ಬಾಳಗಂಚಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲ್ಲೂಕಿನ,, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಈ ಊರಿನಲ್ಲಿ ಸರಿಸುಮಾರು ಹತ್ತಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ಗ್ರಾಮ ದೇವತೆಯಾಗಿದ್ದು, ಈ ಊರು ತಮಿಳು ನಾಡಿನ ಕಂಚಿ ಕಾಮಾಕ್ಷಿಯರೂಪದಲ್ಲಿದೆ ಎನ್ನುವ ಕಾರಣ ಈ ಊರಿನ ಹೆಸರು ಬಾಲಕಂಚಿ ಎಂದಿದ್ದು ನಂತರ ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ ಎಂದೂ ಸಹಾ ಸ್ಥಳೀಯರು ಹೇಳುತ್ತಾರೆ. ಇನ್ನೊಂದು ಐತಿಹ್ಯದ ಪ್ರಕಾರ ಈ ಊರಿಗೆ ಸಾವಿರಾರು ವರ್ಷಗಳಷ್ಟು ಸುದೀರ್ಘ ಇತಿಹಾಸವಿದ್ದು, ಬಾಳಗಂಚಿ ಗ್ರಾಮವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನ ವಂಶಸ್ಥ ನಾರಸಿಂಹದೇವ ವೇದಾಗಮಶಾಸ್ತ್ರ ಪಾಂಡಿತ್ಯ ಹೊಂದಿದ್ದ 76 ಬ್ರಾಹ್ಮಣರಿಗೆ ದಾನವಾಗಿ ಕೊಟ್ಟು ಅಗ್ರಹಾರ ಮಾಡಿದ್ದಕಾರಣ ಈ ಊರನ್ನು ಗರಳಪುರಿ ಅಗ್ರಹಾರ ಎಂದು ಕರೆಯಲಾಗುತ್ತಿತ್ತು ಎಂದು 1256ರ ಶಾಸನದಲ್ಲಿ ಕಾಣಬಹುದಾಗಿದೆ. ಸಾರುತ್ತದೆ.

ಇನ್ನು ಅಗ್ರಹಾರದ ರಚನೆಗೆ ನಿರ್ದಿಷ್ಟ ನಿಯಮವಿದ್ದು, ಊರಿನ ಮಧ್ಯದಲ್ಲಿ ನಾರಾಯಣನ ದೇವಾಲಯ ಇರಬೇಕು. ಊರಿನ ಈಶಾನ್ಯಕ್ಕೆ ಈಶ್ವರನ ಗುಡಿ ಮತ್ತು ಅದರ ಎದುರಿನಲ್ಲೇ ಕೆರೆ, ಕಟ್ಟೆ ಇಲ್ಲವೇ ನದಿ ಇದ್ದು, ಆ ಊರಿನಲ್ಲಿ ವೇದಭ್ಯಾಸ ನಿರಂತರವಾಗಿ ನಡೆಯಬೇಕು ಎಂಬಂತಿದ್ದು, ಹಿಂದಿನ ಕಾಲದಲ್ಲಿ ಬಾಳಗಂಚಿ ಗ್ರಾಮದಲ್ಲಿ ಇವೆಲ್ಲವೂ ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದ ಕಾರಣ ಇದು ಸ್ಪಷ್ಟವಾಗಿ ಅಗ್ರಹಾರವಾಗಿತ್ತು ಎಂಬುದನ್ನು ನಿರೂಪಿಸುತ್ತದೆ.

IMG_20180331_182418ಭೂಮಿಯ ತಳಮಟ್ಟದಿಂದ ಸುಮಾರು ಐದಾರು ಅಡಿಗಳ ಎತ್ತರದಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಾಲಯವಿದ್ದು, ಅಂದಿನ ಕಾಲದ ಕಲ್ಲು, ಮಣ್ಣು, ಗಾರೆಯಿಂದ ನಿರ್ಮಿಸಿರುವ ಪುರಾತನ ದೇವಾಲಯವಾಗಿತ್ತು. ದೇವಾಲಯದ ದ್ವಾರದ ಮೇಲಿನ ಗಾರೆಗಚ್ಚಿನ ಮೂರು ಗೋಪುರ ಗೂಡುಗಳಿದ್ದು, ಮಧ್ಯದ ಗೂಡಿನಲ್ಲಿ ಲಕ್ಷ್ಮೀನರಸಿಂಹ ಹಾಗೂ ಎಡ ಬಲದಲ್ಲಿರುವ ಗೋಪುರ ಗೂಡುಗಳಲ್ಲಿ ಗಣಪತಿ ಮತ್ತು ಕೃಷ್ಣನ ಗಾರೆ ಶಿಲ್ಪಗಳಿವೆ. ಸುತ್ತಲೂ ಮೂಲೆಗಳಲ್ಲಿ ಸಿಂಹದ ಪ್ರತಿಮೆಗಳಿವೆ. ಕಲ್ಲಿನ ಜಗಲಿಯಲ್ಲೇ ದೇವಾಲಯಕ್ಕೆ ಪ್ರದಕ್ಷಿಣ ಪಥ ನಿರ್ಮಿಸಲಾಗಿದೆ. ದೇವಾಲಯದ ಮೆಟ್ಟಿಲು ಹತ್ತುತ್ತಿದ್ದಂತೆ ಪುಟ್ಟ ಮುಖಮಂಟಪವಿದೆ. ದ್ವಾರದ ಮೂಲಕ ಪ್ರವೇಶಿಸಿದರೆ ನವರಂಗ, ಹಾಗೂ ಗರ್ಭಗೃಹ ಕಾಣುತ್ತದೆ. ಗರ್ಭಗೃಹದಲ್ಲಿ ಅರೆಕಂಬಗಳ ಕೆತ್ತನೆ ಇದ್ದು, ಸುಂದರವಾದ ಸಾಲಿಗ್ರಾಮಶಿಲೆಯ ಲಕ್ಷ್ಮೀನರಸಿಂಹಸ್ವಾಮಿಯ ಶಾಂತಮೂರ್ತಿ ಎಲ್ಲರ ಮನಸೂರೆಗೊಳ್ಳುತ್ತಿದ್ದು, ನೂರಾರು ವರ್ಷಗಳ ಕಾಲ ಊರ ಶ್ಯಾನುಭೋಗರ ಮನೆಯವರೇ ಶಾಸ್ತ್ರೋಕ್ತವಾಗಿ ಪೂಜೆ ನಡೆಸುತ್ತಿದ್ದು ನಂತರ ಊರ ಅರ್ಚಕರ ಕುಟುಂಬ ಅದನ್ನು ಮುಂದುವರೆಸಿಕೊಂಡು ಹೋಗುತ್ತಿತ್ತು.

IMG_20180401_031859ಸುಮಾರು ಒಂಭತ್ತು ವರ್ಷಗಳ ಹಿಂದೆ ಊರ ಹೊರಗಿದ್ದ ಮತ್ತು ಸ್ವಲ್ಪ ಶಿಥಿಲವಾಗಿದ್ದ ಊರ ಗ್ರಾಮದೇವತೆ ಶ್ರೀ ಹೊನ್ನಾದೇವಿಯ ದೇವಾಲಯವನ್ನು ಊರಿನವರು ಮತ್ತು ಸಾರ್ವಜನಿಕರ ಸಹಾಯದಿಂದ ಜೀರ್ಣೋದ್ಧಾರ ಮಾಡಿ ಶೃಂಗೇರೀ ಶಾರಾದಾ ಪೀಠದ ಗುರುದ್ವಯರಿಂದ ಕುಂಭಾಭಿಷೇಕ ನಡೆಸಿದ ನಂತರ, ಊರಿನೊಳಗೇ ಇದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಜೀರ್ಣೋದ್ಧಾರವನ್ನು ಸಹಾ ಮಾಡ ಬೇಕೆಂದು ಊರಿನವರು ಸಂಕಲ್ಪ ತೆಗೆದುಕೊಂಡು ಮತ್ತೊಮ್ಮೆ ಊರಿನವರು ಮತ್ತು ಸಕಲ ಆಸ್ಥಿಕ ಬಂಧುಗಳ ಸಹಾಯದೊಂದಿಗೆ ಮೂಲ ಗರ್ಭಗುಡಿಯನ್ನು ಮತ್ತು ಶುಕನಾಸಿಯನ್ನು ಹಾಗೆಯೇ ಉಳಿಸಿಕೊಂಡು ಉಳಿದ ಭಾಗವನ್ನು ಆಧುನಿಕ ಶೈಲಿಯಲ್ಲಿ ನಿರ್ಮಿಸಿ ಅದರ ಮೇಲೊಂದು ಎತ್ತರದ ಮತ್ತು ಅಷ್ಟೇ ಚಂದನೆಯ ಗೋಪುರವನ್ನು ನಿರ್ಮಿಸಿ ದೇವಾಲಯದ ಸುತ್ತಾ ಪ್ರದಕ್ಷಿಣೆ ಹಾಕಲು ಅನುವಾಗುವಂತೆ ಮತ್ತು ಯಜ್ನ ಯಾಗಾದಿಗಳನ್ನು ಮಾಡುವಂತಹ ವೇದಿಕೆಯನ್ನು ನಿರ್ಮಿಸಿ 2024ರ ಮಾರ್ಚ್ 27 ಬುಧವಾರ ಅರ್ಥಾತ್ ಪಾಲ್ಗುಣಮಾಸದ ಬಹುಳ ಬಿದಿಗೆಯಂದು ‌ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಅಮೃತಹಸ್ತದಿಂದ ದೇವಾಲಯದ ಪುನರ್ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು.

WhatsApp Image 2024-03-26 at 19.19.02ಕುಂಭಾಭಿಷೇಕದ ಹಿಂದಿನ ದಿನ ಬೆಳಿಗ್ಗೆಯಿಂದಲೇ, ಗಣಪತಿ ಪೂಜೆ, ಪುಣ್ಯಾಹ ವಾಚನ, ಬಿಂಬ ಶುದ್ಧಿಹೋಮ ಹವನಾದಿಗಳು ನಡೆದರೆ, ಇನ್ನು ಸಂಜೆ ದೇವಾಲಯದ ಆವರಣದಲ್ಲಿ ಪ್ರಾಕಾರಶುದ್ಧಿ, ಶೋಡಶ ತತ್ವನ್ಯಾಸ. ರಾಕ್ಷೋಘ್ನ ಹೋಮ, ಪೀಠಶುದ್ಧಿ ರತ್ನಾನ್ಯಾಸ ಮುಂತಾದ ಪೂಜೆ ಪುನಸ್ಕಾರಗಳು ನಡೆದರೆ, ಇನ್ನು ಸಾರ್ವಜನಿಕರ ಮನೋರಂಜನೆಗಾಗಿ ಶಿವಾರ ಪ್ರದೀಪ್ ಮತ್ತು ತಂಡದವರಿಂದ ಜನಪದ ಗೀತೆಗಳ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

WhatsApp Image 2024-03-28 at 02.49.3927.03.24 ಬುಧವಾರ ಬೆಳಿಗ್ಗೆ ಘಂಟೆಯಿಂದಲೇ ದೇವಸ್ಥಾನದಲ್ಲಿ ಪ್ರತಿಷ್ಠಾಂಗ ಹೋಮ,ದೇವತಾ ಪ್ರತಿಷ್ಠಾ ಮಂತ್ರನ್ಯಾಸಗಳು ಮತ್ತು ಪೂಹಾಂಗ ಹೋಮಗಳು ನಡೆಯುತ್ತಿದ್ದರೆ, ಇದೇ ಗ್ರಾಮದ ಹೆಣ್ಣುಮಗಳ ಮೊಮ್ಮಗನಾದ ಉದಯೋನ್ಮುಖ ಗಾಯಕ ಶ್ರೀ ಅಶ್ವಿನ್ ಶರ್ಮ ತನ್ನ ಸಂಗಡಿಗರೊಂದಿಗೆ ನಡೆಸಿಕೊಂಡ ಸಂಗೀತ ಕಾರ್ಯಕ್ರಮವೂ ಸಹಾ ಎಲ್ಲರ ಮನಸೂರೆಗೊಂಡಿತು. ನಿಗಧಿತ ಸಮಯಕ್ಕಿಂತ ಕೊಂಚ ತಡವಾಗಿ ಶ್ರೀ ಶ್ರೀ ಯಧುಶೇಖರ ಭಾರತೀ ಮಹಾಸ್ವಾಮಿಗಳು ತಮ್ಮ ಶಿಷ್ಯವೃಂದದೊಂದಿಗೆ ಬಾಳಗಂಚಿ ಪುರಪ್ರವೇಶವನ್ನು ಮಾಡುತ್ತಿದ್ದಂತೆಯೇ, ಸಕಲ ವೇದಘೋಷ ಮತ್ತು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಮೀಗಳನ್ನು ಬರಮಾಡಿಕೊಂಡು ನೇರವಾಗಿ ನೂತನವಾಗಿ ನಿರ್ಮಿಸಿರುವ ದೇವಾಲಯಕ್ಕೆ ಬಂದು ಅಲ್ಲಿ ಲಕ್ಷ್ಮೀ ನರಸಿಂಹಸ್ವಾಮಿಗ ತಮ್ಮ ಅಮೃತ ಹಸ್ತದಿಂದಲೇ ಅಭಿಷೇಕಗಳನ್ನು ಮಾಡಿ ಬಗೆ ಬಗೆಯ ಹೂವುಗಳಿಂದ ಚಂದನೆಯ ಅಲಂಕಾರ ಮಾಡಿದ್ದಲ್ಲದೇ, ಸುಂದರವಾಗಿ ವಸ್ತ್ರವಿನ್ಯಾಸಗಳನ್ನು ಮಾಡಿದ ನಂತರ ಕಿಕ್ಕಿರಿದು ತುಂಬಿದ್ದ ಭಕ್ತಜನ ಸಮೂಹದ ಮಧ್ಯೆದಲ್ಲೇ ಶೋಡಷೋಪಚಾರ ಪೂಜೆ, ನೈವೇದ್ಯ ಮತ್ತು ಮಹಾ ಮಂಗಳಾರತಿ ಮಾಡುವ ಮೂಲಕ ದೇವರಿಗೆ ದೈವೀ ಕಳೆಯನ್ನು ತುಂಬಿದರೂ ಎಂದರೂ ತಪ್ಪಾಗದು.

WhatsApp Image 2024-03-27 at 17.34.36ನಂತರ ದೇವಾಯಲದ ಹೊರಗಿದ್ದ ನಾಮಫಲಕಕ್ಕೆ ಕಟ್ಟಲಾಗಿದ್ದ ಪರದೆಯನ್ನು ಅನಾವರಣ ಮಾಡುವ ಮೂಲಕ ಅಧಿಕೃತವಾಗಿ ನೂತನ ದೇವಾಲಯವನ್ನು ಉಧ್ಘಾಟಿಸಿದ್ದಲ್ಲದೇ, ಪಟ ಪಟನೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಎರಡಂತಸ್ತಿನ ಅಟ್ಟಣಿಕೆಯ ಮೇಲೇರಿ ಕಳಸವನ್ನು ಅನಾವರಣ ಮಾಡಿ, ಕಳಸಕ್ಕೆ ಆಭಿಷೇಕ ಮತ್ತು ಪೂಜೆಯನ್ನು ಮಾಡುವ ಮೂಲಕ ಅಧಿಕೃತವಾಗಿ ದೇವಾಲಯದ ಕುಂಭಾಭಿಷೇಕವನ್ನು ನೆರವೇರಿಸಿಕೊಟ್ಟರು. ನೂತನವಾಗಿ ನಿರ್ಮಾಣಗೊಂಡ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದೇವಾಲಯದ ಕಳಸದ ಕುಂಭಾಭಿಷೇಕವನ್ನು ವಿಧುಶೇಖರ ಭಾರತಿಗಳು ಮಾಡುತ್ತಿದ್ದದ್ದನ್ನು ನೋಡಿ ಸಂತಸಗೊಂಡ ಸಾಕ್ಷಾತ್ ಶ್ರೀಮನ್ನಾರಾಯಣ ವಾಹನ ಗರುಡವು ದೇವಾಲಯದ ಪ್ರದಕ್ಷಿಣೆ ಮಾಡಿದ್ದದ್ದು ನಿಜಕ್ಕೂ ಅದ್ಭುತವಾಗಿತ್ತು.

WhatsApp Image 2024-03-29 at 05.49.26ದೇವಾಲಯದ ಕುಂಭಾಭಿಷೇಕ ಸಂಪನ್ನವಾಗುತ್ತಿದ್ದಂತೆಯೇ, ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಲು ಗುರುಗಳು ಅನುವಾಗುತ್ತಿದ್ದಂತೆಯೇ ಬಾಳಗಂಚಿಯವರೇ ಆದ ವೇದ ಬ್ರಹ್ಮ ಶ್ರೀ ಚಲುವನಾರಾಯಣ ಮತ್ತು ಅವರ ಶಿಷ್ಯವೃಂದದವರ ವೇದ ಘೋಷ, ಮತ್ತು ಮೂಲತಃ ಇದೇ ಗ್ರಾಮದವರೇ ಆದ ಸತೀಷ್ ಅವರ ಸುಂದರ ನಿರೂಪಣೆಯೊಂದಿಗೆ ಮತ್ತು ಅಶ್ವಿನ್ ಶರ್ಮ ಅವರ ಸುಶ್ರಾವ್ಯಕಂಠದಿಂದ ಶಾರದಾಸ್ತುತಿ ಮತ್ತು ದೇವಾಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಚಿದಂಬರ ಅವರ ಸ್ವಾಗತ ಭಾಷಣ, ಮತ್ತೆ ಚಲುವನಾರಾಯಣ ಅವರಿಂದ ಸ್ವಾಮಿಗಳಿಗೆ ಅಭಿವಂದನಾ ಪತ್ರವನ್ನು ಅರ್ಪಿಸಿದ ನಂತರ ಭಕ್ತಾದಿಗಳನ್ನು ಉದ್ದೇಶಿಸಿ ಸ್ವಾಮಿಗಳು ನರಸಿಂಹಾವತಾರದ ವಿಶೇಷತೆಯ ಜೊತೆಗೆ ಹಾಸನ ಮತ್ತು ಮಲೆನಾಡಿನ ಜನರ ದೈವೀ ಭಕ್ತಿಯನ್ನು ಹಾಡಿ ಹೊಗಳುತ್ತಾ, ಸಮಸ್ಥ ಆಸ್ತಿಕರು ಕನಿಷ್ಥಪಕ್ಷ ದಿನಕ್ಕೊಮ್ಮೆ, ಇಲ್ಲವೇ ಎರಡು ದಿನಕ್ಕೊಮ್ಮೆ ಅದೂ ಇಲ್ಲವಾದಲ್ಲಿ ವಾರಕ್ಕೆ ಒಂದು ದಿನವಾದರೂ ತಮ್ಮ ಗ್ರಾಮ, ಬಡಾವಣೆಯಲ್ಲಿರುವ ದೇವಾಲಯಕ್ಕೆ ತಪ್ಪದೇ ಹೋಗಿ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂಬ ಕಿವಿ ಮಾತು ಹೇಳಿದ್ದದ್ದು ನಿಜಕ್ಕೂ ಸಮಯೋಚಿತವಾಗಿತ್ತು,

ಸ್ವಾಮಿಗಳ ಅಶೀರ್ವಚನ ಮುಗಿಯುವ ಸಮಯಕ್ಕೆ ಸರಿಯಾಗಿ ಕನ್ನಡಿಗರು ಅದರಲ್ಲೂ ಹಾಸನ ಜಿಲ್ಲೆಯವರು ಮತ್ತು ಶೃಂಗೇರಿ ಮಠದ ಪರಮ ಭಕ್ತರಲ್ಲಿ ಒಬ್ಬರಾದ ದೇಶದ ಮಾಜಿ ಪ್ರಧಾನಿಗಳಾದ ಶ್ರೀ ದೇವೇಗೌಡರು ಮತ್ತು ಸ್ಥಳೀಯ ಸಾಂಸದರಾದ ಅವರ ಮೂಮ್ಮ್ಗಗ ಪ್ರಜ್ವಲ್ ರೇವಣ್ಣನವರು ತಮ್ಮ ಅಭಿಮಾನಿಗಳ ಜೊತೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿ ನಂತರ ಸ್ವಾಮಿಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದದ್ದು ವಿಶೇಷವಾಗಿತ್ತು.

ನಂತರ ದೇವಾಲಯದ ಪಕ್ಕದಲ್ಲೇ ಅತ್ಯಂತ ಶಾಸ್ತ್ರೋಕ್ತವಾಗಿ ವ್ಯವಸ್ಥೆ ಮಾಡಿದ್ದ ಗುರುಗಳ ಪಾದುಕಾ ಪೂಜೆಯೂ ಸಹಾ ಬಹಳ ಅಚ್ಚುಕಟ್ಟಾಗಿದ್ದು, ಶೃಂಗೇರಿಯಿಂದಲೇ ಬಂದಿದ್ದ ಗುರುಗಳ ಶಿಷ್ಯವೃಂದವರ ಪೂಜೆ ಪುನಸ್ಕಾರಗಳು ಭಕ್ತಾಗಿಗಳ ಹೃನ್ಮನಗಳನ್ನು ತಣಿಸಿತು.

ನಂತರ ಬಂದ ಭಕ್ತಾದಿಗಳೆಲ್ಲರಿಗೂ ಭೂರಿ ಭೋಜನದ ವ್ಯವಸ್ಥೆಯೂ ಸಹಾ ಅಚ್ಚುಕಟ್ಟಾಗಿದ್ದು ಇಡೀ ಎರಡು ದಿನಗಳ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸೇರಿದ್ದರೂ ಯಾವುದೇ ರೀತಿಯ ಲೋಪದೋಷಗಳೂ ನಡೆಯಂತೆ ಬಹಳ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ನಡೆಸಿದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಎಲ್ಲಾ ಕಾರ್ಯಕರ್ತರ ಶ್ರಮಕ್ಕೆ ಒಂದು ರೀತಿಯ ಸಾರ್ಥಕತೆ ದೊರೆಯಿತು ಎಂದರೂ ಅತಿಶಯೋಕ್ತಿಯೇನಲ್ಲ.

WhatsApp Image 2024-03-27 at 17.34.37ನೂತನ ದೇವಾಲಯದ 48 ದಿನಗಳ ಮಂಡಲ ಪೂಜೆಯೂ ಸಹಾ ಆರಂಭವಾಗಿದ್ದು ಯುಗಾದಿ ಹಬ್ಬದ ನಂತರ ಸುಮಾರು ಎರಡು ಮೂರು ವಾರಗಳ ಕಾಲ ಬಾಳಗಂಚಿಯ ಗ್ರಾಮದೇವತೆ ಹೊನ್ನಾದೇವಿಯ ಜಾತ್ರೆಯೂ ಸಹಾ ಅದ್ದೂರಿಯಾಗಿ ನಡೆಯುವ ಈ ಸಂಧರ್ಭದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಈ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಎಲ್ಲಾ ದೇವಾಲಯಗಳ ದೇವರುಗಳ ದರ್ಶನವನ್ನು ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ? ಲಕ್ಷ್ಮೀ
ಸೃಷ್ಟಿಕರ್ತ ಉಮಾಸುತ

Leave a comment