ಮಾರ್ಚ್ 30, ವಿಶ್ವ ಇಡ್ಲಿ ದಿನ

idly2ಇಡ್ಲಿ ಎನ್ನುವ ಸಾಂಪ್ರದಾಯಿಕ ತಿಂಡಿಯು ಇಂದು, ಕೇವಲ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಅವಿಭಜಿತ ರಾಜ್ಯದ ಬೆಳಗಿನ ಉಪಹಾರವಾಗಿಯಷ್ಟೇ ಉಳಿಯದೇ, ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆದು ವಿಶ್ವವಿಖ್ಯಾತವಾಗಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಸಹಾ ಇಡ್ಲಿ ಸಾಂಬಾರ್ ಚೆಟ್ನಿ ಸಿಗುವಂತಾಗಿದ್ದು ಎಲ್ಲರ ಮೆಚ್ಚಿನ ಖಾದ್ಯವಾಗಿದೆ. ಹಾಗಾಗಿಯೇ ಅನೇಕರು ಇಡ್ಲಿಯನ್ನು ತಿಂಡಿಗಳ ರಾಜ ಎಂದು ಕರೆದರೆ ತಪ್ಪಾಗದು. ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ನೆನಸಿ ಅದನ್ನು ಹದವಾಗಿ ರುಬ್ಬಿ ಒಂದು ರಾತ್ರಿ ಇಡೀ ಹಾಗೇ ಬಿಟ್ಟಲ್ಲಿ ನೈಸರ್ಗಿಕವಾಗಿ ಈಸ್ಟ್ ಉತ್ಪತ್ತಿಯಾಗಿ ಹುದುಗು ಬಂದು ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಬೇಕಾದ ಆಕಾರದ ಬಟ್ಟಲು/ತಟ್ಟೆಗಳಲ್ಲಿ ಹಾಕಿ ಇಡ್ಲೀ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿದರೆ ರುಚಿ ರುಚಿಯಾದ, ಅತ್ಯಂತ ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿರುವ ಮತ್ತು ಅಷ್ಟೇ ಆರೋಗ್ಯಕರವಾದ ಇಡ್ಲಿಗಳು ಸವಿಯಲು ಸಿದ್ಧವಾಗಿರುತ್ತದೆ. ಈ ಇಡ್ಲಿಗಳನ್ನು ಅವರವರ ರುಚಿ ಮತ್ತು ಅಭಿರುಚಿಗೆ ತಕ್ಕಂತೆ, ಬಗೆ ಬಗೆಯ ಚಟ್ನಿ, ಚಟ್ನಿ ಪುಡಿ, ಬೆಣ್ಣೆ, ಸಾಂಬಾರ್ ಇಲ್ಲವೇ ಗೊಜ್ಜುಗಳೊಂದಿಗೆ ತಿನ್ನುವ ಆನಂದವನ್ನು ಇಲ್ಲಿ ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಆನಂದ.

ಇಂತಹ ಇಡ್ಲಿಗಳಿಗಳೂ ಈಗ ವಿಶ್ವ ಮಾನ್ಯತೆಯನ್ನು ಪಡೆದಿದ್ದು ಪ್ರತೀ ವರ್ಷ ಮಾರ್ಚ್ 30ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸುವ ಹಿಂದೆಯೂ ಒಂದು ಅದ್ಭುತವಾದ ರೋಚಕತೆ ಇದೆ. ತಮಿಳುನಾಡಿನ ಕೊಯಂಬತ್ತೂರು ಮೂಲದ ಕೇವಲ ಎಂಟನೇ ತರಗತಿಯವರೆಗೆ ಮಾತ್ರ ಓದಿದ್ದ ಇನಿಯವನ್ ಜೀವನೋಪಾಯಕ್ಕಾಗಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾಗ, ಪ್ರತಿದಿನ ಬೆಳಿಗ್ಗೆ ಇಲ್ಲವೇ ಸಂಜೆ ಹಸಿವಾದಾಗ ರಸ್ತೆಯ ಬದಿಯಲ್ಲಿ ಇಡ್ಲಿಗಳನ್ನು ತಯಾರಿಸಿ ಮಾರುತ್ತಿದ್ದ ಮಹಿಳೆಯೊಬ್ಬರ ಬಳಿ ಇಡ್ಲಿಗಳನ್ನು ಖರೀದಿಸಿ ತಿನ್ನುವ ಮೂಲಕ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿರುತ್ತಾರೆ, ಹಾಗೆ ಪರಿಚವಾದ ಆ ಮಹಿಳೆಯ ಹತ್ತಿರವೇ ಇಡ್ಲಿ ಮಾಡುವುದನ್ನು ಕಲಿತ ಇನಿಯವನ್ ನಂತರ ದಿನಗಳಲ್ಲಿ ಅದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಲ್ಲದೇ, ಇಡ್ಲಿಗಳಲ್ಲೇ ಸಾವಿರಾರು ರೀತಿಯ ಆವಿಷ್ಕಾರಗಳನ್ನು ಮಾಡುವಷ್ಟು ಬೆಳೆದದ್ದು ನಿಜಕ್ಕೂ ಅದ್ಭುತವೇ ಸರಿ. ಕೇವಲ ಉದ್ದಿನ ಬೇಳೆ ಮತ್ತು ಅಕ್ಕಿಯಷ್ಟನ್ನೇ ಬಳಸಿ ತಯಾರಿಸುವ ಇಡ್ಲಿಗಳನ್ನೇ ವಿವಿಧ ರೀತಿಯ ಪದಾರ್ಥಗಳನ್ನು ಬಳಸಿಕೊಂಡು ವಿವಿಧ ರೀತಿಯ ಬಣ್ಣದ ಹಾಗು ರುಚಿಯ ಇಡ್ಲಿಗಳನ್ನು ತಯಾರಿಸಲು ವಿವಿಧ ರೀತಿಯ ಪ್ರಯೋಗಗಳನ್ನು ಮಾಡಲು ಮುಂದಾದ ಇನಿಯವನ್, ಇದುವರೆವಿಗೂ ಸುಮಾರು 2000 ವಿಧದ ಇಡ್ಲಿಗಳನ್ನು ತಯಾರಿಸಿ ದಾಖಲೆ ಸೃಷ್ಟಿಸಿದ್ದನ್ನು ಗಮನಿಸಿದ ಅಮೆರಿಕದ ವಿವಿಯೊಂದು ಅವರಿಗೆ ಗೌರವ ಡಾಕ್ಟರೇಟ್‌ನ್ನೂ ನೀಡಿದೆ.

iniyvan2013ರಲ್ಲಿ ಸುಮಾರು 75 ಕೆಜಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಬಳಸಿಕೊಂಡು ಸುಮಾರು 128 ಕೆಜಿ ತೂಕದ ಇಡ್ಲಿಯೊಂದನ್ನು ತಯಾರಿಸಿ ಗಿನ್ನೆಸ್ ದಾಖಲೆ ಮಾಡಿದ ನಂತರ ಇನಿಯವನ್ ವಿಶ್ವಾದ್ಯಂತ ಪ್ರಖ್ಯಾತರಾಗಿ ಹೋದರು. ಇಡ್ಲಿಗಳ ಕುರಿತಾದ ಇನಿಯವನ್ ಅವರ ವಿಶೇಷ ಪ್ರಯೋಗಗಳನ್ನು ಗುರುತಿಸಿ, ಆತನ ಸಾಧನೆಯನ್ನು ಗೌರವಿಸುವ ಸಲುವಾಗಿ 2015ರಲ್ಲಿ ಅವರ ಹುಟ್ಟುಹಬ್ಬವಾದ ಮಾರ್ಚ್ 30ನೇ ತಾರೀಖಿನಂದು ವಿಶ್ವ ಇಡ್ಲಿ ದಿನ ಎಂದು ಆಚರಿಸುವ ನಿರ್ಧಾರವನ್ನು ತಮಿಳ್ನಾಡು ಕೇಟರಿಂಗ್ ಎಂಪ್ಲಾಯೀಸ್ ಯೂನಿಯನ್ ಪ್ರೆಸಿಡೆಂಟ್ ಎಂ.ಜಿ ರಾಜಾಮಣಿ ಘೋಷಿಸುವುದರ ಮೂಲಕ ವಿಶ್ವ ಇಡ್ಲಿ ದಿನ ರೂಢಿಗೆ ಬಂದಿದೆ

idliesಇಂತಹ ವಿಶ್ವಮಾನ್ಯ ಖಾದ್ಯವಾದ ಇಡ್ಲಿಯನ್ನು ಎಲ್ಲಿ? ಮತ್ತು ಯಾರು? ಕಂಡು ಹಿಡಿದರು? ಎಂಬುದರ ಕುರಿತಾಗಿ ಅನೇಕ ಜಿಜ್ಞಾಸೆಗಳು ಇದ್ದು, ಕರ್ನಾಟಕ, ತಮಿಳುನಾಡು, ಗುಜರಾತ್ ಅಷ್ಟೇ ಅಲ್ಲದೇ ಅನೇಕ ವಿದೇಶಿಗರೂ ಸಹಾ ಇದು ನಮ್ಮ ಅವಿಷ್ಕಾರ ಎಂದು ಹೇಳಿಕೊಳ್ಳುತ್ತಾರೆ. ಕ್ರಿ.ಶ. 920ರಲ್ಲಿ ಕನ್ನಡ ಭಾಷೆಯಲ್ಲಿ ಶಿವಕೋಟಿ ಆಚಾರ್ಯರು ಬರೆದ ವಡ್ಡರಾಧನೆ ಎಂಬ ಕೃತಿಯಲ್ಲಿ ಮತ್ತು ಕ್ರಿ.ಶ. 1130ರಲ್ಲಿ ಪ್ರಕಟವಾದ ಸಂಸ್ಕೃತ ಕೃತಿ ಮಾನಸೊಲ್ಲಾಸದಲ್ಲಿಯೂ ಸಹಾ ಇಡ್ಲಿ ಬಗ್ಗೆ ಉಲ್ಲೇಖವಿರುವ ಕಾರಣ ಮತ್ತು ಕರ್ನಾಟಕದ ಮನೆಮನೆಗಳಲ್ಲಿ ಇಡ್ಲಿ ಸಾಂಪ್ರದಾಯಕ ತಿಂಡಿಯಾಗಿರುವ ಕಾರಣ ಇದು ಕರ್ನಾಟಕದ ಕೊಡೆಗೆ ಎಂದು ಕೊಂಡರೆ, 17ನೇ ಶತಮಾನದಲ್ಲಿನ ತಮಿಳು ಕೃತಿಗಳಲ್ಲಿಯೂ ಇಡ್ಲಿಯ ಬಗ್ಗೆ ವ್ಯಾಖ್ಯಾನಗಳಿದ್ದು, ತಮಿಳುನಾಡಿನಲ್ಲಿಯೂ ಇಡ್ಲಿ ಕೇವಲ ಬೆಳಗಿನ ಉಪಹಾರವಷ್ಟೇ ಅಲ್ಲದೇ ಸಂಜೆ/ರಾತ್ರಿಯ ಉಪಹಾರ/ಊಟದಲ್ಲಿ ವ್ಯಾಪಕವಾಗಿ ಬಳಸುವ ಕಾರಣ ಇಡ್ಲಿ ನಮ್ಮ ಆವಿಷ್ಕಾರ ಎನ್ನುವುದು ತಮಿಳಿಗರ ವಾದವಾಗಿದೆ.

idly6ಇನ್ನು 10 ಮತ್ತು 12 ನೇ ಶತಮಾನದಲ್ಲಿ ಸೌರಾಷ್ಟ್ರದಿಂದ ದಕ್ಷಿಣ ಭಾರತಕ್ಕೆ ವಲಸೆ ಬಂದವರು ಇಡ್ಲಿಯನ್ನು ದಕ್ಷಿಣ ಭಾರತೀಯರಿಗೆ ಪರಿಚಯಿಸಿದ್ದರು ಎಂದು ಹೇಳಲಾಗುತ್ತಿದ್ದು ಅದಕ್ಕೆ ಅವರು ನೀಡುವ ಕಾರಣವೂ ಸಹಾ ವಿಶೇಷವಾಗಿದೆ. ಅವರುಗಳು ಇಡ್ಡ ಎಂಬ ಹೆಸರಿನಲ್ಲಿ ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ನೆನೆಸಿ ರುಬ್ಬಿದ ಹಿಟ್ಟನ್ನು ಆವಿಯಲ್ಲಿ ಬೇಯಿಸುವ ತಿಂಡಿಯನ್ನು ಮಾಡುವ ಕಾರಣ ಇಡ್ಲಿ ಎನ್ನುವುದು ಗುಜರಾತ್ ಮೂಲದ್ದು ಎನ್ನುವುದು ಅವರ ವಾದವಾಗಿದೆ. ಇನ್ನು ಕರ್ನಾಟಕದ ಪ್ರಸಿದ್ಧ ಆಹಾರ ವಿಜ್ಞಾನಿ, ಪೌಷ್ಟಿಕತಜ್ಞ ಮತ್ತು ಆಹಾರ ಇತಿಹಾಸಕಾರರಾದ ಕೆ.ಟಿ.ಆಚಾರ್ಯ ಅವರ ಪ್ರಕಾರ, ಹಿಂದಿನ ದಿನ ರಾತ್ರಿ ಹಿಟ್ಟನ್ನು ತಯಾರಿಸಿ ಅದು ಮಾರನೆಯ ದಿನ ಹುದುವಿಕೆಯಾದ(fermentation) ನಂತರ ಆವಿಯಲ್ಲಿ ಬೇಯಿಸುವ ಖ್ಯಾದ್ಯವನ್ನು ಕೆಡ್ಲಿ ಅಥವಾ ಕೇದಾರಿ ಎಂಬ ಹೆಸರಿನಲ್ಲಿ ಇಂಡೋನೇಷ್ಯಾದಲ್ಲಿ 7 ರಿಂದ 12 ನೇ ಶತಮಾನದದಲ್ಲೇ ಬಳಸುತ್ತಿದ್ದ ಕಾರಣ, ಇಡ್ಲಿ ಇಂಡೋನೇಷ್ಯಾದಲ್ಲಿ ಆರಂಭವಾಯಿತು ಎನ್ನಲಾಗುತ್ತದೆ. ಒಟ್ಟಿನಲ್ಲಿ success has many fathers while failure is an orphan ಎನ್ನುವ ಆಂಗ್ಲ ನಾಣ್ಣುಡಿಯಂತೆ ಅನೇಕರು ಇಡ್ಲಿಯ ಅವಿಷ್ಕಾರದ ಹಕ್ಕನ್ನು ಪಡೆದುಕೊಳ್ಳಲು ಮುಂದಾಗಿರುವುದು ಸೋಜಿಗವೆನಿಸುತ್ತದೆ.

idli5ಯಾರು ಏನೇ ಹೇಳಿದರೂ 7ನೇ ಶತಮಾನದಿಂದಲೂ ಕರ್ನಾಟಕದಲ್ಲಿ ಇಡ್ಲಿಯನ್ನು ತಯಾರಿಸುತ್ತಿದ್ದರು ಎಂಬುವುದಕ್ಕೆ ದಾಖಲೆ ಇದ್ದು ಕ್ರಿ.ಶ.1025ರಲ್ಲಿ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ, ರುಬ್ಬಿ, ಮೆಣಸು, ಕೊತ್ತಂಬರಿ, ಇಂಗು ಮೊದಲಾದವನ್ನು ಸೇರಿಸಿ ಹಿಟ್ಟನ್ನು ಸಿದ್ಧ ಪಡಿಸುತ್ತಿದ್ದರು ಎಂಬುದಕ್ಕೂ ಸೂಕ್ತವಾದ ದಾಖಲೆ ಇದೆ. ಅದೇ ರೀತಿಯಲ್ಲಿ ಕ್ರಿ.ಶ. 1508 ರಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ (ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸ್ ಅವರ ಹುಟ್ಟೂರು) ರಾಜನಾಗಿದ್ದ ಮಂಗರಸರ ಅಡುಗೆಯ ಕುರಿತಾದ ಸೂಪಶಾಸ್ತ್ರ ಎಂಬ ಕೃತಿಯಲ್ಲಿಯೂ ಸಹಾ ವಿವಿಧ ಆಹಾರದ ಮಹತ್ವದ ಬಗ್ಗೆ ಅಪರೂಪದ ಮಾಹಿತಿಗಳಿದ್ದು ಅದರಲ್ಲಿಯೂ ಸಹಾ ಇಡ್ಲಿಯ ಬಗ್ಗೆ ಪ್ರಸ್ತಾಪಿಸಲಾಗಿದೆ.

uddinakadubuಇನ್ನು ನಮ್ಮ  ನಾಗರಪಂಚಮಿಯ ದಿನ ಗಂಡು ಮಕ್ಕಳು ಹೊಸಿಲ ಮೇಲೆ ಬಂಡಾರ ಒಡೆಯುವಾಗಲೂ ಕಡಲೇ ಬೇಳೆ, ಜೀರಿಗೆ, ಮೆಣಸು ಮತ್ತು ತೆಂಗಿನ ಕಾಯಿಯಚೂರುಗಳನ್ನೊಳಗೊಂಡ ಉದ್ದಿನ ಕಡುಬು ತಯಾರಿಸುವುದು ನಮ್ಮ ಸಂಪ್ರದಾಯವಾಗಿದೆ. ಇನ್ನು ಮಲೆನಾಡಿನ ಕಡೆಯಲ್ಲಿ, ಅರಿಶಿನದ ಎಲೆ, ಬಾಳೇ ಎಲೆಯನ್ನು ಬಳಸಿಕೊಂಡು ಇಲ್ಲವೇ ಹಲಸಿನ ಎಲೆಯಲೆಗಳನ್ನು ಬಳಸಿಕೊಂಡು ಉದ್ದಿನ ಕಡುಬು ತಯಾರಿಸುವುದು ಸಾವಿರಾರು ವರ್ಷಗಳಿಂದಲೂ ರೂಢಿಯಲ್ಲಿದೆ.

rava_idlyಇನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ, ಇಡ್ಲಿಯಲ್ಲಿ ಬಳಸುವ ಪ್ರಮುಖ ವಸ್ತುವಾದ ಅಕ್ಕಿಯ ಆಮದು ಕಡಿಮೆಯಾಗಿ ಅಕ್ಕಿಯ ಬಳಕೆಯ ಮೇಲೆ ಸರ್ಕಾರವೇ ನಿರ್ಭಂಧ ಹೇರಿದಾಗ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ಸರಣಿ ಮಾವಳ್ಳಿ ಟಿಫಿನ್ ರೂಮ್ಸ್ (MTR)ನ ಮಾಲಿಕರರಾದ ಶ್ರೀ ಮಯ್ಯಾರವರು ಅಕ್ಕಿಯ ಬದಲು ರವೆ ಬಳಸಿ ಇಡ್ಲಿ ಮತ್ತಷ್ಟು ಮೃದುವಾದ ಮತ್ತು ಅಷ್ಟೇ ರುಚಿಕರವಾದ ರವೇ ಇಡ್ಲಿಯನ್ನು ಅವಿಷ್ಕರಿಸಿ, ರವೇ ಇಡ್ಲಿ, ಸಾಗು ಮತ್ತು ಚೆಟ್ನಿ, ಅದರ ಮೇಲೊಂದು ಚಮಚ ತುಪ್ಪಾ ಇಲ್ಲವೇ ಬೆಣ್ಣೆ ಯೊಂದಿಗೆ ವಿಶೇಷ ತಿಂಡಿಯನ್ನು ಕಂಡು ಹಿಡಿದ ಕಾರಣ ಇಡ್ಲಿಯ ಆವಿಷ್ಕಾರದ ಸಂಪೂರ್ಣ ಹಕ್ಕು ಕನ್ನಡಿಗರಿಗೇ ಸೇರಬೇಕು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ ಮತ್ತು ವಾದವಾಗಿದೆ.

idlie4ತ್ತೀಚಿನ ದಿನಗಳಲ್ಲಂತೂ ಇಡ್ಲಿ ತಯಾರಿಸುವುದರಲ್ಲಿ ಹೆಚ್ಚು ಹೆಚ್ಚು ಪ್ರಯೋಗಗಳು ನಡೆದು ಇಂದು ಇಡ್ಲಿಗಳು ತರೇಹವಾರಿ ರೂಪಗಳಲ್ಲಿ ಸಾವಿರಾರು ಬಗೆಗಳ ರೂಪ, ಬಣ್ಣ ಮತ್ತು ಗುಣಗಳಿಂದ ಭಿನ್ನ ರೂಪದಲ್ಲಿ ದೊರೆಯುತ್ತದೆ. ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಒಟ್ಟಿಗೆ ನೆನಸಿ ರುಬ್ಬಿ ತಯಾರಿಸುವ ಮಾಮೂಲಿ ಇಡ್ಲಿಯಾದರೇ, ಕೇವಲ ಉದ್ದಿನ ಹಿಟ್ಟನ್ನು ಮಾತ್ರವೇ ರುಬ್ಬಿಕೊಂಡು ಅದು ರಾತ್ರಿ ಇಡೀ ಹುದುಗು ಬಂದ ನಂತರ, ಮಾರನೇ ದಿನ ಬೆಳಕ್ಕೆ ಅದಕ್ಕೆ ಅಕ್ಕಿ ತರಿಯನ್ನು ಬೆರೆಸಿ ಮಾಡುವ ಉದುರುದುರು ಇಡ್ಲಿಯೂ ಸಹಾ ಅತ್ಯಂತ ಪ್ರಖ್ಯಾತವಾಗಿದೆ. ಇನ್ನು ಬಿಡದಿ ಮತ್ತು ಕ್ಯಾತ್ಸಂದ್ರದ ತಟ್ಟೇ ಇಡ್ಲೀ, ಬಟ್ಟಲಿನ ಇಡ್ಲಿ, ಅಲಗೂರಿನ ಚಿಬ್ಲು ಇಡ್ಲಿ, ನವಿರಾದ ಮಲ್ಲಿಗೆ ಇಡ್ಲಿ, MTR ರವೆ ಇಡ್ಲಿ, ಚಿಕ್ಕ ಚಿಕ್ಕ ಈರುಳ್ಳಿ ಸಾಂಬಾರ್ ಜೊತೆ ಕೊಡುವ ಬಟನ್ಸ್ ಇಡ್ಲಿ, ರಾಗಿ ಇಡ್ಲಿ, ಸಿರಿಧಾನ್ಯದ ಇಡ್ಲಿಯಷ್ಟೇ ಅಲ್ಲದೇ, ಬೆಳಿಗ್ಗೆ/ರಾತ್ರಿ ಅಳುದುಳಿದಿದ್ದ ಇಡ್ಲಿಯನ್ನೇ ಬಳಸಿಕೊಂಡು ಇಡ್ಲಿ ಉಪ್ಪಿಟ್ಟು, ಇಡ್ಲೀ ಪಕೋಡ, ಇಲ್ಲವೇ ಇಡ್ಲಿ ಮಂಚೂರಿಯನ್ ಸಹಾ ಮಾಡುವ ಪದ್ದತಿಯೂ ರೂಢಿಯಲ್ಲಿದೆ.

idlies4ಒಟ್ಟಿನಲ್ಲಿ ಸಾಂಪ್ರದಾಯಿಕ ತಿಂಡಿಯಾಗಿ ನಮ್ಮಗಳ ಅಡುಗೆ ಮನೆಗಳಲ್ಲಿ ಹುಟ್ಟಿ ಬೆಳೆದ ಇಡ್ಲಿಯು ಇಂದು ವಿಶ್ವವ್ಯಾಪಿಯಾಗಿ ಬೆಳದಿದ್ದು ಇಡ್ಲಿ ಅತ್ಯಂತ ಆರೋಗ್ಯಕರ ಆಹಾರಗಿದೆ. ಇಡ್ಲಿಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳೆಲ್ಲವೂ ಸಿಗುವ ಕಾರಣ, ಬೆಳಗ್ಗೆ ಸರಿ ಸುಮಾರು ಗಾತ್ರದ ಮೂರ್ನಾಲ್ಕು ಇಡ್ಲಿಗಳನ್ನು ತಿಂದದಲ್ಲಿ, 230 ಕ್ಯಾಲೋರಿ ಶಕ್ತಿ, 50 ಗ್ರಾಂ ಕಾರ್ಬೋಹೈಡ್ರೇಟ್‌, 7 ಗ್ರಾಂ ಪ್ರೋಟೀನ್‌, ಐದು ಗ್ರಾಂ ನಾರಿನ ಅಂಶದ ಜೊತೆಗೆ 30 ಗ್ರಾಂ ಕ್ಯಾಲ್ಸಿಯಂ ಸಿಗುವ ಕಾರಣ, ಪ್ರಪಂಚಾದ್ಯಂತ ವೈದ್ಯರುಗಳೂ ಸಹಾ ತಮ್ಮ ಅನಾರೋಗ್ಯಕರ ರೋಗಿಗಳಿಗೆ ಖಾಯಿಲೆ ವಾಸಿಯಾಗುವವರೆಗೂ ಇಡ್ಲಿಯನ್ನು ತಿನ್ನಲು ಸೂಚಿಸುತ್ತಾರೆ.

idlies2ಹೀಗೆ ವಿಶ್ವವ್ಯಾಪಿಯಾಗಿ, ವಿಶ್ವಾದ್ಯಂತ ಮನೆಗಳಳಲ್ಲದೇ ಸಣ್ಣ ಪುಟ್ಟ ಮತ್ತು ದೊಡ್ಡ ದೊಡ್ಡ ಹೋಟೆಲ್ಲುಗಳಲ್ಲಿಯೂ ಸಹಾ ಲಭ್ಯವಿರುವ ಇಡ್ಲಿಗಳನ್ನು ಮಾರ್ಚ್ 30, ವಿಶ್ವ ಇಡ್ಲಿ ದಿನವಾದ ಇಂದು ಸವಿದು ಅದರ ರುಚಿಯನ್ನು ನಮ್ಮೊಂದಿಗೆ ಹಂಚಿಕೊಳ್ತೀರಿ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

One thought on “ಮಾರ್ಚ್ 30, ವಿಶ್ವ ಇಡ್ಲಿ ದಿನ

Leave a comment