ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು

ಬ್ರಿಟೀಷರು ನಮ್ಮ ಸಂಪೂರ್ಣ ಸಂಪ್ರದಾಯಗಳು, ಸಂಸ್ಕಾರ ಗಳನ್ನು ಹಾಳು ಮಾಡಿ ಇಲ್ಲಿನ ಸಂಪತ್ತೆಲ್ಲವನ್ನೂ ಲೂಟಿ ಮಾಡಿ, ಆಗಸ್ಟ್ 15,, 1947ರಂದು ಭಾರತವನ್ನು ಬಿಟ್ಟು ಹೋಗುವ ಮುನ್ನಾ ನಮ್ಮವರಿಗೆ ಬಿಟ್ಟು ಹೋದದ್ದು, ಇಂಗ್ಲೀಷ್, ಕ್ರೈಸ್ತ ಧರ್ಮ ಮತ್ತು ಕ್ರಿಕೆಟ್. 1983ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಅಚಾನಕ್ಕಾಗಿ ಮೊದಲ ಬಾರಿಗೆ ವಿಶ್ವಕಪ್ ಪಂದ್ಯವನ್ನು ಗೆದ್ದ ಮೇಲಂತೂ ಭಾರತದಲ್ಲಿ ಕ್ರಿಕೆಟ್ ಆಟವು ಒಂದು ರೀತಿಯ ಧರ್ಮದಂತೆ ಆಗಿ ಹೋಗಿ ಉಳಿದೆಲ್ಲಾ ಆಟಗಳನ್ನು ನುಂಗಿ ನೀರು ಕುಡಿದಿದೆ ಎಂದರೂ ತಪ್ಪಾಗದು. 2008 ರಲ್ಲಿ ಭಾರತದಲ್ಲಿ ಆರಂಭವಾಗಿ ನಿರಂತವಾಗಿ 16 ಋತುಗಳು ನಡೆದ ಐಪಿಎಲ್ ಪಂದ್ಯಾವಳಿಗಳೂ ಸಹಾ ಕ್ರಿಕೆಟ್ಟನ್ನು ಮತ್ತೊಂದು ಹಂತಕ್ಕೆ ತೆರೆದುಕೊಂಡು ಹೋಗಿದೆ.

REb_fans1ಆರಂಭದಲ್ಲಿ 8 ತಂಡಗಳಿಂದ ಆರಂಭವಾದ IPL ಇಂದು 10 ತಂಡಗಳೊಂದಿಗೆ ಸುಮಾರು ಎರಡು ತಿಂಗಳುಗಳ ಕಾಲ ಭಾರತವಷ್ಟೇ ಅಲ್ಲದೇ ಇಡೀ ವಿಶ್ವಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳಿಗೆ ಕ್ರಿಕೆಟ್ ಹಬ್ಬದ ರಸದೌತಣವನ್ನು ನೀಡುತ್ತಿದ್ದು, ಬೆಂಗಳೂರು ಮೂಲದ RCB ತಂಡವು ಇದುವರೆವಿಗೂ ಒಂದು ಬಾರಿಯೂ ಪ್ರಶಸ್ತಿಯನ್ನುಪಡೇಯದೇ ಹೋದರೂ, ಪ್ರಪಂಚಾದ್ಯಂತ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದ್ದು ಪ್ರತೀ ಬಾರಿ IPL ಪಂದ್ಯಾವಳಿಗಳು ಆರಂಭವಾದಾಗಲೂ, RCB ಅಭಿಮಾನಿಗಳು ಈ ಸಲ ಕಪ್ ನಮ್ದೇ ಎನ್ನುತ್ತಲೇ ಅತ್ಯಂತ ಉತ್ಸಾಹದಿಂದ ಆರಂಭಿಸುತ್ತಿದ್ದರೂ, ಅಂತಿಮ ಸುತ್ತುಗಳಲ್ಲಿ RCB ತಂಡ ಸೋಲುವ ಮೂಲಕ RCB ಅಭಿಮಾನಿಗಳನ್ನು ನಿರಾಶೆಗೊಳಿಸುತ್ತಿದ್ದದ್ದು ಅತ್ಯಂತ ಬೇಸರದ ಸಂಗತಿಯಾಗಿತ್ತು.

shreyanka5ಅದೃಷ್ಟವಷಾತ್, ಈ ಬಾರಿ 2024ರ ಮಾರ್ಚ್ 17ರಂದು ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ದೆಲ್ಲಿ ಕ್ಯಾಪಿಟಲ್ಸ್ ವಿರುದ್ದ RCB ಮಹಿಳಾ ತಂಡವು ಅದ್ಬುತವಾಗಿ 8 ವಿಕೆಟ್ಗಳ ಭರ್ಜರಿ ವಿಜಯ ಸಾಧಿಸುವ ಮೂಲಕ, ನಿಸ್ಸಂದೇಹವಾಗಿ ಈ ಸಲ ಕಪ್ ನಮ್ದು ಎಂದು ಎದೆ ತಟ್ಟಿಕೊಳ್ಳುವಂತೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು, ತಂಡದ ನಾಯಕಿ ಸ್ಮೃತಿ ಮಂದಾನ, ಆಲ್ರೌಂಡರ್ ಎಲ್ಲೀಸ್ ಪೆರ್ರಿ, ವಿಕೆಟ್ ಕೀಪರ್ ರೀಚಾ ಘೋಘ್ ಅವರುಗಳ ಭರ್ಜರಿ ಬ್ಯಾಟಿಂಗ್ ನಡುವೆಯೂ, ಇನ್ನೂ ಕೇವಲ 22ರ ಹರೆಯದ ಕರ್ನಾಟಕ ಮತ್ತು ಭಾರತದ ಮಹಿಳಾ ಕ್ರಿಕೆಟ್ಟಿನ ಉದಯೋನ್ಮುಖ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಕೊಡುಗೆಯೂ ಅಪಾರವಾಗಿದ್ದು, ಈ ಐಪಿಎಲ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚಿನ ವಿಕೆಟ್ (13) ಗಳಿಸಿ ನೇರಳೇ ಟೋಪಿ ಪ್ರಶಸ್ತಿಯ ಜೊತೆಗೆ ಪಂದ್ಯಾವಳಿಯ ಉದಯೋನ್ಮುಖ ಆಟಗಾರ್ತಿಯಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದು ಆಕೆಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ನೋಡ ಇದೋ ನಿಮಗಾಗಿ.

shreyankaಮೂಲತಃ ಕಲಬುರ್ಗಿಯ ಜೇವರ್ಗಿಯ ಶ್ರೀ ರಾಜೇಶ್ ಪಾಟೀಲ್ ದಂಪತಿಗಳಿಗೆ ಎರಡನೇ ಮಗಳಾಗಿ 31 ಜುಲೈ 2002ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೇಯಾಂಕ, ಬಾಲ್ಯದಿಂದಲೂ ಓದಿಗಿಂತ ಆಟದಲ್ಲೇ ಅತ್ಯಂತ ಚುರುಕಾಗಿದ್ದ ಹುಡುಗಿ. ತಂದೆ ಶ್ರೀ ರಾಜೇಶ್ ಪಾಟೀಲ್ ಅವರು ಜೀವನೋಪಾಯಕ್ಕಾಗಿ ಉದ್ಯಮಿಯಾಗಿದ್ದರೂ ಕ್ರಿಕೆಟ್ ಅವರ ಪ್ರವೃತ್ತಿಯಾಗಿದ್ದು ಅವರೂ ಸಹಾ ಬೆಂಗಳೂರಿನ ಡಿವಿಷನ್ ಕ್ರಿಕಟ್ ಅಲ್ಲದೇ ವಿವಿಧ ಲೀಗ್ ಪಂದ್ಯಾವಳಿಗಳಲ್ಲಿ ಉತ್ತಮ ಬೌಲರ್ ಆಗಿದ್ದವರು. ಹಾಗಾಗಿ ಶ್ರೇಯಾಂಕಳಿಗೆ ಕ್ರಿಕೆಟ್ ಎನ್ನುವುದು ರಕ್ತಗತವಾಗಿ ಬಂದಿದೆ ಎಂದರೂ ತಪ್ಪಾಗದು.

ಬಾಲ್ಯದಲ್ಲಿಯೇ ಉಳಿದ ಹುಡುಗಿಯರಿಗಿಂತ ತುಸು ಎತ್ತರವಾಗಿಯೇ ಇದ್ದ ಶ್ರೇಯಾಂಕ, ನೆರೆ ಹೊರೆಯ ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿದ್ದದ್ದನ್ನು ಗಮನಿಸಿದ ಅವರ ತಂದೆ ಆಕೆಯನ್ನು ತಾವು ಆಡುವ ಪಂದ್ಯಾವಳಿಗೆ ಕರೆದುಕೊಂಡು ಹೋಗುತ್ತಿದ್ದದ್ದಲ್ಲದೇ, ಅವಕಾಶ ಸಿಕ್ಕಾಗಲೆಲ್ಲಾ ಆಕೆಯನ್ನು ತಮ್ಮ ತಂಡದೊಳಗೆ ಸೇರಿಸಿಕೊಳ್ಳುತ್ತಿದ್ದದ್ದು ಆಕೆಯ ಕ್ರಿಕೆಟ್ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಯಿತು. ಕೇವಲ 13 ವರ್ಷದವಳಿದ್ದಾಗಲೇ ತನ್ನ ತಂದೆ ಮತ್ತಿತರೊಂದಿಗೆ ಶಿವಮೊಗ್ಗದಲ್ಲಿ ಆಡಿದ ಪಂದ್ಯಾವಳಿ ಶ್ರೇಯಾಂಕ ರಾಜೇಶ್ ಪಾಟೀಲಳ ದಿಕ್ಕನ್ನೇ ಬದಲಿದಿತು ಎಂದರೂ ಅತಿಶಯವಾಗದು.

shreyanka2ಬೆಂಗಳೂರಿನ ಪ್ರತಿಷ್ಠಿತ ಡೆಲ್ಲಿ ಪಬ್ಲಿಕ್ ಶಾಲೆಗೆ ಸೇರಿದ್ದರೂ, ಶಾಲೆಗೆ ಹೋಗುವುದಕ್ಕಿಂತಲೂ ಕ್ರಿಕೆಟ್ ಮೈದಾನದಲ್ಲಿ ಕಳೆದ ಸಮಯವೇ ಹೆಚ್ಚು. ಆಕೆಯ ಅಕ್ಕ ಭೂಮಿಕಾ ಪಾಟೀಲ್ ಓದಿನಲ್ಲಿ ಅತ್ಯಂತ ಚುರುಕಾಗಿದ್ದು ಇಂಜಿನೀಯರಿಂಗ್ ಮುಗಿಸಿದ್ದರೆ, ಇನ್ನು ಅವಳ ತಮ್ಮ ಆದರ್ಶ ಪಾಟೀಲ್ ಸಹಾ ಕ್ರಿಕೆಟ್ ಆಟಗಾರನಾಗಿ ಸದ್ಯಕ್ಕೆ ಪುದುಚೆರಿ ತಂಡದ ಉದಯೋನ್ಮುಖ ಆಟಗಾರನಾಗಿದ್ದಾನೆ. ಶ್ರೇಯಾಂಕ ಬಲಗೈ ಆಫ್ ಬ್ರೇಕ್ ಬೌಲಿಂಗ್ ಮಾಡುವುದಲ್ಲದೇ, 5-6 ನೇ ಆಟಗಾರ್ತಿಯಾಗಿ ಅಂಕಣಕ್ಕೆ ಇಳಿದು ಪಟ ಪಟನೆ ಬಲವಾಗಿ ಚಂಡನ್ನು ಮೈದಾನದ ಹೊರೆಗೆ ಹೊಡೆಯುವ ಸಾಮರ್ಥ್ಯವುಳ್ಳ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾಳೆ.

arjundevಹೀಗೆ ವಿವಿಧ ಪಂದ್ಯಾವಳಿಗಳಲ್ಲಿು ಉತ್ತಮ ಪ್ರದರ್ಶನ ನೀಡುತ್ತಿದ್ದ ಶ್ರೇಯಾಂಕಳಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ NICE ಕ್ರಿಕೆಟ್ ಸಂಸ್ಥೆ ಮುಖ್ಯ ಕೋಚ್ ಅರ್ಜುನ್ ದೇವ್ ಅಕೆಯನ್ನು ಉತ್ತಮ ಆಟಗಾರ್ತಿಯನ್ನಾಗಿಸುವ ಸಂಪೂರ್ಣ ಹೊಣೆಯನ್ನು ಹೊತ್ತಿಕೊಂಡಿದ್ದಲ್ಲದೇ, ಅದುವರೆಗೂ ಉತ್ತಮ ಬೌಲರ್ ಆಗಿ ಕಾಟಾಚಾರಕ್ಕಾಗಿ 10 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದ ಶ್ರೇಯಾಂಕಳಿಗೆ ಉತ್ತಮವಾದ ತರಭೇತಿಯನ್ನು ನೀಡಿದ್ದಲ್ಲದೇ ಆಕೆಗೆ ಧೈರ್ಯವನ್ನು ತುಂಬಿ 5-6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಿದಾಗ, ಶ್ರೇಯಾಂಕಳಿಗೂ ತನ್ನ ತನ್ನ ಬ್ಯಾಟಿಂಗ್ ಬಗ್ಗೆ ನಂಬಿಕೆ ಬಂದು ಗುರುಗಳ ಆಣತಿಯಂತೆ ಆಡಿದ ಪರಿಣಾಮ ಪಂದ್ಯದಿಂದ ಪಂದ್ಯಕ್ಕೆ ಗಣನೀಯವಾಗಿ ಸುಧಾರಿಸಿದ್ದಲ್ಲದೇ,ಉತ್ತಮ ಮೊತ್ತಗಳನ್ನು ಗಳಿಸುತ್ತಾ, ಅಂತಿಮವಾಗಿ ತನ್ನ ಮೊದಲ ಶತಕವನ್ನೂ ಗಳಿಸುವ ಮೂಲಕ ಸಂಭ್ರಮಿಸಿದಳು.

shreyanka4ಈ ಎಲ್ಲಾ ಸಾಧನೆಗಳಿಂದ ಆಕೆ 16 ವರ್ಷದೊಳಗಿನವರ ಕರ್ನಾಟಕ ತಂಡದ ನಾಯಕಿಯಾಗಿ ಆಯ್ಕೆಯಾದಾಗ, ಅಲ್ಲಿ ಆಕೆಗೆ ಮಮತಾ ಮಾಬೆನ್ ಅವರು ಕೋಚ್ ಆಗಿ ದೊರೆತ ನಂತರ ಆಕೆ ಪರಿಪೂರ್ಣ ಕ್ರಿಕೆಟ್ ಆಟಗಾರ್ತಿಯಾಗುವುದರಲ್ಲಿ ಸಹಕಾರಿಯಾಯಿತು. ಸಣ್ಣ ವಯಸ್ಸಿನಲ್ಲಿಯೇ ವಿವಿಧ ಕಾರ್ಪೊರೇಟ್ ಪಂದ್ಯಗಳು ಮತ್ತು ಲೀಗ್ ಪಂದ್ಯಗಳಲ್ಲಿ ಕೆಲವು ಉತ್ತಮ ಬೌಲಿಂಗ್ ಪ್ರದರ್ಶನ ಮಾಡುತ್ತಿದ್ದ ಶ್ರೇಯಾಂಕ, ಅದೊಮ್ಮೆ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ವಿರುದ್ಧ ರಾಜಾಜಿನಗರ ಕ್ರಿಕೆಟರ್ಸ್ ಪರವಾಗಿ ಆಡಿದ ಪಂದ್ಯದಲ್ಲಿ ಕೇವಲ 4 ರನ್ಗಳಿಗೆ 6 ವಿಕೆಟ್ಗಳನ್ನು ಪಡೆದರೆ ಮತ್ತೊಂದು ಕಾರ್ಪೊರೇಟ್ ಪಂದ್ಯದಲ್ಲಿ, 24 ರನ್‌ಗಳಿಗೆ 9 ವಿಕೆಟ್‌ಗಳನ್ನು ಪಡೆಯುವ ಮೂಲಕ ಪ್ರಖ್ಯಾತಿ ಹೊಂದಿದ್ದಲ್ಲದೇ, ಈ ಸಾಧನೆಗಾಗಿ, 2022 ರಲ್ಲಿ ಕ್ರಿಚೆರೋಸ್ ಸ್ಪೆಲ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನಳಾದಳು.

2019ರ ಅಕ್ಟೋಬರ್ ನಲ್ಲಿ ಪಾಂಡಿಚೇರಿ ವಿರುದ್ಧ ಕರ್ನಾಟಕ ತಂಡಕ್ಕೆ ಪಾದಾರ್ಪಣೆ ಮಾಡಿ, ಎರಡು ಓವರ್ಗಳಲ್ಲಿ 21ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಸಾಧಾರಣ ಆರಂಭವನ್ನು ಪಡೆದರೂ, ನಂತರ ಪಂದ್ಯದಿಂದ ಪಂದ್ಯಕ್ಕೆ ಉತ್ತಮವಾದ ಪ್ರದರ್ಶನ ನೀಡುವ ಮೂಲಕ ತಂಡದ ಖಾಯಂ ಆಟಗಾರ್ತಿಯಾಗಿ, 2022ರ ನವೆಂಬರ್ ನಲ್ಲಿ ದಕ್ಷಿಣ ವಲಯದ ತಂಡದ ಪರವಾಗಿ ಈಶಾನ್ಯ ವಲಯದ ವಿರುದ್ಧ ನಾಲ್ಕು ಓವರ್ಗಳಲ್ಲಿ 7ರನ್ನುಗಳನ್ನು ನೀಡಿ 4 ವಿಕೆಟ್ ಪಡೆದು ತಂಡದ ಗೆಲುವಿಗೆ ಪಾತ್ರರಾಗಿದ್ದಲ್ಲದೇ, 2023ರ ಜನವರಿ ಯಲ್ಲಿ ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ 73 ರನ್‌ ಗಳಿಸುವ ಮೂಲಕ ಲಿಸ್ಟ್ ಎ ಪಂದ್ಯಾವಳಿಯಲ್ಲಿ ಮೊದಲ ಅರ್ಧಶತಕವನ್ನು ದಾಖಲಿಸಿದಳು.

shreyanka6ಇದೇ ಸಾಧನೆಯಿಂದಾಗಿ 2023 ರ ಫೆಬ್ರವರಿಯಲ್ಲಿ ಆರಂಭವಾದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಲು ಆಯ್ಕೆಯಾಗಿ ತಾನಾಡಿದ ಏಳು ಪಂದ್ಯಗಳಲ್ಲಿ 32.00 ಸರಾಸರಿಯಲ್ಲಿ ಆರು ವಿಕೆಟ್ಗಳನ್ನು ಪಡೆಯುವ ಮೂಲಕ ಸಾಧಾರಣ ಆರಂಭವನ್ನು ಪಡೆದಳು.

Shreyanka-Patil-with-Virat-Kohliಮೊದಲ ಮೂರ್ನಾಲ್ಕು ಪಂದ್ಯಗಳನ್ನು ಸತತವಾಗಿ ಸೋತಿದ್ದ RCB ಮಹಿಳಾ ತಂಡದ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಪುರುಷರ RCB ತಂಡದ ಹೆಮ್ಮಯ ವಿಶ್ವವಿಖ್ಯಾತ ಆಟಗಾರ ವಿರಾಟ್ ಕೋಹ್ಲಿ ತಂಡವನ್ನು ಭೇಟಿ ಮಾಡಿ ಎಲ್ಲರಿಗೂ ಮಾನಸಿಕವಾಗಿ ಸ್ಥೈರ್ಯ ಮತ್ತು ದೈರ್ಯವನ್ನು ತುಂಬುವ ಸಮಯದಲ್ಲಿ ವಯಕ್ತಿಯವಾಗಿ ಕೊಹ್ಲಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ ನಂತರವಂತೂ ಶ್ರೇಯಾಂಕಳ ಆಟದಲ್ಲಿ ಭಾರೀ ಬದಲಾವಣೆ ಆಯಿತು.

carribian2023ರ ಆಗಸ್ಟ್ ತಿಂಗಳಿನಲ್ಲಿ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಂಡದ ಮಾರ್ಗದರ್ಶಕಿ ಮತ್ತು ಆಟಗಾರ್ತಿಯಾಗಿ ಆಡಲು ಆವಕಾಶ ಪಡೆದ ಮೊದಲ ಭಾರತೀಯ ಆಟಗಾರ್ತಿಯಾಗಿ, ಗಯಾನಾ ಅಮೆಜಾನ್ ವಾರಿಯರ್ಸ್ ಪರವಾಗಿ ಆಟವಾಡಿ ಅಲ್ಲಿಯೂ ಸಹಾ 11.66 ರ ಸರಾಸರಿಯಲ್ಲಿ 9 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಪ್ರಮುಖ ವಿಕೆಟ್-ಟೇಕರ್ ಆದಳು. ಅದೇ 2023ರ ಡಿಸೆಂಬರ್ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿ, ತನ್ನ ಚೊಚ್ಚಲ್ಲ T20 ಅಂತರಾಷ್ಟ್ರೀಯ ಸರಣಿಯ ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ 2/44 ಗಳಿಸಿದರೆ ನಂತರ, 30 ಡಿಸೆಂಬರ್ 2023 ರಂದು ಆಸ್ಟ್ರೇಲಿಯಾ ವಿರುದ್ಧದ ODI ಸರಣಿಯಲ್ಲಿ ಭಾರತದ ಪರ ತನ್ನ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದಳು.

shreyanka7ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದ ಶ್ರೇಯಾಂಕಳ ಮೇಲೆ ಸಹಜವಾಗಿ 2024 ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹೆಚ್ಚಿನ ಭರವಸೆ ಮೂಡಿಸಿದ್ದಳು. ತನ್ನ ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಜ್ ವಿರುದ್ಧ 3 ಓವರ್‌ಗಳಲ್ಲಿ ಒಂದೂ ವಿಕೆಟ್ ಪಡೆಯದೆ 32 ರನ್‌ಗಳನ್ನು ಕೊಡುವ ಮೂಲಕ ದುಬಾರಿ ಬೌಲರ್ ಆದರೆ, ಇನ್ನು ಗುಜರಾತ್ ಜೈಂಟ್ಸ್ ವಿರುದ್ಧ ಎರಡನೇ ಪಂದ್ಯದಲ್ಲಿ ಸಿಕ್ಕ ಒಂದೇ ಓವರ್ ನಲ್ಲಿ 13 ರನ್ ಬಿಟ್ಟುಕೊಟ್ಟರೆ, ಅಲ್ಲದೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಹ 3 ಓವರ್‌ಗಳಲ್ಲಿ 40 ರನ್‌ಗಳನ್ನು ನೀಡುವ ಮೂಲಕ ಅರೇ ಇದೇನಿದು ಏನಾಯಿತು ಈ ಹುಡುಗಿಗೇ? ಎಂದು ಮಮ್ಮಲ ಮರುಗಿದ ಅಭಿಮಾನಿಗಳಿಗೇನೂ ಕಡಿಮೆ ಇರಲಿಲ್ಲ.

shreyanka8ಇದೇ ಸಮಯದಲ್ಲಿ ಕೈಗೆ ಪೆಟ್ಟು ಮಾಡಿಕೊಂಡು ಎರಡು ಪಂದ್ಯಗಳಿಗೆ ತಂಡದಿಂದ ಹೊರಗೆ ಉಳಿಯಬೇಕಾದಂತಹ ಪರಿಸ್ಥಿತಿಯಾಗಿ, ಶ್ರೇಯಾಂಕ ಪಾಟೀಲಳಿಗೆ ಇನ್ನು ಅವಕಾಶ ಸಿಗುವುದು ಕಷ್ಟ ಎಂದೇ ಎಲ್ಲರೂ ಭಾವಿಸಿದ್ದಾಗಲೇ, ಬೂದಿಯಿಂದ ಎದ್ದು ಬರುವ ಫೀನಿಕ್ಸ್ ಪಕ್ಷಿಯಂತೆ ಪಂದ್ಯಾವಳಿಯ ದ್ವಿತಿಯಾರ್ಧದಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ ಈ ಕನ್ನಡತಿ, ಮುಂಬೈ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದ ಮ್ಯಾಥ್ಯುಸ್ ಮತ್ತು ಪಂದ್ಯವನ್ನೇ ಬದಲಿಸಬಲ್ಲ ಭರ್ಜರಿ ಹೊಡೆತಗಾರ್ತಿ ಹರ್ಮನ್‌ಪ್ರೀತ್ ಕೌರ್ ವಿಕೆಟ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಗೆಲ್ಲುವ ಕುದುರೆ ಎನಿಸಿಕೊಂಡಿದ್ದ ಮುಂಬೈ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಅಂತಿಮವಾಗಿ ಇಡೀ ಪಂದ್ಯಾವಳಿಯಲ್ಲಿ ಆಡಿದ ಒಟ್ಟಿ 8 ಪಂದ್ಯಗಳಲ್ಲಿ ಬರೋಬ್ಬರಿ 13 ವಿಕೆಟ್ ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಆಡುತ್ತಿದ್ದ ಡೆಲ್ಲಿ ತಂಡವನ್ನು ಕಟ್ಟಿ ಹಾಕಿ ಕೇವಲ 12 ರನ್ನುಗಳನ್ನು ನೀಡಿ 4 ವಿಕೆಟ್ಗಳನ್ನು ಕಬಳಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ್ದಲ್ಲದೇ, ಪಂದ್ಯಾವಳಿಯಲ್ಲಿ ಅತ್ಯಂತ ಹೆಚ್ಚಿನ ವಿಕೆಟ್ ಪಡೆದು ಪರ್ಪಲ್​ ಕ್ಯಾಪ್​ ಪಡೆದು ಮಿಂಚುವ ಮೂಲಕ RCB ಪ್ರಶಸ್ತಿಯನ್ನು ಪಡೆಯುವುದರಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದಲ್ಲದೇ, RCB ಪ್ರಶಸ್ತಿಯ ಬರವನ್ನು ನೀಗಿಸಿ ಕೋಟಿ ಕೋಟಿ ಕನ್ನಡಿಗರ ಹೃದಯ ಗೆದ್ದಿದ್ದಾಳೆ.

shreyanka3ವಯಸ್ಸಿಗೆ ಮೀರಿದ ಪ್ರತಿಭೆಯನ್ನು ಹೊಂದಿರುವ, ಯಾವುದೇ ಹಮ್ಮು ಬಿಮ್ಮು ಇಲ್ಲದೇ, ಪಕ್ಕದ ಮನೆಯ ಹುಡುಗಿಯೇನೋ ಎನ್ನುವಂತೆ ಅರಳು ಹುರಿದಂತ ಪಟ ಪಟನೇ ಮಾತನಾಡುವ, ಪೀಜ್ಜಾ ಬರ್ಗರ್ಗಿಂತ ನಮ್ಮ ಖಡಕ್ ರೊಟ್ಟಿ, ಬದ್ನೇಕಾಯ್ ಎಣ್ಗಾಯ್ ಪಲ್ಯ, ಶೇಂಗಾ ಚಟ್ನಿಯೇ ನನಗೆ ಅತ್ಯಂತ ಪ್ರಿಯಾ! ಎಂದು ನಿರ್ಭಿಡೆಯಾಗಿ ಹೇಳುತ್ತಲೇ, ಎಲ್ಲರ ಮನಸೆಳೆಯುವ ಕನ್ನಡದ ಕುವರಿ ಶ್ರೇಯಾಂಕಾ ಪಾಟೀಲ್​ ಮುಂದಿನ ದಿನಗಳಲ್ಲಿ RCB, ಕರ್ನಾಟಕ ಮತ್ತು ಭಾರತ ಮಹಿಳಾ ತಂಡದಲ್ಲಿ ಖಂಡಿತವಾಗಿಯೂ ಹೊಸ ಅಲೆಯನ್ನು ಸೃಷ್ಟಿಸುವ ಸೂಚನೆ ನೀಡಿದ್ದು, ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದ ಮತ್ತು ಏಳು ಕೋಟಿ ಕನ್ನಡಿಗರ ಹಾರೈಕೆಗಳಿಂದ ಆಕೆ ಇನ್ನು ಹೆಚ್ಚಿನ ರೀತಿಯಲ್ಲಿ ಕರ್ನಾಟಕ ಮತ್ತು ಭಾರತ ತಂಡದ ಕೀರ್ತಿಯನ್ನು ಎತ್ತರೆತ್ತರಕ್ಕೆ ಏರಿಸಲಿ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment