ಮೌನ (pin drop silence)

ಸಾಮಾನ್ಯವಾಗಿ ಯಾವುದೇ ಸಭೆ ಸಮಾರಂಭಗಳಲ್ಲಾಗಲೀ ಶಾಲಾ ಕಾಲೇಜುಗಳ ತರಗಗತಿಯಲ್ಲಿ ಗೌಜು ಗದ್ದಲವಾಗುತ್ತಿದ್ದ ಸಂದರ್ಭದಲ್ಲಿ ದಯವಿಟ್ಟು ಎಲ್ಲರೂ pin drop silence ರೀತಿಯಲ್ಲಿ ನಿಶ್ಯಬ್ಧವಾಗಿರಬೇಕೆಂದು ಕೋರುತ್ತಾರೆ. pin drop silence ಎಂದರೆ, ಅಲ್ಲಿನ ನಿಶ್ಯಬ್ಧತೆ ಹೇಗಿರಬೇಕೆಂದರೆ ಒಂದು ಸೂಜಿ ಕೈಜಾರಿ ನೆಲದ ಮೇಲೆ ಬಿದ್ದರೂ ಕೇಳುವಂತಿರಬೇಕು ಎಂಬ ಅರ್ಥ ಬರುತ್ತದೆ. ಕೆಲವೊಮ್ಮೆ ಮೌನವೂ ಸಹಾ ಗಟ್ಟಿ ಧ್ವನಿಗಿಂತ ಪ್ರಭಲವಾದ ಅಸ್ತ್ರವಾಗಬಲ್ಲದು ಎಂಬುದಕ್ಕೆ ಈ ಕೆಳಕಂಡ ಪ್ರಸಂಗ ಗಳೇ ಸಾಕ್ಷಿಯಾಗಿವೆ.

maikkshaಅದು ಬಹುಶಃ 50ರ ದಶಕ. ಭಾರತ ಕಂಡ ಅತ್ಯುತ್ತಮ ಫೀಲ್ಡ್ ಮಾರ್ಷಲ್ ಗಳಲ್ಲಿ ಒಬ್ಬರಾದ ಸ್ಯಾಮ್ ಬಹದ್ದೂರ್ ಮಾಣಿಕ್ ಶಾ ಅವರು ಗುಜರಾತಿನ ಅಹಮದಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಆಂಗ್ಲ ಭಾಷೆಯಲ್ಲಿ ಮಾತನಾಡಲು ಆರಂಭಿಸುತ್ತಿದ್ದಂತೆಯೇ, ನೆರೆದಿದ್ದ ಸಭಿಕರೆಲ್ಲರೂ ಒಕ್ಕೊರಲಿನಿಂದ ಗುಜರಾತಿಯಲ್ಲಿ ಮಾತನಾಡಿ ಗುಜರಾತಿಯಲ್ಲಿ ಮಾತನಾಡಿ.. ಎಂದು ಘೋಷಣೆ ಕೂಗಲಾರಂಭಿಸಿದರೆ, ಸಭಿಕರಲ್ಲಿದ್ದ ಧೈರ್ಯಸ್ಥರೊಬ್ಬರು ಎದ್ದು ನಿಂತು, ಗಟ್ಟಿ ಧನಿಯಲ್ಲಿ ನೀವು ಗುಜರಾತಿಯಲ್ಲಿ ಮಾತನಾಡಿದರೆ ಮಾತ್ರ ನಾವುಗಳು ನಿಮ್ಮ ಮಾತುಗಳನ್ನು ಕೇಳುತ್ತೇವೆ ಎಂದ ಕೂಡಲೇ, ಫೀಲ್ಡ್ ಮಾರ್ಷಲ್ ಸ್ಯಾಮ್ ಬಹದ್ದೂರ್ ಮಣಿಕ ಶಾ ತಮ್ಮ ಮಾತನ್ನು ಕೆಲ ಕಾಲ ನಿಲ್ಲಿಸಿ, ಗಂಭೀರವಾಗಿ ಸಭಿಕರನ್ನೊಮೆ ದಿಟ್ಟಿಸುತ್ತಾ,

ಸ್ನೇಹಿತರೇ, ನನ್ನ ಸುದೀರ್ಘ ಸೈನಿಕ ವೃತ್ತಿ ಜೀವನದಲ್ಲಿ ನಾನು ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದೇನೆ. ಕೆಲವು ಯುದ್ಧಗಳು ನನ್ನ ನೇತೃತ್ವದಲ್ಲೇ ನಡೆದಿದೆ. ಆ ರೀತಿಯ ಯುಧ್ಧದ ಸಮಯದಲ್ಲಿ ನನ್ನ ಜೊತೆಗಿದ್ದ ಸಿಖ್ ರೆಜಿಮೆಂಟ್‌ನ ಯೋಧರಿಂದ ಪಂಜಾಬಿ ಕಲಿತಿದ್ದೇನೆ. ಮರಾಠಾ ರೆಜಿಮೆಂಟ್‌ನಿಂದ ಮರಾಠಿ, ಮದ್ರಾಸ್ ಸಪ್ಪರ್ಸ್ ಯೋಧರಿಂದ ತಮಿಳು, ಬಂಗಾಳ ಸಪ್ಪರ್ಸ್‌ನ ಯೋಧರಿಂದ ಬಂಗಾಳಿ, ಬಿಹಾರ ರೆಜಿಮೆಂಟ್‌ನಿಂದ ಹಿಂದಿ; ಮತ್ತು ಗೂರ್ಖಾ ರೆಜಿಮೆಂಟ್‌ನಿಂದ ನೇಪಾಳಿ ಭಾಷೆಯನ್ನು ಕಲಿತಿದ್ದೇನೆ. ಹಾಗಾಗಿ ಆ ಭಾಷೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ ಮತ್ತು ತಕ್ಕ ಮಟ್ಟಿಗೆ ಮಾತನಾಡಬಲ್ಲೆ.

ದುರದೃಷ್ಟವಶಾತ್ ನಾನು ನಿಮ್ಮೊಂದಿಗೆ ಇಂದು ಗುಜಾರಾತಿ ಭಾಷೆಯಲ್ಲಿ ಮಾತನಾಡಲು ಅನುವಾಗುವಂತೆ, ನನಗೆ ಗುಜರಾತಿಯನ್ನು ಕಲಿಸಲು, ನಮ್ಮ ಸೈನ್ಯದಲ್ಲಿ ಗುಜರಾತ್‌ನಿಂದ ಬಂದ ಯಾವ ಸೈನಿಕನೂ ಇರಲಿಲ್ಲ ಎಂದು ಹೇಳಿದಾಕ್ಷಣ,

ಇಡೀ ಸಭೆಯಲ್ಲಿದ್ದ ಸಭಿಕರೆಲ್ಲರೂ ಒಂದೇ ಒಂದು ಕ್ಷಣದಲ್ಲಿ ತಲೆ ತಗ್ಗಿಸುವಂತಾಗಿದ್ದಲ್ಲದೇ, ಗುಜರಾತಿ.. ಗುಜರಾತಿ.. ಎಂದು ಗದ್ದಲ ಎಬ್ಬಿಸುತ್ತಿದ್ದವರೆಲ್ಲರೂ ಗಪ್ ಚುಪ್ ಆಗಿ ನೀರವ ಮೌನ ಅಲ್ಲಿ ಆವರಿಸಿ  pin drop silence ಆಯಿತು ಎಂಬುದನ್ನು ಹೇಳಬೇಕಿಲ್ಲ.

ಇನ್ನು ಎರಡನೇ ಪ್ರಸಂಗ ಇನ್ನೂ ರೋಚಕವಾಗಿದೆ.

customs_checkರಾಬರ್ಟ್ ವೈಟಿಂಗ್ ಎಂಬ 83ರ ವಯಸ್ಸಿನ ಅಮೇರಿಕಾದ ಹಿರಿಯ ಸಂಭಾವಿತ ವ್ಯಕ್ತಿಯೊಬ್ಬರು ವಿಮಾನದಲ್ಲಿ ಪ್ಯಾರಿಸ್‌ಗೆ ಬಂದಿಳಿದಾಗ, ವಿಮಾನ ನಿಲ್ದಾನದಲ್ಲಿದ್ದ ತರುಣ ಫ್ರೆಂಚ್ ಕಸ್ಟಮ್ಸ್‌ ಅಧಿಕಾರಿಯೊಬ್ಬರಿಗೆ ಅವರ ಪಾಸ್ ಪೋರ್ಟ್ ತೋರಿಸಲು ಕೆಲ ಸಮಯ ತೆಗೆದು ಕೊಂಡರು. ಬಿಸಿರಕ್ತದ ಆ ತರುಣ ಅಧಿಕಾರಿ, ತನ್ನ ತಾಳ್ಮೆಯನ್ನು ಕೆಳೆದುಕೊಂಡು ನೀವು ಈ ಮೊದಲು ಫ್ರಾನ್ಸ್ ದೇಶಕ್ಕೆ ಬಂದಿದ್ದೀರಾ? ಎಂದು ಸ್ವಲ್ಪ ದರ್ಪದಿಂದ ಮತ್ತು ಅಷ್ಟೇ ವ್ಯಂಗ್ಯವಾಗಿ ಕೇಳಿದನು.

aobert_whitingಆ ಅಧಿಕಾರಿಯ ಧೋರಣೆ ಮತ್ತು ಉದ್ಧಟತನವನ್ನು ಗಮನಿಸಿದ ರಾಬರ್ಟ್ ವೈಟಿಂಗ್ ಅವರು ಕೊಂಚವೂ ವಿಚಲಿತರಾಗದೇ, ಬಹಳ ತಾಳ್ಮೆಯಿಂದ, ಹೌದು ಬಹಳ ವರ್ಷಗಳ ಹಿಂದೆ ಫ್ರಾನ್ಸ್‌ ದೇಶಕ್ಕೆ ಬಂದಿದ್ದೆ ಎಂದ ಕೂಡಲೇ, ಹಾಗಾದರೆ ನೀವು ಫ್ರಾನ್ಸ್ ದೇಶದೊಳಗೆ ಪ್ರವೇಶಿಸುವ ಮುನ್ನಾ ನಿಮ್ಮ ಪಾಸ್‌ಪೋರ್ಟ್ ತೋರಿಸಲು ಸಿದ್ಧವಾಗಿರಬೇಕೆಂಬ ನಿಯಮ ನಿಮಗೆ ತಿಳಿದಿತ್ತು ಎಂಬುದಾಗಿ ಭಾವಿಸುತ್ತೇನೆ ಎಂದು ಕುಟುಕುವ ರೀತಿಯಲ್ಲಿ ಪ್ರಶ್ನಿಸಿದ.

ಆಗಲೂ ಸಹಾ ತಮ್ಮ ಸಂಯಮವನ್ನು ಕಳೆದು ಕೊಳ್ಳದ ಶ್ರೀ ವೈಟಿಂಗ್, ಬಹಳ ಗಂಭೀರತೆಯಿಂದ, ನಾನು ಕಳೆದ ಸಾರಿ ಇಲ್ಲಿಗೆ ಬಂದಿದ್ದಾಗ, ಪಾಸ್ ಪೋರ್ಟ್ ತೋರಿಸುವ ಅಗತ್ಯತೆ ಇರಲಿಲ್ಲ ಎಂದು ಹೇಳಿದರು.

ಈ ಮಾತನ್ನು ಕೇಳಿದ ಕೂಡಲೇ ಸ್ವಲ್ಪ ವ್ಯಗ್ರನಾದ ಆ ಅಧಿಕಾರಿ, ಇದು ಖಂಡಿತವಾಗಿಯೂ ಅಸಾಧ್ಯ. ಯಾವುದೇ ಅಮೆರಿಕನ್ನರು ಫ್ರಾನ್ಸ್‌ಗೆ ಆಗಮಿಸಿದರೂ ಅವರು ಖಡ್ಡಾಯವಾಗಿ ತಮ್ಮ ಪಾಸ್‌ಪೋರ್ಟ್‌ಗಳನ್ನು ತೋರಿಸಲೇ ಬೇಕು ಎಂದು ಅಬ್ಬರಿಸಿದ.

ಆಗ ಶ್ರೀ ರಾಬರ್ಟ್ ವೈಟಿಂಗ್ ಆ ಫ್ರೆಂಚ್ ಭದ್ರತಾ ಸಿಬ್ಬಂದಿಯನ್ನು ಒಮ್ಮೆ ಮೇಲಿಂದ ಕೆಳಗೆ ನೋಡಿ, ನಾನು ಕಳೆದ ಬಾರಿ 1944ರಲ್ಲಿ ಬೆಳ್ಳಂಬೆಳಿಗ್ಗೆ ಸುಮಾರು 4:40 ಕ್ಕೆ ನಿಮ್ಮ ದೇಶವನ್ನು ಸ್ವತಂತ್ರಗೊಳಿಸಲು ಸಹಾಯ ಮಾಡಲು ಒಮಾಹಾ ಬೀಚ್‌ನ ತೀರಕ್ಕೆ ಬಂದಂತಹ ಸಂಧರ್ಭದಲ್ಲಿ ನನ್ನ ಪಾಸ್‌ಪೋರ್ಟ್ ಪರೀಕ್ಷಿಸಲು ಒಬ್ಬನೇ ಒಬ್ಬ ಫ್ರೆಂಚ್ ವ್ಯಕ್ತಿಯೂ ಸಹಾ ಇಲ್ಲಿರಲಿಲ್ಲ ಎಂದು ಹೇಳಿದಾ ಕ್ಷಣ, ಆ ಭದ್ರತಾ ಸಿಬ್ಬಂದಿಯ ಗಂಟಲು ತಣ್ಣಗಾಗಿತ್ತು ಇನ್ನೇನೂ ಮಾತನಾಡದಂತಹ ನೀರವ ಮೌನ ಅರ್ಥಾತ್ pin drop silence ಇತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.

ಇನ್ನು ಮೂರನೇ ಪ್ರಸಂಗ ನಮ್ಮ ದೇಶ ಅತ್ಯಂತ ಪ್ರಭಾವಿಯೊಬ್ಬರ ಕುರಿತಾಗಿದ್ದು ಅದು ಮತ್ತಷ್ಟು ರೋಚಕವಾಗಿದೆ.

ghandhi1947 ಆಗಸ್ಟ್ 15 ರಂದು ಬ್ರಿಟಿಷರ ಆಳ್ವಿಕೆಯಿಂದ ಭಾರತದ ದೇಶಕ್ಕೆ ಸ್ವಾತಂತ್ರ್ಯ ಬಂದಾಗ, ಇಡೀ ದೇಶವೇ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲರು ಈ ದೇಶದ ಮೊದಲ ಪ್ರಧಾನಿ (ನಿಜಕ್ಕೂ ಸುಭಾಷ್ ಚಂದ್ರ ಬೋಸರು ಈ ದೇಶದ ಮೊದಲ ಪ್ರಧಾನಿಗಳು) ಆಗುತ್ತಾರೆ ಎಂದೇ ನಿರೀಕ್ಷಿಸುತ್ತಿದ್ದಾಗ, ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಕೃಪಾಕಟಾಕ್ಷದಿಂದ ಈ ದೇಶ elected ಪ್ರಧಾನ ಮಂತ್ರಿ ಆಗದೇ selected ಪ್ರಧಾನ ಮಂತ್ರಿಗಳಾದ ಶ್ರೀ ಜವಾಹರ್ ಲಾಲ್ ನೆಹರು ಅವರು ಭಾರತೀಯ ಸೇನೆಯ ಮೊದಲ ಜನರಲ್ ಅವರನ್ನು ಆಯ್ಕೆ ಮಾಡಲು ಹಿರಿಯ ಸೇನಾ ಅಧಿಕಾರಿಗಳ ಸಭೆಯನ್ನು ಕರೆದರು.

neharuಬಹಳಷ್ಟು ಕಾಲ ಬ್ರಿಟೀಷರ ಸಹವಾಸದಿಂದ ನೆಹರು ಅವರ ಮನಸ್ಥಿತಿಯೂ ಸಹಾ ಬ್ರಿಟೀಷರ ಗುಲಾಮೀ ತನದಿಂದ ಇನ್ನೂ ಹೋಗಿರದಿದ್ದ ಕಾರಣ, ನಮ್ಮ ಸೈನ್ಯಾಧಿಕಾರಿಗಳಿಗೆ ಇಷ್ಟು ದೊಡ್ಡ ಒಕ್ಕೂಟವ್ಯವಸ್ಥೆಯ ದೇಶದ ಸೈನ್ಯವನ್ನು ಮನ್ನೆಡೆಸಿದ ಅನುಭವ ಇಲ್ಲದ ಕಾರಣ, ನಾವು ಭಾರತೀಯ ಸೇನೆಯ ಜನರಲ್ ಆಗಿ ಒಬ್ಬ ಬ್ರಿಟಿಷ್ ಅಧಿಕಾರಿಯನ್ನು ನೇಮಿಸಬೇಕೆಂದು ಇಚ್ಚಿಸುತ್ತೇವೆ. ಬ್ರಿಟೀಷ್ ಅಥಿಕಾರಿಯಿಂದ ಮಾತ್ರವೇ, ಇಷ್ಟು ದೊಡ್ಡ ಸೇನೆಯನ್ನು ಮುನ್ನಡೆಸಲು ಸಾಧ್ಯ ಎಂದು ಹೇಳಿದರು.

ಸಹಜವಾಗಿಯೇ ಬ್ರಿಟಿಷ್ ಶಿಕ್ಷಣ ಪದ್ದತಿಯಲ್ಲೇ ಕಲಿತು ಅವರ ಸೈನ್ಯದಲ್ಲೇ ಸೇವೆ ಮಾಡಿದ್ದ ಸಾಕಷ್ಟು ಸೈನ್ಯಾಧಿಕಾರಿಗಳು ನೆಹರು ಅವರ ಪ್ರಸ್ತಾವನೆಗೆ ಯಾವುದೇ ರೀತಿಯ ಪ್ರತಿರೋಧವನ್ನು ತೋರದೆ, ಹೌದು ಹೌದು ಎಂದು ಒಪ್ಪಿಗೆಯ ರೂಪದಲ್ಲಿ ತಲೆದೂಗಿದರು.

rathodಆದರೆ, ದೈರ್ಯದಿಂದ ಎಲ್ಲವನ್ನೂ ಪ್ರಶ್ನಿಸಿ ಪರಿಹಾರವನ್ನು ಕಂಡು ಕೊಳ್ಳಬೇಕು ಎಂಬ ಮನಸ್ಥಿತಿಯ ಒಬ್ಬ ಹಿರಿಯ ಅಧಿಕಾರಿ ನಾಥು ಸಿಂಗ್ ರಾಥೋಡ್ ಅವರು ನಿಮ್ಮ ಪ್ರಸ್ಥಾಪನೆಯನ್ನು ಒಪ್ಪಲು ನಾನು ಸಿದ್ಧನಿಲ್ಲ. ನಮ್ಮ ಸೈನ್ಯವನ್ನು ಮುನ್ನಡೆಸಲು ನಮ್ಮಲ್ಲಿಯೇ ಅನೇಕ ಹಿರಿಯ ಸಮರ್ಥ ಅಧಿಕಾರಿಗಳು ಇದ್ದಾರೆ ಹಾಗಾಗಿ ನನಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡಿ ಎಂದು ಕೇಳಿಕೊಂಡರು.

ಬರೀ ಹೌದಪ್ಪ ಅಧಿಕಾರಿಗಳ ಸಮಕ್ಷಮದ ಮಧ್ಯದಲ್ಲಿ ಒಬ್ಬ ಅಧಿಕಾರಿಯ ಆ ರೀತಿಯ ನಿವೇದನೆ ನೆಹರು ಅವರನ್ನು ಸ್ವಲ್ಪ ಮಟ್ಟಿಗೆ ವಿಚಲಿತಗೊಳಿಸಿತಾದರೂ, ಅದನ್ನು ತೋರಿಸಿಕೊಳ್ಳದೇ, ಓಹೋ. ಅದಕ್ಕೇನಂತೇ, ನೀವು ಮುಕ್ತವಾಗಿ ನಿಮ್ಮ ಅಭಿಪ್ರಾಯವನ್ನು ಮಂಡಿಸಬಹುದು ಎಂದು ಹೇಳಿದರು.

rathodಇಂತಹ ಸುವರ್ಣಾವಕಾಶಕ್ಕಾಗಿಯೇ ಕಾಯುತ್ತಿದ್ದ ಶ್ರೀ ರಾಥೋಡರು, ತಮ್ಮ ಆಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಾ, ನೋಡಿ ಸರ್, ನಿಮ್ಮ ಅಭಿಪ್ರಾಯದಂತೆಯೇ ಹೋದಲ್ಲಿ, ನಿಮಗೂ ಸಹಾ ರಾಷ್ಟ್ರವನ್ನು ಮುನ್ನಡೆಸುವ ಅನುಭವವಿಲ್ಲದ ಕಾರಣ, ನಮ್ಮ ದೇಶಕ್ಕೆ ನಿಮ್ಮ ಬದಲಾಗಿ, ಒಬ್ಬ ಬ್ರಿಟಿಷ್ ವ್ಯಕ್ತಿಯನ್ನೇ ಭಾರತದ ಮೊದಲ ಪ್ರಧಾನಿಯಾಗಿ ನೇಮಿಸಬೇಕಲ್ಲವೇ? ಎಂದಾಗ, ಖಂಡಿತವಾಗಿಯೂ ಅಲ್ಲಿ ಕೆಲ ಕಾಲ pin drop silence ಇತ್ತೆಂದು ಹೇಳಬೇಕಿಲ್ಲ.

ಎಲ್ಲಾ ಹಿರಿಯ ಸೈನ್ಯಾಧಿಕಾರಿಗಳ ಸಮಕ್ಷಮದಲ್ಲಿ ಒಬ್ಬ ಅಧಿಕಾರಿಯಿಂದ ಈ ರೀತಿಯ ಎದುರುತ್ತರವನ್ನು ನಿರೀಕ್ಷಿಸಿರದಿದ್ದ ನೆಹರು ಅವರ ಮುಖ ಕಪ್ಪಿಟ್ಟಿದ್ದಲದೇ, ಅದನ್ನು ಸಾವರಿಸಿಕೊಂಡು ಹಾಗಾದರೆ, ನೀವೇ ಭಾರತೀಯ ಸೇನೆಯ ಮೊದಲ ಜನರಲ್ ಆಗಲು ಸಿದ್ಧರಿದ್ದೀರಾ? ಎಂದು ರಾಠೋಡರನ್ನು ಪ್ರಶ್ನಿಸುತ್ತಾ ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲಾ ಎನ್ನುವಂತಹ ದೇಶಾವರಿ ಕುಹಕ ನಗೆಯನ್ನು ಬೀರಿದಾಗ,

ರಾಥೋಡ್ ಅವರು ಅಷ್ಟೇ ಸಮಚಿತ್ತದಿಂದ, ಸರ್ ನಿಮ್ಮ ಆಹ್ವಾನಕ್ಕೆ ನಾನು ಅಭಾರಿಯಾಗಿದ್ದೇನೆ. ಆದರೆ, ನನಗಿಂತಲೂ ಅತ್ಯಂತ ಹಿರಿಯ, ಪ್ರತಿಭಾವಂತ ಮತ್ತು ದಕ್ಷ ಸೇನಾಧಿಕಾರಿಗಳಾದ ಜನರಲ್ ಕಾರ್ಯಪ್ಪ ನವರು ಇದ್ದಾರೆ. ಅವರು ನಿಶ್ಚಯವಾಗಿಯೂ ನಮ್ಮ ದೇಶದ ಸೈನ್ಯದ ಮೊದಲ ದಂಡಾಧಿಕಾರಿಗಳಾಗಲು ಅತ್ಯಂತ ಅರ್ಹರಾಗಿದ್ದಾರೆ ಎಂದು ಹೇಳಿ ತಮ್ಮ ಮಾತು ಮುಗಿಸಿದಾಗ, ಮತ್ತೊಮ್ಮೆ ಅಲ್ಲೊಂದು ದಿವ್ಯ ಮೌನ ಅರ್ಥಾತ್ pin drop silence

ಸುಖಾ ಸುಮ್ಮನೇ ಮಾತು ಮುಂದುವರೆಸಿದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಮುಖ ಭಂಗವಾಗಬಹುದು ಎಂದು ನಿರ್ಧರಿಸಿದ ನೆಹರುರವರು ಮರು ಮಾತಿಲ್ಲದೇ, ಹೌದೌದು. ನಿಮ್ಮ ಅಭಿಪ್ರಾಯ ಸರಿಯಾಗಿದ್ದು, ನಾನು ಸಹ ಅದಕ್ಕೆ ಅನುಮೋದಿಸುತ್ತೇನೆ ಎಂದು ಹೇಳುವ ಮೂಲಕ ನಮ್ಮ ಕರ್ನಾಟಕದ ಕೊಡಗಿನ ಹೆಮ್ಮೆಯ ಪುತ್ರ ಮೇಧಾವಿಗಳಾದ ಜನರಲ್ ಕಾರ್ಯಪ್ಪನವರು ಭಾರತೀಯ ಸೇನೆಯ ಮೊದಲ ಜನರಲ್ ಮತ್ತು ರಾಥೋಡ್ ಮೊದಲ ಲೆಫ್ಟಿನೆಂಟ್ ಜನರಲ್ ಆದದ್ದು ಈಗ ಇತಿಹಾಸ.

ಅದಕ್ಕೇ ಹೇಳೋದು ಮಾತು ಬೆಳ್ಳಿ, ಮೌನ ಬಂಗಾರ. ಎಲ್ಲೆಡೆಯೂ ಅಬ್ಬಿರಿದು ಬೊಬ್ಬಿರುವ ಮೂಲಕವೇ ಕೆಲಸ ಕಾರ್ಯಗಳು ನಡೆಯುತ್ತವೆ ಎನ್ನುವುದು ನಿಜವಾಗಿರದೇ, ಕೆಲವೊಮ್ಮೆ ಮೌನವೂ ಸಹಾ ಪ್ರಭಲ ಅಸ್ತ್ರವಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಡಿ ಬಿಡಿಯಾಗಿ ವಿವಿಧ ಸಂಧರ್ಭದಲ್ಲಿ ಓದಿದ್ದ ಈ ಪ್ರಸಂಗಗಳು ಅತ್ಯಂತ ಪ್ರಭಾವಶಾಲಿ ಮತ್ತು ಪ್ರೇರಣಾತ್ಮಕವಾಗಿದ್ದ ಕಾರಣ, ಅವುಗಳ ಭಾವಾನುವಾದಗಳನ್ನು ಒಗ್ಗೂಡಿಸುವ ಸಣ್ಣ ಪ್ರಯತ್ನ ಇದಾಗಿದ್ದು ನಿಮಗೆಲ್ಲರಿಗೂ ಇಷ್ಟವಾದಲ್ಲಿ ಖಂಡಿತವಾಗಿಯೂ ನಿಮ್ಮ ಬಂಧು ಮಿತ್ರರೊಡನೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment