ ಸಂಧರ್ಭದಲ್ಲಿ ಇಂದಿನ ಕಾಶ್ಮೀರದ ರಾಜಧಾನಿ ಶ್ರೀನಗರದ ಅತ್ಯಂತ ಎತ್ತರದ ಬೆಟ್ಟದ ಪ್ರದೇಶದಲ್ಲಿ ಕೆಲಕಾಲ ತಪಸ್ಸು ಮಾಡಿದ ಸ್ಥಳವೇ ಇಂದು ಶಂಕರಾಚಾರ್ಯ ದೇವಾಲಯ ಎಂದು ಪ್ರಸಿದ್ಧವಾಗಿದ್ದು ಅಲ್ಲಿನ ಸ್ಥಳ ಪುರಾಣದ ಬಗ್ಗೆ ತಿಳಿಯೋಣ ಬನ್ನಿ.

templ3ಪ್ರಸ್ತುತ ಕಾಶ್ಮೀರಿ ಪಂಡಿತರು ಅಲ್ಲಿನ ಮುಸಲ್ಮಾನ ದಾಳಿಕೋರರ ಪದೇ ಪದೇ ದಾಳಿಯನ್ನು ತಡೆಯಲಾರದೇ ಭಾರತದ ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದರೂ, ಇಂದಿಗೂ ಸಹಾ ಶ್ರೀನಗರದ ಜಬರ್ವಾನ್ ಶ್ರೇಣಿಯ ಬೆಟ್ಟದ ಮೇಲಿರುವ ಜ್ಯೋತಿಶ್ವರ ಆಥವಾ ಜ್ಯೇಷ್ಟೇಶ್ವರ ಲಿಂಗವಿರುವ ಎಲ್ಲರಿಂದಲೂ ಶ್ರೀ ಶಂಕರಾಚಾರ್ಯ ಎಂಬ ಹಿಂದೂ ದೇವಾಲಯ ಸುಸ್ಥಿತಿಯಲ್ಲಿದ್ದು ಪ್ರತಿನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿಯಾಗಿದೆ.

junkunಈ ದೇವಾಲಯವು ಕಣಿವೆಯ ತಳದಿಂದ 1,000 ಅಡಿ (300 ಮೀ) ಎತ್ತರದಲ್ಲಿದ್ದು ಭಾರತದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದ್ದು ಈ ದೇವಾಲಯವು ಶ್ರೀನಗರದ ಹೃದಯಭಾಗದಲ್ಲಿರುವ ಗೋಪಾದ್ರಿ (ತಖ್ತ್-ಎ-ಸುಲೈಮಾನ್) ಎಂಬ ಬೆಟ್ಟದ ಮೇಲೆ ನೆಲೆಗೊಂಡಿದೆ. ಈ ದೇವಾಲಯವು ಸರಿಸುಮಾರು ಕ್ರಿಪೂ 200ದಷ್ಟು ಹಿಂದಿನದ್ದು ಎಂದು ನಂಬಲಾಗಿದ್ದು, ಪ್ರಸ್ತುತ ದೇವಾಲಯವನ್ನು ಮೂಲತಃ ಬೌದ್ಧ ಧರ್ಮದ ಅನುಯಾಯಿಯಾದ ಅಶೋಕ ಚಕ್ರವರ್ತಿಯ ಮಗ ಜಲುಕನು ಕಟ್ಟಿಸಿದನೆಂದು ಹೇಳಲಾಗುವುದರಿಂದ ಬೌದ್ಧರು ದೇವಾಲಯವನ್ನು ಪಾಸ್-ಪಹಾರ್ ಎಂದೂ ಸಹಾ ಕರೆಯುತ್ತಾರೆ.

ಕಾಶ್ಮೀರವನ್ನು ಆಕ್ರಮಿಸಿಕೊಂಡ ಸುಲ್ತಾನ್ ಸಿಕಂದರ್ ಈ ದೇವಾಲಯದಲ್ಲಿದ್ದ ಮೂಲ ಶಿವಲಿಂಗ ಮತ್ತಿತರ ದೇವರ ವಿಗ್ರಹಗಳನ್ನು ನಾಶಪಡಿಸಿದರೆ ನಂತರ ಈ ದೇವಾಲಯವನ್ನು ನಾಶ ಪಡಿಸಿದ ಅಪಕೀರ್ತಿ ಮೊಘಲ್ ಚಕ್ರವರ್ತಿ ಜಹಾಂಗೀರನಿಗೂ ಸಲ್ಲುತ್ತದೆ. ಹೀಗೆ ಪದೇ ಪದೇ ದಾಳಿಗಳು ಮತ್ತು ನೈಸರ್ಗಿಕ ವಿಪತ್ತುಗಳಿಂದ ದೇವಾಲಯವು ಶಿಥಿಲಾವಸ್ಥೆಗೆ ತಲುಪಿದಾಗ, ಕಾಲ ಕಾಲಕ್ಕೆ ಸ್ಥಳೀಯ ಹಿಂದೂ ರಾಜರುಗಳೂ ಮತ್ತು ಭಾರತದ ವಿವಿಧ ಪ್ರಾಂತ್ಯದ ರಾಜರುಗಳು ಈ ದೇವಾಲಯವನ್ನು ಪುನರುಜ್ಜೀವನ ಗೊಳಿಸಿದರು. ಕ್ರಿ.ಶ. ಒಂದನೇ ಶತಮಾನದಲ್ಲಿ ದೊರೆ ಗೊಡಪಟ್ಟನು ಈ ದೇವಾಲಯವನ್ನು ಪುನರ್ನಿರ್ಮಿಸಿ ನವೀಕರಿಸಿ ಈ ದೇವಾಲಯವನ್ನು ಜ್ಯೇತೇಶ್ವರನಿಗೆ ಅರ್ಪಿಸಿದರೆ, ರಾಜ ಗೋಪಾದಿತ್ಯ (ಕ್ರಿ.ಪೂ. 426-365) ಮತ್ತು ರಾಜ ಲಲಿತಾದಿತ್ಯ (ಕ್ರಿ.ಶ. 697-734) ನಂತರದ ನವೀಕರಣಗಳನ್ನು ಮಾಡಿಸಿದ್ದಾರೆ. ನಂತರ ಕಾಶ್ಮೀರವನ್ನು ಆಳಿದ ಡೋಗ್ರಾ ರಾಜವಂಶದ ಗುಲಾಬ್ ಸಿಂಗ್ ಅದರ ಆವರಣದಲ್ಲಿ ದುರ್ಗಾ ನಾಗ್ ದೇವಾಲಯವನ್ನು ನವೀಕರಿಸಿದರೆ, ಕೊಡುಗೈ ದಾನಿಗಳು ಎಂದೇ ಸುಪ್ರಸಿದ್ಧರಾಗಿರುವ ನಮ್ಮ ಮೈಸೂರಿನ ಮಹಾರಾಜರು 1925 ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ದೇವಾಲಯಕ್ಕೆ ಅವಶ್ಯಕವಾದ ವಿದ್ಯುತ್ ಉಪಕರಣಗಳನ್ನು ಅಳವಡಿಸಿದ್ದಲ್ಲದೇ, ಭಕ್ತಾದಿಗಳು ಕತ್ತಲಿನಲ್ಲಿಯೂ ದೇವಾಲಯಕ್ಕೆ ಸುಲಭವಾಗಿ ಬರುವಂತಾಗಲು, ದೇವಾಲಯದ ಸುತ್ತಮುತಲ್ಲೂ ವಿದ್ಯುತ್ ಹುಡುಕಾಟ ದೀಪಗಳನ್ನು (search light) ಸ್ಥಾಪಿಸಿದ್ದಲ್ಲದೇ, ಅದಕ್ಕೆ ತಗಲುವ ವಿದ್ಯುತ್ ವೆಚ್ಚವನ್ನು ಭರಿಸುವ ಸಲುವಾಗಿ ವಿಶೇಷವಾದ ದತ್ತಿಯನ್ನು ಇಟ್ಟಿದ್ದದ್ದು ಗಮನಾರ್ಹವಾಗಿದೆ. ನಂತರ 1961 ರಲ್ಲಿ ದ್ವಾರಕಾಪೀಠದ ಶ್ರೀ ಶಂಕರಾಚಾರ್ಯರು ಅಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಸ್ಥಾಪಿಸಿದರು ಎನ್ನಲಾಗಿದೆ.

PANDITSಕಲ್ಹಣರು ಬರೆದಿರುವ ಐತಿಹಾಸಿಕ ಉಲ್ಲೇಖವೊಂದರಲ್ಲಿ ಈ ಪರ್ವತವನ್ನು ಗೋಪಾದ್ರಿ ಅಥವಾ ಗೋಪಾ ಬೆಟ್ಟ ಎಂದಿಂದ್ದಾರಲ್ಲದೇ, ಅಂದಿನ ಈ ಪ್ರದೇಶದ ರಾಜ ಗೋಪಾದಿತ್ಯನು ಆ ಬೆಟ್ಟದ ತುತ್ತ ತುದಿಯಲ್ಲಿ ಭವ್ಯವಾದ ಶಿವಮಂದಿರವೊಂದನ್ನು ಕಟ್ಟಿಸಿ ಅದಕ್ಕೆ ಜ್ಯೇಷ್ಠೇಶ್ವರ (ಶಿವ ಜ್ಯೇಷ್ಠರುಡ) ಎಂದು ಕರೆದಿದ್ದಲ್ಲದೇ, ಆ ಬೆಟ್ಟದ ತಪ್ಪಲಿನಲ್ಲಿರುವ ಭೂಮಿಯನ್ನು ಸ್ಥಳೀಯ ಪಂಡಿತರಿಗೆ (ಬ್ರಾಹ್ಮಣರಿಗೆ) ಭೂದಾನದ ರೀತಿಯಲ್ಲಿ ದಾನ ನೀಡಿದ ಪರಿಣಾಮ ಅದೊಂದು ಅಗ್ರಹಾರವಾಗಿ ಮಾರ್ಪಟ್ಟು, ಗೋಪ ಅಗ್ರಹಾರಗಳು ಎಂದು ಪ್ರಖ್ಯಾತವಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಪ್ರಸ್ತುತವಾಗಿ ಈ ಬೆಟ್ಟದ ತಪ್ಪಲಿನ ಪ್ರದೇಶವನ್ನು ಇಂದಿಗೂ ಗುಪ್ಕರ್ ಎಂದೇ ಕರೆಯಲಾಗುತ್ತದೆ. ಅದರ ಪಕ್ಕದಲ್ಲೇ ಇದ್ದ ಡಾಲ್ಗೇಟ್‌ ಎಂಬ ಹಳ್ಳಿಯಲ್ಲಿ ಉಳಿದ ಪಂಡಿತರು ನೆಲೆಸಿದ್ದರು ಎಂದು ನಮೂದಿಸಲಾಗಿದ್ದು, ಆ ಪ್ರದೇಶವೇ ಇಂದಿನ ಡಾಲ್ ಲೇಕ್ ಎಂಬುದಾಗಿದೆ ಎನ್ನಲಾಗುತ್ತದೆ.

ಅಚ್ಚರಿಯ ಸಂಗತಿ ಎಂದರೆ, ಈ ದೇವಾಲಯ ಕೇವಲ ಹಿಂದೂಗಳು ಮತ್ತು ಬೌದ್ಧರಿಗಷ್ಟೇ ಸೀಮಿತವಾಗಿರದೇ, ಇಲ್ಲಿನ ದೇವಾಲಯದಲ್ಲಿ ವಿವಿಧ ರೀತಿಯ ಪರ್ಷಿಯನ್ ಶಿಲ್ಪಕಲೆಗಳು ಕಂಡು ಬರುವ ಕಾರಣ, ಈ ದೇವಾಲಯವನ್ನು ಯಹೂದಿಗಳು ಮತ್ತು ಪರ್ಷಿಯನ್ ಸಮುದಾಯದವರು ಬಾಗ್-ಇ-ಸುಲೈಮಾನ್ ಎಂದೂ ಕರೆದರೆ, ಈ ದೇವಾಲಯಕ್ಕೆ ಏಸು ಕ್ರ್ರಿಸ್ತ ಸಹಾ ಭೇಟಿಯಾಗಿದ್ದರು ಎಂದು ಕ್ರಿಶ್ಚಿಯನ್ನನ್ನರು ನಂಬಲು ಪೂರಕವಾಗುವಂತೆ ದೇಗುಲಕ್ಕೆ ಗರ್ಭಗುಡಿಗೆ ಹೋಗುವ ಮೆಟ್ಟಿಲುಗಳ ಮೇಲೆ ಈ ಕಥೆಯನ್ನು ಉಲ್ಲೇಖಿಸಲಾಗಿರುವ ಕಾರಣ, ಈ ದೇವಾಲಯವು ದೇವನೊಬ್ಬ ನಾಮ ಹಲವು ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ ಎಂದರೂ ತಪ್ಪಾಗದು.

ಕನ್ನಡಿಗರು ಅದರಲ್ಲೂ ಮೈಸೂರಿಗರು ಶ್ರೀನಗರಕ್ಕೆ ಭೇಟಿ ನೀಡಿದಾಗ, ಇಡೀ ನಗರದ ಎಲ್ಲಾ ಭಾಗಗಳಿಂದಲೂ ಕಾಣುವ ಈ ಶಂಕರಾಚಾರ್ಯ ದೇವಾಲಯವನ್ನು ನೋದುತ್ತಿದ್ದಂತೆಯೇ ಅದರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ನೆನಪಾಗುತ್ತದೆ ಎಂದರೂ ತಪ್ಪಾಗದು. ಸದ್ಯಕ್ಕೆ ಇಡೀ ಬೆಟ್ಟವು CRPF ಅವರ ವಶದಲ್ಲಿದ್ದು ಬೆಳಿಗ್ಗೆ 8 ರಿಂದ ಸಂಜೆ 4:30ರ ವರಗೆ ಮಾತ್ರವೇ ಸಾರ್ವಜನಿಕರಿಗೆ ದೇವಾಲಯದ ಮುಕ್ತ ಪ್ರವೇಶವಿದೆ. ಒಂದು ಕಡೆಯಲ್ಲಿ ಜೀಲಂ ನದೆಇ ಮತ್ತು ಮತ್ತೊಂದು ಬದಿಯಲ್ಲಿ ವಿಶ್ವವಿಖ್ಯಾತ ಡಾಲ್ ಸರೋವರದ ಮಧ್ಯದಲ್ಲಿ ಇರುವ ಈ ಬೆಟ್ಟದ ತಪ್ಪಿನ ವರೆಗೂ ವಾಹನದ ಮೂಲಕ ಹೋಗುವಾಗ ಚಾಮುಂಡಿ ಬೆಟ್ಟಕ್ಕೆ ಹೋಗುವಂತೆಯೇ ಭಾಸವಾಗುತ್ತದೆ. ಬೆಟ್ಟದ ತಪ್ಪಲಿನಲ್ಲಿ CRPF ಸಿಬ್ಬಂಧಿಗಳ ಕೂಲಂಕುಷ ತನಿಖೆಯ ನಂತರ ಸುಮಾರು 250-300 ಮೆಟ್ಟಿಲುಗಳನ್ನು ಹತ್ತಿ ದೇವಾಲಯದ ಕಮಾನಿಗೆ ಕಟ್ಟಿರುವ ಗಂಟೆಯನ್ನು ಒಮ್ಮೆ ಬಾರಿಸಿ ಅದರ ಗಂಟಾನಾದ ಗುಂಯ್ ಗುಟ್ಟುವ ಶಬ್ಧದೊಂದಿಗೇ, ದೇವಾಲಯದ ಆವರಣ ತಲುಪಿ ಒಮ್ಮೆ ಸುತ್ತಲೂ ಕಣ್ಣು ಹಾಯಿಸುತ್ತಿದ್ದಂತೆಯೇ ಇಡೀ ಶ್ರೀನಗರದ ದಾಲ್ ಸರೋವರ, ಝೀಲಂ ನದಿ ಮತ್ತು ಹರಿ ಪರ್ಬತ್‌ನಂತಹ ಪ್ರಮುಖ ಹೆಗ್ಗುರುತುಗಳ ವಿಹಂಗಮ ನೋಟ ಮತ್ತು ತಣ್ಣನೆಯ ಗಾಳಿಯನ್ನು ಆಹ್ಲಾದಿಸುತ್ತಿದ್ದಂತೆಯೇ ಏದುಸಿರು ಬಿಟ್ಟುಕೊಂಡು ಬೆಟ್ಟ ಹತ್ತಿದ ಆಯಾಸವೆಲ್ಲವೂ ಕ್ಷಣ ಮಾತ್ರದಲ್ಲಿಯೇ ನಿವಾರಣೆಯಾಗುತ್ತದೆ ಎಂದರೂ ಅತಿಶಯವಲ್ಲಾ.

ಶಂಕರಾಚಾರ್ಯ ದೇವಸ್ಥಾನವು ಮೂಲ, ಜನಪ್ರಿಯ ಕಾಶ್ಮೀರಿ ವಾಸ್ತುಶಿಲ್ಪದ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಶಂಕರಾಚಾರ್ಯ ದೇವಾಲಯವು 20 ಅಡಿ ಎತ್ತರದ ಅಷ್ಟಭುಜಾಕೃತಿಯ ಬಂಡೆಯ ತಳಹದಿಯೊಂದಿಗೆ ಚೌಕಾಕಾರದಲ್ಲಿದೆ. ದೇವಾಲಯವು ಕಟ್ಟಡದ ವಿನ್ಯಾಸದಲ್ಲಿ ಕಂಡುಬರುವ ಶಿಖರ ಮತ್ತು ಕುದುರೆಗಾಡಿ ಕಮಾನು ವ್ಯವಸ್ಥೆಯು ಆ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅಷ್ಟಭುಜಾಕೃತಿಯ ಸ್ತಂಭಗಳು ಸಭಾಂಗಣದ ಚಾವಣಿಯನ್ನು ಬೆಂಬಲಿಸುತ್ತವೆ, ಅಲ್ಲಿ ಶಿವಲಿಂಗವಿದೆ. ಗೋಡೆಗಳ ಅಗಲ ಸುಮಾರು ಎಂಟು ಅಡಿ. ದೇವಾಲಯವು ನೆಲಮಾಳಿಗೆಯನ್ನು ಹೊಂದಿದೆ, ಇದು ದೇವಾಲಯದ ಕಟ್ಟಡಕ್ಕೆ ಬೆಂಬಲವನ್ನು ನೀಡುತ್ತದೆ. ದೇವಾಲಯದ ಗರ್ಭಗುಡಿಗೆ 36 ಮೆಟ್ಟಿಲುಗಳಿವೆ. ಹಿಂದೂ ತತ್ತ್ವಶಾಸ್ತ್ರದ ಪ್ರಕಾರ ಮಾಡಿದ ಈ ಮೆಟ್ಟಿಲುಗಳು ಬ್ರಹ್ಮಾಂಡವನ್ನು ರೂಪಿಸುವ 36 ಅಂಶಗಳನ್ನು ಪ್ರತಿನಿಧಿಸುತ್ತವೆ.

WhatsApp Image 2024-03-07 at 06.16.12ದೇವಾಲಯದ ಮುಂದೆಯೇ ನಮ್ಮ ಪಾದರಕ್ಷೆಗಳನ್ನು ಕಳಚಿ ಕೈ ಕಾಲು ತೊಳೆದುಕೊಂಡು ಗರ್ಭಗುಡಿಗೆ ಹೋಗಲು ಮತ್ತೆ ಸುಮಾರು ೩೨ ಎತ್ತರದ ತುಸು ಕಡಿದಾದ ಮೆಟ್ಟಲುಗಳನ್ನು ಹತ್ತಿ ದೇವಾಲಯದ ಒಂದು ಸುತ್ತು ಪ್ರದಕ್ಷಿಣೆ ಹಾಕಿ ನಂತರ ದೇವಾಲಯದ ಗರ್ಭಗುಡಿ ಪ್ರವೇಶಿಸಿ ಸುಮಾರು 3-4 ಅಡಿಗಳಷ್ಟು ಎತ್ತರದ ಶಿವಲಿಂಗ ಅರ್ಥಾತ್ ಜ್ಯೇಷ್ಠೇಶ್ವರ/ಜ್ಯೋತಿಶ್ವರರನ್ನು ನೋಡುತ್ತಿದ್ದಂತೆಯೇ ನಮಗೇ ಅರಿವಿಲ್ಲದಂತೆಯೇ ಎರಡೂ ಕೈಗಳಿಂದಲೂ ಭಕ್ತಿಪೂರ್ವಕವಾಗಿ ನಮಸ್ಕಾರ ಮಾಡಿರುತ್ತೇವೆ. ಇನ್ನು ಉತ್ತರ ಭಾರತದ ಬಹುತೇಕ ದೇವಾಲಯದಂತೆಯೇ ಇಲ್ಲಿಯೂ ಸಹಾ ಭಕ್ತಾದಿಗಳೇ ನೇರವಾಗಿ ಶಿವನಿಗೆ ಅಭಿಷೇಕ ಇಲ್ಲವೇ ಶಿವನಿಗೆ ಗಂಧ, ಪುಷ್ಪ ಮಾಲಿಕೆಗಳನ್ನು ಸಮರ್ಪಿಸಿ, ಯಥಾ ಶಕ್ತಿ ಪ್ರದಕ್ಷಿಣೆಯನ್ನು ಹಾಕಿ ಅಲ್ಲಿನ ಅರ್ಚಕರ ಕೈನಿಂದಲೇ ಹಣೆಗೆ ಗಂಧದ ತಿಲವನ್ನು ಇರಿಸಿಕೊಂಡು ಅಲ್ಲೇ ಇದುವ ಕಾಣಿಕೆ ಹುಂಡಿಗೆ ಯಧಾಶಕ್ತಿ ಕಾಣಿಕೆಯನ್ನು ಸಲ್ಲಿಸಿ ಗರ್ಭಗುಡಿಯಿಂದ ಹೊರಗೆ ಬರುತ್ತಿದ್ದಂತೆಯೇ ಮನಸ್ಸಿನಲ್ಲಿ ಏನನ್ನೋ ಸಾಧಿಸಿದಂತಹ ಅನುಭವವಾಗುತ್ತದೆ. ದೇವಾಲಯದ ಪಕ್ಕದಲ್ಲೇ ಶಂಕರಾಚಾರ್ಯರ ಗುಹೆ ಇದ್ದು, ಇಲ್ಲಿಯೇ ಶಂಕರರು ತಪಸ್ಸು ಮಾಡಿ, ಸೌಂದರ್ಯಲಹರಿಯನ್ನು ರಚಿಸಿದರೆಂದು ನಂಬಲಾಗಿದೆ. ಪ್ರಸ್ತುತವಾಗಿ ಈ ಗುಹೆಯಲ್ಲಿ ಶಂಕರಾಚಾರ್ಯರ ಭಾವಚಿತ್ರ ಮತ್ತು ಮಹಾ ಸರ್ಪವನ್ನು ಇಡಲಾಗಿದ್ದು, ಅಲ್ಲಿಂದ ಕೆಳಗೆ ಬರುತ್ತಿದ್ದಂತೆಯೇ 60ರ ದಶಕದಲ್ಲಿ ದ್ವಾರಕಾಪುರಿಗಳ ಅಮೃತಹಸ್ತದಿಂದ ಸ್ಥಾಪಿಸಲ್ಪಟ್ಟ ನಯನ ಮನೋಹರ ಶ್ರೀ ಶಂಕರಾಚಾರ್ಯರ ಅಮೃತಶಿಲೆಯ ಪುತ್ಧಳಿಯನ್ನು ಕಾಣಬಹುದಾಗಿದೆ.

templ3ಈ ಶಿವನ ದೇವಾಲಯವು ಕಾಶ್ಮೀರದ ಕಣಿವೆಯಲ್ಲಿ ಅಳಿದುಳಿದಿರುವ ಕಾಶ್ಮೀರಿ ಪಂಡಿತರು ಮತ್ತಿತರೇ ಹಿಂದೂಗಳಿಗೆ ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆಯಲ್ಲದೇ, ಪ್ರತೀ ವರ್ಷವೂ ಪವಿತ್ರ ಅಮರನಾಥ ಯಾತ್ರೆಗೆ ಭೇಟಿ ಬಹುತೇಕ ಯಾತ್ರಾರ್ಥಿಗಳು ಯಾತ್ರೆಯ ಮುಂಚೆಯೋ ಇಲ್ಲವೇ ಯಾತ್ರೆಯ ನಂತರ ಈ ಶಂಕರಾಚಾರ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶಿವನಿಗೆ ಹಾಲು, ಹಣ್ಣು, ಹೂವುಗಳನ್ನು ಅರ್ಪಿಸಿ ಕೃತಾರ್ಥರಾಗುತ್ತಾರೆ. ಯಾತ್ರೆಯ ಸಮಯದಲ್ಲಿ, ಅಮಾವಾಸ್ಯೆಯ ಚಂದ್ರನ ಹಂತದಲ್ಲಿ, ಶಿವನ ಪವಿತ್ರ ಗದೆಯನ್ನು ದೇವಾಲಯಕ್ಕೆ ತರುವ ಸಂಬಂಧಿತ ಸಂಪ್ರದಾಯವನ್ನು ಕೈಗೊಳ್ಳಲಾಗುತ್ತದೆ. ಶಿವರಾತ್ರಿ ಮತ್ತು ಶ್ರಾವಣ ಪೂರ್ಣಿಮಾ ಹಬ್ಬವನ್ನು ಈ ದೇವಾಲಯದಲ್ಲಿ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಈ ಹಬ್ಬಗಳಿಗೆ ಎರಡು ಮೂರು ದಿನಗಳ ಮುನ್ನವೇ, ದೇವಾಲಯದ ಮುಕುಟದವರೆಗೂ ಬಗೆ ಬಗೆಯ ಬಣ್ನದ ವಿದ್ಯುತ್ ದೀಪಾಲಂಕಾರಗಳನ್ನು ಮಾಡಿದರೆ, ಇನ್ನು ದೇವಾಲಯದ ಆವರಣವಿಡೀ ತಳಿರು ತೋರಣ ಮತ್ತು ವಿವಿಧ ಹೂವುಗಳಿಂದ ಅಲಂಕರಿಸುವುದು ನಿಜಕ್ಕೂ ನಯನ ಮನೋಹರವಾಗಿದೆ. ಬೆಟ್ಟವನ್ನು ಇಳಿದು ರಾತ್ರಿ ಕತ್ತಲಾದ ನಂತರ ಶ್ರೀನಗರದ ಪಟ್ಟಣದಿಂದ ಈ ವಿದ್ಯುದಲಂಕಾರವನ್ನು ನೋಡುವುದನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಮಹದಾನಂದ ಎಂದರು ತಪ್ಪಾಗದು.

karn singhಈ ದೇವಾಲಯ ಮತ್ತು ಅದರ ಅಕ್ಕ ಪಕ್ಕದ ಭೂಮಿಯು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿದ್ದು, ಭಾರತೀಯ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಕೇಂದ್ರೀಯವಾಗಿ ಸಂರಕ್ಷಿಸಲಾಗಿದ್ದು, 19 ನೇ ಶತಮಾನದಿಂದಲೂ ಈ ದೇವಾಲಯವನ್ನು ಧರ್ಮಾರ್ಥ್ ಟ್ರಸ್ಟ್ ನಿರ್ವಹಿಸುತ್ತಿದ್ದು ಪ್ರಸ್ತುತ ಕಾಶ್ಮೀರಿ ರಾಜಮನತನದ ಶ್ರೀ ಕರಣ್ ಸಿಂಗ್ ಏಕೈಕ ಅಧ್ಯಕ್ಷ ಟ್ರಸ್ಟಿಗಳಾಗಿದ್ದಾರೆ,

ಇನ್ನು 1974 ರಲ್ಲಿ ಅತ್ಯಂತ ಪ್ರಖ್ಟಾತವಾದ ಹಿಂದಿ ಚಲನ ಚಿತ್ರದ ಹಾಡು ಜೈ ಜೈ ಶಿವ ಶಂಕರ್ ಇದೇ ದೇವಾಲಯದ ಅವರಣದಲ್ಲಿ ಚಿತ್ರೀಕರಣವಾಗಿದ್ದರೆ, 2000 ರಲ್ಲಿ ತೆರೆಗೆ ಬಂದ ಮಿಷನ್ ಕಾಶ್ಮೀರ್ ಮತ್ತು ಪುಕಾರ್ ಚಿತ್ರದಲ್ಲಿಯೂ ಈ ದೇವಾಲಯವನ್ನು ಕಾಣಬಹುದಾಗಿದೆ. ಪ್ರಸ್ತುತ ಸರ್ಕಾರ 370ನೇ ವಿಧಿಯನ್ನು ರದ್ದು ಪಡಿಸಿದ ನಂತರ ಕಾಶ್ಮೀರದ ಕಣೆವೆಯು ಅತ್ಯಂತ ಸುರಕ್ಷಿತವಾದ ಪ್ರದೇಶವಾಗಿದ್ದು ಪ್ರವಾಸಿಗರು ಸುಲಭವಾಗಿ ಬಂದು ಹೋಗಬಹುದಾಗಿರುವ ಕಾರಣ, ಸಮಯ ಮಾಡಿಕೊಂಡು ಈ ಕಾಶ್ಮೀರದ ಶ್ರೀನಗರದ ಶ್ರೀ ಶಂಕರಾಚಾರ್ಯ ದೇವಾಲಯಕ್ಕೆ ಭೇಟಿ ನೀಡಿ, ಸ್ವಾಮಿ ಜ್ಯೇಷ್ಠೇಶ್ವರದ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment