ರಮ್ಮನಹಳ್ಳಿ ಮಾರಮ್ಮ ಜಾತ್ರೆ (ಲಕ್ಷ್ಮೀ ಜಾತ್ರೆ)

ಸಂಕ್ರಾಂತಿಯ ಸುಗ್ಗಿ ಹಬ್ಬ ಕಳೆದು ಬೆಳೆದ ಧಾನ್ಯಗಳನ್ನೆಲ್ಲಾ ಒಟ್ಟು ಮಾಡಿ ಮನೆಗೆ ಎಷ್ಟು ಬೇಕೋ ಅಷ್ಟನ್ನು ಉಳಿಸಿಕೊಂಡು ಮಿಕ್ಕಿದ್ದನ್ನು ಮಾರುಕಟ್ಟೆಯಲ್ಲಿ ಮಾರಿ ಕೈಯಲ್ಲಿಷ್ಟು ಹಣ ಇರುವಾಗಾಲೇ, ಮುಂದಿನ ಕೃಷಿ ಚಟುವಟಿಕೆಗಳಿಗಾಗಿ ಕಾಮನ ಹಬ್ಬ ಮತ್ತು ಯುಗಾದಿಯ ಸಮಯದಲ್ಲಿ ಬೀಳುವ ಮಳೆಗಾಗಿ ಕಾಯುತ್ತಿರುವ ಕೃಷಿಕರಿಗೆ ಜನವರಿ ಇಂದ ಏಪ್ರಿಲ್ ವರೆಗೆ ಕೊಂಚ ಬಿಡುವಿನ ವೇಳೆ. ಹಾಗಾಗಿಯೇ ಇದೇ ಸಮಯದಲ್ಲಿಯೇ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಇದೇ ಸಮಯದಲ್ಲಿಯೂ ಜಾತ್ರಾಮಹೋತ್ಸವಗಳು ನಡೆಯುವುದು ವಿಶೇಷವಾಗಿದೆ. ಅದೇ ರೀತಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಕೇವಲ 8 ಕಿಮೀ ದೂರದಲ್ಲಿರುವ ಎರಡು ವರ್ಷಗಳಿಗೆ ಒಮ್ಮೆ ಸುಮಾರು 15 ದಿನಗಳ ಕಾಲ ಬಹಳ ವಿಶಿಷ್ಟ್ಯವಾಗಿ ನಡೆಯುವ ಜಾತ್ರಾ ರಮ್ಮನ ಹಳ್ಳಿಯ ಲಕ್ಷ್ಮೀ ಜಾತ್ರೆಯ ವಿಶೇಷತೆಗಳನ್ನು ತಿಳಿಯೋಣ ಬನ್ನಿ.

ram6ಸಾಮಾನ್ಯವಾಗಿ ಹಬ್ಬ ಹರಿದಿನಗಳು ಮತ್ತು ಜಾತ್ರಾ ಮಹೋತ್ಸವ ಎಂದರೆ ಮನೆಗಳಲ್ಲಿ ಹೆಣ್ಣು ಮಕ್ಕಳದ್ದೇ ಕಾರುಬಾರು. ಹಬ್ಬದ ದಿನ ಬೆಳ್ಳಂಬೆಳಿಗ್ಗೆಯೇ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ನೀರು ಹಾಕಿಕೊಂಡ ತಲೆಯ ಕೂದಲು ಆರುವಂತೆ ನೀರಿನ ಜಡೆ ಹಾಕಿಕೊಂಡು ಸಣ್ಣ ವಯಸ್ಸಿನ ಮಕ್ಕಳಾದರೆ, ಚಂದನೆಯ ಲಂಗ ರವಿಕೆ ಇಲ್ಲವೇ ಲಂಗದಾವಣಿ ಹಾಕಿಕೊಂಡರೆ, ಇನ್ನು ಹೆಂಗಸರು ಜರತಾರಿ ರೇಷ್ಮೇ ಸೀರೆಗಳನ್ನು ಉಟ್ಟು ಮೈತುಂಬ ಆಭರಣಗಳನ್ನು ಧರಿಸಿ ವಯ್ಯಾರದಿಂದ ಅತ್ತಿತ್ತ ಓಡಾ(ಲಾ)ಡುವುದನ್ನು ಎಲ್ಲ ಕಡೆಯಲ್ಲೂ ನೋಡಿರುತ್ತೇವೆ. ಆದರೆ ಮೈಸೂರಿನ ಬಳಿಯ ಕಸಬಾ ಹೋಬಳಿಯ ರಮ್ಮನ ಹಳ್ಳಿಯಲ್ಲಿ ಎರಡು ವರ್ಷಗಳಿಗೊಮ್ಮೆ ಶಿವರಾತ್ರಿ ಹಬ್ಬದ ನಂತರದ 12ನೇ ದಿನಕ್ಕೆ ಬರುವ ಶುಕ್ರವಾರದಂದು ಆಚರಿಸಲಾಗುವ ಲಕ್ಷ್ಮೀ ಜಾತ್ರೆಯಲ್ಲಿ ಮನೆಯ ಆಬಾಲವೃದ್ಧರಾದಿಯಾಗಿ ಗಂಡಸರು ಹೆಂಗಸಿನಂತೆ ವೇಷ ಧರಿಸಿ ವಯ್ಯಾರದಿಂದ ಓಲಾಡುವ ಮತ್ತು ಜಾತ್ರೆಯಲ್ಲಿ ಮೈಮರೆತು ಕುಣಿಯುವ ಸಂಪ್ರದಾಯವಿದ್ದು, ವಿವಿಧ ಕೆಲಸ ಕಾರ್ಯಗಳಿಗಾಗಿ ಊರನ್ನು ಬಿಟ್ಟು ಅಕ್ಕ ಪಕ್ಕದ ಇಲ್ಲವೇ ದೂರದ ಪಟ್ಟಣಗಳಲ್ಲಿ ಉದ್ಯೋಗ ಮಾಡುತ್ತಿರುವ ಗಂಡು ಮಕ್ಕಳೆಲ್ಲರೂ ಖಡ್ಡಾಯವಾಗಿ ಜಾತ್ರೆಯ ಸಮಯದಲ್ಲಿ ಊರಿಗೆ ಬಂದು ಸಾವಿರಾರು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳಂತೆ ಆದರಲ್ಲೂ ವಿಶೇಷವಾಗಿ ಮಾರಮ್ಮ, ಕಾಳಿ, ದುರ್ಗೀ, ವಿದೇಶಿ ಮಹಿಳೆಯರು, ತಮ್ಮ ನೆಚ್ಚಿನ ನಟ ನಟಿಯರು, ರಾಜ, ಮಹಾರಾಜರುಗಳು, ಕ್ರಿಕೆಟ್ ಆಟಗಾರು ಇಲ್ಲವೇ ಪೌರಾಣಿಕ ಪಾತ್ರಗಳ ವೇಷಗಳನ್ನು ತೊಟ್ಟು ಮಾರಮ್ಮನ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾ ತಮಟೆಯ ಸದ್ದಿಗೆ ಹೆಣ್ಣು ಮಕ್ಕಳೂ ನಾಚುವಂತೆ ಸೊಂಟವನ್ನು ಬಳ್ಳಿಯಂತೆ ಬಳುಕಿಸುತ್ತಾ, ವೈಯ್ಯಾರದ ನಡಿಗೆಯೊಂದಿಗೆ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸುತ್ತಾ, ದೇವಿಯ ಮನ ರಂಜಿಸಿ ಆಕೆಯ ಕೃಪೆಗೆ ಪಾತ್ರರಾಗುವುದನ್ನು ರಮ್ಮನ ಹಳ್ಳಿ ಮತ್ತು ಸುತ್ತಮುತ್ತಲಿನ ಊರಿನ ಮಹಿಳೆಯರೆಲ್ಲರೂ ಬಾಯಿ ಬಿಟ್ಟುಕೊಂಡು ಅದನ್ನು ನೋಡಿ ನಲಿವ ಪದ್ದತಿಯನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.

ram3ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಗಂಡಸರು ಹೆಂಗಸಿನ ವೇಷ ತೊಟ್ಟು, ಊರ ದೇವತೆಯನ್ನು ಸಂತೃಪ್ತಪಡಿಸುವ ಪದ್ದತಿಯ ಹಿನ್ನಲೆ ಏನು? ಈ ಜಾತ್ರೆಯ ಇತಿಹಾಸ ಏನೂ? ಎಂದು ಕೇಳಿದರೆ, ಊರಿನ ಯಾರಿಗೂ ಇದರ ಬಗ್ಗೆ ಅರಿವೇ ಇಲ್ಲದೇ, ಎಲ್ಲರೂ ಈ ಪದ್ದತಿ ತಲತಲಾಂತರದಿಂದ ನಡೆದುಕೊಂಡು ಬಂದಿದ್ದು ನಾವು ಅದನ್ನೇ ಅನೂಚಾನವಾಗಿ ಮುಂದು ವರೆಸಿಕೊಂಡು ಹೋಗುತ್ತಿದ್ದೇವೆ. ಆದರೆ ಕಾಲಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾವಣೆಯಾಗುತ್ತಿದ್ದು, ಈ ಮುಂಚೆ ಇಡೀ ಊರು ತಳಿರು ತೋರಣಗಳಿಂದ ಸಿಂಗರಿಸಲ್ಪಡುತ್ತಿದ್ದರೆ ಇಂದು ಅವುಗಳ ಜಾಗದಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಬಂದಿವೆ. ಹಿಂದಿನವರು ಲಕ್ಷಣವಾಗಿ ಸೀರೆ, ಕುಪ್ಪಸಗಳನ್ನು ತೊಡುತ್ತಿದ್ದರೆ ಇಂದಿನ ಯುವಕರುಗಳು ಜಾತ್ರೆಯ ಸಮಯದಲ್ಲಿ ಇಂದಿನ ಕಾಲಕ್ಕೆ ಅನುಗುಣವಾದ ಸ್ಕರ್ಟ್, ಮಿನಿ, ಮಿಡಿ, ಫ್ರಾಕ್ ಮತ್ತು ಚೂಡಿದಾರಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ ಎಂದು ಹೇಳುತ್ತಾರೆ.

ram1ಹಬ್ಬಕ್ಕೆ ಎರಡು ಮೂರು ವಾರಗಳ ಮುನ್ನಾ ರಮ್ಮನ ಹಳ್ಳಿ ಮತ್ತು ಸುತ್ತಮುತ್ತಲಿನ ಹದಿನಾಲ್ಕು ಹಳ್ಳಿಯ ಯಜಮಾನರುಗಳು ಸೇರಿದಂತೆ ಊರಿನ ಮುಖಂಡರುಗಳೆಲ್ಲಾ ಒಂದೆಡೆ ಸೇರಿ ಹಬ್ಬದ ಆಚರಣೆಯ ಬಗ್ಗೆ ತೀರ್ಮಾನಿಸಿದ ಬಳಿಕ, ಜಾತಿ ಧರ್ಮ ಎಲ್ಲವನ್ನೂ ಮರೆತು ರಮ್ಮನ ಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಒಂದಾಗಿ ಗ್ರಾಮದೇವತೆ ಲಕ್ಷ್ಮಿದೇವಿ/ಮಾರಮ್ಮನ ಸಂತುಷ್ಠಗೊಳಿಸಲು ಆನುವಾಗುತ್ತಾರೆ. ಹಬ್ಬದ ಆರಂಭದ ದಿನದಿಂದಲೇ, ಇಡೀ ಊರನ್ನು ತಳಿರು ತೋರಣಗಳಿಂದ ಸಿಂಗರಿಸುವ ಜೊತೆಗೆ ಇತ್ತೀಚಿಗೆ ಝಗಮಗಿಸುವ ವಿದ್ಯುತ್ ದೀಪ ಮತ್ತು ಅಬ್ಬರದ ಮೈಕ್ ಗಳನ್ನು ಹಾಕಿನಲ್ಲಿ ಅಬ್ಬರದ ಚಲನಚಿತ್ರಗೀತೆಗಳಿಗೆ ಊರಿನ ಹುಡುಗರು ತಮ್ಮ ಮನೆಯ ಹೆಣ್ಣುಮಕ್ಕಳ ವೇಷ ಧರಿಸಿ ಕೈನಲ್ಲಿ ದೊಣ್ಣೆ ಹಿಡಿದು ಓಡಾಡುತ್ತಾ, ಸಂಜೆ ಕತ್ತಲಾಗುತ್ತಿದ್ದಂತೆಯೇ ತಮಟೆಗೆ ಗತ್ತಿಗೆ ತಕ್ಕಂತೆ ಕುಣಿಯುವುದು ಇಲ್ಲಿನ ಸಂಪ್ರದಾಯವಾಗಿದೆ.

ram2ಗ್ರಾಮ ದೇವತೆ ಲಕ್ಷ್ಮೀ ದೇವಿಯ ಉತ್ಸವ ಮೂರ್ತಿಯನ್ನು ಶ್ರೀರಂಗಪಟ್ಟಣದ ಚಂದಗಾಲು ಗ್ರಾಮದ ಹೊಳೆಯಲ್ಲಿ ಶುಚಿಗೊಳಿಸಿ ಮೆರವಣಿಗೆ ಮೂಲಕ ಗ್ರಾಮಕ್ಕೆ ತರಲಾಗಿರುತ್ತದೆ. ಇನ್ನು ಹಬ್ಬದ 15ನೇ ದಿನ ಅರ್ಥಾತ್ ಕಡೆಯ ದಿನ ಬೆಳ್ಳಂಬೆಳಿಗ್ಗೆ 5.30ಕ್ಕೆಲ್ಲಾ ಊರಿನಾದ್ಯಂತ ಹಬ್ಬದ ಆಚರಣೆ ಆರಂಭವಾಗಿ ಗ್ರಾಮದ ದೇವಸ್ಥಾನದಲ್ಲಿ ಗ್ರಾಮಸ್ಥರೆಲ್ಲ ನೆರೆದು ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಹಬ್ಬದ ವಿಧಿವಿಧಾನಗಳು ಆರಂಭಗೊಳ್ಳುತ್ತವೆ. ಯಥಾ ಪ್ರಕಾರ ಗಂಡಸರು ಹೆಂಗಸರ ವೇಷ ಧರಿಸಿದರೆ, ಇನ್ನು ಹರಕೆ ಹೊತ್ತ ಹೆಂಗಸರು ದೇವಾಲಯದ ಸಮೀಪವಿರುವ ಕೊಳದಲ್ಲಿ ಬಾಯಿಬೀಗ ಹಾಕಿಸಿಕೊಂಡು ಭಕ್ತಿಯ ಪರವಶರಾದರೆ, ಅವರ ಪಕ್ಕದಲ್ಲೇ ಹಿರಿಯ ಹೆಂಗಸರು ರಾಗವಾಗಿ ಸೋಬಾನೆ ಪದಗಳಿಂದ ಊರ ದೇವಿಯನ್ನು ಹಾಡಿ ಹೋಗಳುವುದನ್ನು ಇಲ್ಲಿ ಪದಗಳಲ್ಲಿ ವರ್ಣಿಸುವುದಕ್ಕಿಂತಲೂ ಅಲ್ಲಿ ಹೋಗಿ ಕೇಳಿ ಅನುಭವಿಸಿದರೇ ಚಂದ ಎನಿಸುತ್ತದೆ.

ram5ದೇವಾಲಯದಲ್ಲಿ ಪೂಜೆಗಳು ನಡೆಯುತ್ತಿದ್ದ ಸಂದರ್ಭದಲ್ಲಿಯೇ, ಊರಿನ ಮನೆ ಮನೆಗಳಲ್ಲಿ ಕಳಸಕ್ಕೆ ಪೂಜೆ ಸಲ್ಲಿಸಿ ನಂತರ ಅಲಂಕೃತಗೊಂಡ ಕಳಸಗಳನ್ನು ಮೆರವಣಿಗೆಯ ಮೂಲಕ ದೇವಾಲಯಕ್ಕೆ ಹೊತ್ತು ತರುವ ಹೆಂಗಳೆಯರು ಅಲ್ಲಿ ದೇವಿಗೆ ಹೂವು ಮತ್ತು ಕುಂಕುಮಾರ್ಚನೆಯನ್ನು ಮಾಡಿಸುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಈ ರೀತಿಯ ಪೂಜಾ ವಿಧಿವಿಧಾನಗಳು ನಡೆಯುವಷ್ಟರಲ್ಲಿ ಮಧ್ಯಾಹ್ನನ ಸಮಯ ವಾದ ನಂತರವೇ ಹಬ್ಬಕ್ಕೆ ನಿಜವಾದ ಕಳೆ ಕಟ್ಟುತ್ತದೆ ಎಂದರೂ ತಪ್ಪಾಗದು. ಈ ವೇಳೆ ದೊಣ್ಣೆಗಳನ್ನು ಹಿಡಿದ ಪೌರಾಣಿಕ ನಾಟಕದ ಪಾತ್ರಧಾರಿಗಳು ತಮಟೆಯ ಸದ್ದಿಗೆ ಅನುಗುಣವಾಗಿ ದೊಣ್ಣೆಗಳನ್ನು ಬೀಸುತ್ತಾ ನರ್ತಿಸುವುದನ್ನು ನೋಡುವ ಸಲುವಾಗಿಯೇ, ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ಅಲ್ಲಿ ನೆರೆಯುತ್ತಾರೆ. ಆರಂಭದಲ್ಲಿ ಹೆಣ್ಣು ವೇಷದಲ್ಲಿದ್ದ ಗಂಡಸರು ಕುಣಿಯುವುದನ್ನು ನೋಡಿ ನಲಿಯುವ ಹೆಣ್ಣು ಮಕ್ಕಳು ನಂತರ ತಮಟೆಯ ಸದ್ದು ಜೋರಾಗುತ್ತಿದ್ದಂತೆಯೇ ಅದರಿಂದ ಪ್ರೇರಣೆ ಪಡೆದು ಅವರುಗಳೂ ಸಹಾ ಗಂಡು ಮಕ್ಕಳ ಜೊತೆ ಹೆಜ್ಜೆ ಹಾಕುವುದು ವಿಶೇಷವಾಗಿದೆ. ಅಂತಿಮವಾಗಿ ದೇವಾಲಯದ ಪ್ರಧಾನ ಅರ್ಚಕರಿಗೆ ಕರಗ ಹೊರಿಸಿ ಪೂಜೆ ಸಲ್ಲಿಸಿ ಊರ ತುಂಬಾ ಮೆರವಣಿಗೆ ಮಾಡುವ ಮೂಲಕ ರಮ್ಮನ ಹಳ್ಳಿಯ ಮಾರಮ್ಮ/ಲಕ್ಶ್ಮೀ ಜಾತ್ರೆ ಸುಸಂಪನ್ನವಾಗುತ್ತದೆ. ಈ ರೀತಿಯಾಗಿ ಪೂಜೆಗಳೆಲ್ಲವೂ ಮುಗಿದ ನಂತರ ಹಬ್ಬಕ್ಕೆ ಬಂದಿದ್ದ ಬಂಧು ಬಳಗದೊಂದಿಗೆ ವಿಶೇಷವಾಗಿ ಸಿಹಿಯೂಟವನ್ನು ಎಲ್ಲರ ಮನೆಗಳಲ್ಲಿಯೂ ಸವಿಯುತ್ತಾ, ಜಾತ್ರೆಯ ಸಮಯದಲ್ಲಿ ಆದ ವಿಶೇಷಗಳನ್ನು ಮೆಲುಕು ಹಾಕುತ್ತಾ, ಮುಂದಿನ ಜಾತ್ರೆಯ ತಯಾರಿಯನ್ನು ಅಂದಿನಿಂದಲೇ ಮಾಡುವುದು ವಿಶೇಷವಾಗಿದೆ.

ram3ಹಬ್ಬದ ಹದಿನೈದು ದಿನಗಳು ಸಹಾ ಇಡೀ ಊರಿನ ಜನಾ ಚಪ್ಪಲಿಯನ್ನು ಹಾಕಿಕೊಳ್ಳದೇ ಬರೀಗಾಲಿನಲ್ಲೇ ಓಡಾಡಿದರೆ, ಇದೇ ಸಮಯದಲ್ಲಿ ವಿಶೇಷ ನಾಟಕಗಳ ಪ್ರದರ್ಶನಗಳೂ ಸಹಾ ಬಹಳ ಆಕರ್ಷಣೀಯವಾಗಿದೆ. ಇನ್ನು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಯಾರ ಮನೆಯಲ್ಲಿಯೂ ಮಾಂಸ ಮದ್ಯದ ಸೇವನೆ ಮಾಡುವುದಿಲ್ಲ. ಮಾಂಸ ಮಡ್ಡಿ ಬಿಡಿ ಊರಿನಲ್ಲಿ ಯಾರ ಮನೆಯಲ್ಲಿಯೂ ಮೆಣಸಿನ ಪುಡಿ, ಸಾಂಬಾರ್ ಪುಡಿಯನ್ನು ಮಾಡುವುದು ಬಿಡಿ, ಒಗ್ಗರಣೆಯನ್ನು ಹಾಕುವುದು ಸಹಾ ನಿಷೇಧಿಸಿರುವುದು ಇಲ್ಲಿನ ಗ್ರಾಮದ ವಿಶೇಷವಾಗಿದೆ.

ಒಟ್ಟಿನಲ್ಲಿ ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ, ಪ್ರದೇಶದಿಂದ ಪ್ರದೇಶಕ್ಕೆ ಈ ರೀತಿಯಾದ ವೈವಿಧ್ಯಮಯವಾದ ಧಾರ್ಮಿಕ ಅಚರಣೆಗಳು ರೂಢಿಯಲ್ಲಿಟ್ಟುಕೊಂಡು ವಿವಿಧತೆಯಲ್ಲಿಯೂ ಏಕತೆಯನ್ನು ಹೊಂದುವ ಮೂಲಕ ನಮ್ಮ ಭಾರತ ದೇಶ ಇನ್ನೂ ನೂರ್ಕಾಲ ಅಖಂಡವಾಗಿ, ವಿಶ್ವಗುರುವಾಗಿರುತ್ತದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment