ಅದೊಂದು ಸಂಪ್ರದಾಯಸ್ಥ ಕುಟುಂಬ ಮನೆಯ ತುಂಬಾ ಮಕ್ಕಳು. ಹೇಳಿಕೊಳ್ಳುವುದಕ್ಕೆ ಶ್ಯಾನುಭೋಗರ ಕುಟುಂಬವಾದರೂ, ದುಡಿಯುವುದು ಎರಡು ಕೈಗಳಾದರೆಕುಳಿತು ತಿನ್ನುವುದು ಇಪ್ಪತ್ತಕ್ಕೂ ಹೆಚ್ಚಿನ ಕೈಗಳಾದ್ದರಿಂದ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೀಗಾಗಿ ಮನೆಯ ಗಂಡು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ದೂರ ದೂರದ ಪಟ್ಟಣಗಳಿಗೆ ಹೋಗಿ ವಾರಾನ್ನಾ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಆ ಮನೆಯ ಹೆಣ್ಣು ಮಕ್ಕಳು ಲೋಯರ್ ಸೆಕೆಂಡರಿಗಿಂತ ಹೆಚ್ಚಿಗೆ ಓದಲಾಗಲಿಲ್ಲ. ಮನೆಯ ಪರಿಸ್ಥಿತಿಯಿಂದ ಹೆಚ್ಚಿಗೆ ಓದನ್ನು ಮುಂದುವರಿಸಲು ಆಗದೇ ಹೋದರೂ, ನೋಡಲು ಅತ್ಯಂತ ಸುಂದರಿಯಾಗಿದ್ದ ಹುಡುಗಿ, ಮನೆಯಲ್ಲಿಯೇ ಕುಳಿತು ಹಾಡು ಹಸೆ ಸಂಪ್ರದಾಯಗಳನ್ನು ತನ್ನ ಹಿರಿಯರಿಂದ ಕಲಿತುಕೊಳ್ಳುತ್ತಲೇ, ತಾಯಿಯೊಂದಿಗೆ ಮುತ್ತುಗದ ಎಲೆಯನ್ನು (ಊಟದ ಎಲೆ/ಇಸ್ತ್ರಿ ಎಲೆ) ಹಚ್ಚುತ್ತಾ, ಮನೆಯಲ್ಲಿನ ಹಸು ಕರುಗಳನ್ನು ನೋಡಿಕೊಳ್ಳುತ್ತಾ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿರುತ್ತಾಳೆ. ದುರ್ಭಿಕ್ಷದಲ್ಲಿ ಅಧಿಕ ಮಾಸ ಎನ್ನುವಂತೆ ಇಂತಹ ಕಿತ್ತು ತಿನ್ನುವ ಬಡತನದ ಮಧ್ಯೆಯೂ ಅವರ ಮನೆಗೆ ಅತಿಥಿಗಳಾಗಿ ಬಂದಿದ್ದ ಹಿರಿಯರೊಬ್ಬರು ಆ ಹುಡುಗಿಯನ್ನು ನೋಡಿ, ಅಪ್ಪನ ಮನೆಯಲ್ಲಿ ಅನುಭವಿಸಿದ ಕಷ್ಟಗಳೆಲ್ಲವೂ ಮಾಯವಾಗಿ ಹೋದ ಮನೆಯಲ್ಲಿ ಈಕೆ ರಾಣಿಯಾಗಿ, ಆ ಮನೆಯನ್ನು ಬೆಳಗುತ್ತಾಳೆ ಎಂದು ಭವಿಷ್ಯ ನುಡಿದಾಗ, ಮನಸ್ಸಿನಲ್ಲಿ ಸಂತೋಷವಾದರೂ, ಇದೆಲ್ಲಾ ಸಾಧ್ಯವಾಗುತ್ತದೆಯೇ ಎಂದು ಕೊಂಡು ಇಡೀ ಮನೆಯವರು ಸುಮ್ಮನಾಗಿದ್ದರು.
ಮುಂದೆ ಆ ಹುಡುಗಿ ಮದುವೆಯ ವಯಸ್ಸಿಗೆ ಬಂದು ಸಂಬಂಧವನ್ನು ಹುಡುತ್ತಿದ್ದಾಗ ಪರಿಚಿತರ ಕಡೆಯಿಂದಲೇ ಸಂಬಂಧವೊಂದು ಕೂಡಿ ಬಂದು, ಇನ್ನೇನು ಎಲ್ಲವೂ ಸುಸೂತ್ರವಾಗಿ ನಡದೇ ಹೋಗುತ್ತದೆ ಎಂದು ತಿಳಿಯುವಾಗಲೇ, ಹುಡುಗಿ ನೋಡಲು ಸುರದ್ರೂಪವತಿಯಾಗಿದ್ದರೂ ಆಕೆ ಓದಿರುವುದು ಕೇವಲ LS ನಮ್ಮ ಮಗ Engineer ಆಗಿರುವ ಕಾರಣ ಕನಿಷ್ಠ ಪಕ್ಷ sslc ಅಗಿರುವ ಹುಡುಗಿಯಾದರೂ ಬೇಕಿತ್ತು ಎಂದು ಕಡಿಮೆ ಓದಿನ ನೆಪವೊಡ್ಡಿ ಆ ಸಂಬಂಧ ಬಿಟ್ಟು ಹೋದಾಗ, ವಿಧಿ ಬರಹಕ್ಕೆ ಹೊಣೆಯಾರು ಎನ್ನುವಂತೆ ಸುಮ್ಮನಾಗಿರುತ್ತಾರೆ. ಮುಂದೆ ಸುಮಾರು ಎರಡು ವರ್ಷಗಳ ನಂತರ ಹಾಗೆ ಸಂಬಂಧ ಬೇಡ ಎಂದು ಹೋಗಿದ್ದವರೇ ಪುನಃ ಬಂದು ನಿಮ್ಮ ಹುಡುಗಿಯನ್ನೇ ನಮ್ಮ ಮಗಳಿಗೆ ತಂದು ಕೊಳ್ಳಬೇಕೆಂದು ಶಿವಗಂಗೆ ಶ್ರೀಗಳ ಅಪ್ಪಣೆಯಾಗಿದೆ ಎಂದು ಹೇಳಿದಾಗ, ಒಂಭತ್ತು ಜನ ಗಂಡು ಮಕ್ಕಳಿದ್ದ ದೊಡ್ಡ ತುಂಬು ಕುಟುಂಬದ ಸೊಸೆಯಾಗಿ ಬೆಂಗಳೂರಿಗೆ ಕಾಲಿಟ್ಟಾಗ ಆಕೆಗೆ ಎಲ್ಲವೂ ಹೊಸದು.
ಇಡೀ ಕುಟುಂಬದ ಮಕ್ಕಳೆಲ್ಲಾ ಹೆಚ್ಚು ಹೆಚ್ಚು ಓದಿಕೊಂಡು Bank Officer, Engineer, Doctorಗಳಾದರೇ ಅದಕ್ಕೆ ತಕ್ಕಂತೆ ಸೊಸೆಯರೂ ಉತ್ತಮವಾಗಿ ಓದಿಕೊಂಡಿದ್ದವರೇ ಆದರೂ, LS ಓದಿದ್ದ ಈಕೆ ಎಲ್ಲರ(ವ)ನ್ನೂ ಸಂಭಾಳಿಸಿಕೊಂಡು ಪತಿ ಪತ್ನಿಯರ ಅನ್ಯೋನ್ಯ ದಾಂಪತ್ಯದ ಕುರುಹಾಗಿ ಮುದ್ದಾದ ಹೆಣ್ಣು ಮಗಳನ್ನು ಹೆಡೆದಾಗ, ಬರೀ ಗಂಡು ಮಕ್ಕಳಿಂದಲೇ ತುಂಬಿದ್ದ ಅ ಕುಟುಂಬಕ್ಕೆ ಮಹಾಲಕ್ಷ್ಮಿಯನ್ನು ತಂದು ಕೊಟ್ಟ ಕಾರಣ ಆಕೆ ಮಾವನವರಿಗೆ ಅಚ್ಚುಮೆಚ್ಚಿನ ಸೊಸೆಯಾಗಿ ಬಿಡುತ್ತಾಳೆ. ನಂತರದ ದಿನಗಳಲ್ಲಿ ಮತ್ತೆ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿ, ಒಟ್ಟು ಮೂರು ಹೆಣ್ಣು ಮಕ್ಕಳ ಮುದ್ದಿನ ತಾಯಿಯಾಗುತ್ತಾಳೆ. ತಾನು ಹೆಚ್ಚು ಓದದಿದ್ದರೇನಂತೆ, ತನ್ನ ಎಲ್ಲಾ ಆಸೆಗಳನ್ನು ತನ್ನ ಆ ಮುದ್ದಾದ ಮೂರು ಹೆಣ್ಣೂ ಮಕ್ಕಳ ಮೂಲಕ ಈಡೇಸಿಕೊಳ್ಳುವ ಛಲವನ್ನು ತೊಟ್ಟ ಆಕೆ, ತನ್ನ ಸಕಲ ಸುಖಃಗಳನ್ನೂ ಆ ಮಕ್ಕಳ ವಿದ್ಯಾಭ್ಯಾಸ ಮತ್ತು ಶ್ರೇಯೋಭಿಲಾಷಕ್ಕೇ ಮೀಸಲಿಟ್ಟರೆ, ಅದಕ್ಕೆ ತಕ್ಕದಾಗಿ ಸ್ಪಂದಿಸಿದ ಆ ಮೂವರೂ ಮಕ್ಕಳೂ ಸಹಾ ಒಬ್ಬರಿಗಿಂತ ಮತ್ತೊಬ್ಬರು ಆರೋಗ್ಯಕರ ಪೈಪೋಟಿ ನಡೆಸಿ, ಮೊದಲ ಮಗಳು ಇಂಜಿನಿಯರ್, ಎರಡನೇ ಮಗಳು PHD ಮಾಡಿದರೆ ಮೂರನೇಯವಳು ಜೀವಶಾಸ್ತ್ರದಲ್ಲಿ MSc ಮುಗಿಸಿ ಕೆಲಕಾಲ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅಧ್ಯಾಪಕಿ ಆಗುವುದರ ಜೊತೆಗೆ ಸಂಸ್ಕೃತ, ಸಂಗೀತ ಮತ್ತು ನೃತ್ಯ ಕಲೆಗಳಲ್ಲಿ ಪಾರಂಗತಳಾಗಿ ವಿದೇಶದಲ್ಲಿ ನೆಲೆಸಿ ಅಲ್ಲಿಯೂ ಸಹಾ ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಎತ್ತಿಸಾರುವ ಕಾಯಕದಲ್ಲಿ ತೊಡಗಿದ್ದಾಳೆ. ಹೀಗೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಅವರೆಲ್ಲರಿಗೂ ನಮ್ಮ ಸಂಪ್ರದಾಯ, ಸಂಸ್ಕಾರಗಳನ್ನು ಕಲಿಸಿ ಅವರೆಲ್ಲರಿಗೂ ಯೋಗ್ಯ ವರರೊಂದಿಗೆ ಮದುವೆ ಮಾಡಿ ಆ ಮಕ್ಕಳೆಲ್ಲರೂ ಈಗ ದೇಶ ವಿದೇಶಗಳಲ್ಲಿ ನೆಲೆಸುವಂತಾಗಿದ್ದಾರೆ.
ಹೀಗೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಬಾಳಗಂಚಿ ಎಂಬ ಕುಗ್ರಾಮದಿಂದ ಬೆಂಗಳೂರಿಗೆ ಬಂದಂತಹ ಆ ಹುಡುಗಿ, ತನ್ನ ಛಲ ಮತ್ತು ಸ್ವಾಭಿಮಾನದಿಂದ ನೋಡ ನೋಡುತ್ತಿದ್ದಂತೆಯೇ, ಅಡುಗೆ ಮನೆ ಬಚ್ಚಲು ಮನೆಗೆ ಹೋಗುವ ಹಾಗೆ ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೇ ಎನ್ನುವ ಹಾಗೆ ದೇಶ ವಿದೇಶಗಳನ್ನು ಸುತ್ತಾಡುತ್ತಾ, ಹೋದ ಬಂದ ಕಡೆಯಲ್ಲೆಲ್ಲಾ ನಮ್ಮ ದೇಸೀ ಸಂಸ್ಕಾರವನ್ನು ಬೆಳಗುತ್ತಾ, ತನ್ನ ಮೊಮ್ಮಕ್ಕಳಿಗೂ ನಮ್ಮ ಭಾಷೆ, ಸಂಸ್ಕಾರ ಮತ್ತು ಸಂಸ್ಕೃತಿಯ ಪರಿಚಯವನ್ನು ಮಾಡಿಸುತ್ತಾ ಶುದ್ಧವಾದ ಕನ್ನಡದಲ್ಲೇ ಮಾತನಾಡುವ ಮಟ್ಟಿಗೆ ಬೆಳೆಸಿ ನೆಮ್ಮದಿಯ ಜೀವನ ಸಾಗಿಸುವಂತಾಗಿದ್ದು ನಿಜಕ್ಕೂ ಅಚ್ಚರಿ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ.
ಅರೇ, ಇದೇನು? ಇಂತಹ ಕೆಲಸವನ್ನು ಇನ್ನೂ ಅನೇಕರು ಮಾಡಿದ್ದಾರೆ. ಅದರಲ್ಲಿ ಏನು ಹೆಚ್ಚು ಎಂದು ಹೇಳಿದರೆ, ಖಂಡಿತವಾಗಿಯೂ ವಯಕ್ತಿಕವಾಗಿ ನನಗೆ ಹೆಮ್ಮೆ ಮತ್ತು ಅಭಿಮಾನ ಪಡುವಂತಹ ವಿಷಯವೇ ಆಗಿದ್ದು, ಆಕೆ ಬೇರಾರೂ ಆಗಿರದೇ, ನನ್ನ ತಂದೆಯವರಾದ ಬಾಳಗಂಚಿ ಗಮಕಿ ಶಿವಮೂರ್ತಿಗಳ ಒಡಹುಟ್ಟಿದ ತಂಗಿಯಾಗಿದ್ದು ನನ್ನ ಪ್ರೀತಿಯ ಗಿರಿಜಾ ಅತ್ತೆ. ಅರ್ಥಾತ್ ಗಿರಿಜಾಂಬ, ಗಿರಿಜಾಂಬ ನರಹರಿ ಎಲ್ಲರ ಪ್ರೀತಿಯ ಗಿರಿಜಮ್ಮ. ಬಾಲ್ಯದಲ್ಲಿ ಅಮ್ಮ ಅಪ್ಪನಿಂದ ಸಂಸ್ಕಾರ ಮತ್ತು ವಿನಯವನ್ನು ಕಲಿತರೆ, ವಿವೇಕವನ್ನು ಕಲಿತದ್ದು ಆಗ್ಗಾಗ್ಗೆ ಅತ್ತೆ ಮನೆಗೆ ಹೋದಾಗಲೇ ಎಂದು ಹೇಳಿದರೂ ತಪ್ಪಾಗದು.
ಅಪ್ಪಾ ಬಿಇಎಲ್ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿ ನನ್ನ ತಂದೆ ತನ್ನ ತಮ್ಮ ತಂಗಿಯರು ಮತ್ತು ನಾದನಿಯರ ಮದುವೆ ಮುಂಜಿಗಳ ಜವಾಬ್ಧಾರಿಗಳನೆಲ್ಲಾ ಹೊತ್ತಿದ್ದ ಕಾರಣ, ನಮ್ಮದು ಮಧ್ಯಮವರ್ಗದ ಕುಟುಂಬವಾದರೆ, ನಮ್ಮ ಗಿರಿಜಾ ಅತ್ತೆಯದ್ದು ಅಂದು ಇಂದು ಮತ್ತು ಮುಂದೆಯೇ ಸ್ಥಿತಿವಂತರ ಕುಟುಂಬವೇ. ನಮ್ಮ ಮನೆಯಲ್ಲಿ ಇನ್ನೂ ಸೌದೆ ಒಲೆ ಇಲ್ಲವೇ ಸೀಮೆ ಎಣ್ಣೆ ಬತ್ತಿ/ಪಂಪ್ ಸ್ಟೊವ್ ಇದ್ದರೆ ನಮ್ಮ ಅತ್ತೆಯ ಮನೆಯಲ್ಲಿ 70ರ ದಶಕದಲ್ಲೇ ಗ್ಯಾಸ್ ಸ್ಟೊವ್. ನಮ್ಮ ಕುಟುಂಬದಲ್ಲಿ ಮೊದಲು ಟಿವಿ, ಫ್ರಿಡ್ಜ್ ತಂದದ್ದು ಅತ್ತೆಯಲ್ಲೇ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಮ್ಮ ಮನೆಯಲ್ಲಿ ಕುಡಿಯಲು ಸ್ಟೀಲ್ ಲೋಟಗಳಾದರೆ, ನಮ್ಮ ಅತ್ತೆಯ ಮನೆಯಲ್ಲಿ ತೀರ್ಥ ಕುಡಿಯಲೆಂದೇ ಸಣ್ಣ ಸಣ್ಣ ಬೆಳ್ಳಿ ಬಟ್ಟಲುಗಳಿದ್ದು, ಅವರ ಮನೆಗೆ ಹೋದಾಗಲೆಲ್ಲಾ ಅವರ ಮಾವನವರು ನನಗೆಂದೇ ಸಣ್ಣದಾದ ಬೆಳ್ಳಿ ಬಟ್ಟಲಿನಲ್ಲಿ ತೀರ್ಥವನ್ನು ಕೊಡುತ್ತಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.
ನಮ್ಮ ಅತ್ತೆ ಮಗಳು ಅಂದಿನ ಕಾಲಕ್ಕೇ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಬಂದಾಗ ನಮಗೆಲ್ಲಾ ಅಕೆಯೇ ಪ್ರೇರಣಾದಾಯಿ. ಅವಳಿಂದಲೇ, stamp ಮತ್ತು cricketer’s ಪೋಟೋಗಳನ್ನು ಸಂಗ್ರಹಿಸಲು ಕಲಿತಿದ್ದು, ಇನ್ನೂ. ಅಪ್ಪಿ ತಪ್ಪಿ ಭಾನುವಾರ ಬೆಳಿಗ್ಗೆ ಅವರ ಮನೆಗೆ ಹೋದೆನೆಂದರೆ, ತಪ್ಪದೇ ಅವರ ಜೊತೆಯಲ್ಲಿಯೇ ಶ್ರೀ G.P. ರಾಜರತ್ನಂ ಅವರು ಬೆಂಗಳೂರಿನ ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ ಮಕ್ಕಳಿಗಾಗಿ ನಡೆಸುತ್ತಿದ್ದ ಬಾಲ ಗೋಕುಲ ಕಾರ್ಯಕ್ರಮಕ್ಕೆ ನನ್ನನ್ನು ಕರೆದುಕೊಂಡು ಹೋಗಿ, ಅಲ್ಲಿ ರಾಜರತ್ನಂ ಅವರು ಮಕ್ಕಳಿಗೆ ಹೇಳುತ್ತಿದ್ದ ಚೆಂದದ ಕಥೆಗಳನ್ನು ಹೇಳಿದ ನಂತರ ನೆರೆದಿದ್ದ ಮಕ್ಕಳ ಪ್ರತಿಭಾ ಪ್ರದರ್ಶನದ ಸಮಯದಲ್ಲಿ ನನ್ನನ್ನು ವೇದಿಕೆಯನ್ನೇರಿಸಿ, ನನ್ನ ಕೈಯ್ಯಲ್ಲಿ ನಮ್ಮ ಮನೆಯಲೊಂದು ಸಣ್ಣ ಪಾಪ ಇರುವುದು.. ಎಂಬ ಪದ್ಯವನ್ನು ಮುದ್ದು ಮುದ್ದಾಗಿ ಹೇಳಿಸಿದಾಗ, ವೇದಿಕೆಯ ಮೇಲೆಯೇ ಆಸೀನರಾಗಿದ್ದ ರಾಜರತ್ನಂ ಆವರು ಮಗೂ.. ಈ ಪದ್ಯವನ್ನು ಯಾರು ಬರೆದವರು ಅಂತಾ ನಿನಗೆ ಗೊತ್ತಾ? ಎಂದು ಕೇಳಿದ್ದೇ ತಡಾ, ಥಟ್ ಅಂತಾ ನೀವೇ.. ಅಂತ ನಾಗು ಹೇಳಿದ್ದೇ ತಡಾ, ಅವರಿಗೆ ಸಂತೋಷವುಂಟಾಗಿ ನನ್ನನ್ನು ಬರಸೆಳೆದು ಅಪ್ಪಿ ಮುದ್ದಾಡಿ ಕೈಗೊಂದು ಚಾಕಲೇಟ್ ಕೊಟ್ಟು ಕಳುಹಿಸಿದ್ದನ್ನು ಎಂದಿಗೂ ಮರೆಯಲಾಗದು.
ಇಂತಹ ನಮ್ಮ ಪ್ರೀತಿಯ ಗಿರಿಜತ್ತೆ ನಾಜೂಕಿಗೆ ಬಲು ಪ್ರಖ್ಯಾತಿ. ವಯಸ್ಸು 70+ ಆದರೂ ಚುರುಕಿನಲ್ಲಿ ಇನ್ನೂ 20+ ಹುಡುಗಿಯರೂ ನಾಚಬೇಕು ಎನ್ನುವಷ್ಟು ಸರ ಸರನೇ ಒಡಾಡುತ್ತಾ, ನಮ್ಮಜ್ಜಿಯಿಂದ ಬಳುವಳಿಯಾಗಿ ಪಡೆದಿದ್ದ ರಂಗೋಲಿ, ಹಾಡು ಹಸೆ ಎಲ್ಲವನ್ನೂ ಅಚ್ಚು ಕಟ್ಟಾಗಿ ಹಾಕುತ್ತಾ, ನಮ್ಮ ಕುಟುಂಬದ ಬಹುತೇಕ ಸಭೆ ಸಮಾರಂಭಗಳಲ್ಲಿ ಆಕೆಯದೇ ಸಾರಥ್ಯ ಎಂದರೂ ತಪ್ಪಾಗದು. ಇನ್ನು ಸಮಾರಂಭಗಳಲ್ಲಿ ನಮ್ಮತ್ತೆ ಸದಾಕಾಲವೂ ನೆನಪಿನಲ್ಲಿ ಇರುವಂತಹ ವಿಭಿನ್ನವಾದ ಉಡುಗೊರೆಗಳನ್ನು ಕೊಡುವುದರಲ್ಲೂ ಎತ್ತಿದ ಕೈ. ನೂಲಿನಂತೆ ಸೀರೆ ಅಮ್ಮಂನಂತೆ ಮಕ್ಕಳು ಎನ್ನುವ ರೀತಿ ಈಗ ಅವರ ಹೆಣ್ಣು ಮಕ್ಕಳೂ ಸಹಾ ಪ್ರತೀ ಬಾರಿ ವಿದೇಶಗಳಿಂದ ಭಾರತಕ್ಕೆ ಬಂದಾಗಲೂ ಚೆಂದನೆಯ ಉಡುಗೊರೆಗಳನ್ನು ಕೊಡುವ ಮೂಲಕ ಅದೇ ಸತ್ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ.
ಇನ್ನು ರುಚಿರುಚಿಯಾದ, ಅಡುಗೆಯನ್ನು ಮಾಡುವುದರಲ್ಲೂ ನಮ್ಮತ್ತೆ ಎತ್ತಿದ ಕೈ. ಅದೇ ರೀತಿ ಬಡಿಸುವುದರಲ್ಲಿಯೂ ಆಕೆ ಸಾಕ್ಷಾತ್ ಅನ್ನಪೂರ್ಣೆಯಾಗಿದ್ದು, ವರ್ಷವಿಡೀ ಅಯಾಯಾ ಹವಾಗುಣಕ್ಕೆ ಅನುಗುಣವಾಗಿ ನಮ್ಮ ಅತ್ತೆ ಮನೆಯ ಜಾಡಿಯಲ್ಲಿ ಹುಣಸೇ ತೊಕ್ಕು, ಮಾವಿನಕಾಯಿ, ಹೇರಳೇಕಾಯಿ, ನೆಲ್ಲಿಕಾಯಿ ಕಡೆಗೆ ಯಾವುದೂ ಇಲ್ಲದಿದ್ದರೆ ನಿಂಬೇಕಾಯಿ ಉಪ್ಪಿನಕಾಯಿ ಯಂತೂ ಇದ್ದೇ ಇರುತ್ತದೆ. ಇನ್ನು ನಮ್ಮತ್ತೆ ಮಾಡುವ ನೆಲ್ಲಿಕಾಯಿ ಜಾಮ್ ಮತ್ತು ಮಾವಿನಹಣ್ಣಿನ ಶೀಕರಣೆಯನ್ನು ವರ್ಣಿಸುವುದಕ್ಕಿಂತಲೂ ತಿಂದರೇನೇ ಮಜ ಇನ್ನು ಅಡುಗೆ ಎಷ್ಟೇ ರುಚಿಕರವಾಗಿದ್ದರೂ, ಅದನ್ನು ತಟ್ಟೆಯಲ್ಲಿ ಚಂದನೆಯಾಗಿ ಆಕರ್ಷಣೀಯವಾಗಿರಿಸಿ ತಿನ್ನುವವರಿಗೆ ಪ್ರೇರೇಪಿಸುವಂತೆ ಮಾಡುವುದರಲ್ಲಿ ನಮ್ಮತ್ತೆ ಎತ್ತಿದ ಕೈ. ತಟ್ಟೆಯಲ್ಲಿ ಉಪ್ಪಿಟ್ಟು, ಅವಲಕ್ಕಿ, ಹುಗ್ಗಿ ಹೀಗೆ ಏನೇ ಆಗಲೀ, ಅದನ್ನು ಒಂದು ಬಟ್ಟಲಿನಲ್ಲಿಟ್ಟು ನಂತರ ತಟ್ಟೆಯಲ್ಲಿ ಬೋರಲು ಹಾಕಿ ಅದರ ಮೇಲೆ ಅಲಂಕಾರಿಕವಾಗಿ ಗೋಡಂಬಿ ದ್ರಾಕ್ಷಿ ಇಟ್ಟು,ಕೊತೆಗೆ ಒಂದೆರಡು ತರಹದ ಉಪ್ಪಿನ ಕಾಯಿ, ಇಲ್ಲವೇ ಜಾಮ್ ಹಾಕಿ ಅದರ ಪಕ್ಕದಲ್ಲಿ ಸಣ್ಣಗೆ ಹೆಚ್ಚಿದ ಬಾಳೇ ಹಣ್ಣು ಇಟ್ಟು ಬಹಳ ಅಚ್ಚುಕಟ್ಟಾಗಿ ಜೋಡಿಸಿ ತಿನ್ನುವವರಿಗೆ ಮುದ ನೀಡುವಂತೆ ಕೊಡುವುದೇ ನಮ್ಮ ಅತ್ತೆಯ ವಿಶೇಷತೆಯಾಗಿತ್ತು.
ಸಾಧಾರಣವಾಗಿ ಮನೆಗೆ ಅತಿಥಿಗಳು ಬಂದ ಕೂಡಲೇ ಅವರಿಗೆಂದೇ ಹೆಚ್ಚಿನ ಅಡುಗೆ ತಯಾರು ಮಾಡಲು ಬಹುತೇಕ ಹೆಂಗಸರು ತಲೆ ಕೆಡಿಸಿಕೊಂಡರೆ, ನಮ್ಮತ್ತೆ ಅದಾವುದರ ಪರಿವೇ ಇಲ್ಲದೇ, ಮನೆಯಲ್ಲಿ ಮಾಡಿದ್ದ ಅಡುಗೆಯೇ ಆಕೆಯ ಕೈಯ್ಯಲ್ಲಿ ಅಕ್ಷಯವಾಗಿ ಎಲ್ಲರಿಗೂ ಹೊಟ್ಟೆ ತುಂಬುವಷ್ಟು ಬಡಿಸುವ ಕಾರಣ, ಅವರ ಆದರಾತಿಥ್ಯಗಳಿಗೆ ಮಾರುಹೋಗದವರೇ ಇಲ್ಲ. ಬಹುತೇಕರ ಮನೆಗಳಲ್ಲಿ ಮೊಸರು ಸಾಕಾಗುವುದಿಲ್ಲ ಎಂದು ಮಜ್ಜಿಗೆಯನ್ನು ಮಾಡಿದರೆ, ಅದೇ ನಮ್ಮ ಅತ್ತೆಯ ಮನೆಯಲ್ಲಿ ಒಂದು ಸಣ್ಣ ಪಾತ್ರೆಯಲ್ಲಿದ್ದ ಗಟ್ಟಿ ಮೊಸರಿನಲ್ಲಿಯೇ ಹತ್ತು ಜನರಿಗೆ ಸಾಕಾಗುವಷ್ಟನ್ನು ಹೇಗೆ ಉಣಬಡಿಸುತ್ತಿದ್ದರು ಎಂಬುದೇ ಇಂದಿಗೂ ನನಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿರುವ ಕಾರಣ, ಅತ್ತೆ ಮನೆಗೆ ಹೊದಾಗಲೆಲ್ಲಾ ಕೇಳಿ ಮೊಸರನ್ನು ಹಾಕಿಸಿಕೊಳ್ಳುವುದನ್ನು ಮರೆಯುತ್ತಲೇ ಇರಲಿಲ್ಲ.
ಹಿಂದೆಲ್ಲಾ ನಮ್ಮ ಕುಟುಂಬದಲ್ಲಿ ಯಾರಿಗೆ ಏನೇ ಕಷ್ಟ ಆದರೂ ಮೊದಲು ಕೈ ಚಾಚುತ್ತಿದ್ದದ್ದೇ ಅದೇ ಗಿರಿಜತ್ತೆಯ ಬಳಿಯಲ್ಲಿಯೇ. ಅದೇ ರೀತಿಯಲ್ಲಿ ಊರಿನಿಂದ ಯಾರಿಗೆ ಯಾವುದೇ ರೀತಿಯ ಅನಾರೋಗ್ಯವಾದರೂ ತಿಂಗಳಾನುಗಟ್ಟಲೆ ಬೆಂಗಳೂರಿಗೆ ಬಂದು ಉಳಿಯುತ್ತಿದದ್ದೇ ನಮ್ಮತ್ತೆಯ ಮನೆಯಲ್ಲಿಯೇ. ಇನ್ನು ಈ ಹಿಂದೆ ಎಲ್ಲರ ಬಳಿಯಲ್ಲಿಯೂ ರೇಷ್ಮೇ ಸೀರೆಗಳು ಇಲ್ಲದೇ ಇದ್ದಂತಹ ಸಮಯದಲ್ಲಿ ಮದುವೆ ಮುಂಜಿಗಳಿಗೆ ಹೋಗುವಾಗ ನಮ್ಮತ್ತೆ ಒಂದೆರಡು ರೇಷ್ಮೇ ಸೀರೆಗಳನ್ನು ಹೆಚ್ಚಿಗೆ ತೆಗೆದುಕೊಂಡು ಹೋಗಿ ಯಾರಿಗೆ ಅಗತ್ಯವಿತ್ತೋ ಅವರಿಗೆ ಬೇಜಾರಿಲ್ಲದೇ ಕೊಡುತ್ತಿದ್ದರು ನಮ್ಮತ್ತೆ. ಇನ್ನು ಊರಲ್ಲಿ ಉಂಡಾಡಿ ಗುಂಡರಾಗಿದ್ದವರ ಪೈಕಿ ಅನೇಕರನ್ನು ಬೆಂಗಳೂರಿಗೆ ಕರೆ ತಂದು ಕೆಲ ದಿನಗಳ ಕಾಲ ತಮ್ಮ ಮನೆಯಲ್ಲೇ ಇಟ್ಟು ಕೊಂಡು ಅವರಿಗೆ ಒಂದು ನೆಲೆಯನ್ನು ಕಾಣಿಸಿ ಇಂದು ಅವರಲ್ಲಿ ಅನೇಕರು ದೇಶ ವಿದೇಶಗಳಲ್ಲಿ ಇರುವುದರ ಹಿಂದೆಯೂ ನಮ್ಮತ್ತೆ ಸಾಕಷ್ಟು ಪಾತ್ರವಿದೆ.
ನಾನು ಚಿಕ್ಕವನಿದ್ದಾಗ ಮಲಗುವಾಗ ಬೆರಳು ಚೀಪುವ ಮತ್ತು ಹಾಲನ್ನ ತಿನ್ನುವ ದುರಾಭ್ಯಾಸವಿದ್ದು ಯಾರು ಎಷ್ಟೇ ಹೇಳಿದರೂ ಅದನ್ನು ಬಿಡದೇ ಹೋದಾಗ, ನನ್ನ ಚೌಲದ ಸಮಯದಲ್ಲಿ ಮನೆಗೆ ಬಂದಿದ್ದ ಅತ್ತೇ, ನೋಡು ನೀನೀಗ ದೊಡ್ಡವನಾಗಿದ್ದೀಯಾ, ಹೀಗೆ ಚಿಕ್ಕ ಮಕ್ಕಳಂತೆ ಬೆರಳು ಚೀಪುವುದು ಮತ್ತು ಹಾಲನ್ನ ಎನ್ನುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿದ ನಂತರವಷ್ಟೇ ಮೊಸರನ್ನ ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಲ್ಲದೇ ಬೆರಳು ಚೀಪುವುದನ್ನೂ ಬಿಟ್ಟಿದ್ದನ್ನು ಎಂದಿಗೂ ಮರೆಯಲಾಗದು.
ಸಣ್ಣವನಿದ್ದಾಗ ಅದೊಮ್ಮೆ ಅತ್ತೆಯ ಮನೆಗೆ ಹೋಗಿದ್ದಾಗ ಬೆಳ್ಳಿ ತಟ್ಟೆಯಲ್ಲಿ ಅತ್ತೇ ಹಾಕಿಕೊಟ್ಟ ತಿಂಡಿ ತುಂಬಾ ರುಚಿಯಾಗಿದ್ದರಿಂದಲೋ ಇಲ್ಲವೇ ಆಕರ್ಷಣೀಯವಾಗಿದ್ದರಿಂದಲೋ ಮತ್ತೊಮ್ಮೆ ಮಗದೊಮ್ಮೆ ಕೇಳಿ ಹಾಕಿಸಿಕೊಂಡು ತಿಂದು ಬಿಟ್ಟಿದ್ದೇನೆ. ಮುಂದೆ ಇನ್ಯಾವುದೋ ಸಮಯದಲ್ಲಿ ನಮ್ಮ ಅಮ್ಮಾ ಅಪ್ಪ ಅವರ ಮನೆಗೆ ಹೋಗಿದ್ದಾಗ, ನಮ್ಮ ಅತ್ತೆಯವರ ಮಾವನವರು ಶ್ರೀಕಂಠಾ ವಯಸ್ಸಿಗೆ ಮೀರಿದ ಹಾಗೆ ತಿನ್ನುತ್ತಾನೆ ಮತ್ತು ತಟ್ಟೆಯಲ್ಲೇ ಕೈ ತೊಳೆಯುತ್ತಾನೆ ಆ ಬಗ್ಗೆ ಸ್ವಲ್ಪ ಗಮನ ಕೊಡು ಎಂದು ಹೇಳಿದ್ದನ್ನು ಕೇಳಿಸಿಕೊಂಡು ಮನೆಗೆ ಬಂದು ಅಮ್ಮಾ ಕೊಟ್ಟ ಪೆಟ್ಟಿನ ನೋವು ಇಂದಿಗೂ ಮನಸ್ಸಿನಲ್ಲಿಯೇ ಉಳಿದಿರುವ ಕಾರಣ, ಇಂದಿಗೂ ಸಹಾ ಯಾರ ಮನೆಗೆ ಹೋದರೂ ಊಟ ತಿಂಡಿಯನ್ನು ಮಾಡುವುದಿಲ್ಲಾ. ಬಲವಂತವಾಗಿ ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದರೆ ಸ್ವಲ್ಪವೇ ಹಾಕಿಸಿ ಕೊಂಡು ತಿಂದು ಮುಗಿಸಿದ ಕೂಡಲೇ ತಟ್ಟೆ ಲೋಟವನ್ನು ತೊಳೆಯುವ ಅಭ್ಯಾಸ ರೂಡಿಸಿಕೊಳ್ಳುವುದಕ್ಕೂ ಪರೋಕ್ಷವಾಗಿ ಅತ್ತೆಯೇ ಕಾರಣ.
ಅದೊಮ್ಮೆ ಅತ್ತೆ ಮಾವ ನಮ್ಮ ಮನೆಗೆ ಸಂಜೆಯ ಸಮಯದಲ್ಲಿ ಬಂದಿದ್ದಾಗ, ನಾನು ಹೊರಗಿನಿಂದ ಮನೆಗೆ ಬಂದು ಕೈ ಕಾಲು ತೊಳೆದು ಅತ್ತೆ ಮಾವನಿಗೆ ನಮಸ್ಕಾರ ತಿಳಿಸಿದಾಗ, ಆಟ ಆಡಲು ಹೋಗಿದ್ಯಾ? ಎಂದು ಕೇಳಿದಾಗ, ಇಲ್ಲಾ ನಾನು ಸಂಘದ ಶಾಖೆಗೆ ಹೋಗಿದ್ದೆ ಎಂದಿದ್ದೆ. ಸಂಘಕ್ಕೆ ಹೋಗುವ ಮಕ್ಕಳು ಮುಂದೆ ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲಾ ಎಂದು ಅಂದು ಅವರು ಹೇಳಿದ್ದ ಮಾತು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದು, ಮುಂದೆ ಎಷ್ಟೇ ಕಷ್ಟ ಬಂದರೂ ಸಾಧ್ಯವಾದಷ್ಟು ನಮ್ಮ ತಾಯಿ ತಂದೆಯರನ್ನು ಅವರು ಇರುವವರೆಗೂ ಚೆನ್ನಾಗಿ ನೋಡಿಕೊಂಡಿದ್ದರ ಹಿಂದೆಯೂ ಪರೋಕ್ಷವಾಗಿ ಅತ್ತೆಯ ಪಾಲಿತ್ತು.
ಹೀಗೆ ಎಲ್ಲಾ ವಿಷಯಗಳಲ್ಲೂ ಅತ್ತೆಯನ್ನು ಅನುಕರಿಸುತ್ತಿದ್ದರೆ, ಒಂದು ವಿಷಯದಲ್ಲಿ ಮಾತ್ರಾ ನಮಗೂ ನಮ್ಮ ಅತ್ತೆಯ ಮನೆಯವರಿಗೂ ವೈರುಧ್ಯವಿದ್ದದ್ದು ಬಹುಶಃ ಬಹುತೇಕರಿಗೆ ತಿಳಿದಿರಲಿಲ್ಲ ಅಥವಾ ತಿಳಿದಿದ್ದರೂ ಹೇಳಿಕೊಳ್ಳದೇ ಇದ್ದ ವಿಷಯವೆಂದರೆ, ನಮ್ಮ ಅಪ್ಪನ ಕುಟುಂಬ ಮತ್ತು ನಮ್ಮ ಮಾವನ ಅಣ್ಣ ತಮ್ಮಂದಿರೆಲ್ಲರೂ ಕಾಂಗ್ರೇಸ್ ವಿರೋಧಿ ಮನೋಭಾವ ಹೊಂದಿದ್ದರೆ, ನಮ್ಮ ಅತ್ತೆಯ ಮನೆಯವರಿಗೆ ಮಾತ್ರಾ ಇಂದಿರಾಗಾಂಧಿಯವರೇ ಅಚ್ಚು ಮೆಚ್ಚು. ಹಾಗಾಗಿ ನಮ್ಮ ಅತ್ತೆಯ ಮನೆಯಲ್ಲಿ ನಾವ್ಯಾರೂ ಸಹಾ ಅಪ್ಪೀ ತಪ್ಪೀಯೂ ಪ್ರಸಕ್ತ ರಾಜಕೀಯದ ಕುರಿತಾಗಿ ಚರ್ಚಿಸದೇ, ಉತ್ತಮ ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದೆವು.
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವಂತೆ, LS ಓದಿದ್ದಕ್ಕೆ ಸಂಬಂಧ ಬೇಡ ಎಂದಿದ್ದ ನಮ್ಮತ್ತೆಗೆ ಆಕೆ ಇಂದು ನೋಡಿರದೇ ಇರದ ಪ್ರದೇಶಗಳೇ ಇಲ್ಲಾ ಎಂದರೂ ತಪ್ಪಾಗದು. ಮಕ್ಕಳೆಲ್ಲಾ ದೇಶ ವಿದೇಶಗಳಲ್ಲಿ ನೆಲೆಸಿದ್ದ ಕಾರಣ, ಬೆಂಗಳೂರು ಮೈಸೂರಿಗೆ ಹೋಗುವ ಹಾಗೆ 3 ತಿಂಗಳು ಸಿಂಗಾಪುರ 6 ತಿಂಗಳು ಅಮೇರಿಕಾ ನಡುವೆ ಓಡಾಡುತ್ತಾ, ಸಮಯ ಸಿಕ್ಕಾಗಲೆಲ್ಲಾ ಅಕ್ಕ ಪಕ್ಕದ ದೇಶಗಳನ್ನು ಸುತ್ತಾಡಿ ಅವುಗಳನ್ನು ಚನ್ನಾಗಿ ವರ್ಣಿಸುತ್ತಿದ್ದನ್ನು ಕಂಡು ನಾನೇ ಅದೆಷ್ಟೋ ಬಾರಿ ಅತ್ತೇ ನಾವೆಲ್ಲಾ ಅಗೊಮ್ಮೆ ಈಗೊಮ್ಮೆ foreign visit ಮಾಡಿದ್ರೇ ನೀವು ಮಾತ್ರಾ ಅಗ್ಗಾಗ್ಗೆ INDIA visit ಮಾಡ್ತೀರಿ ಅಂತ ತಮಾಷೆ ಮಾಡಿದ್ದೂ ಇದೆ.
ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳೇ ಒಂದು ರೀತಿಯ ಆಪ್ಯಾಯಮಾನವಾದದ್ದು. ಒಬ್ಬರನ್ನೊಬ್ಬರು ಬಂದು ನೋಡಿಕೊಂಡು ಕಷ್ಟ ಸುಖಃಗಳನ್ನು ಹಂಚಿಕೊಳ್ಳಲೆಂದೇ ಹಬ್ಬ ಹರಿದಿನಗಳನ್ನು ನಮ್ಮ ಪೂರ್ವಜರು ಮಾಡಿದ್ದಾರೆ. ಅದೇ ಕಾರಣಕ್ಕಾಗಿಯೇ ಎಷ್ಟೇ ಕೆಲಸ ಕಾರ್ಯಗಳು ಇದ್ದರೂ, ನಮ್ಮ ಅಪ್ಪ ಅಮ್ಮಾ ಅಗಲಿದರೂ ತಪ್ಪದೇ, ವರ್ಷಕ್ಕೆ ಎರಡು ಬಾರಿ ಅತ್ತೆ ಮನೆಗೆ ಹೋಗಿ ಗೌರಿ ಬಾಗಿಣ ಮತ್ತು ಎಳ್ಳು ಬೀರುವುದನ್ನು ತಪ್ಪಿಸುತ್ತಿರಲಿಲ್ಲ.

ಕಳೆದ ಒಂದೆರಡು ವರ್ಷಗಳಿಂದಲೂ ವಯೋಸಹಜ ಖಾಯಿಲೆಗಳಿಂದ ಸ್ವಲ್ಪ ಬಳಲಿದ್ದ ಅತ್ತೆ 2024 ಮಾರ್ಚ್ 27ರಂದು ನಮ್ಮೂರಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಜೀರ್ಣೋದ್ಧಾರದಂದು ಬಂದಾಗ ಮಾತನಾಡಿಸಿದ್ದೇ ಕಡೆಯಾಗಿ ಮೊನ್ನೆ ಏಪ್ರಿಲ್ 30ರಂದು ಮನೆಯಲ್ಲಿ ತಮ್ಮ 81 ವಯಸ್ಸಿನಲ್ಲಿ ಅಸುನೀಗುವ ಮೂಲಕ ಹಿರಿಯ ಕೊಂಡಿಯೊಂದು ಕಳಚಿಕೊಂಡಂತಾಗಿರುವುದು ನಿಜಕ್ಕೂ ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟವೇ ಸರಿ. ಇನ್ನು ಮುಂದೆ ಮಲ್ಲೇಶ್ವರ ಮತ್ತು ಸದಾಶಿವ ನಗರದ ಕಡೆ ಹಾದು ಹೋಗುವಾಗಲೆಲ್ಲಾ ಮನದಲ್ಲಿ ಶೂನ್ಯವೊಂದು ಕಾಡುವುದಂತೂ ಖಂಡಿತ.
ಅದಕ್ಕೇ ಹೇಳೋದು ಹೆಣ್ಣು, ಸಂಸಾರ ಮತ್ತು ಸಂಸ್ಕಾರದ ಕಣ್ಣು. ಇದನ್ನು ಅಕ್ಷರಶಃ ರೂಢಿಯಲ್ಲಿರಿಸಿ, ತನ್ನ ತವರು ಮನೆ ಮತ್ತು ತಾನು ಹೋದ ಮನೆಯನ್ನೂ ಬೆಳಗುವಂತೆ ಮಾಡಿದ್ದ ನಮ್ಮ ಗಿರಿಜಾ ಅತ್ತೆಯವರು ಇನ್ನು ಮುಂದೆ ನಮ್ಮೊಂದಿಗೆ ಭೌತಿಕವಾಗಿ ಇಲ್ಲದೇ ಹೋದರೂ ಅವರಿಂದ ನಾವುಗಳು ಕಲಿತದ್ದು ಖಂಡಿತವಾಗಿಯೂ ನಮ್ಮ ಜೀವಮಾನದುದ್ದಕ್ಕೂ ಇರುವ ಕಾರಣ ಸದಾಕಾಲವೂ ನಮ್ಮತ್ತೆ ನಮ್ಮೊಂದಿಗೆ ಇದ್ದೇ ಇರ್ತಾರೆ ಅಲ್ವೇ?
ಏನಂತೀರಿ?
ಸೃಷ್ಟಿಕರ್ತ ಉಮಾಸುತ
ತುಂಬ ಅತ್ಯುತ್ತಮ ಲೇಖನ. ಓದಿದಷ್ಟೂ ಓದ ಬೇಕೆನಿಸುತ್ತದೆ
LikeLiked by 1 person