ಎದೆ ತುಂಬಿ ಬರೆಯುವೆನು/ಮಾತನಾಡುವೆನು ಎಂದಿನಂತೇ!

ಕನ್ನಡದ ಕವಿ, ಅದರಲ್ಲೂ ಸಮನ್ವಯ ಕವಿ. ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ. ಗೋವಿಂದ ಪೈ, ಕುವೆಂಪು ಮತ್ತು ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅರ್ಥಾತ್ ಜಿ. ಎಸ್. ಶಿವರುದ್ರಪ್ಪ ಅಥವಾ ಎಲ್ಲರಿಗೂ ಪ್ರೀತಿಯ ಜಿ.ಎಸ್.ಎಸ್ ಅವರ ಅತ್ಯಮೂಲ್ಯ ಕೃತಿ ಎಂದೇ ಪರಿಗಣಿಸಲಾಗಿರುವ ಮತ್ತು ಕನ್ನಡದ ಬಹುತೇಕ ಭಾವಗೀತೆ ಗಾಯಕರು ಎಲ್ಲಾ ಕಡೆಯಲ್ಲೂ ಎಲ್ಲಾ ಸಮಯದಲ್ಲೂ ಹಾಡಿ ಎಲ್ಲರ ಮನಸ್ಸೂರೆಗೊಳ್ಳುವ ಎದೆ ತುಂಬಿ ಹಾಡುವೆನು ಎಂಬ ಹಾಡಿನಲ್ಲಿ ಬರುವ ಈ ಸಾಲುಗಳು ನಿಜಕ್ಕೂ ಅನನ್ಯವಾಗಿದೆ.

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ

ಕೇಳುವವರಿಹರೆಂದು ನಾ ಬಲ್ಲೆ ಅದರಿಂದ ಹಾಡುವೆನು ಮೈದುಂಬಿ ಎಂದಿನಂತೆ

ಯಾರು ಕಿವಿ ಮುಚ್ಚಿದರೂ ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ

ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಎದೆ ತುಂಬಿ ಹಾಡಿದೆನು ತನು ತುಂಬಿ ಮನತುಂಬಿ ಹಾಡುವೆನು ಇಂದು ನಾನೂ…

ಅರೇ!! ಇದೇನಿದು ಜಿ.ಎಸ್.ಎಸ್. ಅವರ ಈ ಪದ್ಯ ಇಲ್ಲೇಕೆ ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಕೊಡಲೆಂದೇ ಈ ಲೇಖನ ಬರೆಯುತ್ತಿದ್ದೇನೆ. ಹೇಳಿ ಕೇಳಿ ನಮ್ಮದು ಸಾರಸ್ವತ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿರುವ ವಂಶ. ನಮ್ಮ ತಾತನವರಾದ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ನಾಡಿನ ಖ್ಯಾತ ಗಮಕಿಗಳು, ಪ್ರಖ್ಯಾತ ಹರಿಕಥಾ ವಿದ್ವಾಂಸರು ಮತ್ತು ನೂರಾರು ಕೃತಿಗಳನ್ನು ರಚಿಸಿರುವ ನಾಡಿನ ಹೆಮ್ಮೆಯ ವಾಗ್ಗೇಯಕಾರರಾಗಿದ್ದ ದಿವಂಗತ ಶ್ರೀ ಬಾಳಗಂಚಿ ಗಮಕಿ ನಂಜುಂಡಯ್ಯನವರು. ಇನ್ನು ನಮ್ಮ ತಂದೆಯವರೂ ಸಹಾ ಅವರ ತಂದೆಯಂತೆ ಗಮಕದಲ್ಲಿ ವಿದ್ವತ್ ಪರೀಕ್ಷೆಯನ್ನು ಮುಗಿಸಿ ತಮ್ಮದೇ ಆದ ವಿಶಿಷ್ಠ ಶೈಲಿಯಲ್ಲಿ ವಾಚನದೊಂದಿಗೆ ಆರಂಭಿಸಿ ನಂತರದ ದಿನಗಳಲ್ಲಿ ವ್ಯಾಖ್ಯಾನದ ಕಡೆ ಒಲವು ತೋರಿ, ನಾಡಿನ ಎಲ್ಲಾ ಕಡೆಗಳಲ್ಲೂ ತಮ್ಮ ಗುರು ಶ್ರೀ ನಾರಾಯಣ ಆವರೊಂದಿಗೆ ಗಮಕ ವಾಚನ ಮತ್ತು ವ್ಯಾಖ್ಯಾನ ಮಾಡುತ್ತಿದ್ದದ್ದಲ್ಲದೇ, ತಮ್ಮ ತಂದೆಯವರೊಂದಿಗೆ ಮೈಸೂರಿನ ಅರಮನೆಯ ದರ್ಬಾರ್ ಹಾಲಿನ ಸಂಗೀತ ಕಛೇರಿಗೆ ಹೋಗಿದ್ದಾಗ, ಅಲ್ಲಿ ಮೋರ್ಚಿಂಗ್ ವಾದನವನ್ನು ನುಡಿಸುತ್ತಿದ್ದದ್ದನ್ನು ನೋಡಿ ಅದರಿಂದ ಆಕರ್ಷಿತರಾಗಿ ಏಕಲವ್ಯನಂತೆ ಯಾವುದೇ ಗುರುಗಳ ನೆರವಿಲ್ಲದೇ, ಸ್ವತಃ ಮೋರ್ಚಿಂಗ್ ವಾದನವನ್ನು ನುಡಿಸುವುದನ್ನು ಕಲಿತು ನಾಡಿನ ಖ್ಯಾತ ಸಂಗೀತಗಾರರು ಮತ್ತು ನೃತ್ಯಗಾರರೊಂದಿಗೆ ಪಕ್ಕವಾದ್ಯಗಾರರಾಗಿ ನೂರಾರು ವೇದಿಕೆಗಳನ್ನು ಹಂಚಿಕೊಂಡ ಪ್ರಖ್ಯಾತರು.

ಅಂತಹ ದಿಗ್ಗಜರ ಮೊಮ್ಮಗ ಮತ್ತು ಮಗನಾದ ನನ್ನನ್ನು ಭೇಟಿಯಾಗುವ ಸಂಬಂಧಿಗಳು ಮತ್ತು ಸ್ನೇಹಿತರು ಸಹಜವಾಗಿ, ಏನಯ್ಯಾ!! ನೀನೂ ಸಹಾ ನಿಮ್ಮ ತಾತ ಮತ್ತು ತಂದೆಯವರಂತೆಯೇ ಸಂಗೀತ ಗಮಕಭ್ಯಾಸವನ್ನು ಮುಂದುವರೆಸುತ್ತಿದ್ದೀಯೋ? ಎಂದು ಕೇಳುವಾಗಲೆಲ್ಲಾ ಅಂತಹವರಿಗೆ ಇಲ್ಲಾ!! ನಾನು ಶಾಸ್ತ್ರೀಯವಾಗಿ ಸಂಗೀತ ಮತ್ತು ಗಮಕಭ್ಯಾಸ ಮಾಡಿಲ್ಲಾ ಎಂದು ಹೇಗೆ ಹೇಳುವುದು? ಎಂಬ ಕಸಿವಿಸಿ ಬಹಳ ವರ್ಷಗಳಿಂದಲೂ ಇದ್ದು, ನಂತರ ನಮ್ಮ ತಂದೆಯವರ, ಅಕಾಲಿಕ ಮರಣಾನಂತರ ಆವರ ಶ್ರದ್ಧಾಂಜಲಿ ರೂಪದಲ್ಲಿ ಬರೆದ ಲೇಖನ ಎಲ್ಲರ ಮೆಚ್ಚುಗೆ ಪಡೆದು, ಅರೇ!! ನೀನೂ ಸಹಾ ನಿಮ್ಮ ತಾತ ಮತ್ತು ಅಪ್ಪನಂತೆಯೇ ಚೆನ್ನಾಗಿ ಬರೆಯುತ್ತೀಯಾ! ಎಂದು ಹೇಳಿದಾಗ ಸ್ವಲ್ಪ ಧೈರ್ಯ ಬಂದಿತ್ತು.

ಇದಕ್ಕೂ ಮುಂಚೆ ಬರೆಯುತ್ತಿದ್ದೆನಾದರೂ ಎಲ್ಲವೂ ಕೇವಲ ಫೇಸ್ ಬುಕ್ ಮತ್ತು ವಾಟ್ಶಾಪ್ ಗುಂಪುಗಳಲ್ಲಿ ಯಾವುದೋ ಪಕ್ಷದ/ಧರ್ಮ/ಭಾಷೆಯ ಪರ ವಿರೋಧ ಚರ್ಚೆಗಷ್ಟೇ ಸೀಮಿತವಾಗಿ ಅದೆಷ್ಟೋ ಬಾರಿ ಅದು ಅನಾವಶ್ಯಕವಾದ ವಿತಂಡವಾದಗಳಿಗೆ ತಿರುಗಿ ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಾಗಿರಬೇಕಿದ್ದ ವಿಷಯ ಮನೆಯ ವರೆಗೂ ಬಂದಾಗ ಸಹಜವಾಗಿ ಕುಟುಂಬ ಅದರಲೂ ವಿಶೇಷವಾಗಿ ನನ್ನ ಶ್ರೇಯೋಭಿಲಾಷಿಯಾದ ಮಡದಿಗೆ ಕೋಪವನ್ನು ತರಿಸುತ್ತಿತ್ತು. ಹೀಗೇ ಯಾವುದೋ ರಾಜಕೀಯ ನಾಯಕರ ವಿರುದ್ಧ ಬರೆದಿದ್ದ ಲೇಖನವನ್ನು ಓದಿದ ನಮ್ಮ ಗುರುಗಳು ಮತ್ತು ಹಿತೈಷಿಗಳಾದ ಹೋಸಕೋಟೆಯಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿರುವ ಶ್ರೀ ಮಹಾಬಲೇಶ್ವರ ಅವಧಾನಿಯವರು, ಕರೆ ಮಾಡಿ, ನೋಡು.. ವಯಸ್ಸಿನಲ್ಲಿ ನಿನಗಿಂತಲೂ ಹಿರಿಯ ಎಂಬ ಸಲುಗೆಯಿಂದ ಒಂದು ಮಾತನಾಡುತ್ತಿದ್ದೇನೆ. ಕಿವಿ ಕೊಟ್ಟು ಕೇಳು. ನಿನ್ನನ್ನೇ ನಂಬಿರುವಂತಹ ನಿನ್ನ ಹೆಂಡತಿ ಮಕ್ಕಳು ಇದ್ದಾರೆ. ಅವರ ಜವಾಬ್ಧಾರಿ ನಿನ್ನ ಮೇಲಿದೆ ಎನ್ನುವುದು ನಿನಗೆ ಅರಿವಿರಲಿ. ಇನ್ನು ಮುಂದೆ ಈ ರೀತಿಯ ಪ್ರಚೋದನಾತ್ಮಕ ಬರಗಳನ್ನು ನಿಲ್ಲಿಸಿ ಉತ್ತಮ ರೀತಿಯ ಬರಹಗಳನ್ನು ಬರೆಯುವುದನ್ನು ರೂಢಿಸಿಕೊ. ಇದು ನನ್ನ ಆಜ್ಞೆ, ಇದೇ ನೀನು ನನಗೆ ನೀಡುವ ಗುರು ಕಾಣಿಕೆ ಎಂದು ತಿಳಿದುಕೋ ಎಂದು ಹೇಳಿದ್ದನ್ನು ಮಡದಿಗೆ ಹೇಳಿದಾಗಾ. ಅಕೆಯೂ ಮತ್ತೊಮ್ಮೆ ನೋಡಿ ನಿಮಗಿರುವ ಪ್ರತಿಭೆಯನ್ನು ಉತ್ತಮವಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡಲ್ಲಿ ನಿಮಗೂ ಮತ್ತು ಕುಟುಂಬಕ್ಕೂ ಉತ್ತಮ ಮತ್ತು ನಾಡಿಗೂ ಹೆಮ್ಮೆ ಎಂದು ಹೇಳಿದ್ದನ್ನು ತೀವ್ರವಾಗಿ ಮನಸ್ಸಿಗೆ ತೆಗೆದುಕೊಂಡು ಸುಮಾರು 6-7 ವರ್ಷಗಳ ಹಿಂದೆ ನಾಡು, ನುಡಿ, ಸಂಸ್ಕಾರ, ಸಂಪ್ರದಾಯದ ಕುರಿತಾಗಿ ಸದಭಿರುಚಿಯ ಲೇಖನಗಳನ್ನು ಬರೆಯಲು ಆರಂಭಿಸಿ ಇಂದು 1200ಕ್ಕೂ ಹೆಚ್ಚಿನ ಲೇಖನಗಳು ನನ್ನ ಏನಂತೀರೀ ಬ್ಲಾಗಿನಲ್ಲಿದೆ.

ಕಲಿಯುವುದಕ್ಕೆ ಯಾವುದೇ ವಯಸ್ಸಿಲ್ಲಾ ಮತ್ತು ಯಾರದ್ದೇ ಹಂಗಿಲ್ಲ. ಹಾಗೆ ಕಲಿಯುವಾಗ ಅದು ಚಿಕ್ಕವವರಿರಲೀ ಅಥವಾ ದೊಡ್ಡವರಾಗಿರಲೇ ಹೇಳಿದ್ದನ್ನು ಕೇಳುವುದರಲ್ಲಿ ತಪ್ಪಿಲ್ಲಾ ಎನ್ನುವುದಕ್ಕೆ ಪೂರಕವಾಗಿ ನಾನು ಬರೆದು ಪ್ರಕಟಿಸುತ್ತಿದ್ದ ಲೇಖನಗಳು ಆರಂಭದಲ್ಲಿ ಎಲ್ಲರಿಗೂ ತಲುಪದೇ ಹೋಗುತ್ತಿದ್ದದ್ದನ್ನು ಗಮನಿಸಿದ ನನ್ನ ಮಗ ಸಾಗರ್, ಅಪ್ಪಾ! ಇಂದು ಜನರು ಓದುವುದನ್ನು ಕಡಿಮೆ ಮಾಡಿ, ಯೂಟ್ಯೂಬ್, ಪಾಡ್ಕಾಸ್ಟ್ ಗಳಿಗೆ ಮೊರೆ ಹೋಗಿರುವ ಕಾರಣ, ನಿಮ್ಮ ಬರಹಗಳನ್ನು ನೀವೇ ಏಕೆ ಯೂಟ್ಯೂಬ್ ಗಳಲ್ಲಿ ಹಾಕಬಾರದು? ಎಂದು ಹೇಳಿದ್ದನ್ನು ಪರಿಗಣಿಸಿ ಆರಂಭಿಸಿದ ಏನಂತೀರೀ? YouTube ಛಾನೆಲ್ಲಿನಲ್ಲಿಯೂ ಸಹಾ ಇಂದು 400ಕ್ಕೂ ಅಧಿಕ ಸದಭಿರುಚಿಯ ವೀಡಿಯೋಗಳು ಇದ್ದು, ಈ ಮೂಲಕ ಬೇಕೋ ಬೇಡವೋ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಕಂಠ ಬಾಳಗಂಚಿ, ಉಮಾಸುತ, ಸೃಷ್ಟಿಕರ್ತ ಮತ್ತು ಏನಂತೀರೀ? ಬಹುತೇಕರಿಗೆ ಪರಿಚಿತವಾಗಿದ್ದು, ಹೋದ ಬಂದ ಕಡೆಗಳಲ್ಲಿ ನನ್ನನ್ನು ನೋಡಿದವರು ಅವರೇ ಬಂದು ನೀವು ಶ್ರೀಕಂಠಾ ಅಲ್ವಾ! ನಿಮ್ಮ ಏನಂತೀರೀ? ಲೇಖನಗಳು ಮತ್ತು ವಿಡೀಯೋಗಳು ಬಹಳ ಚೆನ್ನಾಗಿ ಮೂಡಿಬರುತ್ತಿದೆ ಎಂದು ಹೇಳುವುದಲ್ಲದೇ, ಈ ವಿಷಯದ ಕುರಿತಾಗಿ ಬರೆಯಿರಿ, ಆ ದೇವಾಲಯದ ಕುರಿತಾಗಿ ಹೆಚ್ಚಿನ ಮಾಹಿತಿಗಳನ್ನು ನಿಮ್ಮ ವೀಡಿಯೋ ಮೂಲಕ ತಿಳಿಸಿ ಎನ್ನುವಾಗ, ಅಬ್ಬಬ್ಬಾ ಬರಹಗಾರರಿಂದ ಸಮಾಜ ಏನೆಲ್ಲಾ ಹೇಗೆಲ್ಲಾ ನೀರೀಕ್ಷೆ ಮಾಡುತ್ತದೆ ಮತ್ತು ನಾವುಗಳು ಅದಕ್ಕೆ ಯಾವ ರೀತಿಯಾಗಿ ಸ್ಪಂದಿಸ ಬೇಕು? ಎಂಬೆಲ್ಲಾ ಕುರಿತಾಗಿ ಆಲೋಚನೆ ಮೂಡಿಸುವುದಲ್ಲದೇ ಸಮಾಜಕ್ಕೆ ನಮ್ಮ ಕಳಕಳಿ ಮತ್ತು ಜವಾಬ್ಧಾರಿ ಯಾವ ಮಟ್ಟದಲ್ಲಿ ಇರುತ್ತದೆ ಎನ್ನುವುದನ್ನು ತೋರಿಸುತ್ತದೆ,

ಕಳೆದ ವರ್ಷ ಹುಳಿಮಾವು ಭಾಗದ ಮಂಥನದಲ್ಲಿ ಕರ್ನಾಟಕಕ್ಕೆ ಮೈಸೂರು ಅರಸರ ಕೊಡುಗೆಗಳು ಕುರಿತಾಗಿ ಸುಮಾರು ಒಂದು ಘಂಟೆಗಳ ಕಾಲ ಮಾಡಿದ್ದ ಬೌದ್ಧಿಕ್ಕನ್ನು ಸಂವಾದ ಛಾನಲ್ ಅವರು ರೆಕಾರ್ಡಿಂಗ್ ಮಾಡಿ ಅವುಗಳನ್ನು ಸುಂದರವಾಗಿ ಸಣ್ಣ ಸಣ್ಣ ಭಾಗಗಳಲ್ಲಿ ಅವರ ಯೂಟ್ಯೂಬ್ ಛಾನೆಲ್ಲಿನಲ್ಲಿ ಹಾಕಿದ ವೀಡೀಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರವಂತೂ ಹೋದ ಬಂದ ಕಡೆಯಲ್ಲೆಲ್ಲಾ ಅದೇ ಮಾತು. ಈ ವೀಡೀಯೋದಿಂದಾಗಿ ವಿವಿಧ ಕಾರಣಗಳಿಂದ ಅನೇಕ ವರ್ಷಗಳ ಕಾಲ ಸಂಪರ್ಕದಲ್ಲೇ ಇರದಿದ್ದ ನನ್ನ ಅನೇಕ ಬಂಧು ಮಿತ್ರರು ಒಮ್ಮಿಂದೊಮ್ಮೆಲೆ ಅರೇ!! ಇದು ನಮ್ಮ ಶ್ರೀಕಂಠನ ವೀಡಿಯೋ ಅಲ್ವಾ! ಎಂದು ಕಕ್ಕುಲತೆಯಿಂದ ನೋಡಿ, ಆನಂದಿಸಿ ಹೆಮ್ಮೆ ಪಟ್ಟು ಅದನ್ನು ಮತ್ತೆ ನೂರಾರು ಜನರಿಗೆ ಫಾರ್ವರ್ಡ್ ಮಾಡಿದ್ದಲ್ಲದೇ, ವಯಕ್ತಿಕವಾಗಿ ನನಗೆ ಕರೆ ಮಾಡಿ ಬಾಳಗಂಚಿ ನಂಜುಂಡಯ್ಯನವರು ಅಂದು ಗಮಕ ಮತ್ತು ಹರಿಕಥೆಗಳ ಮೂಲಕ ಜನರನ್ನು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಜಾಗೃತಿಗೊಳಿಸುತ್ತಿದ್ದರು. ಅವರ ಮೊಮ್ಮಗನಾಗಿ ನೀನು ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಆಧುನಿಕ ರೀತಿಯಲ್ಲಿ ಅದೇ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಹೇಳುವಾಗ, ನನಗೇ ಅರಿವಿಲ್ಲದಂತೆಯೇ ನನ್ನ ಕಂಠಗಳು ಗದ್ಗದಿತವಾಗಿ ಮಾತೇ ಹೊರಡದಂತಾಗುತ್ತದೆ.

WhatsApp Image 2024-05-20 at 15.50.02ಇದೇ ವೀಡಿಯೋ ನೋಡಿ ಹತ್ತಾರು ಜನರನ್ನು ವಿಚಾರಿಸಿ ನಂತರ ಹೇಗೋ ನನ್ನ ಮೊಬೈಲ್ ನಂಬರ್ ಪಡೆದುಕೊಂಡ ನಾಡಿನ ಹೆಮ್ಮೆಯ ವಾರಪತ್ರಿಕೆ ತರಂಗದ ಸಂಪಾದಕರು, ವಿಜಯನಗರ ಮತ್ತು ಬೆಂಗಳೂರು ನಗರದ ಇತಿಹಾಸದ ಕುರಿತಾಗಿ ಸತತ ಎರಡು ವಾರಗಳ ಕಾಲ ಸುಮಾರು 40 ಪುಟಗಳ ಮುಖಪುಟ ಲೇಖನವನ್ನು ಪಕಟಿಸಿದ್ದಲ್ಲದೇ, ಮುಂದಿನ 20 ವಾರಗಳ ಕಾಲ ಬೆಂಗಳೂರಿನ ವಿವಿಧ ಬಡಾವಣೆಗಳು ಮತ್ತು ರಸ್ತೆಗಳು, ವೃತ್ತದ ಬಗ್ಗೆ ನಾನು ಬರೆದಿದ್ದ ಲೇಖನಗಳನ್ನು ಪ್ರಕಟಿಸುವ ಮೂಲಕ ನಾಡಿನ ಮೂಲೆ ಮೂಲೆಗೂ ನನ್ನ ಹೆಸರನ್ನು ಪರಿಚಯ ಮಾಡಿಸಿದ್ದಲ್ಲದೇ, ತರಂಗದಲ್ಲಿ ನನ್ನ ಲೇಖನ ಪ್ರಕಟವಾಗುತ್ತಿದ್ದ ಆಷ್ಟೂ ವಾರಗಳ ಕಾಲ ನನ್ನ ಅನೇಕ ಬಂಧು ಮಿತ್ರರು ತರಂಗವನ್ನು ತಮ್ಮ ಮನೆಗೆ ತರಿಸಿಕೊಂಡು ಓದಿ ನನಗೆ ಹಾರೈಸುತ್ತಿದ್ದದ್ದು, ನಿಜಕ್ಕೂ ನನ್ನ ಜೀವನದಲ್ಲಿ ಮರೆಯಲಾಗದ ಅನುಭವ.

WhatsApp Image 2024-05-17 at 15.20.31

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಎನ್ನುವಂತೆ ಲೇಖನ ಪ್ರಕಟಗೊಂಡು ನಾಲ್ಕೈದು ತಿಂಗಳುಗಳು ಕಳೆದು ಹೋದರೂ, ಇಂದಿಗೂ ಅನೇಕರು ಅದೇ ಲೇಖನಗಳ ಮೂಲಕ ನನ್ನನ್ನು ಗುರುತಿಸುವಂತಾಗಿರುವುದಲ್ಲದೇ, ಇನ್ನೂ ಅನೇಕರು ತರಂಗ ಕಛೇರಿಗೆ ಕರೆ ಮಾಡಿ ನನ್ನ ನಂಬರ್ ತೆಗೆದುಕೊಂಡು ಆ ಸರಣಿ ಲೇಖನಗಳ ಕುರಿತಾಗಿಯೇ ಕರೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಕೆಲ ತಿಂಗಳುಗಳ ಹಿಂದೆ ಬೆಂಗಳೂರು ದಕ್ಷಿಣ ಭಾಗದ ಶ್ರೀಮತಿ ಪರಿಮಳ ಎನ್ನುವವರು ಕರೆ ಮಾಡಿ ಅವರ ಮಗ ತೇಜನಿಗೆ ಆ ಲೇಖನಗಳು ಬಹಳ ಇಷ್ಟವಾಗಿದೆ ಹಾಗಾಗಿ ಅವನು ನಿಮ್ಮೊಂದಿಗೆ ಮಾತನಾಡಬೇಕೆಂತೆ ಎಂದಾಗ, ಸರಿ ಅಗತ್ಯವಾಗಿ ಮಾತನಾಡೋಣವಂತೆ ಪೋನ್ ಕೊಡಿ ಎಂದಾಗ, ಕ್ಷಮಿಸಿ ಸಣ್ಣ ವಯಸ್ಸಿನಿಂದಲೇ ಕೆಲವು ಕಾರಣಗಳಿಂದಾಗಿ ಅವನಿಗೆ ಮಾತನಾಡಲಾಗುವುದಿಲ್ಲ ಮತ್ತು ಸರಿಯಾಗಿ ಓಡಾಡಲು ಆಗುವುದಿಲ್ಲ. ಇಷ್ಟೆಲ್ಲಾ ದೈಹಿಕ ತೊಂದರೆಗಳ ನಡುವೆಯೂ ಆತ ಎಂ. ಎ. ಸೋಷಿಯಾಲಜಿ ಓದಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ನಾವು ಹೇಳಿದ್ದೆಲ್ಲವೂ ಅವನಿಗೆ ಅರ್ಥವಾಗುತ್ತದೆ ಮತ್ತು ಆತ ಚೆನ್ನಾಗಿ ಓದಿ ಬರೆಯಬಲ್ಲ ಎಂದಾಗ, ಆ ದೇವರ ಮಗುವಿನ ಬಗ್ಗೆ ಅಕ್ಕರೆ ಮೂಡಿದ್ದಂತೂ ಸತ್ಯ. ಆದಾದ ನಂತರ ಪ್ರತಿನಿತ್ಯವೂ ನನ್ನ ಒಂದಲ್ಲಾ ಒಂದು ಲೇಖನಗಳನ್ನು ತೇಜು ಮತ್ತು ಅವರ ತಾಯಿಯವರಿಗೆ ಕಳುಹಿಸಿ ಕೆಲವೊಮ್ಮೆ ಆವರಿಂದ ಪ್ರತಿಕ್ರಿಯೆಗಳು ಬರುತ್ತಿದ್ದದ್ದನ್ನು ನೋಡಿ ಹರ್ಷಗೊಳ್ಳುತ್ತಿದ್ದೆ.

tejuಕಳೆದ ಭಾನುವಾರ, 2024 ಮೇ 19ರಂದು ಸಂಜೆ 5.00 ಗಂಟೆಗೆ ಜೆ.ಪಿ.ನಗರದ ಮಂಥನ ಕಾರ್ಯಕ್ರಮದಲ್ಲಿ ಬೆಂಗಳೂರು ಇತಿಹಾಸದ ಕುರಿತಾಗಿ ನನ್ನ ಬೌದ್ಧಿಕ್ ಕಾರ್ಯಕ್ರಮಕ್ಕೆ ಬರಲು ಸಾಧ್ಯವೇ? ಆಮೂಲಕ ಮುಖತಃ ಭೇಟಿ ಆಗಬಹುದು ಎಂದು ಕೇಳಿದಾಗ, ಸಂತೋಷದಿಂದ ಒಪ್ಪಿಕೊಂಡ ಅವರು, ನಾವು ಸಂಜೆ 4:30ಕ್ಕೆ ಆ ಸ್ಥಳಕ್ಕೆ ಹೋಗುವಷ್ಟರಲ್ಲೇ, ನಮಗಿಂತಲೂ ಹತ್ತು ನಿಮಿಷಗಳ ಮುಂಚೆಯೇ ಅವರಿಬ್ಬರೂ ಅಲ್ಲಿಗೆ ಬಂದಿದ್ದನ್ನು ನೋಡಿ, ಗುರುತಿಸಿ ಬಹಳ ಸಂತೋಷದಿಂದ ಮಾತನಾಡಿಸಿದ್ದೆ. ಇಡೀ ಕಾರ್ಯಕ್ರಮ ಮುಗಿಯುವವರೆಗೂ ತೇಜು ಮತ್ತು ಅವರ ತಾಯಿಯವರು ಭಾಗವಹಿಸಿ, ಕಾರ್ಯಕ್ರಮದ ನಂತರ ನನ್ನೊಂದಿಗೆ ಪೋಟೋ ಕೂಡಾ ತೆಗೆಸಿಕೊಂಡಿದ್ದಲ್ಲದೇ, ಮನೆಗೆ ತಲುಪಿದ್ದಕ್ಕೆ ಸಂದೇಶವನ್ನೂ ಸಹಾ ಕಳುಹಿಸಿ, ಕಾರ್ಯಕ್ರಮದ ಅಡುಕುಮುದ್ರಿಕೆಯನ್ನು ಕಳುಹಿಸಿ ಕೊಡಿ ಅಚ್ಚಕನ್ನಡ ಸ್ವಚ್ಛ ಪದಗಳಲ್ಲಿ ಕೇಳಿದ್ದದ್ದು ಕಂಡು ಅಚ್ಚರಿಯನ್ನು ಮೂಡಿಸಿತ್ತು. ಇದಷ್ಟೇ ಆಗಿದ್ದರೆ ಪರವಾಗಿಲ್ಲ.

parimala

ಮಾರನೇ ದಿನ ಅವರ ತಾಯಿಯವರು ಕಳುಹಿಸಿದ ಸಂದೇಶ ನಿಜಕ್ಕೂ ಅವರ್ಣನೀಯವಾಗಿದ್ದರಿಂದ ಅದನ್ನು ಯಥಾವತ್ ಹಾಗೆಯೇ ಇಲ್ಲಿ ಪ್ರಕಟಿಸಿದ್ದೇನೆ. ಅವರ ಮಗ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿ ಸಂತೋಷಗೊಂಡಿದ್ದಲ್ಲದೇ, ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿಕೊಂಡು ಫೋಟೋದೊಂದಿಗೆ ಅದನ್ನು ತನ್ನ ಬಂಧು ಮಿತ್ರರೊಡನೆ ಹಂಚಿಕೊಂಡು ಸಂತೋಷ ಪಟ್ಟ ವಿಷಯವನ್ನು ತಿಳಿಸಿದ್ದಲ್ಲದೇ, ನನಗೆ ಈ ರೀತಿಯಾದ ಸಂಸ್ಕಾರ ಕೊಟ್ಟ ನಮ್ಮ ತಂದೆ ತಾಯಿಯರನ್ನು ನೆನೆಸಿ ನನಗೆ ಹರಸಿದ್ದನ್ನು ಓದಿ, ನನಗೇ ಅರಿವಿಲ್ಲದಂತೆಯೇ, ಕಣ್ಣಂಚಿನಿಂದ ನೀರು ಹರಿದಿದ್ದಲ್ಲದೇ, ಛೇ! ಇದನ್ನು ನೋಡಲು ಅಪ್ಪಾ ಅಮ್ಮಾ ಇಲ್ಲವಲ್ಲಾ ಎಂಬ ನೋವು ಕಾಡಿತಾದರೂ, ಹೆತ್ತ ಅಮ್ಮಾ ಅಪ್ಪ ಇಲ್ಲದೇ ಇದ್ದರೇನಂತೆ, ಈಗ ಅಭಿಮಾನಿ ದೇವರುಗಳು ರೂಪದಲ್ಲಿ ಈ ರೀತಿಯ ನೂರಾರು ಅಪ್ಪಾ, ಅಮ್ಮಾ, ಅಣ್ಣ, ತಮ್ಮಾ, ಅಕ್ಕ, ತಂಗಿಯರು ಸಿಕ್ಕಿರುವುದು ಪೂರ್ವ ಜನ್ಮದ ಸುಕೃತವೇ ಸರಿ.

vemberಆದೇ ಕಾರ್ಯಕ್ರಮಕ್ಕೆ ಮುಖಪುಟದ ಮತ್ತೊಬ್ಬ ಸ್ನೇಹಿತರಾದ‌ ಮತ್ತು ಹಿರಿಯರಾದ ಶ್ರೀ ಶ್ರೀನಿವಾಸ್ ವೆಂಬರ್ ಅವರೂ ಸಹಾ ಆಗಮಿಸಿ ಕಾರ್ಯಕ್ರಮದ ನಂತರ ಮನಃ ಪೂರ್ವಕವಾಗಿ ಆಶೀರ್ವದಿಸಿ, ಸಣ್ಣದಾದ ದೇವಿಯ ಫೋಟೋ ಜೊತೆ ಕೊಬ್ಬರೀ ಮಿಠಾಯಿ ಕೊಟ್ಟು ನಮ್ಮೊಂದಿಗೆ ಮೆಟ್ರೋದಲ್ಲೂ ಶ್ರೀರಾಮ ಪುರದ ವರೆಗೂ ಬಂದದ್ದು ನೋಡಿ, ಒಬ್ಬ ಹವ್ಯಾಸಿಈ ಬರಹಗಾರನಿಗೆ ಇದಕ್ಕಿಂತಲೂ ಹೆಚ್ಚಿನ ಮಾನ ಸನ್ಮಾನಗಳು ಬೇಕೆ? ಎಂದೆನಿಸಿ, ಆರಂಭದಲ್ಲೇ ಹೇಳಿದಂತೆ ಜಿ.ಎಸ್.ಎಸ್. ಅವರ ಎದೆ ತುಂಬಿ ಹಾಡುವೆನು ಹಾಡು ನೆನಪಾಗಿದ್ದಂತೂ ಸುಳ್ಳಲ್ಲ.

WhatsApp Image 2024-05-20 at 15.50.01ಕಾರ್ಯಕ್ರಮದಲ್ಲಿ ಒಂದೊಂದೇ ವಿಷಯವನ್ನು ಹಂಚುಕೊಳ್ಳುತ್ತಿದ್ದಾಗ, ಅದಕ್ಕೆ ತಕ್ಕಂತೆ ಸ್ಪಂದಿಸುತ್ತಿದ್ದ ಪ್ರೇಕ್ಷಕರು, ಕಾರ್ಯಕ್ರಮದ ನಂತರದ ಅನೌಪಚಾರಿಕ ಸಮಯದಲ್ಲಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಲ್ಲದೇ, ಎರಡು ಮೂರು ತಿಂಗಳಿಗೊಮ್ಮೆ ಇವರಿಂದಲೇ ಇದೇ ರೀತಿಯ ಮತ್ತಷ್ಟು ಕಾರ್ಯಕ್ರಮಗಳನ್ನು ನಡೆಸಿ ಎಂದು ನನ್ನ ಮುಂದೆಯೇ, ಮಂಥನ ಆಯೋಜಕರನ್ನು ಒತ್ತಾಯಿಸುತ್ತಿದ್ದದ್ದು ನೋಡಿ ಮನಸ್ಸಿಗೆ ಮುದ ನೀಡಿದ್ದಂತೂ ಸುಳ್ಳಲ್ಲಾ.

maniಇವತ್ತು ನಮ್ಮ ಅಮ್ಮನ 14ನೇ ವರ್ಷದ ಪುಣ್ಯ ತಿಥಿ. ಅಮ್ಮಾ ಅಪ್ಪಾ ಇರುವುವರೆಗೂ ಒಬ್ಬ ಮಗನಾಗಿ ನಿರ್ವಹಿಸಬೇಕಾದಂತಹ ಕರ್ತವ್ಯಗಳನ್ನೆಲ್ಲಾ ನಿಭಾಯಿಸಿ ಕೈಲಾದ ಮಟ್ಟಿಗೆ ನೋಡಿಕೊಳ್ಳುವ ಸೌಭಾಗ್ಯ ದೊರಕಿತ್ತು. ಈಗ ಶ್ರದ್ಧೆಯಿಂದ ಮಾಡುವುದೇ ಶ್ರಾಧ್ಧವಾದ್ದರಿಂದ‌ ಧಾರ್ಮಿಕ ವಿಧಿ ವಿಧಾನ‌ ಮಾಡುವ ಮೂಲಜ ನನ್ನ ಕರ್ಮಗಳನ್ನು ಪೂರೈಸುವುದರ ಜೊತೆ ಜೊತೆಯಲ್ಲೇ, ಅವರು ಕಲಿಸಿಕೊಟ್ಟ ಸಂಸ್ಕಾರ ಮತ್ತು ಮೌಲ್ಯಗಳನ್ನು ಹತ್ತಾರು ಜನರಿಗೆ ತಿಳಿಯ ಪಡಿಸುವುದರ ಮೂಲಕ ಅವರನ್ನು ಸದಾಕಾಲವೂ ಜೀವಂತವಾಗಿ ಇಡುವುದೂ ಸಹಾ ಉತ್ತಮ ಕಾರ್ಯ ಎಂದು ಭಾವಿಸಿ, ಎಂದಿನಂತೇ ಎದೆ ತುಂಬಿ ಬರೆಯುವ ಮತ್ತು ಮಾತನಾಡುವ ‌ಕಾರ್ಯವನ್ನು ನಿಷ್ಠೆಯಿಂದ ಮುಂದುವರೆಸಿಕೊಂಡು ಹೋಗುತ್ತೇನೆ. ಚೆನ್ನಾಗಿ ಬರೆದಾಗ/ಮಾತನಾಡಿದಾಗ ಅದನ್ನು ಓದಿ, ಬೆನ್ನು ತಟ್ಟಿ, ತಪ್ಪಾದಾಗ‌ ತಿದ್ದಿ ತೀಡಲು ನೀವು ನನ್ನೊಂದಿಗೆ ಸದಾಕಾಲವೂ ಇರ್ತೀರೀ ಅಲ್ವೇ?

ಏನಂತೀರೀ?

ಸೃಷ್ಟಿಕರ್ತ ಉಮಾಸುತ

6 thoughts on “ಎದೆ ತುಂಬಿ ಬರೆಯುವೆನು/ಮಾತನಾಡುವೆನು ಎಂದಿನಂತೇ!

  1. ಅಭಿನಂದನೆಗಳು .ತಾವು ನಿಜಕ್ಕೂ ಅಭಿನಂದನಾರ್ಹರು. ಆ ತಾಯಿಯವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಇಲ್ಲ

    Liked by 1 person

  2. ನೀವು ನಿಜವಾಗಿಯೂ ಭಾಗ್ಯವಂತರು ಶ್ರೀಕಂಠ. 🙏. ನಿಮ್ಮಂಥವರ ಗೆಳೆತನ ದೊರೆತದ್ದು ನನ್ನ ಭಾಗ್ಯ. ನೀವು ನಂಬಿರುವ ದೇವರ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಇರಲಿ ಎಂದು ನನ್ನ ಹಾರೈಕೆ. Be blessed, stay blessed. 🙏

    Liked by 1 person

  3. ವ್ಹಾವ್ ಅದ್ಭುತವಾದ ಪಯಣ, ನಿನ್ನ ಮುಂದಿನ ಯತ್ನಗಳು ಇನ್ನೂ ಹೆಚ್ಚು ಫಲಪ್ರದವಾಗಿರಲಿ. ಒಬ್ಬ ಬರಹಗಾರನಿಗೆ ಸದಭಿರುಚಿಯ ಓದುಗರ ಆಶಯಗಳನ್ನೂ ಬಿಂಬಿಸುವ ಮತ್ತು ಅದನ್ನು ಪೂರ್ವಾಗ್ರಹಪೀಡಿತ ಓದುಗರಿಗೂ ತಲುಪಿಸುವ ಮಹತ್ತರ ಜವಾಬ್ದಾರಿ ಇರುತ್ತದೆ. ನಮ್ಮ ದೇಶದ ಇತಿಹಾಸ, ಪರಂಪರೆ, ಮೌಲ್ಯಗಳು ಇಂದಿನ ಯುವ ಜನತೆಗೆ ಅರಿವು ಮೂಡಿಸುವ ಅಗತ್ಯವಿದೆ, ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಗಳು ಹೆಚ್ಚು ಪರಿಣಾಮಕಾರಿ ಫಲಿತಾಂಶ ನೀಡಲಿ ಎಂದು ಆಶಿಸುತ್ತೇನೆ.

    Liked by 1 person

Leave a comment